*ಸಂಗಮೇಶ ಸೌದತ್ತಿಮಠ ಎಂಬ ಅಜ್ಞಾನಿ*

*ಸಂಗಮೇಶ ಸೌದತ್ತಿಮಠ ಎಂಬ ಅಜ್ಞಾನಿ*

~ಡಾ. ಜೆ ಎಸ್ ಪಾಟೀಲ.

ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಅದೊಂದು ಹಿಂದುತ್ವದ ಸಮಾವೇಷದಂತೆ ಕಾಣುತ್ತಿದೆ. ಆರಂಭದಿಂದಲೂ ಅನೇಕ ವಿವಾದಾತ್ಮಕ ನಿರ್ಧಾರಗಳಿಂದ ಶೃಜನಶೀಲರ ಕೆಂಗಣ್ಣಿಗೆ ಗುರಿಯಾಗಿರುವ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ ತನ್ನ ತಪ್ಪು ನಿರ್ಧಾರಗಳನ್ನು ತದ್ವಾತದ್ವಾ ಸಮರ್ಥಿಕೊಳ್ಳುತ್ತ ತನ್ನದು ಒಂದು ರೀತಿಯ ದಪ್ಪ ಚರ್ಮ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಸಮ್ಮೇಳನದ ಅಧ್ಯಕ್ಷರೆ ಈ ಹಿಂದೊಮ್ಮೆ ಮೋದಿ ಕುರಿತು ಅಪ್ರೌಢ ಹಾಗು ಬಾಲೀಶವಾದ ಒಂದು ಕವಿತೆ ಬರೆದು ಕುಖ್ಯಾತರಾಗಿದ್ದರು. ಇನ್ನು ಸಮ್ಮೇಳನದ ಪ್ರತಿಯೊಂದು ಗೋಷ್ಠಿಗಳಲ್ಲಿ ಭಾಗವಹಿಸಿದ ಬಹುತೇಕ ಸಂಪನ್ಮೂಲ ವ್ಯಕ್ತಿಗಳು ಬಲಪಂಥೀಯ ಕೋಮುವಾದಿ ಹಿನ್ನೆಲೆಯವರು ಮತ್ತು ಬ್ರಾಹ್ಮಣ್ಯವನ್ನು ಪ್ರತಿಪಾದಿಸಿˌ ವೈಭವೀಕರಿಸುವವರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಂತದ್ದರಲ್ಲಿ ‘ಧರ್ಮದ ಹುಟ್ಟು ˌ ಬೆಳವಣಿಗೆ ಮತ್ತು ವಚನ ಪರಂಪರೆ’ ಎನ್ನುವ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳಿಗೆ ವಚನ ಪರಂಪರೆಯ ಗಂಧಗಾಳಿಯೂ ಗೊತ್ತಿಲ್ಲದಿರುವುದು ಒಂದುಕಡೆಯಾದರೆ ವೈದಿಕ ವ್ಯವಸ್ಥೆಯ ವಿರುದ್ದ ಬಂಡೆದ್ದು ಹುಟ್ಟಿದ ಚಳುವಳಿಯನ್ನು ಹಿಂದೂ ಧರ್ಮದ ಸುಧಾರಣೆಯ ಪರ್ವವೆಂಬ ಹುಸಿವಾದವನ್ನು ಪ್ರತಿಪಾದಿಸುವ ಗುಂಪಿನವರೆ ಈ ಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ವಚನ ಚಳುವಳಿಗೂ ಈ ವೀಣಾ ಬನ್ನಂಜೆ ಎನ್ನುವ ವೈದಿಕ ಧರ್ಮದ ಪೂರ್ಣಾವಧಿ ಪ್ರಚಾರಕಿಗೂ ಯಾವುದೇ ಸಂಬಂಧವಿಲ್ಲ. ಈ ಸಂಗಮೇಶ ಸೌದತ್ತಿಮಠ ಹೇಳಿಕೇಳಿ ವೀರಶೈವ ಆರಾಧ್ಯ ಬ್ರಾಹ್ಮಣ ಮತಕ್ಕೆ ಸೇರಿದವನಾಗಿದ್ದು ತಾಂತ್ರಿಕವಾಗಿ ಇವರ ಪೂರ್ವಜರು ಬಸವಪ್ರಣೀತ ಅವೈದಿಕ ಲಿಂಗಾಯತ ಧರ್ಮಕ್ಕೆ ಮತಾಂತರ ಹೊಂದಿದವರು. ಲಿಂಗಸಂಸ್ಕಾರಿಯಾದರೂ ತನ್ನ ಪೂರ್ವದ ಬ್ರಾಹ್ಮಣ್ಯ ತೊರೆಯದ ಸೈದತ್ತಿಮಠ ಒಬ್ಬ ಹಿರಿಯ ಸಂಶೋಧಕˌ ಅಥವಾ ಭಾಷಾತಜ್ಞನಾಗಲಿ ಅಲ್ಲವೆ ಅಲ್ಲ.

