ಬಸವ ತತ್ವ ಸಾಗಿಬಂದ ದಾರಿ

ವಚನ ಸಾಹಿತ್ಯ ಮತ್ತು ಬಸವ ತತ್ವ ಸಾಗಿ ಬಂದ ದಾರಿ
ನವೋದಯ ಯುಗದ ಸಾಹಿತಿಗಳು

20 ನೇ ಶತಮಾನದ ಪ್ರಾರಂಭದಿಂದ ಆಧುನಿಕ ನವೋದಯ ವಚನ ಸಾಹಿತ್ಯ ಸಂಶೋಧನೆ ಮತ್ತು ಬಸವ ತತ್ವ ಚಿಂತನೆಯು ಮಹತ್ವದ ತಿರುವನ್ನು ಪಡೆಯುತ್ತದೆ. ಅಪ್ರತಿಮ ಮತ್ತು ಪ್ರಭುದ್ಧ ಚಿಂತಕರು ವಚನ ಸಾಹಿತ್ಯವನ್ನು ಅತ್ಯಂತ ಪರಿಶ್ರಮದಿಂದ ಸಂಶೋಧಿಸಿ ಪರಿಷ್ಕರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಅವರಲ್ಲಿ ಟಿ.ಎಸ್. ವೆಂಕಣ್ಣಯ್ಯ, ಫ. ಗು. ಹಳಕಟ್ಟಿ, ಮಾಸ್ತಿ ವೆಂಕಟೇಶ ಅಯ್ಯಂಗಾರ, ಎಮ್. ಆರ್, ಶ್ರೀನಿವಾಸಮೂರ್ತಿ, ಆರ್. ಆರ್. ದಿವಾಕರ, ಏ. ಕೆ. ರಾಮಾನುಜನ್, ಎಮ್. ಎಮ್. ಕಲಬುರ್ಗಿ, ಎಲ್. ಬಸವರಾಜು, ಎಮ್. ಚಿದಾನಂದ ಮೂರ್ತಿ, ಎಚ್. ತಿಪ್ಪೆರುದ್ರಸ್ವಾಮಿ, ಅರ್. ಸಿ. ಹಿರೇಮಠ ಹೀಗೆ ದೊಡ್ಡ ಪಟ್ಟಿಯೇ ಇದೆ.

 1. ಟಿ. ಎಸ್. ವೆಂಕಣ್ಣಯ್ಯ (ಬಸವರಾಜ ದೇವರ ರಗಳೆ) :
  ಕನ್ನಡದ ಮೊದಲ ಪ್ರಾಧ್ಯಾಪಕರೆಂದು ಗೌರವ ಪಡೆದ “ತಳುಕಿನ ಸುಬ್ಬಣ್ಣ ವೆಂಕಣ್ಣಯ್ಯ” ನವರು ಕುವೆಂಪುರವರ ಗುರುಗಳಾಗಿದ್ದರು. ಇವರು ಮೈಸೂರು ವಿಶ್ವವಿದ್ಯಾಯದಲ್ಲಿ ಪ್ರಾರಂಭ ಮಾಡಿದ ಕನ್ನಡ ಎಮ್. ಏ. ತರಗತಿಯ ಪ್ರಪ್ರಥಮ ತಂಡದಲ್ಲಿ ಕುವೆಂಪುರವರು ಒಬ್ಬರಾಗಿದ್ದರು.

01.10.1885 ರಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ತಾಲೂಕಿನ ತಳುಕು ಗ್ರಾಮದಲ್ಲಿ ಜನಿಸಿದ ಟಿ. ಎಸ್. ವೆಂಕಣ್ಣಯ್ಯನವರ ತಂದೆ ತೆಲುಗು ಹಾಗು ಕನ್ನಡದಲ್ಲಿ ಚುಟುಕುಗಳನ್ನು ಬರೆಯುವ ಹವಾಸವಿದ್ದ ದೊಡ್ಡ ಸುಬ್ಬಣ್ಣನವರು ಮತ್ತು ತಾಯಿ ಮಹಾಲಕ್ಷ್ಮಮ್ಮನವರು.

ವಿಮರ್ಶೆ, ಗ್ರಂಥ ಸಂಪಾದನೆ ಮತ್ತು ಸಂಶೋಧನೆ ಹೀಗೆ ಹಾಲವಾರು ಸಾಹಿತ್ಯ ಕ್ಷೇತ್ರಗಳಲ್ಲಿ ಟಿ. ಎಸ್. ವೆಂಕಣ್ಣಯ್ಯನವರು ಕೆಲಸ ಮಾಡಿದ್ದಾರೆ. ರವಿಂದ್ರನಾಥ ಟ್ಯಾಗೋರರ ಪ್ರಾಚೀನ ಸಾಹಿತ್ಯ, ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ, ಬಸವರಾಜ ದೇವರ ರಗಳೆ, ಕರ್ನಾಟಕ ಕಾದಂಬರಿ ಸಂಗ್ರಹ, ಹರಿಶ್ಚಂದ್ರ ಕಾವ್ಯ ಸಂಗ್ರಹ, ಕುಮಾರವ್ಯಾಸ ಭೀಷ್ಮಪರ್ವ ಸಂಗ್ರಹ, ಸಿದ್ಧರಾಮ ಚಾರಿತ್ರ್ಯ ಅವರು ಬರೆದ ಬಹುಮುಖ್ಯ ಗ್ರಂಥಗಳು.

ಹರಿಹರ ಬರೆದ ಬರೆದ ಬಸವರಾಜದೇವರ ರಗಳೆಯನ್ನು ವಿಮರ್ಶೆ ಮಾಡಿ ಬರೆದ ಪುಸ್ತಕ “ಬಸವರಾಜದೇವರ ರಗಳೆ” ಮತ್ತು “ಸಿದ್ಧರಾಮ ಚಾರಿತ್ರ್ಯ” ಎನ್ನುವ ಎರಡು ಗ್ರಂಥಗಳು ವಚನ ಸಾಹಿತ್ಯ ಮತ್ತು ಬಸವಣ್ಣನವರ ವ್ಯಕ್ತಿತ್ವವನ್ನು ನವೋದಯ ಸಾಹಿತ್ಯಕ್ಕೆ ಪರಿಚಯಿಸಿದವರು ಟಿ. ಎಸ್. ವೆಂಕಣ್ಣಯ್ಯನವರು.

