ಸಾಹಿತ್ಯ, ಸಂಗೀತ ಮತ್ತು ಕಲೆಯ ಸ್ಪರ್ಶ ಮಾನವನಿಗೆ ಇರಬೇಕು

ಕಲೆ, ಸಾಹಿತ್ಯ, ಸಂಗೀತ

ಹಾಡಲು, ಅಭಿನಯಿಸಲು ನಮಗೆ ಬರದಿದ್ದರೂ ಅವುಗಳ ಬಗ್ಗೆ ವಿಶೇಷ ಒಲವು ಮತ್ತು ಪೋಷಿಸುವ ಮನಸ್ಸು ಇದೆ. ಇದು ಸಹ ತುಂಬಾ ಮುಖ್ಯ. ಕಲೆ, ಸಂಗೀತವನ್ನು ಆಸ್ವಾದಿಸುವವರು, ಪೋಷಣೆ ನೀಡಿ ಪ್ರೋತ್ಸಾಹಿಸುವವರು ಇಲ್ಲದಿದ್ದರೆ ಕಲಾಕಾರರ ಸ್ಥಿತಿ ಕಾಡಿನ ಕುಸುಮದಂತೆ ಆಗಬಹುದು. ಎಷ್ಟೋ ಜನರು ತುಂಬಾ ಚನ್ನಾಗಿ ನಟಿಸುವರು. ಸುಶ್ರ್ಯಾವ್ಯವಾಗಿ ಹಾಡುವರು. ಅವರಿಗೆ ನಟನೆ, ರಾಗ, ತಾಳಗಳ ಅರಿವಿಲ್ಲದಿರಬಹುದು. ಹಾಗಂತ ಅವರನ್ನು ಉಪೇಕ್ಷೆ ಮಾಡಲಾಗದು. ಕೆಲವರು ಬಾತ್‍ರೂಮ್ ಸಂಗೀತಕ್ಕೆ ಸೀಮಿತರಾಗಿರುತ್ತಾರೆ. ಕೆಲವರು ತಮ್ಮ ಬಯಕೆಗಳನ್ನು ಪೂರೈಸಿಕೊಳ್ಳುವಲ್ಲಿ ಅದ್ಭುತ ನಟನಾಚಾರ್ತುರ್ಯ ಮೈಗೂಡಿಸಿಕೊಂಡಿರುತ್ತಾರೆ. ನಮ್ಮಂಥವರು ಇಷ್ಟಲಿಂಗ ಪೂಜಾ ಸಂದರ್ಭದಲ್ಲಿ ವಚನಗಳನ್ನು ಹೇಳುವ ಮೂಲಕ ಆನಂದಾನುಭೂತಿ ಅನುಭವಿಸುವುದುಂಟು. ಈ ನಿಟ್ಟಿನಲ್ಲಿ ಬಸವಣ್ಣನವರ ಒಂದು ವಚನ ನೆನಪಾಗುವುದು.

ತಾಳಮಾನ ಸರಿಸವನರಿಯೆ,
ಓಜೆ ಬಜಾವಣೆಯ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ,
ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ
ಆನು ಒಲಿದಂತೆ ಹಾಡುವೆ.

