ರಾಜಕಾರಣ ಧರ್ಮವನ್ನು ನುಂಗಬಾರದು

ಸತ್ಪುರುಷರಿಂದ ಸಿದ್ಧಾಂತವು ಹುಟ್ಟುತ್ತದೆ; ರಾಜಕಾರಣಿಯಿಂದ ಸಾಯುತ್ತದೆ ಎಂಬ ನುಡಿಯಿದೆ. ನಾಲ್ಕೈದು ವರ್ಷಗಳ ಹಿಂದೆ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಲಿಂಗಾಯತ ಸ್ವತಂತ್ರಧರ್ಮ ಕುರಿತಾದ 2-3 ಬೃಹತ್ ಸಮಾವೇಶಗಳು ನಡೆದವು. ಅದರಿಂದ ಪ್ರೇರಿತವಾಗಿ ಕರ್ನಾಟಕದ ಬೀದರ್‌ನಲ್ಲಿಯೂ ಬೃಹತ್ ಸಮಾವೇಶ ನಡೆಯಿತು. ಈ ಎರಡೂ ಕಡೆ ನಡೆದ ಸಮಾವೇಶಗಳು ರಾಜಕೀಯೇತರವಾಗಿದ್ದವು, ಧಾರ್ಮಿಕ ಮುಖಂಡರು ನೇತೃತ್ವ ವಹಿಸಿದ್ದರು. ಧಾರ್ಮಿಕ ನಾಯಕತ್ವದಿಂದಲೇ ಈ ಸಮಾವೇಶಗಳು ಯಶಸ್ವಿಯಾದವು.

ಡಾ. ಶಿವಮೂರ್ತಿ ಮುರುಘಾ ಶರಣರು

ಇಂತಹ ಸಮಾವೇಶಗಳ ಹಿಂದಿರುವ ಸಂಘಟನೆಗಳನ್ನು ಬಳಸಿಕೊಳ್ಳಲು ಕೆಲವರು ಕಾಯುತ್ತಿರುತ್ತಾರೆ. ಬೆಳಗಾವಿಯಲ್ಲಿ ನಡೆದ ಸಮಾವೇಶವು ಸಂಪೂರ್ಣವಾಗಿ ರಾಜಕೀಯಕರಣಕ್ಕೆ ಒಳಗಾಯಿತು. ಅದರಂತೆ ಹುಬ್ಬಳ್ಳಿ, ಕಲಬುರ್ಗಿ ಮತ್ತಿತರ ಭಾಗಗಳಲ್ಲಿ ನಡೆದಂತಹ ಸಮಾವೇಶಗಳನ್ನು ರಾಜಕೀಯ ಧುರೀಣರು ಸಂಘಟಿಸುತ್ತಾ ಹೋದರು. ಧರ್ಮ ಅಥವಾ ತತ್ವಕ್ಕೆ ರಾಜಕಾರಣದ ಸಹಕಾರ ಬೇಕು. ಸಹಕಾರ ನೀಡಲು ಬಂದಂತಹ ರಾಜಕಾರಣವೇ ಧರ್ಮವನ್ನು ನುಂಗಬಾರದು.

ಸ್ವತಂತ್ರಧರ್ಮದ ಪರವಾಗಿ ನಡೆದ ಬಹುತೇಕ ಸಮಾವೇಶಗಳಿಗೆ ನಾನು ಸಹಭಾಗಿತ್ವ ನೀಡಿದ್ದೇನೆ. ಹುಬ್ಬಳ್ಳಿಯಲ್ಲಿ ಜರುಗಿದ ಸಮಾವೇಶವನ್ನು ಕೆಲ ರಾಜಕೀಯ ಧುರೀಣರು ಬಳಸಿಕೊಂಡರು. ಈ ಹೋರಾಟದಿಂದ ದೂರವಿರುವ ಮತ್ತು ಇದಕ್ಕೆ ಸಹಕರಿಸದವರನ್ನು ತೆಗಳಿದರು. ಪರಸ್ಪರ ರಾಜಕೀಯ ದ್ವೇಷಕ್ಕೆ ಅದು ವೇದಿಕೆಯಾಯಿತು. ಸ್ವತಂತ್ರಧರ್ಮದ ವಿಚಾರ ಹಿಂದೆ ಸರಿದು, ಪರಸ್ಪರ ದ್ವೇಷಾಸೂಯೆಗಳು ವಿಜೃಂಭಿಸಿದವು. ಅಖಿಲ ಭಾರತ ವೀರಶೈವ ಮಹಾಸಭೆಗೆ ಇದು ನುಂಗಲಾರದ ತುತ್ತಾಯಿತು. ಪ್ರತ್ಯೇಕ ಧರ್ಮದ ವಿರುದ್ಧ ಬಾದಾಮಿ, ಗದಗ ಇನ್ನಿತರ ಕಡೆಗಳಲ್ಲಿ ಪರ್ಯಾಯವಾಗಿ ಸಮಾವೇಶಗಳು ನಡೆದವು. ಎರಡೂ ಕಡೆಯವರು ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿದರು. ಆಗ ಚುನಾವಣೆ ಹತ್ತಿರದಲ್ಲಿತ್ತು. ಇದರ ಪರಿಣಾಮ ನಿರೀಕ್ಷಿತ.

