ಮೌಲ್ಯ ಮತ್ತು ಮನುಷ್ಯನ ನಡಾವಳಿಕೆ


ಮಸಣ ಮನೆಯಾಯಿತ್ತು, ಮನೆ ಮಸಣವಾಯಿತ್ತು.
ಹುಸಿಯ ನುಡಿದವ ಪಶುಪತಿಯ ಗೆದ್ದ.
ದಿಟವ ನುಡಿದವ ಸರ್ವಪಾಪಕ್ಕೆ ಗತನಾದ.
ಈ ಉಭಯದ ಕುಟಿಲವ ಹೇಳಾ, ಎನಗದು ಭೀತಿ!
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.

ಇದು ಸಗರದ ಬೊಮ್ಮಣ್ಣನವರ ವಚನ. ೧೨ ಇಲ್ಲವೆ ೨೧ನೆಯ ಶತಮಾನವಾದರೇನು? ಎಲ್ಲ ಕಾಲಕ್ಕೂ ಸುಳ್ಳು ವಿಜೃಂಭಿಸಿ ಸತ್ಯ ಮರೆಯಾಗುವುದು. ಸುಳ್ಳು ಸತ್ಯದ ಮೇಲೆ ಸವಾರಿ ಮಾಡುವುದು. ಅದರಿಂದ ಮನೆ ಸ್ಮಶಾನವಾಗಿ ಸ್ಮಶಾನವೇ ಮನೆ ಆಗಬಹುದು. ಸುಳ್ಳು ಹೇಳುವವನು ರಾಜನ ಒಲವು ಗಳಿಸಿಕೊಳ್ಳುವನು. ಸತ್ಯ ಹೇಳುವವನು ರಾಜನ ಅವಕೃಪೆಗೆ ಒಳಗಾಗಿ ಯಾತನೆ ಅನುಭವಿಸುವನು. ಇವತ್ತು ರಾಜನ ಸ್ಥಾನದಲ್ಲಿ ರಾಜಕೀಯ, ಧಾರ್ಮಿಕ ನೇತಾರರಿದ್ದಾರೆ. ಅವರ ಬಳಿ ಸತ್ಯ ಹೇಳಿದರೆ ಕೆಲವರು ನಿಮ್ಮನ್ನೇ ವೈರಿಗಳಂತೆ ಭಾವಿಸಬಹುದು. ಅವರು ಬಯಸುವುದು ಇಂದ್ರ, ಚಂದ್ರ, ದೇವೇಂದ್ರ ಎಂದು ತಮ್ಮನ್ನು ಹೊಗಳುವವರನ್ನು. ಆ ನೇತಾರರ ದೋಷಗಳನ್ನು ಹೇಳುವವರು ಎಷ್ಟೇ ಸತ್ಯಸಂಧರು, ಸಾತ್ವಿಕರು, ಪ್ರಾಮಾಣಿಕರು ಆಗಿದ್ದರೂ ಹೊಗಳುಭಟ್ಟರು ಅವರನ್ನು ಹೀಯಾಳಿಸುವರು. ತಾವೇ ಗೋಸುಂಬೆ ಎಂಬುದನ್ನು ಮುಚ್ಚಿಟ್ಟು ಸತ್ಯಸಂಧರೇ ಗೋಸುಂಬೆ ಎಂದು ಲೇವಡಿ ಮಾಡುವರು. ಇದರಿಂದ ಸುಳ್ಳುಗಾರರ ಪಟ್ಟಭದ್ರರಿಗೆ ಹತ್ತಿರವಾಗಿ ಸ್ವಾರ್ಥ ಸಾಧಿಸಿಕೊಳ್ಳುವರು. ಸತ್ಯವಂತರು ಮೂಲೆಗುಂಪಾಗುವ ಪರಿಸ್ಥಿತಿ ಬರುವುದು. ಶರಣರ ದೃಷ್ಟಿಯಲ್ಲಿ ಸತ್ಯವನ್ನು ಮುಚ್ಚಿಡುವುದು, ಸುಳ್ಳನ್ನು ವೈಭವೀಕರಿಸುವುದು ಮೌಲ್ಯವಲ್ಲ; ಎರಡೂ ಕುಟಿಲತೆಗಳೇ. ಮನುಷ್ಯ ಈ ಕುಟಿಲತೆಯಿಂದ ಹೊರಬರಬೇಕು. ಏಕೆಂದರೆ `ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ’.

