ಬದುಕನ್ನು ಸಾರ್ಥಕ ಪಡಿಸಿಕೊಂಡ ಮೈಲಾರಪ್ಪ ಸಗರ

ಬದುಕನ್ನು ಸಾರ್ಥಕ ಪಡಿಸಿಕೊಂಡ ಮೈಲಾರಪ್ಪ ಸಗರ

ಕಲ್ಯಾಣ ಕರ್ನಾಟಕದ ಹೆಮ್ಮೆಯ ಜಾನಪದ ಪ್ರತಿಭೆ ಮೈಲಾರಪ್ಪ ಸಗರ ಇನ್ನಿಲ್ಲ ಎಂದು ನಂಬಲು ಆಗುತ್ತಿಲ್ಲ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮೈಲಾರಪ್ಪ ಹುಟ್ಟು ಕಲಾವಿದ. ಶಹಾಪುರ ತಾಲೂಕಿನ ಸಗರ ಗ್ರಾಮದ ಮೈಲಾರಪ್ಪ ಇಡೀ ನಾಡಿನ ಉದ್ದಗಲಕ್ಕೂ ರೈತ ಗೀತೆಗಳ ಮೂಲಕ ಪರಿಚಿತರು.
ಹಳ್ಳಿಗಾಡಿನ ಪ್ರತಿಭೆಗಳಿಗೆ ಬೆನ್ನೆಲುಬಾಗಿ ಯಾರೂ ಇರದೆ ಇದ್ದರೆ ಇದ್ದಲ್ಲಿಯೆ ನಶಿಸಿ ಹೋಗುವುದೆ ಹೆಚ್ಚು. ಆದರೆ ಈ ಮೈಲಾರಪ್ಪನ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತಂದವರು ತಂದೆ ಲಿಂಗಣ್ಣ ಸತ್ಯಂಪೇಟೆ. ಬಹಳಷ್ಟು ವರ್ಷಗಳ ಹಳೆಯ ಮಾತು. ಮೈಲಾರಪ್ಪ ತನ್ನ ಸ್ವಂತ ಊರಾದ ಸಗರ ಗ್ರಾಮದಲ್ಲಿ ಪೇಟಿ ಮಾಸ್ತರ ಎಂದು ಕರೆಯಿಸಿಕೊಂಡು ತಮ್ಮ ಪಾಡಿಗೆ ತಾವು ಇದ್ದವರು. ಮನೆಯ ತುಂಬಾ ಮಕ್ಕಳು , ಕಿತ್ತು ತಿನ್ನುವ ಬಡತನ ಏನೂ ಮಾಡಲಾಗದ ಅಸಹಾಯಕತೆಯ ನಡುವೆ ಬಸವಳಿದು ಬದುಕುತ್ತಿದ್ದರು.

ಒಂದು ಸಲ ಈ ಮೈಲಾರಪ್ಪ ನನ್ನ ತಂದೆ ಲಿಂಗಣ್ಣ ಸತ್ಯಂಪೇಟೆಯವರ ಕಣ್ಣಿಗೆ ಬಿದ್ದದ್ದೆ ತಡ, ಮೈಲಾರಪ್ಪನಲ್ಲಿರುವ ಹಾಡುವ ಪ್ರತಿಭೆಯನ್ನು ಗುರುತಿಸಿ ಬಿಟ್ಟರು. ಅದೇ ಸಂದರ್ಭದಲ್ಲಿ ಕರ್ನಾಟಕದ ತುಂಬೆಲ್ಲ ಗೋಕಾಕ ವರದಿ ಜಾರಿಗೆ ಬರಲಿ ಎಂಬ ಚಳುವಳಿಯು ನಾಡಿನ ತುಂಬೆಲ್ಲ ಹಬ್ಬಿತ್ತು. ಡಾ.ರಾಜ್, ಲೋಕೇಶ್, ಅಶೋಕ, ಶಂಕರನಾಗ ಮತ್ತಿತರರು ಡಾ. ಪಾಟೀಲ ಪುಟ್ಟಪ್ಪನವರ ನೇತೃತ್ವದಲ್ಲಿ ಜಾಥಾ ಹೊರಟಿದ್ದರು.