ಕೆಲವರ ಲೆಕ್ಕಾಚಾರ ಹುಸಿಯಾಯಿತು. ಆಡಳಿತ ಪಕ್ಷಕ್ಕೆ ಹಿನ್ನಡೆ ಆಯಿತು. ಸ್ವತಂತ್ರಧರ್ಮದ ಪರ ಇದ್ದ ಬಹುತೇಕ ಮುಖಂಡರು ಸೋಲನ್ನು ಅನುಭವಿಸಿದರು. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಇದನ್ನೆಲ್ಲ ಗಮನಿಸುತ್ತ ಬಂದಿದ್ದು, ಆ ಪಕ್ಷದ ಧುರೀಣರಿಗೆ ಇಂಥ ಸಂಘಟನೆಗಳಿಂದ ದೂರ ಇರುವಂತೆ ತಾಕೀತು ಮಾಡಿತು. ಐದು ವರ್ಷ ಸಮರ್ಥವಾಗಿ ಸರ್ಕಾರವನ್ನು ನಡೆಸಿಕೊಂಡು ಬಂದವರನ್ನು ಅಲಕ್ಷಿಸಿ, ಅತ್ಯಂತ ಕಡಿಮೆ ಸೀಟು ಗೆದ್ದಂತಹ ಜೆಡಿಎಸ್ ಜೊತೆ ಕಾಂಗ್ರೆಸ್ ಕೂಡಿಕೊಂಡು ಸರ್ಕಾರವನ್ನು ರಚಿಸಿತು. ಆಂತರಿಕ ವೈರುಧ್ಯಗಳ ಕಾರಣ, ಮೈತ್ರಿ ಸರ್ಕಾರವು ಬಹುದಿನಗಳವರೆಗೆ ನಡೆಯುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿತ್ತು. ಮುಖ್ಯಮಂತ್ರಿಯವರು ವಿದೇಶ ಪ್ರವಾಸ ಮಾಡಿದಂತಹ ಸಂದರ್ಭವನ್ನು ಬಳಸಿಕೊಂಡ ಕೆಲವು ಅತೃಪ್ತರು ಮೈತ್ರಿ ಸರ್ಕಾರ ಉರುಳಲು ಕಾರಣರಾದರು. ಅಧಿಕ ಸಂಖ್ಯಾಬಲ ಹೊಂದಿದ್ದ ಬಿಜೆಪಿಯು ಸರ್ಕಾರ ರಚಿಸಿತು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತ ನಡೆಸುತ್ತಿರುವುದರಿಂದ ಸ್ವತಂತ್ರಧರ್ಮದ ಪರ ಹೋರಾಟವು ಸ್ಥಗಿತಗೊಂಡಿತಾದರೂ ಎರಡೂ ಮಹಾಸಭಾಗಳ ನಡುವೆ ಆಂತರಿಕ ಬೇಗುದಿ ಹೆಚ್ಚಾಯಿತು. ಕೊರೊನಾದಂತಹ ಸಂಕೀರ್ಣ ಸಂದರ್ಭದಲ್ಲೂ ಅದು ಹೆಡೆ ಆಡಿಸಿತು. ಪರಸ್ಪರ ಕೆಸರೆರಚುವ, ತಮಗೆ ಆಗದವರ ಮೇಲೆ ಕೇಸು ಹಾಕುವ ಕೆಟ್ಟ ಪರಂಪರೆ ಪ್ರಾರಂಭವಾಯಿತು.

