*ಬಸವಣ್ಣನವರ ಪರುಷ ಕಟ್ಟೆಯಲ್ಲಿ ನಂದಿಯ ಮೂರ್ತಿ ಇರಬೇಕೆ ?*

*ಬಸವಣ್ಣನವರ ಪರುಷ ಕಟ್ಟೆಯಲ್ಲಿ ನಂದಿಯ ಮೂರ್ತಿ ಇರಬೇಕೆ ?*

ಬಸವ ಧರ್ಮ ರಕ್ಷಣೆಗಾಗಿ ಗುರು ಲಿಂಗಾನಂದ ಅಪ್ಪಾಜಿ ಯವರ ಹಾಗೂ ಗುರು ಮಹಾಮಾತಾಜಿಯವರಿಂದ ಲಿಂಗಾಯತ ಧರ್ಮದ ಮಹಾ ಜ್ಞಾನದ ಅರಿವ ಜಾಗೃತಗೊಳಿಸಿಕೊಂಡು ಗುರು ಬಸವಣ್ಣನವರ ಬೆಂಬಳಿವಿಡಿದು ಸದಾ ಬಸವಣ್ಣನವರಿಗಾಗಿ ಹೋರಾಡುವ ಸೈನ್ಯವೆಂದರೆ ಅದು ರಾಷ್ಟ್ರೀಯ ಬಸವ ದಳ. ಎಂತಹಾ ಕಷ್ಟ ನಷ್ಟಗಳಿಗೂ ಎದೆಗುಂದದ ಧೈರ್ಯ ತುಂಬಿಕೊಂಡಿರುವ, ಶರಣ ತತ್ವಾದರ್ಶಗಳ ಒಡಲುಗೊಂಡಿರುವ ಶರಣ ಶರಣೆಯರ ಸೈನ್ಯ ದಳವೆಂದರೆ ಅದು *ರಾಷ್ಟ್ರೀಯ ಬಸವದಳ*. ಶರಣ ಬಂಧುಗಳೇ ತಮಗೆಲ್ಲರಿಗೂ ಶರಣು ಶರಣಾರ್ಥಿಗಳು. ಕೆಲಕಾಲದವರೆಗೆ ಓರ್ವ ತಾಯಿ ತಾನುಟ್ಟ ಬಟ್ಟೆಯ ಬದಲಿಸಿಕೊಂಡು ಬರಲು ಒಂದು ಕೊಠಡಿಯಲ್ಲೊ, ಆವರಣದಲ್ಲಿಯೋ ಮರೆಯಾಗಿ ಹೋಗಿ, ಹೊಸ ಉಡುಗೆಯನ್ನುಟ್ಟು ಮತ್ತೆ ಹೊರಬರುವಂತೆ, ನವಚೈತನ್ಯಯುಕ್ತ ಶರೀರವೆಂಬ ಹೊಸಬಟ್ಟೆಯುಟ್ಟು ಬರಲು ದೈಹಿಕವಾಗಿ ನಮ್ಮನಗಲಿದ್ದಾರೆ. ಗುರು ಮಹಾಮಾತಾಜಿಯವರು. ಆದರೆ ನಮ್ಮೆಲ್ಲರ ಹೃದಯವಾಸಿಯಾಗಿ, ಸದಾ ನಮ್ಮನೆಲ್ಲಾ ಕಾಲದಲ್ಲೂ ಗುರು ಬಸವಣ್ಣನವರಿಗಾಗಿ ಜಾಗೃತಗೊಳಿಸುತ್ತಿದ್ದಾರೆ.

