ಕೋಲಾರದಿಂದ ನನ್ನ ಸಹೋದರನೊಬ್ಬ ನನ್ನನ್ನು ಸಂಪರ್ಕಿಸಿರಿ “ ನಾನು
ಬಸವಾದಿ ಶರಣರ ವಿಚಾರಗಳನ್ನು ಓದಿರುವೆ. ಶರಣ ವಿಚಾರಧಾರೆ ನನ್ನನ್ನು
ಗಾಢವಾಗಿ ಪ್ರಭಾವಿಸಿವೆ. ಆದರೆ ನಾನು ಮಾಂಸ ಆಹಾರವನ್ನು ಸ್ವೀಕರಿಸುತ್ತೇನೆ.
ಶರಣರು ಮಾಂಸ ಆಹಾರವನ್ನು ಸ್ವೀಕರಿಸಿಯೂ ನಾನು ಲಿಂಗಾಯತನಾಗಲು
ಸಾಧ್ಯವೆ ?” ಎಂದು ಕೇಳಿದ.
ನಾನು ಶರಣರ ವಿಚಾರಗಳಲ್ಲಿ ಮುಳುಗಿ ಹೋದೆ. ಮನುಷ್ಯ ನಾಗರಿಕ
ಪ್ರಪಂಚವನ್ನು ಕಟ್ಟಿಕೊಳ್ಳುವ ಮೊದಲು ಬಯಲವಾಸಿಯಾಗಿದ್ದ. ಗುಡ್ಡ
ಬೆಟ್ಟಗಳಲ್ಲಿ, ಮರದ ಪೊಟರೆಗಳಲ್ಲಿ ವಾಸಿಸುತ್ತಿದ್ದ. ತನ್ನ ಹೊಟ್ಟೆಯ
ಹಸಿವನ್ನು ಇಂಗಿಸಿಕೊಳ್ಳಲು ಪ್ರಾಣಿಗಳ ತಿಂದು ಬದುಕಿದ. ಅವನ್ನು ಮೊದ
ಮೊದಲು ಹಸಿ ಹಸಿಯಾಗಿಯೆ ತಿಂದ. ತದ ನಂತರ ಅದನ್ನು ಬೇಯಿಸಿ ತಿಂದ. ಕಾಲಾ
ನಂತರ ಹಣ್ಣು ಹಂಪಲ ಬರುಬರುತ್ತ ತರಕಾರಿಯ ಕಡೆ ಆತ ವಾಲಿದ. ಕೆಲವರು
ಮಾಂಸಹಾರಿಗಳು. ಇನ್ನು ಹಲವರು ಸಸ್ಯಹಾರಿಗಳು. ಅವರವ ಇಚ್ಚೆಗೆ
ಅನುಗುಣವಾಗಿ ಆಹಾರ ಪದ್ಧತಿ ರೂಪಿತವಾಯಿತು. ವೇದ ಕಾಲದಲ್ಲಿ ಬ್ರಾಹ್ಮಣರು
ಮಾಂಸಹಾರಿಗಳು. ಅವರು ಯಜ್ಞಯಾಗ ಮಾಡುವಾಗ ಪ್ರಾಣಿಗಳನ್ನು ಬಲಿ
ಕೊಡುತ್ತಿದ್ದರೆಂದು ಋಗ್ವೇದಗಳಲ್ಲಿ ಉಲ್ಲೇಖವಿದೆ. ತಮ್ಮ ಮನೆಗೆ
ಅತಿಥಿಯಾಗಿ ಬರುವವರಿಗೆ ಗೋವಿನ ಮಾಂಸಗಳನ್ನು ಅಡುಗೆಯಾಗಿ
ಮಾಡಬೇಕಾದ ಸಂದರ್ಭವಿತ್ತು, ಇದು ಇತಿಹಾಸ.
