ಮನಕಂಜಿ ನಡಕೊಂಬುದೆ ಚೆಂದ

ಮನಕಂಜಿ ನಡೆಕೊಂಬುದೆ ಚೆಂದ
ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು-
ಸಗಣಕ್ಕೆ ಸಾಸಿರ ಹುಳು, ಹುಟ್ಟವೆ ದೇವಾ?
ಕಾಡ ಮೃಗವೊಂದಾಗಿರಲಾಗದೆ, ದೇವಾ?
ಊರ ಮೃಗವೊಂದಾಗಿರಲಾಗದೆ, ಹರನೆ?
ನಮ್ಮ ಕೂಡಲಸಂಗನ ಶರಣರಿಲ್ಲದ ಊರು, ದೇಶ-
ವನವಾಸ ನರವಿಂಧ್ಯ ಕಾಣಿರಣ್ಣಾ.

ಮನುಷ್ಯನ ಹಾರಾಟ, ಹೋರಾಟ ಎಲ್ಲ ಕಾಲಕ್ಕೂ ಇದ್ದದ್ದೇ. ಈ ಹೋರಾಟ ಬೇಕೇ? ಬೇಡವೇ? ಯಾರೇನು ಈ ಲೋಕದಲ್ಲಿ ದೈಹಿಕವಾಗಿ ಶಾಶ್ವತವಾಗಿರಲು ಸಾಧ್ಯವಿಲ್ಲ. ಮಹಾದೇವಿಯಕ್ಕ ಹೇಳುವಂತೆ `ಆವ ವಿದ್ಯೆ ಕಲಿತಡೇನು ಸಾವ ವಿದ್ಯೆ ಬೆನ್ನಬಿಡದು’. ಸಾಯುವುದು ಶತಸಿದ್ಧವೆಂದು ಹಾರಾಟ, ಹೋರಾಟ ಬೇಡವೆಂದಲ್ಲ. ಬೇಡವಾಗಿದ್ದರೆ ಜಗತ್ತಿನಲ್ಲಿ ಯಾವ ಸಾಧನೆಯೂ ಆಗುತ್ತಿರಲಿಲ್ಲ. ಹಾರಾಟ, ಹೋರಾಟ ಬೇಕು. ಅವು ನಮ್ಮ ದೊಡ್ಡಸ್ತಿಕೆ, ಇನ್ನೊಬ್ಬರ ಅವಹೇಳನ ಇಲ್ಲವೇ ನಾಶಕ್ಕಾಗಿ ಎನ್ನುವಂತಾಗಬಾರದು. ಅದೇ ಮುಖ್ಯ ಉದ್ದೇಶವಾದರೆ ಅ ವ್ಯಕ್ತಿ ಬದುಕಿಯೂ ಸತ್ತಂತೆ. ಬದಲಾಗಿ ತಾನೂ ಬದುಕಿ ಇನ್ನೊಬ್ಬರನ್ನೂ ಬದುಕಿಸಬೇಕು. ತಾನೂ ಬೆಳೆದು ಇನ್ನೊಬ್ಬರನ್ನೂ ಬೆಳೆಸಬೇಕು. ಅದು ಸ್ವಾಗತಾರ್ಹ. ಆಗ ಮನುಷ್ಯ ಸತ್ತರೂ ಬದುಕಿರಲು ಸಾಧ್ಯ. ಅದಕ್ಕೆ ಬೇಕಾದುದೇ ಶಿವಚಿಂತೆ, ಶಿವಜ್ಞಾನ.