ಕಲ್ಯಾಣ ಕರೆದಿದೆ ಕಲ್ಯಾಣ ಗುರುಬಸವಣ್ಣನ ಕಲ್ಯಾಣ ಶರಣರಾಳಿದ ಕಲ್ಯಾಣ ವಿಶ್ವಕೆ ಬಯಸುತ ಕಲ್ಯಾಣ.. ಬನ್ನಿರಿ ಶರಣರೆ ಬಸವಕಲ್ಯಾಣಕೆ ಬಸವ ಮಹಾಮನೆ ಕಟ್ಟುವ ಬನ್ನಿ ಶರಣರ ಋಣವನು ತೀರಿಸ ಬನ್ನಿ, ಬಸವಾತ್ಮಜೆಯ ಬಿನ್ನಹವಿದುವು… ಬಸವಾತ್ಮಜೆಯ ಬಿನ್ನಹವಿದುವು… ಶರಣ ಬಂದುಗಳಿಗೆಲ್ಲ ಈ ಮೂಲಕ ಕರೆಕೊಡುವುದೇನೆಂದರೆ, ಒಂದು ಕಾಲಘಟ್ಟದಲ್ಲಿ ಬಸವಕಲ್ಯಾಣದ ಬಸವೇಶ್ವರ ಗುಡಿಯಲ್ಲಿ ಬಸವಣ್ಣನವರ ಹೆಸರಿನಲ್ಲಿ ನಂದಿ ಎತ್ತು ಪೂಜೆಗೊಳ್ಳುತ್ತಿತ್ತು. ಬಸವಾನುಯಾಯಿ ತತ್ವನಿಷ್ಟರ ಹೋರಾಟದಿಂದಾಗಿಯೆ, ಶೈವರ ನಂದಿಯು ಹೋಗಿ ಎಂದೆಂದೂ ನಂದದ ಜಗಜ್ಯೋತಿ ಗುರು ಬಸವಣ್ಣನವರು ಪುತ್ಥಳಿ ಯಾಗಿ ಬಂದು ಬಸವೇಶ್ವರ ಗುಡಿಯಲ್ಲಿ, ಗುರು ಬಸವಣ್ಣನವರಾಗಿ ನೈಜವಾಗಿ ಲಿಂಗಪೂಜಾಸೀನರಾಗಿ ಪ್ರತಿಷ್ಟಾಪಿತಗೊಂಡರು. ಇದಕ್ಕಾಗಿ ಪ್ರಾಣದ ಹಂಗುತೊರೆದು ಹೋರಾಟ ಮಾಡಿದ ಎಲ್ಲರಿಗೂ ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಋಣ ತೀರಿಸಲಾಗದು. ಮಹಾಗುರು ಬಸವಣ್ಣನವರು ಬಸವಕಲ್ಯಾಣದಲ್ಲಿ ಪ್ರಧಾನಿಯಾಗಿದ್ದಾಗ ಜಗತ್ತಿನ ಯಾವ ಪ್ರವಾದಿ ಧಾರ್ಶನಿಕರೂ ಊಹಿಸದ ಅನೇಕ ವಿಶೇಷ ತತ್ವಾದರ್ಶಗಳನ್ನು ಆಚರಣೆಗೆ ತಂದರು.

