ಬೇಡುವಾತ ಜಂಗಮನಲ್ಲ, ಬೇಡಿಸಿಕೊಂಬಾತ ಭಕ್ತನಲ್ಲ

ಬೇಡುವಾತ ಜಂಗಮನಲ್ಲ, ಬೇಡಿಸಿಕೊಂಬಾತ ಭಕ್ತನಲ್ಲ

ಎಷ್ಟೋ ಶಬ್ದಗಳ ನಿಜಾರ್ಥ ತಿಳಿಯದೆ ಒಂದೇರೀತಿ ಬಳಸುವುದುಂಟು. ದಾಸೋಹ',ದಾನ’ ಶಬ್ದಗಳನ್ನೇ ತೆಗೆದುಕೊಳ್ಳಿ. ಹೆಚ್ಚು ಬಳಕೆಯಲ್ಲಿರುವುದು ದಾನ ಶಬ್ದ. ಬಸವಾದಿ ಶಿವಶರಣರ ತಾತ್ವಿಕ ನೆಲೆಯನ್ನು ಬಲ್ಲವರು ಬಳಸುವುದು ದಾಸೋಹ ಶಬ್ದವನ್ನು. ದಾನ, ದಾಸೋಹ ಸಮಾನ ಅರ್ಥವುಳ್ಳ ಶಬ್ದಗಳೆನಿಸಿದರೂ ಅವುಗಳ ಅರ್ಥ ಬೇರೆ ಬೇರೆ. ದೇಣಿಗೆ ಕೊಡುವುದಕ್ಕೆ ದಾನ ಎನ್ನುವರು. ಇಂಥವರ ದಾನದಿಂದ ಕೆರೆ, ದೇವಸ್ಥಾನ, ಶಾಲಾ ಕಟ್ಟಡ ಕಟ್ಟಿಸಲಾಗಿದೆ. ಅವರು ದಾನ ಚಿಂತಾಮಣಿ. ಅವರು ಮಾಡಿದ ದಾನದ ದ್ಯೋತಕವಾಗಿ ಅವರ ಹೆಸರಿನ ಫಲಕಗಳು ಎಲ್ಲ ಕಡೆಗೆ ಕಾಣಿಸಿಕೊಳ್ಳುತ್ತವೆ ಎನ್ನುವುದುಂಟು. ಆದರೆ ದಾನವೀಯುವ ಶಕ್ತಿ ಮಾನವರಿಗೆ ಇಲ್ಲ ಎನ್ನುವುದು ಶರಣರ ಅಭಿಪ್ರಾಯ. ಇದಕ್ಕೆ ಪೂರಕವಾಗಿ ಜೇಡರ ದಾಸಿಮಯ್ಯನವರ ವಚನವನ್ನು ನೋಡಬಹುದು.

ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
ಸುಳಿದು ಸೂಸುವ ವಾಯು ನಿಮ್ಮ ದಾನ
ಇಂತೀ ನಿಮ್ಮ ದಾನವನುಂಡು
ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥ.

ಭೂಮಿ, ಭೂಮಿಯ ಮೇಲೆ ಬೆಳೆಯುವ ಆಹಾರಧಾನ್ಯಗಳು, ಜೀವಜಂತುಗಳ ಬದುಕಿಗೆ ಕಾರಣವಾಗಿರುವ ಮಳೆ, ಗಾಳಿ, ಬೆಳಕು ಇವೆಲ್ಲವೂ ದೇವರ ದೇಣಿಗೆಗಳು. ದೇವರು ಇವುಗಳನ್ನು ಕರುಣಿಸದಿದ್ದರೆ ಮಾನವ ಬೆಳೆ ತೆಗೆಯಲು, ದಾನ ಮಾಡಲು ಸಾಧ್ಯವಾಗುತ್ತಿರಲಿಲ್ಲ. ದೇವರಿಂದ ಬಂದದ್ದು ದಾನ. ಅಂಥ ದಾನ ಬಳಸಿಕೊಂಡು ಕಾಯಕಶೀಲನಾಗಿ ತನ್ನ ಬದುಕನ್ನು ಸಾರ್ಥಕಪಡಿಸಿಕೊಂಡು ಸಮಾಜದ ಒಳಿತಿನ ಕಾರ್ಯಗಳಿಗೆ ಫಲಾಪೇಕ್ಷೆ ಇಲ್ಲದೆ ಕೊಡುವುದು ದಾಸೋಹ. ದಾನ ಕೊಡುವ ಶಕ್ತಿ ದೇವರದು. ದಾಸೋಹ ಮಾಡುವ ಜವಾಬ್ದಾರಿ ಮಾನವರದು. ದೇವರೇ ದಾನ ನೀಡದಿದ್ದರೆ ಮಾನವ ದಾಸೋಹ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಮಾನವ ಕೃತಜ್ಞನಾಗಿರಬೇಕಾದ್ದು ದೇವರಿಗೆ. ಈ ಅರಿವು ಬಂದರೆ ಮಾನವನಲ್ಲಿರುವ ಹಮ್ಮು, ಬಿಮ್ಮು, ಬಿಗುಮಾನಗಳು ಮಂಜಿನಂತೆ ಕರಗುವವು. ಅದಕ್ಕಾಗಿಯೇ ದಾಸಿಮಯ್ಯನವರು ದೇವರ ದಾನವನುಂಡು ಇನ್ನೊಬ್ಬರನ್ನು ಹೊಗಳುವವರನ್ನು ಕುನ್ನಿಗಳೆಂದು ಹೀಗಳೆದಿದ್ದಾರೆ.

