ವ್ಯೋಮಕಾಯ ಅಲ್ಲಮ*

*ವ್ಯೋಮಕಾಯ ಅಲ್ಲಮ

 

ಮಾಮರದೊಳಗೊಂದು ಮಾಯದ ಮಂಜು ಕವಿದಡೆ, ಹೂ ಮಿಡಿ ಫಲಂಗಳು ಉದುರವಿನ್ನೆಂತೊ ? ಮಂಜಿನ ರಸವನುಂಡು ಫಲ ನಿಮಿರ್ದು ಬೆಳೆದಡೆ, ಆ ಫಲವ ನಾನು ಮುಟ್ಟೆನು ಕಾಣಾ ಗುಹೇಶ್ವರಾ

ಶರಣರ ಪರಂಪರೆಯಲ್ಲಿ ಬಲು ಮೇಲು ಹೆಸರುಗಳೆಂದರೆ ಜಗಜ್ಯೋತಿ ಬಸವೇಶ್ವರರು, ವೈರಾಗ್ಯ ತವನಿಧಿ ಅಕ್ಕಮಹಾದೇವಿ, ಚಿತ್ಕಳಸ್ವರೂಪಿ ಚೆನ್ನ ಬಸವಣ್ಣ, ಹರಳಯ್ಯ, ಆಯ್ದಕ್ಕಿ ಮಾರಯ್ಯ, ನುಲಿಯ ಚಂದಯ್ಯ, ಆದಯ್ಯ, ಸಿದ್ದರಾಮಣ್ಣ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಅಕ್ಕ ನಾಗಾಯಿ, ಆಯ್ದಕ್ಕಿ‌ಲಕ್ಕಮ್ಮ, ಕದಿರೆ ಕಾಳವ್ವ ಹೀಗೆ ಅಸಂಖ್ಯಾತ ಶರಣರು ಕಲ್ಯಾಣದಲ್ಲಿ ಮೇಲು ಕೀಳಿನ ಭಾವ ತೊರೆದು, ಜಾತಿಯ ಅಸಮಾನತೆಯನ್ನು ತೊಡೆದುಹಾಕಿ, ಕಾಯಕ ಸಿದ್ದಾಂತವನ್ನು ಜಾರಿಗೆ ತಂದು ಎಲ್ಲೆಲ್ಲಿಯೂ ಸಮೃದ್ದಿ, ಸಮಷ್ಠಿಯಿಂದ ಇರುವಂತೆ *ಬೇಡುವವರಿಲ್ಲದೆ ನಾನು ಬಡವನಾದೆನಯ್ಯಾ*  ಎನ್ನುವಂತೆ ಕಲ್ಯಾಣದಲ್ಲಿ ಸಾಮಾಜಿಕ, ಆರ್ಥಿಕ ಸಮಾನತೆಯ ಬೀಜವನ್ನಂಕುರಿಸಿ ಒಂದು ಸಮಾಜದಲ್ಲಿ *ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು*  ಎಂಬ ತತ್ವದಡಿಯಲ್ಲಿ, ಅನುಭವ ಮಂಟಪದಲ್ಲಿ ಆಧ್ಯಾತ್ಮಿಕ ಚಿಂತನೆಗಳು, ವಚನ ಸಾಹಿತ್ಯ ಇವೆಲ್ಲವೂ ಉತ್ತುಂಗಕ್ಕೆ ಏರಿದಂತಹ ಕಾಲಘಟ್ಟವದು.   ಇಂಥಹ ಉತ್ತುಂಗ ಸ್ಥಾನಕ್ಕೆ ಶರಣ ಪರಂಪರೆಯು ಸಾಗಲು ಒಂದು ಧೀಃ ಶಕ್ತಿ ಇರಲೇಬೇಕಾಗಿತ್ತು.   ಅಂತಹ ಮೇರುವಾಗಿ, ಅನುಭವ ಮಂಟಪದ ಶೂನ್ಯ ಪೀಠದ ಅಧ್ಯಕ್ಷರಾಗಿ, ಶರಣ ಪರಂಪರೆಯನ್ನು ಒಂದು ಗೌರವ ಸ್ಥಾನಕ್ಕೆ ತಂದು ನಿಲ್ಲಿಸಿದವರು *ವ್ಯೋಮಕಾಯ ಅಲ್ಲಮ ಪ್ರಭು ದೇವರು* .   ಇಡೀ ಅನುಭವ ಮಂಟಪದ ಪ್ರೇರಕ ಶಕ್ತಿಯಾಗಿದ್ದವರು ಅಲ್ಲಮ ಪ್ರಭು ದೇವರು.  ಅಲ್ಲಮರು ಎಲ್ಲರಿಗೂ ಆದ್ಯರಾಗಿ ಬಟ್ಟ ಬಯಲುಗೊಂಡ ಸಾಕಾರ ಮೂರ್ತಿಗಳೂ ಆಗಿದ್ದರು.‌

