ವಿಜ್ಞಾನ ನೇಣು ಹಾಕಿಕೊಂಡಿತು !?

ಧಾರುಣ ಹತ್ಯೆಗೊಳಗಾದ ಮಕ್ಕಳು

ನೀವು ಅಳ್ಳೆದೆಯವರಾಗಿದ್ದರೆ ಇದನ್ನು ಓದಲೇಬೇಡಿ. ಈ ಇಬ್ಬರು ಹೆಣ್ಣುಮಕ್ಕಳ ಅಪ್ಪ ಅಮ್ಮ ಸಿಕ್ಕಾಪಟ್ಟೆ ಓದಿಕೊಂಡವರು. ತಾಯಿಯಂತೂ ಗೋಲ್ಡ್ ಮೆಡಲಿಸ್ಟ್. ಈ ಹುಡುಗಿಯರಲ್ಲಿ ಅಲೇಖ್ಯಾ ಎಂಬಿಎ ಓದಿದ್ದಾಳೆ, ದಿವ್ಯಾ ಬಿಬಿಎ ಓದಿಕೊಂಡಿದ್ದಾಳೆ, ಎ.ಆರ್.ರೆಹಮಾನ್ ಅವರ ಸಂಗೀತ ಶಾಲೆಯ ವಿದ್ಯಾರ್ಥಿನಿ ಕೂಡ.

ಈ ಮಕ್ಕಳ ಅಪ್ಪ-ಅಮ್ಮ ಒಬ್ಬ ಸ್ವಯಂ ಘೋಷಿತ ದೇವಮಾನವನ ಸಂಪರ್ಕಕ್ಕೆ ಬಂದಿದ್ದಾರೆ, ಅವನ ಪ್ರಭಾವಕ್ಕೆ ಒಳಗಾಗಿದ್ದಾರೆ. ಕಲಿಯುಗ ಅಂತ್ಯವಾಗುತ್ತಿದೆ, ಸತ್ಯಯುಗ ಆರಂಭವಾಗಲಿದೆ, ನೀವು ಅದಕ್ಕಾಗಿ ನಿಮ್ಮ ಮಕ್ಕಳಿಬ್ಬರ ಬಲಿದಾನ ಮಾಡಬೇಕು, ಮಾಡಿದರಷ್ಟೆ ನಿಮಗೆ ಸತ್ಯಯುಗದಲ್ಲಿ‌ಮರುಹುಟ್ಟು ಸಾಧ್ಯ ಎಂದು ನಂಬಿಸಿದ್ದಾನೆ ಆ ದೇವಮಾನವ.

ಓದಿ ಸರ್ಟಿಫಿಕೇಟ್ ಪಡೆದವರು ?!

ಆತ ಹೇಳಿದಂತೆಯೇ ತಾಯಿಯೇ ತ್ರಿಶೂಲದಿಂದ ಇಬ್ಬರೂ ಮಕ್ಕಳನ್ನು ತಿವಿದು ಸಾಯಿಸಿದ್ದಾಳೆ, ತಂದೆ ಇದನ್ನು ನೋಡುತ್ತ ನಿಂತಿದ್ದಾನೆ. ಇಬ್ಬರ ದೇಹಗಳು ಬೆತ್ತಲಾಗಿದ್ದವು. ಅವುಗಳ ಮೇಲೆ ಕೆಂಪು ಸೀರೆಯೊಂದನ್ಜು ಹೊದಿಸಲಾಗಿತ್ತು, ಬಾಯಿಗಳಲ್ಲಿ ಕಳಶಗಳನ್ನು ಹೂಡಲಾಗಿತ್ತು!

ಈ ದಾರುಣ ಕೊಲೆಗಳ ನಂತರ ಪೊಲೀಸರು ಸ್ಥಳಕ್ಕೆ ಬಂದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಯ್ಯಲು ಮುಂದಾದಾಗ ದಂಪತಿಗಳು ಪ್ರತಿರೋಧ ತೋರಿದ್ದಾರೆ. ಮಾರನೇ ದಿನ ಸತ್ಯಯುಗ ಆರಂಭಗೊಂಡು, ಇಬ್ಬರೂ ಮಕ್ಕಳೂ ಅಲ್ಲೇ ಹುಟ್ಟಿಬರಲಿದ್ದಾರೆ, ದೇಹಗಳಿಗೆ ಜೀವ ಬರಲಿದೆ ಎಂದು ನಂಬಿದ್ದರು ಆ‌ ದಂಪತಿಗಳು.

