`ಮನೋಬಲದ ಮಹಾಗೋಡೆ ನಿನ್ನಲ್ಲಿರಲು, ಭಯವೇತಕೆ ಬದುಕಿನ ಬಿರುಗಾಳಿಗೆ?

ಸಾಧಿಸುವ ಛಲಸವಿದ್ದರೆ ದಾರಿಗಳು ತಾವಾಗಿ ತೆರೆದುಕೊಳ್ಳುತ್ತವೆ

ಬ್ಯಾಡಗಿಯಲ್ಲಿ 10-4-2021ರಂದು ಸಾಧು ಲಿಂಗಾಯತ ಸಮುದಾಯದವರಿಂದ ಅರ್ಥಪೂರ್ಣ, ಅವಿಸ್ಮರಣೀಯ ಕಾರ್ಯಕ್ರಮ ನಡೆಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ, ನಿವೃತ್ತರಾಗಿರುವ ಕಿರಿಯರು, ಹಿರಿಯರು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮೊದಲು ವಯೋವೃದ್ಧ ಮಹಿಳೆಯರನ್ನು ಗೌರವಿಸಿದ್ದು ವಿಶೇಷ. ಭಾರತ ಇನ್ನೂ ತನ್ನ ಸಂಸ್ಕøತಿ ಉಳಿಸಿಕೊಂಡಿದ್ದರೆ ಅದಕ್ಕೆ ಕಾರಣ ತಾಯಂದಿರು. ಅವರ ಕಾರಣದಿಂದಾಗಿ ಎಷ್ಟೋ ಮನೆಗಳು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿವೆ. ಅಭಿವೃದ್ಧಿ ಎನ್ನುತ್ತಲೇ ಜನರ ಗಮನ ಹರಿಯುವುದು ಆರ್ಥಿಕ, ಭೌತಿಕ ಸಂಪತ್ತಿನ ಕಡೆಗೆ. ಇಂಥ ಅಭಿವೃದ್ಧಿಯನ್ನು ಯಾರು ಬೇಕಾದರೂ ಸಾಧಿಸಬಹುದು. ಅವರಿಗೆ ಧರ್ಮ, ನೀತಿ, ಸತ್ಯ, ಪ್ರಾಮಾಣಿಕತೆ, ಸಂಸ್ಕಾರ ಇಂಥ ಮೌಲ್ಯಗಳ ಅಗತ್ಯ ಇಲ್ಲ. ನಿಜವಾದ ಪ್ರಗತಿ ಕೇವಲ ಆರ್ಥಿಕ, ಭೌತಿಕ ಸುಸ್ಥಿತಿ ಅಲ್ಲ. ನೈತಿಕ, ಧಾರ್ಮಿಕ, ಸಾಂಸ್ಕøತಿಕ ಪ್ರಗತಿಯೇ ನಿಜವಾದ ಅಭಿವೃದ್ಧಿ. `ಇವತ್ತು ಯುವಪೀಳಿಗೆ ಗುರು-ಹಿರಿಯರಿಗೆ ನಮಸ್ಕಾರ ಮಾಡುವುದಿಲ್ಲ. ದಿನದ ಬಹುತೇಕ ಸಮಯವನ್ನು ಟಿವಿ, ಮೊಬೈಲ್ ನೋಡುವುದರಲ್ಲೇ ವ್ಯರ್ಥವಾಗಿ ಕಳೆಯುವರು. ಮೌಲ್ಯಗಳನ್ನು ಗಾಳಿಗೆ ತೂರುವರು. ಮಕ್ಕಳಿಗೆ ಮೊಬೈಲ್ ಕೊಡಿಸಲೇಬಾರದು’ ಎಂದು ಕೆಲವು ಹಿರಿಯರು ನೊಂದು ನುಡಿಯವರು. ಆದರೆ ಇಂದಿನ ಕೊರೊನಾ ಹಾವಳಿಯಲ್ಲಿ ಮಕ್ಕಳ ಕಲಿಕೆಗೆ ಮೊಬೈಲೇ ಆಧಾರ.

