ಜಗವೆಲ್ಲಕ್ಕೆಯೂ ಗುರು ಬಸವಣ್ಣನವರು


ಜಗವೆಲ್ಲಕ್ಕೆಯೂ ಗುರು ಬಸವಣ್ಣನವರು

ವಿ ಶ್ವ ಗುರು ಬಸವಣ್ಣನವರು ಜಗತ್ತಿನ ಅಚ್ಚರಿಯ ವ್ಯಕ್ತಿಗಳಲ್ಲಿ ಅಗ್ರಗಣ್ಯರು. ತಮ್ಮ ಜೀವಿತದ ಅತ್ಯಲ್ಪ ಅವಧಿಯಲ್ಲಿಯೆ ಕನ್ನಡ ನಾಡಿನ ನೆಲದಲ್ಲಿ ಸಮಾನತೆಯ ಬೀಜವನ್ನು ಬಿತ್ತಿ ಅದರ ಪ್ರತಿಫಲವನ್ನು ಕಂಡುಕೊಳ್ಳಲು ಸಾಧ್ಯವಾಯಿತು ಎಂಬ ಸಂಗತಿ ಮತ್ತಷ್ಟು ಕುತೂಹಲವನ್ನು ಹುಟ್ಟಿಸುತ್ತದೆ. ಶತಮಾನಕ್ಕೆ ಒಬ್ಬರೋ ಇಬ್ಬರೋ ದಾರ್ಶನಿಕರು ಹುಟ್ಟಬಹುದೆನೋ ! ಆದರೆ ಬಸವನೆಂಬ ಹೆಮ್ಮರಕ್ಕೆ , ಪ್ರತಿ ಹೆಮ್ಮರವಾಗಿ ನೂರಾರು ಸಂಖ್ಯೆಯಲ್ಲಿ ಶರಣ ಸಮೂಹ ಬೆಳೆಯಲು ಭೂಮಿ ಹದ ಮಾಡಿದ್ದವರು ಬಸವಣ್ಣನೆಂಬ ಸತ್ಯ ಮತ್ತಷ್ಟು ಬೆರಗನ್ನು ಉಂಟು ಮಾಡುತ್ತದೆ. ಮಹಾತ್ಮ ಬುದ್ಧ, ಮಹಾವೀರ, ಗುರುನಾನಕ, ಮಹ್ಮದ ಪೈಗಂಬರ, ಏಸು ಕ್ರಿಸ್ತ ಮುಂತಾದ ದಾರ್ಶನಿಕರು ಸತ್ಯವನ್ನು ಕಂಡುಕೊಂಡು ಅದನ್ನು ಜನತೆಗೆ ತಿಳಿಸಿ ಹೋದರು. ಮೇಲ್ಕಾಣಿಸಿದ ಎಲ್ಲಾ ಮಹಾತ್ಮರಿಗೂ ಅನುಯಾಯಿಗಳುಂಟು. ಆದರೆ ಅಧಿಕೃತವಾಗಿ ಬಸವಣ್ಣನವರಿಗೆ ಯಾರೊಬ್ಬರೂ ಅನುಯಾಯಿಗಳಿಲ್ಲ, ಇದಕ್ಕಿಂತ ಹೆಚ್ಚಾಗಿ ಅವರೆಲ್ಲ ಪ್ರತಿ ಬಸವಣ್ಣನವರಾದ ಸೊಗಸು ನಮ್ಮ ಕಣ್ಣ ಮುಂದೆಯೆ ಇದೆ.
ಬಸವ ಎಂಬ ಮೂರಕ್ಷರ ಕೇವಲ ಅಕ್ಷರ – ಶಬ್ಧವಲ್ಲ. ಅದು ಎಂದೆಂದಿಗೂ ಬತ್ತದ ಉತ್ಸಾಹದ ಚಿಲುಮೆ. ತಳ ಸಮುದಾಯದವರ ಪಾಲಿಗೆ ಸಂಜೀವಿನಿ. ನೊಂದವರ ಅಶಕ್ತರ ಆಶಾಕಿರಣ. ಜೋತಿಷ್ಯ ಪಂಚಾಂಗ, ಶಾಸ್ತ್ರ, ಪುರಾಣಗಳ ಅಡಿಯಲ್ಲಿ ಸತ್ತು ಹೋದವರ ಪಾಲಿಗೆ ಜೀವದಾತ. ನಮ್ಮ ಹಣೆಬರಹ- ಕರ್ಮ ಎಂದು ಕೈಚೆಲ್ಲಿ ಮುಗಿಲು ನೋಡುತ್ತ ದಿನಗಳೆಯುವ ನಿರಾಸಕ್ತ ಜನರಿಗೆ ಬಸವಣ್ಣ ಉತ್ಸಾಹದ ಬುಗ್ಗೆ. ಪಾಪ ಕರ್ಮ ಮಾಡಿ, ಬ್ರಹ್ಮ ಹತ್ಯೆ ಮಾಡಿದವರಿಗೂ ಒಮ್ಮೆ ಶರಣೆನ್ನೆಲವೋ ಎಂದೆನ್ನುತ್ತಾ ಅವರನ್ನೂ ರಹದಾರಿಗೆ ತರುವ ಮಾರ್ಗದರ್ಶಿ. ಶ್ರೀಮಂತಿಕೆ, ಅಧಿಕಾರ,ಅಂತಸ್ತುಗಳನ್ನು ಗಳಿಸಿ ಆನೆಯ ಏರಿಕೊಂಡು, ಕುದುರೆಯ ಏರಿಕೊಂಡು ಹೊರಟವರಿಗೂ ಸಣ್ಣಗೆ ಕುಟುಕಿ ಸತ್ಯದ ನಿಲವ ಅರಿಯದೆ ವಿಧಿಗೆ ಗುರಿಯಾಗಿ ನೀವು ಹೋದಿರಲ್ಲ ಎಂಬ ಎಚ್ಚರಿಕೆ.

