ಪಂಚಮಸಾಲಿಗಳ ಹೋರಾಟವೂ ; ಪಂಚಾಚಾರ್ಯರ ತಂತ್ರವೂ

ಲಿಂಗಾಯತ ಪಂಚಮಸಾಲಿಗಳು ಸರಕಾರವನ್ನು ಕೇಳುತ್ತಿರುವ ಮೀಸಲಾತಿಯ ಕುರಿತು ನಾನಿಲ್ಲಿ ಚರ್ಚಿಸಲು ಹೋಗಲಾರೆ. ಈ ಬಗ್ಗೆ ಸಂವಿಧಾನ ತನ್ನ ನಿರ್ಣಯವನ್ನು ಪ್ರಕಟಿಸುತ್ತದೆ. ರಾಜಕೀಯದ ಯಾವುದೇ ದಾಳ ಉರುಳಿದರೂ ಕೊನೆಗೆ ಅಡ್ಡಗಾಲಾಗಿಯೋ ಅಥವಾ ಆ ಕಾಯ್ದೆಯ ತೆರವಿಗೋ ಕಾನೂನನ್ನು ಎದುರುಗೊಳ್ಳಲೇಬೇಕಾದ ಸಂದರ್ಭವಂತೂ ಖಂಡಿತ ಬರುತ್ತದೆ.

ನನಗೆ ಪ್ರಶ್ನೆ ಇದಲ್ಲವೆ ಅಲ್ಲ. ಜನೇವರಿ ಹದಿನಾಲ್ಕರಂದು ಕೂಡಲಸಂಗಮದ ಶ್ರೀ. ಜಯಮೃತ್ಯುಂಜಯ ಜಗದ್ಗುರುಗಳು ಸರಕಾರದ ನೀತಿಯ ವಿರುದ್ಧ ರಣಕಹಳೆ ಊದಿದಾಗ ಅವರೊಂದಿಗೆ ಹರಿಹರದ ಮತ್ತೊಂದು ಪಂಚಮಸಾಲಿ ಪೀಠದ ಜಗದ್ಗುರು ಹಾಗೂ ಆ ಪೀಠದ ಭಕ್ತರು ಇದ್ದಿರಲಿಲ್ಲ.

ಕೋವಿಡ್ ಕಾರಣಕ್ಕೆ ಇಡೀ ನಾಡಿನ ತುಂಬಾ ಹಿಂದಿನಿಂದ ನಡೆಯುತ್ತ ಬಂದಿದ್ದ ಜಾತ್ರೆಗಳು ನಿಂತು ಹೋಗಿದ್ದವು. ಪ್ರತಿವರ್ಷ ಸಿರಿಗೆರೆ ಮಠ ನಡೆಸುತ್ತಿದ್ದ ತರಳಬಾಳು ಹುಣ್ಣಿವೆ, ಕೊಪ್ಪಳ , ಸಿದ್ಧಗಂಗಾ ಜಾತ್ರೆಗಳೇ ಸರಕಾರ ನಿಲ್ಲಿಸಿತ್ತು. ಇಂಥ ಸಂದರ್ಭದಲ್ಲಿ ಹರಿಹರದ ಜಾತ್ರೆ ನಡೆಯಲು ಅವಕಾಶ ಮಾಡಿಕೊಟ್ಟವರು ಯಾರು ? ಮತ್ತು ಏಕೆ ? ಎಂಬ ಪ್ರಶ್ನೆ ಏಳುವುದು ಸಹಜ. ಜನೇವರಿ ೧೪ ರಂದು ಕೂಡಲ ಸಂಗಮದಿಂದ ಹೊರಟ ಪಂಚಮಸಾಲಿ ಹೋರಾಟವನ್ನು ಹಣಿಯಲು ಹರಿಹರದ ಜಾತ್ರೆಗೆ ಅವಕಾಶ ನೀಡಲಾಯಿತೆ ? ಎಂಬ ಪ್ರಶ್ನೆ ಎಲ್ಲರ ಎದುರು ನಿಂತಿದೆ.

ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಗುರುಗಳು ಪಂಚಮಸಾಲಿ ಜನಾಂಗಕ್ಕೆ ೨ ಎ ಮೀಸಲಾತಿಗಾಗಿ ಹೋರಾಟ ರೂಪಿಸುವಾಗ ಹರಿಹರ ಪೀಠದ ಶ್ರೀ. ವಚನಾನಂದರು ಎಲ್ಲಿದ್ದರು ? ಬಹುಶಃ ಇವರೆಲ್ಲ ತಟಸ್ಥ ನೀತಿಯನ್ನು ತೋರಿಸಿದ್ದರು. ದಾವಣಗೆರೆ ಪಂಚಮಸಾಲಿ ಹೋರಾಟ ನಡೆದು ಬರುತ್ತಲೇ ಅದು ಎಲ್ಲಾ ರೀತಿಯ ಕಸುವು ತುಂಬಿಕೊಂಡಿತ್ತು. ಶಕ್ತಿ ಪಡೆದಿತ್ತು. ಆಗ ಇಕ್ಕಟ್ಟಿಗೆ ಸಿಕ್ಕಿ ಬೀಳಬಾರದು ಎಂಬ ಕಾರಣಕ್ಕೆ ಹರಿಹರ ಪೀಠದ ಶ್ರೀ. ವಚನಾನಂದರು ಪಾದಯಾತ್ರೆಗೆ ಧುಮುಕಿದರೆ ಹೊರತು ಯಾವ ಕಾಳಜಿಯಿಂದಲ್ಲ ಎಂಬುದು ಸುಸ್ಪಷ್ಟ.‌ ಆದರೂ ಇದನ್ನು ಸಹ ಹೇಗೋ ಸಹಿಸಬಹುದು. ಇಬ್ಬರು ಜಗದ್ಗುರುಗಳು ಪಂಚಮಸಾಲಿಯವರೆ ಆಗಿದ್ದರಿಂದ ಯಾರ ಒತ್ತಡಕ್ಕೋ ಒಳಗಾಗಿ ಜೊತೆಯಾಗಿರಬಹುದು. ಇದು ಸಮಾಜದ ದೃಷ್ಟಿಯಿಂದ ಸರಿಯಾದುದೆ ಆಗಿದೆ.

ಆಶ್ಚರ್ಯವೆಂದರೆ ಎಂದೂ ಪಂಚಮಸಾಲಿ ಪೀಠಗಳ ಕುರಿತು ಸದುದ್ದೇಶದ ಹೊಂದಿರದ, ಯಾಚತ್ತೂ ಆ ಕಡೆ ದಿವ್ಯ ನಿರ್ಲಕ್ಷ್ಯ ಹೊಂದಿದ್ದ ಪಂಚಾಚಾರ್ಯ ಪೀಠಗಳು ಒಮ್ಮಿದೊಮ್ಮೆ ಜ಼್ಞಾನೋದಯ ಆದವರಂತೆ ಪಂಚಮಸಾಲಿಯ ಹೋರಾಟಕ್ಕೆ ಬೆಂಬಲ ನೀಡಿ, ಅವರೊಂದಿಗೆ ಹೆಜ್ಜೆ ಹಾಕಿರುವುದು. ಪಂಚಮಸಾಲಿ ಪೀಠ ಹುಟ್ಟಿಕೊಂಡಾಗ ಅಕಳಾ ಸಕಳಾ ಮಾತನಾಡಿದ ಗುರು ಪರಂಪರೆಯ ಜನಕ್ಕೆ ಒಮ್ಮಿಂದೊಮ್ಮೆ ಪರಿವರ್ತನೆಗೊಳ್ಳಲು ಕಾರಣವೇನು ? ಎಂಬ ಸಂಗತಿಗಳ ಕುರಿತು ಆಲೋಚಿಸುತ್ತ ಹೊರಟಂತೆ ಸತ್ಯ ಬಹಿರಂಗವಾಗುತ್ತದೆ‌.

