ಭಗವಾನ್ ರ ಮೇಲಿದ ದೌರ್ಜನ್ಯ ಖಂಡನೀಯ

ಬಹುತೇಕರು ಬಲ್ಲಂತೆ ಪ್ರೊ.ಕೆ.ಎಸ್.ಭಗವಾನ ಒಬ್ಬ ನ್ಯಾಯ ನಿಷ್ಠುರ ಬರಹಗಾರ.ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡಿರುವ ವ್ಯಕ್ತಿ. ಆದರೆ ಅವರ ಸತ್ಯದ ಪರ ಧೋರಣೆ ಬಹಳ ಜನರಿಗೆ ಎದೆಯಲ್ಲಿ ಮುಳ್ಳು. ಪಟ್ಟಭದ್ರ ಶಕ್ತಿಗಳು ದೇಶದ ಜನಗಳ ಚಿಂತನೆಯ ಕ್ರಮವನ್ನೇ ಅದಲು ಬದಲು ಮಾಡಿವೆ. ಯಾರ ಉಸಾಬರಿ ನಮಗೇಕಪ್ಪ ? ಎಂದು ತಣ್ಣಗೆ ಹೊರಟಿರುವಾಗ ಈ ಭಗವಾನ್ ಇತಿಹಾಸ ಪುಟದ ಧೂಳು ಕೊಡವಿಕೊಂಡು ಬರವಣಿಗೆಯ ಅಖಾಡಕ್ಕೆ ಇಳಿದು ಬಿಡುತ್ತಾರೆ.

ಪ್ರೊ.ಕೆ.ಎಸ್.ಭಗವಾನ್

ಪ್ರೊ. ಭಗವಾನ್ ಅವರ ಈ ಗಟ್ಟಿ ನಿಲುವು ಬಹಳ ಜನರ ಬದುಕನ್ನು ಬಯಲು ಮಾಡುತ್ತದೆ. ಅಲ್ಲದೆ ಸತ್ಯವನ್ನು ಅರಗಿಸಿಕೊಳ್ಳುವ ತಾಕತ್ತು, ಹಾಗೂ ಅಧ್ಯಯನದ ಕೊರತೆಯಿಂದ ಭಗವಾನ್ ಮೇಲೆ ಮೃಗೀಯ ಮನಸ್ಸುಗಳು ಎಗರಿ ಬೀಳುತ್ತವೆ.

ಇದೆಲ್ಲ‌ ಮನಗಂಡಿರುವ ಸರಕಾರ ಅವರಿಗೆ ಗನ್ ಮ್ಯಾನ ಸೆಕ್ಯೂರಿಟಿ ಕೂಡ ಕೊಟ್ಟಿದೆ. ಆದರೇನು ಬಂತು ಇಂದು ಬೆಂಗಳೂರಿನ ೨ ನೆ ಎಂ.ಸಿ.ಎಂ. ನ್ಯಾಯಾಲಯಕ್ಕೆ ಹಾಜರಾಗಿ ಹೊರಬರುವಾಗ ಕೋರ್ಟ್ ನ ಆವರಣದಲ್ಲಿಯೆ ವಕೀಲೆ ಅವರ ಮುಖಕ್ಕೆ ಮಸಿ ಬಳಿದಿದ್ದಾರೆ. ಇದು ಖಂಡನಾರ್ಹ ಸಂಗತಿ. ಅಕ್ಟೋಬರ್ ೧೦-೨೦೨೦ ರಂದು ವಕೀಲೆ ಮೀರಾ ತಾನೆ ಸ್ವತಃ ಪ್ರೊ. ಭಗವಾನ್ ಅವರ‌ ಮೇಲೆ ಕೇಸೊಂದನ್ನು ದಾಖಲಿಸಿದ್ದರು. ಇಂದು ಈ ಖಾಸಗಿ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರಿಂದ ಜಾಮೀನು ಕೂಡ ಪಡೆದು ಹೊರ ನಡೆದಾಗ ಈ ಘಟನೆ ನಡೆದಿದೆ.