ಅಂತವುಗಳಲ್ಲಿ ನಿತ್ಯವೂ ಜನ ಧರ್ಶನ, ಸಮಾಜ ಧರ್ಶನ, ನೀಡಿ ಅವರ ನ್ಯಾಯೋಚಿತ ಧರ್ಮಾದರ್ಶಗಳನ್ನು ಬೇಕು ಬೇಡಗಳನ್ನು ಯಾವುದೇ ವಿಳಂಬವಿಲ್ಲದೆ ನೆರವೇರಿಸಿ, ಜನರನ್ನು ಪ್ರಸನ್ನಗೊಳಿಸುತ್ತಿದ್ದರು. ಕೇವಲ ಗ್ರಂಥಸ್ಥವಾಗಿದ್ದ ಸಾಮಾಜಿಕ ನ್ಯಾಯ, ಬದ್ರತೆ, ಧರ್ಮ, ತತ್ವಾಚಾರಗಳನ್ನು ಗ್ರಂಥಗಳ ಪುಟಪುಟಗಳಿಂದ ದಿಟವಾದುದ ಹೊರತೆಗೆದು, ಜನಸಾಮಾನ್ಯರಿಗೆ ಜಾತಿ ವ್ಯವಸ್ತೆಯ ದುಷ್ಟ ಪದ್ದತಿಗೆ ನಲುಗಿ ಸಾಮಾಜಿಕ ನ್ಯಾಯವಂಚಿತ ವರ್ಗದ ಬಹುಸಂಖ್ಯಾತರ ಕಲ್ಯಾಣಕ್ಕಾಗಿ, ಸರ್ವಸಮಾನ ಪ್ರವೇಶರಹಿತವಾದ ರಾಜನಾಸ್ಥಾನ, ಮಹಾಮಂತ್ರಿಗಳ ಮಂತ್ರಿಮಹಲುಗಳು, ಪುರೋಹಿತಶಾಹಿಗಳ ದೇವಾಲಯಗಳು, ಹಾಗೂ ಮಠಾಲಯಗಳ ಕಪಿಮುಷ್ಟಿಯಿಂದ ಹೊರತಂದು, ಜನರಬಳಿಸಾರಿ ಅವರಮುಂದೆ ಸಮಾನವಾಗಿ ಮುಕ್ತವಾಗಿಟ್ಟು ಕೊಟ್ಟು, ಜನಮಾನಸವನ್ನು ತಣಿಸಿದ ಮೊಟ್ಟಮೊದಲ ಮಹಾನ್ ದಾರ್ಶನಿಕ ಗುರು ಬಸವಣ್ಣನವರು. ಅಂದು ಕಲ್ಯಾಣದಲ್ಲಿ ಮಹಾಮಂತ್ರಿಯಾದ ಗುರುಬಸವಣ್ಣನವರು ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿದರು. ಪಟ್ಟಭದ್ರ ಹಿತಾಸಕ್ತಿಗಳು ಅವರ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ವಿಪತ್ತುಗಳ ಸರಮಾಲೆಯನ್ನೇ ಸೃಷ್ಟಿಸಿದರು. ಆದರೂ ಧರ್ಮ ಗುರು ಬಸವಣ್ಣನವರು ಎದೆಗೆಡದೆ ಅಡಿಯಿಟ್ಟು ನಡೆದು ನವಸಾಧನೆಯ ಹರಿಕಾರರಾದರು. ಹೀಗೆ ನಿತ್ಯವೂ ಗುರು ಬಸವಣ್ಣನವರು ಕಲ್ಯಾಣದ ಪರುಷಕಟ್ಟೆ ಎಂಬ ಒಂದು ವಿಶಾಲವಾದ ಕಟ್ಟೆಯಮೇಲೆ ಕುಳಿತು, ಜಾತಿ ವರ್ಣ ವರ್ಗ ಲಿಂಗ ಸಮಯಾತೀತವಾಗಿ , ಸಮಾಜದ ಎಲ್ಲಾ ಜನರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳ ನ್ಯಾಯಯುತ ಬಗೆಹರಿಯುವಿಕೆಗಾಗಿ ಆಕ್ಷಣದಲ್ಲಿಯೆ ಕಾರ್ಯತತ್ಪರರಾಗುತ್ತಿದ್ದರು.