ಶಹಾಪುರ ನಗರಕ್ಕೂ ಡಾ. ರಾಜ್ ಅವರ ಟೀಮ್ ಬರುವುದಿತ್ತು. ಡಾ.ಪಾಟೀಲ ಪುಟ್ಟಪ್ಪನವರು ಅಪ್ಪನ ಆತ್ಮೀಯರು. ಸಹಜವಾಗಿ ಶಹಾಪುರ ನಗರದಲ್ಲಿ ಕಾರ್ಯಕ್ರಮ ಏರ್ಪಡಿಸುವ ಜವಾಬ್ದಾರಿಯನ್ನು ವಹಿಸಿದ್ದರು. ಇದೆ ಸಂದರ್ಭವನ್ನು ಉಪಯೋಗಿಸಿಕೊಂಡು ಡಾ. ರಾಜ್ ರಾಜಕೀಯಕ್ಕೆ ಬರಲಿ ಎಂದು ಹಲವರು ಒತ್ತಡ ಹೇರುತ್ತಿದ್ದರು.ಆದರೆ ನನ್ನ ತಂದೆ ಮಾತ್ರ ಸಾಂಸ್ಕøತಿಕ ಲೋಕದ ನಾಯಕ ಡಾ.ರಾಜ್ ರಾಜಕೀಯಕ್ಕೆ ಬಂದರೆ ತನ್ನ ಹಿಂದಿರುವ ಚಾರ್ಮ ಕಳೆದುಕೊಳ್ಳುತ್ತಾರೆ ಎಂಬ ಸಣ್ಣ ಆತಂಕ ಅವರಲ್ಲಿ ಮನೆ ಮಾಡಿತ್ತು. ಆದ್ದರಿಂದ ಮೈಲಾರಪ್ಪ ಸಗರ ಅವರಿಗೆ ಡಾ.ರಾಜ್ ನೀನೆಂದು ರಾಜಕೀಯಕ್ಕೆ ಬರಬೇಡ ಎಂಬ ಸಂದೇಶದ ಹಾಡನ್ನು ಬರೆದುಕೊಟ್ಟು, ಸಾರ್ವಜನಿಕ ವೇದಿಕೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದರು.

ಮುಗ್ಧ ಮನಸ್ಸಿನ ಡಾ. ರಾಜ್ ಅವರಿಗೆ ಮೈಲಾರಪ್ಪ ಹಾಡಿದ ಗೀತೆ ಹಾಗೂ ಆತನ ಕಂಠದ ಸಿರಿ ಕಂಡು ದಂಗಾಗಿ ಹೋದರು. ಸ್ವತಃ ಡಾ. ರಾಜ್ ತನ್ನನ್ನು ಬೆಂಗಳೂರಿಗೆ ಬಂದು ಕಾಣುವಂತೆ ವಿನಂತಿಸಿದರು. ಅಂದಂತೆ ಮೈಲಾರಪ್ಪನೇನೋ ಬೆಂಗಳೂರಿಗೆ ಹೋದರು. ಆದರೆ ಡಾ. ರಾಜ್ ಸುತ್ತ ಮುತ್ತ ಆಗಲೆ ಒಂದು ರೀತಿಯ ಭದ್ರಕೋಟೆ ನಿರ್ಮಾಣವಾಗಿತ್ತು. ಮೈಲಾರಪ್ಪನಂಥ ಗ್ರಾಮೀಣ ಪ್ರತಿಭೆಯ ಧ್ವನಿಯ ಮುಂದೆ ಡಾ. ರಾಜ್ ಅವರ ದ್ವನಿ ಏನೂ ಅಲ್ಲ ಎಂಬ ಅರಿವು ಅವರಿಗೆ ಆಗುತ್ತಲೆ ಮೈಲಾರಪ್ಪನನ್ನು ಅಲ್ಲಿ ನಿರ್ಲಕ್ಷಿಸಿದರು. ಬೆಂಗಳೂರಿನಲ್ಲಿ ಸ್ವಲ್ಪ ದಿನಗಳ ಕಾಲ ಕನ್ನಡ ಸಂಘಟನೆಗಳ ಕಾರ್ಯಕ್ರಮಗಳಿಗೆ ಮೈಲಾರಪ್ಪನನ್ನು ಬಳಸಿಕೊಂಡರು.