ಲಿಂಗಾಯತ ಮತ್ತು ವೀರಶೈವ ಎರಡು ಮಹಾಸಭಾಗಳೂ ರಾಜಕೀಯ ಪಕ್ಷಗಳ ಹಿಡಿತದಲ್ಲಿವೆ. ದಿನದಿಂದ ದಿನಕ್ಕೆ ಸ್ವತಂತ್ರಧರ್ಮದ ಕೂಗು ಕಡಿಮೆ ಆಗುತ್ತಿದ್ದು, ಬಹುತೇಕ ಮುಖಂಡರು ಮೌನ ವಹಿಸಿದ್ದಾರೆ, ಸಾಮರಸ್ಯದ ಬಗೆಗೆ ಒಲವು ತೋರುತ್ತಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಶಿರಸಂಗಿ ಲಿಂಗರಾಜ ದೇಸಾಯಿ ಅವರ ಜಯಂತ್ಯುತ್ಸವ ಕಾರ್ಯಕ್ರಮ ಇತ್ತು. ಇದನ್ನು ಲಿಂಗಾಯತ ಹೋರಾಟದ ಮುಂಚೂಣಿ ಮುಖಂಡರು ಏರ್ಪಡಿಸಿದ್ದರು. ಇದರಲ್ಲಿ ವೀರಶೈವ ಮಹಾಸಭೆಯ ಅಧ್ಯಕ್ಷರು, ಕೆಎಲ್‍ಇ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ಪರಸ್ಪರ ಕೂಡಿಕೊಂಡು ಹೋಗುವುದರ ಬಗೆಗೆ ಅಲ್ಲಿ ಒಲವು ವ್ಯಕ್ತವಾಯಿತು ಎಂಬ ಮಾತಿದೆ. ಬೆಳಗಾವಿಯಲ್ಲಿ ಇತ್ತೀಚೆಗೆ ಮಠಾಧೀಶರಿಗಾಗಿ ಚಿಂತನ ಶಿಬಿರ ನಡೆದಿರುವುದಾಗಿ ತಿಳಿದುಬಂದಿದೆ. ಲಿಂಗಾಯತ (ಸ್ವತಂತ್ರಧರ್ಮ) ಹೋರಾಟದಿಂದ ದೂರ ಉಳಿದಂತಹ ಕೆಲ ಧಾರ್ಮಿಕ ಮುಖಂಡರನ್ನು ಆಹ್ವಾನಿಸ ಲಾಗಿತ್ತು. ಒಂದು ಗೋಷ್ಠಿಯಲ್ಲಿ ಅವರು ಭಾಗವಹಿಸಿ ಹೋಗಿದ್ದಾರೆ. ಇಬ್ಬರು ಮಠಾಧೀಶರನ್ನುಳಿದು, ಉಳಿದವರೆಲ್ಲ ಸಮನ್ವಯವಾದಿಗಳು. ಭಾಗವಹಿಸಿದ ಮಠಾಧೀಶರ ಹೆಸರನ್ನು ಉಲ್ಲೇಖಿಸಲಿಲ್ಲ, ಅವರನ್ನು ವೇದಿಕೆಗೂ ಕರೆಯಲಿಲ್ಲ. ಸ್ವಾಮಿಗಳು ಶ್ರೋತೃಗಳಂತೆ ಭಾಗವಹಿಸಿದ್ದರು. ವಿಷಯ ಪರಿಣತರಿಂದ ವಿಚಾರವನ್ನು ಆಲಿಸುವುದಕ್ಕೆ ಮಾತ್ರ ಸಮಾಧಾನಪಟ್ಟುಕೊಳ್ಳಲಾಯಿತು ಎಂಬುದು ಭಾಗವಹಿಸಿದ ಕೆಲವರ ಅನಿಸಿಕೆ.

