ಖಾಕಿ ತೊಟ್ಟ ಮೇಲೆ ಖಾಕಿಯೇ ನಮ್ಮ ಧರ್ಮ

ಇದೇ ವ್ಯವಸ್ಥೆ !

ಒಂದೆರಡು ಗುಟುಕು ವಿಸ್ಕಿಯನ್ನು ಗುಟುಕರಿಸುತ್ತಿದ್ದ, ಯಾಕೋ ಅವನ ಮನಸ್ಸು ವಿಹ್ವಲವಾಗಿ ಒದ್ದಾಡುತ್ತಿತ್ತು‌‌. ಮನದೊಳಗಂದು ಆಂತರ್ಯುದ್ದ ಪ್ರಾರಂಭವಾದಂತಿತ್ತು. ಅದೇನೋ ಅವ್ಯಕ್ತ ತಳಮಳ, ಹೊಟ್ಟೆ ತೊಳೆಸಿದಂತಾನುಭವ, ನಿರ್ವಾತದಲ್ಲಿ ಎತ್ತಿ ಎಸೆದಂತಾಗಿತ್ತು. ಅಲ್ಲಾ 29 ವರ್ಷದ ತನ್ನ ಸೇವಾವಧಿಯಲ್ಲಿ ಇಂಥಹ ಘಟನೆ ನಡೆದೇ ಇರಲಿಲ್ಲ ಎಂದು ಮನಸ್ಸು ಚಡಪಡಿಸುತ್ತಿತ್ತು. ಗುಟುಕು ವಿಸ್ಕಿಯೊಂದಿಗೆ ಹದವಾಗಿ ಬೇಯಿಸಿದ ಶೇಂಗಾ ಬೀಜವೇನೋ ರುಚಿ ತರುವಂತಿದ್ದರೂ, ವಿಸ್ಕಿಯ ನಶೆಯೂ ಏರುತ್ತಿಲ್ಲ, ಹದವಾಗಿ ಬೇಯಿಸಿದ ಶೇಂಗಾ ಬೀಜದ ರುಚಿಯೂ ನಾಲಿಗೆ ತಾಡುತ್ತಿರಲಿಲ್ಲ. ಎದುರು ಸ್ನೇಹಿತನೊಂದಿಗೆ ಯಾವಾಗಲೂ ವಾಚಾಳಿಯಾಗಿ ಮಾತನಾಡುತ್ತಿದ್ದ, ಜೋಕುಗಳನ್ನು ಹೇಳುತ್ತಾ ನಗೆಗಡಲಲ್ಲಿ ತೇಲಿಸುವ  ನಾಲಿಗೆಯಂತೂ ಮೌನಕ್ಕೆ ಶರಣು ಹೋಗಿತ್ತು‌. 