ಇವತ್ತು ಸಮಾಜದಲ್ಲಿ ದಾನಿಗಳು ಹೆಚ್ಚುತ್ತಿದ್ದಾರೆಯೇ ಹೊರತು ದಾಸೋಹಿಗಳಲ್ಲ. ದಾನ ಕೊಡುವವನಲ್ಲಿ `ನಾನು’ ಎನ್ನುವ ಅಹಂ ಇರಬಹುದು. ದಾನ ಪಡೆಯುವವನಲ್ಲಿ ಏನೋ ಸಂಕೋಚ, ಮುಜುಗರ, ಕೀಳರಿಮೆ ಬರಬಹುದು. ಕೊಡುವವನ ಕೈ ಮೇಲಾದರೆ ಪಡೆಯುವವನ ಕೈ ಕೆಳಗಿದ್ದು ಮುಜುಗರಕ್ಕೊಳಗಾಗಬಹುದು. ದಾನದ ಬದಲು ದಾಸೋಹ ಭಾವ ಬಲಗೊಂಡರೆ ಅಹಂ, ಮುಜುಗರ ಈ ಎರಡೂ ಭಾವನೆಗಳಿಗೆ ಅವಕಾಶ ಇರುವುದಿಲ್ಲ. ದಾನಿಗೆ ನಾನು ಕೊಡುವವ ಎನ್ನುವ ಅಹಂ ಇರುವುದಿಲ್ಲ. ಪಡೆಯುವವನಲ್ಲಿ ಮುಜುಗರ ಕಾಣಿಸಿಕೊಳ್ಳುವುದಿಲ್ಲ. ಈ ನೆಲೆಯಲ್ಲಿ ಇವತ್ತಿಗೂ ದಾಸೋಹ ಪ್ರಜ್ಞೆಯುಳ್ಳವರು ಸಾಕಷ್ಟು ಜನರಿದ್ದಾರೆ. ಅವರಿಗೆ ದಾನ, ದಾಸೋಹ ಶಬ್ದಗಳು ಗೊತ್ತಿಲ್ಲದಿರಬಹುದು. ಆದರೂ ದುಡಿಮೆಯ ಪ್ರತಿಫಲವನ್ನು ಸತ್ಕಾರ್ಯಗಳಿಗೆ ಕೊಡುವ ಭಾವನೆ ಇರುತ್ತದೆ. ಇದಕ್ಕೆ ಬೇಕಾದಷ್ಟು ನಿದರ್ಶನಗಳನ್ನು ಕೊಡಬಹುದು.