ಯಾವುದೆ ಶಕ್ತಿಯನ್ನು ಹಣಿಯಲು ಸಾಧ್ಯವಿಲ್ಲ ಎಂದಾದಾಗ ,ಅಥವಾ ತಮ್ಮ ಅಸ್ತಿತ್ವಕ್ಕೆ ಕರಗಿ ಹೋಗುತ್ತದೆ ಎಂದಾಗ ಸಹಜವಾಗಿ ಅನಾರೋಗ್ಯಕರ ಮನಸುಗಳು ತಾತ್ಕಾಲಿಕವಾಗಿ ಆ ಶಕ್ತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಂತೆ ತೋರಿಸುತ್ತವೆ. ಅವರ ಏನೆಲ್ಲವನ್ನು ಪ್ರೀತಿಸಿದಂತೆ ಮಾಡುತ್ತವೆ. ಆದರೆ ಅದು ದೃತರಾಷ್ಟ್ರನ ಆಲಿಂಗನದಂತೆ ಎಂಬ ಐತಿಹಾಸಿಕ ಘಟನೆಯನ್ನು ಯಾರೂ ಮರೆಯಬಾರದು.

ಬಸವಣ್ಣನವರ ಭಾವ ಚಿತ್ರವನ್ನು ಕಂಡರೆ ಎಗರಿ ಬೀಳುತ್ತಿದ್ದವರು ಅದನ್ನೀಗ ಹಾಕುತ್ತಿದ್ದಾರೆ ಎಂದರೆ ಅವರು ಪರಿವರ್ತನೆಗೊಂಡಿದ್ದಾರೆ ಅಂತ್ತಲ್ಲ. ಬಸವಣ್ಣನವರು ಈಗ ಎಲ್ಲರಿಗೂ ಅನಿವಾರ್ಯವಾಗಿದ್ದಾರೆ ಎಂದರ್ಥ. ಪಂಚಮಸಾಲಿ ಜನಾಂಗದಿಂದ ಎಲ್ಲವನ್ನು ಪಡೆದುಕೊಂಡ, ಮೆರೆಯಿಸಿಕೊಂಡ ಜನಾಂಗ ಈಗ ಮತ್ತೆ ಹತ್ತಿರವಾಗುತ್ರಿರುವುದು ಪಂಚಮಸಾಲಿ ಜನಾಂಗದ ಏಳಿಗೆಯನ್ನು ಕಂಡು ಖುಷಿಯಿಂದ ಬಂದದ್ದಂತೂ ಅಲ್ಲ. ಇಲ್ಲೇನೋ ಮಸಲತ್ತು ನಡೆಯುತ್ತಿದೆ ಎಂದು ರಾಜಕೀಯ, ಧಾರ್ಮಿಕ ವಿಶ್ಲೇಷಕರು ಹೇಳುತ್ತಾರೆ.

ಈ ಸಂಗತಿಗಳನ್ನು ಶ್ರೀ.ಜಯಮೃತ್ಯುಂಜಯ ಸ್ವಾಮೀಜಿ ಅರಿತುಕೊಂಡು ಎಚ್ಚರಿಕೆಯ ಹೆಜ್ಜೆ ಇಡಬೇಕು. ಇಲ್ಲದೆ ಹೋದರೆ ಅಡ್ಡಪಲ್ಲಕ್ಕಿಯ ಅಯ್ಯಪ್ಪಗಳ ಕುತಂತ್ರಕ್ಕೆ ಹೋರಾಟ ಬಲಿಯಾಗುವ ಎಲ್ಲಾ ಅಪಾಯವಂತೂ ಇದ್ದೇ ಇದೆ.