ಶ್ರೀ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು `ಸತ್ತಮೇಲೆ ಬದುಕುವುದೇ ನಿಜವಾದ ಜೀವನ’ ಎನ್ನುತ್ತಿದ್ದರು. ಸತ್ತಮೇಲೆ ಬದುಕುವುದು ಎಂದರೆ ವ್ಯಕ್ತಿಯ ದೇಹದಲ್ಲಿ ಉಸಿರಿದ್ದಾಗ ಹೆಸರುಳಿಯುವ ಸಾರ್ಥಕ, ಸಮಾಜಮುಖಿ ಸೇವಾಕಾರ್ಯ ಮಾಡುವುದು. ಒಳ್ಳೆಯ ಕಾರ್ಯಗಳನ್ನು ಮಾಡಿದಾಗ ಆತ ದೈಹಿಕವಾಗಿ ಸತ್ತಿದ್ದರೂ ಸಾಧನೆಯ ಮೂಲಕ ಅಮರನಾಗಲು ಸಾಧ್ಯ. ಈ ನೆಲೆಯಲ್ಲಿ ವ್ಯಕ್ತಿ ಹೋರಾಡಿದರೆ ಅಭಿನಂದನಾರ್ಹ. ಬದಲಾಗಿ ತನ್ನ ಮನೋಭಿಲಾಷೆಗಳಿಗಾಗಿ ಮತ್ತೊಬ್ಬರ ತೇಜೋವಧೆ ಮಾಡುವುದು, ತುಳಿಯುವುದು, ಅದಕ್ಕಾಗಿ ಹೋರಾಡುವುದು ಸಲ್ಲದ ಕ್ಷುಲ್ಲಕ ಕಾರ್ಯ. ಅಂಥವರು ಬದುಕಿದ್ದರೂ ಸತ್ತಹಾಗೆ. ಮನುಷ್ಯ ಈ ಲೋಕಕ್ಕೆ ಬಂದಮೇಲೆ ನಾಲ್ಕು ಜನರಿಗಾದರೂ ಉಪಕಾರ ಮಾಡಬೇಕು.ಒಂದುವೇಳೆ ಉಪಕಾರ ಮಾಡಲಾಗದಿದ್ದರೂ ಯಾರಿಗೂ ಉಪದ್ರ ನೀಡಬಾರದು. ಇದು ಗುರು ಹಿರಿಯರ ಸಂದೇಶ. ಆದರೆ ಇವತ್ತು ಉಪಕಾರಕ್ಕಿಂತ ಉಪದ್ರ ನೀಡುವವರೇ ಹೆಚ್ಚಾಗುತ್ತಿರುವುದು ಬಹುದೊಡ್ಡ ದುರಂತ.