ನ್ಯಾಯ ಒದಗಿಸಬೇಕಾದ ವಕೀಲೆಯೆ ಕಾನೂನು ಕೈಗೆ ತಕ್ಕೊಂಡ ಮೀರಾ

ಮೀರಾ ರಾಘವೇಂದ್ರ ಎಂಬ ವಕೀಲೆ ಕೇವಲ ವಕೀಲೆಯಾಗಿದ್ದರೆ ತನ್ನ ವೃತ್ತಿಯ ಘನತೆಯನ್ನು ಅರಿತುಕೊಂಡಿದ್ದರೆ ಕೋರ್ಟ್ ಆವರಣದಲ್ಲಿ ಈ ರೀತಿ ಅನುಚಿತವಾಗಿ ವರ್ತಿಸುತ್ತಿರಲಿಲ್ಲ. ಪ್ರೊ.ಭಗವಾನ್ ಅವರ ಮುಖಕ್ಕೆ ಮಸಿ ಬಳಿಯುವ ಪೂರ್ವದಲ್ಲಿ ತಮ್ಮ ಕೈಗಳಿಗೂ ಮಸಿ ಹಚ್ಚಿಕೊಳ್ಳಬೇಕಾಗುತ್ತದೆ ಎಂದು ಅರಿಯದೆ ಹೋದದ್ದು ವಿಷಾದನೀಯ ಸಂಗತಿ.ನ್ಯಾಯ ದೊರಕಿಸಿ ಕೊಡಬೇಕಾದ ವಕೀಲೆ ಸ್ವತಃ ತಾನೇ ಕಾನೂನು ಕೈಗೆ ತೆಗೆದುಕೊಂಡಿರುವುದು ಗಂಭೀರ ಅಪರಾಧ.

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು. ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯ ಮೊಲೆವಾಲು ನಂಜಾಗಿ ಕೊಲುವಡೆ, ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ !

ಪ್ರೊ. ಭಗವಾನ್ ಅವರು ಈಗಾಗಲೇ ಬರೆದಿರುವ ಪುಸ್ತಕಗಳು ವಿದ್ವಜ್ಜನರ, ಸಂಶೋಧಕರ , ಪ್ರಗತಿಪರ ಚಿಂತಕರ ಹೋರಾಟಗಾರರ ಗಮನ ಸೆಳೆದಿವೆ. ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ಎಂಬ ಪುಸ್ತಕ ಮುದ್ರಣ ಕ್ಷೇತ್ರದಲ್ಲಿ ದಾಖಲೆಯನ್ನು ಪಡೆದಿದೆ. ರಾಮ ಮಂದಿರ ಏಕೆ ಬೇಡ ? ,ಬದಲಾವಣೆ ಇತರ ಕೃತಿಗಳಲ್ಲಿ ಹಲವಾರು ಇಂಗ್ಲೀಷ ಭಾಷೆಯ ನಾಟಕದ ಕೃತಿಗಳೂ ಭಗವಾನ್ ರಿಂದ ತರ್ಜುಮೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದಿವೆ.

ನಿಜಕ್ಕೂ ಭಗವಾನ್ ಯಾರ ಬಗೆಗೆ, ಯಾವ ವಿಷಯದ ಕುರಿತು ಪೂರ್ವಾಗ್ರಹ ಪೀಡಿತ ವ್ಯಕ್ತಿ ಅಲ್ಲ. ನಿಗರ್ವಿ, ನಿಷ್ಕಳಂಕ , ನಿರುಪದ್ರವಿ ವ್ಯಕ್ತಿತ್ವ ಉಳ್ಳವರು. ಪದವಿ ಪ್ರಶಸ್ತಿ ಪ್ರತಿಷ್ಠೆಗಾಗಿ ಯಾರನ್ನು ದುಂಬಾಲು ಬಿದ್ದು ತಮ್ಮ ವ್ಯಕ್ತಿತ್ವ ಕಳಕೊಂಡವರಲ್ಲ. ಬರವಣಿಗೆಯನ್ನು ದುರಂಹಕಾರಿ ರಾಜಕಾರಣಿಗಳ ಪದತಲದಲ್ಲಿಟ್ಟು ಗುಲಾಮಗಿರಿಗೆ ಇಳಿದವರಲ್ಲ. ಕನ್ನಡ ನಾಡು ಸರ್ವಜ‌ನಾಂಗದ ಶಾಂತಿಯ ತೋಟವೆಂದು ಕಂಡುಕೊಂಡವರು. ಬುದ್ದ ಬಸವ ಅಂಬೇಡ್ಕರ್ ಪುಲೆ ಪೆರಿಯಾರ ಅವರ ಚಿಂತನೆಗಳ ಕುರಿತು ಸಾಕಷ್ಟು ಬರೆದವರು.

