ನನ್ನ ಹೊಲ ಹಸಿರುಕ್ಕಿಸಿ ನಿಂತದ್ದಕ್ಕೆ ಕಾರಣ ನನ್ನಪ್ಪ ಅವ್ವನನ್ನು ಆ ಹೊಲದಲ್ಲಿ ಹೂತಿದ್ದೇವೆ

ಅಂದು 9 ಆಗಸ್ಟ್ 2021,

ಅಂದು ಮೊದಲ ಶ್ರಾವಣ ಸೋಮವಾರ. ಆ ದಿನ ಹೀಗೆ ಪೂರ್ವಜರ ಕಾಲದಿಂದ ಬಂದಿದ್ದ ಹೊಲದಲ್ಲಿ ಯಾರೂ ನೋಡದೆ ಇದ್ದುದರಿಂದ ಹೊಲದ ತುಂಬೆಲ್ಲಾ ಬರೀ ಮುಳ್ಳು ಗಂಟಿ ಗಿಡಗಳು, ಬುವಿನ ಮೇಲೆಲ್ಲಾ ಬರೀ ಎರದೆ, ಮುತ್ತುಗ, ಬೇಟೆ, ತಂಗಡೆ ಗಿಡಗಳು. ಮಳೆ ಹದವರಿಸಿ ಬಂದುದರಿಂದ ಬರೀ ಅಣ್ಣೆ ಗಿಡ, ಸೋಲೆ ಬೋಟ, ಉತ್ರಾಣಿ ಗಿಡಗಳು, ಕಾಲಿಡಲೂ ಜಾಗವಿರದಂತೆ ಹಬ್ಬಿಕೊಂಡ ನೆಗ್ಗಲು ಮುಳ್ಳಿನ ಗಿಡಗಳು, ಆ ಹೊಲದೊಳಗೆ ಕಾಲಿಟ್ಟರೆ ಅದ್ಯಾವ ಹುಳಗಳು, ಅದ್ಯಾವ ಸರ್ಪಗಳು ಇದ್ದಾವೆಯೋ ಎನ್ನುವ ಆತಂಕ. ಇಂಥಹ ಬರೀ ಯಾರಿಗೂ ಬೇಡವೆನಿಸಿದ ಹೊಲ ನನ್ನ ಭಾಗಕ್ಕೆ ಬಂದಿತ್ತು. ಮಳೆ ಹದವಾಗಿ ಸುರುವುದ್ದರಿಂದ ಬದುವಿನ ಮೇಲೆ ಹಾಗೂ ಹೊಲದಲ್ಲಿ ಬೆಳೆದಿದ್ದ ಗಿಡಗಳನ್ನು ಕೀಳಿಸಲು ಉತ್ತಮವೆನಿಸಿದ್ದರಿಂದ ಅಂದು ಒಂದು ಜೆಸಿಬಿಗೆಯೊಂದಿಗೆ ಬರಲು ದಬ್ಬೇಗಟ್ಟದ ಲೋಕೇಶನಿಗೆ ಹೇಳಿ ನಾನು ಹೊಲಕ್ಕೆ ಹೋಗಿದ್ದೆ.