ಆಹ್ವಾನಿಸಿದ್ದು ಚಿಂತನ ಶಿಬಿರಕ್ಕೆ. ಆದರೆ, ಕೊನೆಯ ದಿನ ಲಿಂಗಾಯತ ಮಠಾಧೀಶರ ಒಕ್ಕೂಟ ರಚನೆಯಾಯಿತು. ಸ್ವತಂತ್ರ ಧರ್ಮದಂತಹ ಹೋರಾಟದಲ್ಲಿ ರಾಜಕಾರಣಿಗಳು ನೇತೃತ್ವ ವಹಿಸುವುದಕ್ಕೆ ಮೊದಲಿನಿಂದಲೂ ನನ್ನ ವಿರೋಧ ಇತ್ತು. ಮುಂಚೂಣಿ ಮುಖಂಡರೊಬ್ಬರ ಬೆಂಗಳೂರು ಕಾರ್ಯಾಲಯದಲ್ಲಿ ಒಮ್ಮೆ ಒಂದು ಸಭೆ ನಡೆಯಿತು. ಆ ಸಭೆಯಲ್ಲಿ ನಾನು, ಕೂಡಲಸಂಗಮ ಸ್ವಾಮಿಗಳು ಮತ್ತು ನಿಜಗುಣಾನಂದ ಸ್ವಾಮಿಗಳು ಉಪಸ್ಥಿತರಿದ್ದೆವು. ರಾಷ್ಟ್ರಮಟ್ಟದ ಸಂಘಟನೆಗೆ ಒಬ್ಬ ರಾಜಕಾರಣಿ, ರಾಜ್ಯ ಮಟ್ಟಕ್ಕೆ ಒಬ್ಬ ರಾಜಕೀಯ ಮುಖಂಡ ಮತ್ತು ಯುವಸಂಘಟನೆಗೆ ಇನ್ನೊಬ್ಬ ಮುಖಂಡರನ್ನು ಆಯ್ಕೆ ಮಾಡಲಾಯಿತು. ಅಪ್ಪಿತಪ್ಪಿಯೂ ಒಬ್ಬ ಮಠಾಧೀಶರನ್ನು ಅದರಲ್ಲಿ ಸೇರಿಸಿಕೊಳ್ಳಲಿಲ್ಲ. ಈಗ ಮುಖಂಡರಿಗೆ ತಮ್ಮ ತಪ್ಪಿನ ಅರಿವಾದಂತೆ ಕಾಣುತ್ತಿದೆ. ಕಾರಣ, ಲಿಂಗಾಯತ ಸ್ವತಂತ್ರಧರ್ಮ ಹೋರಾಟದ ಜವಾಬ್ದಾರಿಯನ್ನು ಮಠಾಧೀಶರಿಗೆ ವರ್ಗಾಯಿಸುವ ತೆರೆಮರೆಯ ಆಟ.

ಒಂದು ಮಾತನ್ನು ಸ್ಪಷ್ಟಪಡಿಸಬೇಕಾಗುತ್ತದೆ- ರಾಜಕಾರಣಿಗಳ ಕೈಗೊಂಬೆಯಂತೆ ಕೆಲವು ಮಠಾಧೀಶರು ಕುಣಿದರು, ಈಗಲೂ ಅದೇ ಶಕ್ತಿಗಳು ಅವರನ್ನು ಕುಣಿಸುತ್ತಿರುವುದು ಸೋಜಿಗ! ತಮಗೆ ಬೇಕಾದಾಗ ಕೂಡಿಸುತ್ತಾರೆ, ಬೇಡವಾದಾಗ ಬೇರ್ಪಡಿಸುತ್ತಾರೆ. ಮುಂಚೂಣಿ ರಾಜಕೀಯ ಮುಖಂಡರು ಹೇಳಿದಂತೆ ಕೆಲ ನಿವೃತ್ತ ಅಧಿಕಾರಿಗಳು ವರ್ತಿಸುತ್ತಾರೆ, ಅಭಿವ್ಯಕ್ತಿಸುತ್ತಾರೆ. ಆ ನಿವೃತ್ತ ಅಧಿಕಾರಿಗಳು ನಿರ್ದೇಶಿಸಿದಂತೆ ಮಠಾಧೀಶರು ಕೇಳಬೇಕಾದ ಸ್ಥಿತಿ ಬಂದೊದಗಿದೆ. ಈ ದಿಸೆಯಲ್ಲಿ ಮಠಾಧೀಶರಾದ ನಾವು ಸ್ವಂತಿಕೆಯನ್ನು ಉಳಿಸಿಕೊಳ್ಳುವುದು ತುಂಬಾ ಅನಿವಾರ್ಯ. ರಾಜಕಾರಣಿಗಳ ಕೈಗೊಂಬೆಯಾಗಿ ಕುಣಿದದ್ದು ಸಾಕು. ಏಕೆಂದರೆ, ಕೆಲ ರಾಜಕಾರಣಿಗಳಿಗೆ ಸಮಗ್ರ ದೃಷ್ಟಿಕೋನ ಇರುವುದಿಲ್ಲ. ಸಂಘಟನೆಯನ್ನು ಸ್ವಾರ್ಥ ಮತ್ತು ಪ್ರತಿಷ್ಠೆಗೆ ಬಳಸಿ ಕೊಳ್ಳುತ್ತಾರೆ. ಆದ್ದರಿಂದ ನಾವು ರಾಜಕೀಯಕ್ಕೆ ದಾಳವಾಗುವುದನ್ನು ನಿಲ್ಲಿಸೋಣ. ರಾಜಕಾರಣ ರಾಜಕಾರಣವೆ. ಅದರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸ ಲಾಗುವುದಿಲ್ಲ. ರಾಜಕಾರಣ ಯಾವೊತ್ತಿಗೂ ಒಡೆದು ಆಳುವ ಪ್ರವೃತ್ತಿಯನ್ನು ಅನುಸರಿಸುತ್ತದೆ. ಆದ್ದರಿಂದಲೇ ಅದನ್ನು ರಾಜಕಾರಣವೆಂದು ಕರೆಯಲಾಗುತ್ತದೆ.