ಇಡೀ ಬದುಕಿನುದ್ದಕ್ಕೂ ದೇವಸ್ಥಾನ ಪೂಜೆ ಪುನಸ್ಕಾರ, ಹೂ ಪತ್ರೆ ಪುಷ್ಪ ಎಂದು ಬಡಬಡಿಸುವವರಿಗೂ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ ಎಂದೆನ್ನುವ ಮೂಲಕ ಸ್ಥಾವರದ ಗೊಡವೆಗೆ ಹೋಗದಂತೆ ತಡೆದ ಚಾಣಾಕ್ಷ್ಯ. ತನ್ನಾಶ್ರಯದ ರತಿ ಸುಖವನು ತಾನುಂಬ ಊಟವನು ಬೇರೆ ಮತ್ತೊಬ್ಬರ ಕೈಲಿ ಮಾಡಿಸಬಹುದೆ ? ಎಂದು ಪ್ರಶ್ನಿಸುತ್ತಲೆ ಇಷ್ಟಲಿಂಗವ ಕೊಟ್ಟು ಆತ್ಮಾವಲೋಕನಕ್ಕೆ ಹಚ್ಚಿದ ಚಿಕಿತ್ಸಕ ವ್ಯಕ್ತಿ. ಆನು ದೇವ ಹೊರಗಣದವನು . ನಮ್ಮ ನಾಮವಿಡಿದ ಅನಾಮಿಕ ನಾನು ಎಂದು ಅವರ ಜೊತೆಯಾದವರು. ಮುಟ್ಟು ತಟ್ಟು ಮಡಿ ಮೈಲಿಗೆಯಿಂದ ಹೆಣ್ಣು ಕೀಳಲ್ಲ ಅವಳು ಜನಿತಕ್ಕೆ ತಾಯಾಗಿ, ಮೋಹಕ್ಕೆ ಮಗಳಾಗಿ, ಕೂಟಕ್ಕೆ ಸ್ತ್ರೀಯಾಗಿ ಇರಬೇಕಾದವಳೆ ಎಂಬ ವಾಸ್ತವ ಸತ್ಯವನ್ನು ಅರುಹಿದ ಮಹಾತ್ಮ.