ಹೇಳಿದಂತೆ ಲೋಕೇಶ್ ಜೆಸಿಬಿಯೊಂದಿಗೆ ಬಂದಾಗಿತ್ತು . ಆಗಲೇ ಹಳ್ಳದೊಳಗಿನ ಗಿಡಗಳನ್ನು ಹೇಳಿದಂತೆ ಬಗೆದು ಬೇರು ಸಹಿತವಾಗಿ ಕೀಳುತ್ತಲಿದ್ದರು. ಅಂದು ನಾನು ಅಲ್ಲಿಗೆ ಹೋಗುವಾಗ ನನ್ನ ಆತ್ಮೀಯ ಗೆಳೆಯ ಬಸವಣ್ಣ ( ವಕ್ಲಯ್ಯಜ್ಜ ) ನವರನ್ನೂ ಕರೆದುಕೊಂಡು ಹೋಗಿದ್ದೆ. ಕಾರಣ 27 ವರ್ಷಗಳ ನಂತರದಲ್ಲಿ ಮತ್ತೊಮ್ಮೆ ಭೂ ತಾಯಿಯ ಸೇವೆ ಮಾಡುವ ಅದಮ್ಯತೆ ನನಗಿದ್ದರೂ ಈಗಾಗಲೇ 27 ವರ್ಷಗಳನ್ನು ಇಲಾಖೆಯಲ್ಲಿ ಕಳೆದುದರಿಂದಲೂ, ಬಸವಣ್ಣನನ್ನು ಬಿಟ್ಟಿರಲರದೆಯೂ ಆತನನು ಕರೆದುಕೊಂಡು ಹೋಗಿದ್ದೆ. ನಾನೂ ಹಾಗೂ ಬಸವಣ್ಣ ಹೊಲದಲ್ಲಿ ನಿಂತು ನೋಡುತ್ತಿದ್ದರೆ ನನಗೋ ಆ ಆ 27 ವರ್ಷಗಳ ಹಿಂದೆ ನಾನು ಇದೇ ಹೊಲದಲ್ಲಿ ಬೇಸಾಯ ಮಾಡುತ್ತಿದ್ದುದು, ರಾಗಿ ಬೆಳೆಯುತ್ತಲಿದ್ದುದು, ಎತ್ತುಗಳನ್ನ ಮೇಯಿಸುತ್ತಿದುದು, ಹುಲ್ಲು ಕೀಳುತ್ತಿದ್ದುದು ಎಲ್ಲವೂ ಸ್ಮೃತಿ ಪಠಲದಲ್ಲಿ ಹಾದು ಹೋಗುತ್ತಿದ್ದವು. ಮತ್ತೊಮ್ಮೆ ನನಗೆ ಅರಿವಿಲ್ಲದಂತೆಯೇ ಕೃಷಿಕಾಯಕವು ಕೈ ಬೀಸಿ ಕರೆಯುತ್ತಲಿತ್ತು.

ಅಷ್ಟರಲ್ಲಿ ಲೋಕೇಶ್ *ಅಣ್ಣಾ ಇಲ್ಲಿ ಚಿಟ್ಟಜೇನು ಸಿಕ್ತಣ್ಣ* ಎಂದು ಕೋಲಿನಲ್ಲಿ ಹನಿತುಂಬಿದ ಜೇನುಗೂಡನ್ನು ನನ್ನ ಬಳಿ ತಂದಿದ್ದ. *ಅಣ್ಣ ಇನ್ನೂ ಓಂ ಪ್ರಥಮಕ್ಕೇ ಜೇನು ಸಿಕ್ತಲ್ಲಣ್ಣ* ಎಂದಿದ್ದ. ಹೌದು ಲೋಕಿ ಏನೋ ದೇವರ ಅನುಗ್ರಹ ಎಂದು ಆ ಜೇನನ್ನು ನಾನು ಹಾಗೂ ಬಸವಣ್ಣ ಇಬ್ಬರೂ ಚಪ್ಪರಿಸಿ ಸವಿದಿದ್ದೆವು. ಆಗಲೇ ನನಗೆ ಈ ಕೃಷಿ ಎಂಬುದು ನನ್ನ ಜೀವನದಲ್ಲಿ ಸಿಹಿಯನ್ನೇ ನೀಡುತ್ತದೆ ಎಂದು ಅಂದೇ ನಾನು ನಂಬಿದ್ದೆ. ಆ ಸಮಯದಲ್ಲಿ ಜೆಸಿಬಿಯು ಗಿಡ ತಗೆಯುತ್ತಲೇ ಇತ್ತು. ಆಗ ನನ್ನಿಂದ ಕಾಣೆಯಾಗಿದ್ದ ನನ್ನ SSLC ಗೆಳೆಯ ಶ್ರೀ MS ಹರೀಶ್ ಬಂದಿದ್ದ. ಆತನ ತೋಟವು ನನ್ನ ಈ ಹೊಲದ ಪಕ್ಕದ್ದೇ ಆಗಿತ್ತು. ಹರೀಶನು ಬಂದಿದ್ದು ಆತನನ್ನು ಮಾತನಾಡಿಇಸಿ ಆತನನ್ನು ಆಲಂಘಿಸಿ ಉಭಯಕುಶಲೋಪರಿ ಮಾತನಾಡಿದೆವು. ಆಗ ಮಧ್ಯಾಹ್ನವಾಗಿದ್ದರಿಂದ ಹರೀಶನೇ ನನಗೆ ಊಟ ತಂದಿದ್ದ. ಹಳೆತನದ ಗೆಳೆತನದೊಂದಿಗೆ ಹಸನಾದ ಹೊಸ ವಿಶ್ವಾಸ ಅವನೊಂದಿಗೆ ನನಗೆ ಮೊಳೆತಿತ್ತು. ಅಷ್ಟರಲ್ಲಿ ಮಲ್ಲಿಕ ( ಕೌನ್ಸಿಲರ್ ) ಹಾಗೂ ಇತರರೆಲ್ಲಾ ಅಲ್ಲಿಗೆ ಬಂದಿದ್ದರು. ಅಲ್ಲಿಗೆ ಬಂದಿದ್ದ ಹಲವರಿಗಾಗಲೇ ಮದಿರಾ ದೇವಿ ಮೈಯ್ಯುಂಡಿದ್ದಳು.

ಬಾಸು ಇದೇನಿದು ? ಬರೀ ಗಿಡ ಕೇಳಿಸೋದಾ ? ಒಂದು ಬೋರಾಕ್ಸು ಬಾಸು ಎಂಬ ಒತ್ತಾಯ ಮದಿರೆ ಆವರಿಸಿದಂತೆ ಹೆಚ್ಚಾಯ್ತು. ನಮ್ಮ ಬಸವಣ್ಣನೂ ಹ ಅದಕ್ಕೆ ಜೊತೆಯಾಗಿ ಧ್ವನಿಗೂಡಿಸಿದ. ಹೇ ಗೆಳೆಯ ಅದ್ಸರಿ ಕಣಯ್ಯ, ಒಂದು ಬೋರ್ ಹಾಕಿಸೋಣ. ನನ್ನ ಮಾತ್ನ ಕೇಳಯ್ಯ ಎಂದು ವರಾತ ತಗೆದಿದ್ದ.

ಹೇ ಬೇಡ ಬಸವಣ್ಣ, ನನಗೇಕೆ ಈ ಬೇಸಾಯ ಎಲ್ಲ ? ನಾನು ಹೇಗೋ ಆರಾಮಾಗಿದ್ದೇನೆ, ನನಗ್ಯಾವ ಬೋರೂ ಬೇಡ, ಯಾವುದೂ ಬೇಡ ಎಂದಿದ್ದೆ. ಕೊನೆಗೆ ಅವರ ಒತ್ತಡಕ್ಕೆ ಮಣಿದು ಅವರಲ್ಲಿ ನೋಡ್ರಪ್ಪ ನಾನು ಜಿಯಾಲಜಿಸ್ಟ್ ಪಾಯಿಂಟ್ ಮಾಡುಸ್ತೇನೆ, ಸ್ವಲ್ಪ‌ ಸಮಾಧಾನವಾಗಿರಿ ಎಂದು ಸಮಾಧಾನ ಹೇಳಿ ನುಷುಚಿಕೊಳ್ಳಲು ಪ್ರಯತ್ನಿಸಿದೆ. ಆದರೆ ನಮ್ಮ ಬಸವಣ್ಣ *ಹೇ ಸಾಹೇಬ್ರೇ ನಮ್ಮಲ್ಲಿ‌ಒಬ್ಬ ನಾಟಿ ಬೋರ್ ಪಾಯಿಂಟ್ ಮಾಡುವವನಿದ್ದಾನೆ, ರೇಣುಕ ಅಂತ ! ಆತನಙ್ನು ಕರುಸ್ತೇನೆ, ಅವನಿಙದ ಪಾಯಿಂಟ್ ಮಾಡಿಸೋಣ ಎಂದಿದ್ದ.