ವಿಜ್ಞಾನ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇದು ಯಾವುದೋ ವೆಬ್ ಸೀರೀಸ್ ಕಥೆಯಲ್ಲ. ನಡೆದಿರುವುದು ಚಿತ್ತೂರಿನಲ್ಲಿ. ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಇದೊಂದು ರೂಪಕ.

ದಿನೇಶ್ಕುಮಾರ ಬೆಂಗಳೂರು

3 thoughts on “ವಿಜ್ಞಾನ ನೇಣು ಹಾಕಿಕೊಂಡಿತು !?

  1. ಅವೈಜ್ಞಾನಿಕ ಧರ್ಮದ ಆಚರಣೆಗಳು , ಮೂಢನಂಬಿಕೆಯಲ್ಲಿ ಬಿದ್ದ ಅವಿದ್ಯಾವಂತರು ದೇವರ ಬಗ್ಗೆ ಅರಿವಿಲ್ಲದೆ, ಪುಂಡ ಪುರೋಹಿತರ ಮಾತಿಗೆ ಬೆಲೆ ಬಿಟ್ಟು ತಮ್ಮ ವೈಚಾರಿಕತೆಯನ್ನು, ಚಿಂತನೆಯ ಸಾಮರ್ಥ್ಯವನ್ನು ಕಳೆದುಕೊಂಡು ಒಡಲ ಕಂದಮ್ಮಗಳನ್ನು ಬಲಿಕೊಟ್ಟ ಮೂರ್ಖ ವಿಜ್ಞಾನ ವಿಭಾಗದ ಪ್ರೊಫೆಸರ್ ಐಟಿ ಟಾಲೆಂಟ್ ಟೀಚ್ ಮಾಡುವ ಶಿಕ್ಷಕಿ ನಾಚಿಕೆಯಾಗಬೇಕು ಇವರ ಬುದ್ಧಿಗೆ… ಸತ್ಯವಾಗಲೂ ವಿಜ್ಞಾನ ನೇಣು ಹಾಕಿಕೊಂಡಿದೆ… ಅವೈಜ್ಞಾನಿಕ ಧರ್ಮ ಮತ್ತು ದೇವಾಲಯಗಳಿಂದ, ಪುರೋಹಿತರಿಂದ ದೂರವಿದ್ದಾಗ ಮಾತ್ರ ಜನರು ಇಂಥ ಮೂಢ ಆಚರಣೆಗಳಿಂದ ಹೊರಬರಲು ಸಾಧ್ಯ… ಇವರನ್ನು ಪ್ರೇರೇಪಿಸಿದ ಪುಂಡ ಪುರೋಹಿತರನ್ನು ಬಂಧಿಸಿ ಮರಣದಂಡನೆ ನೀಡಬೇಕು

  2. ಎಷ್ಟೇ ವಿದ್ಯೆ ಕಲಿತವರು ಇದ್ದರೂ, ಮೂಢರ, ಮೂರ್ಖರ ಧರ್ಮ ಹಾಗು ಧರ್ಮದ ಸರಣಿ, ದಾರಿ ತಪ್ಪಿಸುತ್ತದೆ.ಗುರು ಬಸವಣ್ಣನವರ ವಚನ ಧರ್ಮದ ಸಂಪರ್ಕವಿದ್ದರೆ, ವಿದ್ಯೆ ಇಲ್ಲದೆಯೂ ಜ್ಞಾನಿ, ಸುಜ್ಞಾನಿಯಾಗಬಹುದು. ಆದರೆ
    ಕೇವಲ ಶುಸ್ಕ ವಿದ್ಯೆ ನೈಜ ಜ್ಞಾನ ಕೊಡಲಾರದು. ಇಂಥ ಪಾಖಂಡಿ ಜನರ
    ಪಾಶಕ್ಕೆ ಸಿಲುಕಿದ ಪಾಪಿಗಳೆಲ್ಲರು ವಿದ್ಯಾವಂತರಲ್ಲ.ಬರೀ ಅಕ್ಷರ ಬಲ್ಲವರು ಅಷ್ಟೇ.

  3. ವಿದ್ಯಾವಂತ ಮೂರ್ಖರ ಸಂಖ್ಯೆ ಹೆಚ್ಚಾಗುತ್ತದೆಂದು ತಿಳಿದಿದ್ದ ಗುರು ಬಸವಣ್ಣನವರು ವೈಚಾರಿಕ, ಕ್ರಾಂತಿ ಮಾಡಿದ್ದು ,ಜನಮಾನಸದಲ್ಲಿ ಬದಲಾವಣೆ ತೋರಿಸುತ್ತಿದ್ದು.

Leave a Reply

Your email address will not be published. Required fields are marked *

error: Content is protected !!