ಜಾತಿ ನಿಗಮಗಳಿಂದ ಜನರ ಉದ್ಧಾರ ಸಾಧ್ಯವಿಲ್ಲ

ವಿಶ್ವರಂಗಭೂಮಿ

ಸಾಣೇಹಳ್ಳಿಯಲ್ಲಿ ಮಾರ್ಚ್ 27ರಂದು ಎರಡೂವರೆ ಗಂಟೆಗಳ ಕಾಲ ವಿಶ್ವರಂಗಭೂಮಿ' ನಿಮಿತ್ತ ರಂಗಸಂಗೀತ, ಕೋಲಾಟ ಮತ್ತು ಸಭೆ ನಡೆಯಿತು.ವಿಶ್ವರಂಗಭೂಮಿ’ಯ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಈ ನೆಲೆಯಲ್ಲಿ ಸಾಣೇಹಳ್ಳಿಯಲ್ಲಿ ವರ್ಷದುದ್ದಕ್ಕೂ ರಂಗಚಟುವಟಿಕೆಗಳು ನಡೆಯುತ್ತಿರುತ್ತವೆ. ರಂಗಭೂಮಿ ಸ್ಥಾವರ ಅಲ್ಲ; ಜಂಗಮ. ಅಲ್ಲಿ ಜೀವಂತಿಕೆ ಪುಟಿಯುತ್ತಿರುತ್ತದೆ. ಜಗತ್ತಿನಲ್ಲಿ ಶಾಂತಿ, ನೆಮ್ಮದಿ ನೆಲೆಸುವುದು ಬೃಹತ್ ಕಟ್ಟಡ, ರಸ್ತೆ, ವಾಹನ, ಕಾರ್ಖಾನೆ, ಸೇತುವೆ ಇತ್ಯಾದಿಗಳಿಂದ ಅಲ್ಲ. ಸಾಹಿತ್ಯ, ಕಲೆ, ಸಂಗೀತದ ಮೂಲಕ ಮನುಷ್ಯ ನಿಜವಾದ ಶಾಂತಿ, ನೆಮ್ಮದಿ ಪಡೆದುಕೊಳ್ಳಲು ಸಾಧ್ಯ. ಆದರೆ ಇಂದು ಆದ್ಯತೆ ನೀಡಬೇಕಾದುದಕ್ಕೆ ನೀಡುತ್ತಿಲ್ಲ. ಸರ್ಕಾರ ಈ ವರ್ಷದ ಬಜೆಟ್ ಹಿನ್ನೆಲೆಯಲ್ಲಿ ಮಾರ್ಚ್ 15ರ ಪ್ರಜಾವಾಣಿ' ದಿನಪತ್ರಿಕೆಯ ಮುಖಪುಟದಲ್ಲಿಜಾತಿ ನಿಗಮಗಳಿಗೆ ಭರಪೂರ ಕೊಡುಗೆ. ಕಲೆ, ಸಂಸ್ಕøತಿಗೆ ಹಣವಿಲ್ಲ. ಸಾಂಸ್ಕøತಿಕ ವಲಯದ ಆಕ್ರೋಶ. ಗಡಿ ನುಡಿಗೆ ಅನುದಾನ ಕತ್ತರಿ’ ಎಂದಿತ್ತು.

ಜಾತಿ ನಿಗಮಗಳಿಂದ ಜನರ ಉದ್ಧಾರ ಸಾಧ್ಯವಿಲ್ಲ; ಬದಲಾಗಿ ಜನರ ಧಾರ್ಮಿಕ, ನೈತಿಕ, ಸಾಂಸ್ಕøತಿಕ ಮೌಲ್ಯಗಳು ಕುಸಿಯದ ಹಾಗೆ ನೋಡಿಕೊಂಡರೆ ಮಾತ್ರ ಸಾಧ್ಯ. ಇವತ್ತು ಧರ್ಮಗಳಿಗೆ ಕೊರತೆ ಇಲ್ಲ. ಹಾಗಂತ ಧರ್ಮದಿಂದಲೇ ಜಗತ್ತಿನ ಉದ್ಧಾರವಾಗುತ್ತದೆ ಎನ್ನಲಾಗದು. ಏಕೆಂದರೆ ಎಷ್ಟೋ ಹುಸಿ ಧರ್ಮಗಳು ಜನರನ್ನು ದಿಕ್ಕುತಪ್ಪಿಸುತ್ತ ಬಂದಿವೆ. ವಾಸ್ತವವಾಗಿ ನೈಜ ಧರ್ಮ ದಿಕ್ಕುತಪ್ಪಿಸುವುದಿಲ್ಲ. ಅದು ಜೀವನ ಮೌಲ್ಯಗಳನ್ನು ಎತ್ತಿಹಿಡಿದು ಬದುಕನ್ನು ಶುದ್ಧವಾಗಿಸುವುದು. ಬುದ್ಧ, ಬಸವ, ಗಾಂಧಿಯಂಥವರು ಹೇಳಿದ ಧರ್ಮವನ್ನು ಯಥಾವತ್ತಾಗಿ ಜಾರಿಯಲ್ಲಿ ತಂದರೆ ಅವುಗಳಿಂದ ಮೌಲ್ಯಗಳ ರಕ್ಷಣೆಯಾಗಿ ಜನರು ಸನ್ಮಾರ್ಗದಲ್ಲಿ ಸಾಗುವರು. ಬಸವಣ್ಣನವರು ದಯವಿಲ್ಲದ ಧರ್ಮವದೇವುದಯ್ಯಾ? ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ. ದಯವೇ ಧರ್ಮದ ಮೂಲವಯ್ಯಾ',ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ’ ಎಂದರು. ಈ ತತ್ವಗಳಂತೆ ನಡೆದುಕೊಂಡಾಗ ಧರ್ಮ ದಿಕ್ಕುತಪ್ಪಿಸಲು ಸಾಧ್ಯವಿಲ್ಲ. ಆದರೆ ಇವತ್ತು ದಯೆ, ಸಪ್ತಶೀಲಗಳಿಗೆ ಸ್ಥಾನವಿಲ್ಲವಾಗಿದೆ. ಸಾಹಿತ್ಯ, ಸಂಗೀತ, ಕಲೆಯ ಒಲವಿದ್ದಲ್ಲಿ ಧರ್ಮ, ರಾಜಕೀಯ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಮೌಲ್ಯಗಳನ್ನು ಉಳಿಸಿಕೊಳ್ಳಲು ಸಾಧ್ಯ.

ಸಿಮೆಂಟ್, ಕಬ್ಬಿಣ, ಜಲ್ಲಿ, ಮರಳು, ಇಟ್ಟಿಗೆ ಇತ್ಯಾದಿ ಪರಿಕರಗಳಿಂದ ಭವ್ಯ ಮನೆ, ಮಂದಿರ, ಕಾರ್ಖಾನೆ ಇನ್ನೇನೇನೋ ಕಟ್ಟಬಹುದು. ಆದರೆ ಕಟ್ಟಡಕ್ಕೆ ಬೇಕಾದ್ದು ಭದ್ರ ಬುನಾದಿ. ಬುನಾದಿಯನ್ನು ಗಟ್ಟಿಗೊಳಿಸದೆ ನೆಲದ ಮೇಲೆ ಕಟ್ಟಿದರೆ ಅದು ಬೇಗ ಬಿದ್ದು ಹೋಗುವುದು. ಅದೇ ರೀತಿ ವಿವಿಧ ಕ್ಷೇತ್ರಗಳಲ್ಲಿರುವ ಜನರಿಗೆ ಸಾಂಸ್ಕøತಿಕ ನೆಲೆಗಟ್ಟಿನ ಅಗತ್ಯವಿದೆ. ಇಲ್ಲದಿದ್ದರೆ ದೇಶ ವಿನಾಶದ ಅಂಚಿನತ್ತ ಸಾಗುವುದು. ಈ ನೆಲೆಯಲ್ಲಿ ರಂಗಭೂಮಿಗೆ ವಿಶೇಷ ಮಹತ್ವ ಇದೆ. ಮಾನವರಿಗೆ ರಂಗಭೂಮಿಯ ಸಂಸ್ಕಾರ ಇದ್ದಲ್ಲಿ ಮಾತಿನ ಮೇಲೆ ಹಿಡಿತ ಸಾಧಿಸಬಹುದು. ದೈಹಿಕ, ಮಾನಸಿಕ, ಬೌದ್ಧಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಸ್ಮರಣಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಕಾಲ, ಕಾಯಕ ಪ್ರಜ್ಞೆಯುಳ್ಳವರಾಗಿ ಅದ್ಭುತ ಸಾಧನೆ ಮಾಡಬಹುದು. ಈ ದೃಷ್ಟಿಯಿಂದ `ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದವರೆಗಾದರೂ ವಿದ್ಯಾರ್ಥಿಗಳಿಗೆ ರಂಗಭೂಮಿಯ ಪರಿಚಯ ಮಾಡಿಕೊಡಬೇಕು’ ಎಂದು ಕಳೆದ ಹಲವಾರು ವರ್ಷಗಳಿಂದ ಸರ್ಕಾರಕ್ಕೆ ಹೇಳುತ್ತ ಬಂದಿದ್ದೇವೆ.

ಒಂದು ಹಾಡನ್ನು ಹೇಗೆ ಹೇಳಬಹುದು, ನೃತ್ಯ ಮಾಡಬಹುದು, ಅಭಿನಯಿಸಬಹುದು, ಮಾತನಾಡಬಹುದು ಎನ್ನುವುದನ್ನು ರಂಗತಂತ್ರಗಳ ಮೂಲಕ ಹೇಳಿದರೆ ದಡ್ಡ ವಿದ್ಯಾರ್ಥಿಗಳು ಸಹ ಜಾಣರ ಗುಂಪಿಗೆ ಸೇರುವರು. ಆದರೆ ಸರ್ಕಾರ `ಶಿಕ್ಷಣದಲ್ಲಿ ರಂಗಭೂಮಿಯನ್ನು ಅಳವಡಿಸುವ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುತ್ತಿಲ್ಲ’. ವಿಶ್ವರಂಗಭೂಮಿಯ ನೆಪದಲ್ಲಿ ನಾವು ಮತ್ತೊಮ್ಮೆ ಸರ್ಕಾರಕ್ಕೆ ಕರೆ ಕೊಟ್ಟದ್ದು: ಶಿಕ್ಷಣ ಕ್ಷೇತ್ರಕ್ಕೆ ಹೊಸದಾಗಿ ಏನನ್ನೂ ಮಾಡದಿದ್ದರೂ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಂಗಶಿಕ್ಷಕರನ್ನು ನೇಮಕ ಮಾಡಬೇಕು’ ಎಂದು. ವೃತ್ತಿ, ದೈಹಿಕ, ಸಂಗೀತ ಶಿಕ್ಷಕರಿಗಿಂತಲೂ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿಸಿ, ಕಲಿಕಾಸಾಮಥ್ರ್ಯ ಹೆಚ್ಚಿಸುವ ತಂತ್ರಗಾರಿಕೆ ರಂಗಶಿಕ್ಷಕರಿಗಿದೆ. ಶಾಲೆಯಲ್ಲಿ ಒಬ್ಬ ರಂಗಶಿಕ್ಷಕ ಇದ್ದರೆ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸಾಧ್ಯ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕಿದೆ.

