ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಂಕಾರ ಪ್ರಾಣದಲ್ಲಿ ನಿರ್ಭಯರಾಗಿ ಬಾಳಿದ ಮಾತಾಜಿ

ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಂಕಾರ
ಪ್ರಾಣದಲ್ಲಿ ನಿರ್ಭಯರಾಗಿ ಬಾಳಿದ ಮಾತಾಜಿ

ಬಸವ ತತ್ವವನ್ನು ಬಿತ್ತಿ ಬೆಳೆದ ಪ್ರಮುಖ ವ್ಯಕ್ತಿಗಳಲ್ಲಿ ಮಾತೆ ಮಹಾದೇವಿಯವರ ಹೆಸರು ಪ್ರಮುಖವಾಗಿ ನಿಲ್ಲುತ್ತದೆ. ಪೂಜ್ಯ ಶ್ರೀ ಲಿಂಗಾನAದ ಮಹಾಸ್ವಾಮೀಜಿಗಳು ಹಾಗೂ ಮಾತಾಜಿ ಅವರು ರಾಜ್ಯದ ಧಾರ್ಮಿಕ ಕ್ಷೇತ್ರದಲ್ಲಿ ಕಾಣ ಸಿಕೊಳ್ಳುವುದಕ್ಕಿಂತ ಪೂರ್ವದಲ್ಲಿ ಹನ್ನೆರಡನೆಯ ಶತಮಾನದ ಬಸವಣ್ಣನವರು ಅಷ್ಟಾಗಿ ಜನ ಮಾನಸಕ್ಕೆ ಮುಟ್ಟಿರಲಿಲ್ಲ. ಬಸವಣ್ಣ ಅಂದರೆ ಎರಡು ಕೊಂಬು, ಒಂದು ಬಾಲ, ನಾಲ್ಕು ಕಾಲಿನ ನಂದಿಯೆ ಬಸವಣ್ಣ ಎಂಬ ತಪ್ಪು ಕಲ್ಪನೆಗಳು ಇದ್ದವು. ಬಸವಣ್ಣನವರ ಜಯಂತಿಯನ್ನು ಹರ್ಡೇಕರ್ ಮಂಜಪ್ಪನವರು ಆರಂಭಿಸಿದ್ದರೂ ಸಹ ಬಸವ ಜಯಂತಿ ಬಂದಾಗಲೆಲ್ಲ ಕರ್ನಾಟಕದ ಬಹುತೇಕ ಲಿಂಗಾಯತರು ಎತ್ತುಗಳ ಕೊಂಬುಗಳಿಗೆ ಬಣ್ಣ ಹಚ್ಚಿ, ಜೂಲಾ ಕಟ್ಟಿ, ಹೊಸ ಹೊಸ ಮಗಡಾ ಕಟ್ಟಿ, ಅವುಗಳ ಮೈ ತೊಳೆದು ಒಂದೆರಡು ತುತ್ತು ಸಿಹಿ ಹೊಳೆಗೆಯನ್ನು ಉಣ ್ಣಸಿ ಕೈ ತೊಳೆದುಕೊಳ್ಳುತ್ತಿದ್ದರು.