ಇಂಥಹ ಅಪರೂಪದ ನಡವಳಿಕೆಯನ್ನು ಆತನ ಸ್ನೇಹಿತನು ಎಂದಿಗೂ ಕಂಡಿರಲಿಲ್ಲ. ಅಲ್ಲಾ ಇಷ್ಠು ದೊಡ್ಡ ಪೊಲೀಸ್ ಅಧಿಕಾರಿಯಾಗಿ, ಅದೂ 29 ವರ್ಷ ನೌಕರಿಯೆಂಬ ಸೇವೆ ಮಾಡಿದ್ದೂ, ಜೀವನದಲ್ಲಿ ಅದೆಷ್ಟು ಕೊಲೆ, ಸುಲಿಗೆ, ಗಲಾಟೆಗಳನ್ನು ತಹಬದಿಗೆ ತಂದಂತಹವರು, ಅದೆಷ್ಟೋ ಗೊತ್ತುಗುರಿಯಿಲ್ಲದೆ ಇದ್ದ ಕೇಸುಗಳನ್ನು ಪತ್ತೆ ಹಚ್ಚಿದವರು. ಯಾವುದಕ್ಕೂ ಸೋಲನ್ನೇ ಅರಿಯದೆ, ಯಾವಾಗಲೂ ಗೆಲುವಿನ ಮಂತ್ರವನ್ನೇ ಪಠಿಸುತ್ತಿದ್ದ ಈ ಅಡಿಷನಲ್ ಎಸ್ಪಿ ಯವರಾದ ಶೇಷಗಿರಿ ಯವರಾದರೂ ಏಕಾಗಿ ಹೀಗೆ ಗರ ಬಡದವರಂತೆ ಇದ್ದಾರೆ?  ಅವರೇಕೆ ಶಬ್ದದಲ್ಲಿ‌ ನಿಶ್ಯಬ್ದತೆಯನ್ನು ಆಲಿಸುತ್ತಲಿದ್ದಾರೆ. ಇಂಥ ನಡವಳಿಕೆಯು ಶೇಷಗಿರಿಯವರಿಂದ ಎಂದೂ ಕಂಡಿರಲಿಲ್ಲ. ಯಾವಾಗಲೂ ತಿಳಿಹಾಸ್ಯದಿಂದ, ನಗುಮೊಗದಿಂದ, ಇತರರಿಗೆ ಉತ್ತೇಜಿಸುವ ವ್ಯಕ್ತಿತ್ವ ಇವರಲ್ಲಿ ಎಲ್ಲಿ ಮರೆಯಾಯಿತು  ?  ಏಕಾಗಿ ಈ ರೀತಿಯ ಅಸಹಜ ನಡವಳಿಕೆ ಇವರಲ್ಲಿ ಎಂದು ಮುಸ್ತಫಾ ತಲೆ ಕೆಡಿಸಿಕೊಳ್ಳುತ್ತಲೇ ಇದ್ದ. ಒಂದೆರಡು ಪೆಗ್ ವಿಸ್ಕಿ ಒಳಗೋದ ನಂತರ ಸರಿ ಹೋಗಬಹುದೇನೋ! ಎಂಬ ಆಶಾಭಾವ ಮುಸ್ತಫನ ಮನದಲ್ಲೆಲ್ಲೋ ಮನೆ ಮಾಡಿತ್ತು.

ಹೇ ಸಾಬ್ !  ಏನಾಯ್ತು ಸಾಬ್, ನೀವು ಈ ಜಿಲ್ಲಾಗೆ ಅಡಿಷನಲ್ ಎಸ್ಪಿಗೆ ಇದಿರಿ ಸಾಬ್, ನೀವು ಬಡಾ ಆಫೀಸರ್ ! ಆದ್ರೂ ಕ್ಯೂಂಕೆ ಸಾಬ್ ಈ ಬೇಸ್ರ ?  ಒಮ್ಗೆ ಹೊರ್ಗಾಡಿಕೆ ಹಾಕ್ಬುಡಿ ಸಾಬ್, ನಿಮ್ದು ಸೈಲೆಂಟ್ಗೆ ನಮ್ಗೆ ನೋಡೋಕಾಗ್ತೀಲ್ಲ ಸಾಬ್, ಪ್ಲೀಸ್ ಏನಾಯ್ತು ಬೋಲೋ ಸಾಬ್, ಪರ್ವಾ ನೈ ಬೋಲೋ ಸಾಬ್ ಎಂದು ಮುಸ್ತಾಫ ಗೋಗರೆಯುತ್ತಲೇ ಇದ್ದ. 

ಎರಡು ಪೆಗ್ ವಿಸ್ಕಿ ಸ್ವೀಕರಿಸಿದ ಅಡಿಷನಲ್ ಎಸ್ಪಿ ಶ್ರೀ ಶೇಷಗಿರಿಯವರು ಮಾತನಾಡುತ್ತಾ, ನೋಡು ಮುಸ್ತಫಾ ಸಾವು ನಮ್ಮ ಮನೆ ಬಳಿ ಬಂದು ಬಾಗಿಲ ತಟ್ಟಿದರೆ ಮಾತ್ರನಾ ನಮಗೆ ಸಾವು ಅಂದರೆ ಏನೆಂದು ಅರ್ಥವಾಗೋದು ?  ಬೇರೆಯವರ ಕಷ್ಟವನ್ನು ಕೊನೇಪಕ್ಷ ಪರಿಹರಿಸಲು ಸಾಧ್ಯವಾಗದಿದ್ದರೂ, ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನವಾದರೂ ಬೇಡವಾ ಮುಸ್ತಫಾ ?