ಶತ ಶತಮಾನಗಳಿಂದ ಉಳ್ಳವರ- ಮೇಲ್ವರ್ಗದವರ ತುಳಿತಕ್ಕೆ ಗುರಿಯಾಗಿ, ಅವರ ಕೆಂಗಣ್ಣಿನ ಅಡಿ ಜೀವವೇ ಕೈಯಲ್ಲಿ ಹಿಡಿದು ಬದುಕುತ್ತಿದ್ದ ಜನಗಳಿಗೆ ತಲೆಯ ತಗ್ಗಿಸಿ ನೆಲವ ಬರೆಯುತ್ತಿದ್ದಿರದೇಕೆ ? ದಂದಣ ದತ್ತಣ ಎನ್ನಿ. ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ ಎಂಬ ಧೈರ್ಯ ತುಂಬಿದ ವ್ಯಕ್ತಿ. ಆದ್ದರಿಂದ ಬಸವ ಎಂಬ ಮೂರಕ್ಷರ ಹೃದಯದಲ್ಲಿ ನೆಲೆಗೊಂಡಡೆ ಅಸಾಧ್ಯವೂ ಸಾಧ್ಯವಯ್ಯ ಎನ್ನುತ್ತಾರೆ ಶರಣರು. ಜನಪದರು ಸಾಮಾನ್ಯ ಜನಗಳ ನಾಡಿ ಮಿಡಿತವನ್ನು ಅರಿತವರು.

ಬಸವ ರಾಜ್ಯದ ಸಿರಿಯು
ಬಸವ ಬಡವರ ನಿಧಿಯು
ಬಸವ ಮಳೆ ಬೆಳೆಯು/ ನಾಡೊಳಗೆ
ಬಸವನೆ ಸಗ್ಗ ಸೋಪಾನ

ಯಾವುದೆ ಒಂದು ರಾಜ್ಯ ಸಂಪದ್ಭರಿತವಾಗಿರಬೇಕಾದರೆ ಅಲ್ಲಿನ ಆನೆ ಒಂಟೆ ಕುದುರೆ ಆಸ್ತಿ ಭೂಮಿ ವಜ್ರ ವೈಢೂರ್ಯ ಮುಖ್ಯ ಅಲ್ಲವೆ ಅಲ್ಲವಂತೆ ! ಬಸವ ಎಂಬ ಮೂರಕ್ಷರವೆ ಆ ಎಲ್ಲಾ ಭೌತಿಕ ಸಂಪತ್ತನ್ನು ಮಿರಿಸುತ್ತದಂತೆ. ನೊಂದವರಿಗೆ ,ಬೆಂದವರಿಗೆ, ಬಾಳಿನಲ್ಲಿ ಬಸವಳಿದವರಿಗೆ ಬಸವ ನಿಧಿ ಇದ್ದಂತೆ. ಅವರನ್ನು ಯಾವಾಗಬೇಕಾದರೂ ಬಳಸಿಕೊಂಡು ಬದುಕನ್ನು ಕಟ್ಟಿಕೊಳ್ಳಬಹುದು. ಬಸವನೆಂದರೆ ಸಮೃದ್ಧಿಯಂತೆ. ಆ ಮಹಾತ್ಮರ ನೆನೆಯುವುದರಿಂದಲೆ ಮಳೆ ಬೆಳೆ ಸಕಾಲಕ್ಕೆ ಬರುತ್ತವೆ ಎಂಬ ಮಾತು ಕೇವಲ ಅಕ್ಷರದ ಶಬ್ಧವಲ್ಲ. ಬಸವಣ್ಣನವರ ಬಗೆಗೆ ಹೃದಯಾಂತರದಲ್ಲಿ ನೆಲಗೊಂಡ ಗಟ್ಟಿಯಾದ ಭಾವ. ಆಚಾರವೇ ಸ್ವರ್ಗ ಎಂದು ನಂಬಿದವರಿಗೆ ಬಸವಣ್ಣನವರೆ ಆ ಎತ್ತಕ್ಕೆ ಏರುವವರಿಗೆ ನಿಚ್ಚಣಿಕೆ.