ವಿಶ್ಲೇಷಕ

7 thoughts on “ಪಂಚಮಸಾಲಿಗಳ ಹೋರಾಟವೂ ; ಪಂಚಾಚಾರ್ಯರ ತಂತ್ರವೂ

 1. ಊಟದ ಸಮಯಕ್ಕೆ ಹಾಜರಾದ ದಾಸೋಹಿಗಳು!
  —————–
  ಕನ್ನಡದಲ್ಲಿ ಒಂದು ಗಾದೆ ಮಾತಿದೆ: ಸಂತೆಗೂ ಮುನ್ನ ಗಂಟುಗಳ್ಳರು ಸೇರಿದರಂತೆ.

  2-ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜ ನಡೆಸುತ್ತಿರುವ ಅಭೂತಪೂರ್ವ ಅಭಿಯಾನಕ್ಕೆ ಅಂತಿಮ ಕ್ಷಣದಲ್ಲಿ ಬಂದು ಸೇರುತ್ತಿರುವ, ಬೇಷರತ್ತಾಗಿ ಬೆಂಬಲ ಸೂಚಿಸುತ್ತಿರುವ ಅಂದಾಜು (ಅವರೇ ಹೇಳಿಕೊಂಡಂತೆ) 500 ಮಠಾಧೀಶರು ಹಾಗೂ ಧಾರ್ಮಿಕ ವ್ಯಕ್ತಿಗಳನ್ನು ನೋಡುತ್ತಿದ್ದರೆ, ಮೇಲಿನ ಗಾದೆಮಾತು ಪದೆ ಪದೆ ನೆನಪಾಗತೊಡಗಿದೆ.

  ಇಷ್ಟು ದಿನ ಇವರೆಲ್ಲ ಎಲ್ಲಿದ್ದರು? ಏಕೆ ಪಾದಯಾತ್ರೆಗೆ ಬಹಿರಂಗ ಬೆಂಬಲ ಘೋಷಿಸಲಿಲ್ಲ? ಕಡೇ ಪಕ್ಷ ಒಂದಾದರೂ ಸಾರ್ವತ್ರಿಕ ಹೇಳಿಕೆ ಕೊಡಲಿಲ್ಲ? ಈ ಪೈಕಿ ಕೆಲವರು ಸದರಿ ಅಭಿಯಾನವನ್ನು ಟೀಕಿಸಿದ್ದೂ ಉಂಟಲ್ಲ? ಅದ್ಹೇಗೆ ಅವರೆಲ್ಲರ ಅಭಿಪ್ರಾಯಗಳು ದಿಢೀರನೇ ಬದಲಾದವು?

  ಅದ್ಹೇಗೆ ಅವರ ಮನಃಸ್ಥಿತಿಯಲ್ಲಿ ಈ ಪರಿ ಬದಲಾವಣೆ ಕಾಣಿಸಿಕೊಂಡಿತು? ಈ ಐದು ನೂರು ಜನ ಅದ್ಹೇಗೆ ತಂತಮ್ಮ ನಡುವೆ ಮಾತಾಡಿಕೊಂಡರು? ತಮ್ಮ ಸಮಾಜಗಳಿಗೆ ಮೀಸಲಾತಿ ಕೇಳುವುದನ್ನು ಬಿಟ್ಟು, ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಬೆಂಬಲಿಸಲು ಅದ್ಹೇಗೆ, ಅಷ್ಟು ಬೇಗ ʼಸಾರ್ವತ್ರಿಕʼ ನಿರ್ಣಯ ಕೈಗೊಂಡರು? ಯಾರು ಇವರನ್ನೆಲ್ಲ ಸಂಪರ್ಕಿಸಿ, ಒಗ್ಗೂಡಿಸಿದವರು?

  ಖಂಡಿತವಾಗಿಯೂ ಈ ಬೆಳವಣಿಗೆ ಆಕಸ್ಮಿಕವಲ್ಲ.

  ಅಷ್ಟೇ ಅಲ್ಲ, ಇವರು ಹೇಳಿಕೊಳ್ಳುತ್ತಿರುವ ಸೋ ಕಾಲ್ಡ್‌ ʼಸದುದ್ದೇಶʼವೂ ಅವರ ಈ ʼದಿಢೀರ್‌ʼ ನಡವಳಿಕೆಯಲ್ಲಿ ವ್ಯಕ್ತವಾಗುತ್ತಿಲ್ಲ.

  ಹೀಗಾಗಿ, ಪಾದಯಾತ್ರೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೊರಟಿರುವ ಪಂಚಮಸಾಲಿ ಸಮಾಜದ ಉಭಯ ಪೀಠಗಳ ಬಸವ ಜಯಮೃತ್ಯುಂಜಯ ಶ್ರೀಗಳು ಹಾಗೂ ವಚನಾನಂದ ಶ್ರೀಗಳು ಈ ಸೂಕ್ಷ್ಮದ ಕುರಿತು ಜಾಗೃತರಾಗಿರಬೇಕು. ಇದುವರೆಗೆ ಹೋರಾಟ ಹೇಗೆ ನಡೆದುಕೊಂಡು ಬಂದಿದೆಯೋ, ಇದೇ ಫೆಬ್ರವರಿ 21 ರವರೆಗೂ ಅದೇ ರೀತಿ ನಡೆಯುವಂತೆ ನೋಡಿಕೊಳ್ಳಬೇಕು. ಎಲ್ಲಾ ನಿರ್ಣಯಗಳನ್ನು ನೀವಿಬ್ಬರೇ ಕೈಗೊಂಡು, ನೀವಿಬ್ಬರೇ ಅಧಿಕೃತವಾಗಿ ಪ್ರಕಟಿಸಬೇಕು. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಎಂದೇ ನಿಲುವಳಿ, ಗೊತ್ತುವಳಿ, ಹಕ್ಕೊತ್ತಾಯ ಮಾಡುತ್ತ ಹೋಗಬೇಕು. ಯಾವ ಕಾರಣಕ್ಕೂ ಕೆನೆ ಬರುವ ಸಮಯಕ್ಕೆ ಹಾಜರಾಗಿರುವ ಈ ಸ್ವಾಮೀಜಿಗಳ ದಂಡಿಗೆ ನೇತೃತ್ವ, ಅಧಿಕಾರ ಕೊಡಬೇಡಿ.

  ಇದು ನನ್ನೊಬ್ಬನ ಮನವಿಯಲ್ಲ, ಬಹುತೇಕ ಪಂಚಮಸಾಲಿ ಸಮಾಜದವರ ಕಳಕಳಿಯೂ ಹೌದು.

  ಏಕೆಂದರೆ, ಅಂತಿಮ ಸುತ್ತಿನಲ್ಲಿ ಬಂದು ಸೇರಿಕೊಂಡಿರುವ ಈ 500 ದಾಸೋಹಿಗಳ ದಂಡು ನಿಮ್ಮ ಹೋರಾಟದ ದಾರಿ ತಪ್ಪಿಸಬಹುದು. ಮೂಲ ಉದ್ದೇಶವನ್ನು ವಿಫಲಗೊಳಿಸಬಹುದು. ಇದುವರೆಗೆ ನೀವು ಗಳಿಸಿಕೊಂಡು, ಬೆಳೆಸಿಕೊಂಡು ಬಂದಿರುವ ಪ್ರಭಾವವನ್ನು ಮಂಕಾಗಿಸಬಹುದು.

  ಉಳಿದ ವಿಷಯಗಳನ್ನು ಲೈವ್‌ ನಲ್ಲಿ ಹೇಳಿದ್ದೇನೆ. ಆಸಕ್ತರು ಕೇಳಿಸಿಕೊಳ್ಳಬಹುದು. ಇಷ್ಟವಾದರೆ ಶೇರ್‌ ಕೂಡಾ ಮಾಡಬಹುದು.

  ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ. ಆದರೆ, ಅವು ಸಭ್ಯ ಭಾಷೆಯಲ್ಲಿರಲಿ. ನನ್ನ ಅಭಿಪ್ರಾಯಗಳನ್ನು ನೀವು ಒಪ್ಪಬೇಕೆಂದೇನಿಲ್ಲ. ಆದರೆ, ಆರೋಗ್ಯಕರ ಚರ್ಚೆಯನ್ನು ಖಂಡಿತ ನಡೆಸಬಹುದು.

  ಅಂತಹ ಎಲ್ಲ ಮನಸ್ಸುಗಳಿಗೂ ಮುಕ್ತ ಸ್ವಾಗತ.

  – ಚಾಮರಾಜ ಸವಡಿ | ಕೊಪ್ಪಳ

  (ಫೇಸ್‌ಬುಕ್‌ ಲೈವ್‌ ಕೊಂಡಿ)
  https://www.facebook.com/chamaraj.savadi/videos/10218871321878683/?__cft__%5B0%5D=AZXOo5L1qqNhPOGSAJHtZymPMGSEqMxptsPHMrPdj-R-C5qb17xlRxgHf0Yct-WTrOA64RXQO7sA0d9Ilwf3Qh6ijEFEvCaA7lB18xY1tF7hh0gxdUB0EoC22OQTEcLneRbESx3Zs5n3lPdCdkt3Czls&__tn__=%2CO%2CP-R

 2. ಸವಡಿ ಅವರ ಹೇಳಿಕೆ ಬೆಂಬಲಿಸುತ್ತೇನೆ ವಿಶ್ವರದ್ಯಾರೆ ಪದ ಬಳಕೆ ಮಾಡುವಾಗ ಎಚ್ಚರ ಇರಲಿ ಸಮುದಾಯಕ್ಕಾಗಿ ಶ್ರೀಗಳು ಕಾಲ ಕಾಲಕ್ಕೆ ಎಲ್ಲಾ ಕ್ರಮ ಕೈಗೊಂಡಿದ್ದಾರೆ ಭಕ್ತರ ಆಶೂತ್ತರಗಳಿಗೆ ಒತ್ತಾಸೆಯಾಗಿ ಕೆಲಸ ಮಾಡುತ್ತಿದ್ದಾರೆ ಅವ್ರೇನು ತೋಡು ಕುಟ್ಟುಟ್ಟಿಲ್ಲ ಸಮಾಜ ಒಂದಾಗಿದೆ ಕಡ್ಡಿ ಅಲ್ಲಾಡಿಸುವುದನ್ನು ಬಿಡುವುದು ಒಳಿತು.

  1. ಕಾಲಕಾಲಕ್ಕೆ ಶ್ರೀಗಳು ಯಾವ ಯಾವ ಕಾರ್ಯಕ್ರಮ ಹಾಕಿಕೊಂಡು ಜನರನ್ನು ಬದಲಾಯಿಸಲು ಪ್ರಯತ್ನಿಸಿದ್ದಾರೆ ? ಎಂಬ ಸಂಗತಿಗಳನ್ನು ತಿಳಿಸಿ ಹೇಳಿದರೆ, ಈ ಮೇಲಿನ ಬರಹ ಬರೆದ ವಿಶ್ಲೇಷಕರಿಗೆ ಅದನ್ನು ನಾನು ತಿಳಿಸಲು ಬಯಸಿದ್ದೇನೆ.
   ಜೊತೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ನಾನೂ ಬರೆಯುವೆ.

