ಅಂಜದಿರಿ, ಅಳುಕದಿರಿ. ಧೈರ್ಯದಿಂದ ಮಾತಾಡಿ.

ಧೈರ್ಯದಿಂದ ಮಾತನಾಡಿ..,…..

ಇದು ಪಾಕಿಸ್ತಾನ ಅಲ್ಲ ಭಾರತ,
ಇದು ಜಿನ್ನಾ ಕಟ್ಟಿದ ದೇಶವಲ್ಲ,
ಮಹಾತ್ಮ ಗಾಂಧಿ ಹುಟ್ಟಿದ ದೇಶ,

ಇದು ಹಿಟ್ಲರ್ ಆಳಿದ ಸರ್ವಾಧಿಕಾರಿ ದೇಶವಲ್ಲ,
ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ದೇಶ,

ಇದು ಹಿಂಸೆಯ ಸಿರಿಯಾ ಅಲ್ಲ,
ಇದು ಮಹಾವೀರರ ಅಹಿಂಸೆಯ ಇಂಡಿಯಾ,

ಇದು ಭಯೋತ್ಪಾದಕ ಆಫ್ಘಾನಿಸ್ತಾನವಲ್ಲ,
ಇದು ಶಾಂತಿಯುತ ಹಿಂದೂಸ್ತಾನ,

ಇದು ಬಿನ್ ಲಾಡೆನ್ ಕಾರ್ಯಸ್ಥಾನವಲ್ಲ,
ಇದು ಬುದ್ದರ ವಾಸಸ್ಥಾನ,

ಇದು ಉಸಿರು ಕಟ್ಟಿಸುವ ಉತ್ತರ ಕೊರಿಯಾ ಅಲ್ಲ,
ಇದು ಉಸಿರು ನೀಡುವ
ಜನ್ಮ ಭೂಮಿ,

ಇದು ನಿಮ್ಮ ಧ್ವನಿಯನ್ನು ಧಮನಿಸುವ ಚೀನಾ ಅಲ್ಲ,
ಇದು ನಿಮ್ಮ ಧ್ವನಿಗೆ ಧ್ವನಿ ಸೇರಿಸುವ ಇಂಡಿಯಾ……………

ಹೆದರಬೇಡಿ, ಭಯಪಡಬೇಡಿ,
ಸಂಕೋಚ ಪಡಬೇಡಿ…..

ಮಾತನಾಡಿ, ನಿಮಗೆ ಕಂಡ ಸತ್ಯವನ್ನು ದೃಢವಾಗಿ ಹೇಳಿ..

ಜನಪ್ರಿಯತೆಯೇ ಸತ್ಯವಲ್ಲ….

ಚುನಾವಣೆಯಲ್ಲಿ ಕೊಲೆಗಡುಕರು ಗೆದ್ದಿದ್ದಾರೆ, ಅತ್ಯಾಚಾರಿಗಳು ಗೆದ್ದಿದ್ದಾರೆ,
ಭ್ರಷ್ಟರು, ವಂಚಕರು, ದರೋಡೆಕೋರರು ಗೆದ್ದಿದ್ದಾರೆ. ಆದ್ದರಿಂದ ಸತ್ಯಕ್ಕೆ ಚುನಾವಣೆಯೇ ಮಾನದಂಡವಲ್ಲ. ಪ್ರಜಾಪ್ರಭುತ್ವ ಒಂದು ಉತ್ತಮ ಆಡಳಿತ ವ್ಯವಸ್ಥೆ. ಆದರೆ ಅದೇ ಸತ್ಯವಲ್ಲ.

ಸುಳ್ಳುಗಾರರು, ಮೋಸಗಾರರು, ಆತ್ಮವಂಚಕರು,
ದೇಶ ದ್ರೋಹಿಗಳು, ಮುಖವಾಡಗಳನ್ನು ಧರಿಸಿರುವವರು ಲಜ್ಜೆಗೆಟ್ಟು ಮಾತನಾಡುವಾಗ,ತಿಳಿದಿರುವ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಸಂಕೋಚವೇಕೆ. ಕೆಟ್ಟವರ ಮಾತಿಗಿಂತ ಒಳ್ಳೆಯವರ ಮೌನ ಇನ್ನೂ ಅಪಾಯಕಾರಿ……..

ಮೀಸಲಾತಿಯೇ ಇರಲಿ, ರಾಮಮಂದಿರವೇ ಇರಲಿ,
ಮಹಿಳಾ ಸ್ವಾತಂತ್ರ್ಯವೇ ಇರಲಿ, ಜಾತ್ಯಾತೀತತೆಯೇ ಇರಲಿ,
ದೇಶ ಭಕ್ತಿಯೇ ಇರಲಿ,
ಧರ್ಮ ದೇವರುಗಳ ಚರ್ಚೆಗಳೇ ಇರಲಿ,
ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಿ.