ಮಹಾತ್ಮ ಬುದ್ಧ ಕ್ಷತ್ರಿಯ, ಆತನಿಗೆ ಮಾಂಸ ಆಹಾರ ನಿಷೇಧವೆಂಬಂತೆ
ಇರಲಿಲ್ಲ. ಹೀಗಾಗಿ ಆತ ಮಾಂಸ ಆಹಾರವನ್ನು ಸೇವಿಸುತ್ತಿದ್ದ. ತನ್ನ ಕೊನೆಯ
ಸಂದರ್ಭದಲ್ಲೂ ಚುಂಗನಿಂಗ ದನದ ಮಾಂಸವನ್ನು ಪಡೆದು ಸೇವಿಸಿ, ಕೊನೆ
ಉಸಿರೆಳೆದ ಡಾ. ಬಿ.ಆರ್.ಅಂಬೇಡ್ಕರ ಅವರ ಸಂದರ್ಭದಲ್ಲಿ ಆಹಾರ ಪ್ರಶ್ನೆ
ಸಮಸ್ಯೆಯಾಗಿರಲಿಲ್ಲ.
ಆದರೆ ಬುದ್ದನ ತರುವಾಯ ಬಂದ ಬಸವಣ್ಣ ನಾವು ನೀವೆಲ್ಲ ಬಲ್ಲಂತೆ ಸಕಲ
ಜೀವಪ್ರೇಮಿ. ತನ್ನ ರಾಜ್ಯದಲ್ಲಿಯ ಆಕಳು ಕಳ್ಳರು ಕದ್ದುಕೊಂಡು
ಹೋದಾಗ, ಆ ಆಕಳುಗಳು ಇರುವಲ್ಲಿಗೆ ಉಳಿದ ಕರುಗಳನ್ನು ಬಿಟ್ಟು ಬನ್ನಿ
ಎಂದು ಆಜ್ಞೆ ಮಾಡಿದಾತ. ಬಸವಣ್ಣನವರ ಜೀವ ಪ್ರೇಮ ‘ಸರ್ವೇಜನ
ಸುಖಿನೋಭವಂತು’ ಆಗಿರಲಿಲ್ಲ. ತನ್ನ ರಾಜ್ಯದಲ್ಲಿ ಯಾರಿಗೇ ನೋವಾದರೂ ಅದು
ತನಗಾದ ನೋವೆಂಬಂತೆ ಚಡಪಡಿಸುತ್ತಿದ್ದ.
ತನ್ನಿಂದ ಯಾರಿಗಾದರು ಅವಮಾನವಾಯಿತು ಎಂದು ತಕ್ಷಣ ತ್ರಾಯಿ ತ್ರಾಯಿ
ಎಂದು ಮಮ್ಮಲ ಮರುಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದ. ಕಿನ್ನರಿ
ಬೊಮ್ಮಯ್ಯ ಎಂಬ ಶರಣ ಮಹಾಮನೆಯಲ್ಲಿ ಪ್ರಸಾದಕ್ಕೆ ಕುಳಿತಾಗ
‘ಉಳ್ಳಾಗಡ್ಡೆ’ ತಿನ್ನಲು ಕೇಳುತ್ತಾರೆ. ಆಗ ಬಸವಣ್ಣ ಅವರನ್ನು ಆಶ್ಚರ್ಯ
ಚಕಿತರಾಗಿ ನೋಡುತ್ತಾರೆ. ಇದರಿಂದ ಆತಂಕಕ್ಕೆ ಒಳಗಾದ ಕಿನ್ನರಿ
ಬೊಮ್ಮಯ್ಯ ಪ್ರಸಾದದ ಮನೆಯಿಂದ ಮುನಿಸಿಕೊಂಡು ಎದ್ದು
ಹೋಗುತ್ತಾರೆ. ಆಗ ಬಸವಣ್ಣ ತನ್ನ ತಪ್ಪಿನ ಅರಿವಾಗಿ ಆ ಕಿನ್ನರಿ ಬೊಮ್ಮಯ್ಯನ ಬರ
ಮಾಡಿಕೊಳ್ಳಲು ಹಾಗೂ ತಾನು ಆಶ್ಚರ್ಯ ಚಕಿತನಾಗಿ ನೋಡಿದ್ದನ್ನು
ತಪ್ಪೆಂದು ಹೇಳಲು ಹೊರಡುತ್ತಾನೆ.
