ಯಾದಗಿರಿ ಜಿಲ್ಲೆಯ ರಾಜಕೀಯ ಹಣಾಹಣಿ !

ಗಿರಿಗಳ ನಾಡು ಯಾದಗಿರಿಯ ಕಲ್ಲು ಬಂಡೆಗಳು (ಸಾಂಸ್ಕøತಿಕವಾಗಿ) ಮಾತನಾಡುತ್ತವೆ. ಆದರೆ ಇಲ್ಲಿನ ಮತದಾರ ಪ್ರಭು ಎಂದೂ ಪ್ರಭುವಾಗಲೆ ಇಲ್ಲ. ಆದ್ದರಿಂದ ಇಲ್ಲಿನ ರಾಜಕಾರಣಿಗಳೆ ಪ್ರಭುವಾಗಿ ತಮ್ಮ ಆಳ್ವಿಕೆ ನಡೆಸಿಕೊಂಡು ಹೊರಟಿದ್ದಾರೆ. ಊಳಿಗಮಾನ್ಯ ಪದ್ಧತಿಯ ಪರಿಣಾಮ ಹಾಗೂ ಹೈದ್ರಾಬಾದ ನಿಜಾಮನ ನೇರ ಆಳ್ವಿಕೆಗೆ ಒಳಪಟ್ಟದ್ದರಿಂದ ಜನ ಯಾವ ಸಂಗತಿಯನ್ನೂ ಪ್ರಶ್ನಿಸಲು ಇಚ್ಚಿಸುವುದಿಲ್ಲ. ಇದು ರಾಜಕಾರಣಿಗಳಿಗೆ ರಸಗವಳ ಎಂದು ಬೇರೆ ಹೇಳಬೇಕಿಲ್ಲ. ಹಾಗಂತ ಇಲ್ಲಿನ ರಾಜಕಾರಣಿಗಳ ಓರೆ ಕೋರೆಗಳು ಪ್ರಜೆಗಳಿಗೆ ಗೊತ್ತಿಲ್ಲವೆಂತಲೂ ಇದರ ಅರ್ಥವಲ್ಲ. ರಾಜಕಾರಣಿಯೆಂಬ ಪ್ರವಾಹದ ವಿರುದ್ಧ ಹೋದರೆ ಕೊಚ್ಚಿಕೊಂಡು ಹೋಗಬಹುದೆಂಬ ಆತಂಕದಿಂದ ಜನ ಮೂಗಿನ ಮೇಲೆ ಬೆರಳಿಟ್ಟು ಸುಮ್ಮನೆ ನಿಟ್ಟಿಸಿ ನೋಡುತ್ತಾರೆ, ಪ್ರತಿಕ್ರಿಯಿಸುವುದಿಲ್ಲ.

ಈ ಹಿಂದೆ ಬಹಳಷ್ಟು ಜನ ಪ್ರಜ್ಞಾವಂತ ಪತ್ರಕರ್ತರು ಜನತೆಯನ್ನು ಬಡಿದೆಬ್ಬಿಸಲು ಯತ್ನಿಸಿ ವಿಫಲರಾಗಿದ್ದಾರೆ. ಇದೆಲ್ಲವೂ ರಾಜಕಾರಣಿಗಳಿಗೆ ಗೊತ್ತು. ರಾಜಕೀಯ ಮಾಡುವ ವ್ಯಕ್ತಿ ಹೆಡ್ಡ, ದಡ್ಡನಾಗಿದ್ದರೂ ಸರಿ ದುಡ್ಡಿದ್ದವರು ಹಾಗೂ ತೋಳ್ಬಲ ಇದ್ದವರು ಅಧಿಕಾರದ ಗದ್ದುಗೆ ಏರುತ್ತ ಹೊರಟಿದ್ದಾರೆ.

