ಓದಿಯೇ ಅನುಭವಿಸಬೇಕು

ಓದಿಯೇ ಅನುಭವಿಸಬೇಕು!
Pen is mightier than the sword'. ಎನ್ನುವ ಮಾತಿನಲ್ಲಿ ಅತಿಶಯೋಕ್ತಿ ಏನಿಲ್ಲ. ಆದರೆ ನಾಗರಿಕ ಪ್ರಪಂಚ ಪೆನ್ನು ಜುಜಬಿ ಎಂದೇ ಭಾವಿಸಿ ಏನೆಲ್ಲ ಆಟ ಆಡುತ್ತಿದೆ. ಪೆನ್ನು ಎಂದರೆ ಬರಹ. ಒಬ್ಬ ಲೇಖಕನ ಬರಹ ಸಮಾಜದ ಮುಖಕ್ಕೆ ಹಿಡಿದ ಕನ್ನಡಿ. ಆದರೆ ಆ ಕನ್ನಡಿಯನ್ನೇ ಕೊಳಕಾಗಿಸಿ ಅದರಲ್ಲಿ ಯಾರ ಮುಖವೂ ಕಾಣದಂತೆ ಮಾಡುವ ಕುತಂತ್ರಿಗಳಾಗುತ್ತಿದ್ದಾರೆÉ ಜಾಣ ಜನರು. ಅಂಥವರೇ ಅವನ ಬರಹ ನೇರ, ಖಾರ, ನಿಷ್ಠುರ ಎಂದು ಒಂದೆಡೆ ಹೇಳಿದರೆ ಮತ್ತೊಂದೆಡೆ ಕಂಬಳಿಯಲ್ಲಿ ಮುಚ್ಚಿಕೊಂಡು ಹೊಡೆದಂತಿದೆ ಎನ್ನುವರು. ಯಾತರಲ್ಲಿ ಹೊಡೆದರೂ ಹೇಸದ, ನಾಚದ, ತಿದ್ದಿಕೊಳ್ಳದ ಎಮ್ಮೆ ಚರ್ಮದ ಜನರಿಗೆ ಏನು ಮಾಡುವುದು? ಅಂದರೆ ಇಂದು ಯಾವುದಕ್ಕೂ ಅಂಜದ ವಿಚಿತ್ರ ಗುಣ, ಸ್ವಭಾವಗಳನ್ನು ಬೆಳೆಸಿಕೊಂಡು ಭಂಡತನವೇ ಬಂಡವಾಳ ಎನ್ನುವ ಖದೀಮರು ಹೆಚ್ಚುತ್ತಿರುವುದು ಸಾಮಾಜಿಕ ಅನಾರೋಗ್ಯದ ಪ್ರತೀಕ ಎಂದರೆ ಯಾರೂ ಮೂಗು ಮುರಿಯಬೇಕಾಗಿಲ್ಲ. ಬಸವಣ್ಣನವರುನ್ಯಾಯನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ, ಲೋಕವಿರೋಧಿ ಶರಣನಾರಿಗೂ ಅಂಜುವವನಲ್ಲ’ ಎಂದು ಹೇಳಿದರು. ಬಸವಣ್ಣನವರು ಮಾತ್ರವಲ್ಲ ಆ ಕಾಲದ ಶರಣರೆಲ್ಲರೂ ಹಾಗೇ ನಡೆದುಕೊಂಡರು. ಅವರು ಮಾತು, ಬರಹದಲ್ಲಿ ಮಾತ್ರ ನ್ಯಾಯನಿಷ್ಠುರಿಗಳಾಗಿರಲಿಲ್ಲ. ಬದುಕಿನಲ್ಲೂ ಹಾಗೇ ಇದ್ದರು. ಕಾರಣ ಅವರದು ನಡೆ, ನುಡಿ ಒಂದಾದ ಸಿದ್ಧಾಂತ. ಆತ್ಮಸಾಕ್ಷಿಗನುಗುಣವಾದ ಬದುಕು. ಅವರು ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು. ಯಾರಿಗೇ ತೊಂದರೆ ಆದರೂ ಅದು ತಮಗೇ ಆದಂತೆ ಎಂದು ನೊಂದುಕೊಳ್ಳುವ ಸಹೃದಯಿಗಳಾಗಿದ್ದರು. ಯಾರೋ ತಪ್ಪು ಮಾಡಿದರೆ ಅದು ತಮ್ಮದೇ ಎಂದು ಭಾವಿಸಿ ಆ ತಪ್ಪುಗಳನ್ನು ತಿದ್ದುವ ಕಾಯಕ ಮಾಡುತ್ತಿದ್ದರು. ಎನ್ನತಪ್ಪು ಅನಂತಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ' ಎನ್ನುವುದು ಬಸವಣ್ಣನವರ ಪ್ರಸಿದ್ಧ ಸಾಲು. ಹಾಗಂತ ಅವರು ಅನಂತಕೋಟಿ ತಪ್ಪು ಮಾಡಿದ್ದರು ಎಂದಲ್ಲ. ತಪ್ಪು ಮಾಡಿದವರು ತಿದ್ದಿಕೊಂಡು ಹೇಗೆ ಅರ್ಥಪೂರ್ಣವಾಗಿ ಬದುಕÀಬಹುದೆಂಬ ಸೂಚನೆಯನ್ನು ನೀಡುತ್ತಿದ್ದರು. ಬರಹ ನಿಜಕ್ಕೂ ಶಕ್ತಿಶಾಲಿ. ಬರಹಗಳಲ್ಲಿ ಹಲವು ವಿಧ. ಕೆಲವರು ಕೋಮಲವಾಗಿ ಮೃದುಮಾತುಗಳಲ್ಲಿ ಹೇಳಿದರೆ ಮತ್ತೆ ಕೆಲವರು ಇದ್ದದ್ದನ್ನು ಇದ್ದಂತೆ ನಿಷ್ಠುರವಾಗಿ ಹೇಳುವರು. ಮತ್ತೆ ಕೆಲವರು ಸಿಹಿಲೇಪನದ ಮಾತ್ರೆಯಂತೆ ಹೇಳುವರು. ವ್ಯಂಗ್ಯವಾಗಿ, ವಿಡಂಬನಾತ್ಮಕವಾಗಿ ಕಾವ್ಯ, ಕತೆ, ಕಾದಂಬರಿ, ಚುಟುಕು, ಚಿಂತನ ಬರಹ ಹೀಗೆ ವಿಭಿನ್ನ ಮಾರ್ಗ ಅನುಸರಿಸಿ ಸಮಾಜವನ್ನು ಜಾಗೃತಗೊಳಿಸುವ ಕಾರ್ಯ ಮಾಡುವರು. ಬರಹದಲ್ಲಿ ನಾಟಕೀಯ ಅಂಶವೂ ಸೇರಿ ನಗಿಸುತ್ತಲೇ ಬೆಂಕಿ ಉಗುಳುವ ಕಾರ್ಯವನ್ನೂ ಮಾಡುವರು. ಮಾಸ್ಟರ್ ಹಿರಣ್ಣಯ್ಯನಂಥವರು ಸಮಾಜದ ಹುಳುಕಿಗೆ ಕಾರಣರಾದವರನ್ನು ತಮ್ಮೆದುರೇ ಕೂರಿಸಿಕೊಂಡು ಇವರಿಗೆ ಮಾನ ಮರ್ಯಾದೆ ಇಲ್ಲ ಎಂದು ಉಗುಳಿ ಉಪದೇಶ ಮಾಡುವರು. ಎಲ್ಲರ ಉದ್ದೇಶ ಸುಂದರ ಸಮಾಜವನ್ನು ಕಾಣಬೇಕು ಎನ್ನುವುದು. ಆದರೆ ಸುಂದರ ಸಮಾಜ ಎನ್ನುವುದು ಈ ತಾಂತ್ರಿಕ ಯುಗದಲ್ಲಿ ಹಗಲುಗನಸಾಗುತ್ತಿದೆಯೇನೋ ಎನ್ನುವ ಅನುಮಾನ ಅನೇಕ ಚಿಂತಕರನ್ನು ಕಾಡುತ್ತಲಿದೆ. ರಂಗಭೂಮಿಯಲ್ಲಿರುವವರಿಗೆ ಚನ್ನಾಗಿ ಗೊತ್ತು ಕಾಮಿಡಿ ಎಷ್ಟು ಕಷ್ಟ ಅಂತ. ನೋಡಲು ಸರಳವಾಗಿ, ಅತಿ ಸಲೀಸು ಅನ್ನುವಂತಿದ್ದರೂ ಮುಖದ ಮೇಲೆ ಮುಗುಳ್ನಗು ತರಿಸಬೇಕು, ಒಳಗನ್ನು ಕಲಕಬೇಕು ಎನ್ನುವುದು ಸುಲಭವಲ್ಲ. ಕವಿತೆ ಬರೆಯುತ್ತಿದ್ದ ಮಲ್ಲೇಶ್ ಇದ್ದಕ್ಕಿದ್ದಂತೆ ವಿಡಂಬನೆಯ ಕೈ ಕುಲುಕಿದ. ರಾಜಕೀಯ ವಿಡಂಬನೆಗೆ ಒಂದು ಘನತೆ ತಂದುಕೊಟ್ಟ’. ಈ ಅಭಿಪ್ರಾಯ ಜಿ ಎನ್ ಮೋಹನ್ ಅವರದು. ಬಿ ಎನ್ ಮಲ್ಲೇಶ್ ಅವರು ಪ್ರಜಾವಾಣಿಯ ವಿನೋದ ಅಂಕಣಗಳಿಗೆ ಬರೆದ ತೆಪರೇಸಿಯ ರಿಟನ್ರ್ಸ್' ಕೃತಿಗೆ ಬರೆದ ಬೆನ್ನುಡಿಯ ಮಾತುಗಳು. ಮಲ್ಲೇಶ್ ನೋಡಲು ಗಂಭೀರ ಮುಖಭಾವದ ವ್ಯಕ್ತಿಯಂತೆ ಕಾಣುವರು. ಅವರ ಬರಹ ಗಾಂಭೀರ್ಯತೆ ಉಳಿಸಿಕೊಂಡೇ ವಿಡಂಬನೆಗೆ ದಾರಿ ಮಾಡಿ ಮುಗುಳ್ನಗೆಗೆ ಕಾರಣವಾಗಿ ಚಿಂತನೆಗೆ ತೊಡಗಿಸುವುದು. ಅವರ ವಿಡಂಬನೆಯ ಪ್ರಮುಖ ಪಾತ್ರಗಳು ತೆಪರೇಸಿ, ಪತ್ನಿ ಪಮ್ಮಿ, ದುಬ್ಬೀರ, ಗುಡ್ಡೆ, ಕೊಟ್ರೇಶಿ ಮತ್ತಿತರರು. ಇವರ ಮೂಲಕ ಬ್ರಹ್ಮಾಂಡವನ್ನೇ ಬಯಲು ಮಾಡುವರು ಮಲ್ಲೇಶ್. ರಾಜಕೀಯ, ಸಾಮಾಜಿಕ, ವೈದ್ಯಕೀಯ, ಧಾರ್ಮಿಕ ಕ್ಷೇತ್ರಗಳಿಗೆ ಕನ್ನಡಿ ಹಿಡಿಯುವಂತಿವೆ ಮಲ್ಲೇಶ್ ಅವರ ಪುಟ್ಟ ಪುಟ್ಟ ಲೇಖನಗಳು. ನಾಟಕೀಯ ಸಂಭಾಷಣೆಯ ಮೂಲಕವೇ ನಗೆ ಉಕ್ಕಿಸುತ್ತ ಕಾವ್ಯದ ಸ್ಪರ್ಶ ನೀಡಿದ್ದಾರೆ ಲೇಖಕರು.