ಆತ್ಮಸ್ಥೈರ್ಯದ ಶರಣ ವಿಚಾರಗಳ ಮೂಲಕ ಕರೋನಾ ನಿತ್ರಾಣ ಮಾಡಬಹುದು

ಕೊರೊನಾ ನನಗೆ ವಕ್ಕರಿಸಿತು ಎಂಬುದು ಖಾತ್ರಿಯಾಗುತ್ತಿದ್ದಂತೆ ನಾನು ಹೆದರಿ ಕಂಗಾಲಾಗಲಿಲ್ಲ. ಬೆಂಕಿಯ ಕೆನ್ನಾಲಿಯನ್ನು ಮೈತುಂಬಾ ಓಡಾಡಿಸುತ್ತಿದ್ದ ಜ್ವರಕ್ಕೂ ನಾನು ಹೆದರಲಿಲ್ಲ. ನಿಶಕ್ತಗೊಂಡು ನಿಸ್ತೇಜವಾಗುತ್ತಿದ್ದ ನನ್ನ ಅವಯವಗಳು ನಿತ್ರಾಣ ಹೊಂದಿದರು ಕುಸಿದು ಬೀಳಲಿಲ್ಲ. ಕಣ್ಣು ಕೆಂಪಗಾಗಿ ಊದಿಕೊಂಡಿದ್ದರೂ ಹೆಚ್ಚು ಮುತುವರ್ಜಿ ವಹಿಸಿಕೊಳ್ಳಲಿಲ್ಲ.

ಏಕೆಂದರೆ ನನ್ನೊಳಗೆ ವಚನ ಸಾಹಿತ್ಯದ ಸಾಲುಗಳು ಇಳಿದು ಬಿಟ್ಟಿದ್ದವು. ವಚನ ಕೇವಲ ಓದಿದರೆ, ಹೇಳಿದರೆ ಸಾಲದು. ಅವನ್ನು ಬದುಕಿದರೆ ಪ್ರಚ್ಛನ ಶಕ್ತಿ ನಮ್ಮೊಳಗೆ ತಂತಾನೆ ಹುಟ್ಟಿಕೊಳ್ಳುತ್ತದೆ. ಕೇವಲ ಗುಳಿಗೆ ,ಟಾನಿಕ್, ಆಕ್ಸಿಜನ್ ಗಳ ಮೂಲಕ ದೇಹವನ್ನು ಸುಸ್ಥಿತಿಗೆ ತರಲು ಸಾಧ್ಯವಿಲ್ಲವೆಂಬುದು ನನ್ನ ಅನುಭವ. ೨೦೦ ಕಿ.ಮೀ. ದೂರದ ಪಯಣವನ್ನು ನಾನು ಕಾರನಲ್ಲಿ ಮಾಡಲೇಬೇಕಾದ ಸಂದರ್ಭ ಒದಗಿ ಬಂದಿದ್ದರೂ ದೃತಿಗೆಡಲಿಲ್ಲ. ನನ್ನೊಂದಿಗೆ ಹೆಂಡತಿ, ಅವಳಿಗೂ ಕರೋನ, ಜೊತೆಗೆ ಮತ್ತೊಂದು ದೈಹಿಕ ತೊಂದರೆಯಿಂದ ಆಗಲೇ ಬಳಲಿ ಬೆಂಡಾಗಿದ್ದಳು. ಆಗ ನೆನಪಾದವರು ಶರಣ ಲದ್ದೆಯ ಸೋಮಣ್ಣನವರ ವಚನ ಮಾರ್ಗದರ್ಶಿಯಾಯಿತು.

ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು, ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ

ಕಾಯಕವನ್ನಂತೂ ಮಾಡುತ್ತಿರುವೆ. ನನಗೆ ಸಾಧ್ಯವಾದ ಮಟ್ಟಿಗೆ ದಾಸೋಹವನ್ನು ಮಾಡುತ್ತಿರುವೆ. ಇದರಲ್ಲಿ ಎಂದಿಗೂ ಅಹಂಕಾರವನ್ನು ಪಟ್ಟಿಲ್ಲ.ವ್ಯಾಧಿ ಬಂದಿದೆಯಾ ಒರಲೋಣ. ನೋವು ಬಂದಿದೆಯಾ ನರಳೋಣ. ಇದಕ್ಕೆ ಆ ದೇವರನ್ನು ಹೊಣೆಗಾರನನ್ನಾಗಿ ಯಾಕೆ ಮಾಡಬೇಕು ? ಆತನನ್ನು ಕಾಯಿ ಎಂದು ಅನ್ಯಮನಸ್ಕನಾಗಿ ಏಕೆ ಬೇಡಬೇಕು ? ನಾನು ಏನನ್ನಾದರೂ ಬೇಡಿದರೆ ಕೊಡಲು ಆತನು ಶಕ್ತನೆ ? ಎಲ್ಲವೂ ಅವನ ಕೊಡುಗೆ ಇರುವಾಗ ಅಂಜುವುದೇಕೆ ?

ಅಂಜಿದರಾಗದು, ಅಳುಕಿದರಾಗದು
ವಜ್ರ ಪಂಜರದೊಳಿದ್ದರಾಗದು
ತಪ್ಪುದುವೋ ಲಲಾಟ ಲಿಖಿತ

ಎಂಬ ಮಾತು ಗಟ್ಟಿಯಾಗಿ ಇಳಿದ ಬಳಿಕ ಯಾವ – ಯಾರ ಮಾತುಗಳು ನನ್ನೊಳಗೆ ಇಳಿಯಲಿಲ್ಲ. ಆದರೆ ಆ ಬಸವಾದಿ ಶರಣರು ಕೊಟ್ಟ ಪ್ರಜ್ಞೆಯ- ವಿವೇಚನೆಯ ಮಾರ್ಗವನ್ನು ನಾನು ತಪ್ಪದೆ ಪಾಲಿಸಿದೆ. ಸಹೋದರ ಡಾ.ಬಸವರಾಜ ಇಜೇರಿ ಹೇಳಿದಂತೆ ಮೊದಲು ಆಸ್ಪತ್ರೆಗೆ ದಾಖಲಾದೆ.

ಅಲ್ಲಿ ನೋಡಿದರೆ ಎಲ್ಲರೂ ಸಿರಿಯಸ್ಸ್ ರೋಗಿಗಳು. ಒರಲುವವರು, ನರಳುವವರು, ತಲೆಯ ತುಂಬಾ ಏನೇನೋ ತುಂಬಿಕೊಂಡಿರುವ ಕರೊನಾ ರೋಗಿಗಳು. ನನಗಾಗಲಿ ನನ್ನ ಹೆಂಡತಿ ಶರಾವತಿಗಾಗಲಿ ನಾಲ್ಕೆಂಟು ದಿನಗಳಲ್ಲಿ ಆಕ್ಸಿಜನ್ ಕೊರತೆ ಆಗಲಿಲ್ಲ. ಪಲ್ಸ್ ಮೀಡರ್ ರೀಡಿಂಗ್ ಮಾಡಿದಾಗಲೆಲ್ಲ ೯೭-೯೮ ಇರುತ್ತಿತ್ತು. ಆರೋಗ್ಯವಂತ ಮನುಷ್ಯನಿಗೆ ಏನು ಬೇಕೋ ಅದು ಇತ್ತು. ಒಂದು ವೇಳೆ ಕಡಿಮೆ ಆದರೂ ಮಾಡುವುದಿನ್ನೇನು ? ಬಾರದು ಬಪ್ಪದು, ಬಪ್ಪದು ತಪ್ಪದು ಇದು ಅಪ್ಪ ಬಸವಣ್ಣನವರ ವಚನ. ನನ್ನ ಜೀವದ ಉಸಿರು.