ಬಸವಣ್ಣನವರೇ ಹೇಳುವಂತೆ ಕೆಲವರಿಗೆ ತಾಳ, ಸ್ವರವಿನ್ಯಾಸದ ಪರಿಚಯ, ಛಂದಸ್ಸಿನ ಅಮೃತಗಣ, ದೇವಗಣಗಳ ಅರಿವು ಇಲ್ಲದಿರಬಹುದು. ಆದರೂ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ' ಎನ್ನುವ ಮಾತು ಚಿಂತನಾರ್ಹ. ಹಾಡುವಾಗ ತಾಳ, ಲಯಗಳಿಗಿಂತ ಹೃದಯಾಂತರಾಳದ ಸದ್ಭಾವನೆ, ಸದ್ಭಕ್ತಿ ಮುಖ್ಯ. ಡಾ. ಜಿ ಎಸ್ ಶಿವರುದ್ರಪ್ಪನವರು ಎದೆ ತುಂಬಿ ಹಾಡಿದೆನು‘ ಎಂದಿದ್ದಾರೆ. ಹಾಡುವುದು ಕೇವಲ ಇತರರ ಪ್ರಶಂಸೆಗಾಗಿ ಅಲ್ಲ; ಆತ್ಮಾನಂದಕ್ಕಾಗಿ. ಆಗ ತಾಳ, ಲಯ, ಮಾಧುರ್ಯ ಇರಬಹದು, ಇಲ್ಲದಿರಬಹುದು. ಆದರೂ ಅದು ಶಿವನಿಗೆ ಸಲ್ಲುವುದು. ಸಂಗೀತ, ಕಲೆಗಳಿಂದ ವ್ಯಕ್ತಿಯ ಮನೋಲ್ಲಾಸ, ಮನೋವಿಕಾಸವಾಗಬೇಕು. ಸುಸಂಸ್ಕøತ ಜೀವನಕ್ಕೆ ಸಾಹಿತ್ಯ, ಸಂಗೀತ, ಕಲೆಯ ಸ್ಪರ್ಶ ಕಿಂಚಿತ್ತಾದರೂ ಬೇಕು. ಅದನ್ನೇ ಒಂದು ಸಂಸ್ಕøತ ಸುಭಾಷಿತದಲ್ಲಿ `ಸಾಹಿತ್ಯ, ಸಂಗೀತ ಕಲಾವಿಹೀನಃ ಸಾಕ್ಷಾತ್ ಪಶೂಃ ಪುಚ್ಛವಿಶಾಣಹೀನಃ‘ ಎಂದಿದ್ದಾರೆ. ಸಾಹಿತ್ಯ, ಸಂಗೀತ ಮತ್ತು ಕಲೆಯ ಒಲವು ಇಲ್ಲದ ಮನುಷ್ಯ ಕೊಂಬು, ಬಾಲ ಇಲ್ಲದ ಪಶುವಿಗೆ ಸಮಾನ. ಇವುಗಳ ಒಲವಿದ್ದಾಗ ಆ ವ್ಯಕ್ತಿಯ ಬದುಕು ಸುಸಂಸ್ಕøತವಾಗುವುದು.


ನಾಡಿನಲ್ಲಿ ಭಯೋತ್ಪಾದನೆ, ಹಿಂಸೆ, ರಕ್ತಪಾತ, ಮೋಸ ಇರಬಾರದು ಎಂದರೆ ಸಾಹಿತ್ಯ, ಸಂಗೀತ ಮತ್ತು ಕಲೆಯ ಸ್ಪರ್ಶ ಮಾನವನಿಗೆ ಇರಬೇಕು. ಆಗ ರಕ್ತದ ಕಲೆಗಳು ಇಲ್ಲವಾಗಿ ಜೀವನ ಕಲೆ ಅರಳಲು ಸಾಧ್ಯ. ಹಾಗಾಗಿ ನಮ್ಮ ಪ್ರಜಾಪ್ರತಿನಿಧಿಗಳಿಗೆ ಅಂದರೆ ಗ್ರಾಮಪಂಚಾಯತಿಯಿಂದ ಲೋಕಸಭೆಯವರೆಗೂ ಆಯ್ಕೆಯಾಗಿ ಬರುವವರಿಗೆ ಸಾಹಿತ್ಯ, ಸಂಗೀತ ಮತ್ತು ಕಲೆಯ ತರಬೇತಿ ಕಡ್ಡಾಯವಾಗಬೇಕು. ಆಗ ಅವರಲ್ಲಿ ಅಮಾನವೀಯ ಗುಣಗಳು ದೂರವಾಗಿ ಮಾನವೀಯ ಗುಣಗಳು ನೆಲೆಗೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡಲು ಸ್ಪೂರ್ತಿ ದೊರೆಯಬಹುದು. ಇವತ್ತು ಅನೇಕ ಜನಪ್ರತಿನಿಧಿಗಳು ಸಂಸ್ಕಾರ ಹೀನರಾಗಿ ಹಣ, ಜಾತಿ, ಅಹಂಕಾರ, ವಂಶ ಮತ್ತಿನ್ನೇನೋ ಕಾರಣದಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುತ್ತಾರೆ. ಅಂಥವರ ವರ್ತನೆ ಹೇಗಿರುತ್ತದೆ ಎಂದು ವಿವರಿಸಬೇಕಾಗಿಲ್ಲ. ಅವರು ಪ್ರಜಾಪ್ರಭುಗಳ ಮತ್ತು ಅಧಿಕಾರಿಗಳ ಜೊತೆ ಅನಾಗರಿಕ ಪದಗಳ ಬಳಕೆ ಮಾಡುವರು. ಕಾರಣ ಅವರಿಗೆ ಸಾಂಸ್ಕøತಿಕ ನೆಲೆಗಟ್ಟು ಇಲ್ಲದಿರುವುದು. ಇನ್ನು ಕೆಲವರಿಗೆ ಕಲೆ, ಸಾಹಿತ್ಯ, ಸಂಗೀತದ ಸಾಧನೆ ಇದ್ದರೂ ಅವರ ವರ್ತನೆ ಹೇಗೆ ಇರುತ್ತದೆ ಎನ್ನುವುದಕ್ಕೆ ಬಸವಣ್ಣನವರ ಒಂದು ವಚನ ನೆನಪಾಗುವುದು.