ಎರಡು ವರ್ಷಗಳ ಹಿಂದೆ ಬಸವ ಜಯಂತಿಯ ಸಂದರ್ಭದಲ್ಲಿ ಈ ಸೌದತ್ತಿಮಠ ಬಸವಣ್ಣ ಎಂದರೆ ಎತ್ತು ಎಂದು ಪ್ರಜಾವಾಣಿಯಲ್ಲಿ ಅಂಕಣ ಬರೆದು ಬಸವಣ್ಣನವರ ಬಗ್ಗೆ ತನಗಿದ್ದ ಈರ್ಶೆ ಮತ್ತು ಅಜ್ಞಾನವನ್ನು ಒಟ್ಟಿಗೆ ಪ್ರದರ್ಶಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಈ ವೀರೈಶವಾದಿಗಳು ಪೂರ್ವದಲ್ಲಿ ಆಂಧ್ರಮೂಲದ ಆರಾಧ್ಯ ಬ್ರಾಹ್ಮಣರಾಗಿದ್ದು ಬಸವಪ್ರಣೀತ ಅವೈದಿಕ ಲಿಂಗಾಯತ ಧರ್ಮಕ್ಕೆ ಮತಾಂತರ ಹೊಂದಿ ಬಸವಾದಿ ಶಿವಶರಣರ ವಿಚಾರಗಳಿಗೆ ವೈದಿಕ ಹಿನ್ನೆಲೆ ಹೆಣೆದು ಮುಗ್ಧ ಲಿಂಗಾಯತರ ಮೇಲೆ ಯಜಮಾನಿಕೆ ಸ್ಥಾಪಿಸಿದ ಪರಾವಲಂಬಿ ಪುರೋಹಿತಶಾಹಿಗಳು. ಇವರು ಬಸವಣ್ಣನೆಂದರೆ ಹಿಂದೂ ಧರ್ಮದ ಸುಧಾರಕನೆಂದು ಬಿಂಬಿಸಲು ಅಶಕಾಶವನ್ನು ಹುಡುಕುತ್ತಿರುತ್ತಾರೆ. ಪರಿಷತ್ತು ಬಲಪಂಥೀಯ ಕೋಮುವಾದಿಯ ಕೈಯಲ್ಲಿ ಸಿಕ್ಕಮೇಲೆ ಈ ಸಮ್ಮೇಳನಗಳು ಬ್ರಾಹ್ಮಣ್ಯದ ವೈಭವೀಕರಣಕ್ಕೆ ದುರ್ಬಳಕೆಯಾಗುತ್ತಿರುವುದು ದುರಂತದ ಸಂಗತಿ. ಇನ್ನು ಈ ಸೌದತ್ತಿಮಠ ಎತ್ತಿದ ಪ್ರಶ್ನೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸೋಣ.