ಮೂಲಭೂತವಾದವು ಪ್ರಗತಿಪರ ವಾದವನ್ನು ಹತ್ತಿಕ್ಕುತ್ತಾ ಬಂದಿದೆ. ತಮ್ಮ ಮಠಕ್ಕೆ ಜಂಗಮೇತರ ವ್ಯಕ್ತಿಯನ್ನು ಉತ್ತರಾಧಿಕಾರಿ ಮಾಡಿಕೊಳ್ಳಲು ಮುಂದಾದಾಗ ಕೆಲವರು ಕೂಡಿಕೊಂಡು ಇಳಕಲ್‍ನ ಮಹಾಂತ ಅಪ್ಪಗಳು ಮತ್ತು ಗುರುಮಹಾಂತ ಸ್ವಾಮಿಗಳ ಮೇಲೆ ಹಲ್ಲೆ ನಡೆಸಿದರು. ಗದುಗಿನ ತೋಂಟದಾರ್ಯ ಸ್ವಾಮಿಗಳ ಕಾರಿಗೆ ಕಲ್ಲು ತೂರಲಾಯಿತು. ಬಸವಧರ್ಮ ಸ್ಥಾಪನೆಗೆ ಮುಂದಾದಾಗ ಮೂಲಭೂತವಾದಿಗಳು ನನ್ನ ಮೇಲೆ ಕಾನೂನು ಯುದ್ಧವನ್ನು ಆರಂಭಿಸಿದರು, ಪೀಠದಿಂದ ಕೆಳಗಿಳಿಸುವ ಹುನ್ನಾರ ನಡೆಯಿತು. ಇದಕ್ಕೆ ಸಂಬಂಧಿಸಿದ ಕೇಸು ಈಗಲೂ ನ್ಯಾಯಾಲಯದಲ್ಲಿದೆ. ಎಲ್ಲ ಧರ್ಮ ಮತ್ತು ದಾರ್ಶನಿಕರ ಅನುಯಾಯಿಗಳಲ್ಲಿ ಮತಾಂಧರು ಇದ್ದಾರೆ. ಆದರ್ಶದ ಹೆಜ್ಜೆಗಳನ್ನು ಇಟ್ಟಾಗಲೆಲ್ಲ ಮೂಲಭೂತವಾದವು ವಿರೋಧಿಸುತ್ತದೆ.