ತಮ್ಮ ಶಿಷ್ಯರನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಟಿ. ಎಸ್. ವೆಂಕಣ್ಣಯನವರು ಅನುಪಮ ಮತ್ತು ವಿಶಿಷ್ಟ ಮಾನವೀಯ ಗುಣಗಳನ್ನು ಹೊತ್ತಂಥ ಗೌರೀಶಂಕರವಾಗಿದ್ದರು. ತಮ್ಮ 55 ನೇ ವಯಸ್ಸಿನಲ್ಲಿ (1939) ನಿಧನರಾದಾಗ “ನಾವು ಆಶ್ರಯ ಪಡೆದಂಥಾ ಹಡಗು ಮುಳುಗಿತು” ಎಂದು ಬಿ. ಎಮ್. ಶ್ರೀ. ಯವರು ಕಂಬನಿ ಮಿಡಿದಿದ್ದರು.

 1. ಮಾಸ್ತಿ ವೆಂಕಟೇಶ ಅಯ್ಯಂಗಾರ (ಸೇಯಿಂಗ್ಸ್ ಆಫ್ ಬಸವಣ್ಣ) :
  ಸಣ್ಣ ಕಥೆಗಳ ಜನಕ ಎಂದೇ ಪ್ರಖ್ಯಾತಿಯನ್ನು ಗಳಿಸಿದ “ಶ್ರೀನಿವಾಸ” ಎಂಬ ಕಾವ್ಯನಾಮದಿಂದ ಸಾಹಿತ್ಯ ಕೃಷಿ ಮಾಡಿದವರು “ಕನ್ನಡದ ಆಸ್ತಿ” ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹೊಂಗೇನಹಳ್ಳಿ ಎಂಬ ಗ್ರಾಮದಲ್ಲಿ 06.06.1890 ರಲ್ಲಿ ಜನಿಸಿದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ತಂದೆ ಸಂಪ್ರದಾಯಸ್ಥ ಬ್ರಾಹಣ ಕುಟುಂಬವಾದ “ಪೆರಿಯಾತ” ಮನೆತನದ ಶ್ರೀ ರಾಮಸ್ವಾಮಿ ಅಯ್ಯಂಗಾರ ಮತ್ತು ತಾಯಿ ಶ್ರೀಮತಿ ತಿರುಮಲ್ಲಮ್ಮ.
  ಅತ್ಯಂತ ಪ್ರತಿಭಾನ್ವಿತ ಮತ್ತು ಬುದ್ಧಿಶಾಲಿಯಾಗಿದ್ದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರರು ಎಲ್ಲ ತರಗತಿಗಳಲ್ಲೂ ಪ್ರಥಮ ಸ್ಥಾನವನ್ನು ಗಳಿಸಿ ಪಾಸಾಗಿದ್ದರು. ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಂಗೇನಹಳ್ಳಿ, ಯಳಂದೂರು, ಶಿವಾರ ಪಟ್ಟಣ, ಮಳವಳ್ಳಿಗಳಲ್ಲಿ ಪೂರೈಸಿದ ಅವರು ಮೆಟ್ರಿಕ್ಯುಲೇಶನ್ (1907) ವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈ-ಸ್ಕೂಲಿನಲ್ಲಿ ಮಾಡುತ್ತಾರೆ. ಎಫ್. ಏ (1909) ಯನ್ನು ಮಹಾರಾಜಾ ಕಾಲೇಜಿನಲ್ಲಿ ಪಾಸಾದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಏ (1912) ಮುಗಿಸಿ ಕೊನೆಗೆ 1914 ರಲ್ಲಿ ಚಿನ್ನದ ಪದಕದೊಂದಿಗೆ ಮದ್ರಾಸಿನಲ್ಲಿ ಇಂಗ್ಲೀಷಿನಲ್ಲಿ ಎಮ್.ಏ ಪಾಸಾಗತಾರೆ. ಅಂಥ ಪ್ರಖರ ಬುದ್ಧಿಮತ್ತೆಯುಳ್ಳವರು.

ಮುಂದೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಮಾರು ಒಂದು ತಿಂಗಳು ಉಪನ್ಯಾಸಕರಾಗಿ ಕೆಲಸ ಪ್ರಾರಂಭಿಸಿದರು. 1914 ರಲ್ಲಿ ಬೆಂಗಳೂರಿಗೆ ಹಿಂತಿರುಗಿದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಪ್ರಥಮರಾಗಿ ಪಾಸಾಗಿ ಮೈಸೂರು ಸರ್ಕಾರದಲ್ಲಿ “ಅಸಿಸ್ಟಂಟ್ ಕಮೀಷನರ್” ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭ ಮಾಡತಾರೆ.

ಸಾಹಿತ್ಯದಲ್ಲಿ ಅಪಾರ ಆಸಕ್ತಿಯಿದ್ದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರರವರು ಬರೆದ “ಚಿಕವೀರರಾಜೇಂದ್ರ” ಎನ್ನುವ ಕಾದಂಬರಿ 1983 ರಲ್ಲಿ ಕನ್ನಡಕ್ಕೆ “ಜ್ಞಾನಪೀಠ ಪ್ರಶಸ್ತಿ” ಯನ್ನು ತಂದು ಕೊಟ್ಟಿತು. 1910 ರಲ್ಲಿ ಪ್ರಕಾಶಿತವಾದ “ರಂಗಣ್ಣನ ಮದುವೆ” ಎನ್ನುವ ಸಣ್ಣ ಕಥೆಗಳ ಸಂಗ್ರಹ ಅವರ ಪ್ರಪ್ರಥಮ ಪುಸ್ತಕ. ಅಲ್ಲಿಂದ ಪ್ರಾರಂಭವಾದ ಇವರ ಸಾಹಿತ್ಯ ರಚನೆಯ ನಾಗಾಲೋಟ “ಮಾತುಗಾರ ರಾಮಣ್ಣ” ಎಂಬ ಕೃತಿಯವರೆಗೆ ಸಾಗುತ್ತದೆ. ಈ ಕೃತಿಯು ಅವರು ನಿಧನರಾಗುವುದಕ್ಕಿಂತ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾಗಿತ್ತು ಎಂದರೆ ಅವರಲ್ಲಿ ಸಾಹಿತ್ಯ ರಚನೆಯ ಹಂಬಲ, ಉತ್ಸಾಹ ಮತ್ತು ಪ್ರಜ್ಞೆ ಎಷ್ಟು ಪ್ರಖರವಾಗಿತ್ತೆಂದು ಊಹಿಸಬಹುದು. ಒಟ್ಟು ಅವರು ಬರೆದ ಗ್ರಂಥಗಳ ಸಂಖ್ಯೆ 123 ಎಂದರೆ ಆಶ್ಚರ್ಯದ ಜೊತೆಗೆ ನಿಜವಾಗಿಯೂ “ಮಾಸ್ತಿ ಕನ್ನಡದ ಆಸ್ತಿ” ಎನ್ನುವುದಕ್ಕೆ ಅದ್ಭುತ ನಿದರ್ಶನ.

