ಪ್ರಧಾನಿಯ ಮೌನ ಸರಿಯೆ ?!

ಸಂಪಾದಕೀಯ

ಬಿಕ್ಕಟ್ಟಿನ ಈ ಸಂದರ್ಭದಲ್ಲಿ
ಪ್ರಧಾನಿಯ ಮೌನ ಸರಿಯೇ?

ಕೋವಿಡ್–೧೯ ಸಾಂಕ್ರಾಮಿಕವು ದೇಶದಲ್ಲಿ ನಗರ, ಪಟ್ಟಣಗಳೆನ್ನದೆ ತನ್ನ ವಿಕಾರ ರೂಪವನ್ನು ಪ್ರದರ್ಶಿಸುತ್ತ ಸಾಗಿದೆ. ನಾವು ಈಗ ಕಾಣುತ್ತಿರುವ ಸಾವುಗಳ ಸುಳಿಗೆ ಬಂದು ಸಿಲುಕಿದ್ದು ಹೇಗೆ ಎಂಬ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ಪದಗಳನ್ನು ಬಳಸಿ, ಕೆಲವೊಮ್ಮೆ ಅಂಕಿಅಂಶಗಳನ್ನು ಬಳಸಿ ಚರ್ಚೆಗಳನ್ನು ನಡೆಸಲಾಗುತ್ತಿದೆ. ಈ ಚರ್ಚೆಗಳು ಟಿ.ವಿ. ಸ್ಟುಡಿಯೋಗಳಿಗೆ, ಪತ್ರಿಕೆಗಳಿಗೆ ಸೀಮಿತವಾಗಿವೆ ಎನ್ನಲಾಗದು. ಪ್ರತಿ ವ್ಯಕ್ತಿಯ ಮನಸ್ಸನ್ನೂ ಕೋವಿಡ್–೧೯ ಸಂಬಂಧಿತ ಚರ್ಚೆಯು ತಲುಪಿದೆ.

ಪ್ರತಿ ವ್ಯಕ್ತಿಯೂ ತನ್ನದೇ ಆದ ಬಗೆಯಲ್ಲಿ ಈ ಸಾಂಕ್ರಾಮಿಕದ ಬಗ್ಗೆ ಆಲೋಚನೆ ನಡೆಸಿದ್ದಾನೆ. ಆದರೆ, ಈ ಹೊತ್ತಿನಲ್ಲಿ ಜನರ ನಡುವೆ ಮಾತುಕತೆ ನಡೆಯುತ್ತಿಲ್ಲ. ಏಕೆಂದರೆ, ಒಬ್ಬರು ಇನ್ನೊಬ್ಬರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಅವಕಾಶ ಸಿಗುತ್ತಿಲ್ಲ. ಚುನಾವಣಾ ಮೇಳ ಸೇರಿದಂತೆ, ಚಲನಶೀಲ ಸಮಾಜವೊಂದರಲ್ಲಿ ಹತ್ತು ಹಲವು ಬೇಡಿಕೆಗಳನ್ನು ಇಟ್ಟುಕೊಂಡು ನಡೆಯುತ್ತಿದ್ದ ಮೇಳಗಳ ಆರ್ಭಟ ತಗ್ಗಿದೆ.

ಪ್ರತಿಭಟನೆಗಳ ಬಿಸಿ ತಗ್ಗಿದೆ, ಪ್ರತಿಭಟನೆಗಳು ಆನ್‌ಲೈನ್‌ಗೆ ಸೀಮಿತ ಆದಂತಿವೆ. ನಗರ, ಪೇಟೆಗಳ ಬೀದಿಗಳಲ್ಲಿ ವಾಹನಗಳ ಅಬ್ಬರ ಇಲ್ಲ, ಜನರ ಹೆಜ್ಜೆಯ ಸದ್ದು ಕೂಡ ಇಲ್ಲ. ಕೋವಿಡ್‌ ಪೀಡಿತರಾಗಿದ್ದ ಕೆಲವು ಯುವಕರಿಗೆ, ಇಳಿ ವಯಸ್ಸಿನವರಿಗೆ ಸಾವಿಗೆ ಮೊದಲು ತಮ್ಮ ಕುಟುಂಬದವರ ಜೊತೆ ಕೊನೆಯ ಮಾತುಗಳನ್ನು ಆಡಲೂ ಸಾಧ್ಯವಾಗಿಲ್ಲ. ಇಂತಹ ಸಾವುಗಳು ಮೌನವನ್ನೂ ಅಸಹನೀಯ ಆಗಿಸುತ್ತವೆ. ಮೌನ ದಿನಹೋದಂತೆಲ್ಲ ಹೆಚ್ಚು ಗಾಢವಾಗುತ್ತಿದೆ. ಚರ್ಚೆಗಳ, ಮಾತುಕತೆಗಳ ಕೇಂದ್ರದಲ್ಲಿ ಇರಬೇಕಿದ್ದ, ಮೌನದ ನಡುವೆಯೂ ಕಾಣಿಸಿಕೊಳ್ಳಬೇಕಿದ್ದ ಧ್ವನಿಯೊಂದು ಕಾಣದಂತೆ ಆಗಿದೆ.