ನಾಡಿನಲ್ಲಿ ಭಯೋತ್ಪಾದನೆ, ಹಿಂಸೆ, ರಕ್ತಪಾತ, ಮೋಸ ಇರಬಾರದು ಎಂದರೆ ಸಾಹಿತ್ಯ, ಸಂಗೀತ ಮತ್ತು ಕಲೆಯ ಸ್ಪರ್ಶ ಮಾನವನಿಗೆ ಇರಬೇಕು. ಆಗ ರಕ್ತದ ಕಲೆಗಳು ಇಲ್ಲವಾಗಿ ಜೀವನ ಕಲೆ ಅರಳಲು ಸಾಧ್ಯ. ಹಾಗಾಗಿ ನಮ್ಮ ಪ್ರಜಾಪ್ರತಿನಿಧಿಗಳಿಗೆ ಅಂದರೆ ಗ್ರಾಮಪಂಚಾಯತಿಯಿಂದ ಲೋಕಸಭೆಯವರೆಗೂ ಆಯ್ಕೆಯಾಗಿ ಬರುವವರಿಗೆ ಸಾಹಿತ್ಯ, ಸಂಗೀತ ಮತ್ತು ಕಲೆಯ ತರಬೇತಿ ಕಡ್ಡಾಯವಾಗಬೇಕು. ಆಗ ಅವರಲ್ಲಿ ಅಮಾನವೀಯ ಗುಣಗಳು ದೂರವಾಗಿ ಮಾನವೀಯ ಗುಣಗಳು ನೆಲೆಗೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡಲು ಸ್ಪೂರ್ತಿ ದೊರೆಯಬಹುದು. ಇವತ್ತು ಅನೇಕ ಜನಪ್ರತಿನಿಧಿಗಳು ಸಂಸ್ಕಾರ ಹೀನರಾಗಿ ಹಣ, ಜಾತಿ, ಅಹಂಕಾರ, ವಂಶ ಮತ್ತಿನ್ನೇನೋ ಕಾರಣದಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುತ್ತಾರೆ. ಅಂಥವರ ವರ್ತನೆ ಹೇಗಿರುತ್ತದೆ ಎಂದು ವಿವರಿಸಬೇಕಾಗಿಲ್ಲ. ಅವರು ಪ್ರಜಾಪ್ರಭುಗಳ ಮತ್ತು ಅಧಿಕಾರಿಗಳ ಜೊತೆ ಅನಾಗರಿಕ ಪದಗಳ ಬಳಕೆ ಮಾಡುವರು. ಕಾರಣ ಅವರಿಗೆ ಸಾಂಸ್ಕøತಿಕ ನೆಲೆಗಟ್ಟು ಇಲ್ಲದಿರುವುದು

ಆಡಿದಡೇನು, ಹಾಡಿದಡೇನು, ಓದಿದಡೇನು ತ್ರಿವಿಧದಾಸೋಹವಿಲ್ಲದನ್ನಕ್ಕ?
ಆಡದೆ ನವಿಲು? ಹಾಡದೆ ತಂತಿ? ಓದದೆ ಗಿಳಿ?
ತ್ರ್ರಿವಿಧ ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ.