ಹಾ ಸಾಬ್,  ಅದು ಗ್ಯಾರಂಟಿಗೆ ಬೇಕು ಸಾಬ್, ಅದರ್ಲೀ ಏನಾಯ್ತು ಸಾಬ್ ?  ಯಾಖಿಂಗೆ ನೀವು ನಮ್ತಕಾದ್ರೂ ಹೇಳ್ಕೊಳಿ ಸಾಬ್, ನೋವಾದ್ರೂ ಕಡಿಮೆ ಆಗ್ತದೆ.  ಇಂಗೇ ಸುಮ್ಕಿದ್ರೆ ಯಂಗೆ ಸಾಬ್ ?? ಎಂದು ಮುಸ್ತಫಾ ಒತ್ತಾಯಿಸುತ್ತಲೇ ಇದ್ದ.‌

ನೋಡು ಮುಸ್ತಫಾ, ನಾವು ಖಾಕಿ ತೊಟ್ಟ ಮೇಲೆ ನಮಗೆ  ಖಾಕಿಯೇ ಧರ್ಮವಾಗುತ್ತೆ. ಈ ಸಮಾಜದಲ್ಲಿ ಯಾರಿಗಾದರೂ ಏನಾದರೂ ಸಮಸ್ಯೆ ಆದರೆ ಸಮಸ್ಯೆ ಆದವರು ಮೊದಲಿಗೆ ದೇವರಿಗೆ ಕೈ ಮುಗಿದು ತಮ್ಮ ಕಷ್ಟ ಹೇಳ್ಕೋತಾರೆ, ನಂತರ ನಮ್ಮ ಬಳಿಯೇ ಬಂದು ಅವರ ಸಮಸ್ಯೆ ಹೇಳ್ಕೋತಾರೆ. ನಾವು ಅಧಿಕಾರದಲ್ಲಿದ್ದು ನಮ್ಮ ಕೈನಲ್ಲಾದ ಪರಿಹಾರ ಮಾಡಿಕೊಟ್ಟರೆ ಜನ ನಮ್ಮನ್ನು ದೇವರಂತೆ ಕಾಣ್ತಾರೆ ಮುಸ್ತಫಾ !

ಜನಾಬ್ ನೀವಿಂಗೆ ಸಪ್ಗೆ ಇರಾದ್ಕೂ, ದೇವ್ರೂಗೂ ಸಂಬಂಧಾಗೆ ಏನು ಸಾಬ್ ? ಎಂದಿದ್ದ ಮುಸ್ತಫಾ.

ನೋಡು ಮುಸ್ತಫಾ ಕೆಲವು ದಿನದ ಹಿಂದೆ ಒಬ್ಬರು ಮಗನನ್ನು ಕಳೆದುಕೊಂಡ ತಾಯಿ ನನ್ನ ಬಳಿ ಬಂದಿದ್ದರು. ಅವರ ಸಮಸ್ಯೆಯನ್ನು ಕೇಳಿದೆ. ಅದಕ್ಕೆ ಅವರು ಸಾರ್ ನನ್ನ ಒಬ್ಬನೇ ಮಗ, ಸುಮಾರು 22 ವರ್ಷ ಪ್ರಾಯದವನು ಸಾರ್, ಈಗ್ಯೆ ಆತನು ನಾಪತ್ತೆ ಆಗಿ ಏಳು ತಿಂಗಳು ಕಳೆದಿದೆ ಸಾರ್, ಸೀತಾಪುರ ಠಾಣೆಯಲ್ಲಿ ನಾಪತ್ತೆ ಕೇಸೂ ಸಹ ರಿಜಿಸ್ಟರ್ ಆಗಿದೆ ಸಾರ್‌. ನಾನೂ ಸಹ ನನ್ನ ಮಗನನ್ನು ಪತ್ತೆ ಮಾಡಿಕೊಡಿ ಎಂದು ಕಳೆದ ಏಳು ತಿಂಗಳಿಂದ ಪ್ರತಿದಿನ ಠಾಣಾಗೆ ಹೋಗ್ತಾ ಇದ್ದೀನಿ ಜೊತೆಗೆ ನಾನೂ ಸಹ ನನ್ನ ಮಗನನ್ನು ಹುಡುಕಲು ಪ್ರಯತ್ನ ಪಡ್ತಾ ಇದ್ದೇನೆ ಸಾರ್,  ನಾನು ಸೀತಾಪುರ ಠಾಣಾಗೆ ಹೋದಾಗಲೆಲ್ಲಾ ಆ ಪೊಲೀಸ್ ಠಾಣೆಯ ಅಧಿಕಾರಿ ಸರಿಯಾಗಿ ಉತ್ತರನೇ ಕೊಡೋದಿಲ್ಲ ಸಾರ್, ಎಲ್ಲೋ ಹೋಗೊವ್ನೇ, ತೀಟೆ ತೀರಿದ ಮೇಲೆ ಬರ್ತಾನೆ ಬಿಡು ಎಂದು ಉಡಾಫೆಯಾಗಿ ಮಾತಾಡ್ತಾರೆ ಸಾರ್ ಎಂದು ಆ ಹೆತ್ತ ತಾಯಿಯ ಕರುಳು ವೇದನೆ ಪಡುತ್ತಾ ನನ್ನ ಮುಂದೆ ಕಂಪ್ಲೇಂಟ್ ಮಾಡಿತ್ತು ಮುಸ್ತಫಾ‌. ಆಗ ನಾನು ಸೀತಾಪುರ ಪೊಲೀಸ್ ಠಾಣೆಯ ಅಧಿಕಾರಿಗೆ ಆ ನಾಪತ್ತೆ ಪ್ರಕರಣದ ಕಡತ ತರಲು ಹೇಳಿದೆ. ಅದರಂತೆ ಆ ಠಾಣಾಧಿಕಾರಿಯು ಆ ಕಡತವನ್ನು ನನ್ನ ಮುಂದೆ ತಂದು ಹಾಜರಾದ.  ನಾನು ಆ ಕಡತವನ್ನು ತಗೆದು ನೋಡಿದರೆ ಆ ಕಡತದಲ್ಲಿ ಒಂದು FIR, ಒಂದು ಆ ಹುಡುಗನ ಫೋಟೋ ಹಾಗೂ ಕಂಟ್ರೋಲ್ ರೂಂ ಗೆ ಆದಿನ ಪ್ರಕರಣ ದಾಖಲಾದ ಬಗ್ಗೆ ಕೊಟ್ಟಿರುವ ಮಾಹಿತಿ ಬಿಟ್ಟರೆ ಏನೂ ಇರಲಿಲ್ಲ ಮುಸ್ತಫಾ. ಆಗ ನನಗೆ ವಿಪರೀತ ಕೋಪ ಬಂದು ಆ ಠಾಣಾಧಿಕಾರಿಗೆ
ಏನ್ರೀ ಇದು ? ಇದೂ ಒಂದು ತನಿಖೆಯಾ ? ನಾಪತ್ತೆ  ಪ್ರಕರಣ ದಾಖಲಾದ ಮೇಲೆ ಕನಿಷ್ಠ ಪಕ್ಷ ಏನೇನು ತನಿಖೆ ಮಾಡಬೇಕೆಂಬ ಕನಿಷ್ಠ ಜ್ಞಾನವೂ ನಿಮಗೆ ಇಲ್ಲವೇ ?  