ನಾನು ಕೇವಲ ಸೆಕೆಂಡ್ ಕ್ಲಾಸಿನಲ್ಲಿ ಎಂ.ಎ. ಪಾಸು ಮಾಡಿದ ಒಬ್ಬ ವಿದ್ಯಾರ್ಥಿ ಮಾತ್ರ

ಬಿ. ಚಂದ್ರೇಗೌಡ: ನಿಮ್ಮ ಓದು ಮುಗಿದಾಗ ನಮ್ಮ ಯಾವುದಾದ್ರೂ ಯೂನಿವರ್ಸಿಟಿಯಲ್ಲಿ ಅಧ್ಯಾಪಕರಾಗಬಹುದಿತ್ತು. ಅಂದರೆ ನಿಮಗೆ ಅಂತ ಒಂದು ಬದುಕು ನಿಗದಿಯಾಗಿತ್ತು. ಅದನ್ನೆಲ್ಲಾ ತಿರಸ್ಕರಿಸಿ ಹೀಗೆ ಕಾಡಿನೊಳಕ್ಕೆ ನುಗ್ಗಿ ಬಂದರಲ್ಲಾ… ಇದಕ್ಕೆ ಕಾರಣ ಹೇಳಿ ಸಾರ್?

ಪೂರ್ಣಚಂದ್ರ ತೇಜಸ್ವಿ: ನಾನು ಕಾಲೇಜಿನ ಅಧ್ಯಾಪಕ ವೃತ್ತಿಯನ್ನು ತಿರಸ್ಕರಿಸಿದೆ ಎನ್ನುವುದು ಸರಿಯಲ್ಲ. ನಾವು ಓದು ಮುಗಿಸುವ ಕಾಲಕ್ಕೆ ಆಗಲೇ ಕೆಲಸ ಸಿಕ್ಕುವುದು ಕಷ್ಟವಾಗಿತ್ತು. ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗವಂತೂ ಅತ್ಯಂತ ನಿರುತ್ತೇಜಕ ವ್ಯಕ್ತಿಗಳಿಂದ ತುಂಬಿತ್ತು. ಡಿ.ಎಲ್.ಎನ್., ತೀ.ನಂ.ಶ್ರೀ. ಮುಂತಾದ ಕನ್ನಡದ ಅಗ್ರಮಾನ್ಯ ವಿದ್ವಾಂಸರೆಲ್ಲಾ ನಿವೃತ್ತರಾಗಿ ನಿರ್ಗಮಿಸಿದ್ದರು. ಜಿ.ಎಸ್. ಶಿವರುದ್ರಪ್ಪರಂತಹ ಸೃಷ್ಟಿಶೀಲ ಬರಹಗಾರರು ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಲು ಹೊರಟುಹೋಗಿದ್ದರು. ಹಾಗಾಗಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ ಅವನತಿಯ ಹಾದಿಯಲ್ಲಿತ್ತು.

ಕೆಲಸ ಸಿಕ್ಕಬೇಕಾದರೆ ನನಗಿದ್ದದ್ದು ಎರಡೇ ಮಾರ್ಗಗಳು- ಇಲಾಖೆಯ ಮುಖ್ಯಸ್ಥರಿಗೆ ಮಸ್ಕಾ ಹೊಡೆಯುವುದು ಇಲ್ಲವೇ ನಮ್ಮ ತಂದೆಯವರ ಪ್ರಭಾವವನ್ನು ಪರೋಕ್ಷವಾಗಿಯಾದರೂ ಉಪಯೋಗಿಸಿಕೊಂಡು ಕೆಲಸ ಗಿಟ್ಟಿಸುವುದು. ನಾನು ಓದುತ್ತಿದ್ದಾಗ ಮೈಸೂರಿನಲ್ಲಿ ನಮ್ಮ ಗೆಳೆಯರ ಗುಂಪು, ನಮ್ಮ ವ್ಯಕ್ತಿತ್ವ, ನಡವಳಿಕೆ ಎಲ್ಲ ಹೇಗಿತ್ತೆಂದರೆ ನನ್ನಿಂದ ಕೆಲಸಕ್ಕಾಗಿ ಯೂನಿವರ್ಸಿಟಿಯ ಅಧಿಕಾರವರ್ಗಕ್ಕೆ ಪೂಸಿ ಹೊಡೆಯುವುದು ಸಾಧ್ಯವೇ ಇರಲಿಲ್ಲ. ಈ ಕಾರಣದ ಜೊತೆಗೆ ನನ್ನ ವ್ಯಕ್ತಿತ್ವದಲ್ಲೇ ಇದ್ದ‌ ಉಡಾಫೆ, ತಲೆಹರಟೆ, ಬೇಜವಾಬ್ದಾರಿತನ ಇತ್ಯಾದಿಗಳು ಸೇರಿ ನನಗೆ ಕೆಲಸ ದೊರಕಲಿಲ್ಲ ಅಥವಾ ಅದಕ್ಕಾಗಿ ನಾನು ಹೆಚ್ಚು ಪ್ರಯತ್ನಿಸಲಿಲ್ಲ.

ನನಗಾಗಿ ಒಂದು ಬದುಕಿನ ಬಗ್ಗೆ ಸಿದ್ಧವಾಗಿತ್ತು. ಯೂನಿವರ್ಸಿಟಿಯಲ್ಲಿ ನನಗೆ ಉಜ್ವಲ ಭವಿಷ್ಯವಿತ್ತು ಎಂದೆಲ್ಲಾ ನೀನು ಈಗ ಊಹಿಸುವುದಕ್ಕೆ ಕಾರಣ ನಾನು ಬರಹಗಾರನಾಗಿ ಹೆಸರು ಮಾಡಿರುವುದರಿಂದ. ಆದರೆ ಓದು ಮುಗಿಸಿದಾಗ ನಾನು ಕೇವಲ ಸೆಕೆಂಡ್ ಕ್ಲಾಸಿನಲ್ಲಿ ಎಂ.ಎ. ಪಾಸು ಮಾಡಿದ ಒಬ್ಬ ವಿದ್ಯಾರ್ಥಿ ಮಾತ್ರ ಅಲ್ಲವೆ?

ಉಲ್ಲೇಖ: -‘ನನ್ನ ಬರವಣಿಗೆಗೆ ಹಣೆಪಟ್ಟಿ ಅನವಶ್ಯಕ’
(ತೇಜಸ್ವಿ ಸಂದರ್ಶನ, ಲಂಕೇಶ್ ಪತ್ರಿಕೆ, ಮೇ ೯, ೨೦೦೭)

ಕೃಪೆ -ವಿಮರ್ಶೆಯ ವಿಮರ್ಶೆ (ಪುಸ್ತಕ, 2013)
(ಶ್ರೀಧರ್.ಆರ್ ಅವರ ವಾಲಿನಿಂದ)

Leave a Reply

Your email address will not be published. Required fields are marked *

error: Content is protected !!