ಮತ್ತೊಬ್ಬರನ್ನು ತುಳಿದು ತಾನು ಬೆಳೆಯಬೇಕು, ಉಳಿಯಬೇಕು ಎನ್ನುವ ಕುತ್ಸಿತ ಮನೋಭಾವ ಮತ್ತು ಅಂತಹ ವ್ಯವಸ್ಥೆಯೇ ಇಂದು ವಿಜೃಂಭಿಸುತ್ತಿರುವುದು ವಿಷಾದನೀಯ. ಇದಕ್ಕೆ ಹೊರತಾಗಿಯೂ ಬದುಕಿದ, ಬದುಕುತ್ತಿರುವ ಜನರು ಸಹ ಇದ್ದಾರೆ ಎನ್ನುವುದೇ ಸಂತೋಷದ ಸಂಗತಿ. ಒಂದು ಮನೆಯಲ್ಲಿ ಅಜ್ಜ, ಅಜ್ಜಿ ಹೇಗೆ ಬದುಕಿದ್ದರು? ಅಪ್ಪ, ಅವ್ವ ಹೇಗೆ ಬದುಕಿದ್ದಾರೆ ಎಂದು ಹೇಳಿದರೆ ಸಾಲದು. ವರ್ತಮಾನವನ್ನು ಹೇಗೆ ಕಟ್ಟಿಕೊಳ್ಳಬೇಕು ಎನ್ನುವ ಚಿಂತನೆ ಮುಖ್ಯ. ಅಜ್ಜ, ಅಪ್ಪ ಅಂಥವರು ಇಂಥವರು ಎನ್ನುತ್ತಲೇ ಮಗ, ಮೊಮ್ಮಗ ಅವರ ಆದರ್ಶಗಳನ್ನು ಗಾಳಿಗೆ ತೂರಿದರೆ ಅಂಥವರು ಹಿರಿಯರ ಹೆಸರು ಹೇಳಲು ಅನರ್ಹರಾಗುವರು. ಈ ನಿಟ್ಟಿನಲ್ಲಿ ಅನೇಕ ಜನರು ಇಂದಿಗೂ ಗೌರವಾರ್ಹ ಆದರ್ಶ ಬದುಕನ್ನು ನಡೆಸುತ್ತಿದ್ದಾರೆ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ' ಎನ್ನುವಂತೆ ಮನೆಯಲ್ಲಿ ಹಿರಿಯರ ರೀತಿ ನೀತಿಗಳು ಆ ಮನೆಯ ಸದಸ್ಯರ ಮೇಲೆ ಪ್ರಭಾವ ಬೀರುತ್ತವೆ. ಅದಕ್ಕಾಗಿಯೇನೂಲಿನಂತೆ ಸೀರೆ’, ತಂದೆಯಂತೆ ಮಗ',ತಾಯಿಯಂತೆ ಮಗಳು’ ಎನ್ನುವುದು. ಇಂಥ ಮಾತುಗಳ ಉದ್ದೇಶ ಹಿರಿಯರ ಆದರ್ಶಗಳನ್ನು ಉಳಿದವರು ಮುಂದುವರಿಸಿಕೊಂಡು ಹೋಗಬೇಕು ಎನ್ನುವುದು. ಆರ್ಥಿಕವಾಗಿ ಅಷ್ಟೇ ಅಲ್ಲ; ನೈತಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾಂಸ್ಕøತಿಕವಾಗಿ.

ಇವತ್ತು ಆರ್ಥಿಕವಾಗಿ ಯಾರು ಬೇಕಾದರೂ ಬಲಿಷ್ಟರಾಗಬಹುದು. ನೈತಿಕ ನೆಲೆಗಟ್ಟು ಕುಸಿದರೆ, ಧಾರ್ಮಿಕವಾಗಿ ದಾರಿ ಬಿಟ್ಟರೆ, ಸಾಮಾಜಿಕವಾಗಿ ಅಪಹಾಸ್ಯಕ್ಕೊಳಗಾದರೆ, ಸಾಂಸ್ಕøತಿಕವಾಗಿ ಉದಾಸೀನ ತಳೆದರೆ ಆ ವ್ಯಕ್ತಿ ಅಧಿಕಾರ, ಸಂಪತ್ತಿನಿಂದ ಎಷ್ಟೇ ದೊಡ್ಡವನಾಗಿದ್ದರೂ ಪ್ರಯೋಜನವಾಗದು. ಇವತ್ತು ಹಿರಿಯ ಸ್ಥಾನದಲ್ಲಿರುವವರಿಗೇ ಅಧಿಕಾರದ ದಾಹ, ಹಣದ ಮೋಹ, ಕೀರ್ತಿಯ ಶನಿ ಬೆನ್ನುಬಿಡುತ್ತಿಲ್ಲ. ಅದು ಬೇತಾಳದಂತೆ ಅವರನ್ನು ಕಾಡುತ್ತಿರುವ ಕಾರಣ ಅವರು ಆದರ್ಶಗಳನ್ನು ಗಾಳಿಗೆ ತೂರಿ ಗೋಸುಂಬೆಯಂತೆ ವರ್ತಿಸುವರು. ಇದರಿಂದ ಯಾರು ಹೊರತಾಗಿದ್ದಾರೆ? ಹಾಗಂತ ನಿರಾಶರಾಗುವ ಅಗತ್ಯವಿಲ್ಲ. ನಮ್ಮ ಸುತ್ತ ಅನೇಕ ಜನ ಒಳ್ಳೆಯವರಿದ್ದಾರೆ. ಅವರಿಗೆ ಅಧಿಕಾರ, ಶ್ರೀಮಂತಿಕೆ ಇಲ್ಲದಿದ್ದರೂ ಆದರ್ಶ ಜೀವಿಗಳಾಗಿ ನೆಮ್ಮದಿಯ ಬಾಳು ನಡೆಸುತ್ತಿದ್ದಾರೆ. ಅಂಥವರನ್ನು ಗುರುತಿಸುವ ಹೃದಯವಂತಿಕೆ ನಮ್ಮದಾಗಬೇಕು. ಕೆಟ್ಟ ವಿಚಾರ, ಸಿನಿಕತನ ಪ್ರತಿಪಾದಿಸುವ ವ್ಯಕ್ತಿಗಳ ಬಗ್ಗೆ ಸಾಧ್ಯವಾದಷ್ಟು ಕಡಿಮೆ ಮಾತನಾಡಬೇಕು. ಇಲ್ಲದಿದ್ದರೆ ನಮ್ಮಲ್ಲೂ ನಮಗರಿವಿಲ್ಲದೆ ಆ ಗುಣಗಳು ಮುತ್ತಿಕೊಳ್ಳಬಹುದು. ಬದಲಾಗಿ ಒಳಿತನ್ನು ಗುರುತಿಸಿ, ಒಳ್ಳೆಯವರ ಬೆನ್ನು ತಟ್ಟುವ ಕಾರ್ಯ ಮಾಡಿದರೆ ನಾವು ಆದರ್ಶದ ದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ.

Pooja shri Shivakumar swamiji

ನಮ್ಮ ಪರಂಪರೆಯ ಸಿಂಹಾವಲೋಕನ ಮಾಡಿದರೆ ಶರಣರು, ಸಂತರು, ಹಿರಿಯರು ಆದರ್ಶದ ಪಥದಲ್ಲೇ ನಡೆದು ಅಂಥ ತತ್ವ ಸಿದ್ಧಾಂತಗಳನ್ನು ಬಿಟ್ಟುಹೋಗಿದ್ದಾರೆ. ಹಾಗಂತ ಅವರು ಲೋಕದ ಜನರ ದೋಷಗಳನ್ನು ಮುಚ್ಚಿಡಲಿಲ್ಲ. ಅವುಗಳನ್ನು ಬಿಚಿಟ್ಟು ತಿದ್ದುವ ಹೃದಯವಂತರಾಗಿದ್ದರು. ಲೋಕದ ಡೊಂಕ ನೀವೇಕೆ ತಿದ್ದುವಿರಿ' ಎನ್ನುವ ಬಸವಣ್ಣನವರು ತಮ್ಮ ವಚನಗಳ ಮೂಲಕ ಜನರ ದೋಷಗಳನ್ನು ತಿದ್ದುವ ಕಾರ್ಯವನ್ನೇ ಮಾಡಿದ್ದಾರಲ್ಲ ಎಂದರೆ ಅವರು ದೋಷಗಳನ್ನು ತಿದ್ದುವ ಮುನ್ನ ತಮ್ಮ ದೋಷಗಳನ್ನು ಸರಿಪಡಿಸಿಕೊಂಡದ್ದನ್ನು ಮರೆಯಬಾರದು. ಬಸವಣ್ಣನವರುಎನ್ನ ತಪ್ಪು ಅನಂತ ಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ’ ಎಂದು ಆತ್ಮಾವಲೋಕನ ಮಾಡಿಕೊಂಡು `ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆಯುವೆ’ ಎಂದು ಹೇಳಿದ್ದಾರೆ. ಇದರಿಂದ ಅವರಿಗೆ ಲೋಕದ ಜನರ ದೋಷಗಳನ್ನು ತಿದ್ದುವ ಅರ್ಹತೆ ಬಂತು. ಹಾಗೆ ತಿದ್ದುವಾಗಲೂ ಇತರರತ್ತ ಬೆರಳು ಮಾಡದೆ ನಾನೇ ತಪ್ಪು ಮಾಡಿದ್ದರೆ ಹೇಗೆ ತಿದ್ದಿಕೊಳ್ಳುತ್ತಿದ್ದೆ ಎಂದು ಚಿಂತನೆ ಮಾಡಿದ್ದರ ಫಲಶೃತಿ ಅವರ ವಚನಗಳಲ್ಲಿದೆ. ಹಾಗಾಗಿಯೇ ಇಂದಿಗೂ ಬಸವಣ್ಣನವರನ್ನು ಶ್ರದ್ಧಾಭಕ್ತಿಯಿಂದ ಸ್ಮರಿಸಿಕೊಳ್ಳುವರು. ತಮ್ಮ ಬದುಕಿನ ಆದರ್ಶ ವ್ಯಕ್ತಿಯನ್ನಾಗಿಸಿಕೊಳ್ಳುವರು. ಬಸವಣ್ಣನವರು ಗೋಸುಂಬೆಯಂತೆ ಬಾಳಲಿಲ್ಲ. ತಮ್ಮ ಬದುಕನ್ನು ತಿದ್ದಿಕೊಳ್ಳುತ್ತಲೇ ಸಮಾಜದ ಬದುಕನ್ನು ಶುಚಿಗೊಳಿಸುವ ಕಾಯಕ ಮಾಡಿದರು. ಜನರ ಬದುಕಿಗೆ ಶರಣರ ವಚನಗಳು ಕನ್ನಡಿ ಹಿಡಿಯುವಂತಿವೆ. ಈ ನಿಟ್ಟಿನಲ್ಲಿ ಸರ್ಪಭೂಷಣ ಶಿವಯೋಗಿಗಳ ಪದ್ಯವೊಂದು ಪರಿಣಾಮಕಾರಿಯಾಗಿದೆ.