ಇವರನ್ನು ಅರಿಸಿಕೊಂಡು ಬಂದ ಗೌರವಾದರಗಳಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (1929), ಮೈಸೂರು ಮಾಹಾರಾಜರ “ರಾಜಸೇವಾ ಪ್ರಸಕ್ತ ಬಿರುದು (1942), ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆ (1953), ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್ (1956), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1968), “ಶ್ರೀನಿವಾಸ” ಎಂಬ ಅಭಿನಂದನಾ ಗ್ರಂಥ (1972), ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್ (1977), ಜ್ಞಾನಪೀಠ ಪ್ರಶಸ್ತಿ (1983) ಮುಂತಾದವುಗಳು ಪ್ರಮುಖವಾದವು.

ವಚನ ಸಾಹಿತ್ಯದಲ್ಲಿಯೂ ಸಹ ತಮ್ಮ ಯೋಗದಾನವನ್ನು ನೀಡಿದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ಇಂಗ್ಲೀಷಿನಲ್ಲಿ ಬರೆದ “Sayings of Basavanna” ಒಂದು ಮೇರು ಕೃತಿ. ಇದರ ಮೂಲಕ ವಚನ ಸಾಹಿತ್ಯವನ್ನು ಆಂಗ್ಲ ಭಾಷೆಗೆ ಪರಿಚಯಿಸುವ ಪ್ರಯತ್ನವನ್ನು ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ಮಾಡುತ್ತಾರೆ.

 1. ಎಮ್. ಆರ್. ಶ್ರೀನಿವಾಸಮೂರ್ತಿ (ವಚನಧರ್ಮ ಸಾರ / ಭಕ್ತಿಭಂಡಾರಿ ಬಸವಣ್ಣ) :
  ಕನ್ನಡ ಸಾರಸ್ವತ ಲೋಕದಲ್ಲಿ ಮೂವರು ಶ್ರೀಗಳು ಇದ್ದಾರೆ. ಬಿ.ಎಂ.ಶ್ರೀ (ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ), ಎಂ.ಆರ್‍.ಶ್ರೀ (ಎಮ್. ಆರ್. ಶ್ರೀನಿವಾಸಮೂರ್ತಿ), ತೀ.ನಂ.ಶ್ರೀ (ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ) ಅವರನ್ನು ಶ್ರೀರತ್ನತ್ರಯರೆಂದೇ ಖ್ಯಾತಿಯನ್ನು ಪಡೆದಿದ್ದಾರೆ. ಆ ಶ್ರೀರತ್ನತ್ರಯರಲ್ಲಿ ಶ್ರೀ ಎಮ್. ಆರ್. ಶ್ರೀನಿವಾಸಮೂರ್ತಿಯವರೂ ಒಬ್ಬರು.

ಪ್ರಾಧ್ಯಾಪಕರು ಮತ್ತು ಸಾಹಿತಿಗಳಾದ ಎಮ್.ಆರ್.ಶ್ರೀ ಸರ್ ಎಂದೇ ಪ್ರಖ್ಯಾತರಾದ ಶ್ರೀ ಎಮ್. ಆರ್. ಶ್ರೀನಿವಾಸಮೂರ್ತಿ ಅವರು 28.08.1892 ರಲ್ಲಿ ಮೈಸೂರಿನಲ್ಲಿ ಜನಿಸಿದವರು. ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀ ರಾಮಚಂದ್ರರಾಯರು ಇವರ ತಂದೆ ಮತ್ತು ತಾಯಿ ಶ್ರೀಮತಿ ಸಾವಿತ್ರಮ್ಮನವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮೈಸೂರಿನಲ್ಲಿ ಪೂರೈಸಿದ ಶ್ರೀ ಎಮ್. ಆರ್. ಶ್ರೀನಿವಾಸಮೂರ್ತಿಯವರು ವಿಜ್ಞಾನದ ವಿದ್ಯಾರ್ಥಿಯಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ 1915 ರಲ್ಲಿ ಬಿ. ಎಸ್. ಸಿ ಮತ್ತು ಬಿ. ಎ ಪದವಿಗಳನ್ನು ಪಡೆದರು. 1922 ರಲ್ಲಿ ಸ್ನಾತಕೋತ್ತರ ಪದವಿ ಪಡೆಯಲೆಂದು ಮೈಸೂರಿಗೆ ಬರುತ್ತಾರೆ.

ಬೆಂಗಳೂರು, ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ಕೆಲ ಕಾಲ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ವಿದ್ಯಾ ಇಲಾಖೆಯಲ್ಲಿ ಅಧಿಕಾರಿಗಳಾಗಿಯೂ ಕೂಡ ಕೆಲಸ ಮಾಡಿದ್ದಾರೆ. ಆದರೆ ಅವರ ವೃತ್ತಿಗೆ ತಿರುವು ಬಂದಿದ್ದು 1939 ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ-ಇಂಗ್ಲೀಷ ನಿಘಂಟು ಪರಿಷ್ಕರಣೆ ಮಾಡುವ ಕೆಲಸಕ್ಕೆ ನಿಯೋಜಿತರಾಗುವ ಮೂಲಕ. 1943 ರಲ್ಲಿ ಇದರ ಪ್ರಧಾನ ಸಂಪಾದಕರಾದ ಶ್ರೀ. ಬಿ. ವಿ. ನಾರಾಣಪ್ಪನವರು ನಿಧನರಾದಾಗ ಕನ್ನಡ-ಇಂಗ್ಲೀಷ ನಿಘಂಟು ಪರಿಷ್ಕರಣೆಯ ಸಂಪೂರ್ಣ ಜಾವಾಬ್ದಾರಿ ಶ್ರೀ ಎಮ್. ಆರ್. ಶ್ರೀನಿವಾಸಮೂರ್ತಿ ಅವರು ಹೊತ್ತುಕೊಂಡು 1947 ರ ವರೆಗೆ ನಡೆಸಿಕೊಂಡು ಬರುತ್ತಾರೆ. ಮುಂದೆ ಬೆಂಗಳೂರಿನ ಸೆಂಟ್ರಲ್ ಹೈ-ಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ಮತ್ತು ಕೋಲಾರದಲ್ಲಿ ಜಿಲ್ಲಾ ಶಿಕ್ಷಣ ಅಧಿಕಾರಿಗಳಾಗಿ 1949 ರಲ್ಲಿ ನಿವೃತ್ತರಾಗುತ್ತಾರೆ.