ಮೊದಲೊಂದು ದಿನ ಸ್ಪಂದನ ಆಸ್ಪತ್ರೆಯಲ್ಲಿ ಸುಮ್ಮನಿದ್ದು‌ ನೋಡಿದೆ.ಅಲ್ಲಿನ ಎಲ್ಲವೂ ನನ್ನ ಗಮನಕ್ಕೆ ಬಂತು. ಓಹೋ ಈ ರೋಗಕ್ಕೆ ಮುಖ್ಯ ರೆಸ್ಟು ಎಂಬುದು ಗೊತ್ತಾಯಿತು. ಹೊಟ್ಟೆ ತುಂಬಾ ಊಟ ಮಾಡುವುದು, ಗಡದ್ದಾಗಿ ಮಲಗುವುದು. ಎಚ್ಚರವಾದಾಗಲೆಲ್ಲ ನೀರು ಕುಡಿಯುವುದು. ಆಗಾಗ ಸಲೈನ ಮೂಲಕ ನಮ್ಮ ದೇಹದೊಳಗೆ ಕೊಡುವ ಔಷಧಿಯ ಪ್ರಭಾವಕ್ಕೋ ಏನೋ ಭರಪೂರ ನಿದ್ದೆ ಬಂದು ಬಿಡುತ್ತಿತ್ತು.

ಎರಡನೆ ದಿನ ನಾನು ಸಂಪೂರ್ಣ‌ ಬೆಡ್ ಆಶ್ರಯಿಸಲಿಲ್ಲ. ಕರೋನಾ ರೋಗದಿಂದ ಬಳಲುವ ರೋಗಿಗಳೊಂದಿಗೆ ಮಾತನಾಡತೊಡಗಿದೆ. ಅಯ್ಯೋ ಅವರಾದರೋ ಏನೋ ಆಗಬಾರದ್ದು ಆಗಿದೆ, ಎಂಬಂತೆ ಚಿಂತಾಜನಕ ಸ್ಥಿತಿಯಲ್ಲಿದ್ದರು. ಕೆಲವರು ನಮಗೆ ಬರಬಾರದ ರೋಗ ಬಂದಿದೆ ಏನು ಮಾಡುವುದು ಮಹಾರಾಯ ? ಎಂಬ ದುಗುಡ ಅವರನ್ನು ಕಾಡುತ್ತಿತ್ತು. ಅಲ್ಲಿಯೂ ಮೂರ್ನಾಲ್ಕು ಜನ ನನ್ನ ಪರಿಚಯಸ್ಥರಿದ್ದರು. ಅವರನ್ನು ಎಬ್ಬಿಸಿ ಕೂಡಿಸಿ ಮಾತನಾಡಿದೆ, ತಮಾಷೆ ಮಾಡಿದೆ. ನಕ್ಕೆ ಅವರನ್ನೂ ಅರಳಿಸಿದೆ. ಅವರ ಮುಖದ ಮೇಲೆ ನಗು ಹೊಮ್ಮಿದಾಗ ಸಹಜವಾಗಿ ನನ್ನೊಳಗಿನ‌ ಮನಶಕ್ತಿ ಇಮ್ಮಡಿಗೊಂಡಿತು. ಅಲ್ಲಿರುವ ನರ್ಸ್ಗಳು, ಆಯಾಗಳು, ಡಾಕ್ಟರ್ ನನ್ನ ವರ್ತನೆ ಕಂಡು ದಂಗಾಗಿದ್ದರು. ನಾನಂತೂ ಸ್ವಚ್ಛವಾಗಿ ಸ್ಯಾನಿಟೈಜ್ ಮಾಡಿಕೊಂಡು, ಸರಿಯಾಗಿ ಸೋಪನಿಂದ ತೊಳಕೊಂಡು ಪ್ರಜ್ಞಾಪೂರ್ವಕವಾಗಿ ಟಾಯ್ಲೆಟ್ಗಳನ್ನು ಬಳಸುವವನಾಗಿರುವುದರಿಂದ ಅವರು ಬಳಸುವ ರೂಮ್ ಗಳನ್ನು ಬಳಸಿದೆ.

ಕೊಲುವೆನೆಂಬ ಭಾಷೆ ದೇವನದಾದರೆ ಗೆಲುವೆನೆಂಬ ಭಾಷೆ ಭಕ್ತನದು” – ಎಂಬ ಅಪ್ಪ ಬಸವಣ್ಣನವರ ಮಾತು ಮನನವಾಗಿದ್ದರಿಂದ ಸ್ವಾತಂತ್ರ್ಯ ಹೋರಾಟಗಾರ ಡಾ.ಹೆಚ್.ದೊರೆಸ್ವಾಮಿ ಕೂಡ ಕರೋನಾ ಗೆದ್ದು ಬಂದಿದ್ದಾರೆ. ಕರೊನಾ ಗೆಲ್ಲುವುದು ಔಷಧಿಗಿಂತ ಮುಖ್ಯ ಮನೋಸ್ಥೈರ್ಯ. ಧೈರ್ಯವೇ ನಮ್ಮನ್ನು ಅರ್ಧ ಗೆಲ್ಲಿಸುತ್ತದೆ, ಅಧೈರ್ಯವೇ ನಮ್ಮನ್ನು ಸೋಲಿಸುತ್ತದೆ.

