ವಿಚಾರದ ತವನಿಧಿ ಜೇಡರ ದಾಸಿಮಯ್ಯ

ಜೇಡರ ದಾಸಿಮಯ್ಯನವರು*ತವನಿಧಿ ಜೇಡರ ದಾಸಿಮಯ್ಯ*

ಹೆಣ್ಣು ಮಾಯೆ,  ಆಕೆಯು ಜೊತೆಯಲ್ಲಿದ್ದರೆ ನಾವು ಜೀವನದಲ್ಲಿ ಏನೂ ಸಾಧಿಸಲಾಗುವಿದಿಲ್ಲ.  ಹೆಣ್ಣು ಕನಿಷ್ಠಳು, ಗಂಡು ಶ್ರೇಷ್ಠ ಎಂಬ ಭಾವನೆ ಇದ್ದಂತಹ ಕಾಲಘಟ್ಟದಲ್ಲಿ *ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ. ಸತಿಪತಿಗಳೊಂದಾಗದವನ ಭಕ್ತಿ, ಅಮೃತದೊಳು ವಿಷ ಬೆರೆದಂತೆ ಕಾಣಾ !* ಎಂದು ಹೇಳಿದವರು  *ಜೇಡರ ದಾಸಿಮಯ* ನವರು.   *ವಿಪ್ರ ಮೊದಲಾಗಿ, ಅಂತ್ಯಜ ಕಡೆಯಾಗಿ ಶಿವಭಕ್ತರಾದವರೆಲ್ಲಾ ಒಂದೇ ಎಂಬೆ* ಎಂದು ಸಮತಾವಾದದ ಸಮಾನತ್ವವನ್ನು ಸಾರಿದವರು. *ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸುವವರೆಲ್ಲಾ ಕುಲಜರು* ಎಂದು ದಿಟ್ಟತನದಲ್ಲಿ ಹೇಳಿದವರು ಈ ದೇವರ ದಾಸಿಮಯ್ಯನವರು.

ಗುಲ್ಬರ್ಗ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರು ಇವರ ಹುಟ್ಟೂರು.  ತಂದೆ ನೇಯ್ಗೆ ಕಾಯಕದ ಕಾಮಯ್ಯ, ತಾಯಿ ಶಂಕರಿ.  ಬಾಲ್ಯದಿಂದಲೂ ಶಿವ ಸಂಪನ್ನನಾಗಿ ಬೆಳೆದ ದಾಸಿಮಯ್ಯನು ಈ ಮುದನೂರಿನ  ರಾಮನಾಥ ದೇವರನ್ನು ಪ್ರತಿದಿನವೂ ನಿರ್ಮಲವಾದ ಮನಸ್ಸಿನಿಂದ, ನಿಷ್ಕಲ್ಮಷವಾದ ಭಕ್ತಿಯಿಂದ  ಪೂಜಿಸುತ್ತಲಿದ್ದರು.   ಇವರ ನಿಷ್ಕಾಮ ಭಕ್ತಿಗೆ ಆ ರಾಮನಾಥನೇ ಒಲಿದಿದ್ದನು.  ಆ ಕಾಲದಲ್ಲಿ ಶೂದ್ರರಿಗೆ ದೇವರ ದರ್ಶನಕ್ಕೆ ಅವಕಾಶ ಕೊಡದ ಕಾರಣ ದಾಸಿಮಯ್ಯನವರು ರಾತ್ರಿ ರಾಮನಾಥ ದೇವಾಲಯದ ಬಳಿಗೆ ಹೋದರೆ ಇವರ ಭಕ್ತಿಗೆ ಮೆಚ್ಚಿದ ಆ ಭಗವಂತನೇ ತನ್ನ ದೇವಾಲಯದ ಬಾಗಿಲನ್ನು ತೆರೆದು ಸ್ವಾಗತ ಕೋರುತ್ತಿದ್ದ ಎಂದು ಕಥೆಗಳು ಹೇಳುತ್ತವೆ.  ಅಷ್ಠು ನಿರ್ಮಲ ಭಾವದ, ನಿಷ್ಕಲ್ಮಶ ಪರವಶೆಯ, ನಿಷ್ಕಾಮ ಪ್ರೀತಿಯಿಂದ *ರಾಮನಾಥ* ದೇವರನ್ನು ಪೂಜಿಸುತ್ತಲಿದ್ದವರು ಈ ಜೇಡರ ದಾಸಿಮಯ್ಯನವರು.  ಇವರಿಗೆ  *ದಾಸ, ದಾಸಿಮ, ದಾಸಿಮಾರ್ಯ, ದೇವರ ದಾಸ, ಜೇಡರದಾಸ, ದೇವರ ದಾಸಿಮಯ* ಎಂಬ ಹೆಸರುಗಳೂ ಸಹ ಪ್ರಚಲಿತದಲ್ಲಿವೆ.  ಈ ದೇವರ ದಾಸಿಮಯ್ಯನಿಗೆ ಚಂದ್ರಗುಂಡ ಶಿವಾಚಾರ್ಯರು ಶಿವಾನುಭವವ‌ನ್ನು ಭೋದಿಸಿದವರಾಗಿರುತ್ತಾರೆ.

