ಬಸವಣ್ಣನವರ ಬ್ರಹ್ಮಚರ್ಯ
ಶುದ್ದ ಗ್ರಹಸ್ಥವಾದ ಲಿಂಗಾಯತ ಧರ್ಮಕ್ಕೆ ಈ ಸನ್ಯಾಸತ್ವ, ಬ್ರಹ್ಮಚರ್ಯ , ಭೂತ ಯಾವಾಗಿನಿಂದ ಹೊಕ್ಕರಿಸುಕೊಂಡಿತೊ ನಿರ್ದಿಷ್ಟವಾಗಿ ಹೇಳಲು ಆಗಲ್ಲ , ಆದರೆ ಶುದ್ದ ಗ್ರಹಸ್ಥ ಧರ್ಮವನ್ನು ಹೊಕ್ಕ ಈ ಸನ್ಯಾಸತ್ವ ಆ ಧರ್ಮದ ಮೂಲ ಆಸೆಯನ್ನು ಹತ್ತಿಕ್ಕುತ್ತಾ ಬಂದಿದ್ದು ಮಾತ್ರ ಸತ್ಯ.
ಮಹಾಮನೆಯ ಪರಿಕಲ್ಪನೆ ಇದ್ದ ಧರ್ಮದಲ್ಲಿ ಮಠಗಳು ಹುಟ್ಟಿಕೊಂಡಿದ್ದು ಮಾತ್ರ ದುರ್ದೈವ. ಜಂಗಮ ಸಂಚಾರಿಯಾಗಿರಬೇಕು ಅವನು ಮಠ ಕಟ್ಟಿಕೊಂಡು ಸ್ಥಾವರವಾಗಿ ಒಂದು ಕಡೆ ನೆಲಸದೆ ಸಂಚಾರಿಯಾಗಿ ಜಂಗಮತ್ವ ಹೊಂದಬೇಕು ಎನ್ನುವುದು ಲಿಂಗಾಯತದ ಮೂಲ ಆಸೆ. ಆದರೆ ಜಂಗಮ ಪೀಠದ ಮೊದಲ ಮಠ ಎಡೆಯೂರಿನದು. ಎಡೆಯೂರಿನ ಸಿದ್ದಲಿಂಗ ಶಿವಯೋಗಿಗಳು ಬಯಲಾದ ನಂತರ ಅಂದರೆ ಸುಮಾರ 1570ರಲ್ಲಿ ಅವರ ಸಮಾಧಿಯ ಮೇಲೆ ಒಂದು ಮಠ ಕಟ್ಟಲಾಯಿತು. ಇಲ್ಲಿಂದ ಪೀಠವಿದ್ದ ಲಿಂಗಾಯತಕ್ಕೆ ಮಠದ ಸಂಸ್ಕ್ರತಿ ಹೊಕ್ಕರಿಸಿತು. ಆ ವಿರಕ್ತ ಕಲ್ಪನೆ ಮೊದಲ ಮಠ ಹರಪನಹಳ್ಳಿಯಲ್ಲಿ ,ಎರಡನೆ ಮಠ ಚಿತ್ರದುರ್ಗದ ಮುರುಘಾ ಮಠ.
ಈ ವಿರಕ್ತ ಪರಿಕಲ್ಪನೆಯನ್ನು ಶರಣರು ಒಪ್ಪಿರಲಿಲ್ಲ. ಅದಕ್ಕೆ.
” ವಿರಕ್ತ ವಿರಕ್ತ ಎಂಬ ಹಾದಿಕಾರರ ವಿರಕ್ತರೆನ್ನಬಹುದೇ
ಕಾವಿ ಹೊದ್ದು ತಿರುಗುವ ಜೀವಗಳ್ಳರು ವಿರಕ್ತರೇ
ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ವಿರಕ್ತರೆಂದಡೆ ಅಘೋರ ನರಕ ತಪ್ಪದು ಅಮುಗೇಶ್ವರಲಿಂಗವೇ ” ಎಂದು ಆ ವಿರಕ್ತ (ಸನ್ಯಾಸತ್ವ)ವನ್ನು ಧಿಕ್ಕರಿಸದರು ಶರಣರು.
” ಕಾವಿಕಾಷಾಂಬರ ಹೊದ್ದು ಕಾಯವಿಕಾರಕ್ಕೆ ತಿರುಗುವ ಕರ್ಮಿಗಳ ಮುಖ ನೋಡಲಾಗದು” ಎಂದರು ಶರಣರು.