ಮೂರು ನಾಲ್ಕು ದಿನಗಳ ಹಿಂದೆ ನಡೆದ ಘಟನೆ. ಬೆಂಗಳೂರಿನ ಕೃಷ್ಣಪ್ಪ ಮತ್ತು ಅವರ ಇಬ್ಬರು ಮಕ್ಕಳು ನಮ್ಮಲ್ಲಿಗೆ ಬಂದಿದ್ದರು. ಕೃಷ್ಣಪ್ಪನವರ ಕೃಶವಾದ ಶರೀರ, ತೊಟ್ಟಿದ್ದ ಲುಂಗಿಪಂಚೆ, ಮಾಸಿದ ಬಟ್ಟೆ, ಮಾತಿನ ರೀತಿ ಗಮನಿಸಿ ಏನೋ ಸಂಕಷ್ಟದಲ್ಲಿ ಸಿಲುಕಿದ್ದು ನಮ್ಮಿಂದ ಸಹಾಯ ಬಯಸಿ ಬಂದಿರಬೇಕು ಅನಿಸಿತು. ಯಾರು ನೀವು? ಏಕೆ ಬಂದಿದ್ದೀರಿ ಎನ್ನುವ ಪ್ರಶ್ನೆಗೆ ಕೃಷ್ಣಪ್ಪ ಹೇಳಿದ್ದು: ಬುದ್ಧಿ ಇಲ್ಲೇ ಸಮೀಪದ ಒಂದು ಮದುವೆಗೆ ಬಂದಿದ್ದೆವು. ಮಠ ಹತ್ತಿರದಲ್ಲೇ ಇದೆ. ಗುರುಗಳಿದ್ದರೆ ದರ್ಶನ ಪಡೆದು ಕಾಣಿಕೆ ಸಲ್ಲಿಸಿ ಬರಬೇಕೆನಿಸಿ ಬಂದೆವು. ಕಾಣಿಕೆ ಕೊಡಬಹುದೇ ಎಂದು ವಿನೀತರಾಗಿ ಕೇಳಿದರು. ಸಾಮಾನ್ಯವಾಗಿ ನಮ್ಮಲ್ಲಿಗೆ ಯಾರೂ ಬರಿಗೈಲಿ ಬರುವುದಿಲ್ಲ. ತಮ್ಮ ಜೇಬಿನಿಂದ ಹಣ ತೆಗೆದು ನಮ್ಮ ಕಾಣಿಕೆಯ ಪುಟ್ಟಿಗೆ ಹಾಕುವರು. ಅವರೂ ಹಾಗೆ ಮಾಡಬಹುದೆಂದು ಕೊಡಿ ಎಂದೆವು. ಕೃಷ್ಣಪ್ಪನವರು ಹೊರಗೆ ಹೋಗಿ ಒಂದು ಪೇಪರ್‍ನಲ್ಲಿ ಸುತ್ತಿದ್ದ ನೋಟುಗಳ ಕಂತೆಯನ್ನು ತಂದು ನಮ್ಮ ಮುಂದಿಟ್ಟರು. ಇಷ್ಟೊಂದು ಹಣ ಏಕೆ? ಏನಾದರೂ ಹರಕೆ ಇದೆಯೇ ಎಂದಾಗ ಇಲ್ಲ; ತಮ್ಮ ಪಾದಕ್ಕೆ ಅರ್ಪಿಸಲೆಂದೇ ಬಂದೆವು ಎಂದು ನಮಸ್ಕರಿಸಿ ಹೊರಟು ಹೋದರು. ನಂತರ ನೋಡಿದರೆ 500 ರೂಪಾಯಿಗಳ ಕಟ್ಟು. ಅದರಲ್ಲಿದ್ದುದು 50 ಸಾವಿರ.