ಅದು ಪ್ರಧಾನಿ ನರೇಂದ್ರ ಮೋದಿ ಅವರ ದನಿ. ಆತಂಕ ಮತ್ತು ಭಯ ಜನರ ಮನಸ್ಸನ್ನು ಆಳುತ್ತಿರುವ, ಅತ್ಯಂತ ಗಂಭೀರವಾದ ಈ ಸಂದರ್ಭದಲ್ಲಿ ಪ್ರಧಾನಿಯವರು ರಾಷ್ಟ್ರವನ್ನು ಉದ್ದೇಶಿಸಿ ಮಾತುಗಳನ್ನು ಆಡಿಲ್ಲ. ಅವರು ಕಡೆಯ ಬಾರಿ ಜನರನ್ನು ಉದ್ದೇಶಿಸಿ ಮಾತನಾಡಿದ್ದು ಏಪ್ರಿಲ್ ತಿಂಗಳಲ್ಲಿ. ಆಗ ಅವರು ಚುನಾವಣಾ ವೇದಿಕೆಗಳಿಂದ ಒಂದಿಷ್ಟು ಭರವಸೆಗಳನ್ನು ನೀಡುತ್ತಿದ್ದರು, ಎದುರಾಳಿಗಳಿಗೆ ಸವಾಲು ಹಾಕುತ್ತಿದ್ದರು. ಅನಂತರ ಅವರು, ಜನರನ್ನು ಉದ್ದೇಶಿಸಿ ಒಂದು ಭಾಷಣ ಮಾಡಿದರು. ಆ ಭಾಷಣದಲ್ಲಿ ಅವರು, ಕೆಲವು ನಿಯಮಗಳನ್ನು ಪಾಲಿಸುವಂತೆ ಜನರಿಗೆ ಕರೆ ನೀಡಿದ್ದರು. ಆ ನಿಯಮಗಳನ್ನು ಕೆಲವು ಸಂದರ್ಭಗಳಲ್ಲಿ ಅವರೂ ಪಾಲಿಸಿಲ್ಲ, ಇತರರೂ ಪಾಲಿಸುತ್ತಿಲ್ಲ.

ಕೋವಿಡ್‌–೧೯ರ ಎರಡನೆಯ ಅಲೆಯು ದೇಶದಾದ್ಯಂತ ತನ್ನ ಬಾಹುಗಳನ್ನು ಚಾಚಿರುವಾಗ, ಸಾಂಕ್ರಾಮಿಕದ ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ವಿಷಯಗಳು ಚರ್ಚೆಯ ಮುನ್ನೆಲೆಗೆ ಬಂದಿವೆ. ಲಸಿಕೆ, ಆಮ್ಲಜನಕದ ಸಿಲಿಂಡರ್‌, ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಕೊರತೆ, ಸ್ಮಶಾನಗಳಲ್ಲಿ ಅಂತ್ಯಸಂಸ್ಕಾರಕ್ಕೆ ಜನ ಕಾದು ನಿಂತಿದ್ದು, ದಿಗ್ಬಂಧನ ಕ್ರಮಗಳನ್ನು ಜಾರಿಗೆ ತಂದ ಬಗೆ, ಜೀವನೋಪಾಯಕ್ಕೆ ಸಂಬಂಧಿಸಿದ ವಿಚಾರಗಳು, ಮುಂದಿನ ದಿನಗಳಲ್ಲಿ ದೇಶದ ಅರ್ಥ ವ್ಯವಸ್ಥೆಯ ಮೇಲೆ ಆಗಲಿರುವ ಪರಿಣಾಮ… ಇವೆಲ್ಲ ಚರ್ಚೆಯಾಗುತ್ತಿವೆ.