ಇಲ್ಲಿ ಬರುವ ನವಿಲು, ತಂತಿ ಮತ್ತು ಗಿಳಿಯ ನಿದರ್ಶನಗಳನ್ನು ಗಮನಿಸಬೇಕು. ಇವುಗಳ ನಿದರ್ಶನದ ಮೂಲಕ ಮಾನವನ ಸ್ವಭಾವವನ್ನು ವಿಶ್ಲೇಷಣೆ ಮಾಡಿದ್ದಾರೆ. ನವಿಲಿನಷ್ಟು ಅದ್ಭುತವಾಗಿ ನೃತ್ಯ ಮಾಡಲು, ತಂತಿಯಂತೆ ನಾದ ಹೊರಹೊಮ್ಮಿಸಲು, ಗಿಳಿಯಂತೆ ಓದಲು ಮನುಷ್ಯನಿಗೆ ಆಗದಿರಬಹುದು. ಹಾಗಂತ ನವಿಲು, ತಂತಿ, ಗಿಳಿಯನ್ನು ಮನುಷ್ಯನಿಗಿಂತ ಶ್ರೇಷ್ಠ ಎನ್ನಲು ಸಾಧ್ಯವಿಲ್ಲ. ಮನುಷ್ಯ ನರ್ತನ ಮಾಡಿದಾಗ, ಹಾಡಿದಾಗ, ಓದಿದಾಗ ಆಗುವ ಆನಂದಾನುಭೂತಿಯೇ ಬೇರೆ. ಈ ನೆಲೆಯಲ್ಲಿ ಬಸವಣ್ಣನವರ ಮತ್ತೊಂದು ವಚನ ನೆನಪಾಗುವುದು.

ಎನ್ನ ಕಾಯವ ದಂಡಿಗೆಯ ಮಾಡಯ್ಯಾ,
ಎನ್ನ ಶಿರವ ಸೋರೆಯ ಮಾಡಯ್ಯಾ,
ಎನ್ನ ನರವ ತಂತಿಯ ಮಾಡಯ್ಯಾ,
ಎನ್ನ ಬೆರಳ ಕಡ್ಡಿಯ ಮಾಡಯ್ಯಾ,
ಬತ್ತೀಸ ರಾಗವ ಪಾಡಯ್ಯಾ, ಉರದಲೊತ್ತಿ ಬಾರಿಸು,
ಕೂಡಲಸಂಗಮದೇವಾ.