ಜನರ ಸಮಾಜದ, ನ್ಯಾಯಯುತ ಧರ್ಮಯುಕ್ತ ಬೇಡಿಕೆಗಳನ್ನು ಆಕೂಡಲೆ ಬೇಡಿದುದ ಬೇಡಿದವರಿಗೆ ಇಲ್ಲೆನ್ನದೀವ ಎಂದು ಹೇಳುವಂತೆ ಆಗಲೆ ಈಡೇರಿಸಿ ಸಂತೃಪ್ತಿ ಗೊಳಿಸಿಬಿಡುತ್ತಿದಗದರು. ಗುರು ಬಸವಣ್ಣನವರು ಕಲ್ಯಾಣದಲ್ಲಿ ಇರುವಾಗಲೆ ಆ ಪರುಷಕಟ್ಟೆಗೆ ಪ್ರವಾಹದಂತೆ ಬರುವ ಜನ, ಸಮಯಾವಭಾವದಿಂದ ಬೇಟಿಯಾಗಲು ಸಾದ್ಯವಾಗದ ಸಂದರ್ಬದಲ್ಲಿ, ಗುರು ಬಸವಣ್ಣನವರು ಆ ಕಟ್ಟೆಯಮೇಲೆ ಇಲ್ಲದಾಗಲೂ ಕಟ್ಟೆಯ ಧರ್ಶನ ಪಡೆದು, *ಗುರು ಬಸವಣ್ಣನವರು ಸೂಕ್ಷ್ಮ ಶರೀರಿಗಳು, ಅವರೆಲ್ಲಿದ್ದರೂ ನಮ್ಮ ಅರಿಕೆಗಳನ್ನು ನಮ್ಮನ್ನು ನೋಡಿ ಧರ್ಮ ಯುಕ್ತ ನ್ಯಾಯಯುಕ್ತ ಪರಿಹಾರ ನೀಡಿಯೇತೀರುತ್ತಾರೆ ಎಂದು ಭಕ್ತಿಯಿಂದ ಅರಿಕೆಮಾಡಿಕೊಂಡು ಹೋಗುತ್ತಿದ್ದರು”*. ಇದು ಇಂದಿಗೂ ೯೦೦ವರ್ಷಗಳಿಂದಲೂ ನಡೆದುಬಂದ ಆಚಾರ ಸಂಸ್ಕೃತಿ. ಇಂತಹ ಪವಿತ್ರ *ಪರುಷ* ಕಟ್ಟೆಯ ಮೇಲೆ ಭಾರತದ ಪ್ರಥಮ ಗೃಹ ಮಂತ್ರಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಬಬಾಯಿ ಪಟೇಲರ ೧೯೪೮ರ ಪೋಲೀಸ್ ಆಕ್ಷನ್ ಆಗುವವರೆಗೂ ಆ ಪರುಷಕಟ್ಟೆಯ ಮೇಲೆ ಯಾವುದೇ ಪ್ರತಿಮೆ ಪುತ್ಥಳಿ ಇರಲಿಲ್ಲ. ನಿಜಾಮರು ಕ್ರೂರ ರಜಾಕರಿಂದ ಹೇಗಾದರೂ ಪವಿತ್ರ ಪರುಷಕಟ್ಟೆಯನ್ನು ರಕ್ಷಿಸಬೇಕೆಂದು, ಎಲ್ಲಿಯೋ ಇದ್ದ ನಂದಿಯ ( ಇಂದಿನಂತೆ ತಕ್ಷಣಕ್ಕೆ ಗುರು ಬಸವ ಪುತ್ತಳಿ ಆದಿನಗಳಲ್ಲಿ ಎಲ್ಲಿ ಸಿಗಬೇಕು. ಅದಕಾಗಿ ಮುಸಲ್ಮಾನರ ಆಳ್ವಿಕೆಯಲ್ಲಿ ಹಾಳುಗೆಡವಿದ ಗುಡಿಯಿಂದ ಎತ್ತು ಹೋರಿ ನಂದಿಯನ್ನು) ಮೂರ್ತಿಯನ್ನು ತಂದು ರಾತ್ರೋ ರಾತ್ರಿ ಕಟ್ಟೆಯಮೇಲಿಟ್ಟರು. ಪೂಜೆ ಭಜನೆಗಳು ಆರಂಭವಾದವು. ಗಣಪತಿಯೂ ಬಂದು ಕುಳಿತುಕೊಂಡಿತು. ಮುಸ್ಲಿಮರಿಗೂ ಲಿಂಗಾಯತರಿಗೂ ವ್ಯಾಜ್ಯಗಳು ಆರಂಭವಾದವು. ಬಸವೇಶ್ವರ ಪಂಚಕಮಿಟಿಯ ಸುದೀರ್ಘ ನಿರಂತರ ನ್ಯಾಯಾಲಯದ ಹೋರಾಟದಿಂದಾಗಿ ಪರುಷಕಟ್ಟೆ ಇಂದು ಲಿಂಗಾಯತ ಧರ್ಮೀಯರಿಗೆ ಉಳಿದುಕೊಂಡಿದೆ. ಅವರಿಗದೆಷ್ಟು ಕೃತಜ್ಞತೆಯ ಹೇಳಿದರೂ ಸಾಲದೆ.