ನೋಡಿ ಒಂದು ನಾಪತ್ತೆ ಪ್ರಕರಣ ದಾಖಲಾದ ಮೇಲೆ ಎಲ್ಲಾ ಪೊಲೀಸ್ ಠಾಣೆಗಳಿಗೂ  ಮಾಹಿತಿ, ಫೋಟೊಗಳನ್ನು ನೀಡಿ, ನಂತರ ಜಿಲ್ಲಾ ಕ್ರೈಂ ರೆಕಾರ್ಡ್ ಬ್ಯೂರೋ, ಸ್ಟೇಟ್ ಕ್ರೈಂ ರೆಕಾರ್ಡ್ ಬ್ಯೂರೋ ಹಾಗೂ ಕೇಂದ್ರ ಕ್ರೈಂ ರೆಕಾರ್ಡ್ ಬ್ಯೂರೋ ಗೆ ಕಳುಹಿಸಬೇಕು.  ಹಾಗೆಯೇ ವರ್ತಮಾನ ಪತ್ರಿಕೆಗಳಲ್ಲಿ, ಮೀಡಿಯಾಗಳಲ್ಲಿ ಮಾಹಿತಿ ಹಂಚಬೇಕು. ನಂತರ ವಾಲ್ ಪೋಸ್ಟ್ ಮಾಡಿಸಿ ಅಂಟಿಸಿ ಜನರಿಗೆ ತಿಳಿವಳಿಕೆ ನೀಡಬೇಕು.   ಇಷ್ಠೆಲ್ಲದರ ಜೊತೆಗೆ ಆಯಾ ಠಾಣಾಧಿಕಾರಿಯು SCRB, CCRB ಗೆ ಪತ್ರವನ್ನು ಬರೆದು ಈ ನಾಪತ್ತೆ ಆದ ಹುಡುಗ ಯಾವ ಸಮಯದಲ್ಲಿ ನಾಪತ್ತೆ ಆಗಿದ್ದನೋ ಆ ಸಮಯದಲ್ಲಿ ಎಲ್ಲಿಯಾದರೂ ಆ ವಯಸ್ಸಿನ ಗುರುತು ಪತ್ತೆಯಾಗದ ಡೆಡ್ ಬಾಡಿ ದೊರೆಯಿತೋ ? ಎಂಬುದರ ಬಗ್ಗೆಯೆಲ್ಲಾ ಮಾಹಿತಿ ಪಡೆದು ತನಿಖೆ ಮಾಡಬೇಕಾಗಿತ್ತು. ಆದರೆ ನೀವು ಪ್ರಕರಣದಲ್ಲಿ ಏನೂ ಎಫರ್ಟ್ಸ್ ಮಾಡೇ ಇಲ್ಲ.  ಹೀಗಾದರೆ ಹೇಗೆ ?  ನಮ್ಮ ಮನೆಯ ಅಣ್ಣನೋ, ತಮ್ಮನೋ ನಾಪತ್ತೆ ಆದರೆ ಈ ರೀತಿಯೇ ನಾವು ಕೆಲಸ ಮಾಡುತ್ತೇವೆಯೇ ?  ಇಷ್ಠು ಕಾನೂನು ಜ್ಞಾನ ಬೇಕಿತ್ತಲ್ಲವೇ ?  ಎಂದು ನಾನು ಜೋರಿನಲ್ಲಿ ಹೇಳಿದ್ದೆ ಮುಸ್ತಫಾ !  ಇಷ್ಠು ಅಲಕ್ಷ್ಯ, ಬೇಜವಾಬ್ದಾರಿತನ ಒಳ್ಳೆಯದಲ್ಲ ಎಂದು ನಿನ್ನ ಮೇಲೆ ಶಿಸ್ತುಕ್ರಮಕ್ಕೆ ಮೇಲಾಧಿಕಾರಿಗೆ ವರದಿ ಮಾಡುತ್ತೇನೆಂದೂ ಅಷ್ಟರಲ್ಲಿ ಈ ಎಲ್ಲಾ ಕೆಲಸ ಮಾಡಬೇಕು ಎಂದು ತಾಕೀತೂ ಸಹ ಮಾಡಿ ಕಳಿಸಿದ್ದೆ.  ನಂತರ ಒಂದು ವಾರ ಕಳೆದರೂ ಸಹ ನಾನು ಹೇಳಿದ ಕೆಲಸವನ್ನು ಆ ಅಧಿಕಾರಿ ಮಾಡಲೇ ಇಲ್ಲ.  ಬದಲಿಗೆ ಬೇರೆ ಯಾರೊಬ್ಬರ ಮುಖಾಂತರ ನನಗೇ ಭಕ್ಷೀಸು ಕೊಡಲು ಪ್ರಯತ್ನ ಮಾಡಿದ್ದ.  ನಂತರ ಮತ್ತೆ ಕರೆದು ಆತನಿಗೆ ಇದೆಲ್ಲವೂ ಸರಿಯಿಲ್ಲ ಎಂದು ಆತನಿಗೆ ವಾರ್ನಿಂಗ್ ಮಾಡಿ ಆತನ ವಿರುದ್ದ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗೆ ವರದಿ ಮಾಡಿದೆ ಮುಸ್ತಫಾ ! ಎಂದಿದ್ದರು ಶೇಷಗಿರಿ.

