*ಜಾಗತಿಕ ಲಿಂಗಾಯತ ಮಹಾಸಭೆಯ ಮುಂದಿರುವ ಸವಾಲುಗಳು*

*ಜಾಗತಿಕ ಲಿಂಗಾಯತ ಮಹಾಸಭೆಯ ಮುಂದಿರುವ ಸವಾಲುಗಳು*

ಜಾಗತಿಕ ಲಿಂಗಾಯತ ಮಹಾಸಭೆಯ ಅಧಿವೇಶನವನ್ನು ರಾಜಕಾರಣ ಗಳನ್ನು ಹೊರಗಿಟ್ಟು ಬಸವಕಲ್ಯಾಣದಲ್ಲಿ ಹಮ್ಮಿಕೊಂಡದ್ದು ಸ್ತುತ್ಯವಾದ ಕಾರ್ಯವಾಗಿದೆ. ಪ್ರತಿಯೊಂದು ಸಂಗತಿ ಘಟನೆಯಲ್ಲೂ ರಾಜಕೀಯವಿದೆ. ಆದರೆ ಇಂದಿನ ರಾಜಕಾರಣ ತೀರಾ ಕೆಳಮಟ್ಟದಾಗಿರುವುದರಿಂದ ಅನಿವಾರ್ಯವಾಗಿ ಜಾ.ಲಿಂ.ಮಹಾಸಭೆಯಲ್ಲಿ ಅವರ ನೆರಳು ಇರದಂತೆ ಮಾಡುತ್ತಿರುವ ಕೆಲಸ ಅತ್ಯಂತ ಮಹತ್ವ ಪೂರ್ಣವೆನಿಸಿದೆ. ಎಂ.ಬಿ.ಪಾಟೀಲ, ಬಸವರಾಜ ಹೊರಟ್ಟಿ, ವಿನಯ ಕುಲ್ಕಣ ð, ಶರಣ ಪ್ರಕಾಶ ಪಾಟೀಲ ಮುಂತಾದವರು ಹೊರ ಹೋದರು. ಆದರೆ ಈ ಸಂಘಟನೆಯನ್ನು ಸಶಕ್ತವಾಗಿ ಬೆಳೆಸುವ ಹೊಣೆ ಎಲ್ಲಾ ಬಸವ ಭಕ್ತ(ಪ್ರಜ್ಞಾವಂತ)ರ ಮೇಲೆ ಇದೆ.

ಹಾಗಾದರೆ ಇಲ್ಲಿ ಯಾರು ಯಾರಿಗೆ ಕರೆಯಬೇಕು ? ಎಂಬ ಆಲೋಚನೆ ಸಹಜವಾಗಿ ಮೂಡುತ್ತದೆ. ಬಸವ ಪ್ರಣೀತವಾದ ಜಾಗತಿಕ ಲಿಂಗಾಯತ ಮಹಾಸಭೆಯಾದ್ದರಿಂದ ಇಲ್ಲಿ ಮನುಷ್ಯರೆಲ್ಲರೂ ಸಮಾವೇಶಗೊಳ್ಳಬೇಕು. ಶರಣರ ಚಿಂತನೆಗಳ ಪ್ರಭಾವಕ್ಕೆ ಒಳಗಾದ, ಆ ಶರಣರು ಕನಸಿದ ಸಮಾಜವನ್ನು ಮತ್ತೆ ಕಟ್ಟಬೇಕು ಎನ್ನುವ ಹಂಬಲ ಇರುವ ಎಲ್ಲಾ ಸಂಘಟನೆಯ ಪ್ರಮುಖರು, ಸದಸ್ಯರು ಜಾಗತಿಕ ಲಿಂಗಾಯತ ಮಹಾಸಭೆಯನ್ನು ಮುನ್ನಡೆಸಿಕೊಂಡು ಹೋಗಬೇಕು.