ಶೈಕ್ಷಣಿಕವಾಗಿ ವಿಜ್ಞಾನವನ್ನು ಕಲಿತಿದ್ದರೂ ಬಾಲ್ಯದಿಂದಲೂ ಸಾಹಿತ್ಯವನ್ನು ಆರಾಧಿಸಿದವರು ಶ್ರೀ ಎಮ್. ಆರ್. ಶ್ರೀನಿವಾಸಮೂರ್ತಿಯವರು. ವಚನ ಸಾಹಿತ್ಯವನ್ನು ಅಭ್ಯಾಸ ಮಾಡಿದ್ದ ಶ್ರೀ ಎಮ್. ಆರ್. ಶ್ರೀನಿವಾಸಮೂರ್ತಿಯವರು “ವಚನಧರ್ಮಸಾರ” ಎನ್ನುವ ಗ್ರಂಥವನ್ನು ರಚಿಸಿ ವಚನ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಈ ಕೃತಿ ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. “ಭಕ್ತಿಭಂಡಾರಿ ಬಸವಣ್ಣನವರು” ಶ್ರೀ ಎಮ್. ಆರ್. ಶ್ರೀನಿವಾಸಮೂರ್ತಿಯವರು ಬರೆದ ಇನ್ನೊಂದು ಮಹತ್ವದ ಕೃತಿ. ಶ್ರೀ ಎಮ್. ಆರ್. ಶ್ರೀನಿವಾಸಮೂರ್ತಿಯವರು ಬರೆದ ಶೂನ್ಯ ಸಂಪಾದನೆಗಳು, ಸಿದ್ಧರಾಮ ಚಾರಿತ್ರ್ಯದ ಅಲ್ಲಮಪ್ರಭು, ವೀರಶೈವಾಮೃತ ಮಹಾಪುರಾಣ, ಚೆನ್ನಬಸವಾಂಕನ ಮಹಾದೇವಿಯಕ್ಕನ ಪುರಾಣ, ಷಡಕ್ಷರಿಯ ರಾಜಶೇಖರ ವಿಳಾಸ, ವೃಷಭೇಂದ್ರ ವಿಜಯ, ಹರಿಹರನ ಗಿರಿಜಾ ಕಲ್ಯಾಣ ಶೈಲಿ, ಹರಿಹರನ ಸ್ಥಾನ ನಿರ್ದೇಶ ಅವರ ಇನ್ನಿತರ ಮಹತ್ವದ ಕೃತಿಗಳು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶ್ರೀ ಎಮ್. ಆರ್. ಶ್ರೀನಿವಾಸಮೂರ್ತಿಯವರು 1920 ರಿಂದ 1940 ರ ವರೆಗೆ ಕಾರ್ಯ ಸಮಿತಿ ಸದಸ್ಯರಾಗಿ ಮತ್ತು 1950 ರಿಂದ 1953 ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಶ್ರೀ ಎಮ್. ಆರ್. ಶ್ರೀನಿವಾಸಮೂರ್ತಿಯವರು 1950 ರಲ್ಲಿ ಸೊಲ್ಲಾಪುರದಲ್ಲಿ ನಡೆದ 33 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಸಾಹಿತಿ, ಚಿಂತಕ, ಅಧ್ಯಾಪಕ, ವಚನ ಸಾಹಿತ್ಯದ ಆರಾಧಕರು, ಶ್ರೀರತ್ನತ್ರಯರಲ್ಲಿ ಒಬ್ಬರಾದ ಶ್ರೀ ಎಮ್. ಆರ್. ಶ್ರೀನಿವಾಸಮೂರ್ತಿಯವರು ಬೆಂಗಳೂರಿನಲ್ಲಿ 16.09.1953 ರಲ್ಲಿ ನಿಧನರಾದರು.

 1. ಆರ್. ಆರ್. ದಿವಾಕರ (ವಚನ ಶಾಸ್ತ್ರ ರಹಸ್ಯ) :
  ಸ್ವಾತಂತ್ರ್ಯ ಹೋರಾಟ ಹಾಗು ಕರ್ನಾಟಕ ಏಕೀಕರಣ ಹೋರಾಟ, ಭಾರತ ಸರ್ಕಾರದಲ್ಲಿ ಕೇಂದ್ರೀಯ ಮಂತ್ರಿಗಳು ಹಾಗು ಬಿಹಾರದ ರಾಜ್ಯಪಾಲ ಹುದ್ದೆ ನಿರ್ವಹಿಸಿದವರು, ವರ್ತಮಾನ ಪತ್ರಿಕೆಯ ಸಾರಥ್ಯ ವಹಿಸಿದವರು ಮತ್ತು ಇವುಗಳ ಜೊತೆಗೆ ಸಾಹಿತ್ಯ ಮತ್ತು ವಚನ ಸಾಹಿತ್ಯದಲ್ಲಿ ಕೃಷಿ ಮಾಡಿದ ಸಾಧಕರು ಧಾರವಾಡದ ಶ್ರೀ ರಂಗನಾಥ ರಾಮಚಂದ್ರ ದಿವಾಕರ ಅವರು. ಇಷ್ಟೆಲ್ಲಾ ಒಬ್ಬರೇ ಮಾಡಿದರೇ ಎನ್ನುವಷ್ಟು ಆಶ್ಚರ್ಯಚಕಿತವಾಗುವಂತೆ ಮಾಡಿದ ಶ್ರೀ ರಂಗನಾಥ ರಾಮಚಂದ್ರ ದಿವಾಕರ ಅವರು 30.09.1894 ರಲ್ಲಿ ಧಾರವಾಡದಲ್ಲಿ ಜನಿಸಿದರು. ತಂದೆ ಶ್ರೀ ರಾಮಚಂದ್ರರಾಯರು ಮತ್ತು ತಾಯಿ ಶ್ರೀಮತಿ ಸೀತಾಬಾಯಿಯವರು. ಧಾರವಾಡ, ಬೆಳಗಾವಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿದ ಶ್ರೀ ರಂಗನಾಥ ರಾಮಚಂದ್ರ ದಿವಾಕರ ಅವರು 1919 ರಲ್ಲಿ ಮುಂಬೈನಲ್ಲಿ ಎಮ್. ಎ ಮತ್ತು ಎಲ್. ಎಲ್. ಬಿ ಪದವಿಯನ್ನು ಪಡೆಯುತ್ತಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀ ರಂಗನಾಥ ರಾಮಚಂದ್ರ ದಿವಾಕರ ಅವರು 1930 ರಿಂದ 1942 ರವರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮೀಟಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಸರ್ಕಾರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಭಾರತ ಸರ್ಕಾರದಲ್ಲಿ ಪ್ರಧಾನಿ ಜವಹರಲಾಲ ನೆಹರೂರವರ ಸಚಿವ ಸಂಪುಟದಲ್ಲಿ 1949 ರಿಂದ 1952 ರವರೆಗೆ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾಗಿದ್ದರು. ಮುಂದೆ ಬಿಹಾರ ರಾಜ್ಯದ ರಾಜ್ಯಪಾಲರಾಗಿ 1952 ರಿಂದ 1957 ರವರೆಗೆ ನಿಯುಕ್ತಿಗೊಂಡಿದ್ದರು. ಎರಡು ಬಾರಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. ವಾರಪತ್ರಿಕೆಯಾದ “ಕರ್ಮವೀರ” ವನ್ನು 1921 ರಲ್ಲಿ ಪ್ರಾರಂಭ ಮಾಡಿ ಅದರ ಜೊತೆಗೆ “ಸಂಯುಕ್ತ ಕರ್ನಾಟಕ” ವೆಂಬ ದಿನಪತ್ರಿಕೆಯನ್ನು ಶುರು ಮಾಡುತ್ತಾರೆ. ಪತ್ರಿಕೋದ್ಯಮಕ್ಕಾಗಿಯೇ 1933 ರಲ್ಲಿ “ಲೋಕ ಶಿಕ್ಷಣ ಟ್ರಸ್ಟ್” ಆರಂಭಿಸಿ 1974 ರ ವರೆಗೂ ಅದರ ಅಧ್ಯಕ್ಷರಾಗಿ ಮುನ್ನಡೆಸುತ್ತಾರೆ.