ಅಚ್ಚಾ ಸಾಬ್, ಸರೀಗೆ ಮಾಡಿದ್ರೀಯಲ್ಲ ನೀವು, ಮತ್ಯಾಕೇ ನೀವು ಬೇಸರ ಮಾಡ್ಕೊಂಡಿರೋದು ?  ಇದು ಬಾಳಾ ಕರಾಬ್ಗೆ ಐತೇ ಸಾಬ್,  ಎಂದಿದ್ದ ಮುಸ್ತಫಾ.

ನೋಡು ಮುಸ್ತಫಾ, ಅದಕ್ಕೆಲ್ಲಾ ನಾನು ಬೇಸರ ಮಾಡ್ಕೊಂಡಿಲ್ಲ,  ನಂತರದಲ್ಲಾದ ಬೆಳವಣಿಗೆ ಬಗ್ಗೆ ನನಗೆ ನನ್ನ ಬಗ್ಗೆಯೇ ಬೇಸರ ತಂದಿದೆ. ಅದೇನೆಂದರೆ ನಾನು ಆ ಠಾಣಾಧಿಕಾರಿ ಮೇಲೆ‌ ಶಿಸ್ತು ಕ್ರಮಕ್ಕೆ ವರದಿ ಸಲ್ಲಿಸಿದೆ. ನಂತರ ಆ ಠಾಣಾಧಿಕಾರಿಗೆ ಹಿರಿಯ ಅಧಿಕಾರಿಯಿಂದ ಶಿಸ್ತು ಕ್ರಮದ ಬಗ್ಗೆ ಮೆಮೋ ಸಹ ಹೋಯ್ತು.  ಆಮೇಲೆ ಆಗಿದ್ದೇ ನನಗೆ ಹಿಂಸೆ ಎನಿಸಿದ್ದು. ನನಗೆ ಮಾಹಿತಿ ದೊರೆತಂತೆ ಆ ಠಾಣಾಧಿಕಾರಿಯು ಶಿಸ್ತು ಕ್ರಮದ ಮೆಮೋ ಪಡೆದುಕೊಂಡ ನಂತರ ಮೆಮೋ ನೀಡಿದ ಮೇಲಾಧಿಕಾರಿಯನ್ನು ಭೇಟಿ ಮಾಡಿ ಅದೇನು ಮೋಡಿ ಮಾಡಿದನೋ ಗೊತ್ತಿಲ್ಲ. ನಂತರ ಆ ಮೇಲಾಧಿಕಾರಿಯು ನನ್ನನ್ನು ಕರೆದು ಏನ್ರೀ ಶೇಷಗಿರಿ ನೀವಿಷ್ಟು ಅನುಭವಸ್ಥರಲ್ಲವೇ ?  ಏನೋ ಹೊಸ ಹುಡುಗರು ತಪ್ಪು ಮಾಡಿರುತ್ತಾರೆ. ನೀವು ತಾನೇ ಇಲ್ಲಿ ಮಾಡುವ ಕೆಲಸ ತಾನೇ ಏನಿದೆ ?  ನೀವೇ ಠಾಣೆಗೆ ಹೋಗಿ ಕುಳಿತುಕೊಂಡು ಕೆಲಸ ಮಾಡಿ, ಗೊತ್ತಿಲ್ಲದವರಿಗೆ ಹೇಳಿ ಕೊಡಿ, ಅದು ಬಿಟ್ಟು ಈ ರೀತಿ ಶಿಸ್ತು ಕ್ರಮಕ್ಕೆ ರಿಪೋರ್ಟ್ ಹಾಕ್ತಾ ಕುಳಿತುಕೊಂಡರೆ ಇಲ್ಲಿ ಏನಾದರೂ ಕಾನೂನು ಸುವ್ಯವಸ್ಥೆ ಹಾಳಾದರೆ ಕೆಲಸ ಮಾಡುವುದಾದರೂ ಯಾರು ?  ನೀವಾದರೋ ಬರೀ ಬಂದೋಬಸ್ತ್ ಉಸ್ತುವಾರಿ ನೋಡಿಕೊಳ್ಳುವುದನ್ನು ಬಿಟ್ಟರೆ ಬೇರೇ ಏನು ಕೆಲಸ ಇದೆ ?  ಹೀಗೆಲ್ಲಾ ಅಧಿಕಾರಿಗಳ‌ ಮನಸ್ಸನ್ನು ನೀವು ಕೆಡಿಸಬೇಡಿ. ನೀವೆ ಠಾಣೆಗೆ ಹೋಗಿ ಅಲ್ಲಿಯೇ ಮೊಖಾಂ ಮಾಡಿ ಕೆಲಸ ಮಾಡಿ ಹಾಗೂ ಮಾಡಿಸಿ ಎಂದು ನನಗೆ ಹೇಳಿದರು ಮಹಾರಾಯ ! ಅಲ್ಲಾ ಇಲ್ಲಿ ಅವರವರ ಕೆಲಸವನ್ನು ಅವರವರೇ ಮಾಡಬೇಕು. ಹೇಳಿದರೂ ಕೆಲಸ ಮಾಡದವರನ್ನು ಹಿರಿಯರೇ ಅವರ ಪರವಾಗಿ ವಕಾಲತ್ತು ಹಾಕಿದರೆ ಈ ಸಿಸ್ಟಂ ಉಳಿಯುವುದಾದರೂ ಹೇಗೆ ?  ಎಂಬ ಚಿಂತೆ ನನ್ನ ಕಾಡುತ್ತಿದೆ ಮುಸ್ತಫಾ  ಎಂದಿದ್ದರು ಶೇಷಗಿರಿ. 

