ಪವಾಡದಂತೆ ಬದುಕಿದ ಎಚ್.ನರಸಿಂಹಯ್ಯ

ಪವಾಡವನ್ನು ಪ್ರಶ್ನಿಸಿದವರ ಪವಾಡಸದೃಶ ಬದುಕು

ಡಾ.ಎ.ಎಚ್. ರಾಮರಾವ್*

ಪವಾಡ ಪುರುಷರನ್ನೂ, ಪವಾಡಗಳ ದುರುಪಯೋಗವನ್ನೂ ಮೊದಲಿನಿಂದಲೂ ವಿರೋಧಿಸುತ್ತ ಬಂದ ಕನ್ನಡ ನಾಡಿನ ಮಹಾನ್ ಗಾಂಧಿವಾದಿ ಡಾ.ಎಚ್. ನರಸಿಂಹಯ್ಯ ಅವರು ತಮ್ಮ ಆತ್ಮಕಥೆಯ ಕೊನೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ: ‘ನಾನು ನಡೆದುಬಂದ ದಾರಿಯನ್ನು ಸಿಂಹಾವಲೋಕನ ಮಾಡಿದಾಗ ನನ್ನ ಜೀವನ ಒಂದು ಪವಾಡ ಅಂತ ಅನ್ನಿಸುತ್ತದೆ’.

ನಿಜ, ಕೋಲಾರ ಜಿಲ್ಲೆಯ ಹೊಸೂರಿನಂಥ ಕುಗ್ರಾಮದ ಅತ್ಯಂತ ಬಡತನದ ಕುಟುಂಬದಲ್ಲಿ ಹುಟ್ಟಿದ ಹಳ್ಳಿ ಹುಡುಗನೊಬ್ಬ, ನಿರಂತರ ಶ್ರಮದಿಂದ, ಅಚಲವಾದ ವಿಶ್ವಾಸದಿಂದ, ಜನ್ಮಜಾತ ವೈಚಾರಿಕತೆಯಿಂದ ಪ್ರತಿಭಾವಂತನಾಗಿ ಬೆಳೆದು ಕರ್ನಾಟಕದ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ದೊಡ್ಡ ಹೆಸರು ಸಂಪಾದಿಸಿದ್ದನ್ನು ಪವಾಡ ಅನ್ನದೆ ಇನ್ನಾವ ಪದ ಬಳಸಿ ಬಣ್ಣಿಸಬಹುದು?!

ಎಚ್.ಎನ್. ಅವರು ಜನಿಸಿದ್ದು ೧೯೨೦ರ ಜೂನ್‌ ೬ರಂದು. ೮ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಆ ಊರಿನಲ್ಲೇ ಓದಿದರು. ಕಡು ಬಡತನದಲ್ಲಿ ಹುಟ್ಟಿ, ಬಸ್ ಪ್ರಯಾಣಕ್ಕೆ ದುಡ್ಡಿಲ್ಲದೆ ೫೩ ಮೈಲಿ ದೂರದ ಬೆಂಗಳೂರಿಗೆ ಒಂದು ಸಲ ನಡೆದು ಬಂದಿದ್ದು ಅವರ ಸಾಹಸ ಮನೋಭಾವಕ್ಕೆ ಒಂದು ಉದಾಹರಣೆ.

೧೯೩೫ರಲ್ಲಿ ಎಂ.ಎನ್. ನಾರಾಯಣರಾಯರು ಇವರನ್ನು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಹೈಸ್ಕೂಲಿಗೆ ಸೇರಿಸಿದರು. ಬಹು ವಿಧಗಳಲ್ಲಿ ವಿಶಿಷ್ಟವಾದ ನ್ಯಾಷನಲ್ ಹೈಸ್ಕೂಲ್, ನರಸಿಂಹಯ್ಯನವರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಿತು. ಅವರು ಹೇಳುವಂತೆ ಈ ಶಾಲೆಯ ಅಂದಿನ ಅಧ್ಯಾಪಕರೆಲ್ಲರೂ ಪ್ರಾತಃ ಸ್ಮರಣೀಯರು. ಉನ್ನತ ವಿದ್ಯಾಭ್ಯಾಸ ಪೂರ್ಣಗೊಳಿಸಿ, ೧೯೪೬ರಲ್ಲಿ ಎಚ್‌.ಎನ್.‌ ಅವರು ಅಧ್ಯಾಪಕರಾಗಿ ನ್ಯಾಷನಲ್ ಕಾಲೇಜನ್ನು ಸೇರಿದರು.