ನೀವು ಹಿಂದುವಾಗಿರಿ, ಮುಸ್ಲಿಂ ಆಗಿರಲಿ, ಕ್ರಿಶ್ಚಿಯನ್ ಆಗಿರಲಿ,
ಸಿಖ್ ಬೌದ್ಧ ಜೈನ್ ಪಾರ್ಸಿ ಯಾರೇ ಆಗಿರಲಿ, ಯಾವ ಜಾತಿ ಭಾಷೆ ಪ್ರದೇಶದವರೇ ಆಗಿರಲಿ, ಯಾವ ವೃತ್ತಿಯವರೇ ಆಗಿರಲಿ ನಿಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಹಕ್ಕು ಎಲ್ಲರಂತಯೇ ಸಮನಾಗಿ ಇದೆ.

ಆ, ಇದಕ್ಕೆ ಪ್ರತಿಕ್ರಿಯೆಯಾಗಿ ನಿಮಗೆ ನಿಂದನೆ, ನೋವು, ಹಿಂಸೆ, ಬೆದರಿಕೆ, ಹಲ್ಲೆ, ವ್ಯಂಗ್ಯ ಎಲ್ಲವೂ ಅನುಭವ ಆಗಬಹುದು. ಅದಕ್ಕೆ ಮಾನಸಿಕ ಸಿದ್ದತೆಯ ಅವಶ್ಯಕತೆ ಇದೆ. ನಿಮ್ಮ ಉದ್ದೇಶ ಒಳ್ಳೆಯದಾಗಿದ್ದರೆ ಇದು ನಿಮಗೆ ಸಮಸ್ಯೆಯೇ ಅಲ್ಲ.

ಆದರೆ ಒಂದು ಮಾತ್ರ ನೆನಪಿರಲಿ…..

ನೀವು ನಾಗರಿಕ ಸಮಾಜದಲ್ಲಿ ವಾಸಿಸುತ್ತಿರುವಿರಿ. ಇಲ್ಲಿ ಕಾನೂನು ಮತ್ತು ನೈತಿಕತೆ ಅಸ್ತಿತ್ವದಲ್ಲಿದೆ. ಸಂಯಮ, ಸಭ್ಯತೆ, ಪ್ರೀತಿ, ವಿಶ್ವಾಸ ಮೀರದಂತೆ ಸದಾ ಎಚ್ಚರಿಕೆ ವಹಿಸಬೇಕು. ಇನ್ನೊಬ್ಬರ ವೈಯಕ್ತಿಕ ನಿಂದನೆ, ಸುಳ್ಳು ಆರೋಪ, ಉದ್ದೇಶ ಪೂರ್ವಕವಾದ ಮಾನ ಹಾನಿ ಮಾಡಬಾರದು. ಅದು ಅಪರಾಧ ಸಹ.

ಮಾತಿನ ಮೇಲೆ ಹಿಡಿತವಿರಲಿ,
ಭಾಷೆಯ ಮೇಲೆ ನಿಯಂತ್ರಣವಿರಲಿ,
ಹೃದಯ ಒಳಗೆ ಕರುಣೆ ಇರಲಿ,
ಮನಸ್ಸಿನಲ್ಲಿ ಕ್ಷಮಾಗುಣವಿರಲಿ,
ಈ ನೆಲದ ಬಗ್ಗೆ ಅಭಿಮಾನವಿರಲಿ….

ಏಕೆಂದರೆ ಇದು ಭಾರತ,
ಸರ್ವಧರ್ಮ ಸಮನ್ವಯದ ನಾಡು,
ಭಗವದ್ಗೀತೆ, ಖುರಾನ್, ಬೈಬಲ್ ಗಳು ಪ್ರತಿನಿತ್ಯ ಪಠಿಸುವ ದೇಶ. ಸಂವಿಧಾನವೆಂಬ ಧರ್ಮವನ್ನು ಆನುರಿಸುವ ನಾಡು….

ಅಂಜದಿರಿ, ಅಳುಕದಿರಿ,
ಸತ್ಮಮೇವ ಜಯತೇ….
ಇದು ಇಂಡಿಯಾ,
ಇದೇ ಇಂಡಿಯಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,


O ವಿವೇಕಾನಂದ. ಹೆಚ್.ಕೆ.

Leave a Reply

Your email address will not be published. Required fields are marked *

error: Content is protected !!