ಈ ವರ್ಷ ವಿಶ್ವರಂಗಭೂಮಿ ದಿನವನ್ನು ಸಾಣೇಹಳ್ಳಿಯಲ್ಲಿ ವಿನೂತನ ರೀತಿಯಲ್ಲಿ ಆಚರಿಸಲಾಯಿತು. ನಮ್ಮ ರಂಗಶಾಲೆಯ ಪ್ರಾಚಾರ್ಯ ಜಗದೀಶ್, ನಾಗರಾಜ್ ಹಾಗೂ ರಂಗಶಾಲಾ ವಿದ್ಯಾರ್ಥಿಗಳು ವಿವಿಧ ವಾದ್ಯಗಳನ್ನು ಬಳಸಿ ಒಂದು ತಾಸು ರಂಗಗೀತೆಗಳನ್ನು ಹಾಡಿದರು. ನಂತರ ಇಂಗ್ಲಂಡಿನ ನಟಿ ಹೆಲೆನ್ ಮಿರ್ರೆ ಅವರ ಆಂಗ್ಲಭಾಷೆಯ ಸಂದೇಶವನ್ನು ರಂಗಶಿಕ್ಷಕ ವೆಂಕಟೇಶ್ವರ ಅವರು ತಾವೇ ಕನ್ನಡಕ್ಕೆ ಅನುವಾದಿಸಿ ಓದಿದರು. ಕೊನೆಯಲ್ಲಿ ರಂಗಶಾಲೆಯ ವಿದ್ಯಾರ್ಥಿಗಳು `ಆತ್ಮಹತ್ಯೆ’ ಎನ್ನುವ ವಿಶಿಷ್ಟ ಕೋಲಾಟ ಪ್ರದರ್ಶಿಸಿದರು.

ಈ ವರ್ಷದ ವಿಶ್ವರಂಗಭೂಮಿಯ ಸಂದೇಶ: ಜೀವಂತ ಪ್ರದರ್ಶನ ಕಲೆ ಹಾಗೂ ಸದಾ ಅಭದ್ರತೆಯಿಂದ ಕೂಡಿರುವ ಕಲೆಗಳನ್ನೇ ವೃತ್ತಿಯನ್ನಾಗಿ ಅಪ್ಪಿಕೊಂಡು ಹೆಣಗುತ್ತಿರುವ ಅನೇಕ ಕಲಾವಿದರು, ತಂತ್ರಜ್ಞರು, ಕುಶಲಕರ್ಮಿಗಳು ಹಾಗೂ ಮಹಿಳೆಯರಿಗೆ ಇದು ನಿಜಕ್ಕೂ ಸಂದಿಗ್ಧದ ಕಾಲಘಟ್ಟವಾಗಿದೆ. ಪ್ರಾಯಶಃ ಇವರಿಗೆ ತಮ್ಮ ವೃತ್ತಿಯಲ್ಲಿ ಅನುಭವಿಸಿದ ನಿರಂತರ ಅಭದ್ರತೆಯ ಅನುಭವವೇ ಈ ಸಾಂಕ್ರಾಮಿಕ ರೋಗದ ಸಂದರ್ಭವನ್ನೂ ಸಮರ್ಥವಾಗಿ ಎದುರಿಸಿ ಉಳಿಯುವ ಚಾಣಾಕ್ಷತೆ ಮತ್ತು ಸ್ಥೈರ್ಯವನ್ನು ನೀಡಿದೆ. ಬದಲಾದ ಈ ಹೊಸ ಸಂದರ್ಭದಲ್ಲಿ ಅವರ ಕಲ್ಪನೆಗಳೆಲ್ಲವೂ ಸೃಜನಶೀಲ, ಮನರಂಜನೆ ಮತ್ತು ಸಂವಹನೆಯ ಚಲನಾತ್ಮಕ ಮಾರ್ಗಗಳಾಗಿ ಈಗಾಗಲೇ ರೂಪಾಂತರಗಳಾಗಿಬಿಟ್ಟಿವೆ. ಇದರ ಬಹುದೊಡ್ಡ ಭಾಗವಾದ ಅಂತರ್ಜಾಲಕ್ಕೆ ಸಹಜವಾಗಿಯೇ ಧನ್ಯವಾದ ಹೇಳಲೇಬೇಕು. ಈ ಭೂಮಿಯ ಮೇಲೆ ಮಾನವರ ಆಗಮನವಾದಂದಿನಿಂದ ಇಂದಿನವರೆಗೂ ತಮ್ಮ ಕತೆಗಳನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಲೇ ಬಂದಿದ್ದೇವೆ. ನಾವು ಈ ಭೂಮಿಯ ಮೇಲೆ ಇರುವವರೆಗೂ ರಂಗಭೂಮಿ ಎಂಬ ಸುಂದರ ಸಂಸ್ಕøತಿಯು ಸದಾ ಜೀವಂತವಾಗಿರುತ್ತದೆ. ಲೇಖಕರ, ವಿನ್ಯಾಸಕಾರರ, ನರ್ತಕರ, ಗಾಯಕರ, ನಟರ, ಸಂಗೀತಗಾರರ, ನಿರ್ದೇಶಕರ ಕ್ರಿಯಾಶೀಲ ಅದಮ್ಯ ಆಶಯವನ್ನು ಯಾರಿಂದಲೂ ಎಂದಿಗೂ ಉಸಿರುಗಟ್ಟಿಸಲು ಸಾಧ್ಯವಿಲ್ಲ. ಮುಂದೆ ಅತೀ ಶೀಘ್ರದಲ್ಲೇ ನಾವು ಈ ಜಗತ್ತಿಗೆ ಹಂಚಬಹುದಾದ ಹೊಸ ಚೈತನ್ಯ ಹಾಗೂ ತಿಳುವಳಿಕೆಯೊಂದಿಗೆ ಅದು ಮತ್ತೆ ಮತ್ತೆ ಅರಳುತ್ತಲೇ ಇರುತ್ತದೆ. ನಾ ಕಾಯಲಾರೆ’.

ವಿಶ್ವರಂಗಭೂಮಿ ದಿನಾಚರಣೆ ಅಸ್ತಿತ್ವಕ್ಕೆ ಬಂದದ್ದು ಐಟಿಐ (ಇಂಟರ್‍ನ್ಯಾಶನಲ್ ಥಿಯೇಟರ್ ಇನ್‍ಸ್ಟಿಟ್ಯೂಟ್) ಎನ್ನುವ ಜಾಗತಿಕ ಮಟ್ಟದ ಪ್ರದರ್ಶಕ ಕಲೆಗಳ ಸಂಘಟನೆಯಿಂದ. ಇದಕ್ಕೆ ಯುನೆಸ್ಕೊ (ಯುನೈಟೆಡ್ ನೇಶನ್ಸ್ ಎಜ್ಯುಕೇಶನಲ್ ಸೈಂಟಿಫಿಕ್ ಅಂಡ್ ಕಲ್ಚರಲ್ ಆರ್ಗನೈಜೇಶನ್) ಮೂಲವಾಗಿದೆ. ಪ್ರತಿಯೊಂದು ದೇಶದ ಅಭಿವೃದ್ಧಿ ನಿಂತಿರುವುದು ಶಿಕ್ಷಣ, ವಿಜ್ಞಾನ, ಸಂಸ್ಕøತಿಯ ಮೇಲೆ. ಇವುಗಳ ಸಹಕಾರದಿಂದ ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಸುರಕ್ಷತೆ ನೆಲೆಸುವ ಆಶಯದ ನೆಲೆಯಲ್ಲಿ ಹುಟ್ಟಿಕೊಂಡದ್ದು ಯುನೆಸ್ಕೊ. ಅದರ ಮೂಲ ಆಶಯವನ್ನು ಆಧಾರವಾಗಿಟ್ಟುಕೊಂಡು ಅದರಲ್ಲಿದ್ದ ರಂಗಕರ್ಮಿಗಳು, ನೃತ್ಯಗಾರರು ಸೇರಿ ಸಂಘಟಿಸಿದ ಸಂಸ್ಥೆಯೇ ಐಟಿಐ. ಎಲ್ಲ ಭಾಷೆಯ, ಎಲ್ಲ ರಾಷ್ಟ್ರಗಳ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ ರಂಗಕರ್ಮಿಗಳನ್ನು ಒಂದೆಡೆ ಸೇರಿಸುವ ಕೆಲಸವನ್ನು ಇದು ಮಾಡುತ್ತದೆ. 