ಯಾದಗಿರಿ :

ಲಿಂ.ವಿಶ್ವನಾಥರಡ್ಡಿ ಮುದ್ನಾಳರ ಮತಕ್ಷೇತ್ರ. ಮುದ್ನಾಳರು ಜೀವಂತ ಇರುವವರೆಗೂ ಎಂದೂ ಕೋಮುವಾದಿ ಪಕ್ಷಕ್ಕೆ ಅಥವಾ ಆ ವಿಚಾರಕ್ಕೆ ಬೆಲೆ ಕೊಟ್ಟವರೆ ಅಲ್ಲ. ಸುಭಾಷಚಂದ್ರ ಭೋಸ ಹಾಗೂ ಬಸವ ಸಮಿತಿಯ ಉಪಾಧ್ಯಕ್ಷರಾಗಿ ಬಸವಾದಿ ಶರಣರ ಆಶಯಕ್ಕೆ ಹೆಚ್ಚು ಒತ್ತು ನೀಡಿದವರು. ಆದರೆ ಕಾಲನ ತೆಕ್ಕೆಯಲ್ಲಿ ಅವರ ಮಗ ವೆಂಕಟರೆಡ್ಡಿ ಮುದ್ನಾಳ ಬಿ.ಜೆ.ಪಿ ಪಕ್ಷದಿಂದ ಆಯ್ಕೆಯಾಗಿ ಬಂದ ಶಾಸಕ. ಈಗ ಇವರಿಗೆ ಎದುರಾಳಿಯೇ ಇಲ್ಲ ಎನ್ನುವ ನಿರ್ವಾತ ಸ್ಥಿತಿ ಯಾದಗಿರಿ ಮತಕ್ಷೇತ್ರದಲ್ಲಿ ಉಂಟಾಗಿದೆ. ಏಕೆಂದರೆ ಡಾ. ಎ.ಬಿ.ಮಲಕರೆಡ್ಡಿ ಕಾಂಗೈನಿಂದ ನೇರ ಬಿ.ಜೆ.ಪಿಯ ಬುಟ್ಟಿಯಲ್ಲಿದ್ದಾರೆ. ಒಂದು ಬಾರಿ ಶಾಸಕರಾಗಿದ್ದ ವೀರಬಸವಂತರೆಡ್ಡಿಯೂ ಸಹ ಬಿ.ಜೆ.ಪಿ. ಹೀಗಾಗಿ ಕಾಂಗೈನಿಂದ ಸ್ಪರ್ಧಿಸಬಲ್ಲ ಯೋಗ್ಯ ವ್ಯಕ್ತಿ ಈಗಂತೂ ಕಾಣುತ್ತಿಲ್ಲ. ಇವರಿಗೆ ಜೆ.ಡಿ.ಎಸ್. ಪಕ್ಷದಿಂದ ಸರಿಯಾಗಿ ಟಕ್ಕರ ಕೊಟ್ಟ ಎ.ಸಿ.ಕಾಡ್ಲೂರ ರಾಜಕೀಯ ತೆರೆಗೆ ಸೇರಿದ್ದಾಗಿದೆ. ಹನುಮೇಗೌಡ ಬೀರನಕಲ್ ಎಂಬ ಕ್ಲಾಸ್ ಒನ್ ಕಂಟ್ರ್ಯಾಕ್ಟರ್, ಡಾ. ಕಾಮರೆಡ್ಡಿ ಕಾಂಗೈದಿಂದ ಸ್ಪರ್ಧಿಸುವ ಇಚ್ಚೆ ಹೊಂದಿದ್ದಾರೆ. ಆದರೆ ಶರಣಬಸ್ಸಪ್ಪಗೌಡ ದರ್ಶನಾಪುರರ ಬೆಂಬಲ ಪಡೆದು ಹಿಂದೆ ಎಂ.ಎಲ್.ಸಿ.ಯಾಗಿದ್ದ ಚೆನ್ನಾರೆಡ್ಡಿ ಎಲ್ಲಾ ರೀತಿಯ ಕಸುವು ಇಟ್ಟುಕೊಂಡು ಬಂದರೆ ಮುದ್ನಾಳ ವೆಂಕಟರೆಡ್ಡಿ ಮಣ್ಣು ಮುಕ್ಕುವುದರಲ್ಲಿ ಅನುಮಾನವಿಲ್ಲ.

