ನನಗರ್ಥವಾದ ಗಾಂಧಿ -* ಗಾಂಧಿ‌153 *

* ನನಗರ್ಥವಾದ ಗಾಂಧಿ *
* ಗಾಂಧಿ‌153 *

ಮಹಾತ್ಮ ‘ಗಾಂಧೀಜಿ” ಬಹುಶಃ ಈ ಹೆಸರನ್ನು ಕೇಳದವರು ಭಾರತದಲ್ಲಿ ಯಾರೂ ಇರಲಿಕ್ಕಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಗಾಂಧಿಯ ಹೆಸರು ಪರಿಚಿತ. ಗಾಂಧಿಯ ಬಗ್ಗೆ ಓದಿಲ್ಲವಾದರೂ ನೋಟಿನಲ್ಲಿ ನೋಡಿದೊಡನೆಯೇ “ಇದು ಗಾಂಧಿ ನೋಟು” ಎಂದು ಹೇಳುವಷ್ಟು ಪರಿಚಿತ. ಜಗತ್ತಿನ ಎಲ್ಲ ದೇಶಗಳಿಗೂ ಗಾಂಧೀಜಿ ಗೊತ್ತು. ನಾನು ಚಿಕ್ಕವನಿದ್ದಾಗಲೂ ಗಾಂಧೀಜಿ ನನಗೆ ಪರಿಚಿತ. ಸ್ವಾತಂತ್ರ್ಯ ತಂದು ಕೊಟ್ಟಿದ್ದು ಗಾಂಧಿ ಎಂಬ ಮಾತು ಮಾತ್ರ ಮನಸ್ಸಲ್ಲಿತ್ತು. ಗಾಂಧಿ ಜಯಂತಿಯಂದು ಪೂಜೆ ಮಾಡಿ, ಊದು ಕಡ್ಡಿ ಬೆಳಗಿಟ್ಟು, ಭಾಷಣ ಕೇಳುವಷ್ಟಕ್ಕೆ ಮಾತ್ರ ಗಾಂಧೀಜಿ ಸೀಮಿತವಾಗಿದ್ದರು. ಸ್ವಾತಂತ್ರ್ಯ ದಿನಾಚರಣೆಯ ದಿನ ಗಾಂಧೀಜಿ ವೇಷ ಹಾಕು ಎಂದು ಶಿಕ್ಷಕರು ಹೇಳಿದರೆ ಅದರಿಂದ ನುಣುಚಿಕೊಳ್ಳುವ ಹುಡುಗ ನಾನು. ಕಾರಣ ತಲೆ ಗುಂಡು ಹೊಡಿಸಬೇಕಾಗುತ್ತದೆ ಎಂದು.

ಬೆಳೆಯುತ್ತಾ ಬೆಳೆಯುತ್ತಾ ಪ್ರೌಢಶಾಲೆಗಳಲ್ಲಿ ಗಾಂಧೀಜಿಯ ಬಗ್ಗೆ ಋಣಾತ್ಮಕ ಅಂಶಗಳನ್ನೇ ಕೇಳಿದ್ದೇ ಹೆಚ್ಚು. ಭಾರತ ಪಾಕಿಸ್ತಾನ ವಿಭಜನೆಗೆ ಗಾಂಧೀಜೀಯೇ ಕಾರಣ ಎಂದು ಕೆಲ ಶಿಕ್ಷಕರೂ ಹೇಳುತ್ತಿದ್ದರು. ಗಾಂಧೀಜಿ ಯುವತಿಯರ ಹೆಗಲ ಮೇಲೆ ಕೈ ಹಾಕೊಂಡು ಒಡಾಡ್ತಿದ್ರು. ಮುಸ್ಲಿಂ ರನ್ನು ಓಲೈಸುವುದೇ ಅವರ ಕೆಲಸವಾಗಿತ್ತು. ಇತ್ಯಾದಿ ಆರೋಪಗಳು ಮಾಮೂಲಾಗಿ ಕೇಳಿಬರುತ್ತಿದ್ದವು. ದಲಿತ ವಿರೋಧಿ ಎಂಬ ಆರೋಪ ಇತ್ತಿಚೆಗೆ ಪ್ರಚಾರ ಪಡೆಯುತ್ತಿದೆ. ಆಟೋಟಗಳಲ್ಲಿ ಮೈಮರೆಯುತ್ತಿದ್ದ ಆ ವಯಸ್ಸಿನಲ್ಲಿ ಗಾಂಧೀಜಿಯನ್ನು ಗಂಭೀರವಾಗಿ ತೆಗೆದುಕೊಳ್ಳಲ್ಲಿಕ್ಕೆ ಆಗಲಿಲ್ಲ. ಆದರೆ ಗಾಂಧೀಜಿ ಎಂದರೆ ಏನೋ ಒಂದು ತರಹದ ಗೌರವ ಇದ್ದೇ ಇತ್ತು. ವಿಜ್ಞಾನ ವಿಭಾಗ ಆರಿಸಿಕೊಂಡ ನನಗೆ ಇತಿಹಾಸ, ಸಾಹಿತ್ಯ ಮುಂತಾದವುಗಳ ಬಗ್ಗೆ ಆಸಕ್ತಿ ಅಷ್ಟಕ್ಕಷ್ಟೆ.