ಇಂದಿಗೂ ಊರೂರು ಸುತ್ತುತ್ತಾ ದೇಶ ದೇಶ ಸುತ್ತುತ್ತಾ ಮಾತುಗಳ್ಳರನ್ನು ” ದೇಶದೇಶವ ತಿರುಗುತ್ತಾ ಮಾತುಗಳ ಕಲಿತು ಗ್ರಾಸಕ್ಕೆ ತಿರುಗುವ ದಾಸವೇಸಿಯ ಮಕ್ಕಳ ವಿರಕ್ತರೆಂಬೆನೆ ” ಎಂದು ಅಂದೇ ಈ ಸನ್ಯಾಸತ್ವದ ವಿರಕ್ತತೆಯನ್ನು ಧಿಕ್ಕರಿಸಿದರು ಶರಣರು.
ಹಾಗಾದರೆ ಶರಣ ಧರ್ಮದಲ್ಲಿ ಈ ಬ್ರಹ್ಮಚರ್ಯದ ಪರಿಕಲ್ಪನೆ ಎನೂ .ಶರಣರು ಸನ್ಯಾಸತ್ವವನ್ನು ಒಪ್ಪಲಿಲ್ಲವೇ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ ಲಿಂಗಾಯತದಲ್ಲಿ ಹೇರಿಕೆಯ ಸನ್ಯಾಸತ್ವ ಅವರು ಎಂದೂ ಒಪ್ಪಲಿಲ್ಲ. ಅವರು ಗ್ರಹಸ್ಥ ಧರ್ಮಕ್ಕೆ ಹೆಚ್ಚು ಆದ್ಯತೆ ಕೊಟ್ಟವರು ಅದಕ್ಕ ” ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ” ಎಂದರು . ಹಾಗಾಗಿ ಲಿಂಗಾಯತದಲ್ಲಿ ಇಂದ್ರೀಯ ನಿಗ್ರಹವನ್ನು ವಿರೋಧಿಸಿ ” ಇಂದ್ರೀಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು ಮುಂದೆ ಬಂದು ಕಾಡುವುವು ಪಂಚೇಂದ್ರೀಯಗಳು ” ಎಂದು ಪ್ರಕ್ರತಿ ಸಹಜವಾದ ಕ್ರಿಯೆಗಳಿಗೆ ಕಡಿವಾಣ ಹಾಕದೆ ಸ್ವಚ್ಛಂದವಾಗಿ ಅವುಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ನೈತಿಕತೆಯ ಬದುಕನ್ನು ಕಲಿಸಿಕೊಟ್ಟರು ಶರಣರು.
” ಕಾಮನ ತೊರೆದೆವೆಂಬ ಗಾವಿಲ ಮನುಜರು ನೀವು
ಕಾಮವಳವಟ್ಟಿತ್ತಯ್ಯಾ ಬಸವಣ್ಣಂಗೆ
ಕಂಗಳ ಕಾಮಿಯಯ್ಯಾ ಪ್ರಭುದೇವರು
ಸರ್ವಾಂಗ ಕಾಮಿಯಯ್ಯಾ ಮಡಿವಾಳನು
ಈ ಮೂವರು ಕಾಮ ಸನ್ನಿಹಿತರು ಕಾಣಾ
ಕೂಡಲಚೆನ್ನಸಂಗಮದೇವಾ ” ಎನ್ನುತ್ತಾ ಕಾಮವನ್ನು ಪವಿತ್ರವಾಗಿ ಕಂಡವರು ಶರಣರು. ಬಸವಣ್ಣನ ಬ್ರಹ್ಮಚರ್ಯ ಹೇಗಿತ್ತು ಅಂತ ಅಲ್ಲಮರ ಈ ವಚನ
“ಸತಿಯ ಕಂಡು ವ್ರತಿಯಾದ ಬಸವಣ್ಣ
ವ್ರತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ
ಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯಾ ಬಸವಣ್ಣ
ಗುಹೇಶ್ವರ ಲಿಂಗದಲ್ಲಿ ಅಖಂಡ ಬ್ರಹ್ಮಚಾರಿ ಬಸವಣ್ಣನೊಬ್ಬನೆ ” ಅಂತ ಅಲ್ಲಮರೆ ಬಸವಣ್ಣನ ಈ ಬ್ರಹ್ಮಚರ್ಯವನ್ನು ಕೊಂಡಾಡಿದ್ದಾರೆ. ಹಾಗಾಗಿ ಲಿಂಗಾಯತದಲ್ಲಿ ಹೆಣ್ಣನ್ನು ತುಷ್ಠಕರೀಸುವ ಬ್ರಹ್ಮಚರ್ಯವಿಲ್ಲ “ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ” ಶಿವ ಒಪ್ಪುವಂತ ಬ್ರಹ್ಮಚರ್ಯ ಬಸವಣ್ಣನದು.
ಡಾ. ರಾಜಶೇಖರ ನಾರನಾಳ ವೈದ್ಯರು.
ಪೋನ್ ನಂಬರ್ 9880884048
You are right sir every words are true brahamchariya is not mondatory
Sri basaveshwara never told about use kaavi cloth.