ಇಂಥ ಸಂದರ್ಭದಲ್ಲಿಯೂ ಕೆಲವು ಜನ‌ ಪಿಂಜರಾ ಪೋಲುಗಳು ಕರೊನಾ ಕುರಿತು ಏನೇನೋ ಅಸಡ್ಡೆಯ ಮಾತನಾಡುತ್ತವೆ. ತಮಗೆ ಏನೆಲ್ಲ ಗೊತ್ತು ಎಂಬ ಅಹಂಕಾರದ ಮಾತನಾಡುತ್ತವೆ. ಇತ್ತೀಚಿಗೆ ಹೊರಬಂದ ಅಭಿಗ್ಯಾ ಎಂಬ ಪೋರನೂ ಸಹ ಕರೋನಾ ಯಾವಾಗ ಹೋಗುತ್ತದೆ ಎಂದು ಹೇಳುತ್ತಾನೆ. ಕೆಲ ಮೂರ್ಖರು ಸೆಗಣಿ ಬಳಿದುಕೊಂಡು, ಆಕಳ ಉಚ್ಚೆ ಕುಡಿದರೆ ಕರೋನಾ ಹೋಗುತ್ತದೆ ಎಂದು ಸಾರುತ್ತವೆ. ಸಾರ್ವಜನಿಕರ ಆರೋಗ್ಯವನ್ನೂ ಕಾಪಾಡಲಾಗದ ಹೇತ್ಲಾಂಡಿ ಸರಕಾರಗಳು, ಜನರ ಜೀವವನ್ನು ಬಲಿ ಪಡೆಯುತ್ತಿವೆ. ಕೆಲವು ಕೋಮುವಾದಿ ಕ್ರಿಮಿಗಳು ಇಂಥ ಸಂಧರ್ಭದಲ್ಲಿಯೂ ತಮ್ಮ ಗುಪ್ತ ಅಜೆಂಡಾವನ್ನು ಹಬ್ಬಿಸುತ್ತಿದ್ದಾರೆ. ಅಪದ್ಧಗಳ ಭಾರತದಲ್ಲಿ ನಮಗೆ ನಾವೇ ಅರಿವನ್ನು ಕಂಡುಕೊಳ್ಳುವ ಮೂಲಕ, ವಿಜ್ಞಾನ ದೀವಿಗೆಯನ್ನು ಹಿಡಿದು ಮುನ್ನಡೆಯಬೇಕಿದೆ.

ಒಳ್ಳೆಯ ಆಹಾರ, ಕಣ್ತುಂಬ ನಿದ್ದೆ, ಎಂಟಿಬಯಾಟಿಕ್ ಗುಳಿಗೆ ಅಥವಾ ನಮ್ಮೊಳಗೆ ಪ್ರತ್ಯುತ್ಪನ್ನ ಗೊಳಿಸುವ ಹವ್ಯಾಸಗಳ ಮೂಲಕ ಕರೊನಾ ಹೊಡೆದೊಡಿಸಬಹುದು.

2 thoughts on “ಆತ್ಮಸ್ಥೈರ್ಯದ ಶರಣ ವಿಚಾರಗಳ ಮೂಲಕ ಕರೋನಾ ನಿತ್ರಾಣ ಮಾಡಬಹುದು

  1. ಇದಕಾರಂಜುವರು ಇದಕಾರುಳುಕುವರು👌💐ಸತ್ಯವಾದ ನುಡಿಗಳು🙏🙏

  2. Your wonderful experience and description spred lights on carona pendemic disease, congrats

Leave a Reply

Your email address will not be published. Required fields are marked *

error: Content is protected !!