ಯಾವ ಪಾಯಿಂಟೂ ಬೇಡ ಸುಮ್ನಿರಪ್ಪ ಎಂದಿದ್ದೆ, ಅದಕ್ಕೊಪ್ಪದ ಬಸವಣ್ಣ ಸಂಜೆ ಇಳಿಹೊತ್ತಿಗೆ ರೇಣುಕನನ್ನು ಕರೆಸಿಯೇ ಬಿಟ್ಟ, ಆ ಬಸವಣ್ಣ ಬರುವಾಗಲೇ ಒಂದು ತೆಂಗಿನಕಾಯಿ ಸುಲಿದುಕೊಂಡು ಎಲ್ಲಕ್ಕೂ ನನ್ನ ಹಿತೈಷಿಯಾಗಿ ರೆಡಿಯಾಗಿಯೇ ಬಂದಿದ್ದ. ಸಂಜೆ 06 00 ಗಂಟೆಗೆ ರೇಣಿಕಣ್ಣ ಒಂದು ಪಾಯಿಂಟ್ ಮಾಡಿದ್ದರು, ಅಷ್ಟೊತ್ತಿಗೆ ಅಲ್ಲಿಗೇ ಬೋರ್ ಲಾರಿ ನಂದೀಶನೂ ಬಂದಿದ್ದ, ಪಾಯಿಂಟ್ ಮಾಡಿ ಬರುವ ವೇಳೆಗೆ ನಮ್ಮ ಸ್ನೇಹಿತರುಗಳೇ ಮುಂದಾಳತ್ವ ಪಡೆದುಕೊಂಡು ಚೇಳೂರಿಗೆ ಹೋಗಿ ಬೋರ್ ಕೊರೆಯುವ ಲಾರಿಯ‌್ನೂ ತಂದರು, ಲಾರಿ ಬರುವಾಗ ಆಗಲೇ ರಾತ್ರಿ ಹತ್ತೂವರೆ ಆಗಿತ್ತು. ಬೇಡ ಎಂದರೂ ನನ್ನ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಅಲ್ಲಿ ಯಾರೂ ಇರಲಿಲ್ಲ. ನಾನೋ ಪೂಜೆ ಪುನಸ್ಕಾರ ಮಾಡದ ನಾಸ್ತಿಕನಾದರೂ ನನ್ನ ಬೆಂಬಲಕ್ಕೆ ನಿಂತ ಸುಮಾರು ಜನರು ಅಂದರೆ ಮಲ್ಲಿಕ್ ಮೈಲಾರನ ಪೂಜೆಯ ಪ್ರಸಾದ, ಲಕ್ಷ್ಮೀಶನು ಮದ್ದರ ಲಕ್ಕಮ್ಮನ ಪ್ರಸಾದವನ್ನೂ, ಆದಿಲ್ ತಾತಯ್ಯನ ದೂಳತವನ್ನೂ, ಇಟ್ಟಿಗೆ ಗಿರಿಯು ಎಲ್ಲಮ್ನ ದೇವಿಯ ಪ್ರಸಾದ, ಮತ್ತೊಬ್ಬ ಚಿಕ್ಕೇನಳ್ಳಿ ಮಠದ ಪ್ರಸಾದ ತಂದು ಪೂಜಿಸಿ ನಮ್ಮ ರವೀಶಣ್ಣನಿಗೆ ಒಳ್ಳೆಯದಾಗಲಿ ಎಂದು ಹರಸಿದ್ದರು. ಅಂತಹ ಶ್ರೇಷ್ಟ ಮುಗ್ದ ಮನಗಳಿಗೆ ನಾನು ಚಿರ ಋಣಿಯೂ ಹೌದು. ಬೋರ್ ಕೊರೆಯಲು ಪ್ರಾರಂಭಿಸಿತು, 760 ಅಡಿವರೆಗೂ ಬರೀ ಧೂಳು, ನಂತರ ನೀರು ಸ್ವಲ್ಪ ಪ್ರಮಾಣದಲ್ಲಿ ನೀರು ಕಂಡಿತು, ನಂತರ ತಾರೀಖು 10-8-2021 ರ ಮಧ್ಯಾಹ್ನ 03 00 ಗಂಟೆ ಸಮಯಕ್ಕೆ 1144 ಅಡಿ ತಲುಪುವಾಗ್ಯೆ ಪ್ರವಾಹದೋಪಾದಿಯಲ್ಲಿ ಬೋರಿನಿಂದ ಗಂಗೆಯು ಜಿಗಿದಳು. ನನಗೋ ಒಂದು ಕಡೆ ಖುಷಿಯಾದರೆ ಮತ್ತೊಂದು ಕಡೆಯಲ್ಲಿ *ನನಗೆ ಇವೆಲ್ಲಾ ಬೇಕಾಗಿತ್ತಾ ?* ಎಂಬ ಪ್ರಶ್ನೆ ಯಕ್ಷನಂತೆ ಕಾಡುತ್ತಿತ್ತು. ಇಷ್ಟೆಲ್ಲ ಆದರೂ ನನ್ನ ಸಹಧರ್ಮಿಣಿಗೆ ಹಾಗೂ ಮುದ್ದು ಮಗಳಿಗೆ ವಿಷಯವನ್ನೇ ನಾನು ಹೇಳಿರಲಿಲ್ಲ. ನೀರನ್ನೇನೋ ಹೊರ ತಗೆದಾಗಿತ್ತು. ಆದರೆ ಮುಂದಿನ ನಡೆಯ ಬಗೆಗೆ ನನಗೆ ಒಂದು ರೀತಿಯ ಎರಡು ಮನಸ್ಸಿತ್ತು. ನೀರೇನೂ ಬಂತು, ಮುಂದೇನು ? ಎನ್ನುವ ಪ್ರಶ್ನೆ ನನಗೆ ಕಾಡಲು ಶುರುವಾಗಿತ್ತು. ದೇವರಿಟ್ಟ ಹಾಗಾಗುತ್ತೆ ಎನ್ನುವ ನಿರುಮ್ಮಳತೆ ಮನದಲ್ಲಿದ್ದರೂ ಉತ್ತರ ಸಿಗದ ಪ್ರಶ್ನೆ, ಸಮಸ್ಯೆಗೆ ದೇವರೇ ಅಲ್ಲವೇ ನಮಗೆ ದಿಕ್ಕು.