ಕೇವಲ ಅವರ ರಾಮನ ಕುರಿತ ಬರಹಗಳ ಕುರಿತು ಮಾತನಾಡುತ್ತ, ಅವರ ಮೈಮೇಲಿ ಏರಿ ಹೋಗಿ ಹಲ್ಲೆ ಮಾಡುವ ಮಟ್ಟಕ್ಕೂ ಒಬ್ಬ ವಿದ್ಯಾವಂತ ವಕೀಲೆ ಇಳಿದದ್ದು , ತಾನು ಮಾಡಿದ ಘನಂದಾರಿ ಕೆಲಸವನ್ನು ಟ್ವೀಟರ್ ನಲ್ಲಿ ಹಾಕಿಕೊಂಡು ವಿಕೃತ ಸಂಭ್ರಮ ಪಡುವುದಕ್ಕೆ ನ್ಯಾಯಾಲಯ ಖಂಡಿತ ಕಡಿವಾಣ ಹಾಕುವ ಭರವಸೆ ಇದೆ. ನಮ್ಮ ಸಮಾಜ ಈಗ ಎಂಥ ಚಟುವಟಿಕೆಗಳತ್ತ ತುಡಿಯುತ್ತಿದೆ ಎಂಬುದರ ಮುನ್ಸೂಚನೆ.

ಮಾಡಬಾರದ ಘನಂದಾರಿ ಕೆಲಸಕ್ಕೆ ಇಂಥ ಬಿಲ್ಡಪ್

ಪಕ್ಷವೊಂದರ ಸದಸ್ಯಳೂ ಆಗಿರಬಹುದೆಂದು ಹೇಳುವ ಮೀರಾ ರಾಘವೇಂದ್ರ ಮೇಲೆ ಹಲಸೂರು ಪೊಲೀಸರು ಸೂಕ್ತಕ್ರಮ ಕೈಗೊಂಡು ರಾಜ್ಯಕ್ಕೆ ಮಾದರಿಯಾದ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು.

೦ ವಿಶ್ವಾರಾಧ್ಯ ಸತ್ಯಂಪೇಟೆ

ಸಾಣೇಹಳ್ಳಿಯ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ ಖಂಡನೆ

ಭಗವಾನ್ ಅವರ ಮೇಲೆ ಮಸಿ ಎರಚಿದ ಆ ತಾಯಿ ತನ್ನ ವೃತ್ತಿ ಗೌರವಕ್ಕೇ ಚ್ಯುತಿ ತಂದುಕೊಂಡಂತೆ ಆಗಿದೆ. ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೆಂದರೆ ಅದನ್ನು ಇನ್ನೆಲ್ಲಿಂದ ತರುವುದು? ಆ ಸಹೋದರಿ ಮಸಿ ಎರಚುವ ಮೂಲಕ ಪ್ರಜಾಪ್ರಭುತ್ವ ದ ಮೇಲೆ ಕಗ್ಗೊಲೆ ಮಾಡಿದಂತಾಗಿದೆ. ಇಂಥವರ ಮೇಲೆ ಸರ್ಕಾರ ಶಿಸ್ತಿನ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇವೆ. ಭಗವಾನರ ವಿಚಾರಗಳು ಒಪ್ಪಿಗೆ ಆಗದಿದ್ದರೆ ಅವರ ವಿಚಾರಗಳನ್ನು ಮಾತು ಮತ್ತು ಬರಹದ ಮೂಲಕ ಪ್ರತಿಭಟಿಸದೆ ಅಡ್ಡದಾರಿ ಹಿಡಿದಿರುವುದು ಅಮಾನವಿಯ ಮತ್ತು ಖಂಡನಾರ್ಹ.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

6 thoughts on “ಭಗವಾನ್ ರ ಮೇಲಿದ ದೌರ್ಜನ್ಯ ಖಂಡನೀಯ

  1. ಪ್ರೊ ಕೆ.ಎಸ್ . ಭಗವಾನರ ಮೆಲೆ ಮಸಿ ಬಳಿದ ಪ್ರಕರಣ ತೀರಾ ಅಸಹ್ಯ ಅದು ವಕಿಲೆಯಾಗಿ , ಭಗವಾನರನ್ನು ವಿರೊದಿಸುವುದಕ್ಕೆ ಹಲವಾರು ದಾರಿಗಳಿವೆ . ನ್ಯಾಯದ ದಾರಿಯಲ್ಲಿ ನಡೆಯಬೇಕಾದ ವಕೀಲೆ ಅನ್ಯಾಯದ ದಾರಿಯಲ್ಲಿ ಹೊದದ್ದು ವೃತ್ತಿಗೆ ಕಳಂಕ .