ಕೃಷ್ಣಪ್ಪ ಅಥವಾ ಅವರ ಮಕ್ಕಳ ಪರಿಚಯ ನಮಗಿಲ್ಲ. ಈ ಹಿಂದೆ ಅವರನ್ನು ನೋಡಿಲ್ಲ. ಅವರೂ ನಮ್ಮನ್ನು ನೋಡಿರಲಾರರು. ಆದರೆ ತಮ್ಮ ದುಡಿಮೆಯಿಂದ ಬಂದದ್ದರಲ್ಲಿ ಮಠಕ್ಕೆ ಸ್ವಲ್ಪ ಕೊಡಬೇಕು ಎನ್ನುವ ಅವರ ಹೃದಯ ವೈಶಾಲ್ಯತೆ ಕಾಯಕ, ದಾಸೋಹ ಪ್ರಜ್ಞೆಗೆ ಸಾಕ್ಷಿ ಎನಿಸಿತು. ಹಿಂದೆಯೂ ಈ ರೀತಿ ಮಠಕ್ಕೆ ಕಾಣಿಕೆ ನೀಡಿದವರಿದ್ದಾರೆ. ಅವರಲ್ಲಿ ಬಹುತೇಕ ಜನರು ನಮಗೆ ಪರಿಚಿತರು. ಶ್ರೀಮಠದ ಸೇವಾಕಾರ್ಯಗಳಿಗೆ ನೆರವಾಗಲಿ ಎನ್ನುವ ಸದಿಚ್ಛೆ ಅಥವಾ ಯಾರದೋ ಒತ್ತಾಯದಿಂದ ಕೊಟ್ಟವರು. ಕೊಡುವಾಗಲೇ ನಮ್ಮ ತಂದೆ ತಾಯಿಗಳ ಹೆಸರನ್ನು ಕಟ್ಟಡದ ಫಲಕದಲ್ಲಿ ಹಾಕಬೇಕೆಂದು ಕೇಳಿಕೊಳ್ಳುವರು. ಮುಂದೊಂದು ದಿನ ಅವರು ಮಠಕ್ಕೆ ಬಂದಾಗ ಬೇರೆಯವರ ಹೆಸರನ್ನು ನೋಡಿ ಬುದ್ಧಿ ನಮ್ಮ ತಂದೆ ತಾಯಿಗಳ ಹೆಸರನ್ನೇಕೆ ಹಾಕಿಲ್ಲ ಎಂದು ಪ್ರಶ್ನಿಸುವರು. ಅದು ತಪ್ಪಲ್ಲ. ಯಾರು ಏನೇ ಕೊಟ್ಟರೂ ದಾಖಲೆ ಇರಬೇಕು. ಇಲ್ಲದಿದ್ದರೆ ಕೊಟ್ಟದ್ದು ದುರುಪಯೋಗವಾಗಬಹುದು. ಎಷ್ಟೋ ಜನರು ಮತ್ತು ಮಠದವರು ಲೆಕ್ಕ ಬರೆಯುವುದು ಅಪರೂಪ. ಬಂದದ್ದೆಲ್ಲ ಖರ್ಚಾಗಿದೆ ಎನ್ನುವರು. ಇದು ಅವರ ಬೇಜವಾಬ್ದಾರಿಗೆ ಸಾಕ್ಷಿ.

ಶರಣರ ತಾತ್ವಿಕ ನೆಲೆಯಲ್ಲಿ ಕಾಯಕ ಮತ್ತು ದಾಸೋಹ ಪ್ರಜ್ಞೆ ಬೆಳೆದಲ್ಲಿ ಕೊಡುವವರು ಇರುತ್ತಾರೆಯೇ ಹೊರತು ಬೇಡುವವರು ಇರುವುದಿಲ್ಲ. ಶರಣರು ಅನುಭವಮಂಟಪದ ಮೂಲಕ ಅದರ ಸದಸ್ಯರಲ್ಲಿ ಕಾಯಕ ಮತ್ತು ದಾಸೋಹ ಪ್ರಜ್ಞೆ ಬೆಳೆಸಿದ್ದರು. ಅದರಿಂದಾಗಿ ಬಿಜ್ಜಳನ ಭಂಡಾರ ಸದಾ ತುಂಬಿರುತ್ತಿತ್ತು. ಅಲ್ಲಿ ಕೊಡುವ ಜನರಿದ್ದರೇ ಹೊರತು ಬೇಡುವವರು ಇರಲಿಲ್ಲ. ಇದಕ್ಕೆ ಸಾಕ್ಷಿ ಬಡವಾದೆನಯ್ಯಾ ಎನ್ನ ತನು ಮನ ಧನವ ಬೇಡುವರಿಲ್ಲದೆ',ಆನೆ, ಭಂಡಾರ, ಲಾಯದ ಕುದುರೆಯ ಬೇಡುವರಿಲ್ಲದೆ ಬಡವಾದೆನಯ್ಯಾ’ ಎನ್ನುವ ಬಸವಣ್ಣನವರ ವಚನದ ಸಾಲುಗಳು. ಅವರೇ ಮತ್ತೊಂದೆಡೆ ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ, ಬೇಡು, ಬೇಡೆಲೆ ಹಂದೆ. ಕಣ್ಣ ಬೇಡಿದಡೀವೆ, ತಲೆಯ ಬೇಡಿದಡೀವೆ, ಕೂಡಲಸಂಗಮದೇವಾ, ನಿಮಗಿತ್ತು ಶುದ್ಧನಾಗಿಪ್ಪೆ, ನಿಮ್ಮ ಪುರಾತರ ಮನೆಯಲ್ಲಿ' ಎನ್ನುವರು. ಇಂಥ ಎಚ್ಚರ ಇದ್ದರೆ ಕಾಯಕಶೀಲರೇ ಹೆಚ್ಚಾಗಿ - ಬೇಡುವವರು ಇಲ್ಲವಾಗುವರು. ಶರಣರು ಮನೆಯಿಂದ ಬಡವರಾಗಿರಬಹುದು; ಮನಸ್ಸಿನಿಂದ ಅಲ್ಲ. ಅದಕ್ಕಾಗಿಯೇ ಬಸವಣ್ಣನವರುಮನೆ ನೋಡಾ ಬಡವರು: ಮನ ನೋಡಾ ಘನ’ ಎಂದಿದ್ದಾರೆ.