ಕರಿಯನ್ನು ಕನ್ನಡಿಯಲ್ಲಿ ಅಡಗಿಸುವಂತೆ’ ಕಿರಿಯದರಲ್ಲಿ ಹಿರಿದಾದ ಅರ್ಥವನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಮಾಧ್ಯಮಗಳಲ್ಲಿ ಬರುವ ವಿವಿಧ ಸುದ್ದಿಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿ ವಿಡಂಬಿಸುವ ಗುಣ ಲೇಖಕರಿಗೆ ರಕ್ತಗತವಾಗಿ ಓದುಗರಲ್ಲಿ ವಿಚಾರ ತರಂಗಗಳನ್ನು ಎಬ್ಬಿಸುವರು. ಇದಕ್ಕೆ ಸಾಕ್ಷಿ ನುಡಿಯುತ್ತಿವೆ ಕೃತಿಯಲ್ಲಿರುವ ಎಲ್ಲ ಲೇಖನಗಳು. ವಾಸ್ತವ ಸತ್ಯವನ್ನು ವ್ಯಾವಹಾರಿಕ ಸತ್ಯವನ್ನಾಗಿಸುವ ಬಹುಮುಖ ಪ್ರತಿಭೆಯನ್ನು ಇಲ್ಲಿ ಗುರುತಿಸಬಹುದು. ಲೇಖಕರು ಬಳಸುವ ಪುಟ್ಟ ಪುಟ್ಟ ನಾನಾ ಅರ್ಥದ ಪದಪುಂಜಗಳು ವಿಚಾರಗಳಿಗೆ ಹೊಸ ಹೊಳಪನ್ನು ನೀಡುತ್ತವೆ. ವ್ಯಂಗ್ಯ, ವಿಡಂಬನೆ, ಚಿಂತನೆ, ತಮಾಷೆ ಎಲ್ಲವನ್ನೂ ಏಕಕಾಲಕ್ಕೆ ಸಮರಸಗೊಳಿಸುವ ಸಾಹಿತ್ಯದ ಸ್ಪರ್ಶ ಪ್ರತಿಯೊಂದು ಲೇಖನದÀಲ್ಲೂ ಎದ್ದು ತೋರುವುದು.
ಲೇಖಕರು ಸಂದರ್ಭಾನುಸಾರ ಮುಖವಾಡ ಕಳಚುವ ಪ್ರಯತ್ನ ಮಾಡಿದ್ದರೂ ಅದನ್ನರಿಯಲು ಸಹೃದಯಿ ಓದುಗರಿಗೆ ಲೋಕಜ್ಞಾನ ಮತ್ತು ವರ್ತಮಾನದ ಘಟನೆಗಳ ಅರಿವು ಮುಖ್ಯ. ಇಲ್ಲವಾದಲ್ಲಿ ಹಣ್ಣಿನೊಳಗಿನ ರುಚಿಯನ್ನು ಸವಿಯುವುದು ಕಷ್ಟಸಾಧ್ಯ. ವಾಸ್ತವ ಮತ್ತು ವ್ಯಾವಹಾರಿಕ ಸತ್ಯಗಳಲ್ಲಿರುವ ಅಂತರವನ್ನು ಅರಿಯದಿದ್ದರೆ ಕಬ್ಬಿನ ಮೇಲೆ ಜೇನಿಟ್ಟಂತೆ ವ್ಯರ್ಥವಾಗುವುದು. ಕಬ್ಬಿಗೆ ಜೇನಿನ ಸಿಹಿಯನ್ನು ಅನುಭವಿಸಲು, ಅದೇರೀತಿ ಜೇನಿಗೆ ಕಬ್ಬಿನ ಒಳಗಿನ ಸಿಹಿಯನ್ನು ಸವಿಯಲು ಆಗುವುದಿಲ್ಲ. ಇದಕ್ಕೆಲ್ಲ ಕಾರಣ ಜೇನು ಮತ್ತು ಕಬ್ಬಿನ ನಡುವೆ ಅಡ್ಡಗೋಡೆಯಾಗಿರುವ ಸಿಪ್ಪೆ ಮತ್ತು ಸಿಬಿರು. ಆ ಸಿಬಿರನ್ನು ನಯವಾಗಿಯೇ ಕಳಚುವ ಕಾರ್ಯ ಇಲ್ಲಿಯ ಲೇಖನಗಳಲ್ಲಿದೆ. ಆದರೆ ಲೇಖಕನ ಒಳನೋಟದಂತೆ ಓದುಗನಲ್ಲೂ ಬಹುಮುಖ ಅರ್ಥಗ್ರಹಿಕೆಯೂ ಮುಖ್ಯವಾಗುತ್ತದೆ. ನಾಗರಿಕ ಲೋಕದ ಭರಾಟೆಯ ಬದುಕಿನಲ್ಲಿ ದೀರ್ಘ ಲೇಖನ, ಕತೆ, ಕಾದಂಬರಿ, ಕಾವ್ಯಗಳನ್ನು ಓದುವ ವ್ಯವಧಾನ ಬಹುತೇಕ ಓದುಗರಲ್ಲಿ ಇಲ್ಲ. ಅವರಿಗೆ ಈಗ ಬೇಕಾಗಿರುವುದು ರೆಡಿಮೇಡ್ ಫುಡ್. ಈ ನೆಲೆಯಲ್ಲಿ ಮಲ್ಲೇಶ್ ಅವರ ಲೇಖನಗಳು ಒಂದೆರಡು ನಿಮಿಷಗಳಲ್ಲಿ ಓದಿ ಮುಗಿಸುವ ರೆಡಿಮೇಡ್ ಫುಡ್‍ನಂತಿವೆ. ತಕ್ಷಣ ಬಾಯಿಗೆ ಹಾಕಿಕೊಂಡು ಸವಿಯಬಹುದಾದರೂ ಅರಗಿಸಿಕೊಳ್ಳಲು ಕಾಲಾವಕಾಶ ಬೇಕು.
ವಿಡಂಬನಾತ್ಮಕ ಲೇಖನಗಳು ಓದುಗನ ಮುಖದಲ್ಲಿ ವಿಸ್ಮಯ, ವಿಷಾದ, ನಗು, ಚಿಂತನೆಯ ಗೆರೆಗಳನ್ನು ಮೂಡಿಸಬಲ್ಲವು. ಸರ್ಕಾರಿ ಕೆಮ್ಮು' ಲೇಖನದಲ್ಲಿಕೆಮ್ಮೋದ್ರಿಂದ ಲಾಭನೂ ಐತೆ ಕಣಲೆ. ರಜೆ ಕೇಳಿದ್ರೆ ಉರಿದು ಬೀಳ್ತಿದ್ದ ನಮ್ಮ ಪರ್ಮೇಶಿ ಬಾಸು ಮೊನ್ನೆ ಆಫೀಸಿನಲ್ಲಿ ಸುಮ್ನೆ ಕೆಮ್ಮಿದ್ದಕ್ಕೆ ಪರ್ಮೇಶಿಗೆ ರಜೆ ಕೊಟ್ಟು ಮನೆಗೆ ಕಳಿಸಿದ್ನಂತೆ ಗೊತ್ತಾ?’ ಎಂದ ಗುಡ್ಡೆ. ಕೊರೊನಾದಿಂದ ಆಫೀಸುಗಳ ಸ್ಥಿತಿಗತಿಗೆ ಕಚಗುಳಿ ಇಡುವ ಕಾರ್ಯ ಇಲ್ಲಿದೆ. ಗಡ್ಡ ಬಿಡುವುದನ್ನೇ ಲೇಖಕರು ವಿಡಂಬಿಸಿರುವ ರೀತಿ ತಮಾಷೆಯನ್ನು ಉಕ್ಕಿಸುವುದು. ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ಧರಾಮಯ್ಯ ಮುಂತಾದ ರಾಜಕೀಯ ನೇತಾರರ ಮುಖವಾಡಗಳನ್ನು ನಯವಾಗಿಯೇ ಕಳಚುವ ಕಾರ್ಯವನ್ನು ಇಲ್ಲಿಯ ಲೇಖನಗಳಲ್ಲಿ ಮನಗಾಣಬಹುದು. ಜ್ಯೋತಿಷ್ಯ ಕೇಳುವವರ ಹೂರಣವನ್ನು ಬಯಲುಗೊಳಿಸುವ ಕಾರ್ಯವನ್ನು ಎಷ್ಟು ನವಿರಾಗಿ ಮಾಡಿದ್ದಾರೆ ಎನ್ನುವುದನ್ನು ತೆನೆ ಶಾಸ್ತ್ರ'ದಲ್ಲಿ ನೋಡಬಹುದು. ಅಂಗೈ ಗೆರೆ ನೋಡಿ ಭವಿಷ್ಯ ಹೇಳುವುದನ್ನೇ ನೆಪ ಮಾಡಿಕೊಂಡುಈ ಹಸ್ತದಲ್ಲಿ ಗೆರೆಗಳೇ ಇಲ್ಲವಲ್ಲ ಸ್ವಾಮಿ?’ ಎನ್ನುವ ಪ್ರಶ್ನೆಗೆ ಗೆರೆಗಳೆಲ್ಲ ಹೂವುಗಳಾಗಿ ಹೋಗಿದಾವೆ ಸ್ವಾಮಿ' ಎನ್ನುವ ಉತ್ತರ ಮಾರ್ಮಿಕವಾಗಿದೆ. ಐವತ್ತು ಐನೂರಾದ ಕತೆ!’ ರಾಜಕಾರಣಿಗಳ ಹಗಲುಧರೋಡೆಗೆ ಹಿಡಿದ ಕನ್ನಡಿಯಂತಿದೆ. ಲೆಮೆನ್ ಬಾಂಬ್!' ಮಾಜಿ ಸಚಿವ ರೇವಣ್ಣನವರ ಲಿಂಬೆಹಣ್ಣಿನ ಪ್ರಸಂಗವನ್ನು ವಿಡಂಬಿಸುತ್ತಲೇ ಅರಿವನ್ನು ಮೂಡಿಸುವಂತಿದೆ. ಮದ್ಯಪಾನದ ಹಿನ್ನೆಲೆಯಲ್ಲಿನಇದ್ಯಾವ ನ್ಯಾಯ?’ ಲೇಖನ ಚಿಂತನಾರ್ಹವಾಗಿದೆ. ಸವದಿ ಮತ್ಸರ!',ಡಾಕ್ಟರ್ ತೆಪರೇಸಿ!’, ಪಪ್ಪಾ ನಾವು ಜಗಳ ಮಾಡ್ತಿಲ್ಲ. ರಾಜಕೀಯ ಆಟ ಆಡ್ತಿದೀವಿ...!' ಎಂದು ಮಗ ಹೇಳುವಅದೇ ರಾಗ ಅದೇ ಹಾಡು…’, ಆಪರೇಶನ್ ನಡಿತಾ ಇದೆ, ಇಬ್ರು ಅಥವಾ ಮೂವರು ಇರಬಹುದು. ಅಡ್ವಾನ್ಸ್ 25 ಕೊಟ್ಟಿದ್ದೀನಿ. ಆಮೇಲೆ ಉಳಿದದ್ದು ಸೆಟ್ಲ್ ಮಾಡಬೇಕು. ಕ್ಯಾಶ್ ರೆಡಿ ಇದೆ. ನಾನೇ ಕೊಡ್ತೇನಿ. ಆಪ್ರೇಶನ್ ಸಕ್ಸಸ್ ಆಗುತ್ತೆ ಹೆದರಬೇಡಿ!' ಎನ್ನುವ ನುಡಿಗಳಆಪರೇಶನ್ ತೆಪರೇಸಿ!’, ಸಚಿವರ ವಾಸ್ತು',ಎಲ್ಲ ಪಕ್ಷಗಳ ಶಾಸಕರ ಎದೆಗಳಲ್ಲಿ ಇದ್ದದ್ದು ಒಂದೇ..’ ಏನು?',ಅಧಿಕಾರದ ಖುರ್ಚಿಗಳು ಸಾರ್ ಕುಚಿಗಳು!’ ಎಂದು ಹೇಳುವ ಎದೆ ಬಗಿದಾಗ ಕಂಡದ್ದು!' ಇತ್ಯಾದಿ ಲೇಖನಗಳು ಏನಾಗಿದೆ ಈ ದೇಶದ ಜನರಿಗೆ, ರಾಜಕಾರಣಿಗಳಿಗೆ ಎಂದು ಛೀ! ಥೂ... ಎಂದು ಉಗುಳುವಂತೆ ಮಾಡುತ್ತವೆ. ಮಲ್ಲೇಶ್ ಅವರ ಲೇಖನಗಳಲ್ಲಿ ಕಾಂತಾಸಂಹಿತೆ, ಮಿತ್ರಸಂಹಿತೆ, ಪ್ರಭುಸಂಹಿತೆಯ ಗುಣಗಳು ಅಡಕವಾಗಿವೆ. ಹಾಸ್ಯ ರಸಾಯನ ಉಕ್ಕಿಸಲು, ಸತ್ಯದರ್ಶನ ಮಾಡಿಸಲು, ಪಲಾಯನವಾದಿಗಳಂತೆ ತೋರಿಸಿಕೊಳ್ಳಲು ವಿವಿಧ ಪಾತ್ರಗಳ ಬಳಕೆ ಮಾಡಿಕೊಂಡಿರುವ ವಿಧಾನ ವಾಸ್ತವ ಚಿತ್ರಣವನ್ನು ಕಟ್ಟಿಕೊಡುವುದು. ಪತ್ನಿಯ ಆಸೆ, ಪತಿಯಮೇಲೆ ಹಾಕುವ ಅಂಕುಶ, ಗೆಳೆಯರ ಸಲುಗೆಯ ನುಡಿಗಳು, ಪತ್ನಿಗೆ ಅಂಜುವ ಪತಿ, ಪತ್ನಿಗೆ ಚಳ್ಳೆಹಣ್ಣು ತಿನ್ನಿಸುವ ಪತಿ ಮುಂತಾದ ಚಿತ್ರಣಗಳು ಇಲ್ಲಿ ಅನಾವರಣಗೊಂಡಿವೆ. ಪ್ರತಿಯೊಂದು ಲೇಖನದಲ್ಲಿ ಶಬ್ದರೂಪಕಗಳನ್ನು ಗಮನಿಸಬಹುದು. ಒಂದೆರಡು ಗಂಟೆಗಳಲ್ಲೇ ಇಲ್ಲಿಯ 83 ಬಿಡಿ ಲೇಖನಗಳನ್ನು ಓದಿ ಮುಗಿಸಿದರೂ ಅವುಗಳ ಬಂಧನದಿಂದ ಬಿಡಿಸಿಕೊಳ್ಳಲು ಅದೆಷ್ಟೋ ಸಮಯ ಬೇಕಾಗುತ್ತದೆ. ಓದುಗನಿಗೆ ಯಾವ ಲೇಖನಗಳೂ ನಿರಾಸೆ, ಬೇಸರ ತರಿಸುವುದಿಲ್ಲ. ಬದಲಾಗಿ ಕುತೂಹಲ ಹೆಚ್ಚಿಸುತ್ತಲೇ ಮುಂದಿನ ಲೇಖನವನ್ನು ಓದಲು ಸ್ಪೂರ್ತಿ ನೀಡುವವು. ಸುದ್ದಿಗೆ ಗುದ್ದು ಕೊಡುವ ಚುಟುಕುಗಳು, ಗ್ರಾಮೀಣ-ನಗರ ಪ್ರದೇಶವೆನ್ನದೆ ಎಲ್ಲ ವರ್ಗದ ಜನರ ಬದುಕಿನ ಅನಾವರಣ ಇಲ್ಲಿದೆ. ಮೌಲ್ಯ, ಅಪಮೌಲ್ಯಗಳ ಕಂದಕ ಅರಿಯುವ ನಯವಂತಿಕೆ ಲೇಖನಗಳ ಸತ್ವವನ್ನು ಸಾರುವುದು. ಸಾಮಾನ್ಯರ ಜಾಣತನ, ಜಾಣರ ಮೂರ್ಖತನ ಎರಡನ್ನೂ ಅನಾವರಣಗೊಳಿಸುವ ಇಲ್ಲಿಯ ವಿಡಂಬನೆಗಳು ಲೋಕಾನುಭವದ ಜೊತೆಗೆ ಅರ್ಥಾನುಭವ, ಆನಂದಾನುಭವವನ್ನೂ ಮಾಡಿಸುತ್ತವೆ.