ಬಸವ ಎಂಬ ಮೂರಕ್ಷರ ಹೃದಯದಲ್ಲಿ ನೆಲೆಗೊಂಡಡೆ ಅಸಾಧ್ಯವೂ ಸಾಧ್ಯವಯ್ಯಾ ಎಂಬ ಮಾತು ಅನುಭವ ದ್ರವ್ಯ. ಬಸವಣ್ಣನವರು ವಾಸಿಸುತ್ತಿದ್ದ ಕಿಲ್ಲೆ ಕಲ್ಯಾಣಕ್ಕೆ ಹೋಗಲು ಸಹ ಯೋಗ್ಯತೆ ಬೇಕು.

ಕಲ್ಯಾಣವೆಂಬುದಿನ್ನಾರಿಗೂ ಹೊಗಬಹುದು ?
ಹೊಗಬಾರದು. ಅಸಾಧ್ಯವಯ್ಯಾ.
ಆಸೆ ಆಮಿಷ ಅಳಿದವಂಗಲ್ಲದೆ
ಕಲ್ಯಾಣದತ್ತಲಡಿಯಿಡಬಾರದ.
ಒಳ ಹೊರಗು ಶುದ್ಧನಾದವಂಗಲ್ಲದೆ ಕಲ್ಯಾಣವ ಹೊಗಬಾರದು
ನೀನಾನೆಂಬುದ ಹರಿದಂಗಲ್ಲದೆ ಕಲ್ಯಾಣದ ಒಳಗು ತಿಳಿಯಬಾರದು
ಚೆನ್ನಮಲ್ಲಿಕಾರ್ಜುನಂಗೊಲಿದು ಉಭಯ ಲಜ್ಜೆ ಅಳಿದೆನಾಗಿ
ಕಲ್ಯಾಣವಂ ಕಂಡು ನಮೋ ನಮೋ ಎನುತಿದ್ದೆನು.

ಹೀಗಾಗಿ ಕಲ್ಯಾಣವೆಂಬ ಹಣತೆ ಭಕ್ತಿ ಭಾವ ವಿಚಾರಗಳಿಂದ ತುಂಬಿ ತುಳುಕಿತು. ಆಸೆ ಆಮಿಷ ಅಳಿದ ಜನ ರಾಷ್ಟ್ರದ ಮೂಲೆ ಮೂಲೆಯಿಂದ ಬಂದು ಕಾಯಕ ಪ್ರೇಮಿಗಳಾದರು. ರಾಜ ಮಹಾರಾಜರು ಅರಮನೆ ತೊರೆದು ಬಂದರು. ಆಸೆಯೆಂಬುದು ಅರಸಂಗಲ್ಲದೆ ಶಿವಭಕ್ತರಿಗೆ ಉಂಟೆನಯ್ಯಾ ? ಈಸಕ್ಕಿಯಾಸೆ ನಮಗೇಕೆ ಮಾರಯ್ಯ ? ಎಂದು ಶರಣೆ ಲಕ್ಕಮ್ಮ ಪ್ರಶ್ನಿಸಿ, ಮಾರಯ್ಯನವನ್ನೆ ದಂಗು ಬಡಿಸಿದರು. ಹೊರಗೆ ಕಲ್ಯಾಣವಾದರೆ ಸಾಲದು. ಒಳಗೂ ಕಲ್ಯಾಣವಾಗಬೇಕೆಂದು ಶರಣರ ಇಂಗಿತವಾಗಿತ್ತು. ನಡೆ ನುಡಿ ಸಿದ್ಧಾಂತವನ್ನು ಚಾಚೂ ತಪ್ಪದೆ ರೂಢಿಸಿಕೊಂಡಿದ್ದ ಬಸವಣ್ಣನವರು ಯಾರ ಮುಲಾಜಿ ಮರ್ಜಿಗಳಿಂದ ಬದುಕಿದವರಲ್ಲ. ಅಂದಿನ ರಾಜ ಬಿಜ್ಜಳನ ಒಡ್ಡೊಲಗದಲ್ಲಿ ಪ್ರಧಾನಿಯಾಗಿ ಕೆಲಸ ಮಾಡುತ್ತಿದ್ದರೂ ಸಹ ಅದನ್ನು ಗಣಿಸದೆ ಆನು ವೇಳೆಯಾಳು ಎಂದು ಹೇಳಿದ ಸ್ವಾಭಿಮಾನಿ ಬಸವಣ್ಣನವರು.