ಇಷ್ಟೆಲ್ಲ ಬಿಡುವಿಲ್ಲದ ಸಾರ್ವಜನಿಕ ಜೀವನದ ಜೊತೆಗೆ ಪತ್ರಿಕೋದ್ಯಮ ಮತ್ತು ವಿಪುಲವಾದ ಸಾಹಿತ್ಯ ಸೇವೆಯನ್ನು ಮಾಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನುಭವಿಸಿದ ಸೆರೆಮನೆ ವಾಸವನ್ನು ತಮ್ಮ “ಸೆರೆಯ ಮರೆಯಲ್ಲಿ” ಎನ್ನುವ ಕೃತಿಯಲ್ಲಿ ಚಿತ್ರಿಸಿದ್ದಾರೆ. ಕನ್ನಡದಲ್ಲಿ ಬರೆದ ಮಹಾತ್ಮರ ಮನೋರಂಗ, ಹರಿಭಕ್ತಿ ಸುಧೆ, ಉಪನಿಷತ್ ಪ್ರಕಾಶ, ಉಪನಿಷತ್ ಕಥಾವಳಿ, ಗೀತೆಯ ಗುಟ್ಟು, ಕರ್ಮಯೋಗ, 1857 ರ ಸ್ವಾತಂತ್ರ್ಯ ಸಂಗ್ರಾಮ, ಗಾಂಧೀಜಿ, ವಿಶ್ವಮೇಧ, ಕರ ನಿರಾಕರಣೆಯ ವೀರಕಥೆ, ಕರ್ನಾಟಕದ ಏಕೀಕರಣ ಕೃತಿಗಳನ್ನು ಶ್ರೀ ರಂಗನಾಥ ರಾಮಚಂದ್ರ ದಿವಾಕರ ಅವರು ರಚಿಸಿದ್ದಾರೆ. ಸುಭಾಷ್ ಚಂದ್ರ ಭೋಸ್ ಅವರ ಆಝಾದ್ ಹಿಂದ್ ಸೇನೆಯಲ್ಲಿದ್ದಂಥ ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ಅವರ “ಜೈಹಿಂದ” ಕೃತಿಯನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಶ್ರೀ ಎಮ್. ಆರ್ ಶ್ರೀನಿವಾಮೂರ್ತಿಯವರ “ನಾಗರೀಕ” ಎನ್ನುವ ಕೃತಿಯನ್ನು ಹಿಂದಿಗೆ ಭಾಷಾಂತರಿಸಿದ್ದಾರೆ.

ಶ್ರೀ ರಂಗನಾಥ ರಾಮಚಂದ್ರ ದಿವಾಕರ ಅವರು ಇಂಗ್ಲೀಷಿನಲ್ಲಯೂ ಸಹ ಕೃತಿಗಳನ್ನು ರಚಿಸಿದ್ದಾರೆ. ಸತ್ಯಾಗ್ರಹ, ಗ್ಲಿಂಪ್ಸಸ್ ಆಫ್ ಗಾಂಧೀಜಿ, ಉಪನಿಷತ್ ಇನ್ ಸ್ಟೊರೀಜ್ ಎಂಡ್ ಡೈಲಾಗ್, ಮಹಾಯೋಗಿ, ಭಗವಾನ್ ಬುದ್ಧ ಇವರ ಆಂಗ್ಲ ಭಾಷೆಯ ಕೃತಿಗಳು. ಬಿಹಾರ ಥ್ರೂ ಏಜಿಸ್ ಮತ್ತು ಕರ್ನಾಟಕ ಥ್ರೂ ಏಜಿಸ್ ಎನ್ನುವ ಗ್ರಂಥಗಳನ್ನು ಸಂಪಾದಿಸಿದ್ದಾರೆ. ವಚನ ಸಾಹಿತ್ಯದಲ್ಲಿ ವಿಶೇಷ ಒಲವು ಇದ್ದ ಶ್ರೀ ರಂಗನಾಥ ರಾಮಚಂದ್ರ ದಿವಾಕರ ಅವರು “ವಚನ ಶಾಸ್ತ್ರ ರಹಸ್ಯ” ಎನ್ನುವ ಗ್ರಂಥವನ್ನು ಬರೆಯುತ್ತಾರೆ.

ಕರ್ನಾಟಕ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. 1938 ರ ಬಳ್ಳಾರಿಯ 23 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಶ್ರೀ ರಂಗನಾಥ ರಾಮಚಂದ್ರ ದಿವಾಕರ ಅವರು ವಹಿಸಿದ್ದರು.

ರಾಜಕೀಯ, ಸಾಹಿತ್ಯ, ವಚನ ಸಾಹಿತ್ಯ, ಪತ್ರಿಕೋದ್ಯಮ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಮಹಾನುಭಾವರಾದ ಶ್ರೀ ರಂಗನಾಥ ರಾಮಚಂದ್ರ ದಿವಾಕರ ಅವರು 15.01.1990‌ ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

 1. ಏ. ಕೆ. ರಾಮಾನುಜನ್ (ಸ್ಪೀಕಿಂಗ್ ಆಫ್ ಶಿವ) :
  ಅಮೇರಿಕದ ಶೀಕ್ಯಾಗೋ ವಿಶ್ವ ವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದ, ಬಹುತೇಕ ಪಾಶ್ಚಾತ್ಯ ರಾಷ್ಟ್ರಗಳಿಗೆ ವಚನ ಸಾಹಿತ್ಯವನ್ನು ಮುಟ್ಟಿಸಿದ ಮಹಾನ್ ಸಾಹಿತ್ಯ ಚಿಂತಕರಲ್ಲಿ ಮೈಸೂರು ಮೂಲದ ಡಾ. ಏ. ಕೆ. ರಾಮಾನುಜನ್ ಕೂಡ ಒಬ್ಬರು. ವಚನ ಸಾಹಿತ್ಯದ ಆರಾಧಕರು ನೆನಪಿನಲ್ಲಿಡಬೇಕಾದಂಥ ಸಾಹಿತಿಗಳು ಡಾ. ಏ. ಕೆ. ರಾಮಾನುಜನ್ ಅವರು.