ಬಸವತತ್ವವನ್ನು ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ಅನುಸರಿಸಿದ ಸತ್ಸಂಪ್ರದಾಯಗಳ ವಿರುದ್ಧ ಮೂಲಭೂತವಾದಿಗಳಿಂದ ಏನೆಲ್ಲ ಕಾನೂನು ತೊಡಕನ್ನು ಅನುಭವಿಸುತ್ತ, ಎದುರಿಸುತ್ತ ಬರಲಾಗಿದೆ. ಕೆಲವರು ಪರಿವರ್ತನಪರ ಧೋರಣೆ ಅನುಸರಿಸುತ್ತ ಬಂದರೆ, ಕೆಲವರು ಜಾತಿ ಮತ್ತು ಮತಧರ್ಮದ ಹೆಸರಲ್ಲಿ ಬೇಲಿ ಹಾಕಲು ಹೊರಟಿದ್ದಾರೆ. ಬೇಲಿಯನ್ನು ಕೀಳುವುದು ಬಸವತತ್ವ, ಬೇಲಿಯನ್ನು ಹಾಕುವುದು ಬಸವತತ್ವವಲ್ಲ. ಸೈದ್ಧಾಂತಿಕ ಹೋರಾಟಗಳನ್ನು ರಾಜಕಾರಣ ಹೊಸಕಿ ಹಾಕುತ್ತದೆ. ರಾಜಕಾರಣ ವಿಜೃಂಭಿಸುತ್ತದೆ; ಸಿದ್ಧಾಂತವು ಸೊರಗುತ್ತದೆ.

೦ ಪೂಜ್ಯ ಶ್ರೀ ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗ

2 thoughts on “ರಾಜಕಾರಣ ಧರ್ಮವನ್ನು ನುಂಗಬಾರದು

  1. ಮುರುಘಾ ಶರಣರು ಮಾಡಿದ ಆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮೈದಾನದಲ್ಲಿ ಬೆಳಿಗ್ಗೆ ಲಿಂಗ ಕಟ್ಟಿ
    ರಾತ್ರಿ ಬಿಚ್ಚಿಟ್ಟಾ ಸಂಗತಿಯೂ ಬಿಜೆಪಿ ರಾಜಕಾರಣಿಗಳ ಬಂದು ಹೋಗಿದ್ದು
    ಸೋಮಣ್ಣನವರ ಮಗ ಶ್ಲೋಕ ಹೇಳಿದ್ದು ಕೃಷ್ಣನ ಗೀತೆ ಹಾಡಿದ್ದು ನಾವು ಕಂಡಿದ್ದೇವೇ

  2. ಹೌದು.ರಾಜಕಾರಣ ಧರ್ಮ ನುಂಗಬಾರದು. ತುಂಬಾ ವರ್ಷಗಳ ಮೌನ ಮುರಿದು ವಸ್ತು ಸ್ಥಿತಿ ಮತ್ತು ನಿಮ್ಮ ಅತ್ಯುತ್ತಮ ವಿಚಾರಗಳನ್ನು ತಿಳಿಸಿದ್ದೀರಿ.🙏🙏🙏 ಧನ್ಯವಾದಗಳು.
    ಒಡೆದು ಆಳುವ ರಾಜಕಾರಣ ದಲ್ಲಿ ಪಳಗಿರುವ ಈ ರಾಜಕಾರಣಿಗಳು ವೋಟ್ ಬ್ಯಾಂಕ್ ಗಾಗಿ ಧರ್ಮವನ್ನು ಒಡೆಯಲು ಪ್ರಯತ್ನಿಸಿದರು. ಜನರು ಜಾಗೃತ ರಾದದರಿಂದ ಇದು ಸಾಧ್ಯ ವಾಗಲಿಲ್ಲ. ಧರ್ಮಕ್ಕೆ ಮನ್ನಣೆ ಸಿಗಲು ಇಲ್ಲ. ಬಸವ ತತ್ವ ಮನ್ನಿಸುವ ಎಲ್ಲರೂ ಕೂಡಿಕೊಂಡು ಬಸವ ಧರ್ಮ ಗುರುಗಳ ನೇತೃತ್ವ ದಲ್ಲಿ ಮುಂದೆ ಒಟ್ಟಾಗಿ ಸಾಗುವ ನಿರ್ಧಾರ ಮಾಡಿ ಧರ್ಮ ಕಟ್ಟುವ ಸಂರಕ್ಷಿಸುವ ಕಾರ್ಯಆರಂಭ ವಾಗಲಿ.

Leave a Reply

Your email address will not be published. Required fields are marked *

error: Content is protected !!