ಒಂದು ತಂತಿ ವಾದ್ಯದ ರೂಪಕ ಇಲ್ಲಿದೆ. ಆ ವಾದ್ಯವನ್ನು ಮಾನವನ ದೇಹ, ಮನಸ್ಸು, ಬುದ್ಧಿಗಳಿಗೆ ಜೋಡಿಸುವ ಕಾರ್ಯ ನಡೆದಿದೆ. ಮಾನವನ ಶರೀರವೇ ಒಂದು ತಂತಿಯ ವಾದ್ಯ, ತಲೆ ತಂತಿವಾದ್ಯದ ಬುರುಡೆ, ದೇಹದಲ್ಲಿರುವ ಪ್ರತಿಯೊಂದು ನರಗಳು ಒಂದೊಂದು ಶೃತಿಹೊರಡಿಸುವ ತಂತಿಗಳು. ಆ ತಂತಿಗಳನ್ನು ನುಡಿಸಲು ಬೆರಳುಗಳೇ ಕಡ್ಡಿ. ಹೀಗೆ ಇಡೀ ದೇಹ ವಾದ್ಯವಾಗಿ 32 ರಾಗವನ್ನು ಹಾಡಬೇಕು. ಎಂಥ ಅದ್ಭುತ ರೂಪಕ! ಇಂಥ ಸುಂದರ ವಾದ್ಯ ನಾವಾಗಿ ಹಾಡುತ್ತಿದ್ದರೆ ಭಗವಂತ ಸಹ ತಲೆದೂಗುವನು. ಮನುಷ್ಯನ ಬದುಕು ಭಗವಂತ ಮೆಚ್ಚುವಂತೆ ಇರಬೇಕೆನ್ನುವ ಭಾವ ಗಮನಾರ್ಹ. ಕೆಲವರು ಸಂಗೀತದಲ್ಲಿ ಅದ್ಭುತ ಸಾಧನೆ ಮಾಡಿ ಆಗಾಗ ಸಂಗೀತ ಕಚೇರಿಗಳನ್ನು ಕೊಡುತ್ತಿರುತ್ತಾರೆ. ಆದರೆ ಅವರು ಹಾಡುವುದು ಆತ್ಮಾನಂದಕ್ಕೋ? ಹಣಕ್ಕೋ? ಒಬ್ಬ ದೊಡ್ಡ ಹಾಡುಗಾರರನ್ನು ನಮ್ಮ ನಾಟಕೋತ್ಸವಕ್ಕೆ ಆಹ್ವಾನಿಸುವ ಪ್ರಯತ್ನ ಮಾಡಿದ್ವಿ. ಅವರು ಒಪ್ಪಿ ತಮ್ಮ ಕಾರ್ಯದರ್ಶಿಯ ಜೊತೆ ಮಾತನಾಡಲು ತಿಳಿಸಿದರು. ಆ ಕಾರ್ಯದರ್ಶಿ `ಬೇರೆಡೆ ಸಂಗೀತ ಕಚೇರಿ ಕೊಡಲು 30 ಲಕ್ಷದ ಮೇಲೆ ನಿಗದಿ ಮಾಡಲಾಗುವುದು. ಇದು ಮಠದ ಕಾರ್ಯ ಆಗಿರುವುದರಿಂದ 15 ಲಕ್ಷಕ್ಕೆ ನಿಗದಿ ಮಾಡಬಹುದು’ ಎಂದರು. ಸಂಗೀತ, ಸಾಹಿತ್ಯ, ಕಲೆಗಳಿಗೆ ಹಣವೇ ಪ್ರಧಾನವಾದರೆ ಸಂಸ್ಕøತಿ, ಸಂಸ್ಕಾರ ಎಂದು ಮಾತನಾಡುವ ಅಗತ್ಯವೇ ಬೀಳುವುದಿಲ್ಲ. ಈ ನೆಲೆಯಲ್ಲಿ ಬಾಲ್ಯದಿಂದಲೇ ಮಕ್ಕಳಿಗೆ ಈ ಸಂಸ್ಕಾರವನ್ನು ಕೊಡುವ ಪ್ರಯತ್ನ ಮಾಡಬೇಕು. ಆದರೆ ಇಂದು ಬಹುತೇಕ ತಂದೆ ತಾಯಿಗಳು ತಮ್ಮ ಮಕ್ಕಳು ಓದಿ ಹೆಚ್ಚು ಅಂಕ ಪಡೆಯಬೇಕೆಂದು ಕ್ರೀಡೆ, ಸಂಗೀತ, ನಾಟಕ, ನೃತ್ಯ ಇಂಥ ಪಠ್ಯೇತರ ವಿಷಯಗಳಗೆ ಕಳಿಸುವುದಿಲ್ಲ. ಅವರು 24 ಗಂಟೆ ಅಂಕಗಳ ಬಗ್ಗೆ ಯೋಚನೆ ಮಾಡಿ ಟ್ಯೂಷನ್‍ಗೆ ಕಳಿಸುವರು. ಅಂಥ ಮಕ್ಕಳಿಗೆ ಇನ್‍ಟ್ಯೂಷನ್ ಹೇಗೆ ಸಾಧ್ಯ?