ಕನ್ನಡ ಸಾಹಿತ್ಯದ ಜೊತೆಗೆ ವಚನ ಸಾಹಿತ್ಯವನ್ನು ಇಂಗ್ಲೀಷ್ ಭಾಷೆಗೆ ಭಾಷಾಂತರಿಸುವುದರ ಮೂಲಕ ಅಮೋಘ ಕೊಡುಗೆ ನೀಡಿ ಪಾಶ್ಚಾತ್ಯ ರಾಷ್ಟ್ರಗಳಿಗೆ ಕನ್ನಡದ ಕಂಪನ್ನು ಹರಡಿದ ಶ್ರೇಷ್ಠ ಸಾಹಿತಿಗಳಾದ ಡಾ. ಏ. ಕೆ. ರಾಮಾನುಜನ್ ಅವರು 16.03.1929 ರಂದು ಸಂಪ್ರದಾಯಸ್ಥ ತಮಿಳು ಅಯ್ಯಂಗಾರ ಬ್ರಾಹ್ಮಣ ಕುಟುಂಬದಲ್ಲಿ ಮೈಸೂರಿನಲ್ಲಿ ಜನಿಸಿದರು. ಅತ್ತಿಪೇಟ್ ಕೃಷ್ಣಸ್ವಾಮಿ ರಾಮಾನುಜನ್ ಇವರ ಪೂರ್ಣ ಹೆಸರು. ಡಾ. ಏ. ಕೆ. ರಾಮಾನುಜನ್ ಅವರ ತಂದೆ ಶ್ರೀ ಅತ್ತಿಪೇಟ್ ಅಸುರಿ ಕೃಷ್ಣಸ್ವಾಮಿಯವರು ಹೆಸರಾಂತ ಖಗೋಳ ಶಾಸ್ತ್ರಜ್ಞರು ಮತ್ತು ಗಣೀತ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದವರು ಮತ್ತು ತಾಯಿ ಅತ್ಯಂತ ಸಾಂಪ್ರದಾಯಸ್ಥ ಗೃಹಿಣಿ ಶ್ರೀಮತಿ ಕೋಮಲತಮ್ಮಾಳ್. 14.07.1909 ರಲ್ಲಿ ಜಾನಕಿಯಮ್ಮಾಳ ಅವರ ಜೊತೆ ಕುಂಭಕೋಣಂ ಪಟ್ಟಣದಲ್ಲಿ ವಿವಾಹವಾಯಿತು. ಅವರ ಮತ್ತೋರ್ವ ಪತ್ನಿ ಶಿಕಾಗೋನಲ್ಲಿರುವ ಮೊಲಿ ಡ್ಯಾನಿಯಲ್ಸ್, ಪುತ್ರ ಕೃಷ್ಣ ಮತ್ತು ಪುತ್ರಿ ಕೃತ್ತಿಕಾ.

ಡಾ. ಏ. ಕೆ. ರಾಮಾನುಜನ್ ಅವರು ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಶಿಕ್ಷಣವನ್ನು ಮೈಸೂರಿನಲ್ಲಯೇ ಪೂರೈಸಿದರು. ಮೈಸೂರು ವಿಶ್ವ ವಿದ್ಯಾಲಯದಿಂದ ಇಂಗ್ಲೀಷಿನಲ್ಲಿ ಬಿ.ಏ ಪದವಿ ಶಿಕ್ಷಣವನ್ನು ಪೂರೈಸಿದರು. ಮೈಸೂರು ವಿಶ್ವ ವಿದ್ಯಾಲಯದಿಂದ 1950 ರಲ್ಲಿ ಇಂಗ್ಲೀಷಿನಲ್ಲಿಯೇ ಎಮ್.ಏ ಪದವಿ ಪಾಸಾದ ಡಾ. ಏ. ಕೆ. ರಾಮಾನುಜನ್ ಅವರು ಬೆಳಗಾವಿ, ಮಧುರೈ, ಬರೋಡಾ ಮುಂತಾದ ಪಟ್ಟಣಗಳಲ್ಲಿ ಉಪನ್ಯಾಸಕರಾಗಿ ಒಂತ್ತು ವರ್ಷಗಳ ಕಾಲ ವೃತಿಯನ್ನು ಕೈಗೊಂಡರು.

1958 ರಲ್ಲಿ ಪುಣೆಯ ಡೆಕ್ಕನ್ ವಿಶ್ವ ವಿದ್ಯಾಲಯದಿಂದ “ಥಿಯಟ್ರಿಕಲ್ ಲಿಂಗ್ವಿಸ್ಟಿಕ್ಸ್” ವಿಷಯದಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದರು. ಅತ್ಯಂತ ಪ್ರತಿಭಾಶಾಲಿಯಾಗಿದ್ದ ಡಾ. ಏ. ಕೆ. ರಾಮಾನುಜನ್ ಅವರು ಸ್ಮಿತ್ಮಂಟ್ ಸ್ಕಾಲರಶಿಪ್ ಮತ್ತು ಫುಲ್ ಬ್ರೈಟ್ ಸ್ಕಾಲರಶಿಪ್ ಗಳಿಸಿ 1959 ರಲ್ಲಿ ಅಮೇರಿಕಾಕ್ಕೆ ಪ್ರಯಾಣ ಬೆಳೆಸಿ 1963 ರಲ್ಲಿ ಅಮೇರಿಕಾದ ಇಂಡಿಯಾನಾ ವಿಶ್ವ ವಿದ್ಯಾಲಯದಿಂದ ಭಾಷಾ ವಿಜ್ಞಾನದಲ್ಲಿ ಪಿ.ಎಚ್.ಡಿ ಗೌರವವನ್ನು ಪಡೆದರು.