ಮೊಬೈಲ್ ಕೆಟ್ಟದ್ದಲ್ಲ. ಅದನ್ನು ಬಳಸುವ ವ್ಯಕ್ತಿಯ ಮನಸ್ಥಿತಿ ಹೇಗಿರಬೇಕು ಎನ್ನುವುದು ಮುಖ್ಯ. ವೈದ್ಯರ ಕೈಯಲ್ಲಿ ಒಂದು ಚಾಕು ಇರುತ್ತದೆ. ಅದೇ ರೀತಿ ಕಳವು, ಸುಲಿಗೆ, ಕೊಲೆ ಮಾಡುವ ವ್ಯಕ್ತಿಯ ಕೈಯಲ್ಲೂ ಚಾಕು ಇರುತ್ತದೆ. ಚಾಕು ಒಂದೇ ಆಗಿದ್ದರೂ ಅದನ್ನು ಬಳಸುವವರ ಉದ್ದೇಶ ಬೇರೆ ಬೇರೆ. ವೈದ್ಯ ಶಸ್ತ್ರಚಿಕಿತ್ಸೆಗೆ ಬಳಸಿದರೆ ಮತ್ತೊಬ್ಬ ಸ್ವಾರ್ಥ ಸಾಧನೆಗೆ ದುರ್ಬಳಕೆ ಮಾಡುವನು. ತಪ್ಪು ಚಾಕುವಿನದಲ್ಲ. ಅದನ್ನು ಬಳಸುವ ವ್ಯಕ್ತಿಯದು. ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಲೇಬಾರದು ಎನ್ನುವುದಕ್ಕಿಂತ ಹೇಗೆ ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುವ ಅರಿವನ್ನು ಮೂಡಿಸಬೇಕು. ಜೊತೆಗೆ ಉತ್ತಮ ಸಂಸ್ಕಾರ ನೀಡಿದಲ್ಲಿ ವ್ಯಕ್ತಿಗಳು ಸನ್ಮಾರ್ಗದಲ್ಲಿ ಸಾಗಿ ಆದರ್ಶ ಬದುಕನ್ನು ನಡೆಸುವರು. ಈ ದಿಶೆಯಲ್ಲಿ ಮನೆ, ಮಠ, ಸಮಾಜದ ಮೂಲಕ ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆಯುವಂತಾಗಬೇಕು. ವಿಷಾದದ ಸಂಗತಿ ಎಂದರೆ ಇಂದು ಸಂಸ್ಕಾರವಿಲ್ಲದ ಶಿಕ್ಷಣಕ್ಕೆ ಒತ್ತು ಕೊಡಲಾಗುತ್ತಿದೆ. ಅದರಿಂದಾಗಿ ಬುದ್ಧಿ ಬೆಳೆದರೂ ಹೃದಯ ಬರಡಾಗುವುದು. ಮಾನವೀಯ ಗುಣಗಳು ಮರೆಯಾಗಿ ಸ್ವಾರ್ಥಸಾಧನೆಯ ಗುಣಗಳು ವಿಜೃಂಭಿಸುವವು.
ಬ್ಯಾಡಗಿಯ ಸಮಾರಂಭದಲ್ಲಿ `ನಮ್ಮ ನಗರದಲ್ಲಿ 22 ಗುಂಟೆ ನಿವೇಶನವಿದ್ದು ಇಲ್ಲೊಂದು ಶಾಖಾ ಮಠ ಮಾಡಬೇಕೆಂದು ಬೇಡಿಕೆ ಸಲ್ಲಿಸಿದರು. ಆಗ ನಾವು ಹೇಳಿದ್ದು: ಇವತ್ತು ಮಠಗಳ ಅಗತ್ಯ ಇಲ್ಲ. ತುರ್ತಾಗಿ ಬೇಕಾಗಿರುವುದು ಬಸವಾದಿ ಶಿವಶರಣರು ಆರಂಭಿಸಿದ `ಅನುಭವಮಂಟಪ ಮತ್ತು ಮಹಾಮನೆ’. ಭಕ್ತರ ಮನೆಗಳೇ ಮಠಗಳಾಗಬೇಕು ಎಂದಿದ್ದರು ಶರಣರು. ಅಂದರೆ ಮಠದಲ್ಲಿ ನಡೆಯುವ ಪುಣ್ಯಕಾರ್ಯಗಳು ಪ್ರತಿಯೊಂದು