ಬಿಡು ಬಾಹ್ಯದೊಳು ಡಂಭವ
ಮಾನಸದೊಳು ಎಡೆಬಿಡದಿರು ಶಂಭುವ.
ಮನದೊಳು ವಂಚಿಸಿ ಹೊರಗೆ ನೀ ಕೀರ್ತಿಯ
ಪಡೆದರೆ ಶಿವ ನಿನಗೊಲಿಯನು ಮರುಳೆ.
ಜನಕಂಜಿ ನಡೆಕೊಂಡರೇನುಂಟು ಲೋಕದಿ
ಮನಕಂಜಿ ನಡೆಕೊಂಬುದೇ ಚಂದ.
ಜನರೇನು ಬಲ್ಲರು ಒಳಗಾಗೋ ಕೃತ್ಯವ
ಮನವರಿಯದ ಕಳ್ಳತನವಿಲ್ಲವಲ್ಲ.
ಮನದಲಿ ಶಿವ ತಾ ಮನೆಮಾಡಿಕೊಂಡಿಹ
ಮನಮೆಚ್ಚಿ ನಡೆದರೆ ಶಿವ ತಾ ಮೆಚ್ಚುವ.
ಮನಕಂಜಿ ನಡೆಯದೆ ಜನಕಂಜಿ ನಡೆದರೆ
ಮನದಾಣ್ಮ ಗುರುಸಿದ್ಧ ಮರೆಯಾಗೋನಲ್ಲ.