ನ್ಯಾಷನಲ್ ಹೈಸ್ಕೂಲ್‌ ವಿದ್ಯಾರ್ಥಿಯಾಗಿದ್ದ ಎಚ್.ಎನ್‌., ಬೆಂಗಳೂರಿನ ಜನರಿಗೆ ಮಹಾತ್ಮ ಗಾಂಧೀಜಿಯವರ ಭಾಷಣವನ್ನು ಭಾಷಾಂತರ ಮಾಡಿದ್ದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ, ಜೈಲುವಾಸ ಅನುಭವಿಸಿದ್ದರು.

೧೯೫೬ರಲ್ಲಿ ಅಮೆರಿಕ ದೇಶದ ಒಹಿಯೊ ಸ್ಟೇಟ್‌ ವಿಶ್ವವಿದ್ಯಾಲಯದಲ್ಲಿ ಮೂರು ವರ್ಷಗಳ ಅಧ್ಯಯನದ ನಂತರ ಪರಮಾಣು ಭೌತವಿಜ್ಞಾನದಲ್ಲಿ ಪಿಎಚ್‌.ಡಿ. ಪದವಿ ಪಡೆದರು. ನ್ಯಾಷನಲ್ ಕಾಲೇಜಿನಲ್ಲಿ ೧೯೬೧ರಲ್ಲಿ ಪ್ರಾಂಶುಪಾಲರಾಗಿ ಚುನಾಯಿತರಾದರು. ಅಂದಿನಿಂದ ೧೯೭೨ರವರಿಗೆ ಚುನಾಯಿತ ಪ್ರಾಂಶುಪಾಲರಾಗಿದ್ದರು. ಈ ೧೧ ವರ್ಷಗಳು ನ್ಯಾಷನಲ್ ಕಾಲೇಜಿನ ಇತಿಹಾಸದಲ್ಲಿ ಸುವರ್ಣಯುಗ. ಆ ಅವಧಿಯಲ್ಲಿ ಕಾಲೇಜಿನಲ್ಲಿ ಎಲ್ಲರೂ ಇಷ್ಟಪಡುವಂತಹ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಎಚ್.ಎನ್. ಉತ್ತೇಜನ ನೀಡಿದರು. ಪರಿಣತರಿಂದ ಕಾಲೇಜು ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಒಂದು
ಗಂಟೆ ನೀತಿ ಮತ್ತು ಆರೋಗ್ಯ ಶಿಕ್ಷಣ ಕುರಿತು ಭಾಷಣ ಏರ್ಪಡಿಸುತ್ತಿದ್ದರು.

Gandhi with Narsimha Murthi

ಉಸ್ತುವಾರಿಗಳು ಇಲ್ಲದ ಪರೀಕ್ಷೆಗಳನ್ನು ನಡೆಸಿದ್ದು ಅವರ ಹೆಗ್ಗಳಿಕೆ. ಈ ಕ್ರಮ ಶಿಕ್ಷಣ ಕ್ಷೇತ್ರದಲ್ಲಿಯೇ ಅಭೂತಪೂರ್ವ ಅನ್ನಿಸಿಕೊಂಡಿದೆ. ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರ ಹಾಜರಾತಿ ಪುಸ್ತಕವನ್ನೂ ರದ್ದು ಮಾಡಿದ್ದರು. ಏಕೆಂದರೆ, ‘ಹಾಜರಾತಿ ಪುಸ್ತಕದಲ್ಲಿ ಕಡ್ಡಾಯವಾಗಿ ಸಹಿ ಮಾಡುವುದು, ಅಧ್ಯಾಪಕರ ಸ್ವಾಭಿಮಾನಕ್ಕೆ ಊನ ಉಂಟುಮಾಡುತ್ತದೆ. ಇದು ಅಪನಂಬಿಕೆಯ ಚಿಹ್ನೆಯೂ ಆಗುತ್ತದೆ’ ಎಂಬುದು ಎಚ್.ಎನ್. ಅನಿಸಿಕೆ.