ಆ ಕಾಲದಲ್ಲಿಯೇ ಸತಿಪತಿಗಳೊಂದಾದ ಭಕ್ತಿ ಶಿವನಿಗರ್ಪಿತವಾಗುವುದು ಎಂದು ಹೇಳಿ ತನ್ನ ಅರ್ಧಾಂಗಿ ದುಗ್ಗಳೆಗೂ ಸ್ಥಾನಮಾನವನ್ನು ನೀಡಿರುವುದನ್ನು ನಾವು ನೋಡಿದರೆ ನಾವು ಅವರಿಂದ ಸಂಸಾರವನ್ನು ಹೇಗೆ ಮಾಡಬೇಕು ಎಂಬುದು ನಮಗರಿವಾಗುತ್ತದೆ.  ಸಂಸಾರದ ಸಾರವನ್ನುಣ್ಣಬೇಕಾದರೆ ಸತಿಪತಿಗಳಾದ ದಾಸಿಮಯ ಹಾಗೂ ದುಗ್ಗಳೆಯವರು ನಮಗೆ ಆದರ್ಶಪ್ರಾಯರಾಗುತ್ತಾರೆ.   ದೇವರ ದಾಸಿಮಯ್ಯ ಹಾಗೂ ದುಗ್ಗಳೆಯವರಿಬ್ಬರೂ ಶರಣರಾಗಿ *ಶರಣ ಸತಿ, ಲಿಂಗಪತಿ* ಎನ್ನುವುದನ್ನು ಪ್ರಮಾಣೀಕರಿಸಿ ನಮಗೆಲ್ಲಾ ಮಾದರಿಯಾಗಿದ್ದಾರೆ.   ಜೇಡರ ದಾಸಿಮಯ್ಯನವರ ಒಂದು ವಚನದಲ್ಲಿ

ಅರ್ಥವುಂಟೆಂದು ಅಹಂಕರಿಸಿ ಮಾಡುವನ ಭಕ್ತಿ ತೊತ್ತಿನ ಕೂಟ, ತೊರೆಯನ ಮೇಳದಂತೆ.
ತನು-ಮನ-ಧನದಲ್ಲಿ ವಂಚನೆಯುಳ್ಳ ಪ್ರಪಂಚಿಯ ಮನೆಯ ಕೂಳುಶುನಕನ ಬಾಯ ಎಲುವ ಪ್ರತಿಶುನಕ ತಿಂದಂತೆ ಕಾಣಾ ! ರಾಮನಾಥ.

ಅಂದರೆ  ಕಾಯಕ ಮಾಡದೆ, ವಂಚನೆಯಿಂದ ಗಳಿಸರುವವನ‌ ಮನೆಯಲ್ಲಿ ಹಣ ಇದೆ ಎಂದು ಆತನ‌ ಮನೆಯಲ್ಲಿ ದಾಸೋಹಕ್ಕೆ ಹೋದರೆ ಅದೊಂದು ರೀತಿಯಲ್ಲಿ ಒಂದು ಎಲಬಿಗೆ ನಾಯಿಗಳು ಕಿತ್ತಾಡುತ್ತಾ ಅರಸಿದಂತಾಗುತ್ತದೆ ಎಂಬುದಾಗಿ ಗಂಭೀರವಾಗಿ ಹೇಳಿದ್ದಾರೆ.‌

ದೇವರ ದಾಸಿಮಯ್ಯನ ಬಗೆಗೆ ಜಗಜ್ಯೋತಿ ಬಸವೇಶ್ವರರೂ ಸಹ

*ನೆರೆ ನಂಬೋ ನೆರೆ ನಂಬೋ ದಾಸ ದುಗ್ಗಳೆಯರಂತೆ !*

*ದಾಸಿಮಯನಂತೆ ಉಡ ಕೊಡಬಲ್ಲನೇ ?*

ಭಕ್ತಿುಲ್ಲದ ಬಡವ ನಾನಯ್ಯಾ :
ಕಕ್ಕಯ್ಯನ ಮನೆಯಲ್ಲೂ ಬೇಡಿದೆ,
ಚೆನ್ನಯ್ಯನ ಮನೆಯಲ್ಲೂ ಬೇಡಿದೆ,
*ದಾಸಯ್ಯನ ಮನೆಯಲ್ಲೂ ಬೇಡಿದೆ.* ಎಲ್ಲಾ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ

ಎಂದು ಹಾಡಿ ಹೊಗಳಿದ್ದಾರೆ.  ಅಂದರೆ ಬಸವಣ್ಣನು ಕಕ್ಕಯ್ಯ, ಚೆನ್ನಯ್ಯನಲ್ಲಿ ಯಾವ ಗುರುತನವನ್ನು ಕಂಡನೋ ಅದೇ ಗುರುತನವನ್ನು ಈ ದಾಸಿಮಯನಲ್ಲೂ ಕಂಡಿದ್ದಾರೆ ಎನ್ನುವುದಂತೂ ಅವರ ವಚನದಲ್ಲಿಯೇ ವೇದ್ಯವಾಗುತ್ತದೆ.  ದೇವರ ದಾಸಿಮಯ್ಯನು ತಾನು ನಂಬಿದ ಶಿವತತ್ವಕ್ಕೆ ಬಲು ಬದ್ದನಾಗಿಯೇ ಇರುತ್ತಾನೆ. ಸುಗ್ಗಲೆ ಎಂಬ ರಾಣಿಯ ಆಣತಿಯಂತೆ ಜಿನ ( ಜೈನ ) ಪಂಡಿತರ ಮೇಲೆ ವಿಜಯ ಸಾಧಿಸಿ ಶಿವಭಕ್ತಿಯನ್ನು ಪಸರಿಸಿದವನೂ ಆಗಿರುತ್ತಾನೆ.  ಈ ದಾಸಿಮಯ್ಯನು ಅದೆಷ್ಠು ಶಿವ ಪ್ರಭಾವಕ್ಕೆ ಒಳಗಾಗಿದ್ದನೆಂದರೆ  ಶಿವನ ಸ್ಮೃತಿ, ನಾಮಸ್ಮರಣೆಯನ್ನೊರತು ಪಡಿಸಿ ಆತನು ಬೇರೆ ಯಾವ ದೈವಗಳಿಗೂ ತನ್ನ ಹಣೆ ಹಚ್ಚಲಿಲ್ಲ.  ಈ ಬಗ್ಗೆ ತನ್ನೊಂದು ವಚನದಲ್ಲಿ

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ. ಸುಳಿದು ಬೀಸುವ ವಾಯು ನಿಮ್ಮ ದಾನ. ಎತ್ತು ನಿಮ್ಮ ದಾನ, ಬಿತ್ತು ನಿಮ್ಮ ದಾನ, ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ? ರಾಮನಾಥ.

ಎಂದು ಈ ಸೃಷ್ಟಿಯನ್ನು ಸೃಷ್ಠಿಸಿದ ಆ ಸೃಷ್ಠಿಕರ್ತನನ್ನು ಹೊರತು ಪಡಿಸಿ ಮಿಕ್ಕೆಲ್ಲವನ್ನೂ ಧಿಕ್ಕರಿಸಿದ್ದು,  ಹಾಗೇನಾದರೂ ಆ ಸೃಷ್ಠಿಕರ್ತನನ್ನು ಬಿಟ್ಟು ಬೇರೆಯದನ್ನು ಪೂಜಿಸಿದರೆ ಅವರು ಕುನ್ನಿಗಳು ಎಂದು ಟೀಕೆ ಮಾಡುತ್ತಾನೆ.  ಅಂದರೆ  ಈ ಜಗತ್ತಿಗೆ ಒಬ್ಬನೇ ಸೃಷ್ಟಿಕರ್ತ, ಆತನಿಗೆ ನನ್ನ ಮೊರೆಯಲ್ಲದೆ ಇತರರನ್ನು ತಿರಸ್ಕರಿಸುವ ಆತನ ಮನಸ್ಥಿತಿಯಂಥೂ ಅತ್ಯದ್ಬುತ ಎನಿಸದಿರಲಾರದು.

ಇನ್ನು ದೇವರ ದಾಸಿಮಯ್ಯನ ವಚನಗಳು ಬಹಳವೇ ಸರಳವಾಗಿದ್ದು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಅವರ ಅನುಸಂಧಾನ ಕಾಣುತ್ತದೆ.  ಇವರ ವಚನಗಳು ಹೆಚ್ಚು ವಾಸ್ತವತೆಯಿಂದ ಕೂಡಿದ್ದು, ನಮ್ಮ ನಿತ್ಯ ಜೀವನದಲ್ಲಿ ನೋಡಿದಂತಹ ಉದಾಹರಣೆಗಳನ್ನೇ ಅವರು ಉದಾಹರಿಸಿ ತಮ್ಮ ವಚನಗಳನ್ನು ರಚಿಸಿದ್ದಾರೆ.  ಹೇಳ ಬೇಕೆಂದಿರುವುದನ್ನು ಕಠೋರವಾಗಿ, ಸರಳವಾಗಿ, ವಾಸ್ತವತೆಯ ನೆಲಗಟ್ಟಿನಲ್ಲಿ ವಚನಗಳು ರಚಿತವಾಗಿವೆ.