ಎಷ್ಟೋ ಜನರು ಪಲಾಯನವಾದಿಗಳಾಗುವರು. ಸತ್ಯ ಹೇಳಿ ಯಾಕೆ ನಿಷ್ಠುರವಾಗಬೇಕು? ಯಾಕೆ ದ್ವೇಷ ಕಟ್ಟಿಕೊಳ್ಳಬೇಕು? ಸತ್ಯ ಹೇಳಿದ್ದರಿಂದ ತಾನೇ ಇಷ್ಟೆಲ್ಲ ಯಾತನೆ? ಇನ್ನುಮುಂದೆ ಎಲ್ಲರಂತೆ ನಾನೂ ಇದ್ದರಾಯಿತು. ಸತ್ಯ ಕಟ್ಟಿಕೊಂಡು ನನಗೆ ಏನಾಗಬೇಕಾಗಿದೆ? ಮನೆ ಮುರಿದರೇನು? ಮಠ ಹಾಳಾದರೇನು? ಸಮಾಜ ಕೆಟ್ಟರೇನು? ಈ ರೀತಿಯ ಮನೋಭಾವ ಬೆಳೆಸಿಕೊಳ್ಳುವರು. ಇದರಿಂದ ಅವರೇನು ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ವ್ಯಕ್ತಿ ಪ್ರಾಮಾಣಿಕನಾಗಿ ಸತ್ಯದ ದಾರಿಯಲ್ಲಿ ನಡೆದಾಗ ಅವನಿಗೆ ಮನೋಬಲ, ಆತ್ಮಸ್ಥೆöರ್ಯ ಬರುವುದು. ಅವನ ಮೌಲ್ಯ ಹೆಚ್ಚುವುದು. ಜನರ ದ್ವಂದ್ವ ಗುಣವನ್ನ ನೋಡಿದಾಗ ಬೇಸರವಾಗವುದು ಸಹಜ. ಆದರೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಏನೇ ಸಮಸ್ಯೆ, ಸಂಕಷ್ಟ ಬಂದರೂ ಸತ್ಯವನ್ನೇ ಅಸ್ತç ಮಾಡಿಕೊಳ್ಳಬೇಕು. ಅದರಿಂದ ವ್ಯಕ್ತಿತ್ವ ವಿಕಾಸವಾಗುವುದು. ಇದಕ್ಕೆ ನಾವು ಎಂಥವರ ಒಡನಾಟದಲ್ಲಿರುತ್ತೇವೆ ಎನ್ನುವುದು ಮುಖ್ಯ. ಯಾರೋ ಮುನಿಸಿಕೊಳ್ಳುವರೆಂದು, ಇನ್ನಾರನ್ನೋ ಓಲೈಸಲೆಂದು `ಹೊತ್ತು ಬಂದತೆ ಕೊಡೆ ಹಿಡಿಯುವ’ ಅಗತ್ಯವಿಲ್ಲ. ಅದನ್ನೇ ಬಸವಣ್ಣನವರು ಹೇಳಿರುವುದು:

ಆರು ಮುನಿದು ನಮ್ಮನೇನ ಮಾಡುವರು?
ಊರು ಮುನಿದು ನಮ್ಮನೆಂತು ಮಾಡುವರು?
ನಮ್ಮ ಕುನ್ನಿಗೆ ಕೂಸ ಕೊಡಬೇಡ.
ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ.
ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ,
ನಮಗೆ ನಮ್ಮ ಕೂಡಲಸಂಗನುಳ್ಳನ್ನಕ್ಕ