ಎನ್.ಇ.ಎಸ್. ಸಂಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶವಿರಲಿಲ್ಲ. ಎಚ್.ಎನ್. ಅವರು ಪ್ರಾಂಶುಪಾಲರಾಗುವುದಕ್ಕೆ ಒಂದೆರಡು ತಿಂಗಳು ಮೊದಲೇ, ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಸೇರಿಸಿಕೊಳ್ಳಬೇಕೆಂಬ ನಿರ್ಣಯವನ್ನು ಅಧ್ಯಾಪಕರ ಸಂಘದಲ್ಲಿ ಮಂಡಿಸಿದ್ದರು. ದೀರ್ಘ ಚರ್ಚೆಯ ನಂತರ ಈ ನಿರ್ಣಯವನ್ನು ಸಂಘ ಒಪ್ಪಿಕೊಂಡಿತು. ಇದು ಸಂಸ್ಥೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ಸಂಗತಿ.

ನ್ಯಾಷನಲ್ ಕಾಲೇಜಿನಲ್ಲಿ ಪ್ರಾರಂಭವಾದ ಅಂತರವರ್ಗೀಯ ನಾಟಕ, ಸಂಗೀತ ಮತ್ತು ಚರ್ಚಾಸ್ಪರ್ಧೆಗಳು, ಸೇವಾಸಂಘ, ಗಾಂಧಿ ಅಧ್ಯಯನ ಕೇಂದ್ರ, ನರಸಿಂಹಯ್ಯನವರಲ್ಲಿ ಇದ್ದ ಶಿಕ್ಷಣ ಮೌಲ್ಯಗಳಿಗೆ ಒಂದು ಉದಾಹರಣೆ.

ಎಚ್.ಎನ್.‌ ಅವರ ಕಾರ್ಯತತ್ಪರತೆ, ಶ್ರದ್ಧೆ, ಬಹುಮುಖ ಪ್ರತಿಭೆ ಮತ್ತು ಅವರ ವೈಜ್ಞಾನಿಕ ಚಿಂತನೆಗಳನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳನ್ನಾಗಿ ೧೯೭೨ರಲ್ಲಿ ನೇಮಿಸಿತು. ಪ್ರಪಂಚದ ಇತಿಹಾಸದಲ್ಲಿ, ಸಂಶೋಧನಾರಹಿತ ಸಂಸ್ಥೆಯಿಂದ ಬಂದ ಪ್ರಾಧ್ಯಾಪಕರೊಬ್ಬರನ್ನು ಇಷ್ಟು ದೊಡ್ಡ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ನೇಮಿಸಿರುವುದು ವಿರಳವೂ ಹೌದು, ಅಪರೂಪವೂ ಹೌದು.

ಎಚ್.ಎನ್. ಅವರಿಗೆ ತಮ್ಮ ಹುಟ್ಟೂರು ಎಂದರೆ ಬಹಳ ಅಭಿಮಾನ. ಆದ್ದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಶಾಲಾ, ಕಾಲೇಜುಗಳನ್ನು ಅವರು ಸ್ಥಾಪಿಸಿದರು. ಬಡ ಮಕ್ಕಳಿಗಾಗಿ ವಿದ್ಯಾಸಂಸ್ಥೆಗಳನ್ನು ಹೊಸೂರು, ಗೌರಿಬಿದನೂರು, ಬಾಗೇಪಲ್ಲಿ ಮುಂತಾದೆಡೆ ಪ್ರಾರಂಭಿಸಿದ್ದೇ ಇದಕ್ಕೆ ಉದಾಹರಣೆ.

ಎಚ್.ಎನ್. ಮತ್ತು ನನ್ನ ಸಂಬಂಧ ಆರು ದಶಕಗಳಿಗೂ ಮೀರಿದ್ದು. ನಾನು ಅವರಲ್ಲಿ ಕಂಡಿದ್ದು ಅಪರಿಮಿತ ಉತ್ಸಾಹ ಮತ್ತು ಅವರಿಗೆ ತಮ್ಮ ವಿದ್ಯಾರ್ಥಿಗಳ ಬಗ್ಗೆ ಇರುವ ತುಂಬು ಹೃದಯದ ಅಭಿಮಾನ. ನಮ್ಮ ಮೇಷ್ಟ್ರು ಮಾನವೀಯ, ಆದರ್ಶ ಗುಣಗಳ ಪುರುಷೋತ್ತಮ.