ಅಲ್ಲಮ ಪ್ರಭು ದೇವರದು ಹೆಜ್ಜೆ ಇಲ್ಲದ ನಡೆ, ತಡೆಯೇ ಇಲ್ಲದ ನುಡಿ, ಸುಳಿವೇ ಇಲ್ಲದ ಸುಳುಹು, ಹೊಲೆಯೇ ಇಲ್ಲದ ಕಾಯ,  ಗೊತ್ತು ಇಲ್ಲದ ನಡೆ, ನಿಲುವಿಗರಿಯದ ಅರಿವು, ಶಿವನ ನಿರಾಕಾರವೇ ಅಲ್ಲಮನಾಗಿ ಬಂದಿತ್ತೋ ಎನ್ನುವ ಅನನ್ಯತೆ.  ಯಾರಿಗೂ ಎಂದಿಗೂ ಅರ್ಥವಾಗದ ನಡೆ, ಎಲ್ಲವನ್ನೂ ಪರೀಕ್ಷಿಸಿಯೇ ಒಪ್ಪುವ ಮನ, ಕರುಣಾ ಮೂರ್ತಿ, ಆಧ್ಯಾತ್ಮಿಕದ ಮೇರು ಎನ್ನುವಂತಿದ್ದರು ಅಲ್ಲಮರು.