read this matter : basavamarga.com

ಟ್ಯೂಷನ್ ಬೇರೆ, ಇನ್‍ಟ್ಯೂಷನ್ ಬೇರೆ. ಟ್ಯೂಷನ್ ಎಂದರೆ ಬಾಹ್ಯ ಬೋಧೆ. ಇನ್‍ಟ್ಯೂಷನ್ ಎಂದರೆ ಅಂತರ್ ಬೋಧೆ. ಇಂದು ಬೇಕಾಗಿರುವುದು ಕೇವಲ ಬಾಹ್ಯ ಬೋಧೆಯಲ್ಲ; ಅಂತರ್ ಬೋಧೆ. ಅದಿಲ್ಲದಿದ್ದಾಗ ಮಗು ಅಥವಾ ವ್ಯಕ್ತಿ ಅನೇಕ ರೀತಿಯ ಅವಾಂತರಗಳಿಗೆ ಕಾರಣವಾಗುವನು. ಇದನ್ನು ಗಮನದಲ್ಲಿರಿಸಿಕೊಂಡು ನಾವು ಉತ್ತಮ ಸಂಸ್ಕಾರಗಳನ್ನು ಪಡೆದುಕೊಂಡು ಮಕ್ಕಳಿಗೂ ನೀಡಬೇಕು. ಅವರಿಗೆ ಉತ್ತಮ ಸಂಸ್ಕಾರ ನೀಡಿ ನಾವು ಸಂಸ್ಕಾರ ಹೀನರಾಗಿ ನಡೆದುಕೊಂಡರೆ ಅದಕ್ಕಿಂತ ಅಪಾಯ ಮತ್ತೊಂದಿಲ್ಲ. ತಾಯಿಯಂತೆ ಮಗಳು',ನೂಲಿನಂತೆ ಸೀರೆ‘, `ಗುರುವಿನಂತೆ ಶಿಷ್ಯ’ ಎನ್ನುವ ನುಡಿಗಟ್ಟುಗಳು ಸುಮ್ಮಸುಮ್ಮನೆ ಜಾರಿಯಲ್ಲಿ ಬಂದಿಲ್ಲ. ಒಬ್ಬ ಗುರು ಆದರ್ಶ ತತ್ವ ಸಿದ್ಧಾಂತಗಳ ಬಾಹ್ಯ ಬೋಧೆ ಮಾಡಿ ಅಡ್ಡಹಾದಿ ಹಿಡಿದರೆ ಯಾರು ತಾನೆ ಅವರನ್ನು ಗೌರವಿಸಲು ಸಾಧ್ಯ? ಇವತ್ತು ಸಮಾಜಲ್ಲಿ ಮಾರ್ಗದರ್ಶನ ಮಾಡುವ ಸ್ಥಾನದಲ್ಲಿರುವ ಬಹುತೇಕ ಜನರೇ ಬೇರೆ ಬೇರೆ ಕಾರಣಗಳಿಂದ ಮಾರ್ಗ ಬಿಟ್ಟು ಹೋಗುತ್ತಿದ್ದಾರೆ. ಮಠ ಮತ್ತು ಅಲ್ಲಿರುವ ಸ್ವಾಮಿಗಳು ಶಿಷ್ಯರನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವ ಕಾಯಕ ಮಾಡಬೇಕು. ಹಾಗೆ ಮಾಡಬೇಕೆಂದರೆ ಅವರಿಗೆ ಅಂತರ್ ಬೋಧೆಯೂ ಬೇಕು. ಜಾತಿಯ ಮನೋಭಾವನೆ ಬಿಟ್ಟು ಜ್ಯೋತಿಸ್ವರೂಪರಾಗಿ ಬಾಳಬೇಕು. ಆದರೆ ಪ್ರಸ್ತುತ ಸ್ಥಿತಿ ಹೇಗಿದೆ? ಕೆಲವರು ಏನೇನೋ ಕಾರಣಗಳಿಗಾಗಿ ಸ್ವಾಮಿತನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅಂಥವರು ಸಂಗೀತ ಕಲಿತರೇನು? ಸಾಹಿತಿಗಳಾದರೇನು? ನೃತ್ಯ ಮಾಡಿದರೇನು. ಅದು ಕೇವಲ ತಂತಿ ಹಾಡಿದಂತೆ, ಗಿಳಿ ಓದಿದಂತೆ, ನವಿಲು ನರ್ತಿಸಿದಂತೆ.