 3. ನನಗೂ ಈ ಆಷಾಢಭೂತಿಗಳ ನಡೆ ನಿಜಕ್ಕೂ ಕುತೂಹಲ ತಂದಿದೆ ನನಗೆ ಅರಿವಿರುವಂತೆ ಇವರು ಯಾವತ್ತೂ ಕೂಡ ನಮ್ಮ ಸಮಾಜದ ವಿರೋಧ ನೆಲೆಯಲ್ಲಿಯೇ ಕೆಲಸ ಮಾಡಿದ್ದಾರೆ ಈಗ ಏಕಾಏಕಿ ನಮ್ಮ ಚಳುವಳಿಗೆ ಕೂಡಿಕೊಳ್ಳುವುದರಿಂದ ಹಿಂದೆ ದೊಡ್ಡ ಮಸಲತ್ತು ಇದೆ ಚಳವಳಿಯನ್ನು ಹೈಜಾಕ್ ಮಾಡುವ ಕುತಂತ್ರ ನಿಜಕ್ಕೂ ಅಡಗಿದೆ ಪಂಚಮಸಾಲಿಗಳ ಐಕ್ಯತೆಯನ್ನು ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಹಾಗಾಗಿ ಅವರ ಜೊತೆಯೇ ಸೇರಿಕೊಂಡು ಜೈಕಾರ ಪಡೆದುಕೊಂಡರಾಯಿತು ಎಂಬ ಕಾರ್ಯತಂತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ ಹಾಗಾಗಿ ಇವರನ್ನು ಚಳವಳಿಯಿಂದ ದೂರ ಇಡುವುದೇ ಸೂಕ್ತ ನಿರ್ಧಾರ ಪಂಚಮಸಾಲಿ ಪೀಠದ ಉಭಯ ಜಗದ್ಗುರುಗಳು ಈ ಕುರಿತು ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಲಿ ಎದೆಗುಂದದೆ ಮುನ್ನಡೆಯಲಿ ಸೋಲುಗೆಲುವು ನಮ್ಮವೇ …ಯಾವ ಕಾರಣಕ್ಕೂ ಚಳುವಳಿಯ ಒಳಗಡೆ ಇವರನ್ನು ಬಿಟ್ಟುಕೊಳ್ಳಬಾರದು ಎಂಬ ನಿರ್ಧಾರವು ಅಚಲವಾಗಿರಲಿ ಇದು ನನ್ನ ಮತ್ತು ನನ್ನಂತಹ ಅನೇಕ ಪಂಚಮಸಾಲಿ ಬಂಧುಗಳ ಒಕ್ಕೊರಲ ಮನವಿ .

 4. ವಿಶ್ವಾರಾಧ್ಯ ಸರ್, ತಮ್ಮ ಹೇಳಿಕೆಯಲ್ಲಿನ ಲಿಂಗಾಯತತ್ವದ (ಪಂಚಮಸಾಲಿ ಸೇರಿ) ಬಗೆಗಿನ ಕಾಳಜಿ, ಅಸ್ಮಿತತೆ ಪ್ರಶ್ನಾತೀತ. ನನ್ನ ಪ್ರಕಾರ ಸ್ವತಂತ್ರ
  ಧರ್ಮ ಮಾನ್ಯತೆಯೇ ಎಲ್ಲಕ್ಕಿಂತ ಶ್ರೇಷ್ಠ.

 5. ನಮ್ಮ ಲಿಂಗಾಯತ ಎಲ್ಲ ಒಳಪಂಗಡಗಳ ನ್ಯಾಯ ಸಿಗಬೇಕಾದ್ರೆ ಮೊದಲು ಲಿಂಗಾಯತ ಧರ್ಮಕ್ಕೆ ಕೇಂದ್ರ ಸರ್ಕಾರ ಸಾಂವಿಧಾನಿಕ ಮಾನ್ಯತೆ.ನೀಡಬೇಕು.. ಇದೆ ಪರಿಹಾರ..

Leave a Reply

Your email address will not be published. Required fields are marked *

error: Content is protected !!