ಮನದಲ್ಲಿ ಸುಪ್ತವಾಗಿದ್ದ ಆ ಹಳೆಯ ದಿನಗಳ‌ ಕೃಷಿಯ ಒಡನಾಟ ಮತ್ತೆ ಟಿಸಿಲೊಡೆಯುತ್ತಿತ್ತು. ಮತ್ತೆ ನನ್ನ ನೆಚ್ಚಿನ ಗೆಳೆಯ ಬಸವಣ್ಣನು * ಸಾಹೇಬರೆ ನೀವು ಸುಮ್ಕಿರ್ರೀ ! ನಾನೆಲ್ಲ ಮಾಡುಸ್ತೇನೆ* ಎಂದು ಅವರ ಪರಿಚಯದ ನನ್ನ ಹಳೆಯ ಗೆಳೆಯ ಕೃಷ್ಣಮೂರ್ತಿ ( ಕರಿಬಸಮ್ಮನವರ ) ಅವನಿಗೆ ಕರೆಸಿ ನೋಡ್ಲಾ ಕಿಟ್ಟ ಇಲ್ಲಿ ಅಡಿಕೆ ಗಿಡ ಇಡಬೇಕು, ದಾಯಮಾಡಿಕೊಡು, ಹಾಗೆಯೇ ಡ್ರಿಪ್ ಮಾಡು ಎಂದು ಕೃಷ್ಣಮೂರ್ತಿಗೆ ಕಟ್ಟಪ್ಪಣೆ ಹೊರಡಿಸಿದ. ಆದರೂ ನನ್ನೊಳಗಿನ ಕೃಷಿಯ ಸೆಳವು ಬೃಹದಾಕಾರವಾಗಿ ಪುಟಿಯುತ್ತಿದ್ದರೂ ನನ್ನ ಮುಂದಿದ್ದ ಪ್ರಶ್ನೆ ಎಂದರೆ *ಇದು ನನಗೆ ಬೇಕಿತ್ತಾ ?* ಎಂಬುದೇ ಆಗಿತ್ತು.