ಉಣ್ಣಿ ಕೆಚ್ಚಲ ಹತ್ತಿ ಉಂಬುದೆ ನೊರೆವಾಲ ? ಪುಣ್ಯಕ್ಷೇತ್ರದಲ್ಲಿ ಹುಟ್ಟಿ ಉಣ್ಣದವನು
ಆ ಉಣ್ಣಿಯಿಂದ ಕರಕಷ್ಟ ! ರಾಮನಾಥ.

ಕತ್ತೆ ಬಲ್ಲುದೆ ಕಸ್ತೂರಿಯ ವಾಸನೆಯ ? ತೊತ್ತು ಬಲ್ಲಳೆ ಗುರುಹಿರಿಯರುತ್ತಮರೆಂಬುದ ?
ಭಕ್ತಿಯನರಿಯದ ವ್ಯರ್ಥಜೀವಿಗಳು ನಿಮ್ಮವರನೆತ್ತ ಬಲ್ಲರೈ ? ರಾಮನಾಥ.

ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ, ಹಿರಿದಪ್ಪರಾಜ್ಯವನಿತ್ತಡೆ ಒಲ್ಲೆ, ನಿಮ್ಮ ಶರಣರ ಸೂಳ್ನುಡಿಯ ಒಂದರೆ ಘಳಿಗೆಯಿತ್ತಡೆ ನಿನ್ನನಿತ್ತೆ ಕಾಣಾ ! ರಾಮನಾಥ.

ಗಿರಿಗಳೆಲ್ಲ ಕೂಡಿ ಮೇರುಗಿರಿಗೆ ಸರಿಯಾಗಬಲ್ಲವೆ‌ ? ತರುಗಳೆಲ್ಲ ಕೂಡಿ ಕಲ್ಪತರುವಿಗೆ ಸರಿಯಾಗಬಲ್ಲವೆ ? ಸರಿಯಿಲ್ಲ ನೋಡಾ ನಮ್ಮ ಭಕ್ತರಿಗೆ ನರರು ಸುರರು ಸರಿಯಲ್ಲ ನೋಡಾ! ಪರುಷಕ್ಕೆ ಪಾಷಾಣ ಸರಿಯೆ ? ಮರುಜವಣಿಗೆ ಔಷಧ ಸರಿಯೇ ? ಇದು ಕಾರಣ, ಶಿವಭಕ್ತರ್ಗೆ ಲೋಕದವರು ಸರಿಯೆಂದರೆನರಕ ತಪ್ಪದಯ್ಯಾ, ರಾಮಾನಾಥ.

ಇಂಥಹ ವಾಸ್ತವತೆಯ ಪ್ರಜ್ಞೆಯಲ್ಲಿಯೇ ಶ್ರೀ ದೇವರ ದಾಸಿಮಯ್ಯರು ತಮ್ಮ ವಚನಗಳನ್ನು ಸಂಪಾದಿಸಿದ್ದಾರೆ.  ಇವರಿಗೆ ಗುರು ಜಂಗಮ ಪೂಜೆ, ದಾಸೋಹಗಳನ್ನು ಯಾವ ಅಡತಡೆಗಳಿಲ್ಲದಂತೆ ಮಾಡುತ್ತಾ, ನಮ್ಮ ಈ ಕರ್ನಾಟಕದ ಮಣ್ಣನ್ನು ವಚನಗಳೆಂಬ‌ ಮುತ್ತುಗಳನ್ನಡಗಿಸಿ, ಅಜರಾಮರರಾದವರು ಜೇಡರ ದಾಸಿಮಯ್ಯನವರು.

*ಇಂದು ಜೇಡರ ದಾಸಿಮಯ್ಯನವರ  ಜನ್ಮ ದಿನ.  ಇಂಥಹ ಮೇರು ಕಾಯಕಯೋಗಿ, ಶಿವಾನುಭವಿ, ಶರಣ ಸತಿ ಲಿಂಗಪತಿ ಎಂದು ಸಾಕ್ಷೀಕರಿಸಿದ ಮಹಾನುಭವಿಯನ್ನು ನಾವು ನೆನೆಸಿಕೊಂಡು, ಅವರು ಹಾಕಿಟ್ಟ ದಾರಿಯಲ್ಲಿ ನಡೆಯುವುದು ಸೂಕ್ತವೂ ಹೌದು*

*ದೇವರ ದಾಸಿಮಯ್ಯನ ಜನ್ಮ ದಿನ ಶುಭಾಷಯಗಳು*

✍️ *ರವೀ ಚಿಕ್ಕನಾಯಕನ ಹಳ್ಳಿ*

Leave a Reply

Your email address will not be published. Required fields are marked *

error: Content is protected !!