ಅಲ್ಲಮರು ನಾಗವಾಸಾಧಿಪತಿ ಹಾಗೂ ಸುಜ್ಞಾನ ದೇವಿಯ ಉದರದಲ್ಲಿ ಇಂದಿನ ಶಿವಮೊಗ್ಗೆಯ ಬಳ್ಳಿಗಾವಿಯಲ್ಲಿ ಜನಿಸಿದರು.  ಚಿಕ್ಕಂದಿನಿಂದಲೂ ಓದು, ವಿದ್ಯೆಯನ್ನು ಕಲಿತ ಅವರು ವಿಶೇಷವಾಗಿ ಮದ್ದಲೆಯನ್ನು ಬಹು ಪ್ರೀತಿಸಿ ಮದ್ದಲೆ ವಾದಕರೂ ಆಗಿದ್ದರು.  ಪ್ರಾಯಕ್ಕೆ ಬಂದ ನಂತರ ಕಾಮಲತೆಯೊಂದಿಗಿನ ಪ್ರೇಮ, ಸರಸ, ಸಲ್ಲಾಪಗಳಲ್ಲಿ ಮುಳುಗಿದ ಅಲ್ಲಮರು ಈ  ಇಹ ಲೋಕದ ಪರಿಯನ್ನೇ ಮರೆತಂತವರಾಗಿರುತ್ತಾರೆ.  ಅದ್ಯಾವುದೋ ವಿಷಮ ಶೀತ ಜ್ವರಕ್ಕೆ ತುತ್ತಾದ ಕಾಮಲತೆಯು ಅಕಾಲಿಕ ಮರಣ ಹೊಂದಿದಾಗ ಅಲ್ಲಮನು ತೀವ್ರ ವಿರಹವೇದನೆಯಲ್ಲಿ‌ ನೋವನ್ನುಣ್ಣುತ್ತಾನೆ.  ನಂತರದಲ್ಲಿ  ಗೊಗ್ಗಯ್ಯನ ಕಣಗಿಲೆ ತೋಟದ ದಿಬ್ಬದಲ್ಲಿ ಕುಳಿತು ವಿರಹದ ನೋವಿನಲ್ಲಿ ಆ ದಿಬ್ಬವನ್ನು ತನ್ನ ಹೆಬ್ಬೆರಳಿನಿಂದ ಮಣ್ಣನ್ನು ಕೆರೆಯುವಾಗ ಆತನಿಗೆ ಕಂಡಿತೊಂದು ಬಂಗಾರದ ಕಲಶ, ಮತ್ತೆ ಸ್ವಲ್ಪ‌ ಅಗೆದು ತಗೆದು ನೋಡಿದಾಗ ಅದೊಂದು ದೇವಾಲಯ.  ನಂತರದ ಊರಿನ ರಾಜ ಹಾಗೂ ಪ್ರಮುಖರು ಉತ್ಕನನ ಮಾಡಿದಾಗ ಅದೊಂದು ಬಾಗಿಲು ಮುಚ್ಚಿದ  ದೇವಲಾಯವಾಗಿತ್ತು. ಒಳಗೆ ಯಾರೂ ಪ್ರವೇಶಿಸಲು ಒಲ್ಲದ ಕಾರಣ, ಮೊದಲೇ ಪ್ರೇಮದ ವಿರಹದ ನೋವಲ್ಲಿ ಬಸವಳಿದಿದ್ದ,  ಈ ಕಾಯ ಇದ್ದರೇನು ಬಿಟ್ಟರೇನು ? ಎಂದು ಕೊಂಡು ರಾಜನಿಗೆ ನಾನು ಒಳಪ್ರವೇಶಿಸುವೆನೆಂದು ಹೇಳಿ ಅಲ್ಲಮ ಒಬ್ಬನೇ ಒಳಗೆ ಹೋಗಿ ನೋಡಿದಾಗ ಅಲ್ಲಿ ಅನಿಮಿಷಯ್ಯನ ದರ್ಶನವಾಯಿತು.  ಅನಿಮಿಷಯ್ಯನ ತೇಜೋಪುಂಜವಾದ ಆಧ್ಯಾತ್ಮ, ಮೂಳೆಗಳ ಹಂದರಕ್ಕೆ ಚಕ್ಕಳದ ಹೊದಿಕೆ ಹೊತ್ತಿದ್ದ ಅನಿಮಿಷಯ್ಯನು ತನ್ನ ಇಷ್ಠಲಿಂಗವನ್ನು ಅಲ್ಲಮನ‌ ಕೈಗಿತ್ತು  ಆತನು ಬಯಲಲ್ಲಿ ಬಯಲಾದನು.   ಆಗ ಅಲ್ಲಮನಿಗೆ ತನ್ನ ಗುರುವಾಗಿ ಅನಿಮಿಷಯ್ಯನು ಗೋಚರಿಸಿ, ಅಲ್ಲಮಙ್ನು ಆಧ್ಯಾತ್ಮಿಕ ಸೆಲೆಯೆಡೆಗೆ ದಾರಿ ತೋರಿದ ಗುರುವಾದನು.

