*ವೇದವ್ಯಾಸರು ಹೇಳಿದ ಶಿವ ಪುರಾಣದಲ್ಲಿ ಮಹಿಳೆಯರ ಕುರಿತು ಏನೇನು ಹೇಳಲಾಗಿದೆ?*
ಶ್ರೀ ವೇದವ್ಯಾಸರು ಹೇಳಿದರು ಎನ್ನಲಾದ ಶಿವಪುರಾಣಸಾರವನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಪ್ರಜಾವಾಣಿ ಮೂಲಕ ಇವತ್ತು ಶುಭಮುಹೂರ್ತದಲ್ಲಿ ನಮಗೆ ತಿಳಿಸಿದ ಮುಖ್ಯವಾದ ೨೦ ಅಂಶಗಳೆಂದರೆ-
1. ಪತಿ ಊಟಮಾಡಿದ ನಂತರವೇ ಪತ್ನಿಯಾದವಳು ಊಟ ಮಾಡಬೇಕು.
2. ಗಂಡ ಊಟ ಮಾಡಿ ಉಳಿದುದನ್ನು ಪತ್ನಿಯಾದವಳು ಮಹಾಪ್ರಸಾದವೆಂದು ತಿಳಿದು ಸೇವಿಸಬೇಕು.
3. ಪತಿವ್ರತೆಯಾದವಳು ಗೃಹಕಾರ್ಯದಲ್ಲಿ ದಕ್ಷಳಾಗಿರಬೇಕು.
4. ಪತಿಯ ಅಪ್ಪಣೆಯಿಲ್ಲದೆ ಉಪವಾಸ, ವ್ರತ, ಮುಂತಾದವುಗಳನ್ನು ಮಾಡಬಾರದು.
5. ಯಾವುದೇ ಕೆಲಸ ಮಾಡಬೇಕಾದರೂ ಪತಿಯ ಅಪ್ಪಣೆ ಪಡೆಯುವುದು ಸೂಕ್ತವಾದುದು.
6. ಸುಖವಾಗಿ ಕುಳಿತಿರುವ ಮತ್ತು ರಸವಿಲಾಸದಲ್ಲಿ ಪ್ರವೃತ್ತನಾಗಿರುವ ಪತಿಯನ್ನು ಯಾವ ಪತ್ನಿಯೂ ಕಾರ್ಯಾಂತರ ಮಾಡಿ ಎಬ್ಬಿಸಬಾರದು.
7. ತನ್ನ ಪತಿಯು ನಪುಂಸಕನಾಗಲೀ ದರಿದ್ರನಾಗಲೀ ರೋಗಿಯಾಗಲೀ ವೃದ್ಧನಾಗಲೀ ಸುಖಿಯಾಗಲೀ ದುಃಖಿಯಾಗಲೀ, ಹೇಗಿದ್ದರೂ ಅಂತಹವನನ್ನು ತಿರಸ್ಕರಿಸಬಾರದು.
8. ಪತಿವ್ರತೆಯಾದವಳು ಅರಿಶಿನ, ಕುಂಕುಮ, ಚಂದನ, ಕಪ್ಪುರವಿಕೆ, ತಾಂಬೂಲ, ಮಂಗಳದ್ರವ್ಯಗಳು, ತಲೆಯನ್ನು ಬಾಚಿ ಗಂಟುಹಾಕಿಕೊಳ್ಳುವುದು, ಬಳೆಗಳು, ಓಲೆ ಮುಂತಾದ ಮುತ್ತೈದೆ ಅಲಂಕಾರವನ್ನು ಮಾಡಿಕೊಳ್ಳಬೇಕು. ಹಾಗಿಲ್ಲದಿದ್ದರೆ, ಪತಿಯ ಆಯುಸ್ಸು ಕ್ಷೀಣವಾಗುವುದು.
9. ಪತಿಯನ್ನು ದ್ವೇಷಿಸುವ ಹೆಂಗಸನ್ನು ಯಾವತ್ತೂ ಮಾತನಾಡಿಸಬಾರದು.
10. ಒಬ್ಬಳೇ ಬೇರೆ ಸ್ಥಳದಲ್ಲಿ ಕುಳಿತುಕೊಳ್ಳಬಾರದು.
11. ನಗ್ನಳಾಗಿ ಸ್ನಾನ ಮಾಡಕೂಡದು.