ಈಗಿನ ಕಾಲದಲ್ಲಿ ಸತ್ಯ ಹೇಳುವುದು ಕಷ್ಟ ಎನ್ನುವರು. ಈ ಅಭಿಪ್ರಾಯ ಸರಿಯಲ್ಲ. ಎರಡು ಹೊತ್ತು ಊಟ, ಮಾನ ಮುಚ್ಚಿಕೊಳ್ಳಲು ಒಂದು ಜೊತೆ ಬಟ್ಟೆ, ಇರಲು ಒಂದು ಗುಡಿಸಲು ಇವುಗಳಿಗಿಂತ ಹೆಚ್ಚಿನ ಆಸೆ ಇಲ್ಲದಿದ್ದರೆ ಖಂಡಿತ ಸತ್ಯದ ದಾರಿಯಲ್ಲಿ ಸಾಗಬಹುದು. ನ್ಯಾಯನಿಷ್ಠರಿಗಳಾಗಿ ವರ್ತಿಸಬಹುದು. ತಲೆ ಎತ್ತಿ ಬಾಳಬಹುದು. ಮೌಲ್ಯಯುತ ಜೀವನ ನಡೆಸಬಹುದು. ಆದರೆ ಇವತ್ತು ಬಹುತೇಕ ಜನರು ಆಸೆ ಆಮಿಷಗಳ ಕೋಟೆಯನ್ನು ಕಟ್ಟಿಕೊಂಡು ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಒಂದು ರೀತಿಯ ವಿಷಚಕ್ರದಲ್ಲಿ ಸಿಲುಕಿಬಿಟ್ಟಿದ್ದಾರೆ. ಹಾಗಾಗಿ ಅವರು ಅದರಿಂದ ಹೊರಬರಲು ಆಗುತ್ತಿಲ್ಲ. ಒಮ್ಮೆ ವೈಭವದ ಬದುಕಿಗೆ ಅಂಟಿಕೊಅಂಡ ವ್ಯಕ್ತಿ ಸರಳತೆಯತ್ತ ಮುಖ ಮಾಡುವುದು ಕಷ್ಟ. ಮುಖ ಮಾಡಿದರೂ ಕಾರಿನಲ್ಲಿ ಓಡಾಡುತ್ತಿದ್ದವನಿಗೆ ಈಗ ಬಸ್‌ನಲ್ಲಿ ಓಡಾಡಲು ಮುಜುಗರ, ಏನೋ ಆತಂಕ. ಮೌಲ್ಯರಹಿತ ಬದುಕಿನ ಸಂದರ್ಭದಲ್ಲಿ ಮನೆಗೆ ಬಂದವರಿಗೆಲ್ಲ ಕಾಫಿ, ಟೀ, ತಿಂಡಿ ಕೊಟ್ಟು ಆತಿಥ್ಯ ಮಾಡಿರಬಹುದು. ಸತ್ಯದ ದಾರಿಯಲ್ಲಿ ನಡೆಯುವಾಗ ಯಾರಿಗೂ ಒಂದು ಕಪ್ ಕಾಫಿಯನ್ನೂ ಕೊಡಲಾಗದಿರಬಹುದು. ಹಾಗಂತ ಮತ್ತೆ ಸುಳ್ಳಿನತ್ತ ಮುಖ ಮಾಡುವ ಗೋಸುಂಬೆಗಳಾಗಬೇಕಿಲ್ಲ. ಮನುಷ್ಯನಿಗೆ ನಿಜಕ್ಕೂ ಬೇಕಾಗಿರುವುದು ಬದ್ಧತೆ ಮತ್ತು ಗಟ್ಟಿತನ. ಆಗ ಮಾತ್ರ ಮೌಲ್ಯಯು ಬದುಕು ನಡೆಸಲು ಸಾದ್ಯ. ಮೌಲ್ಯಗಳ ಅರಿವಿಲ್ಲದವರ ಮಾತುಗಳೇ ಬೇರೆ.