ಹೋಗ್ಲಿ ಬುಡಿ ಸಾಬ್, ಕಾಲ ಬಂದಂಗೆ ನಾವೂ ಇರ್ಬೇಕು,  ಗಾಳಿ ಬಂದಂಗೆ ತೂರ್ಕಾಬೇಕು. ಈಗ ಸಿಸ್ಟಂ ಇರೋದೇ ಹಿಂಗೆ, ಬೆತ್ತಲೆ ಊರಲ್ಲಿ ಕಪಡಾ ಹಾಕ್ಕೊಂಡ್ರೆ, ಕಪಡಾ ಇದ್ದೋನೇ ಹುಚ್ಚ ಅಲ್ವಾ ಸಾಬ್ ಎಂದಿದ್ದ ಮುಸ್ತಫಾ. 

ಒಂಥರಾ ಹಾಗೇಯೇ ಆಗಿದೆ.  ಅಷ್ಠೇ ಅಲ್ಲ ಮುಸ್ತಫಾ ಆ ಸೀತಾಪುರ ಠಾಣಾಧಿಕಾರಿ ಅದ್ಯಾರಲ್ಲೋ ನಮ್ಮ ಶೇಷಗಿರಿ ಸಾಹೇಬರಿಗೆ ಬದುಕೋ ಕಲೆ ಗೊತ್ತಿಲ್ಲ ಅಂತಾ ಬೇರೆ ಹೇಳ್ಕೊಂಡಿದ್ದಾನೆ. ಅದೇ ಬೇಸರ ಆಗ್ತಾ‌ ಇರೋದು ಮುಸ್ತಫಾ ! ಎಂದಿದ್ದರು. 

ಹೇಗೋ ಕೊನೆಗೆ ಮುಸ್ತಫಾ ಶೇಷಗಿರಿಯವರನ್ನು ಸಮಾಧಾನಿಸಿದ್ದ.  ಕೊನೆ ಕೊನೆಗೆ ಒಂದ್ನಾಲ್ಕು ಪೆಗ್ ನಷ್ಟು ವಿಸ್ಕಿ ಖಾಲಿಆಗಿತ್ತು. ಶೇಷಗಿರಿ ಎಂಬ ಅಧಿಕಾರಿಯ ಮನಸ್ಸು 29 ವರ್ಷಗಳ ಸೇವಾ ಅನುಭವವು ಇಂದಿಗೆ ವ್ಯರ್ಥ್ಯವಾದಂತೆ ಅವರಿಗೆ ಕಂಡು ಬಂದಿತ್ತು. ಬಾಕಿ ಇರುವ ಇನ್ನೂ ಮೂರು ವರ್ಷದ ಸೇವೆಯಲ್ಲಿ ಬೇರೊಬ್ಬ ಶೇಷಗಿರಿಯನ್ನು ಕಾಣಲು ಅವರ ಮನಸ್ಸು ಹಂಬಲಿಸುತ್ತಿತ್ತು. ಆ ತಾಯಿಯ ಮಗ ಕಾಣೆಯಾದ ಕೇಸು ಮೂಲೆಯಲ್ಲಿ ಧೂಳನ್ನು ಬಿಟ್ಟು ಗೆದ್ದಲು ತಿನ್ನಲು ಪ್ರಾರಂಭಿಸಿತ್ತು.

✍️ ರವೀ ಚಿಕ್ಕನಾಯಕನ‌ಹಳ್ಳಿ

Leave a Reply

Your email address will not be published. Required fields are marked *

error: Content is protected !!