ಭಾಷಾ ವಿಜ್ಞಾನ ಮತ್ತು ದ್ರಾವಿಡ ಅಧ್ಯಯನದ ಉಪನ್ಯಾಸಕರಾಗಿ 1962 ರಲ್ಲಿ ಶಿಕ್ಯಾಗೋ ವಿಶ್ವ ವಿದ್ಯಾಲಯದಲ್ಲಿ ವೃತ್ತಿಯನ್ನಾರಂಭಿಸಿದ ಡಾ. ಏ. ಕೆ. ರಾಮಾನುಜನ್ ಅವರು ಬಹಳ ಬೇಗ ಪ್ರತಿಭಾವಂತ ಅಧ್ಯಾಪಕರೆಂದು ಹೆಸರು ಮಾಡುತ್ತಾರೆ. ಇದರ ಜೊತೆಗೆ ಅಮೇರಿಕಾದಲ್ಲಿ ವಿಸ್ಕಿನ್ಸನ್, ಬರ್ಕಲೇ, ಮಿಚಿಗನ್ ಮುಂತಾದ ವಿಶ್ವ ವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡುವ ಗೌರವವನ್ನೂ ಪಡೆಯುತ್ತಾರೆ. ಡಾ. ಏ. ಕೆ. ರಾಮಾನುಜನ್ ಅವರ ದೂರದೃಷ್ಟಿ ಮತ್ತು ಪರಿಶ್ರಮದಿಂದ ಶೀಕ್ಯಾಗೋ ವಿಶ್ವ ವಿದ್ಯಾಲಯದಲ್ಲಿ “ದಕ್ಷಿಣ ಏಷ್ಯಾ ಭಾಷೆಗಳ ಅಧ್ಯಯನ ಪೀಠ” ಪ್ರಾರಂಭವಾಗುತ್ತದೆ. ಶಿಕ್ಯಾಗೋ ವಿಶ್ವ ವಿದ್ಯಾಲಯದಲ್ಲಿ ಡಾ. ಏ. ಕೆ. ರಾಮಾನುಜನ್ ಅವರು 1993 ರಲ್ಲಿ ನಿಧನವಾಗುವವರೆಗೂ ತಮ್ಮ ಇಡೀ ವೃತಿ ಜೀವನವನ್ನು ಅಲ್ಲಿಯೇ ಪೂರೈಸಿದರು.

ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯದಲ್ಲಿ ಅಮೋಘವಾದ ಕೃಷಿ ಮಾಡಿದ ಡಾ. ಏ. ಕೆ. ರಾಮಾನುಜನ್ ಅವರು ವಚನ ಸಾಹಿತ್ಯವನನ್ನೂ ಸಹ ಬೆಳೆಸುವಲ್ಲಿ ಉತ್ಸಾಹ ತೋರಿದ್ದಾರೆ. ಹೊಕ್ಕಳಲ್ಲಿ ಹೂವಿಲ್ಲ ಮತ್ತು ಕುಂಟೋ ಬಿಲ್ಲೆ ಕವನ ಸಂಕಲನಗಳು, ಮತ್ತೊಬ್ಬನ ಆತ್ಮ ಚರಿತ್ರೆ ಎನ್ನುವ ಕಾದಂಬರಿ,

ಇವರು ಇಂಗ್ಲೀಷಿನಲ್ಲಿ ಬರೆದ ಕೃತಿಗಳು ಸಾಹಿತ್ಯ ಲೋಕದಲ್ಲಿ ಉತ್ತಮ ರಚನೆಗಳು ಎಂದು ಹೆಸರಾಗಿವೆ. ಪ್ರೋ. ಯು. ಆರ್. ಅನಂತಮೂರ್ತಿಯವರ “ಸಂಸ್ಕಾರ” ಕಾದಂಬರಿಯನ್ನು ಇಂಗ್ಲೀಷಿಗೆ ಭಾಷಾಂತರ, ತಮಿಳು ಭಾಷೆಯ ಸಾಹಿತ್ಯದಿಂದ ಇಂಗ್ಲೀಷ್ ಭಾಷಾಂತರವಾದ “ದ ಇಂಟೀರಿಯರ್ ಲ್ಯಾಂಡ್ ಸ್ಕೇಪ್” ಎನ್ನುವ ಪುಸ್ತಕ, ಇಸ್ ದೇರ್ ಇಂಡಿಯನ್ ವೇ ಆಫ್ ಥಿಂಕಿಂಗ್, ವೇರ್ ಮಿರರ್ಸ್ ಆಫ್ ವಿಂಡೋಸ್, ಫೋಕ್ ಟೇಲ್ಸ್ ಫ್ರಾಮ್ ಇಂಡಿಯಾ, ಸೋಶಿಯೋ ಲಿಂಗ್ವಿಸ್ಟಿಕ್ ವೇರಿಯೇಶನ್ ಆಂಡ್ ಲ್ಯಾಂಗ್ವೇಜ್ ಚೇಂಜ್, ವೆನ್ ಗಾಡ್ ಈಸ ಕಸ್ಟಮರ್ ಮತ್ತು ಎ ಫ್ಲಾವರಿಂಗ್ ಟ್ರೀ ಮೂಂತಾದ ಬಹು ಪ್ರಮುಖ ಗ್ರಂಥಗಳನ್ನು ಡಾ. ಏ. ಕೆ. ರಾಮಾನುಜನ್ ಅವರು ಬರೆದು ಪ್ರಕಟಿಸಿದ್ದಾರೆ.

ವಚನ ಸಾಹಿತ್ಯವನ್ನು ಇಂಗ್ಲೀಷಿಗೆ ಭಾಷಾಂತರಿಸಿದ “ಪೆಂಗ್ವಿನ್ ಕ್ಲಾಸಿಕ್ಸ್” ಪ್ರಕಾಶನದಿಂದ 1973 ರಲ್ಲಿ ಬೆಳಕಿಗೆ ಬಂದ “ಸ್ಪೀಕಿಂಗ್ ಆಫ್ ಶಿವಾ” ಬಸವಣ್ಣನವರ ವಚನಗಳನ್ನು ಪಾಶ್ಚಾತ್ಯರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಯಿತು.

ಭಾರತ ಸರ್ಕಾರದಿಂದ ನೀಡುವ ಅತ್ಯುತ್ತಮ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು 1976 ರಲ್ಲಿ ಡಾ. ಏ. ಕೆ. ರಾಮಾನುಜನ್ ಅವರಿಗೆ ನೀಡಿ ಗೌರವಿಸಲಾಗಿದೆ. ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಪ್ರಸಿದ್ಧ “ಮ್ಯಾಕ್‌ ಆರ್ಥರ್‌ ಫೆಲೋಷಿಪ್‌ ಗೌರವವನ್ನು 1983 ರಲ್ಲಿ ನೀಡಲಾಗಿದೆ.