1961ರಲ್ಲಿ ವಿಶ್ವರಂಗಭೂಮಿಯ ದಿನಾಚರಣೆ ಮಾಡುವ ನಿರ್ಣಯವಾಗುವುದು. ಇದರ ಉದ್ದೇಶ ಜಾಗತಿಕ ಮಟ್ಟದಲ್ಲಿ ಎಲ್ಲ ರಂಗಕರ್ಮಿಗಳನ್ನು ಸಂಘಟಿಸಬೇಕು ಎನ್ನುವುದು. ರಂಗಭೂಮಿ ದೇಶ, ಕಾಲ ಮೀರಿದ್ದು. ಇದು ಹರಿಯುವ ನೀರು.


ವಿಶ್ವರಂಗಭೂಮಿ ದಿನಾಚರಣೆಗೆ ಮಾರ್ಚ್ 27ನ್ನೇ ನಿಗದಿಪಡಿಸಲು ಕಾರಣವಿದೆ. ಪ್ಯಾರಿಸ್‍ನಲ್ಲಿ ಥಿಯೇಟರ್ ಆಫ್ ನೇಷನ್ಸ್ ಎನ್ನುವುದು ಮಾರ್ಚ್ 27ರಂದೇ ನಡೆದುಕೊಂಡು ಬರುತ್ತದೆ. ಅದರ ಸವಿನೆನಪಿನಲ್ಲಿ ಅದೇ ದಿನ ವಿಶ್ವರಂಗಭೂಮಿ ಆಚರಣೆಯನ್ನು ಜಾರಿಯಲ್ಲಿ ತರಬೇಕೆಂದು ನಿರ್ಧಾರ ಮಾಡುವರು. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವವರು ಐಟಿಐ ಸದಸ್ಯರು ಮತ್ತು ಅದರ ಪದಾಧಿಕಾರಿಗಳು ಆಗುವರು. ಅವರಲ್ಲಿ ಒಬ್ಬ ಪ್ರತಿಷ್ಠಿತ ವ್ಯಕ್ತಿಯನ್ನು ಆಯ್ಕೆ ಮಾಡಿ ಅವರಿಂದ ಇಡೀ ವರ್ಷದ ರಂಗಭೂಮಿಗೆ ಸಂಬಂಧಿಸಿದ ವಿದ್ಯಮಾನಕ್ಕೆ ಅನುಸಾರವಾಗಿ ಸಂದೇಶ ಬರುವ ಹಾಗೆ ಮಾಡುವರು. ಅದನ್ನು ಜಗತ್ತಿನ ಆಯಾ ಪ್ರಾದೇಶಿಕ ಭಾಷೆಗೆ ಅನುವಾದಿಸಿ ಓದುವರು. ಇದರ ಉದ್ದೇಶ ಜಾಗತಿಕ ಮಟ್ಟದಲ್ಲಿ ರಂಗಭೂಮಿಯವರು ಸಂಘಟಿತರಾಗಿದ್ದೇವೆ ಎನ್ನುವುದು. 1962 ಮಾರ್ಚ್ 27 ರಂದು ಇದು ಮೊದಲಿಗೆ ಜಾರಿಯಲ್ಲಿ ಬಂತು. ಮೊದಲು ಸಂದೇಶ ಕೊಟ್ಟ ರಂಗಕರ್ಮಿ ಫ್ರಾನ್ಸ್‍ನ ಹೆಸರಾಂತ ನಟ, ನಾಟಕಕಾರ, ನಿದೇರ್ಶಕ, ರಂಗತಜ್ಞ ಜಿ ಕ್ಯಾಚ್ಯೂ. ಇಲ್ಲಿಯವರೆಗೂ ಪ್ರತಿವರ್ಷ ಒಬ್ಬೊಬ್ಬ ಹಿರಿಯ ರಂಗಕರ್ಮಿಗಳು ಸಂದೇಶ ನೀಡುತ್ತ ಬಂದಿದ್ದಾರೆ. ಈ ವರ್ಷ ಸಂದೇಶ ನೀಡಿರುವವರು ಇಂಗ್ಲಂಡಿನ ಅತ್ಯಂತ ಹೆಸರಾಂತ ಮಹಿಳಾ ನಟಿ ಹೆಲೆನ್ ಮಿರೆನ್. ಷೆಕ್ಸ್‍ಪಿಯರ್ ನಾಟಕದಲ್ಲಿ ಕ್ಲಿಯೋ ಪಾತ್ರದ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದರು. ನಟನೆಯನ್ನೇ ವೃತ್ತಿಯಾಗಿಸಿಕೊಂಡು ರಂಗಭೂಮಿ ಮಾತ್ರವಲ್ಲದೆ ಕಿರುತೆರೆ, ಹಿರಿತೆರೆಯಲ್ಲಿ ಸಹ ನಟಿಸಿ ವಿಶ್ವದಲ್ಲೇ ಹೆಸರುವಾಸಿಯಾಗಿರುವ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ರಂಗಕಲೆಗಳು ಹೆಚ್ಚಾದಾಗ ರಕ್ತಕಲೆಗಳು ಕಡಿಮೆ ಆಗುವವು. ಸಂಸ್ಕøತಿ, ಸಂಸ್ಕಾರ ಕಲಿಸುವ ಶಕ್ತಿ ರಂಗಭೂಮಿಗೆ ಇದೆ. ಯಾವುದೇ ದೇಶದ ಪ್ರಗತಿಯ ಹಿಂದೆ ಅಲ್ಲಿನ ರಂಗಚಟುವಟಿಕೆಗಳ ಕಾಣಿಕೆ ಇರುವುದನ್ನು ಮರೆಯುವಂತಿಲ್ಲ. ಲಂಡನ್‍ನಲ್ಲಿ ಸತತ ಐವತ್ತು ವರ್ಷಗಳಿಂದ ಒಂದೇ ನಾಟಕ ನಡೆಯುತ್ತಿದೆಯಂತೆ. ಇಂಗ್ಲೆಂಡಿಗೆ ಹೋದವರು ಈ ನಾಟಕ ನೋಡದಿದ್ದರೆ ಅವರ ಪ್ರವಾಸ ಅಪೂರ್ಣವಾದಂತೆ ಎನ್ನುವರು. ಮನುಷ್ಯನನ್ನು ಪರಿವರ್ತನೆ ಮಾಡುವ ಶಕ್ತಿ ರಂಗಭೂಮಿಗೆ ಇದೆ. ಹಾಗಾಗಿ ಕರ್ನಾಟಕದ ಜೈಲಿನ ಕೈದಿಗಳಿಗೂ ನಾಟಕ ಕಲಿಸಿ ನಾಡಿನ ಪ್ರಮುಖ ಕೇಂದ್ರಗಳಲ್ಲಿ ಪ್ರದರ್ಶನ ನೀಡಿದ ನಿದರ್ಶನಗಳಿವೆ. ಆಗ ಒಬ್ಬ ಪತ್ರಕರ್ತ ಕೈದಿ ನಟನಿಗೆ ಪ್ರಶ್ನೆ ಮಾಡುತ್ತಾನೆ. ಮುಂದೆ ನಿನಗೆ ಶಿಕ್ಷೆ ಖಾಯಮ್ ಆಗಬಹುದು. ಈಗಲೇ ಏಕೆ ತಪ್ಪಿಸಿಕೊಳ್ಳಬಾರದು ಎಂದು. ನಾನು ತಪ್ಪಿಸಿಕೊಂಡು ಹೋದರೆ ನನ್ನ ಪಾತ್ರ ಮಾಡುವವರು ಯಾರು? ನಮ್ಮ ಸಂಘಟನೆಯ ಗೌರವಕ್ಕೆ ಚ್ಯುತಿ ಬರುವುದಿಲ್ಲವೇ? ರಂಗಭೂಮಿಗೆ ದ್ರೋಹ ಬಗೆದಂತೆ ಆಗುವುದಿಲ್ಲವೇ? ರಂಗಭೂಮಿ ನನಗೆ ಪಾಠ ಕಲಿಸಿದೆ. ಹಾಗಾಗಿ ಇಲ್ಲಿಂದ ತಪ್ಪಿಸಿಕೊಂಡು ಹೋಗುವುದಿಲ್ಲ ಎನ್ನುವನು. ಕೈದಿಯ ಮನಸ್ಸನ್ನೂ ಬದಲಿಸುವ ಶಕ್ತಿ ರಂಗಭೂಮಿಗೆ ಇದೆ ಎಂದು ಈ ನಿದರ್ಶನ ಸೂಚಿಸುತ್ತದೆ.