ನಮ್ಮಲ್ಲಿಗೆ ಬರುವ ಕೆಲವು ಭಕ್ತರು ಬುದ್ಧಿ ತಮ್ಮ ಬಿಡಾರದ ವಿನ್ಯಾಸ ಬದಲಾಗಬೇಕು. ಆಸನಗಳು ಚನ್ನಾಗಿಲ್ಲ. ಬೆಲೆಬಾಳುವ ಸೋಫಾಸೆಟ್ ತರಿಸಬೇಕು. ತಾವು ಮಲಗುವ ಮಂಚ ಮತ್ತು ಅದರ ಮೇಲೆ ಇರುವ ಹಾಸಿಗೆ, ಹೊದಿಕೆಗಳು ಬದಲಾಗಬೇಕು ಎನ್ನುವರು. ಅಂಥವರಿಗೆ ನಾವು ಹೇಳುವುದು `ಮನೆ ನೋಡಾ ಬಡವರು, ಮನ ನೋಡಾ ಘನ’ ಎನ್ನುವ ಬಸವಣ್ಣನವರ ವಚನವನ್ನು. ಸುಖವಾದ ನಿದೆ ಬರುವುದು ಮಂಚ, ಹಾಸಿಗೆಯಿಂದ ಅಲ್ಲ; ಮನಸ್ಸಿನ ಸದ್ಬಾವನೆ, ಸತ್ಕಾರ್ಯ, ಸದ್ವರ್ತನೆಗಳಿಂದ. ಆಗ ಚಾಪೆಯ ಮೇಲೆ ಮಲಗಿದರೂ ನಿದ್ರೆ ಬರುತ್ತದೆ. ಬಿಡಾರದ ವಿನ್ಯಾಸ ನೋಡಿ ಯಾರೂ ಒಬ್ಬರ ಯೋಗ್ಯತೆ ಅಳೆಯವುದಿಲ್ಲ. ತರುಣನೊಬ್ಬ ಹೇಳುತ್ತಿದ್ದ: ಬುದ್ಧಿ ನಾನೊಂದು ಮಠಕ್ಕೆ ಹೋಗಿದ್ದೆ. ಆ ಸ್ವಾಮಿಗಳ ಬಿಡಾರ ಅರಮನೆಯನ್ನು ಮೀರಿಸುವಂತಿದೆ. ಅವರ ಬಾತ್‌ರೂಮ್, ಶಿವಪೂಜಾ ಕೋಣೆ, ಬೆಡ್‌ರೂಮ್ಗೆ ಬೇರೆಯವರು ಪ್ರವೇಶ ಮಾಡಲು ಸಾದ್ಯವಿಲ್ಲ. ಸ್ವಾಮೀಜಿಯವರು ಹೆಬ್ಬೆಟ್ಟು ಕೊಟ್ಟಾಗಲೇ ಬಾಗಿಲು ತೆರೆಯುವುದು. ತಮ್ಮ ಬಿಡಾರವೂ ಹಾಗಿರಬೇಕು ಎಂದು. ಅವನಿಗೆ ನಾವು ಹೇಳಿದ್ದು: ರೂಮುಗಳಿಗೆ ನಾವೇ ಬೀಗ ಹಾಕಿಕೊಳ್ಳುವಂತೆ ಆದರೆ ನಂಬಿಕೆ, ಸರಳತೆಗೆ ಬೆಲೆ ಇಲ್ಲವಾಗುವುದು. ಅನುಮಾನಕ್ಕೆ ಆಸ್ಪದವಾಗಿ ನೈತಿಕತೆ ಕುಸಿಯಬಹುದು. ಬಯಲಿನಲ್ಲಿರುವ ಸುಖ ನಾಲ್ಕು ಗೋಡೆಯ ನಡುವೆ ಇರುವುದಿಲ್ಲ. ಬಯಲಿನ ಮಹತ್ವ ಕುರಿತು ಪ್ರಭುದೇವರು ಹೇಳುತ್ತಾರೆ:

ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ಬಯಲ ಜೀವನ ಬಯಲ ಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ಪೂಜಿಸಿ ಬಯಲಾದೆ ಗುಹೇಶ್ವರಾ.