ರಾಜ ಮಹಾರಾಜರ ಕುರಿತು ಕಾವ್ಯ ಬರೆಯುತ್ತಿದ್ದ ಕಾಲದಲ್ಲಿ, ರಾಜರು ಆಸ್ಥಾನಕ್ಕೆ ಬಂದರೆ ಹೋದರೆ ಬಹುಪರಾಕ ಹೇಳುವ ಗುಲಾಮಿ ಪದ್ಧತಿ ಜಾರಿಯಲ್ಲಿದ್ದ ಸಂದರ್ಭದಲ್ಲಿ ಬಸವಣ್ಣನವರು ಆನಿ ಭವಿ ಬಿಜ್ಜಳಂಗೆ ಅಂಜುವೆನೆ ? ಎಂದು ಹೇಳಿದ ಮಾತು ಸರಳವಾದ ಮಾತಲ್ಲ. ತುರ್ತು ಪರಿಸ್ಥಿತಿಯ ವಾತಾವರಣದ ಹತ್ತಿಪ್ಪತ್ತು ಪಟ್ಟು ಕೂಡಿದರೆ ಒಂದು ಅರಸನ ಆಳ್ವಿಕೆಯಾಗುತ್ತದೆ. ಆ ಅರಸನ ಮನೆಯ ಅರಸಿಯಾಗಿಪ್ಪುದಕ್ಕಿಂತ ಭಕ್ತರ ಮನೆಯ ತೊತ್ತಾಗಿಪ್ಪುದು ಕರಲೇಸಯ್ಯ ಎಂದು ಹೇಳುವ ಮೂಲಕ ಅರಸನಲ್ಲಿ ಮನೆ ಮಾಡಿದ್ದ ಡೊಡ್ಡಸ್ಥಿಕೆಯ ಜಂಘಾಬಲವನ್ನೆ ಕಸಿದುಕೊಂಡರು. ಉಳ್ಳವರು ಬಡತನವೆಂಬ ಮಂತ್ರವಾದಿ ಹೋಗಲೊಡನೆ ನುಡಿವರು. ಏಕೆಂದರೆ ಅವರೆಲ್ಲ ಸಿರಿಗರವನ್ನು ಬಡಿಸಿಕೊಂಡವರು. ಹಾವು ಕಚ್ಚಿಸಿಕೊಂಡವರನ್ನು ಮಾತನಾಡಿಸಬಹುದು. ಗರ ಹೊಡೆದವರನ್ನೂ ಮಾತನಾಡಿಸಬಹುದು. ಆದರೆ ಸಿರಿವಂತಿಕೆಯ ಗರ ಬಡಿಸಿಕೊಂಡವರನ್ನು ಮಾತನಾಡಿಸುವುದು ಕಷ್ಟ ಎಂದು ಹೇಳುತ್ತಲೆ ಬಸವಣ್ಣನವರ ಅಂದಿನ ರಾಜ ಬಿಜ್ಜಳನ ಸಖ್ಯವನ್ನು ಗಳಿಸಿಕೊಂಡದ್ದು ಸತ್ಯ.