೧. “ವಚನಕಾರರು ವೇದ ವಿರೋಧಿಗಳು ಎನ್ನುವುದು ಸುಳ್ಳು”

ಇಲ್ಲಿಯವರೆಗೆ ಲಭ್ಯವಿರುವ ೨೨ ಸಾವಿರ ವಚನಗಳ ಪೈಕಿ ಕನಿಷ್ಠ ೩೩೬ ವಿವಿಧ ಶರಣರ ವಚನಗಳಲ್ಲಿ ವೇದ-ಶಾಸ್ತ್ರ ˌ ಆಗಮ-ಪುರಾಣಗಳನ್ನು ಶರಣರು ತೀಕ್ಷ್ಣ ಶಭ್ಧಗಳಲ್ಲಿ ವಿಡಂಬಿಸಿ ಟೀಕಿಸಿರುವ ಕುರಿತು ಹಿರಿಯ ಸಾಹಿತಿ ಎಸ್ ಜಿ ಸಿದ್ಧರಾಮಯ್ಯನವರು “ಕ್ರಾಂತಿಯ ಹೆಜ್ಜೆ” ಎನ್ನುವ ಗ್ರಂಥದಲ್ಲಿ ಸಂಪಾದಿಸಿದ್ದಾರೆ. ಈ ಗ್ರಂಥವನ್ನು ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳ ಮಠವು ಪ್ರಕಟಿಸಿದೆ. ಈ ಸೌದತ್ತಿಮಠ ತನ್ನ ಅಜ್ಞಾನವನ್ನು ನೀಗಿಸಿಕೊಳ್ಳಲು ಈ ಗ್ರಂಥವನ್ನು ಓದಿಕೊಳ್ಳಲಿ.

೨. “ಬಸವಣ್ಣನವರು ಹಿಂದೂ ಧರ್ಮಕ್ಕೆ ಪರ್ಯಾಯವಾಗಿ ಹೊಸ ಧರ್ಮ ಹುಟ್ಟುಹಾಕಲಿಲ್ಲ.”

ಎರಡು ದಶಗಳಿಗೆ ಮೊದಲು ನಾಡಿನ ಹಿರಿಯ ಸಮಾಜವಾದಿಗಳುˌ ಮಾಜಿ ಶಾಸಕರಾಗಿದ್ದ ಲಿಂಗೈಕ್ಯ ನೀಲಗಂಗಯ್ಯಾ ಪೂಜಾರ್ ಎನ್ನುವ ಶರಣ ಜಂಗಮರು “ಹಿಂದುತ್ವಕ್ಕೆ ಪ್ರತಿಧ್ವಂದ್ವಿಯಾಗಿ ಉದಿಸಿದ ಲಿಂಗಾಯತ ಧರ್ಮ” ಎನ್ನುವ ಮೌಲಿಕ ಗ್ರಂಥವನ್ನು ರಚಿಸಿದ್ದಾರೆ. ಈ ಗ್ರಂಥದಲ್ಲಿ ಹಿಂದೂ ಎಂದು ತಪ್ಪಾಗಿ ಕರೆಯಲ್ಪಡುವ ಬ್ರಾಹ್ಮಣ ಧರ್ಮದˌ ಮತ್ತು ವೀರಶೈವ ಪಂಚಾಚಾರ್ಯರ ಬೂಟಾಟಿಕೆಗಳನ್ನು ಎಳೆಎಳೆಯಾಗಿ ಬಿಚ್ಚಿದ್ದಾರೆ. ಸೌದತ್ತಿಮಠ ಈ ಗ್ರಂಥವನ್ನು ಚೆನ್ನಾಗಿ ಓದಿಕೊಳ್ಳಬೇಕು.

೩. “ಕೆಲವರಿಗೆ ಹಿಂದೂ ಧರ್ಮ ಟೀಕಿಸುವ ಚಾಳಿಯಿದೆ”

ಸೌದತ್ತಿಮಠ ತನ್ನ ಉಪನ್ಯಾಸದಲ್ಲಿ ವಚನ ಚಳುವಳಿಯ ಕುರಿತು ಮಾತನಾಡುವುದು ಬಿಟ್ಟು ಹಿಂದೂ ಎಂದು ತಪ್ಪಾಗಿ ಕರೆಯಲ್ಪಡುವ ಬ್ರಾಹ್ಮಣ ಧರ್ಮದ ವಕ್ತಾರನಂತೆ ಮಾತನಾಡಿದ್ದು ಖಂಡನಾರ್ಹ.

