ಡಾ.ಅಂಬೇಡ್ಕರ ಸಹವಾಸದಲ್ಲಿ ; ಸವಿತಾ ಅಂಬೇಡ್ಕರ್

ಒಂದು ಕಾಲದಲ್ಲಿ ಮರಾಠಿ ಸಾಹಿತ್ಯದಲ್ಲಿ ಆತ್ಮಕಥನಗಳ ಸುಗ್ಗಿ. ಅವುಗಳಲ್ಲಿ ಹಲವು ಕನ್ನಡಕ್ಕೆ ಬಂದಿವೆ. ಈಗ ಕನ್ನಡದಲ್ಲಿಯೂ ಸಾಕಷ್ಟು ಆತ್ಮಕಥನಗಳು ಬರುತ್ತಿವೆ.

ಸವಿತಾ ಅಂಬೇಡ್ಕರ್ ಅವರ “ಅಂಬೇಡ್ಕರ್ ಸಹವಾಸದಲ್ಲಿ” ಮರಾಠಿಯಿಂದ ಕನ್ನಡಕ್ಕೆ ಇತ್ತೀಚಿನ ಸೇರ್ಪಡೆ.

ಆತ್ಮ ಕಥನ ಎಂದ ಮೇಲೆ ಅವುಗಳನ್ನು ಯಾವುದೇ ಸಾಹಿತ್ಯ ವಿಮರ್ಶೆಯ ಚೌಕಟ್ಟಿಗೆ ತರುವುದು ಸಾಧ್ಯವೂ ಇಲ್ಲ, ಸರಿಯೂ ಅಲ್ಲ.
ಮಾಡಬಹುದಾದದ್ದು ಆ ಕಾಲಘಟ್ಟದ ತುಲನಾತ್ಮಕ ಅಧ್ಯಯನ, ಮತ್ತು ಅದರ ಮೂಲಕ ನಾವೇ ರೂಢಿಸಿಕೊಳ್ಳಬಹುದಾದ ಅಭಿಪ್ರಾಯಗಳು.

ಇದು ಆತ್ಮಕಥನ ಎಂದು ಕರೆಯಲ್ಪಟ್ಟಿದ್ದರೂ.. ಇದು ಹೆಸರೇ ಹೇಳುವಂತೆ ಶಾರದಾ ಕಬೀರ್‌ . ಸವಿತಾ ಅಂಬೇಡ್ಕರ್ ಆಗಿ ಅಂಬೇಡ್ಕರ್ ಅವರ ಕೊನೆಯ ತನಕ ಅವರೊಂದಿಗೆ ಇದ್ದ ಕಾಲಘಟ್ಟದ ವಿವರಗಳನ್ನು ಒಳಗೊಂಡ ಬರಹವಾಗಿದೆ.

ಈ ಬರಹಗಳಿಗೆ ಬೇರೆ ಎಲ್ಲ ಆತ್ಮಕಥನಗಳಿಗೆ ಇರುವುದಕ್ಕಿಂತ ಒಂದು ಭಿನ್ನವಾದ ಉದ್ದೇಶವಿದೆ.
ಸಾಮಾನ್ಯವಾಗಿ ಆತ್ಮಕಥನಗಳು ಅದನ್ನು ಬರೆದ ವ್ಯಕ್ತಿಯ ಸಾಧನೆಗಳ ಹಿನ್ನೆಲೆಯಲ್ಲಿ ಅವರು ಬದುಕು ಸಮಾಜದೊಡನೆ ಮುಖಾಮುಖಿಯಾಗುತ್ತ ಬಂದ ರೀತಿ ಮತ್ತು ಆ ಕಾಲಘಟ್ಟದ ವಿವರಗಳನ್ನು ಚಿತ್ರಿಸುತ್ತಾ ಆ ಸಮಾಜಕ್ಕೆ ಆ ವ್ಯಕ್ತಿಯ ಕೊಡುಗೆಯನ್ನು ವಿಶದೀಕರಿಸುವ ಪ್ರಯತ್ನವನ್ನು ಮಾಡುತ್ತವೆ.

ಆದರೆ ಇಲ್ಲಿ ಸವಿತಾ ಅಂಬೇಡ್ಕರ್, ಬಾಬಾಸಾಹೇಬರ ಪರಿನಿರ್ವಾಣದ ನಂತರ ಅವರ ಮೇಲೆ ಬಂದಂತಹ ಆರೋಪ ಮತ್ತು ಅದರಿಂದ ಅವರಿಗುಂಟಾದ ಮಾನಸಿಕ ಹಿಂಸೆ ಇವರೆಡರಿಂದಲೂ ಬಿಡುಗಡೆ ಹೊಂದುವ ಉದ್ದೇಶದಿಂದ ಬರೆದಿದ್ದಾರೆ..
ಅದು ಅಂತಿಂತ ಆರೋಪ ಅಲ್ಲ.. ಭಾರತದ ಕೋಟಿ ಕೋಟಿ ಜನರ ಬದುಕಿನಲ್ಲಿ ದೀಪವಾದ, ಗುರುವಾದ ಬಾಬಾ ಸಾಹೇಬರಿಗೆ ವಿಷಪ್ರಾಶನ‌ ಮಾಡಿಸಿದರೆಂಬ ಗುರುತರ ಆರೋಪ..