ಮನೆಯಲ್ಲೂ ನಡೆಯಬೇಕು ಎಂದರ್ಥ. ಇವತ್ತು ಅನೇಕ ಮಠಗಳೇ ರಾಜಕೀಯ ತಾಣಗಳಾಗುತ್ತಿವೆ. ಅಲ್ಲಿ ಧಾರ್ಮಿಕ, ಸಾಹಿತ್ಯಕ, ಸಾಂಸ್ಕøತಿಕ ಸೇವೆಗಿಂತ ಆರ್ಥಿಕ, ವ್ಯಾವಹಾರಿ ಚಟುವಟಿಕೆಗಳೇ ಪ್ರಧಾನವಾಗುತ್ತಲಿವೆ. ಹಾಗಾಗಿ ಭಕ್ತರ ಮನೆಗಳು ಧಾರ್ಮಿಕ, ಸಾಹಿತ್ಯಕ, ಸಾಂಸ್ಕøತಿಕ ಸೇವಾಕಾರ್ಯಗಳನ್ನು ಮಾಡುವ ಅನುಭವಮಂಟಪ ಮತ್ತು ಮಹಾಮನೆಗಳಾಗಿ ಬದಲಾಗುವ ಅಗತ್ಯ ಎಂದಿಗಿಂತಲೂ ಇಂದು ಹೆಚ್ಚಾಗಿದೆ. 22 ಗುಂಟೆ ನಿವೇಶನದಲ್ಲಿ ಮಠದ ಬದಲು ಅನುಭವಮಂಟಪ, ಮಹಾಮನೆಯ ನಿರ್ಮಾಣ ಆಗಬೇಕು. ಅಲ್ಲಿ ಅನ್ನದಾಸೋಹ, ಜ್ಞಾನದಾಸೋಹ, ಧರ್ಮ ದಾಸೋಹ ನಡೆಯಬೇಕು. ತಾಲ್ಲೂಕಿನ ಜನರು ತಿಂಗಳಿಗೆ ಒಮ್ಮೆಯಾದರೂ ಸೇರಿ ಶರಣರ ವಿಚಾರಗಳ ಚಿಂತನ ಮಂಥನದ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಕಾರ್ಯ ಮಾಡಬೇಕು. ನಗರದ ನಾಗರಿಕರು ವಾರಕ್ಕೊಮ್ಮೆ ಧಾರ್ಮಿಕ ಚಿಂತನೆಯ ಜೊತೆಗೆ ಮಕ್ಕಳಿಗೆ ನಮ್ಮ ಧರ್ಮ, ಸಂಸ್ಕøತಿಯ ಪರಿಚಯ ಮಾಡಿಕೊಡಬೇಕು. ಧಾರ್ಮಿಕ ಸಂಸ್ಕಾರ ಬಹುಮುಖ್ಯವಾದುದು.

ಸಂಸ್ಕಾರ ಎಂದರೆ ಲಿಂಗಾಯತ ಧರ್ಮದ ಅಷ್ಟಾವರಣ, ಪಂಚಾಚಾರ, ಷಟ್‍ಸ್ಥಲಗಳ ಅರಿವು ಮೂಡಿಸುವುದು. ಜೊತೆಗೆ ಇಷ್ಟಲಿಂಗ ದೀಕ್ಷೆಯ ಮೂಲಕ ಅವರು ಸತ್ಪಥದಲ್ಲಿ ನಡೆಯಲು ಬೇಕಾದ ಮಾರ್ಗದರ್ಶನ ಮಾಡುವುದು. ವಿಭೂತಿ, ಇಷ್ಟಲಿಂಗ, ರುದ್ರಾಕ್ಷಿ ಇವುಗಳ ಪರಿಚಯವಾದರೂ ನಮ್ಮ ಪೀಳಿಗೆಗೆ ಬೇಕು. ಹಣೆಯ ಮೇಲೆ ವಿಭೂತಿ ರಾರಾಜಿಸುತ್ತಿದ್ದರೆ, ಇಷ್ಟಲಿಂಗ ಪೂಜೆ ಮಾಡಿಕೊಳ್ಳುತ್ತಿದ್ದರೆ ಆತ ಇಡೀ ಸಮಾಜವನ್ನೇ ನಡೆಲಿಂಗ, ನುಡಿಲಿಂಗ, ಜಂಗಮಲಿಂಗವಾಗಿ ಕಾಣಲು ಸಾಧ್ಯ. ಇಂಥ ಸಂಸ್ಕಾರ ಇಲ್ಲಿಯ ಅನುಭವಮಂಟಪದಲ್ಲಿ ಆಗಾಗ ನಡೆಯುತ್ತಿರಬೇಕು. ಇಂದು ಜನರಿಗೆ ಆರ್ಥಿಕ ಸಂಪತ್ತಿನ ಕೊರತೆ ಅಷ್ಟೇನೂ ಇಲ್ಲ. ಕಾರಣ ಎಲ್ಲರೂ ಕೃಷಿ, ವ್ಯಾಪಾರ, ಉದ್ಯೋಗ ಹೀಗೆ ಒಂದಿಲ್ಲೊಂದು ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಆದಾಯವನ್ನೂ ಪಡೆಯುತ್ತಿದ್ದಾರೆ. ಆದರೆ ಆದಾಯ ಪಡೆಯುವುದಷ್ಟೇ ಮುಖ್ಯವಲ್ಲ. ಅದು ಶತ್ಯಶುದ್ಧ ಕಾಯಕದಿಂದ ಬರಬೇಕು. ಕಾಯಕದಿಂದ ಬಂದ ಆದಾಯದ ಸ್ವಲ್ಪ ಭಾಗವನ್ನು ಸಮಾಜದ ಒಳಿತಿನ ಕಾರ್ಯಗಳಿಗೆ ವಿನಿಯೋಗಿಸಬೇಕು. ಶರಣರು ದುಡಿಮೆಗೆ `ಕಾಯಕ’ವೆಂದು, ಒಳಿತಿನ ಕಾರ್ಯಗಳಿಗೆ ಕೊಡುವುದನ್ನು `ದಾಸೋಹ’ ಎಂದು ಕರೆದಿದ್ದಾರೆ. ಹಿರಿಯರು ತಮಗರಿವಿಲ್ಲದೆ ಕಾಯಕ ಶ್ರದ್ಧೆ, ದಾಸೋಹ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ಕಾಯಕ, ದಾಸೋಹ, ಇಷ್ಟಲಿಂಗಪೂಜೆ ಈ ತತ್ವಗಳು ಲಿಂಗಾಯತ ಧರ್ಮದ ಅವಿಭಾಜ್ಯ ಅಂಗಗಳು.

ಬಸವಣ್ಣನವರಿಂದ ಬೆಳಕಿಗೆ ಬಂದದ್ದು `ಲಿಂಗಾಯತ’ ಧರ್ಮ. ಅವರೇ ಈ ಧರ್ಮದ ಗುರುಗಳು. ಹಾಗಂತ ಅವರು ಯಾವುದೇ ಮಠ ಸ್ಥಾಪಿಸಲಿಲ್ಲ. ಮಠದ ಗುರು-ಜಗದ್ಗುರು ಆಗಿರಲಿಲ್ಲ. ಗೃಹಸ್ಥರಾಗಿ ಒಬ್ಬ ಸಂತರಿಗಿಂತ ಶ್ರೇಷ್ಠ ಬದುಕನ್ನು ಸಾಗಿಸಿದವರು. ಹಾಗಾಗಿ ಅನುಭಾವಿ ಅಲ್ಲಮಪ್ರಭುದೇವರು `ಬಸವಣ್ಣ ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು‘ ಎಂದು ಗೌರವಿಸಿದ್ದಾರೆ. ಸಮಾಜಬಾಂಧವರಿಗೆ ಕೆಲವು ವಿಚಾರಗಳಲ್ಲಿ ಸ್ಪಷ್ಟತೆ ಇರಬೇಕು. ಅಂದರೆ ನಮ್ಮದು `ಲಿಂಗಾಯತ ಧರ್ಮ’. ಈ ಧರ್ಮದ ಗುರು `ಬಸವಣ್ಣನವರು’. ಅವರು ಕರುಣಿಸಿದ್ದು `ಇಷ್ಟಲಿಂಗ’ವನ್ನು. ಬಸವಾದಿ ಶಿವಸರಣರ ವಚನ ಸಾಹಿತ್ಯವೇ ನಮ್ಮ ಧರ್ಮ ಗ್ರಂಥ. ನಾವಿರುವ ತಾಣವೇ ನಮ್ಮ ಪುಣ್ಯ ಕ್ಷೇತ್ರ. ಇದನ್ನರಿಯದೆ ಪುಣ್ಯ ಕ್ಷೇತ್ರಗಳೆಂದು ಎಲ್ಲೆಲ್ಲಿಗೂ ಹೋಗಬೇಕಾಗಿಲ್ಲ. ನಾವು ಕಾಯಕ ಮಾಡುವ ತಾಣಗಳೇ ನಮ್ಮ ಪುಣ್ಯ ಕ್ಷೇತ್ರಗಳು ಎನ್ನುವ ಬದ್ಧತೆ ಇರಬೇಕು. ವೈಜ್ಞಾನಿಕ ಧರ್ಮವನ್ನು ಬಸವಾದಿ ಶಿವಶರಣರು ಕರುಣಿಸಿದ್ದರೂ ಅನೇಕ ಲಿಂಗವಂತರಿಗೆ ಆ ಅರಿವು ಇಲ್ಲ. ಹಾಗಾಗಿ ತಿರುಪತಿ, ಧರ್ಮಸ್ಥಳ, ಅಯ್ಯಪ್ಪಸ್ವಾಮಿ ಎಂದು ಎಲ್ಲೆಲ್ಲೋ ಹೋಗುವರು. ಲಿಂಗವಂತರು ಯಾವ ಸ್ಥಾವರ ದೇವಾಲಯ, ತೀರ್ಥಕ್ಷೇತ್ರಗಳನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. ಅವರಿಗೆ ದೇಹವೇ ದೇವಾಲಯ. ಶಿರವೇ ಹೊನ್ನ ಕಳಸ. ಗುಡಿಗೆ ಹೋಗುವುದು, ಗುಡಿ ಕಟ್ಟುವುದು ಲಿಂಗಾಯತ ಧರ್ಮದ ಸಂಸ್ಕøತಿ ಅಲ್ಲ.

ದೇಹ ದೇವಾಲಯ ಎನ್ನುವ ಕಲ್ಪನೆ ಬಂದಾಗ ಅದರ ಪಾವಿತ್ರ್ಯತೆ ಕಾಯ್ದುಕೊಳ್ಳಲು ಸಾಧ್ಯ. ಆಗ ಸುಳ್ಳು, ಮೋಸ, ಭ್ರಷ್ಟಾಚಾರ, ಮದ್ಯಪಾನ, ವ್ಯಭಿಚಾರ ಇತ್ಯಾದಿ ಅನಾಚಾರಗಳಿಗೆ ಅವಕಾಶವೇ ಇರುವುದಿಲ್ಲ. ಕಾರಣ ಈ ದೇಹ ದೇವರನ್ನು ಒಲಿಸಲು ಬಂದಿರುವ ಪ್ರಸಾದ ಕಾಯ. ವ್ಯಕ್ತಿಗತ ಶುದ್ಧಿಯೇ ಸಾಮಾಜಿಕ ಶುದ್ಧಿಗೂ ತಾರಕ ಮಂತ್ರ. ಇಂಥ ಧರ್ಮದ ಪರಿಚಯವನ್ನು ಜನರಿಗೆ ಮಾಡಿಕೊಡಬೇಕಾಗಿದೆ. ಇದಕ್ಕಾಗಿ ಎಲ್ಲೆಡೆ ಅನುಭವಮಂಟಪದ ನಿರ್ಮಾಣವಾಗಬೇಕಾಗಿದೆ. ಅಲ್ಲಿ ಪ್ರಾರ್ಥನೆ, ಯೋಗ, ಲಿಂಗಪೂಜೆ, ಧಾರ್ಮಿಕ ಸಭೆಗಳು ನಡೆಯಲು ಬೇಕಾದ ವ್ಯವಸ್ಥೆ ಇರಬೇಕು. ಆಗ ಜನರನ್ನು ವಿಚಾರಶೀಲರನ್ನಾಗಿ, ವಿವೇಕವಂತರನ್ನಾಗಿ, ಕಾಯಕಶ್ರದ್ಧೆಯುಳ್ಳವರನ್ನಾಗಿ, ಸಾಮಾಜಿಕ ಕಳಕಳಿಯುಳ್ಳವರನ್ನಾಗಿ ಮಾಡಲು ಸಾಧ್ಯ. ಇಂಥ ಕಾರ್ಯ ಮಠಗಳಿಂದ ಇಂದಿನ ದಿನಮಾನಗಳಲ್ಲಿ ನಡೆಯುವುದು ತುಂಬಾ ವಿರಳ. ಹಾಗಾಗಿ ಮಠದ ವಿಚಾರ ಬಿಟ್ಟು ಅನುಭವಮಂಟಪದ ಚಿಂತನೆ ಎಲ್ಲರ ಮನದಲ್ಲಿ ನೆಲೆಗೊಳ್ಳುವಂತಾಗಬೇಕು. ಅನುಭವಮಂಟಪಕ್ಕೆ ಎಷ್ಟು ಜನರು ಬರುತ್ತಾರೆ ಎನ್ನುವುದು ಮುಖ್ಯವಲ್ಲ. ಬಂದವರಲ್ಲಿ ಎಷ್ಟು ಬದಲಾವಣೆ ಆಗಿದೆ ಎನ್ನುವುದು ಗಮನಾರ್ಹ. ಅನುಭವಮಂಟಪ ರಾಜಕೀಯ ಕೇಂದ್ರವಲ್ಲ. ಅದೊಂದು ಧಾರ್ಮಿಕ, ಸಾಂಸ್ಕøತಿಕ, ವೈಚಾರಿಕ ಕೇಂದ್ರ.