ಶಿಕ್ಷಕನಾಗಿ ಸೇವೆ ಸಲ್ಲಿಸಲು ಆರಂಭಿಸಿದ ಮೇಲೆಯೂ ಗಾಂಧೀಜಿಯ ಬಗ್ಗೆ ಇದ್ದ ಚಿತ್ರಣ ಬದಲಾಗಿರಲಿಲ್ಲ. ಒಂದು ದಿನ ಕೊ.ಚೆನ್ನಬಸಪ್ಪನವರ “ಗಾಂಧಿ ಕಗ್ಗೊಲೆ” ಪುಸ್ತಕ ಆಕಸ್ಮಿಕವಾಗಿ ನನ್ನ ಕೈಗೆ ಸಿಕ್ಕಿತು. ಮೊದಲ ಪುಟ ಓದಲು ಆರಂಭಿಸಿದ ನಾನು ಗಾಂಧೀಜಿಯ ಹತ್ಯೆಗೆ ನಡೆಸಿದ ಸಂಚು, ಪ್ರಯತ್ನಗಳನ್ನು ಓದುತ್ತಾ ಉದ್ವೇಗಕ್ಕೊಳಗಾಗಿದ್ದು ಮಾತ್ರ ಸತ್ಯ. ಪುಸ್ತಕ ಓದಿದ ಮೇಲೆ ಒಬ್ಬ ವಯೋವೃದ್ಧನಾದ ಗಾಂಧೀಜಿಯನ್ನು ಕೊಲ್ಲಲ್ಲು ಇಷ್ಟೆಲ್ಲಾ ಸರ್ಕಸ್ ಏಕೆ ಮಾಡಿದರು? ಗಾಂಧೀಜಿ ಮಾಡಿದ ಅಂತಹ ಕೆಲಸವಾದರೂ ಏನು? ಕೊಲೆಗಾರರಿಗೆ ಜಗತ್ತು ಗೌರವಿಸುವ ವ್ಯಕ್ತಿಯ ಮೇಲೆ ಇಷ್ಟೊಂದು ದ್ವೇಷ ಏಕಿತ್ತು? ಮುಂತಾದ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿ ಅಂದು ಶುರುವಾಯಿತು ನನ್ನ ಗಾಂಧಿ ಪಯಣ.