ಕಳೆದ ಒಂದು ವರ್ಷದಿಂದ ಕೊರೊನಾ ಎಲ್ಲ ಕ್ಷೇತ್ರದ ಜನರಿಗೆ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿದೆ. ಅದರಲ್ಲೂ ರಂಗಭೂಮಿಯವರು ಸಾಕಷ್ಟು ನೋವು ಅನುಭವಿಸಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ಆದರೂ ಎದೆಗುಂದದೆ ರಂಗಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ. ಶಿವಸಂಚಾರದ ಕಲಾವಿದರು ನವೆಂಬರ್, ಡಿಸೆಂಬರ್‍ನಲ್ಲಿ ಡೋಹರ ಕಕ್ಕಯ್ಯ',ಜೀವ ಇದ್ದರೆ ಜೀವನ’ ನಾಟಕ ಕಲಿತು ನಾಡಿನ ಹಲವೆಡೆ 75 ಪ್ರದರ್ಶನಗಳನ್ನು ಕೊಟ್ಟಿದ್ದಾರೆ. ಕೊರೊನಾ ಎರಡನೆಯ ಅಲೆಯ ಭಯದಿಂದ ಮುಂದಿನ ತಿಂಗಳಿಂದ ನಾಟಕ ನಿಲ್ಲಿಸುವ ಪರಿಸ್ಥಿತಿ ಬರಬಹುದು. ಆದರೂ ರಂಗಭೂಮಿ ಕಲಾವಿದರಲ್ಲಿ ಬದುಕುವ ಛಲ ಬೆಳೆಸಿದೆಯೇ ಹೊರತು ಆತ್ಮಹತ್ಯೆಗೆ ಶರಣಾಗುವ ಹೇಡಿತನವನ್ನಲ್ಲ.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೇಹಳ್ಳಿ-577515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಸೆಲ್: 9448395594

One thought on “ಜಾತಿ ನಿಗಮಗಳಿಂದ ಜನರ ಉದ್ಧಾರ ಸಾಧ್ಯವಿಲ್ಲ

  1. ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರಿ. ಧನ್ಯವಾದಗಳು.

Leave a Reply

Your email address will not be published. Required fields are marked *

error: Content is protected !!