ಇವೆಲ್ಲವುಗಳ ಬಗ್ಗೆ ಸರ್ಕಾರ ಏನೆಂದು ಯೋಚಿಸುತ್ತಿದೆ? ಅದು ಏನು ಮಾಡುತ್ತಿದೆ? ಇಂದಿಗೆ, ನಾಳೆಗೆ ಸರ್ಕಾರ ರೂಪಿಸುತ್ತಿರುವ ಯೋಜನೆಗಳೇನು? ಪ್ರಧಾನಿಯವರು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದಾರೆ. ಪ್ರಧಾನಿಯವರು ತಮ್ಮ ಸಂಪುಟ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿರಬಹುದು. ಆದರೆ, ಅತ್ಯಂತ ಕಷ್ಟದ ಹಾಗೂ ಅತ್ಯಂತ ಅನಿಶ್ಚಿತವಾದ ಈ ದಿನಗಳಲ್ಲಿ ಜನರ ಜೊತೆ ಪ್ರಧಾನಿ ಮಾತನಾಡುತ್ತಿಲ್ಲ.

ಸೌಜನ್ಯ : ಪ್ರಜಾವಾಣಿ ೧೩.೫.೨೦೨೧

2 thoughts on “ಪ್ರಧಾನಿಯ ಮೌನ ಸರಿಯೆ ?!

  1. ಚುನಾವಣೆ ಇದ್ದರಷ್ಟೇ ಮಾತು….ಶರಣರೇ,
    ಚನ್ನಾಗಿದೆ ಲೇಖನ.

  2. ರಾಜಕಾರಣಿಗಳಿಗೆ ಬೇಕಾಗಿದ್ರಾದು ಕೇವಲ ರಾಜಕೀಯ… ಅಬ್ಬರದದ ಚುನಾವಣೆಯ ಸಭೆಗಳು… ಕುಂಭಮೇಳ… ಪಂಚಾಯತ್ ಚುನಾವಣೆ ಉತ್ತರ ಪ್ರದೇಶ್… ಕರ್ನಾಟಕದ ಎಂಎಲ್ಎ ಎಂಪಿ ಚುನಾವಣೆ… ಪ್ರವಾಸೋದ್ಯಮತೀರ್ಥಯಾತ್ರೆ ಗಳಿಗೆ ಅವಕಾಶ ಇರದಿದ್ದರೆ ಚುನಾವಣೆ ಎರಡು ಮೂರು ತಿಂಗಳ ಕಾಲ ಮುಂದೆ ಹಾಕಿದ್ದರೆ ಭಾರತ ಪ್ರಸ್ತುತ ಕಷ್ಟವನ್ನು ಅನುಭವಿಸುತ್ತಿರಲಿಲ್ಲ….. ಇದಕ್ಕೆ ಯಾರು ಹೊಣೆ ಯಾರು ಜವಾಬ್ದಾರಿ… ಹಿಂದಿನ ಪ್ರಧಾನಿಗಳು ಮಂತ್ರಿಗಳು ಕ್ಯಾಬಿನೆಟ್ ಸಚಿವರು ಹೊಣೆಹೊತ್ತು ಕೊಳ್ಳುತ್ತಿದ್ದರು… ಹೊಣೆಗಾರಿಕೆಯಲ್ಲಿ ವ್ಯತ್ಯಯ ಕಂಡು ಲೋಪದೋಷಗಳು ಆದಾಗ ಕೂಡಲೇ ಅವರ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಘನತೆಯನ್ನು ಮೆರೆಯುತ್ತಿದ್ದರು ಘನತೆ ಇಂದಿನ ರಾಜಕಾರಣಿಗಳಲ್ಲಿ ಇಲ್ಲ…. ಅಂದಮೇಲೆ ಅವರು ಮೌನ ತಾನೆ ವಹಿಸಬೇಕು.

Leave a Reply

Your email address will not be published. Required fields are marked *

error: Content is protected !!