ಕಾಣಬಾರದ ಗುರು ಕಣ್ಗೆ ಗೋಚರವಾದಡೆ;
ಹೇಳಲಿಲ್ಲದ ಬಿನ್ನಪ್ಪ,
ಮುಟ್ಟಲಿಲ್ಲದ ಹಸ್ತಮಸ್ತಕ ಸಂಯೋಗ.
ಹೂಸಲಿಲ್ಲದ ವಿಭೂತಿಯ ಪಟ್ಟ,
ಕೇಳಲಿಲ್ಲದ ಕರ್ಣಮಂತ್ರ.
ತುಂಬಿ ತುಳುಕದ ಕಲಶಾಭಿಷೇಕ ಆಗಮವಿಲ್ಲದ ದೀಕ್ಷೆ,
ಪೂಜೆಗೆ ಬಾರದ ಲಿಂಗ, ಸಂಗವಿಲ್ಲದ ಸಂಬಂಧ.
ಸ್ವಯವಪ್ಪ ಅನುಗ್ರಹ,
ಅನುಗೊಂಬಂತೆ ಮಾಡಾ ಗುಹೇಶ್ವರಾ.

ಎಂಬ ವಚನವ‌ನ್ನು ಬರೆಯುತ್ತಾರೆ, ಅಂದರೆ ಕಾಣಬಾರದ ಗುರು ಕಣ್ಗೆ ಕಂಡು ಗೋಚರವಾಗಿ, ನಾನು ಕೇಳದಿದ್ದರೂ ಲಿಂಗದೀಕ್ಷೆ ನೀಡಿದ, ತಲೆಯನ್ನು ಮುಟ್ಟಿ ಆಶೀರ್ವದಿಸದೆ, ವಿಭೂತಿ ಧರಿಸದೆ, ಕಲಶಗಳಿಂದ ಅಭಿಷೇಕ ಮಾಡದೆ, ಸಂಗವಿಲ್ಲದ ಸಂಬಂಧದಲ್ಲಿ ಅನಿಮಿಷಯ್ಯನು ಅಲ್ಲಮನಿಗೆ ಗುರುವಾಗಿ ಕಾರುಣ್ಯವನಿತ್ತನು. ಹೀಗೆ ಗುರು ಆನಿಮಿಷಯ್ಯನ ಕೃಪೆಗೊಳಗಾಗಿ ಲಿಂಗದೀಕ್ಷೆ ಪಡೆದುಕೊಂಡು ಗುಡಿಯಿಂದ ಹೊರಬಂದ ಅಲ್ಲಮನು ಆಗಲೇ ವೈರಾಗ್ಯದ ತವನಿಧಿಯಾಗಿ, ಆಧ್ಯಾತ್ಮಿಕದ ಕರಿಯನಾಗಿ, ಈಶ್ವರನ ಸ್ವರೂಪದಲ್ಲಿ ಆ ಗುಡಿಯಿಂದ ಹೊರಗೆ ಬಂದನು.

ನಂತರದಲ್ಲಿ ಅಲ್ಲಮನು ದೇಶಾಂತರ ಹೊರಟು ಕೃಷಿ ಕಾಯಕದ ಗೊಗ್ಗಯ್ಯನಲ್ಲಿದ್ದ ಆತ್ಮನುಸಂಧಾನವನ್ನು ಗುರುತಿಸಿದ ಅಲ್ಲಮನು ಗೊಗ್ಗಯ್ಯನೆಂಬ ಕೃಷಿಕನಿಗೆ ಅವನಿಗೆ ಅರ್ಥವಾಗುವ ರೀತಿಯಲ್ಲಿಯೇ ಆತನಿಗೆ

ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ, ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ !
ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ‌ !
ಅಖಂಡಮಂಡಲವೆಂಬ ಬಾವಿ,
ಪವನವೆ ರಾಟಾಳ ,
ಸುಷುಮ್ನನಾಳದಿಂದ ಉದಕವ ತಿದ್ದಿ,
ಬಸವಗಳೈವರು ಹಸಗೆಡಿಸಿಹವೆಂದು 
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ , 
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು 
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ

ಎಂದು ಕೃಷಿಕ ಗೊಗ್ಗಯ್ಯನಿಗೆ ಶಿವಾನುಭವದ ಆಧ್ಯಾತ್ಮಿಕವನ್ನು ಹೇಳಿ, ಆತನಿಗೂ ಲಿಂಗದೀಕ್ಷೆ ಮಾಡಿ ನಂತರ ಅಜಗಣ್ಣ – ಮುಕ್ತಾಯಕ್ಕ ರ ಭೇಟಿ ಮಾಡಿಕೊಂಡು ಕಲ್ಯಾಣದ ಕಡೆಗೆ ಬರುತ್ತಾರೆ.  ಅಲ್ಲಿ ಸೊನ್ನಲಿಗೆಯಲ್ಲಿ ಶ್ರೀ ಸಿದ್ದರಾಮನನ್ನು ಕಾಣುತ್ತಾರೆ.  ಶ್ರೀ ಸಿದ್ದರಾಮರು ಕೆರೆ ಬಾವಿಗಳನ್ನು ಕಟ್ಟಿಸುತ್ತಾ, ದೇವಸ್ಥಾನ ಕಟ್ಟಿಸುತ್ತಾ ಮಂಗಳ ಕಾರ್ಯ ಮಾಡುತ್ತಾ ಇದೇ ಆ ಶಿವನನ್ನು ಒಲಿಸಿಕೊಳ್ಳುವ ಪರಿ ಎಂದು ತಿಳಿದಿದ್ದಾಗ, ಅಲ್ಲಮರು ಶ್ರೀ ಸಿದ್ದರಾಮೇಶ್ವರರಲ್ಲಿ‌ ಇದ್ದಂತಹ ಆಧ್ಯಾತ್ಮಿಕ ಶಕ್ತಿಯನ್ನು ಗುರುತಿಸಿ

ಅನ್ನವನಿಕ್ಕಿ, ನನ್ನಿಯ ನುಡಿದು,
ಅರವಟ್ಟಿಗೆಯನಿಕ್ಕಿ, ಕೆರೆಯ ಕಟ್ಟಿಸಿದಡೆ
ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ !
ಶಿವನ ನಿಜ ಸಾನಿಧ್ಯವು ಸಾಧ್ಯವಾಗದು.
ಗುಹೇಶ್ವರನನರಿದ ಶರಣಂಗಾವ ಫಲವೂ ಇಲ್ಲ !

ಎಂಬ ಸತ್ಯವಾಣಿಯನ್ನು ಸಿದ್ದರಾಮನಲ್ಲಿ ಹೇಳಿ, ಅವರಿಗೆ ಶಿವಾಮೃತವನ್ನು, ಆಧ್ಯಾತ್ಮವನ್ನು,  ಶರಣನನ್ನಾಗಿಸಿ ಅವರಿಗೂ ಆಧ್ಯಾತ್ಮದ ಸತ್ಯವನ್ನು ತಿಳಿಸಿ ತನ್ನ ಶಿಷ್ಯರನ್ನಾಗಿ ಪಡೆದುಕೊಂಡ ಅಲ್ಲಮರು ಕಲ್ಯಾಣಕ್ಕೆ ಬರುತ್ತಾರೆ.  ಕಲ್ಯಾಣದಲ್ಲಿ ಬಸವಣ್ಣ, ಅಡಪದ ಅಪ್ಪಣ್ಣನವರ ಭೇಟಿ, ನಂತರ ಅನುಭವ ಮಂಟಪದ ಶೂನ್ಯ ಪೀಠದ ಅಧ್ಯಕ್ಷ ಸ್ಥಾನ ಹೀಗೆ, ನಂತರ ಅಕ್ಕ ಮಹಾದೇವಿಯ ಆಗಮನ, ನಂತರ ಅಲ್ಲಮರು ಕೊನೆಗೆ ಶ್ರೀ ಶೈಲ ತ್ರಿಕೂಟದ ಕದಳೀವನದಲ್ಲಿ‌ ಬಯಲಲ್ಲಿ ಬಯಲಾದವರು.