ಈಗಾಗಲೇ ಕ್ಷೇತ್ರದ ತುಂಬ ಹಬ್ಬಿರುವ ಮುದ್ನಾಳರ ಅಸಡ್ಡೆ ಮಾತುಗಳು, ನಿರ್ಲಕ್ಷಿತ ದೃಷ್ಟಿಕೋನ ಮುಳುವಾಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಶಹಾಪುರ :

ಬಹಳಷ್ಟು ಕಾಲ ಇಲ್ಲಿನ ಮತದಾರ ಕೇವಲ ಎರಡು ಕುಟುಂಬಗಳಿಗೆ ಮಾತ್ರ ಅಧಿಕಾರದ ಚುಕ್ಕಾಣಿಕೊಟ್ಟು ನೋಡಿದ್ದಾನೆ ಹೊರತು ಇನ್ನೊಬ್ಬರಿಗೆ ಎಳ್ಳಷ್ಟು ಅವಕಾಶ ನೀಡಿಲ್ಲ. ದರ್ಶಪುರ ಹಾಗೂ ಸಿರವಾಳ ಕುಟುಂಬದ ರಾಜಕಾರಣಕ್ಕೆ ಮತದಾರ ಪಿಗ್ಗಿ ಬಿದ್ದಿದ್ದಾನೆ. ಪಕ್ಷ ಅದಲು ಬದಲಾದರೂ ಯಾವ ಪರಿಣಾಮ ಮತದಾರನ ಮೇಲೆ ಆಗಿಲ್ಲ. ಬಹುಶಃ ಅದು ಆಗುವುದೂ ಇಲ್ಲ.

ಸಧ್ಯ ಕಾಂಗೈನಿಂದ ಶರಣಬಸ್ಸಪ್ಪಗೌಡ ದರ್ಶನಾಪುರ ಕ್ಷೇತ್ರವನ್ನು ತನ್ನ ಮಡಿಲಿಗೆ ಹಾಕಿಕೊಂಡಿದ್ದಾರೆ. ಇವರ ವಿರುದ್ಧ ಪ್ರಬಲ ಪ್ರತಿಸ್ಪರ್ಧೆ ಒಡ್ಡಿದ್ದ ಮಾಜಿ ಶಾಸಕ ಗುರು ಪಾಟೀಲ ನಿತ್ರಾಣ ಹೊಂದಿದ್ದಾರೆ. ಜೆ.ಡಿ.ಎಸ್. ಮೂಲಕ ಅತ್ಯಂತ ಪೆಡಸಿನಿಂದ ಸ್ಪರ್ಧಿಸಿ ದರ್ಶನಾಪುರರ ಜಂಘಾಬಲವನ್ನು ಉಡುಗಿದ್ದ ಅಮೀನರೆಡ್ಡಿ ಪಾಟೀಲ ಯಾಳಗಿ ಇದೀಗ ಬಿ.ಜೆ.ಪಿ. ತೆಕ್ಕೆಗೆ ಹೋಗಿದ್ದಾರೆ.ಗುರು ಪಾಟೀಲ ಹಾಗೂ ಅಮೀನರೆಡ್ಡಿ ಒಂದುಗೂಡಿ ಚುನಾವಣೆ ಎದುರಿಸಿದರೆ ದರ್ಶನಾಪುರ ನಡುಗಿ ಹೋಗುವುದರಲ್ಲಿ ಯಾವುದೆ ಅನುಮಾನವಿಲ್ಲ.

ಹಾಗಂತ ಸುಮ್ಮನೆ ಕೂಡುವ ಆಸಾಮಿಯೂ ದರ್ಶನಾಪುರರಲ್ಲ. ಅವರು ಕ್ಷೇತ್ರದ ಜನ ಸಾಮಾನ್ಯನೊಂದಿಗೆ ಹೊಂದಿದ ಸಖ್ಯ, ಮಾಡಿದ ಕೆಲಸಗಳು, ಅವರ ಕುಟುಂಬದ ಸರ್ವ ಸದಸ್ಯರೂ ಚುನಾವಣೆಯ ಸಮಯದಲ್ಲಿ ಪಾದರಸದ ಓಡಾಟ ಅಮೀನರೆಡ್ಡಿಯನ್ನು ನಿಯಂತ್ರಿಸಬಲ್ಲವು.