ಮೇಲ್ನೋಟದಲ್ಲಿ ಡಾ.ಎಸ್.ಎಂ.ಜಾಮದಾರ ಅವರೇನೋ ಇದ್ದಾರೆ. ಅವರು ಮುಂದೆಯೂ ಇರುತ್ತಾರೆ. ಆದರೆ ಈ ಸಂಸ್ಥೆ ಕೆಲವರ ಗುತ್ತಿಗೆಯ , ಹಳೆಯ ತಲೆಮಾರಿನವರ ಸಂಸ್ಥೆ ಆಗಿ ಉಳಿಯಬಾರದು. ಜಾಗತಿಕ ಲಿಂಗಾಯತ ಮಹಾಸಭೆ ಈ ಹಿಂದೆ ಏರ್ಪಡಿಸಿದ್ದ ರ‍್ಯಾಲಿಗಳಲ್ಲಿ ಭಾಗವಹಿಸಿದ ಯುವಕ/ಯುವತಿಯರೆಲ್ಲ ಮತ್ತೆ ಹರಿದುಬರಬೇಕು. ಇದಷ್ಟೆ ಅಲ್ಲದೆ ತಮ್ಮ ತಮ್ಮ ಊರುಗಳಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಗೆ ಸದಸ್ಯರನ್ನಾಗಿ ಮಾಡಬೇಕು. ಕೇವಲ ಒಂದು ಜಾತಿಯ ಜನರನ್ನು ಸಂಘಟಿಸಿ, ಸದಸ್ಯರನ್ನಾಗಿ ಮಾಡುವುದು ಸುಲಭ. ಆದರೆ ಎಲ್ಲಾ ಜಾತಿ ಮತ ಧರ್ಮಗಳನ್ನು ಮೀರಿದ ಮನುಷ್ಯ ಕುಲಂ. ತಾನೊಂದೆ ವಲಂ ಎಂಬ ವಿಚಾರಕ್ಕೆ ಒತ್ತುಕೊಟ್ಟು ಜಾಗತಿಕ ಲಿಂಗಾಯತ ಮಹಾಸಭೆಗೆ ಸದಸ್ಯರನ್ನು ಮಾಡುವುದು ತುಂಬಾ ಕಷ್ಟ. ಆದರೂ ಈ ಸಂಘಟನೆಗೆ ಮಾನವೀಯತೆಯನ್ನು ಬಯಸುವ, ಸಕಲ ಜೀವಾತ್ಮರಿಗೆ ಲೇಸಾಗಲಿ ಎಂದು ಸದಾ ಕನವರಿಸುತ್ತಿರುವ ಜೀವಗಳಾದರೂ ಸಂಘಟನೆಗೆ ಬಲ ತುಂಬಬೇಕು.

ಜಾಗತಿಕ ಲಿಂಗಾಯತ ಮಹಾಸಭೆಯ ಈಗಿನ ಮುಖಂಡರೂ ಅಷ್ಟೆ : ಯರ‍್ಯಾರು ಜಾಗತಿಕ ಲಿಂಗಾಯತ ಮಹಾಸಭೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬಯಸುತ್ತಾರೊ ಅವರನ್ನು ಪ್ರೀತಿಯಿಂದ ಕರೆದುಕೊಳ್ಳಬೇಕು. ಇವನಾರವ ಎನ್ನದ , ಇವ ನಮ್ಮವ ಎನ್ನುವ ತತ್ವ ಅಲ್ಲಿ ಇರಬೇಕು. ಮಾದಾರ ಚೆನ್ನಯ್ಯನವರನ್ನು ಬಸವಣ್ಣನವರು ಅಪ್ಪನೆಂದು ಕರೆದರು. ಡೋಹರ ಕಕ್ಕಯ್ಯನವರನ್ನು ಬಸವಣ್ಣನವರು ಬೊಪ್ಪ ಎಂದು ಕರೆದರು.ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ನುಲಿಯ ಚೆಂದಯ್ಯ, ಹಡಪದ ಅಪ್ಪಣ,ಮೇದಾರ ಕೇತಯ್ಯಾ, ಸೊನ್ನಲಿಗೆ ಸಿದ್ಧರಾಮ ಮುಂತಾದ ಶರಣ ಸಂಕುಲವೆಲ್ಲ ಮತ್ತೆ ಒಂದಾಗಬೇಕು. ಜಾಗತಿಕ ಲಿಂಗಾಯತ ಮಹಾಸಭೆ ಇಂಥ ಎಲ್ಲಾ ತಳ ಸಮೂಹದ ಜನಾಂಗವನ್ನು ಒಳಗೊಂಡು ಬೆಳೆಯಬೇಕು.