ಶರಣರು ಧನದಲ್ಲಿ ಶುಚಿಯಾಗಿದ್ದರು. ಕಾಯಕದಿಂದ ಬಂದುದು ಮಾತ್ರ ಸ್ವೀಕಾರಾರ್ಹ ಎನ್ನುವ ತತ್ವಬದ್ಧತೆ ಅವರಲ್ಲಿತ್ತು. ಅವರು ಒಳ-ಹೊರಗೆ ಶುಚಿಯಾಗಿದ್ದರು. ಶುಚಿತ್ವವೇ ದೇವರನ್ನು ಒಲಿಸುವ ದಾರಿ. ಇಂಥ ವಿಶ್ವಾಸವಿದ್ದಾಗ ಎಲ್ಲ ಜನರೂ ಮನಘನ ಸಂಪನ್ನರಾಗಿ, ಅಂತರಂಗ-ಬಹಿರಂಗ ಶುದ್ಧಿಯನ್ನು ಕಾಯ್ದುಕೊಂಡು, ಕಾಯಕ-ದಾಸೋಹ ಪ್ರಜ್ಞೆಯುಳ್ಳವರಾಗಿ ಬಾಳುವರು. ಆಗ ಕಲ್ಯಾಣರಾಜ್ಯ ನೆಲೆಗೊಳ್ಳುವುದು. ಈ ನೆಲೆಯಲ್ಲಿ ಆಯ್ದಕ್ಕಿ ಲಕ್ಕಮ್ಮ ದಂಪತಿಗಳು, ಮೋಳಿಗೆ ಮಾರಯ್ಯ ದಂಪತಿಗಳು, ಉರಿಲಿಂಗಪೆದ್ದಿ ದಂಪತಿಗಳು, ಸತ್ಯಕ್ಕ, ನುಲಿಯ ಚಂದಯ್ಯ ಮುಂತಾದ ಶರಣ ಶರಣಿಯರು ಅನುಕರಣೀಯರಾಗಿದ್ದಾರೆ. ಅಂಥವರ ಸಂತತಿ ಸಾವಿರ ಸಾವಿರವಾಗಬೇಕು. ಶರಣರು ಜಾರಿಯಲ್ಲಿ ತಂದ ಮತ್ತೆರಡು ಶಬ್ದಗಳು: ಜಂಗಮ ಮತ್ತು ಭಕ್ತ. ಜಂಗಮ ಎಂದರೆ ಅರಿವು, ಆಚಾರವುಳ್ಳ ಅನುಭಾವಿಯಾಗಿ ಜನರಿಗೆ ಸರಿಯಾದ ಮಾರ್ಗದರ್ಶನ ಮಾಡುವವ. ಭಕ್ತ ಎಂದರೆ ಗುರು, ಲಿಂಗ, ಜಂಗಮ ತತ್ವಗಳನ್ನು ನಂಬಿ ಅವರು ತೋರಿದ ದಾರಿಯಲ್ಲಿ ನಡೆಯುವವ. ಭಕ್ತ, ಜಂಗಮರ ಒಡನಾಟ ಕುರಿತು ಚೆನ್ನಬಸವಣ್ಣನವರು ಹೇಳುವುದನ್ನು ಗಮನಿಸಿ:

ಬೇಡುವಾತ ಜಂಗಮನಲ್ಲ, ಬೇಡಿಸಿಕೊಂಬಾತ ಭಕ್ತನಲ್ಲ.
ಬೇಡದೇ ಆ ಭಕ್ತ ಮಾಡಿದ ಮಾಟವ ಪರಿಣಾಮಿಸಬಲ್ಲಡೆ ಜಂಗಮ.
ಬೇಡಿಸಿಕೊಳ್ಳದೆ ಆ ಜಂಗಮದ ಇಂಗಿತವರನರಿದು
ಅವನ ಮನದಿಚ್ಛೆಯ ಸಲಿಸಬಲ್ಲಡೆ ಆತನೇ ಪರಮಭಕ್ತ.
ಆ ಭಕ್ತ ನನ್ನದು ನಾನೆಂದು ನುಡಿದಡೆ
ನಾಯ ಮಾಂಸ, ಸತ್ತ ಹೆಣನ ಮಲವು!
ಇದು ಕಾರಣ-ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ
ಬೇಡಿಸಿಕೊಳ್ಳದೆ ಮಾಡುವ ಭಕ್ತನುಂಟಾದಡೆಯೂ
ಬೇಡದೆ ಮಾಡಿಸಿಕೊಳ್ಳುವ ಜಂಗಮವಪೂರ್ವವಯ್ಯಾ.