ನಂತರದಲ್ಲಿ ಲೋಕೇಶ್, ಪರಮೇಶ್, ಬಸವಣ್ಣ, ಕುಂಭಯ್ಯನವರ ನಾಗಣ್ಣ, ಅವರ ಶ್ರೀಮತಿ ರತ್ನಮ್ಮ, ಸಂತೋಷ, ಕಿಟ್ಟ, ಪ್ರಕಾಶ, ಹಾಗೂ ಅವರ ಸಂಗಡಿಗರು, ಜೊತೆಗೆ ಸಾಲ್ಕಟ್ಟೆ ಸ್ವಾಮಿ { JCB ) , ಹುಳಿಯಾರು ಈಶ, ನಮ್ಮ ಸುರೇಶ್ ಭೈ ಹೀಗೆ ಹಲವಾರು ಜನರು ನನ್ನೊಂದಿಗೆ ಕೈ ಜೋಡಿಸಿದರು. ಜೊತೆಗೆ ಸಾಲದ ರೂಪದಲ್ಲಿ ಸಿದ್ದರಾಮೇಶ್ವರ ಟ್ರೇಡರ್ಸ್ ನ ನನ್ನ ತಮ್ಮನಂತಿರುವ ಕಿರಣ್, ಗೊಬ್ಬರದಂಗಡಿಯ ರಾಮನಹಳ್ಳಿ ಪ್ರಕಾಶ್ ಹೀಗೆ ಇವರಂತೆಯೇ ಇಂದಿಗೂ ನನ್ನ ಬೆನ್ನಿಗೆ ನಿಂತಿರುವ ರಮೇಶ್ JCB, ಕಾಂತಣ್ಣ, ನಂದಿ ಹೀಗೆಯೇ ಎಲ್ಲಕ್ಕೂ ಮಿಗಿಲಾಗಿ ನನ್ನ ಎಲ್ಲಾ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಬೆನ್ನುಲುಬಾಗಿರುವ MP ಬಸವಣ್ಣ ಹಾಗೂ ನನಗೆ ತಂಗಿಯೇ ಆಗಿರುವ ಕಾಂತಮ್ಮ ಹೀಗೆಯೇ ದಶವಂತ, ಚಂಗುಮಣಿ, ಮುತ್ತು ಹೀಗೆಯೇ ಒಳ್ಳೆಯ ತಳಿಯ ಗಿಡ ನೀಡಿದ ಗುಬ್ಬಿಯ ಗಂಗಹನುಮಯ್ಯ, ನಾರಾಯಣ್ ನಂಥವರಾದ ಹಲವಾರು ಜನರು ನನ್ನ ಬೆನ್ನುಲುಬಾಗಿ ಇಂದಿಗೂ ನಿಂತು ಅವರಲ್ಲಿ ನನ್ನನ್ನೂ ಒಬ್ಬನನ್ನಾಗಿ ಸ್ವೀಕರಿಸಿ ಈ ಮುಳ್ಳುಗಂಟೆಗಳಿಂದ ಕೂಡಿದ್ದ ಜಮೀನನ್ನು ಇಂದು ಈ ಯೋಗ್ಯ ಭೂಮಿಯನ್ನಾಗಿ ಮಾಡಿದ್ದಾರೆ. ಇವರೆಲ್ಲರ ಸಹಕಾರ, ಮಾರ್ಗದರ್ಶನ ಇಲ್ಲದಿದ್ದರೆ ನಾನೇನೂ ಮಾಡಲಾಗುತ್ತಿರಲಿಲ್ಲ.
ಆದರೆ ಇಂದು ಆ ಭೂಮಿ ನಳನಳಿಸುವುದಕ್ಕೆ ಮತ್ತೊಂದು ಕಾರಣವೂ ಇದೆ. ಇದೇ ಭೂಮಿಯಲ್ಲಿಯೇ ನಮ್ಮ ಪೂರ್ವಜರಿಂದ ನನ್ನ ಹೆತ್ತ ಅಪ್ಪ ಹಾಗೂ ಅಮ್ಮನನ್ನು ಅಂತ್ಯ ಸಂಸ್ಕಾರ ಮಾಡಿರುವುದು. ಅವರ ಆಶೀರ್ವಾದ, ಹಾರೈಕೆಯೇ ಇಂದಿನ ಹಸಿರು. ಆ ಹದಿರಿನ ರೂಪದಲ್ಲಿಯೇ ನಾನು ನನ್ನ ಹೆತ್ತ ತಂದೆ ತಾಯಿಯರನ್ನು ನೋಡುತ್ತಲಿದ್ದೇನೆ. ಹೀಗಾಗಿ ಅಲ್ಲಿ ಹಸಿರು ನಳನಳಿಸುತ್ತಲಿದೆ.