ಕಿನ್ನರಿ ಬೊಮ್ಮಯ್ಯನಿದ್ದ ತ್ರಿಪುರಾಂತ ಕೆರೆಯ ಕಡೆ ಹೋಗುವಾಗ ಬಸವ
ತನ್ನ ಕೊರಳಲ್ಲಿ ಉಳ್ಳಾಗಡ್ಡೆ ಸರಮಾಲೆ, ಎತ್ತಿಗೂ ಉಳ್ಳಾಗಡ್ಡೆಯ ಸರ,
ಬಂಡಿ ತುಂಬ ಉಳ್ಳಾಗಡ್ಡೆಯ ರಾಶಿಯನ್ನು ಹಾಕಿಕೊಂಡು ಪ್ರಾಯಶ್ಚಿತ್ತ
ಮಾಡಿಕೊಳ್ಳುತ್ತಾನೆ. ಬಸವಣ್ಣ ತಾನು ನಂಬಿಕೊಂಡ ಬಂದ ಆಹಾರದ ಸಿದ್ಧಾಂತವೇ
ಸರಿಯಲ್ಲ ಎಂದು ತೋರಿಸುತ್ತಾರೆ. ಇಷ್ಟಕ್ಕೂ ಹನ್ನೆರಡನೆಯ ಶತಮಾನದಲ್ಲಿ
ಯಾರು ಮಾಂಸಹಾರಿಗಳಾಗಿದ್ದರು ? ಎಂಬುದಕ್ಕೆ ಇತಿಹಾಸವನ್ನು ಇಣುಕಿ
ನೋಡಿಕಬೇಕಾಗುತ್ತದೆ. ಅಂದು ಬ್ರಾಹ್ಮಣ ಜನಗಳೆ ಸಮಾಜವನ್ನು
ನಿಯಂತ್ರಿಸುತ್ತಿದ್ದ ಸಂದರ್ಭ, ಈಗಾಗಲೇ ಹೇಳಿದಂತೆ ಅವರು ವೇದ ಆಗಮ
ಶಾಸ್ತ್ರಗಳನ್ನು ನಂಬಿದವರು. ಅದನ್ನೆ ಪ್ರಾಮಣ್ಯವೆಂದು ಬದುಕಿದವರು.
ಸಹಜವಾಗಿಯೆ ಅಂದು ಬ್ರಾಹ್ಮಣರೂ ಮಾಂಸಹಾರಿಗಳಾಗಿದ್ದರು. ಆದ್ದರಿಂದಲೇ
ಬಸವಣ್ಣ :
ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೇ ಅಳು, ಕಂಡಾ !
ವೇದವನೋದಿದವರ ಮುಂದೆ ಅಳು, ಕಂಡಾ
ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ !
ನೀ ನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ.
ಪ್ರಾಣಿಗಳನ್ನು ವೇದದ ಹೆಸರಿನ ಮೇಲೆ ಬಲಿಕೊಡುವ ಪದ್ಧತಿಯನ್ನು
ಅವರು ಖಂಡಿಸುತ್ತಾರೆ. ಯಜ್ಞ-ಯಾಗಕ್ಕೆ ತಂದ ಹೋತಿನ ಮೂಲಕ ಅಳಲು
ಹಚ್ಚಿ, ಅದು ನಿನ್ನ ಪ್ರತಿಭಟನೆಯಾಗುತ್ತದೆ ಎಂದವರು ಸೂಚಿಸುತ್ತಾರೆ.
ಅಂದರೆ ಬಸವ ಇಲ್ಲಿ ಜೀವಪರವಾಗಿ ವರ್ತಿಸುತ್ತಾರೆ.ಅದರೆ ಬಸವಣ್ಣನವರು ತಮ್ಮ
ಮತ್ತೊಂದು ವಚನದಲ್ಲಿ
ಎಡದ ಕೈಯಲ್ಲಿ ಕತ್ತಿ,
ಬಲದ ಕೈಯಲಿ ಮಾಂಸ
ಬಾಯಲಿ ಸುರೆಯ ಗಡಿಗೆ ,ಕೊರಳಲಿ ದೇವರಿರಲು
ಅವರ ಲಿಂಗನೆಂಬೆ ಸಂಗನೆಂಬೆ, ಕೂಡಲಸಂಗಮದೇವಾ
ಅವರ ಮುಖಲಿಂಗಿಗಳೆಂಬೆನು
ಬಸವ ತಾನು ಕಟ್ಟ ಬಯಸಿದ್ದ ಚಳುವಳಿಗೆ ಯಾರೇ ಬಂದರೂ ಅವರನ್ನು
ಸ್ವಾಗತಿಸುವ ತಹತಹ ಎದ್ದು ಕಾಣುತ್ತದೆ. ಹಾಗಂತ ಅವುಗಳ ಸಮರ್ಥನೆಗೆ
ಅವರು ತೊಡಗಿದ್ದಿಲ್ಲ ಎಂಬುದು ಗೊತ್ತಾಗುತ್ತದೆ.