ಕಾಯವೆಂಬ ಕದಳಿಯ ಹೊಕ್ಕು; ಪ್ರಾಣವೆಂಬ ಗಂಹರದಲ್ಲಿ; ಸಕಲೇಂದ್ರಿಯವೆಂಬ ಕೋಣೆ ಕೋಣೆಗಳಲ್ಲಿ ತಿರುಗಾಡುತ್ತ ಬರಲಾಗಿ ಮೇರು ಮಂದಿರದ ತ್ರಿಕೋಣೆಯಲ್ಲಿ ಬೆಳಗಾಯಿತ್ತು ! ಗುಹೇಶ್ವರಲಿಂಗವೆಂಬುದು ರೂಪಾಯಿತ್ತು ಸಂಗನಬಸವಣ್ಣಾ

ಇಲ್ಲಿ ಈ ಶರಣ ಪರಂಪರೆಯಲ್ಲಿ‌ ಜಗಜ್ಯೋತಿ ಬಸವೇಶ್ವರರು, ಆಧ್ಯಾತ್ಮದ ಮೇರು ಅಲ್ಲಮರು‌ ಹಾಗೂ ವೈರಾಗ್ಯ ತವನಿಧಿ ಅಕ್ಕಮಹಾದೇವಿಯವರ ಪಾತ್ರ ಬಹಳವೇ ಮುಖ್ಯವಾಗುತ್ತದೆ.  ಶ್ರೀ ಬಸವಣ್ಣನವರು ತಮ್ಮಲ್ಲಿ *ಅಂತರಂಗದ ಶುದ್ದಿ, ಬಹಿರಂಗ ಶುದ್ದಿ* ಯೊಂದಿಗೆ ಈ ಸಮಾಜದಲ್ಲಿ ತುಳಿತಕ್ಕೊಳಗಾದವರಿಗೂ, ಸಮಾಜದ ಎಲ್ಲಾ ಸ್ತರದವರಿಗೂ ತಮ್ಮ ಮುಕ್ತ ಮನಸ್ಸಿನಿಂದ ಎಲ್ಲರನ್ನೂ ಸಮಾನವಾಗಿ ಕಂಡು *ಹೊಲೆಗಂಡಲ್ಲದೆ ಪಿಂಡಕ್ಕೆ ನೆಲೆಗಾಶ್ರಯವಿಲ್ಲ, ಕರ್ಣದಲ್ಲಿ ಜನಿಸಿದವರುಂಟೇ ಈ ಜಗದೊಳಗೆ* ಎಂದು ಎಲ್ಲರ ಹೃದಯದಲ್ಲೂ ಕೂಡಲ ಸಂಗಮನನ್ನ ಕಂಡರು.   *ನಾನು ಮಾದಾರ ಚೆನ್ನಯ್ಯನ ಮಗನ ಮನೆಯ ದಾಸಿಯ ಮಗ ನಾನು* ಎಂದರು.   ಸಾಮಾಜಿಕ ಹರಿಕಾರನಾಗಿ, ಆರ್ಥಿಕ ತಜ್ಞನಾಗಿ ಬಸವಣ್ಣನು ಸಮಾಜದ ಏಳಿಗೆಯನ್ನು ಮುಕ್ತ ಮನಸ್ಸಿನಿಂದ ಮಾಡಿದರು.