ಬಸವನ ನಾಮವು ಕಾಮಧೇನು ಕಾಣಿರೊ
ಬಸವನ ನಾಮವು ಕಲ್ಪವೃಕ್ಷ ಕಾಣಿರೊ.
ಬಸವನ ನಾಮವು ಚಿಂತಾಮಣಿ ಕಾಣಿರೊ
ಬಸವನ ನಾಮವು ಪರುಷದ ಖಣಿ ಕಾಣಿರೊ
ಬಸವನ ನಾಮವು ಸಂಜೀವನ ಮೂಲಿಕೆ ಕಾಣಿರೊ
ಇಂತಪ್ಪ ಬಸವ ನಾಮಾಮೃತವು ಎನ್ನ ಜಿಹ್ವೆಯಲ್ಲಿ ತುಂಬಿ
ಹೊರಸೂಸಿ ಸಕಲ ಕರಣೇಂದ್ರಿಯಂಗಳ ತುಂಬಿತ್ತು
ಆ ಸಕಲ ಕರಣೇಂದ್ರಿಯಂಗಳ ತುಂಬಿ ಹೊರಸೂಸಿ ಸರ್ವಾಂಗದ
ರೋಮ ಕುಳಿಗಳನ್ನೆಲ್ಲ ವೇಧಿಸಿತ್ತಾಗಿ ನಾನು
ಬಸವಾಕ್ಷರದ ಹಡಗವೇರಿ ಬಸವ ಬಸವಾ ಎಂದು
ಭವಸಾಗರವ ದಾಟಿದೆನಯ್ಯಾ ಅಖಂಡೇಶ್ವರಾ

ಬಸವಣ್ಣನವರ ನಡೆ ನುಡಿ ಒಂದಾದ ಬದುಕಿನಲ್ಲಿ ಎಂಥ ಅತ್ಯದ್ಭುತವಾದ ಶಕ್ತಿ ಇದೆ ಎಂಬ ಅಂಶವನ್ನು ಎಳೆ ಎಳೆಯಾಗಿ ಜೇವರ್ಗಿಯ ಷಣ್ಮುಖ ಶಿವಯೋಗಿಗಳು ಎಲ್ಲರಿಗೂ ಅರ್ಥವಾಗುವಂತೆ ಬಿಚ್ಚಿರಿಸಿದ್ದಾರೆ. ಷಣ್ಮುಖ ಶಿವಯೋಗಿಗಳು ಹೇಳಿದಂತೆ ಬಸವ ಎಂಬ ಅಕ್ಷರ ಹಿಂದೆ ಅಗಾಧವಾದ ಚಿಂತನೆಗಳಿವೆ. ಪ್ರೀತಿ ವಿಶ್ವಾಸ ಪರಸ್ಪರ ಗೌರವಗಳಿವೆ. ಇವನಾರವ ನೆನ್ನದೆ ಇವ ನಮ್ಮವ ಇವ ನಮ್ಮವ ಎಂಬ ತತ್ವವಿದೆ. ಧರ್ಮಕ್ಕೆ ಮೂಲತಃ ಬೇಕಾಗಿರುವುದು ಶಿಷ್ಟಾಚಾರ, ಕಟ್ಟು ನಿಟ್ಟಾದ ಆಚರಣೆಗಳಲ್ಲ. ದಯೆ ಧರ್ಮದ ತಳಹದಿಯಾದರೆ ಸಾಕು ಎಂಬ ಹೊಸ ವ್ಯಾಖ್ಯಾನವಿದೆ. ನರೆ ಕೆನ್ನೆಗೆ ಬರುವುದೆ. ತೆರೆ ಗಲ್ಲಕ್ಕೆ ಬೀಳುವುದು ಖಚಿತ. ಅನ್ಯರಿಗೆ ಹಂಗಾಗಿ, ಕಾಲ ಮೇಲೆ ಕೈಯನೂರಿ ಸಾವಿನ ಕದವ ಬಡಿಯುವ ಮುನ್ನವೆ ಬದುಕನ್ನು ಅರ್ಥಮಾಡಿಕೊಂಡು ಜೀವಿಸಬೇಕು ಎಂದು ಬರೀ ಹೇಳಲಿಲ್ಲ ಬದುಕಿ ತೋರಿದರು. ಬಸವಣ್ಣನವರ ನಡೆಗಡಣ ಕೀಲಾಗಿ ಇಟ್ಟುಕೊಂಡವರು ಖಂಡಿತವಾಗಿಯೂ ಭವ ಸಾಗರವನ್ನು ಯಾವ ಅಂಜಿಕೆ ಅಳುಕು ಇಲ್ಲದೆ ದಾಟಿ ಹೋಗಬಹುದು ಎಂಬುದನ್ನು ಷಣ್ಮುಖ ಶಿವಯೋಗಿಗಳು ಹೇಳಿಕೊಟ್ಟರು.