ಆದರೆ ಅಂದಿಗೆ ಆ ಪರುಷಕಟ್ಟೆ ರಕ್ಷಿಸಲು ಆ ನಂದಿ ಮೂರ್ತಿ ಸಹಕಾರಿಯಾಯಿತು. ಆದರೆ ಹಲವಾರು ವರ್ಷಗಳ ನಿರಂತರ ಪೂಜೆಯಿಂದಾಗಿ. ಲಿಂಗಾಯತರಿಗೆ ನಂದಿ ಮೂರ್ತಿಪೂಜೆಯೆ ಐತಿಹಾಸಿಕ ಬಸವಣ್ಣನವರ ಬಸವಪೂಜೆ ಎಂಬ ಭ್ರಮಾಭಕ್ತಿ ಉಂಟಾಯಿತು. ಲಿಂಗಾಯತ ಧರ್ಮ ಜಾಗೃತಿಯಿಂದಾಗಿ *ನಂದಿಪೂಜೆ ನಮ್ಮ ಧಾರ್ಮಿಕ ಆಚರಣೆಗಳಿಗೆ ವ್ಯತಿರಿಕ್ತವಾದುದು.* ಎಂದು ಅರಿವಾಗಿದೆ. ಇದೀಗ ನಂದಿಯ ಬದಲಿಸಿ ನೈಜ ಬಸವಣ್ಣನವರ ಪುತ್ಥಳಿ ಇರಿಸುವ ಕ್ಷಣಕಾಗಿ ನಾವು ನೀವೆಲ್ಲರೂ ಕಾಯುತ್ತಿದ್ದೆವು. ಆಕ್ಷಣ ಕೆಲವರ ಧೈರ್ಯಯುತ ಪ್ರಾಣಪಣಕಿಟ್ಟು ಮಾಡಿದ ಸತತ ಪ್ರಯತ್ನದಿಂದಾಗಿ ನಂದಿಯನ್ನು ಸ್ಥಳಾಂತರಿಸಲು ಸಾದ್ಯವಾಗಿದೆ. ಆದರೆ ವೀರಶೈವ ಪಟ್ಟಭದ್ರಹಿತಾಸಕ್ತರು ಇದೀಗ, ಸ್ಥಳಾಂತರಗೊಂಡ ನಂದಿಯನ್ನು ಮತ್ತದೇ ಸ್ಥಳದಲ್ಲಿ ಇರಿಸಲು ಸರಕಾರದ ತಾಲ್ಲೂಕು ದಂಡಾದಿಕಾರಿಗಳು, ಜಿಲ್ಲಾದಿಕಾರಿಗಳಿಗೆ ಅಹವಾಲು ಸಲ್ಲಿಸುತ್ತಿದ್ದಾರೆ. ರಾಜಕಾರಣಿಗಳ ಮುಖಾಂತರ ಒತ್ತಡ ಸೃಷ್ಟಿಸುತ್ತಿದ್ದಾರೆ. ಬಲ ಪ್ರಯೋಗದ ಬೆದರಿಕೆಯನ್ನು ಹಾಕುತ್ತಿದ್ದಾರೆ. ಕಾನೂನು ಬದ್ದವಾಗಿ ಸ್ಥಳಾಂತರಗೊಳಿಸಿರುವ ವ್ಯಕ್ತಿಗಳಿಗೆ ಪ್ರಾಣ ಬೆದರಿಕೆಯ ಹಾಕುತ್ತಿದ್ದಾರೆ.

*ಇಂತಹ ಸಂದರ್ಭದಲ್ಲಿ ನಾವು ಸುಮ್ಮನಿದ್ದರೆ ಪಟ್ಟಭದ್ರಹಿತಾಸಕ್ತರ ಕೈ ಮೇಲಾಗಿ ಪವಿತ್ರ ಪರುಷಕಟ್ಟೆಯ ಮೇಲೆ ಮತ್ತದೇ ಎತ್ತುನಂದಿ ಪೂಜೆಗೊಳ್ಳುತ್ತದೆ. ಸ್ಥಳಾಂತರಕ್ಕೆ ಪ್ರಾಣದ ಹಂಗುದೊರೆದು ಪ್ರಯತ್ನಿಸಿ ಯಶಸ್ಸು ನೀಡಿದವರ ಪ್ರಾಣ ಹರಣವಾಗುತ್ತದೆ. ನಮಗೀಗ ತುರಿಸಿಕೊಳ್ಳುವಷ್ಟೂ ಸಮಯಾವಧಾನವಿಲ್ಲ. ಬಸವ ಎಂಬ ಎಲ್ಲಾ ಸಂಘ ಸಂಸ್ಥೆಗಳು, ಸಂಘಟನೆಗಳು, ಮಠಗಳು, ಮಹಿಳಾ ಮತ್ತು ಯುವ ಸಂಘಟನೆಗಳು ಎಲ್ಲಾ ತಾಲ್ಲೂಕು ಜಿಲ್ಲೆ ಸರಕಾರದ ಪ್ರತಿನಿಧಿಗಳಿಗೆ ಪರುಷಕಟ್ಟೆಯಲ್ಲಿ ಮತ್ತೆ ನಂದಿ ಎತ್ತಿನ ಮೂರ್ತಿ ಇರಿಸದಂತೆ ಆಗ್ರಹಿಸಿ ಪತ್ರಬರೆಯಬೇಕು. ಸಹಕರಿಸುವ ಎಲ್ಲಾ ಮಠಾದೀಶರನ್ನೊಳಗೊಂಡ ಸಮೂಹದೊಂದಿಗೆ ತಾಲ್ಲೂಕು ದಂಡಾದಿಕಾರಿಗಳು,ಜಿಲ್ಲಾಧಿಕಾರಿಗಳಿಗೆ ಲಿಖಿತ ಅಹವಾಲು ಸಲ್ಲಿಸಿ,ಫೋಟೋ ಹಾಗೂ ಅಹವಾಲು ಪ್ರತಿಯನ್ನು ಕೂಡಲೆ ಬಸವಕಲ್ಯಾಣದ ತಾಲ್ಲೂಕು ದಂಡಾದಿಕಾರಗಳು ಹಾಗೂ ಬೀದರ್ ಜಿಲ್ಲಾಧಿಕಾರಿಗಳಿಗೆ ಈಮೇಲ್ ಮುಖಾಂತರ ತಕ್ಷಣವೇ ಕಳಿಸಬೇಕು. ಪ್ರಸಾರ ಮಾದ್ಯಮಗಳಿಗೆ ತಕ್ಷಣವೇ ಕೊಡಬೇಕು. ವಿಳಂಬಿಸಿದರೆ ಹೋರಾಡಿದ ಎಲ್ಲರ ಶ್ರಮ ಮಣ್ಣುಪಾಲಾಗುವುದು.