ಜೀವನ ಎಂಬುದೊಂದು ಪಯಣ, ಆ ಪಯಣದಲ್ಲಿ ಒಮ್ಮೆ ಹೂದೋಟ, ಒಮ್ಮೆ ಕಾಡು ನೋಟ, ಒಮ್ಮೆ ಸಂತೋಷ, ಒಮ್ನೆ ದುಃಖ, ಒಮ್ಮೆ ಚೈತನ್ಯ, ಒಮ್ಮೆ ಬೇಸರ ಹೀಗೆ ಎಲ್ಲವನ್ನೂ ಅನುಭವಿಸಿ ಮಜಲುಗಳನ್ನೇರುವುದೇ ನೈಜ ಜೀವನ, ಅಂತಹ ಸಂತೋಷವನ್ನು ನನಗೆ ಈ *ಸಿರಿ ಫಾರಂ* ಎಂಬುದು ನೀಡಿದೆ. ಇದರ ಹಿಂದೆ ನನ್ನ ಸ್ರೀಮತಿ ಚಂಪಾ ಹಾಗೂ ಮಗಳು ಸಿರಿಯ ಸಹಕಾರ ಹಾಗೂ ತ್ಯಾಗವೂ ಇದೆ. ಎಲ್ಲಕ್ಕೂ ಮಿಗಿಲಾಗಿ ನನ್ನಕ್ಕ ಯಶೋದನ ಮುಖದಲ್ಲಿ ನನ್ನ ಅಪ್ಪನನ್ನೂ ಹಾಗೂ ಹೆತ್ತಬ್ಬೆಯನ್ನೂ ನೋಡುತಲಿದ್ದೇನೆ. ಅದೇ ನನಗೆ ಖುಷಿ.

✍️ *ರವೀ ಚಿಕ್ಕನಾಯಕನಹಳ್ಳಿ*

3 thoughts on “ನನ್ನ ಹೊಲ ಹಸಿರುಕ್ಕಿಸಿ ನಿಂತದ್ದಕ್ಕೆ ಕಾರಣ ನನ್ನಪ್ಪ ಅವ್ವನನ್ನು ಆ ಹೊಲದಲ್ಲಿ ಹೂತಿದ್ದೇವೆ

  1. ಸಿರಿಯ ಹಸಿರಲ್ಲಿ ಅಪ್ಪ ಅಮ್ಮನ ಹೆಸರು ಬೆರೆಸಿದ್ದು..ಹಸಿರಿಗೂ ,ನಿಮ್ಮ‌ಹೆಸರಿಗೂ ಘನತೆ ಸರ್.ಎಲ್ಲವೂ ಹೆತ್ತವರ ಆಶಿರ್ವಾದ ದೊಡ್ಡದು.ಬರಹ ಆಪ್ತವಾಗಿದೆ ಸರ್.ಅದರಲ್ಲಿ ಭಾವವೂ ಸಮ್ಮಿಳಿತವಾಗಿದೆ.ನಮಸ್ಕಾರ ಸತ್.

Leave a Reply to Shivanand chandrkant Hadapad Cancel reply

Your email address will not be published. Required fields are marked *

error: Content is protected !!