ಆದರೆ ಅಕ್ಕಮಹಾದೇವಿಯು ಆತ್ಮ ಸಾಂಗತ್ಯಕ್ಕೆ  ಶ್ರೀ ಚೆನ್ನ ಮಲ್ಲಿಕಾರ್ಜುನನುಂಟು ಎಂದು ಕೊಂಡು, ಈ ಪ್ರೇಮದ ಪರಾಕಷ್ಠೆಯಲ್ಲಿ ವಿರಹದ ವೇದನೆಯಲ್ಲಿ ಆತಳು ಬಳಲಿದಳು, ತನ್ನ ಹೃದಯ ಕಮಲವನ್ನು ಭದ್ರವಾಗಿ ಬೀಗ ಹಾಕಿಟ್ಟುಕೊಂಡು, ತಾನು ಬೇರೆಯವರಿಗೆ ಮನಸೋಲದೆ, ಬೇರೆಯವರನ್ನು ಮನದೊಳಕೆ ಸೇರಿಸದೆ ಅಕ್ಕಳು ಶ್ರೀ ಚನ್ನಮಲ್ಲಿಕಾರ್ಜುನನನ್ನು ಹೊರತು ಪಡಿಸಿ ಈ ಜಗತ್ತೇ ನಶ್ವರ ಎಂದು ಪರಿಭಾವಿಸಿದಾಳಾಕೆ.

ಆದರೆ ಅಲ್ಲಮ‌ಪ್ರಭುದೇವರು ಈ ಜಗತ್ತಿನಲ್ಲಿ ಎಲ್ಲವೂ ನಶ್ವರ, ಇಲ್ಲಿರುವುದು ಎಲ್ಲವೂ ಮಾಯೆಯಿಂದ ಪ್ರೇರೇಪಿತಗೊಂಡಿವೆ ಎಂದು ತಿಳಿದು ಯಾವುದರಲ್ಲಿ ಆತನು ಆಶಾದಾಯಕವಾಗಿರದೆ, ಮನದ ಮೂಲೆಯಿಂದ ಆಶೆಯ ನಶೆಯನ್ನು ಬೇರು ಸಹಿತ ಕಿತ್ತು ಹಾಕಿದನು.  ಅಲ್ಲಮನ ಒಂದು  ವಚನ

ಮಾಮರದೊಳಗೊಂದು ಮಾಯದ ಮಂಜು ಕವಿದಡೆ,
ಹೂ ಮಿಡಿ ಫಲಂಗಳು ಉದುರವಿನ್ನೆಂತೊ ?
ಮಂಜಿನ ರಸವನುಂಡು ಫಲ ನಿಮಿರ್ದು ಬೆಳೆದಡೆ,
ಆ ಫಲವ ನಾನು ಮುಟ್ಟೆನು ಕಾಣಾ ಗುಹೇಶ್ವರಾ

ಎಂಬ ಈ ವಚನದಲ್ಲಿ ಅಲ್ಲಮನ‌ ಧೃಢ ಮನಸ್ಥಿತಿ ಏನೆಂದು ನಮಗೆ ಅರಿವಾಗುತ್ತದೆ.   ಈ ಜಗದ ಸೊಂಕಿನ ಆಟಗಳು ಅವನ ಮುಂದೆ ಯಾವುದೇ ಕಾರಣಕ್ಕೂ ನಡೆಯಲಿಲ್ಲ.‌ ಅಂತಹ Determination ಅಲ್ಲಮನದು.  ಎಲ್ಲರೂ ತಮ್ಮನ್ನು ಆವರಿಸುವ ಮಾಯೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರೆ ಅಲ್ಲಮನು ಮಾಯೆಯನ್ನು ತನ್ನ ಬಳಿ ಬಾರದ ಹಾಗೆ ನೋಡಿಕೊಂಡವನು.  ಛೇ ಇಲ್ಲಿರುವುದೆಲ್ಲಾ ಸುಳ್ಳು, ನನ್ನ ಮುಂದೆ ನಿಮ್ಮಾಟಗಳು ನಡೆಯುವುದೇ ಇಲ್ಲ ಧೃಢ ಚಿತ್ತವನ್ನು ಅಲ್ಲಮನು ಹೊಂದಿದ್ದನು.  ಹಾಗಾಗಿಯೇ *ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಂಯೆಂಬರು ಮಣ್ಣು ಮಾಯೆಯಲ್ಲ, ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ,  ಮನದೊಳಗನ ಆಸೆಯೇ ಮಾಯೆ ಕಾಣಾ ಗುಹೇಶ್ವರ* ಎಂದು ಧೃಢವಾಗಿ ಅರಿಷಡ್ವರ್ಗಂಗಳನ್ನು ಕಾಲಿನಲ್ಲಿ ದೂಡಿದವನು ಅಲ್ಲಮ.  ಷಟ್ಥಲಗಳ ಕೊನೆಯ ಹಂತವಾದ ಶರಣನಾಗಿ, ತನ್ನನ್ನು ತಾನು ಭಕ್ತಿ ಭಾವದಲ್ಲಿ ಆ ಗುಹೇಶ್ವರನಲ್ಲಿ ಸ್ಪೋಟಿಸಿಕೊಂಡವನು.

