ಜನಪರ ಕಾಳಜಿಯ ಬರಹಗಳು

ಜನಮುಖಿ_ಲೇಖನಗಳು..

ಸುಮಾರು ವರ್ಷಗಳಿಂದ ಶರಣ ಸಂಗಾತಿ ವಿಶ್ವರಾಧ್ಯ ಸಂತ್ಯಂಪೇಟೆಯವರ ಪುಸ್ತಕಗಳನ್ನು ಓದುವ ತುಡಿತದಿಂದಲೇ ತರಿಸಿಕೊಂಡೆ, ಆದರೆ ಓದಲಾಗಿರಲಿಲ್ಲ. ಇತ್ತೀಚಿಗೆ ‘ಕಲ್ಯಾಣದ ಪ್ರಣತೆಯಲ್ಲಿ’ ಹಾಗೂ ಮಠದೊಳಗಣ ಬಾವುಗಗಳು’ ಈ ಎರಡು ಕೃತಿಗಳನ್ನು ಓದಿ ಮುಗಿಸಿದೆ. ವಿಶ್ವರಾಧ್ಯರು ಬಸವಪ್ರಿಯರು ವಚನಗಳನ್ನೇ ಉಸಿರಾಗಿಸಿಕೊಂಡವರು, ಅಕ್ಷರಶಃ ಅಕ್ಕ ಅಣ್ಣ ಅಲ್ಲಮರ ಬಯಲನ್ನೇ ಅರಸಿ ಹೊರಟಿರುವ ಸರಳರನ್ನೊ ಸತ್ಯ ಮೊದಲೇ ತಿಳಿದಿತ್ತು. ಆದರೆ ಅವರ ಸರಳತೆಯೊಳಗಿಣ ಸತ್ವಗಳು ಓದಿದ ಮೇಲೆ ಮತ್ತಷ್ಟು ಅರ್ಥವಾದವು ಅರ್ಥಾತ್ ನನ್ನ ಆಲೋಚನಾ ಕ್ರಮವನ್ನೇ ಬದಲಿಸಿದವು.

‘ಮಠದೊಳಗಣ ಬಾವುಗಗಳು’ ಓದಿದ ಮೇಲೆ, ತಮ್ಮ ಜೀವದ ಹಂಗುದೊರೆದು ಕಾವಿ ಖಾಕಿ ಖಾದಿಯವರು, ಅಮಾಯಕರನ್ನು ಯಾಮಾರಿಸಿ ಐಷಾರಾಮಿ ಬದುಕು ಕಟ್ಟಿಕೊಂಡಿರುವ ಮುಖವಾಡಗಳನ್ನು ಕಳಚಿದ ರೋಚಕತೆ ನಿಜಕ್ಕೂ ಮೈ ನಡುಗಿಸಿದವು. ಇಲ್ಲಿರುವ ಘಟನೆಗಳನ್ನೇ ನಯವಾಗಿ, ಚೂರು ವಗ್ಗರಣೆ ಹಾಕಿ, ಹದವಾಗಿ ಮೆದುವಾಗಿ, ವಾಸ್ತವಕ್ಕೆ ಮುಖಾಮುಖಿಯಾಗದೇ ನಾಜೂಕಾಗಿ ನುಣಿಚಿಕೊಂಡು ಕಥೆನೊ ಕವಿತೆನೊ ಕಾದಂಬರಿನೊ ಮಾಡಿದ್ದರೆ, ನಮ್ಮ ಸಾರಸ್ವತ ಲೋಕ ವಿಶ್ವರಾಧ್ಯರನ್ನು ಅದ್ಭುತ ಕವಿ ಸಾಹಿತಿ ಎಂದು ಹೊಗಳುತಿತ್ತೇನೊ.. ಆದರೆ ಸತ್ಯಂಪೇಟೆಯವರ ಅಡ್ಡಹೆಸರಲ್ಲಿರುವ ‘ಸತ್ಯಂ’ ಯಾವುದೇ ಹೊಗಳಿಕೆ ಲಾಲಸೆಗೆ ಒಳಗಾಗದೆ ಯಥಾವತ್ತಾಗಿ ಸಶಕ್ತವಾಗಿ ಅಕ್ಷರರೂಪ ಪಡೆದಿವೆ, ಸಮಾಜಮುಖಿಯಾಗಿ ಧ್ವನಿಸಿವೆ.