ಕೆಲವರು ಬಸವಣ್ಣನವರ ಪೇಟೆಂಟ್ ಪಡೆದುಕೊಂಡು ಯಾವುದೆ ಸಂಘಟನೆ ಇದ್ದರೂ ಅಲ್ಲಿ ತಮ್ಮದೊಂದು ಇರಲಿ ಎಂದು ಮೂಗು ತೂರಿಸಲು ಸದಾ ಸಿದ್ಧರಾಗಿದ್ದಾರೆ.ಇಂಥವರನ್ನು ಸ್ವಲ್ಪ ಹಿಂದೆ ಸರಿಸಬೇಕಾಗಿದೆ. ಈಗಾಗಲೇ ಇಂಥವರಿಗೆ ರಾಜ್ಯದಾದ್ಯಂತ ಹೆಸರು ಇದೆ. ಬಸವಾದಿ ಶರಣರ ಹೆಸರಿನ ಮೇಲೆ ಸಾಕಷ್ಟು ಬೆಳೆದಾಗಿದೆ. ಶರಣರ ಹೆಸರಿನ ಪ್ರತಿಷ್ಠಾನ, ಸಂಸ್ಥೆ, ಕೇಂದ್ರಗಳ ಮೂಲಕ ಸರಕಾರದ ಅನುದಾನವನ್ನು ಬಳಸಿಕೊಂಡಿದ್ದಾರೆ. ಇದರಲ್ಲಿ ಕೆಲವರು ಸಮರ್ಪಕವಾದ ಕೆಲಸ ಮಾಡಿದ್ದರೆ ಇನ್ನು ಹಲವರು ಗ್ರಾö್ಯಂಟ್ ಗಾಗಿ ಬದುಕಿದ್ದಾರೆ. ಇಂಥವರು ತಾವಾಗಿಯೆ ಜಾಗತಿಕ ಲಿಂಗಾಯತ ಮಹಾಸಭೆಯಿಂದ ದೂರ ಇರಬೇಕು. ಇಷ್ಟು ವರ್ಷಗಳ ಕಾಲ ಮಠಾಧೀಶರ ಅಡಿಯಾಳಾಗಿ ಬದುಕಿದ, ಒಂದೇ ಒಂದು ಸಲವು ಸಹ ಶರಣರ ಸ್ಪಷ್ಟ ಆಶಯಗಳನ್ನು ತಿಳಿಸದೆ, ಸದಾ ಮಠದ ಸ್ವಾಮೀಜಿಯ ಇಷ್ಟಾರ್ಥವನ್ನು ಪೂರೈಸುವ ವ್ಯಕ್ತಿಯೊಬ್ಬರು ಮತ್ತೆ ಜಾಗತಿಕ ಲಿಂಗಾಯತ ಮಹಾಸಭೆಯಲ್ಲಿ ನುಸುಳುತ್ತಿದ್ದಾರೆ. ಸಾಯುವವರೆಗೂ ನೀವೇ ಬಸವ ಸೇವೆ ಮಾಡಬೇಕೆ ? ಯುವಕರು ಬರಬಾರದೆ ? ಹಳೆ ಬೇರಿಗೆ ಹೊಸ ಚಿಗುರು ಬೇಡವೆ ? ತಮ್ಮ ಅಮೂಲ್ಯ ಸಲಹೆ ಸೂಚನೆ ನೀಡಿ, ತೆರೆಯ ಮರೆಯಲ್ಲಿ ನಿಂತು ಯುವಕರಿಗೆ ಮಾರ್ಗದರ್ಶನ ಮಾಡಬಾರದೆ ? ಎಷ್ಟು ಕಾಲ ಅಂತ ನೀವೇ ಆಯಕಟ್ಟಿನ ಸ್ಥಾನ ಹೊಡಕೊಂಡು ಕೂಡುತ್ತೀರಿ ? ಇದು ಅಂತರಾವಲೋಕನದ ಪ್ರಶ್ನೆ. ಮನವರಿಯದ ಕಳ್ಳತನವಿಲ್ಲ ಎಂಬ ಶರಣರ ವಿಚಾರಕ್ಕೆ ಬೆಲೆ ಕೊಟ್ಟು ದೂರ ನಿಂತು ಜಾಗತಿಕ ಲಿಂಗಾಯತ ಮಹಾಸಭೆಯನ್ನು ಮುನ್ನಡೆಸಿರಿ.