ತಕ್ಷಣ ಚುನಾವಣೆಗಳು ಘಟಿಸಿದರೆ ದರ್ಶನಾಪುರ ಗೆದ್ದು ಬರುವುದರಲ್ಲಿ ಯಾವುದೆ ಅನುಮಾನ ಇಲ್ಲ ಎಂದು ಮತದಾರ ಸ್ಪಷ್ಟ ಪಡಿಸುತ್ತಾನೆ.

ಗುರುಮಿಠಕಲ್ :

ಮಲ್ಲಿಕಾರ್ಜುನ ಖರ್ಗೆಯ ಆಡಂಬೋಲವಾಗಿದ್ದ ಗುರುಮಿಠಕಲ್ ಮೀಸಲು ಕ್ಷೇತ್ರ ಇದೀಗ ಸಾಮಾನ್ಯ ಕ್ಷೇತ್ರ. ಈ ಕ್ಷೇತ್ರ ಇದೀಗ ಜೆ.ಡಿ.ಎಸ್.ನ ನಾಗನಗೌಡ ಕಂದಕೂರ ಅವರ ಸುಪರ್ದಿಯಲ್ಲಿದೆ. ಹಿಂದೆ ಒಂದೆರಡು ಬಾರಿ ನಾಗನಗೌಡ ಕಂದಕೂರ ಹಾಗೂ ವೆಂಕಟರೆಡ್ಡಿ ಮುದ್ನಾಳ ನಡುವೆ ಕಾಂಗೈನ ಬಾಬುರಾವ್ ಚಿಂಚನಸೂರ ಪಾರಾಗುತ್ತಿದ್ದರು. ಕಬ್ಬಲಿಗರ ಓಟುಗಳು ಒನ್ ವೇ ಆಗಿ ಸರಾಗವಾಗಿ ಬಾಬುರಾವ್ ಗೆದ್ದು ಬರುತ್ತಿದ್ದರು. ಆದರೆ ಪರಿಸ್ಥಿತಿ ಈಗ ತುಂಬಾ ಭಿನ್ನವಾಗಿದೆ. ಚಿಂಚನಸೂರ ಈ ಕ್ಷೇತ್ರವನ್ನೆ ತೊರೆದು ಚಿತ್ತಾಪುರಕ್ಕೆ ಅಡಿಯಿಟ್ಟಿದ್ದಾರೆ. ಯಡಿಯೂರಪ್ಪ ಕೊಡುವ ಆಮೀಷಕ್ಕೆ ತುತ್ತಾಗದೆ ಉಳಿದ ನಾಗನಗೌಡ ಕಂದಕೂರರ ಮಗ ಶರಣಗೌಡನೆ ಎಲ್ಲವನ್ನೂ ನೋಡಿಕೊಳ್ಳುವ ವ್ಯಕ್ತಿ. ಯುವಕ, ಮೇಲಾಗಿ ಎಲ್ಲರನ್ನೂ ಹಚ್ಚಿಕೊಳ್ಳುವ ಗುಣ, ಜನಾನುರಾಗಿ ಆಗಿರುವುದರಿಂದ ಇದೊಂದು ಬಾರಿಯೂ ನಾಗನಗೌಡರೆ ಮರು ಆಯ್ಕೆಯಾಗಲಿದ್ದಾರೆ. ಬಿ.ಜೆ.ಪಿ. ಹಾಗೂ ಕಾಂಗೈಗೆ ಇಲ್ಲಿ ಸೂಕ್ತ ಅಭ್ಯರ್ಥಿಗಳಿಲ್ಲದೆ ಗೆಲುವುದು ಅನಾಯಾಸವಾಗಲಿದೆ.