ಹಿಂದೆ ಎಷ್ಟು ಪ್ರಳಯ ಹೋಯಿತ್ತೆಂದರಿಯೆ.
ಮುಂದೆ ಎಷ್ಟು ಪ್ರಳಯ ಬಂದಹುದೆಂದರಿಯೆ.
ತನ್ನ ಸ್ಥಿತಿಯ ತಾನರಿಯದಡೆ ಅದೇ ಪ್ರಳಯವಲ್ಲಾ !
ತನ್ನ ವಚನ ತನಗೆ ಹಗೆಯಾದಡೆ ಅದೇ ಪ್ರಳಯವಲ್ಲಾ !
ಇಂತಹ ಪ್ರಳಯ ನಿನ್ನಲುಂಟೆ ಗುಹೇಶ್ವರಾ ?

ಎಂದು ಆ ಭಗವಂತ ಗುಹೇಶ್ವರನನ್ನೇ ಪ್ರಶ್ನೆ ಮಾಡುವ ಧೀಮಂತನವನು.   ಹಾಗಾಗಿಯೇ ಆತನನ್ನು ಆಧ್ಯಾತ್ಮದ ಮೇರು, ನಡೆದಿದ್ದೆ ದಾರಿ, ಹೆಜ್ಜೆ ಇಲ್ಲದ ನಡೆ, ತಡೆಯೇ ಇಲ್ಲದ ನುಡಿ, ಸುಳಿವೇ ಇಲ್ಲದ ಸುಳುಹು, ಹೊಲೆಯೇ ಇಲ್ಲದ ಕಾಯ,  ಗೊತ್ತು ಇಲ್ಲದ ನಡೆ, ನಿಲುವಿಗರಿಯದ ಅರಿವು ಅವನದಾಗಿತ್ತು.   ಅಂತಹ ಅಲ್ಲಮನು ನಮಗೆ ಎಂದಿಗೂ ಮಾದರಿಯೇ ಆಗಿದ್ದಾನೆ.

*ಧರೆಗೆ ದೊಡ್ಡವನಾದ, ಆಧ್ಯಾತ್ಮದ ಮೇರುವಾದ ಅಲ್ಲಮ, ಅಲ್ಲಯ್ಯ, ಪರಂಜ್ಯೋತಿ, ಶ್ರೀ ಅಲ್ಲಮ‌ಪ್ರಭು ದೇವರ ಹುಟ್ಟಿದ ದಿನವಿಂದು,  ಇಂಥಹ ಮಹಾಮೇರು ಜ್ಯೋತಿಯನ್ನು ಆದರದಿಂದ ಗೌರವಿಸುವುದು ನಮ್ಮ ಸೌಭಾಗ್ಯ,  ತಮಗೆಲ್ಲರಿಗೂ ಶ್ರೀ ಅಲ್ಲಮ ಪ್ರಭುವಿನ ಜಯಂತಿಯ ಶುಭಾಷಯಗಳು*

 

✍️ *ರವೀ ಚಿಕ್ಕನಾಯಕನ‌ಹಳ್ಳಿ*

One thought on “ವ್ಯೋಮಕಾಯ ಅಲ್ಲಮ*

Leave a Reply

Your email address will not be published. Required fields are marked *

error: Content is protected !!