ಕೊಲ್ಲೆನಯ್ಯಾ ಪ್ರಾಣಿಗಳ
ಮೆಲ್ಲೆನಯ್ಯಾ ಬಾಯಿಚ್ಚೆಗೆ
ಒಲ್ಲೆನಯ್ಯಾ ಪರಸತಿಯರ ಸಂಗವ,
ಬಲ್ಲೆನಯ್ಯಾ ಮುಂದೆ ತೊಡಕುಂಟೆಂಬುದ
ಬಳ್ಳದ ಬಾಯಂತೆ ಒಂದೆ ಮನ ಮಾಡಿ ನಿಲ್ಲೆಂದು ನಿಲ್ಲಿಸಯ್ಯ
ಎನ್ನುವ ಮೂಲಕ ಯಾವುದೇ ರೀತಿಯ ಹಿಂಸೆಯನ್ನು ಅವರು ಇಷ್ಟ
ಪಡದಿರುವುದು ಗೋಚರವಾಗತ್ತದೆ. ಅಷ್ಟಮದ ಸಪ್ತ ವ್ಯವಸ
ಷಡುವರ್ಗಂಗಳ ಒತ್ತಿ ನಿಲಿಸಿ, ಎಲ್ಲಕ್ಕೆ ಶಿವನೊಬ್ಬನೆ, ಶಿವಜ್ಞಾನವೆಂದರಿಯದ
ವಿಪ್ರರು, ಆನೆ ಅಶ್ವ ಹೋತ ಕೋಣ ಬಿಂಜಣದಿಂದ ಕಡಿದು, ಬೆಂಕಿಯ ಮೇಲೆ ಹಾಕಿ,
ತಾನು ಪರಬ್ರಹ್ಮನಾದೆನೆಂದು ನರಕಕ್ಕೆ ಹೋದರೊಂದು
ಕೋಟ್ಯಾನುಕೋಟಿ ಬ್ರಹ್ಮರು.
ವೇದದ ಅರ್ಥವನರಿಯದೆ ಜೀವನ ಭಾದೆಯಂ ಮಾಡುವ
ವಧಾಸ್ವಕರ್ಮಕ್ಕೆ ಒಳಗಾದರು, ದ್ವಿಜರಂದು
ಆದಿಯ ಪ್ರಮಥರು ಕಂಡುದೆಂತೆಂದಡೆ :
ಆನೆಯೆಂಬುದು ಮದ, ಮತ್ಸರವೆಂಬುದು ಅಶ್ವ
ಕೋಣನೆಂಬುದು ಕ್ರೋಧ
ಅಂಗವಿಕಾರವೆಂಬುದು ಹೋತ
ಇಂತು ನಾಲ್ಕು ವರ್ಗಂಗಳು, ಶಿವಜ್ಞಾನವೆಂಬ ಅಗ್ನಿಯಲ್ಲಿ
ದಹನ ಮಾಡುವರು ನಮ್ಮವರು.
ಇಂತೀ ವಿವರವಿಲ್ಲದೆ ತಾವು ಪರಬ್ರಹ್ಮರೆನಿಸಿಕೊಂಬ
ಜೀವ ಹಿಂಸೆಯ ಮಾಡುವ
ವಿಪ್ರರ ಮುಖವ ನೋಡಲಾಗದೆಂದಕಲಿದೇವರ ದೇವ
ಎಂಬ ಮಡಿವಾಳ ಮಾಚಿದೇವರ ವಚನ ಸಹ ಜೀವ ಹಿಂಸೆಯನ್ನು ಒಪ್ಪುವುದಿಲ್ಲ.