ಶರಣರು ಇದ್ದದ್ದೇ ಬಯಲಿನಲ್ಲಿ. ಅಂದಿನ ಅನುಭವಮಂಟಪ' ಸಹ ಒಂದರ್ಥದಲ್ಲಿ ಬಯಲೇ. ಬಯಲಿನಲ್ಲಿ ಮುಕ್ತತೆ ಇರುತ್ತದೆ. ಇವತ್ತು ಕೆಲವರ ವೈಭವಯುತ ಬದುಕಿನ ರೀತಿ ನೋಡಿದರೆ ಆಶ್ಚರ್ಯವಾಗುತ್ತದೆ. ಸರಳತೆಯಲ್ಲಿರುವ ಸೌಂದರ್ಯ ಮತ್ತು ಮೌಲ್ಯ ಖಂಡಿತ ವೈಭವದಲ್ಲಿ ಇರುವುದಿಲ್ಲ. ಆದರೂ ಜನರು ವೈಭವಯುತ ಜೀವನಕ್ಕಾಗಿ ಸ್ಪರ್ದೆ ನಡೆಸುತ್ತಿದ್ದಾರೆ. ಬಹುಸಂಖ್ಯಾತರಿಗೆ ಸರಳತೆ ಬೇಕಾಗಿಲ್ಲ. ವಾಸದ ಮನೆ, ಅಲ್ಲಿರುವ ಪರಿಕರಗಳು, ತೊಡವ ಬಟ್ಟೆ, ಓಡಾಡುವ ಕಾರು ಇತ್ಯಾದಿ ಎಲ್ಲವೂ ತಮ್ಮ ಶ್ರೀಮಂತಿಕೆಯ ಪ್ರತೀಕವಾಗಿರಬೇಕು ಎನ್ನುವ ಭಾವನೆ. ಅಂಥವರೆಲ್ಲ ಒಂದು ಸತ್ಯವನ್ನು ಮರೆಯಬಾರದು: ಸತ್ತಾಗ ಯಾವ ಶ್ರೀಮಂತಿಕೆಯ ಪ್ರತೀಕಗಳೂ ಜೊತೆಗೆ ಬರುವುದಿಲ್ಲ. ಅದರಲ್ಲೂ ಕೊರೊನಾ ಬಂದು ಸತ್ತರೆ ಹೆಣ ಹೊರುವವರೂ ಇರುವುದಿಲ್ಲ. ಇಂಥ ಘಟನೆಗಳನ್ನು ನೋಡಿಯಾದರೂ ಮನುಷ್ಯ ಸರಳವಾಗಿ, ಪ್ರಾಮಾಣಿಕನಾಗಿ, ಸತ್ಯಸಂಧನಾಗಿ ಬಾಳುವ ಮನಸ್ಸು ಮಾಡಬೇಕು. ವ್ಯಕ್ತಿಯ ಶ್ರೀಮಂತಿಕೆ ಅವನ ಮಾನವೀಯತೆ, ಪ್ರೀತಿ, ಸಹಕಾರ, ಸದ್ಭಾವನೆ, ಸದ್ಗುಣಗಳಲ್ಲಿರಬೇಕು. ವಿಚಿತ್ರವೆಂದರೆ ಇವತ್ತು ಅನೇಕ ಜನರು ಭಂಡತನಕ್ಕೆ ಬಿದ್ದು ಇರುವಷ್ಟು ಕಾಲ ವೈಭವದಿಂದ ಮೆರೆಯಬೇಕೆಂಬ ಕನಸು ಕಾಣುತ್ತಿದ್ದಾರೆ. ಅವರು ಇಂಥ ಭ್ರಮೆಯಿಂದ ಹೊರಬಂದರೆ ಅವರಿಗೆ ಮತ್ತು ನಾಡಿಗೆ ಒಳಿತಾಗುವುದು. ಅದನ್ನು ಬಿಟ್ಟು ಆದರ್ಶಗಳನ್ನು ಗಾಳಿಗೆ ತೂರಿ ವಿಷಯವಾಸನೆಗಳ ಹಿಂದೆ ಹೋದರೆ ನೆಮ್ಮದಿ ನೆಲಕಚ್ಚುವುದು. ಸೆರೆಮನೆ ಸೇರುವ ಪರಿಸ್ಥಿತಿಯೂ ಬರಬಹುದು. ವಿಚಿತ್ರ ಎಂದರೆ ಎಂತೆಥವರೋ ಜೈಲಿಗೆ ಹೋಗಿ ಬಂದು ಅಟ್ಟಹಾಸದಿಂದ ಮೆರೆಯುತ್ತಿರುವಾಗ ನಾವೇಕೆ ಜೈಲಿಗೆ ಹೋಗಲು ಭಯಪಡಬೇಕು ಎಂದು ಕೇಳುವ ಹುಂಬರೂ ಇದ್ದಾರೆ. ಇಂಥವರಿಗೆ ಮೌಲ್ಯಗಳ ಬಗ್ಗೆ ಹೇಳುವುದುಕೋಣನ ಮುಂದೆ ಕಿನ್ನರಿ ಬಾರಿಸಿದಂತೆ’.

ಪ್ರಜ್ಞಾವತ ಯುವಕನೊಬ್ಬ ಇಬ್ಬರು ಸ್ವಾಮಿಗಳ ನಡುವೆ ನಡೆದ ಮೊಬೈಲ್ ಸಂಭಾಷಣೆಯ ವಿವರ ಹೇಳಿದ್ದು ಸ್ವಾರಸ್ಯಕರವಾಗಿದೆ. ತಾವು ಬೆಳಗ್ಗೆ ಎಷ್ಟು ಗಂಟೆಗೆ ಏಳ್ತೀರಿ? ಎಂಟುಗಟೆ ಸುಮಾರಿಗೆ. ಎದ್ದಮೇಲೆ ಏನು ಮಾಡ್ತೀರಿ? ಸ್ನಾನ, ಪೂಜೆ, ಪ್ರಸಾದ ಮಾಡ್ತೇವೆ. ನಂತರ ತಮ್ಮ ಕಾಯಕವೇನು? ವಿಶ್ರಾಂತಿ ಪಡೆಯುವುದು. ಎಷ್ಟುಹೊತ್ತು ವಿಶ್ರಾಂತಿ? ಸಾಯಂಕಾಲದವರೆಗೆ. ಮುಂದಿನ ತಮ್ಮ ದಿನಚರಿ? ಭಕ್ತನೊಬ್ಬ ನಮ್ಮ ಸೇವೆ ಮಾಡಲಿಕ್ಕಾಗಿಯೇ ಬರುವನು. ಏನು ಸೇವೆ ಮಾಡ್ತಾನೆ? ನಮ್ಮ ಮೈ ಕೈ ಗಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡ್ತಾನೆ. ಬಿಸಿ ಬಿಸಿ ನೀರಿನಿಂದ ಮೈ ತೊಳೆಯುವ ಸೇವೆ ಮಾಡ್ತಾನೆ. ಆಮೇಲೆ? ಯಥಾರೀತಿ ಪೂಜೆ, ಪ್ರಸಾದ, ವಿಶ್ರಾಂತಿ. ತಮಗೆ ಯಾವಾಗಲಾದರೂ ಮೈಯಲ್ಲಿ ಬೆವರು ಬರ್ತದೆಯೇ? ಯಾಕೆ ಬರದಿಲ್ಲ? ನಾವೇನು ಮನುಷ್ಯರಲ್ವೇ? ಪ್ರಸಾದ ಮಾಡುವಾಗ ನಮಗೂ ಬೆವರು ಬರ್ತದೆ. ಬೆವರು ಬಂದಾಗ ಏನು ಮಾಡ್ತೀರಿ? ಪ್ಯಾನ್ ಇಲ್ಲವೇ ಏಸಿ ಆನ್ ಮಾಡಿಸ್ತೇವೆ. ಲಿಂಗಾಯತ-ವೀರಶೈವರ ಬಗ್ಗೆ ಅಥವಾ ಇನ್ನೇನಾದರೂ ಮಾಹಿತಿ ಪಡೆಯಲು ಪತ್ರಿಕೆಯವರು ತಮ್ಮ ಬಳಿ ಬರುವರೇ? ಬರ್ತಾರೆ. ಅವರಿಗೆ ಏನು ಹೇಳ್ತೀರಿ? ನನ್ನ ಉತ್ತರಕ್ಕಿಂತ ನಾನು ಏನು ಮಾಡ್ತೇನೆ ಎನ್ನುವುದು ಮುಖ್ಯ. ಅವರಿಗೆ ಶಾಲು ಹೊದಿಸಿ, ಹಣ್ಣಿನ ಪುಟ್ಟಿ ನೀಡಿ, ಪಾಕೆಟ್‌ನಲ್ಲಿ ಒಂದಿಷ್ಟು ಕಾಣಿಕೆ ಇಟ್ಟು ಪ್ರಸಾದ ಮಾಡಿಸಿ ಕಳಿಸ್ತೇವೆ. ಅಷ್ಟಕ್ಕೆ ತೃಪ್ತರಾಗಿ ಹೋಗುವರು.