ಇನ್ನು ಈ ಸೌದತ್ತಿಮಠ ಆರಾಧಿಸುವ ವೀರಶೈವ ಪಂಚಾಚಾರ್ಯರು ತಮ್ಮದೊಂದು ವೀರಶೈವವೆನ್ನುವ ಧರ್ಮವಿದೆˌ ಅದನ್ನು ಐದು ಜನ ಅಯೋನಿಜˌ ಲಿಂಗೋದ್ಭವ ಆಚಾರ್ಯರು ಯುಗಯುಗಗಳಲ್ಲಿ ಸ್ಥಾಪಿಸಿದ್ದಾರೆ ಎಂದು ಹೇಳಿಕೊಂಡು ಅಡ್ಡಾಡುತ್ತಾರೆ. ಆದರೆ ಈ ಸೌದತ್ತಿಮಠ ತಾನು ಪಂಚಾಚಾರ್ಯರ ಯಜಮಾನಿಕೆಯ ವೀರಶೈವ ಧರ್ಮಕ್ಕೆ ಸೇರಿದವನೊ ಅಥವಾ ಬ್ರಾಹ್ಮಣರ ಯಜಮಾನಿಕೆಯ ಹಿಂದೂ ಧರ್ಮಕ್ಕೆ ಸೇರಿದವನೊ ಸ್ಪಷ್ಟಪಡಿಸಬೇಕು. ಇದರೆ ಈ ಪಂಚಾಚಾರ್ಯರಾಗಲಿˌ ಅದರ ವಕ್ತಾರ ಸೌದತ್ತಿಮಠ ಆಗಲಿ ಬಸವಣ್ಣ ಸ್ಥಾಪಿಸಿದ ಅವೈದಿಕ ಲಿಂಗಾಯತ ಧರ್ಮಕ್ಕೆ ಮತಾಂತರ ಹೊಂದಿದವರಾಗಿದ್ದು ಇವರು ಅರ್ಧ ಲಿಂಗಾಯತರು ಎನ್ನುವುದಂತೂ ಸತ್ಯ.

ಕೊನೆಯದಾಗಿ ಈ ಸೌದತ್ತಿಮಠಗೆ ಒಂದೆರಡು ಪ್ರಶ್ನೆಗಳು:

ಬಸವಣ್ಣನವರು ಹಿಂದೂ ಧರ್ಮಕ್ಕೆ ಪ್ರತಿಧ್ವಂಧ್ವಿಯಾಗಿ ಲಿಂಗಾಯತವೆಂಬ ಪ್ರಗತಿಪರ ಅವೈದಿಕ ಧರ್ಮ ಸ್ಥಾಪಿಸದೆ ಕೇವಲ ಹಿಂದೂ ಧರ್ಮದ ಸುಧಾರಣೆ ಮಾಡಿದ್ದರೆ ಕಲ್ಯಾಣದಲ್ಲಿ ಸನಾತನಿ ವೈದಿಕರು ಮತ್ತು ಆಗಮಿಕ ಶೈವರು ಬಸವಣ್ಣನವರನ್ನು ಗಡಿಪಾರು ಮಾಡಿಸಿˌ ಶರಣರ ಕಗ್ಗೊಲೆ ಮಾಡಿಸಿ ಶರಣರು ಬರೆದ ವಚನ ರಾಶಿಯನ್ನು ಸುಟ್ಟಿದ್ದೇಕೆ?

೨. ಬಸವಣ್ಣನವರು ಜನಿವಾರ ಕಿತ್ತೆಸೆದುˌ ಹಿಂದೂ ಎಂದು ತಪ್ಪಾಗಿ ಕರೆಯಲ್ಪಡುವ
ಬ್ರಾಹ್ಮಣ ಧರ್ಮವನ್ನು ದಿಕ್ಕರಿಸಿ ಹೊರಬಂದಿದ್ದೇಕೆ?