ರಾಜಕೀಯ ಸಮಾವೇಶಗಳಿಗೆ ಸಾಕಷ್ಟು ಜನರು ಸೇರುತ್ತಾರೆ. ಯಾವ ಪಕ್ಷದ ಸಮಾವೇಶವಾದರೂ ಅದೇ ಜನರೇ ಇರುತ್ತಾರೆ. ಅಲ್ಲಿ ಪಕ್ಷನಿಷ್ಠೆ, ವ್ಯಕ್ತಿನಿಷ್ಠೆಗಿಂತ ಹಣ, ಆಮಿಷ, ಜಾತಿ ಪ್ರಧಾನವಾಗುವುದು. ಅನುಭವಮಂಟಪ ಹಾಗಲ್ಲ. ಅದು ಗುಣಾತ್ಮಕ ವ್ಯಕ್ತಿತ್ವ ರೂಪಿಸುವಂತಹುದು. ಅಂದಿನ ಸಭೆಯಲ್ಲಿ ಮಧು ಕಾರಗಿ ಎನ್ನುವ ವಿದ್ಯಾರ್ಥಿನಿ ತಾನು ರಚಿಸಿದ `ಕನಸುಗಳ ಚೀಲ’ ಎನ್ನುವ ಕವನಸಂಕಲನ ಕೊಟ್ಟಳು. ಅಂದು ಅವಳು ಸಹ ಗೌರವಕ್ಕೆ ಭಾಜನಳಾಗಿದ್ದಳು. ಅವಳು ಮೂಕಿ. ಕಿವಿ ಕೇಳುವುದಿಲ್ಲ. ಆದರೂ ಕವನ ರಚಿಸುವ ಪ್ರತಿಭೆ ಇದೆ. ಬೆನ್ನುಡಿಯಲ್ಲಿ `ಸಾಧಿಸುವ ಹಂಬಲವಿದ್ದರೆ ದಾರಿಗಳು ತಾವಾಗಿಯೇ ತೆರೆದುಕೊಳ್ಳುತ್ತವೆ. ಹಂಬಲವೇ ಇಲ್ಲದಿದ್ದರೆ ಬರೀ ನೆಪಗಳು ಹುಟ್ಟಿಕೊಳ್ಳುತ್ತವೆ’ ಎನ್ನುವ ನುಡಿಗಳಿವೆ. ಈ ಮಹಿಳೆ ಐದನೆಯ ತರಗತಿಯಲ್ಲಿದ್ದಾಗಲೇ ಕಿವಿ ಕಿವುಡಾಗಿ ಮಾತು ಬರದಂತಾಯಿತು. ಆದರೂ ಧೈರ್ಯಗುಂದದೆ ತನ್ನ ಶಿಕ್ಷಣ ಮುಂದುವರಿಸಿ ಸಾಹಿತ್ಯಾಭಿರುಚಿ ಮೈಗೂಡಿಸಿಕೊಂಡ ಪರಿಣಾಮ ಅವಳ ಮೊದಲ ಕವನ ಸಂಕಲನ. ಕೃತಿಯಲ್ಲಿರುವ ಕೆಲವು ಕವನಗಳು ತುಂಬಾ ಪರಿಣಾಮಕಾರಿಯಾಗಿವೆ. ಅವುಗಳಲ್ಲೊಂದು `ಮನೋಬಲ’ ಎನ್ನುವ ಕವನ.