ತೆಪರೇಸಿ ತರ್ಕ!’ದಲ್ಲಿ ಸಂಬಂಧ ಐತೆ ಸಾ, ವಿಧಾನಸಭೆ ಎಲೆಕ್ಷೆನ್‍ಗೂ ಮೊದ್ಲು ಸಿದ್ಧರಾಮಯ್ಯಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲ್ಲ’ ಅಂತ ಪದೇ ಪದೇ ಹೇಳ್ತಿದ್ರು. ಆದ್ರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆದ್ರೋ ಇಲ್ವೋ?’ ಆದ್ರು, ಅದಕ್ಕೆ?'ಈಗ ಅದೇ ಸಿದ್ಧರಾಮಯ್ಯ ಅವರಪ್ಪನಾಣೆ ಮೋದಿ ಮತ್ತೆ ಪ್ರಧಾನಿ ಆಗಲ್ಲ ಅಂತಿದಾರೆ. ನ್ಯೂಸ್ ನೋಡ್ಲಿಲ್ವಾ?' ಈ ತರ್ಕವನ್ನು ಗಮನಿಸಬೇಕು.ಬಿಪಿ ಏರಲು ಕಾರಣ’, ಸರ್ಕಾರ ಸಂಸಾರ',ಕೊರೊನಾ ಕಥೆ!’, ಸಂಕಟ ವಿಸ್ತರಣೆ’, ರಾಜ ಮತ್ತು ಸನ್ಯಾಸಿ', ರಾಜಭವನದ ಬೆಕ್ಕುಗಳು!'ಕೊನೆಯ ಗಿರಾಕಿ’, ಪಿತ್ರಾರ್ಜಿತ ಪ್ರೀತಿ!'ಸೊನ್ನೆ ಸಂಪಾದನೆ!’ `ನಾವು ಕುಡುಕರಲ್ಲ’ ಲೇಖನಗಳನ್ನು ಓದಿಯೇ ಅನುಭವಿಸಬೇಕು.


31-3-2021
ವಿಳಾಸ: ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೇಹಳ್ಳಿ-577515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಸೆಲ್: 9448395594 ಈಮೇಲ್: swamiji.ps@gmail.com

Leave a Reply

Your email address will not be published. Required fields are marked *

error: Content is protected !!