ಬಸವ ತತ್ವವನ್ನೆ ಉಸಿರಾಗಿಸಿಕೊಂಡು ಬದುಕಿದ ಬಸವಕಲ್ಯಾಣದ ನಿಷ್ಠುರ ನುಡಿಯ ವಿ.ಸಿದ್ಧರಾಮಣ್ಣನವರಿದ್ದಾರೆ. ಗಂಗಾವತಿಯಲ್ಲಿ ಸಿ.ಹೆಚ್.ನಾರನಾಳ ಎಂಬ ಬಹುದೊಡ್ಡ ಚಿಂತಕರಿದ್ದಾರೆ. ಸಿಂಧನೂರಿನಲ್ಲಿ ವೀರಭದ್ರಗೌಡ ಎಂಬ ನಿಷ್ಠುರ ಶರಣರಿದ್ದಾರೆ. ಮಾನ್ವಿಯಲ್ಲಿ ಶರಣಬಸವ ಇದ್ದಾರೆ.ಮೈಸೂರಿನಲ್ಲಿ ಮಹೇಶ ಕಲ್ಪುರ ಇದ್ದಾರೆ. ದೇವದುರ್ಗದಲ್ಲಿ ವೀರಭದ್ರ ಸ್ವಾಮಿ, ಬಸವರಾಜ ಮಡಿವಾಳರಿದ್ದಾರೆ. ಕಲಬುರ್ಗಿಯಲ್ಲಿ ಕಾವ್ಯ ಮಹಾಗಾಂವಕರ್, ಬೀದರನಲ್ಲಿ ಮೇನಕಾ ಪಾಟೀಲ, ಯಾದಗಿರಿಯಲ್ಲಿ ಶಿವಣ್ಣ ಇಜೇರಿ, ಡಾ.ಸಾಹೇಬಣ್ಣ ಮುಡಬೂಳ, ಡಾ.ಎಸ್.ಎಸ್.ನಾಯಕ, ಗುಂಡಣ್ಣ ಕಲ್ಬುರ್ಗಿ ಹೀಗೆ ಈ ಪಟ್ಟಿಯನ್ನು ಬೆಳೆಸುತ್ತ ಹೋಗಬಹುದು. ರಾಜ್ಯದ ತುಂಬೆಲ್ಲ ಇಂಥ ಸಹಸ್ರ ಸಹಸ್ರ ಜನ ಸಿಕ್ಕುತ್ತಾರೆ. ಇಂಥವರನ್ನು ಒಳಗೊಂಡು ಜಾಗತಿಕ ಲಿಂಗಾಯತ ಮಹಾಸಭೆ ಬೆಳೆಯಬೇಕು.

ಪ್ರತಿಯೊಂದು ಸಮಾವೇಶ ನಡೆದಾಗಲೂ ಲಿಂಗಾಯತೇತರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿ ಎಲ್ಲರನ್ನೂ ಒಳಗೊಳ್ಳಬೇಕು. ಹಾಗಾದಾಗ ಮಾತ್ರ ಜಾಗತಿಕ ಲಿಂಗಾಯತ ಮಹಾಸಭೆ ಈ ನೆಲದಲ್ಲಿ ಬೇರು ಬಿಡುತ್ತದೆ.

೦ ವಿಶ್ವಾರಾಧ್ಯ ಸತ್ಯಂಪೇಟೆ

 

Leave a Reply

Your email address will not be published. Required fields are marked *

error: Content is protected !!