“ಈ ಮುಲ್ಲಾ, ಪಾದ್ರಿ, ಪೂಜಾರಿಗಳು ಪ್ರಗತಿಯ ವಿರೊಧಿಗಳು. ಇವರು ತಮ್ಮನ್ನು ತಾವು ಎಂದೂ ತಿದ್ದಿಕೊಳ್ಳುವುದಿಲ್ಲ” ಸ್ವಾಮಿ ವಿವೆಕಾನಂದರ ಈ ಮಾತಿಗೆ ವಿಶ್ವರಾಧ್ಯರ ಬರಹಗಳು ಸಾಕ್ಷಿಯಾಗುತ್ತವೆ. ವೇಷಕ್ಕೆ ಸುಳ್ಳಿಗೆ ಸಮುದಾಯ ಹೇಗೆಲ್ಲಾ ಬಲಿಯಾಗುತ್ತಿದೆ ಅನ್ನೋ ಸ್ಪಷ್ಟ ಚಿತ್ರಣವನ್ನೇ ತೆರೆದಿಟ್ಟಿದ್ದಾರೆ. ಕಟ್ಟಕಡೆಯವರ ಕಾಳಜಿಯಿಟ್ಟುಕೊಂಡು ಬರೆಯುವ ಇವರ ಬರಹ ಓದುವಾಗ ಕುವೆಂಪುರವರ ಈ ಮಾತು ನೆನಪಾಯಿತು “ಕತ್ತಿ ಪರದೇಸಿಯಾದರೆ ನೋವೆ? ನಮ್ಮವರೇ ಹದಹಾಕಿ ತಿವಿದರೆ ಹೂವೆ?” ನಿಜ, ನಮ್ಮವರೇ ನಮಗೀಗ ಹದಮಾಡಿ ಅರವಳಿಕೆ ನೀಡಿ ಅತ್ಯಂತ ಅಮಾನುಷವಾಗಿ ಇರಿಯುತ್ತಿದ್ದಾರೆ, ನಮ್ಮವರ್ಯಾರಿಗೂ ನೋವಿನ ಬಿಸಿ ತಾಗುತ್ತಿಲ್ಲ, ಸತ್ಯ ಅರ್ಥವಾಗುತ್ತಿಲ್ಲ.

“ವಿಪ್ರರು ನುಡಿದಂತೆ ನಡೆಯರು, ತಮಗೊಂದು ಬಟ್ಟೆ ಶಾಸ್ತ್ರಕ್ಕೊಂದು ಬಟ್ಟೆ!” ಬಸವಣ್ಣನವರ ಈ ಮಾತನ್ನು ನಾವು ಮತ್ತೆ ಮತ್ತೆ ಅರ್ಥೈಸಿಕೊಳ್ಳುವ ತುರ್ತಿದೆ. ಇಲ್ಲಿ ವಿಪ್ರರೆಂದರೆ ಬರೀ ಬ್ರಾಹ್ಮಣರಲ್ಲ, ಎಲ್ಲ ಜಾತಿ ಧರ್ಮ ಪಂಥ ಪಕ್ಷಗಳಲ್ಲಿ ನುಡಿದಂತೆ ನಡೆಯದ, ತಮಗೊಂದು ಬೇರೆಯವರಿಗೊಂದು ಬಗೆಯುವ ಭಿನ್ನಮತಿಯರು, ನಯವಂಚಕರು ಎಲ್ಲಡೆ ತುಂಬಿ ತುಳುಕುತ್ತಿದ್ದಾರೆ. ಈ ಎಲ್ಲ ಒಳ ಹುನ್ನಾರಗಳನ್ನು ಅರ್ಥೈಸಿಕೊಂಡೇ ಬಸವಾದಿಯಾಗಿರುವ ವಿಶ್ವರಾಧ್ಯ ಸತ್ಯಂಪೇಟೆಯವರು ಮಾತು ಮತ್ತು ಕೃತಿಯ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ಇವರ ಜನಪರ ಕಾಳಜಿಯುಳ್ಳ ಬರಹ ಮತ್ತು ಬದುಕಿಗೆ ಶರಣು ಶರಣಾರ್ಥಿಗಳು.

೦ ಕೆ.ಬಿ.ವೀರಲಿಂಗನಗೌಡ್ರ

One thought on “ಜನಪರ ಕಾಳಜಿಯ ಬರಹಗಳು

  1. ಮಠದೊಳಗಣಭಾವುಗಗಳಕೃತಿಬಗ್ಗೆ ವಾಸ್ತವರೀತಿಯಲ್ಲಿಪರಿಚಯಿಸಿದ್ದಿರಿ.ಭಾವುಗಗಳಬಗ್ಗೆಬರೆದರೆ ಬೆಕ್ಕುಗಳು ಮತ್ತು ಇಲಿಗಳು ಹಾರಾಡುತ್ತವೆ ಮತ್ತು ಚೀರಾಡುತ್ತವೆ .ಅವುಗಳಿಗೆ ಬೆಳಕು ಬೇಕಾಗಿಲ್ಲಕತ್ಲೆಯನ್ನು ಆರಾಧಿಸುವ ತೊಗಲುಬಾವಲಿಗಳಾಗಿವೆ.ಶರಣುಗಳು.

Leave a Reply

Your email address will not be published. Required fields are marked *

error: Content is protected !!