  2. ಪ್ರಜ್ಞಾವಂತರು ಮಾಡುವ ಕೆಲಸ ಇದಲ್ಲ. ಭಗವಾನ್ ಅವರಂಥ ಅರಿವಿನ ಕೆಂಡಕ್ಕೆ ಗೊರಲೆ ಹತ್ತದು. ಈ ಮಸಿಯೇನು !? ಇಂತಹ ನಡೆಯನ್ನು ಖಂಡಿಸುತ್ತೇನೆ.

  3. ವಿಕೃತಮನಸ್ಸುಗಳ ಮಾನಸಿಕ ತೊಳಲಾಟಗಳಿವು. ಇಂಥಹ ಹುಚ್ಚು ಮನಸ್ಸಿನಮೂಲಭೂತವಾದಿಗಳೆ ಮುಂದೊಂದು ದಿನ ಭಗವಾನ್ ಗೌರಿಲಂಕೇಶರಂತಹ ವೈಚಾರಿಕ ವಿಚಾರವಂತರನ್ನ ಬಲಿತೆಗೆದುಕೊಳ್ಳುವುದು.ಸತ್ಯ ತುಂಬಾ ಕಹಿ ಅರಗಿಸಿಕೊಳ್ಳುವುದೆ ಕಷ್ಟ. ಮಸಿಬಳಿಯುವುದು ಕಾಗಕ್ಕನ ಕಥೆಗಳನ್ನ ಹೇಳುವುದನ್ನ ಬಿಟ್ಟು ಆರೋಗ್ಯ ಪೂರ್ಣ ಚರ್ಚೆಗೆಬರಲಿ.

  4. ಭಗವಾನರ ಮೇಲಿನ #ಮಸಿ_ದಾಳಿ ವಿಕೃತ ಮನಸ್ಸುಗಳನ್ನ ಪ್ರತಿನಿಧಿಸುವ ನಿರ್ಲಜ್ಜ ಕೃತ್ಯ. ವಿದ್ಯಾವಂತರು ಮತಿಹೀನರಾಗುತ್ತಿರುವುದು ಅರಗಿಸಿಕೊಳ್ಳಲು ಕಷ್ಟವಾಗುವ ಕಹಿ ಸತ್ಯ. ಈ ವಿದ್ಯಮಾನಗಳು ದಿಢೀರ್ ಸ್ಪೋಟಗೊಳ್ಳುತ್ತಿರುವವಲ್ಲ. ಇವುಗಳು, ಮನುವಾದಿಗಳ ದಶಕಗಳ ಕಾರ್ಯಯೋಜನೆಗಳ ಫಲ. ಧರ್ಮದ ನಶೆಯನ್ನು ಹಲವು ಡೋಸುಗಳಲ್ಲಿ ಕೊಡುತ್ತಾ ಬಂದ ಪರಿಣಾಮ ಅದು ಪ್ರಜ್ಞೆಯನ್ನೆಲ್ಲ ಆವರಿಸಿ ವಿಷವಾಗಿ ಪರಿವರ್ತಿತಗೊಂಡು ಕಡಿಯಲು ಬುಸುಗುಡುತ್ತಿದೆ. ಈ ವಿಷವನ್ನು ಸಂಪೂರ್ಣ ನಾಶಪಡಿಸದಿದ್ದರೆ ನಾಳೆ ಬೀದಿ-ಬೀದಿಗಳಲ್ಲಿ ಹರಿಯಲಿದೆ ವಿಷ.

  5. ತಾನು ವಕೀಲೆ ಅನ್ನುವದು ಮರೆತು ಮಾಡಿದರಾ. ಈ ಘಟನೆ ವಕೀಲ ವೃತ್ತಿಗೆ ತಂದ ಕಪ್ಪು ಚುಕ್ಕೆ.?

Leave a Reply

Your email address will not be published. Required fields are marked *

error: Content is protected !!