ವಚನ ಸಾಹಿತ್ಯ ಆಗ ಜನ ಮಾನಸಕ್ಕೆ ತಲುಪಿರಲಿಲ್ಲ. ವಚನ ಸಾಹಿತ್ಯದ ಅಧ್ಯಯನ ಪೀಠ, ಅವುಗಳ ಕುರಿತ ಅಭ್ಯಾಸ, ಸಂಶೋಧನೆ ಇತ್ಯಾದಿಗಳು ವಿಶ್ವ ವಿದ್ಯಾಲಯದ ಸ್ವತ್ತು ಎಂಬಂತೆ ಆಗಿತ್ತು. ಅಲ್ಲಿ ನಡೆಯುತ್ತಿದ್ದ ಚರ್ಚೆಗಳು ಆಯಾ ವಿಶ್ವವಿದ್ಯಾಲಯದ ವಿದ್ವತ್ ಜನಗಳ ಹಾಗೂ ವಿದ್ಯಾರ್ಥಿಗಳಿಗೆ ಮಾತ್ರ ಸಂಬಂಧಿಸಿದಂತೆ ಆಗಿತ್ತು. ರಾಜ್ಯದ ಬಹುತೇಕ ಮಠಗಳ ಚಟುವಟಿಕೆ ಸಹ ವಚನ ಸಾಹಿತ್ಯವನ್ನು ಪ್ರಚುರ ಪಡಿಸುವ ನಿಟ್ಟಿನಲ್ಲಿ ಗಂಭೀರ ಕೆಲಸಗಳು ನಡೆದಿರಲಿಲ್ಲ. ಬಹುಶಃ ಬಹಳಷ್ಟು ಕಡೆ ಶಿವಾನುಭವ ಗೋಷ್ಠಿಯನ್ನು ಕರೆದು ತಿಂಗಳಿಗೆ ಒಂದು ಸಲ ಮಾತ್ರ ಬಸವಣ್ಣ,ಅಲ್ಲಮ,ಅಕ್ಕ, ಚೆನ್ನಬಸವಣ್ಣ ಮುಂತಾದವರ ಹೆಸರುಗಳು ಸುಳಿದು ಹೋಗುತ್ತಿದ್ದವು. ಭಕ್ತ ಪ್ರಹ್ಲಾದ, ಭಕ್ತ ಕುಂಬಾರ, ಸಂತ ತುಕಾರಾಮ, ಕೋಳುರು ಕೊಡಗೂಸು ೩೩ ಜನ ಪುರಾತನ ಶರಣರ ಭಕ್ತಿಯೆ ಮಹತ್ವದ್ದಾಗಿ ಹೇಳುತ್ತಿದ್ದರು. ಹೀಗಾಗಿ ಮಠಗಳ ತುಂಬೆಲ್ಲ ಆರ್ಶೀವಾದ, ಪಾದ ಪೂಜೆ, ಲಕ್ಷ ಬಿಲ್ವಾರ್ಚನೆ, ಕೋಟಿ ದೀಪೋತ್ಸವ, ಅಡ್ಡ ಪಲ್ಲಕ್ಕಿ, ಪೀಠಾರೋಹಣ, ದಶಮಾನೋತ್ಸವ ಸಮಾರಂಭ ಇತ್ಯಾದಿಗಳೆ ನಡೆಯುತ್ತಿದ್ದವು.

ಹನ್ನೆರಡನೆಯ ಶತಮಾನದ ಲೋಕ ಸೂರ್ಯ ಬಸವಣ್ಣನವರ ಬಗೆಗೆ ಅಧ್ಯಯನ ನಡೆಸಿದ್ದ ಪೂಜ್ಯ ಲಿಂಗಾನಂದ ಅಪ್ಪಗಳು ಸುಮ್ಮನೆ ಕೂಡುವುದಕ್ಕೆ ಸಾಧ್ಯವಾಗಲಿಲ್ಲ. ಕಾರ್ತಿಕ ಲೋಕದಲ್ಲಿ ಆಕಾಶ ದೀಪವಾಗಿ ಬಂದ ಅಪ್ಪ ಬಸವಣ್ಣನವರನ್ನು ಜನ ಸಾಮಾನ್ಯರಿಗೆ ಪರಿಚಯಿಸಲೇಬೇಕು ಎಂದು ಪಣ ತೊಟ್ಟವರಂತೆ ನಾಡಿನ ಉದ್ದಗಲಕ್ಕೂ ಪಾದರಸದಂತೆ ಸಂಚರಿಸಿ, ಸಂಘಟಿಸಿದರು. ಇವರ ಮನೋಭಿಲಾಷೆಯನ್ನು ಅರಿತವರಂತೆ ಜೊತೆ ಜೊತೆಗೆ ಹೆಜ್ಜೆ ಹಾಕಿದವರು ಮಾತೆ ಮಹಾದೇವಿಯವರು. ಪೂಜ್ಯ ಲಿಂಗಾನಂದ ಅಪ್ಪಗಳಿಗೆ ಖಚಿತವಾಗಿ ಗೊತ್ತು. ಈಗಾಗಲೆ ಪಂಚ ಜಗದ್ಗುರುಗಳನ್ನು ಹೊತ್ತುಕೊಂಡ ಲಿಂಗಾಯತ ಸಮಾಜ ಕಕ್ಕಾವಿಕ್ಕಿಯಾಗಿ ನಿಂತಿದೆ. ಲಿಂಗಾಯತ ಧರ್ಮದ ಮೂಲ ತಿರುಳನ್ನು ಮರೆತು ತಾವು ನಡೆದುದೆ ರಾಜ ಮಾರ್ಗ ಎಂದು ಹೊರಟ ಜನಗಳಿಗೆ ಬ್ರೇಕ್ ಹಾಕಬೇಕಿದೆ. ನಿಜವಾದ ಲಿಂಗಾಯತ ತತ್ವಗಳನ್ನು ಜನ ಮಾನಸಕ್ಕೆ ತಲುಪಿಸಬೇಕಾಗಿದೆ ಎಂದವರು ಅರಿತರು.