ಒಂದೊಂದೇ ಪ್ರಶ್ನೆಗಳಿಗೆ ಉತ್ತರ ಕೂಡ ಸಿಕ್ಕಿತು. ಭಾರತ ಪಾಕಿಸ್ತಾನ ವಿಭಜನೆಯನ್ನು ಕೊನೆಯವರೆಗೂ ವಿರೋಧಿಸಿದ ಗಾಂಧೀಜಿ ವಿಭಜನೆಗೆ ಕಾರಣ ಅಲ್ಲವೇ ಅಲ್ಲ. ಅತಿಯಾಗಿ ನಂಬಿದ ಶಿಷ್ಯ ಬಳಗವೇ ವಿಭಜನೆಗೆ ಒಪ್ಪಿ ನಂತರ ಗಾಂಧೀಜಿಗೆ ತಿಳಿಸಿದಾಗ ಅವರು ಅಸಹಾಯಕರಾಗಿದ್ದರು. ಆ ಕಡೆ ಜಿನ್ನಾ ಕೂಡ ಕೂಡಿರಲು ಸಿದ್ಧರಾಗಿರಲಿಲ್ಲ. ಹೀಗಿರುವಾಗ ಗಾಂಧೀಜಿ ಹೇಗೆ ಕಾರಣ ಆಗ್ತಾರೆ. ತನ್ನ ಮೊಮ್ಮಕ್ಕಳ ಹೆಗಲ ಮೇಲೆ ಕೈ ಹಾಕಿದ ಗಾಂಧೀಜಿ ಕೆಲವು ವಿಕೃತರಿಗೆ ರಂಗೀಲಾ ಗಾಂಧೀಯಾಗಿ ಕಾಣುವುದು ಸಹಜ. ಕಾಮಾಲೆ ಕಣ್ಣಿಗೆ ಕಾಣುವುದು ಹಳದಿ ತಾನೇ. ದೇಶಾದ್ಯಂತ ಅಲ್ಪ ಸಂಖ್ಯಾತ ಮುಸ್ಲಿಂ ಮಾರಣ ಹೋಮ ನಡೆಯುತ್ತಿದ್ದರೆ ನಾನೊಬ್ಬ ಸನಾತನಿ ಹಿಂದೂ ಎಂದು ಹೇಳಿಕೊಂಡ ಗಾಂಧೀಜಿ ಅದ್ಹೇಗೆ ಸುಮ್ಮನಿರಲು ಸಾಧ್ಯ? ಅದಕ್ಕೆ ಮುಸ್ಲಿಂ ರಕ್ಷಣೆಗೆ ಸಮಸ್ತ ಹಿಂದೂಗಳಿಗೆ ಕರೆಕೊಟ್ಟು ಕೋಮುವಾದಿಗಳ ಕೋಪಕ್ಕೆ ತುತ್ತಾದರು. ಇನ್ನೂ ಅಸ್ಪೃಶ್ಯತೆ ನಿವಾರಣೆಗಾಗಿ ದೇಶ ಸುತ್ತಿ ಶ್ರಮಿಸಿದ ಗಾಂಧೀಜಿ, ಲಕ್ಷ್ಮೀ ಎಂಬ ಅಸ್ಪೃಶ್ಯ ಮಗಳನ್ನು ದತ್ತು ತೆಗೆದುಕೊಂಡು ಬೆಳೆಸಿದ ಗಾಂಧೀಜಿ, ಅಸ್ಪೃಶ್ಯರಿಗೆ ದೇವಸ್ಥಾನದೊಳಗೆ ಪ್ರವೇಶ ಇದ್ದರೆ ಮಾತ್ರ ಆ ಊರಿಗೆ ಬರುವುದಾಗಿ ಹೇಳುತ್ತಿದ್ದ ಗಾಂಧೀಜಿ, ಮದುವೆಯಲ್ಲಿ ಅಸ್ಪೃಶ್ಯ ಹೆಣ್ಣು ಅಥವಾ ಗಂಡು ಇದ್ದರೆ ಮಾತ್ರ ಮದುವೆಗೆ ಹೋಗುವುದಾಗಿ ಘೋಷಿಸಿದ ಗಾಂಧೀಜಿ, ಸಂವಿಧಾನ ಸಭೆಗೆ ಅಂದಿನ ಕಾಂಗ್ರೆಸ್‌ನ ಕಟು ಟೀಕಾಕಾರಾಗಿದ್ದ ಅಂಬೇಡ್ಕರ್ ಅವರನ್ನು ಆಯ್ಕೆ ಮಾಡುವಲ್ಲಿ ನೆಹರೂಗೆ ಸಲಹೆ ನೀಡಿ ಹಠ ಹಿಡಿದ ಗಾಂಧೀಜಿ, ‘ಸ್ವಾತಂತ್ರ್ಯ ಬಂದಿರುವುದು ಭಾರತಕ್ಕೆ ಹೊರತು ಕಾಂಗ್ರೆಸ್ಸಿಗಲ್ಲ’ ಎಂದು ನೆಹರೂ ಅವರನ್ನು ಎಚ್ಚರಿಸಿ ಕಾಂಗ್ರೆಸ್ ವಿರೋಧಿಗಳಾಗಿದ್ದ ಡಾ. ಅಂಬೇಡ್ಕರ್ ಆದಿಯಾಗಿ ಕೆಲವು ವಿದ್ವತ್ ಪೂರ್ಣ ಜ್ಞಾನಿಗಳನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಶಾಲ ಮನೋಭಾವದ ಗಾಂಧೀಜಿ, ಕಸ್ತೂರಿ ಬಾ ನಿಧನದ ನಂತರ ಅವರ ಅಳಿದುಳಿದ ಆಭರಣಗಳನ್ನು ತನ್ನ ಸೊಸೆಯಂದಿರಿಗೆ ನೀಡದೆ ಒಬ್ಬ ಅಸ್ಪೃಶ್ಯ ಹುಡುಗಿಯನ್ನೇ ತನ್ನ ಮಗಳೆಂದು ಭಾವಿಸಿ ಅವಳಿಗೆ ನೀಡಿದ ಗಾಂಧೀಜಿ, ಸ್ವತಂತ್ರ ಭಾರತಕ್ಕೆ ಚಕ್ರಯ್ಯನ್ನೆಂಬ ಅಸ್ಪೃಶ್ಯ ವ್ಯಕ್ತಿಯನ್ನು ರಾಷ್ಟ್ರಪತಿ ಸ್ಥಾನಕ್ಕೆ ಸೂಚಿಸಿದ್ದ ಗಾಂಧೀಜಿ ದಲಿತ ವಿರೋಧಿಯಾಗಿ ಕಾಣುವುದು ಆಶ್ಚರ್ಯ ಮತ್ತು ಯಕ್ಷ ಪ್ರಶ್ನೆಯಾಗಿದೆ. ಗಾಂಧೀಜಿಯ ಅಸ್ಪೃಶ್ಯತೆ ನಿವಾರಣೆ ಕಾರ್ಯಗಳನ್ನು ಹೇಳುತ್ತಾ ಹೋದರೆ ಅದೇ ಒಂದು ಇತಿಹಾಸದ ಭಾಗವಾಗುತ್ತದೆ. ತಮ್ಮಿಂದ ಸಾಧ್ಯವಾದಷ್ಟು ಅದಕ್ಕಾಗಿ ಶ್ರಮಿಸಿದ್ದಾರೆ.