ಶರಣರು ಯಾರ ಮನಸ್ಸಿಗೆ ನೋವಾದರೂ ಅದನ್ನು ಸಹಿಸದವರು. ತನ್ನ
ಮನೆಗೆ ಕಳ್ಳನೊಬ್ಬ ಬಂದಾಗ ಬಸವಣ್ಣನವರು ತನ್ನ ಮಡದಿ
ನೀಲಾಂಬಿಕೆಯನ್ನು ‘ ತೆಗೆದುಕೊಡಾ ಎಲಾ ಬೆಂಡೋಲೆ ಕಿತ್ತಿ, ಎನೈಯನ ಕೈ
ನೊಂದೀತು !’ ಎಂಉ ಸಿಟ್ಟಾಗುತ್ತಾರೆ.
ಜಾಲಗಾರನೊಬ್ಬ ಜಲ ಹೊಕ್ಕು ಶೋಧಿಸಿ
ಹಲವು ಪ್ರಾಣಿಗಳ ಕೊಂದು ನಲಿ ನಲಿದಾಡುವ
ತನ್ನ ಮನೆಯಲೊಂದು ಶಿಶು ಸತ್ತಡೆ
ಅದಕ್ಕೆ ಮರುಗುವಂತೆ ಅವಕೇಕೆ ಮರುಗ ?
ಜಾಲಗಾರನ ದುಃಖ ಜಗಕೆಲ್ಲ ನಗೆಗೆಡೆ
ಇದು ಕಾರಣ ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿದ್ರ್ದು
ಜೀವ ಹಿಂಸೆಯ ಮಾಡುವ ಮಾದಿರರನೇನೆಂಬೆನಯ್ಯಾ ?
ಶಿವಶರಣೆ ಅಕ್ಕಮಹಾದೇವಿಯೂ ಸಹ ಜೀವ ಹಿಂಸೆಯನ್ನು ಬೋಧಿಸುವುದಿಲ್ಲ.
ಜಾಲಗಾರ ತಾನು ನಿತ್ಯ ಬಲೆಯಲ್ಲಿ ಹಿಡಿಯುವ ಪ್ರಾಣಿಗಳನ್ನು ಕೊಂದು ನಲಿ
ನಲಿದಾಡುತ್ತಾನೆ. ಆದರೆ ತನ್ನ ಮನೆಯಲ್ಲಿ ತನ್ನದೆ ಶಿಶು ಸತ್ತರೆ ? ಎಂಬ
ಪ್ರಶ್ನೆ ಕೇಳುವ ಮೂಲಕ ಅಕ್ಕಮಹಾದೇವಿ ಜರಿಯುತ್ತಾಳೆ.ಒಟ್ಟಿನಲ್ಲಿ ಬಸವಾದಿ
ಶರಣರು ಪ್ರಾಣಿ ಹಿಂಸೆಯನ್ನು ಒಪ್ಪಲಿಲ್ಲ. ಹಾಗಂತ ಆಹಾರ ಸೇವನೆಯಲ್ಲಿ
ಕನಿಷ್ಟ ಶ್ರೇಷ್ಟ ಎಂಬ ಭಾವವೂ ಅವರದಾಗಿರಲಿಲ್ಲ.
ಸುಂದರ,ಹೃದಯ ಸ್ಪರ್ಶ ನಿರೂಪಣೆ, ತಮಗೆ ವಂದನೆಗಳು.ಆದರೆ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಲಿಲ್ಲ.
ಶರಣರ ವಚನಗಳೊಂದಿಗೆ ಅತ್ಯುತ್ತಮ ವಾಗಿ ವಿವರಿಸಿದ್ದೀರಿ ಅಣ್ಣಾ
ತುಂಬಾ ಅರ್ಥ ಗರ್ಭಿತ ವಾದ ವಿವರಣೆ. ಧನ್ಯವಾದಗಳು ಸ್ನೇಹಿತರೆ.
ಶರಣರ ವಚನಗಳಲ್ಲಿರುವ ಭಾವಾರ್ಥವನ್ನು ತಿಳದುಕೊಂಡರೆ ಮಾಂಸಾಹಾರ ಸೇವನೆಯು ಪ್ರಾಣಿಗಳ ಹಿಂಸೆಯೇ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು.
ನಿಮ್ಮ ಸ್ಪಷ್ಟನೆ ಶ್ಲಾಘನೀಯ, ಧನ್ಯವಾದಗಳು.