ನಿಮ್ಮ ಪದವಿಯ ನಿಮ್ಮ ತಲೆಯಲ್ಲಿ ಸುತ್ತಿಕೊಳ್ಳಿ. ಪರಮ ಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ ಎಂಬ ವೀರ ಭಾಷೆ ಅರಿತಿದ್ದರೂ ಸಹ ಜನ ಮಾನಸಕ್ಕೆ ಶರಣರ ವಿಚಾರಧಾರೆ ತಲುಪಿಸಬೇಕೆಂಬ ಉತ್ಕಟವಾದ ಚಿಂತನೆಯಲ್ಲಿ ಮಾತಾಜಿಯವರಿಗೆ ಮಹಿಳಾ ಜಗದ್ಗುರು ಪಟ್ಟವನ್ನು ಕಟ್ಟಿದರು. ಜಗದ್ಗುರು ಪಟ್ಟ ಕೇವಲ ಪುರುಷರಿಗೆ ಮಾತ್ರ ಸೀಮಿತವಲ್ಲ. ಮಹಿಳೆಯೂ ಆ ಪೀಠವನ್ನು ಏರಿ ಧಾರ್ಮಿಕವಾಗಿಯೂ ಅವರು ಬೆಳೆಯಬಲ್ಲರು ಎಂದು ಸಾಧಿಸಿ ತೋರಿಸಿದರು.

ನ್ಯಾಯ ನಿಷ್ಠುರಿ, ಶರಣ ಯಾರ ದಾಕ್ಷಿಣ್ಯಕ್ಕೂ ಒಳಗಾಗದವರು. ಸಹಜವಾಗಿ ಆತ ಲೋಕ ವಿರೋಧಿಯೂ ಆಗಬಲ್ಲ. ಈ ಸತ್ಯವನ್ನು ಖಚಿತವಾಗಿ ಅರಿತುಕೊಂಡ ಮಾತೆ ಮಹಾದೇವಿಯವರು ಶರಣರ ಚಿಂತನೆಗಳನ್ನು ಲೋಕವ್ಯಾಪಿಗೊಳಿಸಲು ಬರವಣ ಗೆ ಆರಂಭಿಸಿದರು. ಶರಣರ ಕುರುತು ಸಣ್ಣ ಸಣ್ಣ ಹಾಡುಗಳನ್ನು ಬರೆದರು. ಆ ಹಾಡುಗಳಿಗೆ ತಾವೇ ರಾಗ ಸಂಯೋಜಿಸಿ ಹಾಡಿದರು. ಜನ ಸಾಮಾನ್ಯರಿಗೆ ಲಿಂಗಾಂಗ ಸಾಮರಸ್ಯ ತಿಳಿಸಿದರು. ಇಷ್ಟಲಿಂಗವನ್ನು ಕಟ್ಟಿಕೊಳ್ಳುವಂತೆ ಎಲ್ಲಾ ಜನಗಳಿಗೆ ಪ್ರೇರೇಪಿಸಿದರು. ಬಸವ ರಾಜ್ಯದ ಸಿರಿಯು.ಬಸವ ಬಡವರ ನಿಧಿಯು. ಬಸವ ಮಳೆ ಬೆಳೆಯೂ ನಾಡೊಳಗೆ ಬಸವನೆ ಸಗ್ಗ ಸೋಪಾನ ಹೇಗಾಗುತ್ತಾರೆ ಎಂಬುದನ್ನು ಮನಂಬುಗುವAತೆ ವಿಸ್ತರಿಸಿ ಹೇಳಿದರು.

ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ
ತಿಳಿಯಲೀಯದು, ಎಚ್ಚರಲೀಯದು,
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ
ಲಿಂಗತಂದೆ, ಸುಳಿದೆಗೆದು ಬೆಳೆವೆನು
ಕೂಡಲಸಂಗಮದೇವಾ

ಎAಬ ಬಸವಣ್ಣನವರ ವಚನಗಳ ತಾತ್ಪರ್ಯದಂತೆ, ಅದುವರೆಗೂ ಪಟ್ಟಭದ್ರ ಶಕ್ತಿಗಳು ಲಿಂಗಾಯತವೆAಬ ಬೆಳೆವ ಭೂಮಿಯಲ್ಲಿ ಹಾಕಿದ್ದ ಕಸವನ್ನು ಸುಟ್ಟು, ಸುಳಿದೆಗೆದು ಬೆಳೆ ತೆಗೆಯಲು ಮಾತಾಜಿ ಅಕ್ಷರಶಃ ತೊಡಗಿಕೊಂಡರು. ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ನಾಡಿನ ಉದ್ದಕ್ಕೂ ತಿರುಗಾಡಿ ಪ್ರವಚನ ಮಾಡಲು ತೊಡಗಿದರು. ಆಗ ಸಹಜವಾಗಿ ಸ್ಥಿತಿ ಸ್ಥಾಪಕ ಶಕ್ತಿಗಳಿಗೆ ಎಲ್ಲಿಲ್ಲದ ಕೋಪ ಬಂತು. ನೆಲ ಮುಗಿಲು ಒಂದಾಗುವಂತೆ ಆರ್ಭಟಿಸಿದರು. ಗುಡುಗಿದರು. ಹಲವಾರು ಅಪವಾದಗಳ ಸುರಿ ಮಳೆಯನ್ನೆ ಸುರಿದರು. ಆದರೆ ಮಾತಾಜಿಗೆ ಸಂಪೂರ್ಣ ಅರ್ಥವಾಗಿತ್ತು. ತಾವು ಆಯ್ದುಕೊಂಡ ದಾರಿ ಕಲ್ಲು ಮುಳ್ಳಿನದು. ಇಲ್ಲಿ ನಿಂದನೆಗಳು, ಕುತರ್ಕಗಳು, ಕುಚೇಷ್ಟೆಗಳು ಸಾಮಾನ್ಯ. ಎನ್ನವಾಮ ಕ್ಷೇಮ ನಿಮ್ಮದಯ್ಯಾ. ಎನ್ನ ಹಾನಿವೃದ್ಧಿ ನಿಮ್ಮದಯ್ಯಾ ಎಂದು ತಮ್ಮನ್ನು ಸಂಪೂರ್ಣ ಬಸವಣ್ಣವರಿಗೆ ಅರ್ಪಿಸಿಕೊಂಡು ಮುನ್ನಡೆದರು. ಲೋಕದ ಜನರನ್ನು ಮೆಚ್ಚಿಸಲು ಸಾಧ್ಯವಿಲ್ಲ. ಸ್ತುತಿ ಮತ್ತು ನಿಂದೆಗಳನ್ನು ದಾಟಿ ನಿಂತಾಗಲೆ ಬಸವ ತತ್ವ ಪಸರಿಸಲು ಸಾಧ್ಯವಾಗುತ್ತದೆ ಎಂದವರಿಗೆ ಖಚಿತವಾಗಿ ಗೊತ್ತಿತ್ತು. ಈ ಖಚಿತತೆಗೆ ಮುಖ್ಯ ಕಾರಣ ವಚನ ಸಾಹಿತ್ಯದ ಆಳವಾದ ಓದು ಎಂಬುದನ್ನು ನಾವು ಮರೆಯಬಾರದು. ಕಾಳಜಿ ಪೂರ್ವಕವಾದ, ಅಂತಃಕರಣ ಹೃದಯ ಹೊಂದಿದ್ದ ಮಾತಾಜಿ ಒಂದು ರೀತಿಯಲ್ಲಿ ಶಿವಶರಣೆ ಅಕ್ಕಮಹಾದೇವಿಯ ತಾಯಿಯ ವಚನಕ್ಕೆ ಭಾಷೆ ಬರೆದಂತೆ ಬದುಕಿದರು.