ಅವರ ಆತ್ಮಕಥನ ‘ಹೋರಾಟದ ಹಾದಿ’ ಹಾಗೂ ‘ತೆರೆದ ಮನ’ ಕೃತಿಯು ಎಲ್ಲ ಪ್ರಜ್ಞಾವಂತರಿಗೆ ದಾರಿದೀಪ. ಎಚ್.ಎನ್. ಅವರೇ ಹೇಳಿರುವಂತೆ, ‘ನನ್ನ ಚಿಂತನೆಗಳು ನಿಂತ ಮಡುವಲ್ಲ. ಹರಿಯುವ ನದಿ. ನಾನು ಮೊಂಡುವಾದಿ, ಹಟವಾದಿಯಲ್ಲ. ನನಗೆ ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅಚಲವಾದ ವಿಶ್ವಾಸ. ವಿಜ್ಞಾನ ಸದಾ ವಿಕಾಸದ ಹಾದಿಯಲ್ಲಿ ಸಾಗುವಂತೆಯೇ ನನ್ನ ಹಲವು ಚಿಂತನೆಗಳು ಬದಲಾವಣೆಯಾಗಬಹುದು. ನನ್ನದು ಸದಾ ಮುಕ್ತ ಮನಸ್ಸು’.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿ ಅನನ್ಯವಾದ ಸೇವೆ ಸಲ್ಲಿಸಿದ್ದಾರೆ ಎಚ್.ಎನ್. ೧೯೩೬ರಿಂದ ೨೦೦೫ರವರೆಗೂ, ಅಂದರೆ ತಮ್ಮ ಕೊನೆಯ ಉಸಿರಿನವರೆಗೂ ನ್ಯಾಷನಲ್ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿ ವಾಸವಾಗಿದ್ದರು. ಅವರು ಆಜನ್ಮ ಬ್ರಹ್ಮಚಾರಿ, ಕಟ್ಟಾ ಗಾಂಧೀವಾದಿ ಕೂಡ ಹೌದು.

ಜೂನ್‌ ೬ರಂದು ಎಚ್.ಎನ್‌ ಅವರ ೧೦೦ನೇ ಹುಟ್ಟುಹಬ್ಬ. ಇದಕ್ಕೆ ಸಂಬಂಧಿಸಿದ ಸಂಭ್ರಮದ ಆಚರಣೆಗಳನ್ನು, ಕೋವಿಡ್-೧೯ನಿಂದ ಆಗುತ್ತಿರುವ ಬದಲಾವಣೆಗಳನ್ನು ಮನಸ್ಸಿನಲ್ಲಿ ಇರಿಸಿಕೊಂಡು, ಸೂಕ್ತ ಸಂದರ್ಭದಲ್ಲಿ ಆಚರಿಸಲಾಗುವುದು.

*ಲೇಖಕ ನ್ಯಾಷನಲ್ ಎಜ್ಯುಕೇಷನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ
ಸೌಜನ್ಯ : ಪ್ರಜಾವಾಣಿ ಭಾನುವಾರದ ಪುರವಣಿ ೩೧.೫.೨೦೨೦

4 thoughts on “ಪವಾಡದಂತೆ ಬದುಕಿದ ಎಚ್.ನರಸಿಂಹಯ್ಯ

  1. Obba amoghavada vyakti parichaya madidri nim barahada mulaka Kannada. Ela managalu ondagi intaha adhutavad jeevake elaru shranendu sahitya lokake nammadu gourava sallisona ……H.Narashimyanavar Tereda mana inu odbeku Adanu mate nenspisitu nim lekhana …..dhanyavadagalu

  2. Sir i want these two book ತೆರೆದ ಮನ ಮತ್ತು ಹೋರಾಟದ ಹಾದಿಯಲ್ಲಿ ಸಿಗುತ್ತಾ ಸರ್ i will pay the money please

  3. I had gone through that institute for one semi decade and i seen him as a genius and simplicity for model of young generation

  4. ೧೭/೧೮-೨, ಮೊದಲನೆಯ ಮುಖ್ಯರಸ್ತೆ, ಮಾರೆನಹಳ್ಳಿ, ವಿಜಯನಗರ, ಬೆಂಗಳೂರು .
    ಮೊಬೈಲ್ no. 9448804905, 9448676770.
    Email- abhinavaravi@gmail.com

    Please contact this number they will send registered post.

Leave a Reply

Your email address will not be published. Required fields are marked *

error: Content is protected !!