ನಾವೆಲ್ಲರೂ ಬಸವಣ್ಣನವರಿರಬೇಕಾದ ಸ್ಥಾನದಲ್ಲಿ ಎತ್ತು, ನಂದಿ, ಆಕಳು ನೋಡಬೇಕಾಗುವುದು. ಆದಕಾರಣ ಈ ತಕ್ಷಣವೇ ವಿಳಂಬಿಸದೇ ಕಾರ್ಯಪ್ರವೃತ್ತರಾಗಿ, *ಬಸವಕಲ್ಯಾಣದ ಐತಿಹಾಸಿಕ ಪರುಷಕಟ್ಟೆಯಲ್ಲಿ ಗುರುಬಸವಣ್ಣನವರ ಪುತ್ಥಳಿಯ ಹೊರತಾಗಿ ಬೇರಾವ ಮೂರ್ತಿ ಇಡಬಾರದೆಂದು ಅದು ಬಸವಣ್ಣನವರ ಶರಣರ ಲಿಂಗಾಯತರ ತತ್ವ ವಿರುದ್ದವಾದುದು*, ಎಂದು ಅಹವಾಲು ಸಲ್ಲಿಸಬೇಕೆಂದು ಎಲ್ಲರಲ್ಲೂ ಕಳಕಳಿಯಿಂದ ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇವೆ. 

ಪೂಜ್ಯ ಶ್ರೀ.ಸಿದ್ದರಾಮೇಶ್ವರ ಸ್ವಾಮಿಗಳು. ಬಸವ ಧರ್ಮ ಪೀಠ, ಬಸವಕಲ್ಯಾಣ. 9448732456

2 thoughts on “*ಬಸವಣ್ಣನವರ ಪರುಷ ಕಟ್ಟೆಯಲ್ಲಿ ನಂದಿಯ ಮೂರ್ತಿ ಇರಬೇಕೆ ?*

  1. ಎಲ್ಲವೂ ಸತ್ಯ ಶರಣೆ .
    ಸಾಧನೆ ಮಾಡಬೇಕಾಗಿದ್ದು ಸಾಗರದಷ್ಟಿದೆ …
    ಎಲ್ಲರೂ ಜೊತೆಗೂಡಿ ಸಾಗೋಣ

    ಧನ್ಯವಾದಗಳು .
    ಸಮಯೋಚಿತ ಲೇಖನ ನೋಡಿ ಖುಷಿ ಆಯಿತು ಶರಣರೇ.

  2. ಲೇಖನ ಚೆನ್ನಾಗಿದೆ ಅರ್ಥಪೂರ್ಣವಾಗಿದೆ ನಾವು ಮೈಮರೆತು ಹೋದರೆ ಅಮೂಲ್ಯ ಸ್ಥಳಗಳನ್ನು ಪೌರಾಣಿಕವಾಗಿ ನೋಡಬೇಕಾಗುತ್ತದೆ ಹಾಗಾಗಿ ಬಹಳ ಬೇಗ ಕಾರ್ಯ ತತ್ಪ ರ ರಾಗಬೇಕು

Leave a Reply

Your email address will not be published. Required fields are marked *

error: Content is protected !!