ಕೂಡಲ ಸಂಗಮ ಕ್ಷೇತ್ರದಲ್ಲಿ ಸರಕಾರ ಆಲೋಚಿಸುವುದಕ್ಕಿಂತ ಪೂರ್ವದಲ್ಲಿಯೆ ಶರಣರ ಮೂರ್ತಿಗಳನ್ನು ಮಾಡಿ ಅನಕ್ಷರಸ್ಥ ಜನಗಳ ಮನ ಸೆಳೆಯಲು ಯತ್ನಿಸಿದರು. ಅಲ್ಲಿಯವರೆಗೆ ಲಿಂಗಾಯತರು ಎಂದರೆ ಕೇವಲ ಬಸವಣ್ಣನವರ ಸ್ವತ್ತು ಎಂಬ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಸಮಗಾರ ಹರಳಯ್ಯ ಮುಂತಾದ ಶರಣರ ಕುರಿತ ಕಿರು ನಾಟಕಗಳನ್ನು ಆಡಿಸಿದರು. ಆಯಾ ಶರಣರ ಸಣ್ಣ ಸಣ್ಣ ವಚನ ಪುಸ್ತಿಕೆಗಳನ್ನು ಹೊರ ತಂದರು. ಬರೀ ಉಣ್ಣುವುದು ತಿನ್ನುವುದು ದಾಸೋಹವಲ್ಲ. ಜ್ಞಾನ ದಾಸೋಹವೂ ಪ್ರಮುಖ ಎಂಬ ಚಿಂತನೆಗಳನ್ನು ಹುಟ್ಟು ಹಾಕಿದರು. ಮಾತಾಜಿಯವರ ಬಹುತೇಕ ಕಾರ್ಯಗಳು ಜನ ಸಾಮಾನ್ಯರನ್ನು ಉತ್ತೇಜಿಸಿ ಪಡೆದುದು ಆಗಿತ್ತೆ ಹೊರತು ಸರಕಾರದ ಖಜಾನೆಗೆ ಕೈ ಹಾಕಿ ಪಡೆದುದಾಗಿರಲಿಲ್ಲ.

ಬಸವ ತತ್ವವನ್ನು ಹೇಳುವುದ ಜೊತೆ ಜೊತೆಗೆ ಶಾಲಾ ಕಾಲೇಜುಗಳನ್ನು ತೆರೆದಿದ್ದರೆ ಅವರಿಗೆ ಇಂಜನೀಯರಿಂಗ್, ಮೆಡಿಕಲ್ ಕಾಲೇಜುಗಳೆಂಬ ದುಡ್ಡು ಹೆರುವ ಸಂಸ್ಥೆಗಳನ್ನು ಸುಲಭವಾಗಿ ಕಟ್ಟಬಹುದಿತ್ತು. ಹಣ ಅವರಿಗೆ ಮುಖ್ಯವಾಗಿರಲಿಲ್ಲ. ಶರಣರ ಚಿಂತನೆಗಳು, ವಚನಗಳು, ಅವರ ಅಮೂಲ್ಯವಾದ ಜೀವದ್ರವ್ಯವನ್ನು ಪರಿಚಯಿಸುವ ಹುಚ್ಚು ಹಿಡಿದಿತ್ತು. ಶರಣರ ಹುಚ್ಚು ಹಿಡಿದಿದ್ದರಿಂದಲೆ ಮಾತಾಜಿ ಕಲ್ಯಾಣದ ಅಂಗಳದಲ್ಲಿ ಬಸವಣ್ಣನವರ ಭವ್ಯವೂ ದಿವ್ಯವೂ ಆದ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಾಧ್ಯವಾಯಿತು. ಇದು ಕೇವಲ ಜಾತಿ ಲಿಂಗಾಯತರಿಂದ ಎತ್ತಿದ ಚಂದಾ ಹಣವಲ್ಲ. ಇವನಾರವ ಇವನಾರವನೆನ್ನದೆ, ಇವ ನಮ್ಮವ ಇವ ನಮ್ಮವ ಎಂಬ ಆಭಿಲಾಷೆಯಿಂದ ಎಲ್ಲಾ ಜನವರ್ಗದಿಂದ ಬಂದ ಅಭೂತಪೂರ್ವ ಬೆಂಬಲ.