ಗಾಂಧೀಜಿ ಹತ್ಯೆಗೆ ಮುಖ್ಯ ಕಾರಣ ಅವರು ಜಾತಿಪದ್ಧತಿಗೆ ಕೊಟ್ಟಿದ್ದ ಪೆಟ್ಟು ಮತ್ತು ಹಿಂದೂಮುಸ್ಲಿಂ ಐಕ್ಯತೆಗೆ ಅವರು ಜೀವ ಸವೆಸಿದ್ದು ಎಂದು ತಿಳಿಯಲು ನನಗೆ ಬಹಳ ದಿನ ಹಿಡಿಯಲ್ಲಿಲ್ಲ. ದೇಶ ವಿಭಜನೆ ಹತ್ಯೆಗೆ ಕಾರಣ ಎಂಬುದು ಹುಸಿ ಪ್ರಚಾರ. ಗಾಂಧೀಜಿ ದೇವರಲ್ಲ ಮನುಷ್ಯ. ತಪ್ಪುಗಳನ್ನು ಅವರೂ ಮಾಡಿದ್ದಾರೆ. ಅವುಗಳಿಂದ ಕಲಿತಿದ್ದಾರೆ. ಅಭಿಪ್ರಾಯಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸುತ್ತಾ ಒಂದು ಹರಿಯುವ ನದಿಯಂತೆ ವ್ಯಕ್ತಿತ್ವವನ್ನು ಚಲನೆಗೊಡ್ಡಿ ಪಕ್ವವಾಗಿದ್ದಾರೆ. ಇಷ್ಟು ಅರ್ಥ ಮಾಡಿಕೊಂಡರೆ ಗಾಂಧೀಜಿ ಅರ್ಥವಾಗಲು ಸಾಧ್ಯ.