12. ಒರಳುಕಲ್ಲು, ಒನಕೆ, ಬೀಸುವಕಲ್ಲು, ಯಂತ್ರ, ಹೊಸಲುಗಳ ಮೇಲೆ ಕುಳಿತು ಕೊಳ್ಳಬಾರದು.
13. ಮುಖ್ಯವಾಗಿ ಪತಿಯ ಮನಸ್ಸಿಗೆ ಸಂತೋಷವಾಗುವಂತೆ ನಡೆದುಕೊಳ್ಳಬೇಕು.
14. ಪತಿಯು ಸಂತೋಷಗೊಂಡಿದ್ದರೆ ತಾನೂ ಸಂತೋಷಪಡಬೇಕು. ಪತಿಯು ದುಃಖಿಸುತ್ತಿದ್ದರೆ ತಾನು ದುಃಖಿಸಬೇಕು.
15. ತುಪ್ಪ, ಉಪ್ಪು, ಎಣ್ಣೆ ಮುಂತಾದವುಗಳು ಮುಗಿದುಹೋದರೆ ಪತಿವ್ರತೆಯಾದವಳು ‘ಮುಗಿದು ಹೋಗಿವೆ’ ಎಂದು ನಿಷ್ಠುರವಾಗಿ ನುಡಿದು ಪತಿಗೆ ಬೇಸರವನ್ನುಂಟುಮಾಡಬಾರದು.
16. ಗಂಡನ ಮಾತು ಮೀರಿ ನಡೆವ ಸತಿಯು ಸತ್ತ ನಂತರ ನರಕಕ್ಕೆ ಹೋಗುವಳು.
17. ಯಾವ ಸ್ತ್ರೀಯು ಕೋಪಗೊಂಡು ಪತಿಯನ್ನು ಎದುರು ವಾದಿಸುವಳೋ, ಅವಳು ಮರುಜನ್ಮದಲ್ಲಿ ಹೆಣ್ಣುನಾಯಿಯಾಗಿಯೋ, ಹೆಣ್ಣುನರಿಯಾಗಿಯೋ ಹುಟ್ಟುವಳು.
18. ಪತಿಯೊಡನೆ ಕಲಹವಾಡ ಬಾರದು. ಹಿರಿಯರ ಹತ್ತಿರ ಗಟ್ಟಿಯಾಗಿ ಮಾತನ್ನಾಗಲೀ ಆಡಕೂಡದು. ಗಟ್ಟಿಯಾಗಿ ನಗಲೂ ಬಾರದು.
19. ಪತಿಯು ಹೊರಗಡೆಯಿಂದ ಮನೆಗೆ ಬಂದೊಡನೆಯೇ ಜಾಗ್ರತೆಯಾಗಿ ಊಟಮಾಡಿಸಿ, ತಾಂಬೂಲವನ್ನು ಕೊಟ್ಟು ಚೆನ್ನಾಗಿ ಉಪಚರಿಸಬೇಕು. ಪಲ್ಲಂಗದ ಮೇಲೆ ಪತಿ ವಿಶ್ರಮಿಸುವ ವ್ಯವಸ್ಥೆ ಮಾಡಬೇಕು. ನಂತರ ಪತಿಯ ಪಾದಸೇವೆಯನ್ನು ಮಾಡಬೇಕು.
20. ಮೃದುವಾಗಿ ಪತಿಯ ಕಾಲನ್ನು ಒತ್ತುತ್ತಾ, ಸವಿನಯವಾಗಿ ಹಿತವಾದ ಮಾತನಾಡುತ್ತಾ ಅವನ ಶ್ರಮವನ್ನೆಲ್ಲಾ ಹೋಗಲಾಡಿಸಬೇಕು .
ಇನ್ನು ಇದು ಪಠ್ಯ ಪುಸ್ತಕಕ್ಕೆ ಸೇರುವುದು ಒಂದು ಬಾಕಿಯಿದೆ. ಹೆಣ್ಣುಮಕ್ಕಳು ಮನೆಯಲ್ಲಿರಬೇಕು ಎಂದು ಹಿಂದೆ ಮೋಹನ ಭಾಗವತರು ಹೇಳಿದ್ದೂ ಇದಕ್ಕೇ ಅಲ್ಲವೇ? ನಮ್ಮ ಪರಂಪರೆ ಎಂದರೇನು ಸಾಮಾನ್ಯವೇ?