ತಮ್ಮಲ್ಲಿಗೆ ಬರುವ ಭಕ್ತರಿಗೆ ಉಪದೇಶ ಮಾಡಲು ಯಾವ ಧರ್ಮಗ್ರಂಥಗಳ ಅಧ್ಯಯನ ಮಾಡ್ತೀರಿ? ಸ್ವಾಮಿಗಳಿಗೆ ಧರ್ಮಗ್ರಂಥಗಳ ಅಧ್ಯಯನ ಯಾಕೆ ಬೇಕ್ರಿ? ನಮಗೆ ಪಟ್ಟ ಕಟ್ಟಿದಾಗಲೇ ಆ ಎಲ್ಲ ಪುಸ್ತಕಗಳನ್ನು ಕಟ್ಟಿ ಒಂದು ಕಡೆ ಭದ್ರವಾಗಿ ಇಟ್ಟಿದ್ದೇವೆ. ಬಂದ ಭಕ್ತರು ಏನು ಕೇಳ್ತಾರೆ ಎನ್ನುವುದು ನಮಗೆ ಗೊತ್ತಿದೆ. ಮದುವೆ, ಗೃಹಪ್ರವೇಶ, ಲಿಂಗಧಾರಣೆ, ಶಿವಗಣಾರಾಧನೆ ಇಂಥವುಗಳಿಗೆ ಮುಹೂರ್ತ ಕೇಳ್ತಾರೆ. ಅದಕ್ಕಾಗಿ ಧರ್ಮಗ್ರಂಥಗಳ ಓದು ಯಾಕೆ ಬೇಕು? ಆ ಕ್ಷಣದಲ್ಲಿ ನಮ್ಮ ಬಾಯಿಂದ ಏನು ಬರುತ್ತೋ ಅದನ್ನೇ ಅವರು ವೇದವಾಕ್ಯ ಎಂದು ನಂಬುವರು. ಅಧ್ಯಯನ ಎಂದು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ನಾವು ಯಾವ ವೇದಿಕೆಯಲ್ಲೂ ಆಶೀರ್ವಚನ ಮಾಡುವುದಿಲ್ಲ. ಭಕ್ತರು ಆಹ್ವಾನಿಸಿದಾಗ ಅವರ ಮನೆಗೆ ಹೇಳಿದ ವೇಳೆಗಿಂತ ಎರಡು ಮೂರು ಗಂಟೆ ತಡವಾಗಿ ಹೋಗ್ತೇವೆ. ತಡವಾಗಿ ಹೋದಷ್ಟೂ ನಮ್ಮ ಗೌರವ ಹೆಚ್ಚುತ್ತ್ತೆ.