ಸರ್ಕಾರ ತನಿಖೆ ನಡೆಸಿ ಅದು ನಿಜವಲ್ಲವೆಂದು ಸಾಬೀತಾದರೂ ಹಲವರು ನಂತರವೂ ಆ ಬಗ್ಗೆ ಅಪಪ್ರಚಾರ ನಡೆಸಿದ್ದರಿಂದ ತಾನು ಈ ಆತ್ಮಕಥನಕ್ಕೆ ತೊಡಗಬೇಕಾಯಿತೆಂದು ಸವಿತಾ ಅಂಬೇಡ್ಕರ್ ಹೇಳಿ ಕೊಂಡಿದ್ದಾರೆ.

ಆ ಕಾರಣದಿಂದಲೇ.. ಈ ಬರಹ ಸುಮಾರಾಗಿ 1935 ರ ನಂತರದ ದಿನಗಳಿಂದ ಪ್ರಾರಂಭವಾಗಿ ಮುಖ್ಯವಾಗಿ ಶಾರದಾ ಕಬೀರ್ 1948 ರಲ್ಲಿ ಸವಿತಾ ಅಂಬೇಡ್ಕರ್ ಅಗುವ, ಮತ್ತು 1956 ರಲ್ಲಿ ಬಾಬಾಸಾಹೇಬರ ದೇಹಾಂತ್ಯ ಮತ್ತು ನಂತರದ ಕೆಲವು ಘಟನೆಗಳ ವಿಚಾರ ಸೀಮಿತವಾಗಿದೆ.

ಆ ಕಾಲದ ಹಲವಾರು ರಾಜಕೀಯ ಸಾಂಸ್ಕೃತಿಕ ಘಟನೆಗಳು… ಅದಕ್ಕೆ ಸಂಬಂಧ ಪಟ್ಟ ಪ್ರಮುಖ ವ್ಯಕ್ತಿಗಳ ಜೊತೆ ಅಂಬೇಡ್ಕರ್ ಅವರ ಒಡನಾಟ, ಸಂಬಂಧ ಹಾಗೂ ಭಿನ್ನಾಭಿಪ್ರಾಯ, ತಿಕ್ಕಾಟಗಳೂ ಸಾಂಧರ್ಭಿಕವಾಗಿ ಚರ್ಚಿತವಾಗಿದೆ.
ಅಂಬೇಡ್ಕರ್ ಅವರ ಸಾಧನೆಗಳು ಮತ್ತೆ ಮತ್ತೆ ಪ್ರಸ್ತಾಪಿತವಾಗಿದೆ.

ಮುಖ್ಯವಾಗಿ ಗಾಂಧಿ ನೆಹರೂ, ಪಟೇಲ್ ಅವರುಗಳಲ್ಲದೆ. ಅಂಬೇಡ್ಕರ್ ಅನುಯಾಯಿಗಳ ಬಗ್ಗೆಯೂ ಸಾಕಷ್ಟು ವಿಚಾರಗಳಿವೆ..
ಇದಕ್ಕೆ ಪೂರಕವಾಗಿ ಸವಿತಾ ಅಂಬೇಡ್ಕರ್ ಹಲವಾರು ಪತ್ರಗಳನ್ನು ಬಳಸಿಕೊಂಡಿದ್ದಾರೆ..

ಮುಖ್ಯವಾಗಿ ಸವಿತಾ ಅಂಬೇಡ್ಕರ್ ಅವರು ತಮ್ಮ ‌ಮೇಲೆ ಬಂದಂತಹ ಗುರುತರ ಆರೋಪಕ್ಕೆ ಉತ್ತರಿಸುತ್ತಾ ಸತ್ಯವೇನೆಂದು ಮನವರಿಕೆ ಮಾಡಿಕೊಡುವ ಪ್ರಯತ್ನವೇ ಮುನ್ನಲೆಯಲ್ಲಿದೆ..
ಈ ಕಾರಣದಿಂದಲೇ ಕೆಲವು ಸಲ ಹೇಳುತ್ತಿರುವ ವಿಚಾರಗಳಲ್ಲಿ ಒಂದು ರೀತಿಯ ಉತ್ಕಟವಾದ ಭಾವನಾತ್ಮಕ ಬರವಣಿಗೆಯನ್ನು ಕಾಣಬಹುದು..
ಅವರ ಮಾನಸಿಕ ಸ್ಥಿತಿಯ ದೃಷ್ಟಿಯಿಂದ ಅದು ಸಹಜ..
ಮತ್ತು ತಮ್ಮ‌ ನಿಸ್ಪೃಹತೆಯನ್ನು ನಿರೂಪಿಸಲು ಸವಿತಾ ಅಂಬೇಡ್ಕರ್ ಅವರು ಈ ಬರಹದ ಮೂಲಕ ಯಶಸ್ವಿಯಾಗಿದ್ದಾರೆ ಕೂಡಾ..