ಚಿಕ್ಕಂದಿನಿಂದಲೂ ನಾ ಕಂಡ ಗಾಂಧಿಯ ಚಿತ್ರಣ ಈಗ ಇನ್ನೂ ಸ್ಪಷ್ಟವಾಗಿದೆ. ಆಗ ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟಗಾರರೆಂದು ಮಾತ್ರ ತಿಳಿದಿದ್ದ ನನಗೆ ಗಾಂಧೀಜಿಯ ಬಹುಮುಖ ಸುಧಾರಣಾ ಚಳುವಳಿಗಳ ಪರಿಚಯವಾಗಿದೆ. ಅಸ್ಪೃಶ್ಯತೆ ನಿವಾರಣೆ, ಮದ್ಯಪಾನ ನಿಷೇದ, ವರದಕ್ಷಿಣೆ ವಿರೋಧಿ, ಸ್ವದೇಶಿ ಚಳುವಳಿ, ಸ್ವಾವಲಂಬನೆ, ಗ್ರಾಮೋದ್ಯೋಗ ಇನ್ನೂ ಹಲವು ಮುಖಗಳು ಗಾಂಧೀಜಿಯ ಹೋರಾಟಕ್ಕಿದೆ. ಗಾಂಧೀಯನ್ನು ಬಿಟ್ಟು ಭಾರತವನ್ನು ಕಲ್ಪಿಸಿಕೊಳ್ಳುವುದು ಸೂರ್ಯನಿಲ್ಲದ ನಭೋಮಂಡಲವನ್ನು ಕಲ್ಪಿಸಿಕೊಂಡಂತೆ.

ಗಾಂಧೀಜಿಯನ್ನು ಜನಮಾನಸದಿಂದ ಮರೆಮಾಡುವಲ್ಲಿ ಅನೇಕ ಸಂಘಟನೆಗಳು ಕಾರ್ಯನಿರತವಾಗಿವೆ. ಗಾಂಧೀಜಿಯ ಬಗ್ಗೆ, ಅಪ ಪ್ರಚಾರ, ಗೋಡ್ಸೆ ಪರವಾಗಿ ಯುವಕರನ್ನು ಸೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ಯುವ ಸಮೂಹವನ್ನು ಗಾಂಧೀಜಿಯ ತತ್ವದೆಡೆಗೆ ಸೆಳೆಯುವುದು ಅವಶ್ಯಕ ತುರ್ತು. ಇದು ದೇಶದ ಹಿತದೃಷ್ಟಿಯಿಂದ ಬಹಳ ಮುಖ್ಯವಾದುದು.

ಪ್ರಸ್ತುತ ಸಂದರ್ಭದಲ್ಲಿ ‘ಗಾಂಧೀಯನ್ನು ಮರೆತರೆ ಜಗತ್ತಿಗೆ ಹಾನಿ ನಿಶ್ಚಿತ’ ಎಂಬ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ಮಾತು ಎಷ್ಟು ಉಚಿತವಾದದ್ದು ಮತ್ತು ಸತ್ಯವಾದದ್ದು ಅನಿಸ್ತಿದೆ…

(ರವಿಚಂದ್ರ ಜಂಗಣ್ಣವರ)

One thought on “ನನಗರ್ಥವಾದ ಗಾಂಧಿ -* ಗಾಂಧಿ‌153 *

  1. ನನಗರ್ಥವಾಗದ ಗಾಂಧೀಜಿ ರವಿಚಂದ್ರ ಜಂಗಣ್ಣವರ ಅವರ ಲೇಖನ ಓದುಗನನ್ನು ಕಣ್ಣುತೆರೆಸುತ್ತದೆ ಅದುಕಣ್ಣು ಇದ್ದವರಿಗೆಮಾತ್ರ.ಗಾಂಧಿಯನ್ನು ವಿಲನ್ ತರಹ ಮತ್ತು ಗೊಡ್ಸೆಯನ್ನು ಮಹಾತ್ಮನಂತೆ ಬಿಂಬಿಸುತ್ತಿರುವ ಹುನ್ನಾರ ಈಹತ್ತುವರ್ಷಗಳಲ್ಲಿ ಜಾಸ್ತಿಯಾಗತಾಇದೆ.ಕಾರಣ ಸ್ಪಷ್ಟ. ಆದರೆ ಸತ್ಯ ಎಂದಿಗೂ ಸತ್ಯೆಂಬುವುದಕ್ಕೆ ಈಲೇಖನವೆ ಸಾಕ್ಷಿ ತಮಗೆ ನನ್ನ ಅನಂತ ಶರಣುಗಳು ಸರ್.

Leave a Reply

Your email address will not be published. Required fields are marked *

error: Content is protected !!