ಮೂರು ಕವನ ಸಂಕಲನಗಳು, ಒಂದು ಕಾದಂಬರಿ, ಎರಡು ಸಣ್ಣ ಕತೆಗಳು, ಎರಡು ರೇಡಿಯೋ ನಾಟಕಗಳು, ಗಾದೆಗಳನ್ನು ಕುರಿತ ಕಿರು ಹೊತ್ತಿಗೆಗಳು, ಹಲವಾರು ಪತ್ರಿಕೆಗಳಲ್ಲಿ ಬಿಡಿ ಲೇಖನಗಳೊಂದಿಗೆ ಕನ್ನಡ, ಇಂಗ್ಲೀಷ್‌ ಮತ್ತು ತಮಿಳು ಭಾಷೆಯಲ್ಲಿ ಅಪ್ರತಿಮ ಮತ್ತು ಅತ್ಯುತ್ತಮ ಸಾಹಿತ್ಯ ಸಾಧನೆ ಮಾಡಿದ ಡಾ. ಏ. ಕೆ. ರಾಮಾನುಜನ್ ಅವರು 13.07.1993 ರಂದು ಶಿಕ್ಯಾಗೋನಲ್ಲಿ ನಿಧನರಾದರು.

 1. ವೇಲಚೇರು ನಾರಾಯಣ ರಾವ್ (ಶಿವಾಸ್ ವಾರಿಯರ್ಸ್) :
  ಅಮೇರಿಕದ ಈಮೋರಿ ವಿಶ್ವ ವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ ಪ್ರೋ. ವೇಲಚೇರು ನಾರಾಯಣ ರಾವ್ ಅವರು ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಏಲೂರು ಪಟ್ಟಣದಲ್ಲಿ 01.02.1933 ರಲ್ಲಿ ಜನಿಸಿದವರು. ಪ್ರಾಥಮಿಕ, ಮಾಧ್ಯಮಿಕ ಮತ್ತು ಕಾಲೇಜು ಶಿಕ್ಷಣವನ್ನು ಏಲೂರಿನಲ್ಲಯೆ ಪೂರೈಸಿದ ಪ್ರೋ. ವೇಲಚೇರು ನಾರಾಯಣ ರಾವ್ ಅವರು ಏಲೂರಿನ ಸಿ. ಆರ್.‌ ರೆಡ್ಡಿ ಕಾಳೆಜಿನಿಂದ ಬಿ.ಎ ಪದವಿ ಗಳಿಸಿದರು. ಆಂಧ್ರ ವಿಶ್ವಕಲಾ ಪರಿಷತ್‌ ನಲ್ಲಿ ಎಮ್.ಏ ಮಾಡಿ 1970 ರಲ್ಲಿ ಉಸ್ಮಾನಿಯಾ ವಿಶ್ವ ವಿದ್ಯಾಲಯದಿಂದ ಲಿಂಗ್ವಿಸ್ಟಿಕ್ಸ್‌ ನಲ್ಲಿ ಡಿಪ್ಲೋಮಾ ಪೂರೈಸಿದರು. 1971 ರಲ್ಲಿ ಅಮೇರಿಕಾಕ್ಕೆ ತೆರಳಿದ ಪ್ರೋ. ವೇಲಚೇರು ನಾರಾಯಣ ರಾವ್ ಅವರು ವೊಸ್ಕೋನ್ಸಿನ್‌-ಮ್ಯಾಡಿಸನ್‌ ವಿಶ್ವ ವಿದ್ಯಾಲಯದ ದಕ್ಷಿಣ ಏಷಿಯಾ ಅಧ್ಯಯನ ಕೆಂದ್ರದಲ್ಲಿ ಉಪನ್ಯಾಕರಾಗಿ ವೃತ್ತಿಯನ್ನು ಪ್ರಾರಂಭ ಮಾಡುತ್ತಾರೆ. 1974 ರಲ್ಲಿ ಪಿ.ಎಚ್.ಡಿ ಪಡೆದ ಪ್ರೋ. ವೇಲಚೇರು ನಾರಾಯಣ ರಾವ್ ಅವರು ವೊಸ್ಕೋನ್ಸಿನ್‌-ಮ್ಯಾಡಿಸನ್‌ ವಿಶ್ವ ವಿದ್ಯಾಲಯದಲ್ಲಿ ಪ್ರೋಫೇಸರ್‌ ಆಗಿ ಬಡ್ತಿ ಪಡೆಯುತ್ತಾರೆ. ಶಿಕ್ಯಾಗೋ ಮತ್ತು ಎಮೋರಿ ವಿಶ್ವ ವಿದ್ಯಾಲಯಗಳಲ್ಲಿ ಸಂದರ್ಶಕ ಪ್ರೋಫೇಸರ್‌ ಆಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.

ತೆಲುಗು ಮತ್ತು ಇಂಗ್ಲೀಷ್‌ ಭಾಷೆಯಲ್ಲಿ ಪ್ರಭುತ್ವ ಹೊಂದಿರುವ ಪ್ರೋ. ವೇಲಚೇರು ನಾರಾಯಣ ರಾವ್ ಅವರು ತೆಲುಗಿನಲ್ಲಿ ಸಾಹಿತ್ಯ ರಚನೆ ಮತ್ತು ತೆಲುಗಿನಿಂದ ಇಂಗ್ಲೀಷ ಭಾಷೆಗೆ ಭಾಷಾಂತರ ಮಾಡುವುದರ ಮೂಲಕ ಉನ್ನತ ಗೌರವವನ್ನು ಪಡೆದಿದ್ದಾರೆ. ಪಾಲ್ಕುರಿಕೆ ಸೋಮನಾಥನ ಬಸವ ಪುರಾಣವನ್ನು ತೆಲುಗಿನಿಂದ ಇಂಗ್ಲೀಷಿಗೆ ಅನುವಾದ ಮಾಡುವುದರ ಮೂಲಕ ವಚನ ಸಾಹಿತ್ಯ ಮತ್ತು ಬಸವ ತತ್ವವನ್ನು ಪಾಶ್ಚ್ಯಾತ್ಯ ರಾಷ್ಟ್ರಗಳಿಗೆ ತಲುಪಿಸಿದ್ದಾರೆ. ಜೀನೆ ರೋಘೇರ್‌ ಅವರ ಸಹಯೋಗದಲ್ಲಿ “ಶಿವಾಸ್‌ ವಾರಿಯರ್ಸ್‌” ಎಂಬ ಕೃತಿಯನ್ನು ವಚನ ಸಾಹಿತ್ಯ ಮತ್ತು ಬಸವ ತತ್ವ ಲೋಕಕ್ಕೆ ಅರ್ಪಿಸಿದ್ದಾರೆ.

ಸಂಗ್ರಹ ಮತ್ತು ಲೇಖನ :

ವಿಜಯಕುಮಾರ ಕಮ್ಮಾರ


“ಸವಿಚರಣ” ಸುಮತಿ ಇಂಗ್ಲೀಷ್ ಶಾಲೆಯ ಹತ್ತಿರ
ಸುಭಾಷ್ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋಬೈಲ್ ನಂ : 9741 357 132
ಈ-ಮೇಲ್ : vijikammar@gmail.com

Leave a Reply

Your email address will not be published. Required fields are marked *

error: Content is protected !!