ಈ ವಿಚಾರದಲ್ಲಿ ಬೇರೆ ಬರಹಗಳನ್ನು ನಾನು ಓದಿಲ್ಲದ ಕಾರಣ ಇದನ್ನು ತುಲನಾತ್ಮಕವಾಗಿ ಹೇಳಲು ಶಕ್ತನಲ್ಲ. ಇದು ನನ್ನ ಮಿತಿ.

ಈ ಎಲ್ಲ ವಿಚಾರಗಳನ್ನೂ ಬೇರೆ ಬಿಟ್ಟು ಬಹಳ ಮುಖ್ಯವಾದ ಇನ್ನೊಂದು ಅಯಾಮ ಈ ಪುಸ್ತಕಕ್ಕಿದೆ..
ಅದು ಸವಿತಾ ಮತ್ತು ಬಾಬಾಸಾಹೇಬರ ನಡುವಿನ ವೈಯುಕ್ತಿಕ ಸಂಬಂಧವೂ ಸೇರಿದಂತೆ.. ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿ ಯಾಗಿ ವೈಯುಕ್ತಿಕ ಜೀವನದಲ್ಲಿ ‌ಹೇಗಿದ್ದರು ಎನ್ನುವುದು..
ನಮ್ಮ ಇತರ ಅನೇಕ ನಾಯಕರ ನಿತ್ಯ ಜೀವನದ ವೈಯಕ್ತಿಕ ಜೀವನ ಹಲವು ವಿವರಗಳ ನಮಗೆ ದೊರೆತಂತೆ ಅಂಬೇಡ್ಕರ್ ಅವರ ಬಗ್ಗೆ ದೊರೆಯುವುದಿಲ್ಲ. ಹೆಚ್ಚಿನ‌ ಬರಹಗಳೆಲ್ಲವೂ ಅವರ ಬದುಕಿನ ಹೋರಾಟಗಳ ಚಿತ್ರಗಳಾಗಿವೆ.

ಅವರ ವೈಯಕ್ತಿಕ ಬದುಕಿನ ಸಹಜ ನಿಲುವುಗಳೇ ಅವರು ಬೇರೆ ” ಆಧ್ಯಾತ್ಮಿಕ ” ಧರ್ಮ ಗಳಿಗಿಂತ ಬುದ್ದನ ಮಾನವ ಕೇಂದ್ರಿತ ಸಹಜ ಧಮ್ಮದ ಕಡೆಗೆ ಚಲಿಸುವಂತೆ ಮಾಡಿದವು ಎನ್ನುವುದು. ಇಲ್ಲಿ ಸೂಚ್ಯವಾಗಿ ನಮಗೆ ಅನುಭವಕ್ಕೆ ಬರುತ್ತದೆ.

ಒಬ್ಬ ಯುವ ವೈದ್ಯ ತಮ್ಮ ಶುಶ್ರೂಷೆ ಗಾಗಿ ಪದೇ ಪದೇ ತಮ್ಮಲ್ಲಿಗೆ ಬರುತ್ತಿದ್ದರೆ.. ಜನ ಏನೆಂದಾರು ಎನ್ನುವ ಎಚ್ಚರ ಅವರಿಗೆ, ಹಾಗೆಂದು ಸವಿತಾ ತಮ್ಮ ನ್ನು ಮದುವೆಯಾಗಲಿ ಎನ್ನುವ ಆಸೆ‌ ಮೂಡಿದಾಗಲೂ ಮೊದಲ ಪತ್ನಿ ತೋರಿಕೊಂಡ ಹದಿಮೂರು ವರ್ಷಗಳ ಕಾಲ ಮದುವೆಯಾಗದೆ ಉಳಿದ ತಾವು ಮದುವೆ ಯಾಗುವ ಉದ್ದೇಶ ಬರಿಯ ಸ್ವಾರ್ಥ ವಾಗಬಾರದು.. ಜೊತೆಗೆ ಸಂಗಾತಿಗೂ ಬದುಕು ನೀಡುವಂತಿರಬೇಕೆಂಬ ನೈತಿಕ ಎಚ್ಚರವೂ ಅಲ್ಲಿದೆ.