ಶಿವ, ಗುರುವೆಂದು ಬಲ್ಲಾತನೆ ಗುರು
ಶಿವ,ಲಿಂಗವೆಂದು ಬಲ್ಲಾತನೆ ಗುರು
ಶಿವ, ಜಂಗಮವೆಂದು ಬಲ್ಲಾತನೆ ಗುರು
ಶಿವ, ಪ್ರಸಾದವೆಂದು ಬಲ್ಲಾತನೆ ಗುರು
ಶಿವ, ಆಚಾರವೆಂದು ಬಲ್ಲಾತನೆ ಗುರು
ಇಂತಿ ಪಂಚವಿಧವೆ ಪಂಚಬ್ರಹ್ಮವೆಂದರಿದ
ಮಹಾಮಹಿಮ ಸಂಗನ ಬಸವಣ್ಣನು,
ಎನಗೆಯೂ ಗುರು, ನಿನಗೆಯೂ ಗುರು,
ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ

ಎಂಬ ವ್ಯೂಮ ಕಾಯದ, ಅನುಭಾವಿ ಅಲ್ಲಮಪ್ರಭುಗಳ ಮಾತು ಬಸವಣ್ಣನವರ ವ್ಯಕ್ತಿತ್ವವನ್ನು ಕರಿಯು ಕನ್ನಡಿಯಲ್ಲಿ ಅಡಗಿಸಿ ತೊರುವಂತೆ ಈ ಒಂದು ವಚನದಲ್ಲಿ ಹಿಡಿದಿಟ್ಟಿದ್ದಾರೆ. ಸಕಲ ಜೀವಾತ್ಮರಿಗೆ ಲೇಸ ಬಯಸುವ ಬಸವಣ್ಣನವರು ಇಂದು ನಮ್ಮ ನಿಮ್ಮಗಳ ಮನೆಯನ್ನು ತಲುಪಿದ್ದಾರೆ. ಆದರೆ ಅವರ ಆಶಯಗಳು ಜಾರಿಯಾಗಬೇಕಾಗಿದೆ.

ಬಸವಣ್ಣನವರು

ವಿಶ್ವಾರಾಧ್ಯ ಸತ್ಯಂಪೇಟೆ

ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ
ಬಸವ ಬೆಳಗು, ಬುದ್ಧ ವಿಹಾರದ ಹತ್ತಿರ
ಅಂಚೆ : ತಾ : ಶಹಾಪುರ – 585 223
ಯಾದಗಿರಿ : ಜಿಲ್ಲೆ
9008802456

Leave a Reply

Your email address will not be published. Required fields are marked *

error: Content is protected !!