ಒಂದು ದಿನ ಯಾವುದೋ ಕೆಲಸದ ನಿಮಿತ್ತ ಅಪ್ಪ ಲಿಂಗಣ್ಣ ಸತ್ಯಂಪೇಟೆ ಬೆಂಗಳೂರಿಗೆ ಹೋಗಿ ನೋಡಿದರೆ ಮೈಲಾರಪ್ಪ ಅಲ್ಲಿ ಒಂಟಿಯಾಗಿ, ಮ್ಲಾನ ವದನನಾಗಿದ್ದ. ಆತನಲ್ಲಿ ಮತ್ತೆ ಉತ್ಸಾಹ ತುಂಬಿ ಇಲ್ಲಿ ಇರೋದು ಬೇಡ ನಡಿ. ನಮ್ಮ ಊರಿಗೆ ಹೋಗೋಣ. ಕರ್ನಾಟಕ ರಾಜ್ಯ ರೈತ ಸಂಘವನ್ನು ಇಡೀ ನಾಡಿನ ತುಂಬಾ ಕಟ್ಟುತ್ತಿದ್ದೇವೆ. ನೀನೂ ನಮ್ಮೊಂದಿಗೆ ಇರುವಂತಿ, ಎಂದು ಕರೆತಂದರು. ಕಾರ್ಯಕ್ರಮಕ್ಕೆ ಹೋದಲ್ಲೆಲ್ಲ ಗೀತೆಗಳನ್ನು ಬರೆದುಕೊಟ್ಟರು. ಮೈಲಾರಪ್ಪ ಅವನ್ನು ಹಾಡಿದ. ಕೋಪ ಇಲ್ಲೇನೋ, ರೈತಣ್ಣ ಕೋಪ ಇಲ್ಲೇನೋ ? , ಒಕ್ಕಲತಿ, ಮುಂತಾದ ಗೀತೆಗಳು ಜನ ಸಾಮಾನ್ಯರನ್ನು ಬಡಿದೆಬ್ಬಿಸಿದವು.

ಮೈಲಾರಪ್ಪ ಆಗ ಪ್ರೊ. ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್, ಹೆಚ್.ಎಸ್. ರುದ್ರಪ್ಪ ಮೊದಲಾದವರ ಸಖ್ಯ ದೊರಕಿತು. ಕರುನಾಡಿನ ತುಂಬೆಲ್ಲ ಹೋರಾಟದ ಕಿಚ್ಚು ಹಚ್ಚುವಲ್ಲಿ ಮೈಲಾರಪ್ಪ ಪ್ರಮುಖ ಪಾತ್ರ ವಹಿಸಿದ. ಭೀಮೆ ಹಾಗೂ ಕೃಷ್ಣಾ ನದಿಯಲ್ಲಿ ಸಾಕಷ್ಟು ನೀರು ಹರಿಯುತ್ತಿರುವಂತೆ ಕಾಲವೂ ಸರಿದು ಹೋಯಿತು. ಪ್ರೊ. ಹಾಗೂ ಅಪ್ಪನ ನಡುವೆ ವೈಚಾರಿಕ ಭಿನ್ನತೆ ತಲೆದೋರಿತು. ಆಗ ಮೈಲಾರಪ್ಪ ಅಪ್ಪನ ಸಖ್ಯ ತೊರೆದ. ನಮ್ಮ ಮನೆಯ ಎಲ್ಲರೊಂದಿಗೆ ಬೆರೆತು ಮಾತಾಡುತ್ತಿದ್ದ. ಊಟ ಮಾಡುತ್ತಿದ್ದ. ಮನೆಯಲ್ಲಿಯೇ ಠೀಕಾಣಿ ಹೂಡುತ್ತಿದ್ದ ಮೈಲಾರಪ್ಪ ಅಪ್ಪನ ಬಗೆಗೆ ಕೊಂಕು ಮಾತುಗಳನ್ನು ಆಡಿದ. ಆದರೆ ಅಪ್ಪ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ನಾವೆಲ್ಲ ಚಿಕ್ಕವರಿರುವಾಗ ಆತನ ತಾಟಿನಲ್ಲೇ ಕುಳಿತು ಊಟ ಮಾಡಿದ್ದರೂ ಲಿಂಗಣ್ಣ ಮೇಷ್ಟ್ರ ಮನೆಯಲ್ಲಿ ಜಾತಿಯತೆ ಇದೆ ಎಂದು ಹೇಳಿ ಸಣ್ಣವನಾದ. ಕೆಲವು ಜನ ಕುಹಕಿಗಳು ಇದನ್ನು ಉಪಯೋಗಿಸಿಕೊಂಡರು.