ಹಗಲಾಗಲಿ ಇರುಳಾಗಲಿ ಕೈ ಹಿಡಿದು ಕಾಪಾಡುವುದಲ್ಲವೇ ಬಾಳಲ್ಲಿ… ಸಾಧಿಸಲು ಬೇಕಾಗಿರುವುದು ಛಲ` ಎನ್ನುವ ಕವನದೊಳಗಿನ ಸಾಲುಗಳು ಮನೋಬಲ ಮೂಡಿಸುವಂತಿವೆ. ಮನೋಬಲ, ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಕಿವಿ ಕೇಳದ, ಮಾತು ಬಾರದ ವಿದ್ಯಾರ್ಥಿನಿ ತನ್ನ ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಛಲ ಬೆಳೆಸಿಕೊಂಡದ್ದರಿಂದ ಶಿಕ್ಷಣ ಪಡೆಯಲು, ಸಾಹಿತ್ಯ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಅವಳಿಗೆ ಸಾಧ್ಯವಾದುದು ಪಂಚೇಂದ್ರಿಯಗಳೂ ಚನ್ನಾಗಿರುವವರಿಂದ ಏಕೆ ಸಾಧ್ಯವಿಲ್ಲ ಎನ್ನುವ ಪ್ರಶ್ನೆಯನ್ನು ಹಾಕಿಕೊಳ್ಳಬೇಕು. ಮಕ್ಕಳು ದಡ್ಡರೆಂದು ತಲೆಯ ಮೇಲೆ ತಟ್ಟದೆ ಅವರಿಗೆ ಪ್ರೀತಿ ತೋರಿಸಿ ಸಾಧಿಸುವ ಛಲ ಮೂಡಿಸುವ ಕಾರ್ಯವನ್ನು ಮನೆಯ ಹಿರಿಯರು ಮಾಡಬೇಕು. ನ್ಯಾಯಾಲಯ, ವೈದ್ಯಕೀಯ, ಶಿಕ್ಷಣ, ಕೃಷಿ, ವ್ಯಾಪಾರ, ಸೇನೆ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿವೃತ್ತ ಮತ್ತು ಪ್ರವೃತ್ತರ ಜೊತೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬ್ಯಾಡಗಿಯಲ್ಲಿ ಗೌರವಿಸಿದ್ದು ಅನುಕರಣೀಯ. ಆ ಗೌರವ ಅವರಿಗಾಗಿ ಅಲ್ಲ; ಅವರಿಂದ ಇತರರು ಸ್ಪೂರ್ತಿ ಪಡೆಯಬೇಕು ಎನ್ನುವುದಕ್ಕಾಗಿ. ಒಟ್ಟಾರೆ ಯಾವುದೇ ಕ್ಷೇತ್ರದಲ್ಲಿದ್ದರೂ ಮೌಲ್ಯಗಳನ್ನು ಉಳಿಸಿಕೊಂಡು ನಿಜಮಾನವರಾಗಿ ಬಾಳುತ್ತಿದ್ದರೆ ವ್ಯಕ್ತಿ ತಾನೂ ಬೆಳೆದು ಸಮಾಜವನ್ನೂ ಬೆಳೆಸಲು ಸಾಧ್ಯವಾಗುವುದು. ಅದು ಸಾಧ್ಯವಾಗುವುದು ಸ್ವಾರ್ಥದ ಗೋಡೆಯನ್ನು ಕೆಡವಿದಾಗ. ಅಹಂಕಾರವೇ ಎಲ್ಲ ಅವನತಿಗೆ ಕಾರಣ. `ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ’ ಎಂದು ಎಂದು ಬಸವಣ್ಣನವರು ಅಂದೇ ಎಚ್ಚರಿಸಿದ್ದರು. ಹಾಗೆ ಸಮಾಜಬಾಂಧವರು ಮಾಡಿದೆ, ನೀಡಿದೆ ಎನ್ನುವ ಅಹಂಕಾರ ಕಿತ್ತೆಸೆದು ಒಂದಾಗಿ ಬಾಳುವಂತಾಗಬೇಕು. ಆಗಲೇ ಆತ್ಮಕಲ್ಯಾಣ, ಲೋಕಕಲ್ಯಾಣ ಸಾಧ್ಯ.

 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೇಹಳ್ಳಿ-577515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಸೆಲ್: 9448395594

Leave a Reply

Your email address will not be published. Required fields are marked *

error: Content is protected !!