ಇಲ್ಲಿಯ ಸಂದೇಶ ಮತ್ತೊಬ್ಬರಿಗೆ ಹೇಳಿದ್ದಲ್ಲ. ನಮಗೆ ನಾವೇ ಹೇಳಿಕೊಳ್ಳಬೇಕಾದ್ದು. ಶಿವ ಮೆಚ್ಚುವುದು ಮನಕಂಜಿ ನಡೆದಾಗ. ಈ ನೆಲೆಯಲ್ಲಿ ಸಂಸ್ಕಾರ ಬಹಳ ಮುಖ್ಯ. ಸಂಸ್ಕಾರ ಬರಬೇಕಾದ್ದು ಮನೆ, ಮಠ, ಸಮಾಜದಿಂದ. ಮನೆಯಲ್ಲಿ ತಾಯಿ, ಮಠದಲ್ಲಿ ಗುರು, ಸಮಾಜದಲ್ಲಿ ನೇತಾರರು ಸಂಸ್ಕಾರ ನೀಡುವ ಕಾಯಕ ಮಾಡಿದರೆ ಜನರು ಸಹಜವಾಗಿಯೇ ಸನ್ಮಾರ್ಗದಲ್ಲಿ ಸಾಗುವರು. ಮನೆಯಲ್ಲಿ ಬಾಲ್ಯದಿಂದಲೇ ತಂದೆ ತಾಯಿಗಳು ಮಕ್ಕಳಿಗೆ ಲೌಕಿಕ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಕೊಡಬೇಕು. ಮುಂದೆ ಮಠದ ಗುರು ತನ್ನ ಭಕ್ತರಿಗೆ ಅರಿವು, ಆಚಾರ ಒಂದಾಗುವಂತಹ ಉಪದೇಶಾಮೃತ ಉಣಿಸಬೇಕು. ಸಮಾಜದಲ್ಲಿ ನೇತಾರರು ವ್ಯಕ್ತಿಗತ ಶುದ್ಧಿಯೊಂದಿಗೆ ಉತ್ತಮ ಆಡಳಿತ ನೀಡಿದರೆ ಜನರು ದಾರಿ ತಪ್ಪುವುದು ನಿಲ್ಲುವುದು. ಈ ನೆಲೆಯಲ್ಲಿ ಸುಧಾರಣೆ ವ್ಯಕ್ತಿಯ ಮನಸ್ಸಿನಿಂದ, ಮನೆಯಿಂದ, ಮಠದಿಂದ, ಸಮಾಜದಿಂದ ಆದಾಗ ವ್ಯಕ್ತಿಯ ಕಲ್ಯಾಣದ ಜೊತೆಗೆ ಲೋಕಕಲ್ಯಾಣ ತನ್ನಷ್ಟಕ್ಕೆ ತಾನೇ ಆಗುವುದು. ಇಲ್ಲವಾದರೆ ಮನೆ, ಮಠ, ಸಮಾಜದಲ್ಲಿ ಕೊಂಡಿಮಂಚಣ್ಣನಂಥವರೇ ತುಂಬಿಕೊಳ್ಳುವರು. ಆಗ ಪರಿಸ್ಥಿತಿ ಬಿಗಡಾಯಿಸಿ ಉತ್ತಮ ಕಾರ್ಯಗಳೇ ಸ್ಥಗಿತವಾಗುವವು.