ಸವಿತಾ ಅವರದು ಬಾಬಾಸಾಹೇಬರ ಕಡೆಗೆ‌ ಸಂಪೂರ್ಣ ಸಮರ್ಪಣಾ ಭಾವದ ಆರಾಧನೆಯೇ ಆದರೆ ಅಂಬೇಡ್ಕರ್ ಅವರದು ಸಂಗಾತಿ ಎಲ್ಲ ವೈಯಕ್ತಿಕ ಹಕ್ಕುಗಳನ್ನು ಗೌರವಿಸುತ್ತ ಅದೇ ಕಾಲಕ್ಕೆ. ಆಕೆಯನ್ನು ವಿಮರ್ಶಾತ್ಮಕ ವಾಗಿ ನೋಡುತ್ತ ಅಪಾರ ಪ್ರೀತಿಯಿಂದಲೂ ಕೃತಜ್ಞತೆ ಯಿಂದಲೂ ನೋಡುವ ನಡೆ.
ಇವರಿಬ್ಬರಲ್ಲಿ ವಯಸ್ಸಿನಲ್ಲಿ ದೊಡ್ಡ ಅಂತರವಿದೆ.. ಅಂಬೇಡ್ಕರ್ ಅವರ ಆರೋಗ್ಯವೂ ಹದಕೆಟ್ಟಿದೆ… ಆದರೂ ಅವರು ಎಲ್ಲ ಜವಾಬ್ದಾರಿ ಗಳ ನಡುವೆಯೂ ಸಹಜ ಜೀವನೋತ್ಸಾಹಿ..
ಮದುವೆಯಾದ ನಂತರ ಕೆಲಕಾಲ ಪತ್ನಿ ಯನ್ನು ಸಿಮ್ಲಾಕ್ಕೆ ಕರೆದೊಯ್ದು ಉಳಿಯುವಷ್ಟು… ತಮಗೊಂದು ಹೆಣ್ಣು ‌ಮಗುವಾಗಲಿ ಎಂದು ಆಸೆ ಪಡುವಷ್ಟು.
ಅವರ ಆಹಾರ ಪದ್ಧತಿ, ಪತ್ನಿ ಯೊಂದಿಗಿನ ಅವರ ಒಡನಾಟ ಇವುಗಳನ್ನು ಗಮನಿಸುವಾಗ..ಅದು ಜೀವಸೆಲೆಯಿಂದ ಕೂಡಿರುವುದು ಕಂಡುಬರುತ್ತದೆ.
ಈ ವಿಷಯಗಳಲ್ಲಿ ಗಾಂಧೀಜಿಯ ಬದುಕಿನ‌ ಜೊತೆ ಹೋಲಿಸಿ ನೋಡಬಹುದು.
ಗಾಂಧಿ ಯವರ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡೇ ನೋಡಿದರೂ ಸ್ತ್ರೀ -ಪುರುಷ ಸಂಬಂಧ ಗಳಲ್ಲಿ ಅವರ ಹಲವು ನಿಲುವುಗಳು
ಜೀವ ವಿರೋಧಿ ಎನಿಸುವಂತದ್ದು ಅನಿಸಿಬಿಡುತ್ತದೆ…

ಬಹುಶಃ ಗಾಂಧೀಜಿಯ ಚಿಂತನೆಗಳು ವ್ರತ ಸಿದ್ಧಾಂತಗಳ ಜೈನ ಚಿಂತನೆಯಿಂದ ಪ್ರಭಾವಿತವಾಗಿರುವುದೂ ಬಾಬಾಸಾಹೇಬರ ಚಿಂತನೆ ಗಳು ಬುದ್ದ ದಮ್ಮ ನೆಲೆಯವೂ ಆಗಿರುವುದು ಕಾರಣವಿರಬಹುದೇನೋ..

ಸವಿತಾ ಅಂಬೇಡ್ಕರ್ ಅವರ ಈ ಪುಸ್ತಕ ಈಗ ಕನ್ನಡಕ್ಕೆ ಬಂದಿದೆ.. ನಿಕಟ ಇತಿಹಾಸದ ಬಗ್ಗೆ ಮತ್ತಷ್ಟು ಚರ್ಚೆಗೆ…ಹೊಸ ತಿಳುವಳಿಕೆಗೆ ಕಾರಣವಾಗಬಲ್ಲದು.

ಪುಸ್ತಕ ಕರ್ನಾಟಕದ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಸಿಗುತ್ತದೆ.

ಪ್ರಸಾದ ರಕ್ಷಿದಿ

Leave a Reply

Your email address will not be published. Required fields are marked *

error: Content is protected !!