ಮೇಲ್ಕಂಡ ಸ್ವಾಮಿಗಳಿಗೆ ಕೆಲವು ಶ್ರೀಮಂತರು ವರ್ಷಕ್ಕೊಂದು ಹೊಸ ಕಾರು ಕೊಡಿಸುವರಂತೆ. ಹೀಗಿದ್ದಾಗ ಸ್ವಾಮಿಗಳಾಗುವುದೇ ಮೇಲಲ್ಲವೇ ಎನ್ನುವುದು ಯುವಕನ ಪ್ರಶ್ನೆ. ಆತ ಹೇಳಿದ ಮತ್ತೊಂದು ಘಟನೆ: ಕೆರ್ ಆಪ್ ಪುಟ್ ಆಗಿದ್ದವ ಹತ್ತು ವರ್ಷದಲ್ಲಿ ನೂರು ಕೋಟಿ ಮಾಡಿದ್ದಾನಂತೆ. ಆತ ಬಸವ ತತ್ವ ಹೇಳ್ತಾನತೆ. ಇಷ್ಟಲಿಂಗ ಪೂಜಾ ಮಾಡ್ರಿ. ಬಸವಣ್ಣನ ಪೊಟೊ ತಲಿಮಾಲ ಇಟ್ಕಂಡು ನಡಿರಿ. ಅದರಿಂದ ತಲೆ ಮತ್ತು ಕಾಲು ನೋವು ನಿವಾರಣೆ ಆಗುವುದು. ಇದು ಅವನ ಉಪದೇಶ. ಮನವರಿಯದ ಕಳ್ಳತನವಿಲ್ಲ',ಜ್ಞಾನದ ಬಲದಿಂದ ಅಜ್ಞಾನದ ಕೇಡು’, ಕಾಯಕವೇ ಕೈಲಾಸ',ಜಾತ್ಯತೀತತೆ’, ಕಳಬೇಡ, ಕೊಲಬೇಡ..'ದಾಸೋಹ’, `ಪಂಚಾಚಾರ’ ಇಂಥ ವಿಚಾರಗಳನ್ನು ಆತ ತಪ್ಪಿಯೂ ಹೇಳುವುದಿಲ್ಲವಂತೆ. ಇಂಥವರಿAದಾಗಿಯೇ ಮೌಲ್ಯಗಳು ಅಪಮೌಲ್ಯಗೊಳ್ಳುತ್ತಿರುವುದು.


ವಿಳಾಸ:

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಶ್ರೀ ತರಳಬಾಳು ಜಗದ್ಗುರು

ಶಾಖಾಮಠಸಾಣೇಹಳ್ಳಿ-೫೭೭೫೧೫
ಹೊಸದುರ್ಗ-ತಾ
ಚಿತ್ರದುರ್ಗ-ಜಿ
ಸೆಲ್: ೯೪೪೮೩೯೫೫೯೪

2 thoughts on “ಮೌಲ್ಯ ಮತ್ತು ಮನುಷ್ಯನ ನಡಾವಳಿಕೆ

  1. ಅರಿವು ಮತ್ತು ಆಚರಣೆ ಅನುಭಾವಿ ವಿರಕ್ತನ ಸಂಪತ್ತು ಸ್ವಾಮಿಗಳವರು ಅಧ್ಯಯನ ,ಶರಣರ ಸಂಗ, ಅನುಭವ ಚಿಂತನ, ಕಾಯಕ, ಸಮಾಜಸೇವೆ ಹೀಗೆ ಹತ್ತಾರು ಕಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಇದರಿಂದ ದೂರವಿರುವ ಸ್ವಾಮಿಗಳು ಹೊಟ್ಟೆಬಾಕರು ಮತ್ತು ದುಡಿಯದೆ ತಿನ್ನುವ ಐನಾತಿ ಸ್ವಾಮಿಗಳೆಂದು ಕರೆಯಬಹುದು. ಅದಕ್ಕಾಗಿ ಸ್ವಾಮಿಗಳು ಮೊದಲು ಬದಲಾಗಬೇಕು.

Leave a Reply

Your email address will not be published. Required fields are marked *

error: Content is protected !!