ಜನರಿಗೆ ಸಂಸ್ಕಾರ ನೀಡುವ ನೆಲೆಯಲ್ಲೇ ಸಾಣೇಹಳ್ಳಿಯಲ್ಲಿ ಅನೇಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತ ಬಂದಿವೆ. ಅವುಗಳ ಪಟ್ಟಿಗೆ ಮತ್ತೊಂದು ಸೇರಲಿದೆ: ಪ್ರತಿತಿಂಗಳ ಮೊದಲ ದಿನಾಂಕದಂದು ನಡೆಯುವ ಸಾಮೂಹಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ. ಮಾರ್ಚಿ ಒಂದರಂದು ನಮ್ಮ ಶಾಲಾ ವಿದ್ಯಾರ್ಥಿಗಳು, ನಾಗರಿಕರು ಲಿಂಗದೀಕ್ಷಾ ಸಂಸ್ಕಾರ ಪಡೆದರು. ಅವರಲ್ಲಿದ್ದ ಶ್ರದ್ಧಾಭಕ್ತಿ ಮೆಚ್ಚುವಂತಿತ್ತು. ಇಂಥ ಸಂಸ್ಕಾರ ನಾಡಿನೆಲ್ಲೆಡೆ ದೊರೆತರೆ ಜನರು ಶರಣ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಹಿಂದೆ ಬೀಳಲಾರರು. ಆದರೆ ಇಂದು ಮಕ್ಕಳಿಗೆ ನೈಜ ಧಾರ್ಮಿಕ ಸಂಸ್ಕಾರ ದೊರೆಯುವುದೇ ದುಸ್ಥರವಾಗಿದೆ. ಹಾಗಾಗಿ ಅವರು ಆದರ್ಶಗಳನ್ನು ಗಾಳಿಗೆ ತೂರಿ ಭಯೋತ್ಪಾದಕರಾಗಿ, ಸಮಾಜಘಾತುಕ ಶಕ್ತಿಗಳಾಗಿ ಮಾರ್ಪಡುವರು. ವಿಲಾಸಿ ಜೀವನಕ್ಕೆ ಅಂಟಿಕೊಳ್ಳುವರು. ಮಗುವಾಗಿದ್ದಾಗಲೇ ಮನಸ್ಸಿಗಂಜಿ ನಡೆಯುವ ಸಂಸ್ಕಾರ ನೀಡಿದ್ದರೆ ಮಕ್ಕಳು ದಾರಿ ಬಿಟ್ಟಿದ್ದಾರೆ ಎಂದು ಕೊರಗುವ ಪರಿಸ್ಥಿತಿ ಬರುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಮನೆ, ಮಠಗಳಲ್ಲಿ ಆದರ್ಶ ಸಂಸ್ಕಾರಗಳ ಬೀಜಗಳನ್ನು ಬಿತ್ತುವ ಕಾಯಕವನ್ನು ತಂದೆ-ತಾಯಿಗಳು, ಗುರುಗಳು ಮಾಡಬೇಕು. ಈ ದಿಶೆಯಲ್ಲಿ ಮಕ್ಕಳು ಮತ್ತು ಯುವಪೀಳಿಗೆ ಲಿಂಗದೀಕ್ಷಾ ಸಂಸ್ಕಾರ ಪಡೆದರೆ ನಾಳೆ ಅವರೇ ಮನೆಗೆ, ಸಮಾಜಕ್ಕೆ ಆಸ್ತಿ ಆಗುವರು. ಮುಖ್ಯವಾಗಿ ಮಕ್ಕಳು ಎಲ್ಲದಕ್ಕೂ ತಲೆದೂಗುವ ವಾತಾವರಣ ತಪ್ಪಿಸಿ ಪ್ರಶ್ನಿಸುವ, ಪ್ರತಿಭಟಿಸುವ, ಒಳಿತನ್ನು ಸ್ವಾಗತಿಸುವ ಮುಕ್ತತೆ ಬೆಳೆಸಬೇಕು. ಆಗಲೇ ಸಮಾಜದಲ್ಲಿ ದೊಡ್ಡವರು ತಪ್ಪು ಮಾಡಲು ಹೆದರುವರು. ಯಾರಾದರೂ ನಾವು ಮಾಡಿದ್ದನ್ನು ಪ್ರತಿಭಟಿಸುವರು ಎನ್ನುವ ಭಯ ಇದ್ದರೆ ಹಿರಿಯರು, ಕಿರಿಯರು ಎನ್ನದೆ ಎಲ್ಲರೂ ಸರಿದಾರಿಯಲ್ಲಿ ಸಾಗುವರು.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೇಹಳ್ಳಿ-577515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಸೆಲ್: 9448395594

One thought on “ಮನಕಂಜಿ ನಡಕೊಂಬುದೆ ಚೆಂದ

Leave a Reply

Your email address will not be published. Required fields are marked *

error: Content is protected !!