ರಂಗಭೂಮಿ ಮತ್ತು ಸಂಗೀತಕ್ಕೆ ಅವಿನಾಭಾವ ಸಂಬಂಧ ಇದೆ. ನಾಟಕದಲ್ಲಿ ಬದುಕಿನ ಎಲ್ಲ ಕಲೆಗಳನ್ನು ಕಾಣಬಹುದು. ನಾಟಕದಲ್ಲಿ ಸಾಹಿತ್ಯ, ಸಂಗೀತ, ನೃತ್ಯ, ಅಭಿನಯ, ಮೌನ, ಮಾತು, ಬಾಹ್ಯ ಬೋಧೆ, ಅಂತರ್ ಬೋಧೆಗಳೆಲ್ಲ ಇವೆ. ಇವೆಲ್ಲ ಸಂಗಮಿಸಿದಾಗಲೇ ಒಂದು ನಾಟಕ ಯಶಸ್ವಿಯಾಗಲು, ಒಬ್ಬ ಶ್ರೇಷ್ಠ ನಟ ಎನಿಸಿಕೊಳ್ಳಲು ಸಾಧ್ಯ. ಈ ನೆಲೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ನಟ, ನಟಿಯರೇ. ನಾವು ಆಗಾಗ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಿರುತ್ತೇವೆ. ನಮ್ಮ ವಿದ್ಯಾಸಂಸ್ಥೆಯ ಗುಮಾಸ್ತನ ವರ್ಗಾವಣೆ ಆಗಿತ್ತು. ಆತ ತನ್ನ ಪತ್ನಿಯ ಜೊತೆ ಸಿರಿಗೆರೆಗೆ ಬಂದಿದ್ದ. ಅವನ ಒಂದು ಕಾಲಿಗೆ ಬ್ಯಾಂಡೇಜ್ ಹಾಕಲಾಗಿತ್ತು. ಹೆಂಡತಿಯ ಬುಜ ಹಿಡಿದು ಕುಂಟುತ್ತ ಹೆಜ್ಜೆ ಇಡುತ್ತಿದ್ದ. ನಮ್ಮ ಜಗದ್ಗುರುಗಳವರು ಅದನ್ನು ನೋಡಿ ಏನಾಗಿದೆ? ಯಾರು ನೀನು ಎಂದು ಕೇಳಿದ್ದಾರೆ. ಅವನ ಪತ್ನಿ ನಮ್ಮ ಮನೆಯವರು. ಆನಗೋಡಿನಲ್ಲಿ ಗುಮಾಸ್ತರಾಗಿದ್ದಾರೆ. ಅಪಘಾತವಾಗಿ ಕಾಲು ಮುರಿದಿದೆ. ಒಬ್ಬರೇ ಓಡಾಡಲು ಆಗುತ್ತಿಲ್ಲ. ಅವರನ್ನು ಅಲ್ಲೇ ಮುಂದುವರಿಸಬೇಕೆಂದು' ಬೇಡಿಕೊಂಡಿದ್ದಾಳೆ. ಗುರುಗಳು ವರ್ಗಾವಣೆ ರದ್ದುಪಡಿಸಲು ಆದೇಶ ಮಾಡಿದ್ದಾರೆ. ಮರುದಿನ ಆತನ ವರ್ಗಾವಣೆ ರದ್ದು ಮಾಡಿದಿರಾ ಎಂದು ಆಡಳಿತಾಧಿಕಾರಿಯನ್ನು ಕೇಳಲು ಇಲ್ಲ ಬುದ್ಧಿ’ ಎಂದಿದ್ದಾರೆ. ಏಕೆ ಎಂದಾಗ `ತಾವು ಅತ್ತ ಹೋಗುತ್ತಲೇ ಆತ ಸಲೀಸಾಗಿ ಬಸ್ ಹತ್ತಿಕೊಂಡು ಹೋದ. ಅವನಿಗೆ ಯಾವ ಅಪಘಾತವೂ ಆಗಿಲ್ಲ. ವರ್ಗಾವಣೆಗಾಗಿ ಈ ನಾಟಕ ಮಾಡಿದ್ದಾನೆ ಎಂದರು. ಬಹುಶಃ ರಂಗತರಬೇತಿ ಪಡೆದ ನಟರಿಗೂ ಅವರಂತೆ ನಟಿಸಲು ಬರಲಾರದು. ಮನೆಯಲ್ಲಿ ಮಕ್ಕಳು ತಂದೆ ತಾಯಿಗಳಿಂದ ಏನಾದರೂ ಪಡೆಯುವಾಗ ಇಲ್ಲವೇ ಹೆಂಡತಿ ಅಥವಾ ಗಂಡ ತಮ್ಮ ಬಯಕೆಗಳನ್ನು ನೆರವೇರಿಸಿಕೊಳ್ಳಲು ಹೇಗೆ ನಟನೆ ಮಾಡುವರೆಂಬುದನ್ನು ವಿವರಿಸುವ ಅಗತ್ಯವಿಲ್ಲ. ಪ್ರತಿಯೊಬ್ಬರೂ ನಟರೇ ಆದರೂ ಅದು ಕೃತಕವಾಗದೆ ಸಹಜತೆಯಿಂದ ಕೂಡಿರಬೇಕು. ನಟನೆಯಿಂದ ಮನೋಲ್ಲಾಸವಾಗಬೇಕೇ ಹೊರತು ಮನೋವಿಕಾರಕ್ಕೆ ಕಾರಣ ಆಗಬಾರದು. ಹಾಗೆ ಆಗುವುದಾದರೆ ಅಂಥ ನಟನೆ, ಸಂಗೀತ, ನೃತ್ಯ ಬೇಕಾಗಿಲ್ಲ.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೇಹಳ್ಳಿ-577515
ಹೊಸದುರ್ಗ-ತಾ, ಚಿತ್ರದುರ್ಗ-ಜಿ ,ಸೆಲ್: 9448395594

Leave a Reply

Your email address will not be published. Required fields are marked *

error: Content is protected !!