೩. ಕರ್ಮಟ ಬ್ರಾಹ್ಮಣ ಧರ್ಮವನ್ನು ದಿಕ್ಕರಿಸಿದ ಬಸವಣ್ಣ ಅದೇ ಕರ್ಮಠ ಆಗಮಿಕ ಆರಾಧ್ಯ ಬ್ರಾಹ್ಮಣರ ವೀರಶೈವ ಮತ ಸೇರಲು ಸಾಧ್ಯವೆ? ಹಾಗೆ ಸೇರಿದ್ದಾದರೆ ಇಡೀ ಶರಣ ಸಂಕುಲ ರಚಿಸಿರುವ ಲಭ್ಯ ೨೨ ಸಾವಿರ ವಚನಗಳಲ್ಲಿ ಬಸವಾದಿ ಶಿವಶರಣರು ಈ ಕಾಲ್ಪನಿಕ ಪಂಚಾಚಾರ್ಯರನ್ನಾಗಲಿ ಅಥವಾ ಬಸವಣ್ಣನವರ ಗುರುವೆಂದು ತದನಂತರದಲ್ಲಿ ಸುಳ್ಳುತನದಿಂದ ಸೇರಿರಲಾದ ಜಾತವೇದಮುನಿಯ ಕುರಿತಾಗಲಿ ಎಲ್ಲೂ ಪ್ರಸ್ತಾಪಿಸಲಿಲ್ಲವೇಕೆ?

ಈ ತರಹದ ಅನೇಕ ಪ್ರಶ್ನೆಗಳು ಸೌದತ್ತಿಮಠˌ ಇಡೀ ವೀರಶೈವ ಪಠಾಲಂ ಹಾಗು ಅವರಿಗೆ ಕುಮ್ಮಕ್ಕು ನೀಡುತ್ತಿರುವ ವೈದಿಕರಿಗೆ ಬಸವಾನುಯಾಯಿಗಳು ಹಾಕುತ್ತಾರೆ. ಇದಕ್ಕೆಲ್ಲ ಇವರು ಸೂಕ್ತ ಉತ್ತರ ನೀಡಲಾಗದೆ ವಿತಂಡವಾದವನ್ನು ಮಾಡಬಹುದೆ ಹೊರತು ಯಾವುದೆ ತಾರ್ಕಿಕ ಸತ್ಯಗಳನ್ನಾಗಲಿ ಅಥವಾ ಐತಿಹಾಸಿಕ ದಾಖಲೆಗಳನ್ನಾಗಲಿ ನೀಡಲಾಗದು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮತ್ತು ಆತನ ಹಿಂದಿರುವ ಕೋಮುವಾದಿ ಶಕ್ತಿಗಳು ಬಸವಾದಿ ಶಿವಶರಣರ ಜೀವನ್ಮುಖಿ ವಚನ ಚಳುವಳಿಯನ್ನು ವೈದಿಕ ಮೂಸೆಯಲ್ಲಿ ವಿಮರ್ಶಿಸುವ ವ್ಯರ್ಥ ಪ್ರಯತ್ನ ನಿಲ್ಲಿಸಬೇಕು. ವೀಣಾ ಬನ್ನಂಜೆಯ ಶರಣರ ವಚನಗಳನ್ನು ವೈದಿಕತೆಯ ಹಿನ್ನೆಲೆಯಲ್ಲಿ ವಿಮರ್ಶಿಸುವ ಸೂಕ್ಷ್ಮ ಜಾಣತನ ಬಸವಾನುಯಾಯಿಗಳು ಗ್ರಹಿಸಿದ್ದಾರೆ. ಇವರ ಎಲ್ಲಾ ಕುಟಿಲ ಹುನ್ನಾರಗಳನ್ನು ಲಿಂಗಾಯತ ಧರ್ಮಾನುಯಾಯಿಗಳು ಅರಿತುಕೊಂಡು ತಕ್ಕ ಉತ್ತರ ನೀಡಲು ಸಿದ್ಧರಿದ್ದಾರೆನ್ನುವ ಸಂಗತಿ ಇವರು ಮರೆಯದಿರಲಿ.

~ಡಾ. ಜೆ ಎಸ್ ಪಾಟೀಲ.

2 thoughts on “*ಸಂಗಮೇಶ ಸೌದತ್ತಿಮಠ ಎಂಬ ಅಜ್ಞಾನಿ*

  1. ಇವರು ವೀರಶೈವರೂ ಅಲ್ಲ, ಲಿಂಗಾಯತರೂ ಅಲ್ಲ.
    ಲಿಂಗಿ ಬ್ರಾಹ್ಮಣರೆಂದು ಪರಿಗಣಿಸುವುದೆ ಲೇಸು.

Leave a Reply

Your email address will not be published. Required fields are marked *

error: Content is protected !!