ಆದರೆ ಮೈಲಾರಪ್ಪನಿಗೆ ಕೊನೆಗೂ ಇದೆಲ್ಲ ಅರ್ಥವಾಯಿತು. ಮತ್ತೆ ನಮ್ಮ ಮನೆಗೆ ಹಿಂತುರುಗಿ ಬಂದ. ಹಿಂದಿನಂತೆ ಅದೇ ಸ್ವಾಗತ ನಮ್ಮ ಕುಟುಂಬದಿಂದ ದೊರಕಿತು. ಮೈಲಾರಪ್ಪ ನಮ್ಮ ಮನೆಯೊಳಗಿನ ಒಬ್ಬ ಸದಸ್ಯ. ಆತನ ಅಗಲುವಿಕೆಗೆ ನಮ್ಮ ಕುಟುಂಬಕ್ಕೆ ಸಾಕಷ್ಟು ನೋವನ್ನು ಉಂಟು ಮಾಡಿದೆ. ಅಪ್ಪ ಇಲ್ಲದ ತರುವಾಯ ನಾವೆಲ್ಲ ಸಹೋದರರು ನಡೆಸಿಕೊಂಡು ಹೋಗುವ ಬಸವ ಬೆಳಕು ಸಭೆಗೆ ಬಂದಿದ್ದಾನೆ. ಖುಷಿ ಪಟ್ಟಿದ್ದಾರೆ. ಶರಣರ ವಿಚಾರಧಾರೆಯನ್ನು ನಾವು ಮುಂದುವರೆಸಿಕೊಂಡು ಹೋದ ಕುರಿತು ಮೈಲಾರಪ್ಪನಿಗೆ ಹೆಮ್ಮೆ ಇತ್ತು.

ಅಂತು ತನ್ನ ಬದುಕನ್ನು ಸಾರ್ಥಕ ಪಡಿಸಿಕೊಂಡ ಮೈಲಾರಪ್ಪ ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳೂವುದು ಸ್ವಲ್ಪ ಕಷ್ಟವೇ ಸರಿ.

0 ವಿಶ್ವಾರಾಧ್ಯ ಸತ್ಯಂಪೇಟೆ

2 thoughts on “ಬದುಕನ್ನು ಸಾರ್ಥಕ ಪಡಿಸಿಕೊಂಡ ಮೈಲಾರಪ್ಪ ಸಗರ

  1. ಮೈಲಾರೆಪ್ಪ ಸಗರ ಇನ್ನಿಲ್ಲ ಎಂಬುದು ಒಪ್ಪಲಾಗದ ವಾಸ್ತವ; ಇಂದು ಮತ್ತು ಎಂದಿಂದಿಗೂ….!

  2. ಶರಣ ಮೈಲಾರಪ್ಪ ಲಿಂಗೈಕ್ಯರಾದದ್ದು ತಿಳಿದಿರಲಿಲ್ಲ. ಲಿಂಗಣ್ಣಣ್ಣ ಹೇಳತಿದ್ರು ,ಇದು ಹಳ್ಳಿ ಪ್ರತಿಭೆ,ಮನಸ್ಸು ಹಳ್ಳಿಯದೆ ಅಂತ.ಭಗವಂತ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ.ಶರಣು ಶರಣಾರ್ಥಿಗಳು.🙏..👏.

Leave a Reply

Your email address will not be published. Required fields are marked *

error: Content is protected !!