ಸುರಪುರ :

ದೇಶದೆಲ್ಲೆಡೆ ಸ್ವಾತಂತ್ರ್ಯ ಸಿಕ್ಕಿದ್ದರೂ ಸಹ ಸುರಪುರ ಮತ ಕ್ಷೇತ್ರದ ಜನತೆಗೆ ಸ್ವಾತಂತ್ರ್ಯವೆಂಬುದು ಮರೀಚಿಕೆಯಾಗಿತ್ತು. ಇಡೀ ನಾಡಿನ ತುಂಬಾ ಮೇಲ್ವರ್ಗದವರ ದಬ್ಬಾಳಿಕೆ ಇದ್ದರೆ ಇಲ್ಲಿ ಮಾತ್ರ ನಾಯಕ ಜನಾಂಗದ ದಬ್ಬಾಳಿಕೆ ಇತ್ತು. ಪ್ರಜಾಪ್ರಭುತ್ವದ ಮೌಲ್ಯಗಳು ಮೂಲೆಗುಂಪು ಸೇರಿದ್ದವು. ಕಾಂಗ್ರೇಸಿನ ಡಾ.ವೆಂಕಟಪ್ಪ ನಾಯಕ, ದಿ.ಮೌನೇಶ ನಾಯಕ, ದಿ.ರಂಗಪ್ಪನಾಯಕರ ಅಡಿಯಲ್ಲಿ ಅಧಿಕಾರ ತೆವಳುತ್ತಿತ್ತು. ಸರಕಾರಿ ಅಧಿಕಾರಿಗಳೆಲ್ಲ ಸುರಪುರ ಕೋಟೆಯ ಸುತ್ತ ಪಹರೆ ಇರಬೇಕಾದ ದುಸ್ಥಿತಿ ಇತ್ತು. ಇದನ್ನು ಬದಲು ಮಾಡಿದವರು ರಾಜುಗೌಡ ಕೊಡೆಕಲ್ಲ.

ಡಾ.ವೆಂಕಟಪ್ಪ ನಾಯಕರು ತಾವು ತಮ್ಮೊಳಗೆ ಅರಿತುಕೊಂಡು ಬದಲಾದ ಪ್ರಯುಕ್ತ ಮತದಾರ ಮತ್ತೆ ತಮ್ಮ ಎದೆಗೆ ಅವಚಿಕೊಂಡು ಕಾಂಗೈನಿಂದ ಗೆಲ್ಲಿಸಿದರು. ಅಧಿಕಾರದ ಚುಕ್ಕಾಣಿ ಹಿಡಿದ ತರುವಾಯ ಅವರ ಜೊತೆಗಿನ ಬಂಟರುಗಳು ಮತ್ತದೆ ಮೊದಲಿನ ಆಟ ಶುರುಮಾಡಿದಾಗ ಬಿ.ಜೆ.ಪಿ.ಯ ರಾಜುಗೌಡನನ್ನು ಅಧಿಕಾರಕ್ಕೆ ತಂದಿದ್ದಾರೆ. ಸುರಪುರ ಮತಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ಆಡುವವರು ಲಿಂಗಾಯತರು, ಈ ಲಿಂಗಾಯತರಿಗೆ ಒಂದು ಕಡೆ ಯಡಿಯೂರಪ್ಪ ಬೇಕು. ಇನ್ನೊಂದು ಕಡೆ ರಾಜುಗೌಡ ಎಂಬ ಸಾಫ್ಟ ವ್ಯಕ್ತಿ ಇಷ್ಟ. ಹೀಗಾಗಿ ಕಮಲವನ್ನು ಇಲ್ಲಿನ ಮತದಾರ ತನ್ನ ತಲೆಯಲ್ಲಿ ಇಟ್ಟುಕೊಂಡು ಓಡಾಡಬಲ್ಲ ಎಂಬ ವಾತಾವರಣ ಇಡೀ ಕ್ಷೇತ್ರದ ತುಂಬ ಇದೆ.

0 ವಿಶ್ವಾರಾಧ್ಯ ಸತ್ಯಂಪೇಟೆ

Leave a Reply

Your email address will not be published. Required fields are marked *

error: Content is protected !!