ಜಂಗಮ ಬೇಡದಿದ್ದರೂ ಭಕ್ತ ಕೊಡಬೇಕು ಎಂದು ಪರಿಭಾವಿಸಿದರೆ, ಕಾಯಕದಿಂದ ಸಂಪಾದಿಸಿದ್ದೆಲ್ಲ ತನ್ನದೇ ಎಂದು ಭಕ್ತ ಅದನ್ನು ಸ್ವಾರ್ಥಕ್ಕೆ ಬಳಸಿದರೆ ಶರಣರ ಸಿದ್ಧಾಂತಕ್ಕೆ ಅಪಚಾರ ಮಾಡಿದಂತೆ. ಬದಲಾಗಿ ಭಕ್ತ ತನ್ನ ಕಾಯಕದ ಸ್ವಲ್ಪ ಭಾಗವನ್ನು ಗುರು, ಲಿಂಗ, ಜಂಗಮ ದಾಸೋಹಕ್ಕೆ ಕೊಡಬೇಕು. ಆಗ ಅವನಲ್ಲಿ ಅಹಂಕಾರ ನಿರಶನವಾಗುವುದು. ಭಕ್ತ ತನಗೆ ಕೊಡಲೇಬೇಕು ಎನ್ನುವ ಹಪಾಹಪಿತನ ಜಂಗಮನಿಗೂ ಇರಬಾರದು. ಇಬ್ಬರಲ್ಲೂ ಕಾಯಕ ಮತ್ತು ದಾಸೋಹ ಪ್ರಜ್ಞೆ, ಸಾಮಾಜಿಕ ಸುಧಾರಣೆಯ ಕಾಳಜಿ ಇರಬೇಕು. ಇದನ್ನೇ ಇಲ್ಲಿ ಒತ್ತಿ ಹೇಳಲಾಗಿದೆ. ಈ ನೆಲೆಯಲ್ಲಿ ದಾನ, ದಾಸೋಹ ತತ್ವಗಳನ್ನು ಪರಿಗಣಿಸಬೇಕು.

ಹಾಡಿದಡೆನ್ನೊಡೆಯನ ಹಾಡುವೆ,
ಬೇಡಿದಡೆನ್ನೊಡೆಯನ ಬೇಡುವೆ,
ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ.
ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ
ಸೆರಗೊಡ್ಡಿ ಬೇಡುವೆ.

ಶರಣರು ಬೇಡುವುದು ದೇವರಲ್ಲಿಯೇ ಹೊರತು ಮಾನವರಲ್ಲಿ ಅಲ್ಲ. ಕಾಯಕ ಮಾಡಿ ಸಂಪಾದಿಸಲು ಬೇಕಾದ ಭೂಮಿ, ನೀರು, ಗಾಳಿ, ಬೆಳಕು ಇತ್ಯಾದಿ ಸೌಲಭ್ಯಗಳನ್ನು ದೇವರು ಮಾನವನಿಗೆ ಕರುಣಿಸಿದ್ದಾನೆ. ಅವುಗಳನ್ನು ಹಿತಮಿತವಾಗಿ ಬಳಸಿಕೊಂಡರೆ ಮಾನವ ನೆಮ್ಮದಿಯಿಂದ ಬಾಳಲು ಸಾಧ್ಯ. ಅಂದರೆ ಪ್ರಾಕೃತಿಕ ಸಂಪತ್ತನ್ನು ಸ್ವೇಚ್ಛೆಯಿಂದ ಬಳಸಬಾರದು.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೇಹಳ್ಳಿ-577515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಸೆಲ್: 9448395594

One thought on “ಬೇಡುವಾತ ಜಂಗಮನಲ್ಲ, ಬೇಡಿಸಿಕೊಂಬಾತ ಭಕ್ತನಲ್ಲ

Leave a Reply

Your email address will not be published. Required fields are marked *

error: Content is protected !!