ಮಾತಾಜಿ ಬಸವ ಕಲ್ಯಾಣಕ್ಕೆ ಕಾಲಿಡುವ ಪೂರ್ವದಲ್ಲಿ ಬಸವಣ್ಣನರು ಹಾಗೂ ಅಂದಿನ ಬಹುತೇಕ ಶರಣರು ನಡೆದು ಹೋದ ಕಲ್ಯಾಣ ನಗರ ಭಾವುಕ ಜನಗಳಿಗೆ ಕಣ ್ಣÃರು ಬರಿಸುತ್ತಿತ್ತು. ಮಡಿವಾಳ ಮಾಚಿದೇವ ಹೊಂಡ, ತಾಯಿ ನೀಲಮ್ಮಳ ಸ್ಮಾರಕ, ಅಂಬಿಗರ ಚೌಡಯ್ಯ, ಘನಲಿಂಗ ರುದ್ರ ಮುನಿಗಳ ಮುಂತಾದ ಶರಣರ ಹೆಸರು ಹೇಳುವವರು ಬೆರಳೆಣ ಯ ಜನ ಮಾತ್ರ ಇತ್ತು. ಶರಣರು ನಡೆದಾಡಿದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಬೇಕಾದರೆ ಅದಕ್ಕೆ ಪ್ರೇರಕ ಶಕ್ತಿಯಾಗಿ ನಿಂತವರು ಮಾತೆ ಮಹಾದೇವಿ ತಾಯಿಯವರು ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು.

ಅನಕ್ಷರಸ್ಥ ಜನಗಳಿಗೂ ಬಸವಣ್ಣವರ ಕ್ರಾಂತಿ ಪರಿಚಯವಾಗಬೇಕು. ಎಲ್ಲರವ ನಮ್ಮಣ್ಣ ಕಲ್ಯಾಣದ ಬಸವಣ್ಣ ಎಂದು ಅವರಿಗೆಲ್ಲ ಅರಿವಾಗಬೇಕೆಂದು ಮುದ್ದಾಂ ಕ್ರಾಂತಿಯೋಗಿ ಬಸವಣ್ಣ ಎಂಬ ಅತ್ಯುತ್ತಮ ಚಲಚಿತ್ರವನ್ನು ಮಾಡಿದರು. ಇದಕ್ಕೆ ಸಾಕಷ್ಟು ದುಡ್ಡು ಖರ್ಚು ಮಾಡಿದರು. ಸುಂದವರವಾದ ಹಾಡುಗಳನ್ನು ಸ್ವತಃ ತಾವೇ ರಚಿಸಿ ಸೈ ಎನಿಸಿಕೊಂಡರು. ತೆರೆದಿದೆ ನಮದೆಂತ ಭಾಗ್ಯ ಎಂಬ ಹೃದ್ಯವಾದ ಹಾಡನ್ನು ಸಂಯೋಜಿಸಿ ಹಾಡಿಸಿದರು.

ಬಸವಣ್ಣನವರು ಕೇವಲ ಭಕ್ತಿ ಭಂಡಾರಿ ಅಲ್ಲ. ಅವರು ಕ್ರಾಂತಿ ಪುರುಷರೂ ಹೌದು ಎಂಬುದನ್ನವರು ತಮ್ಮ ನಡೆಗಳ ಮೂಲಕ ತೋರಿಸಿದರು. ಕೂಡಲ ಸಂಗಮದಲ್ಲಿ ಪ್ರತಿ ವರ್ಷ ಶರಣ ಮೇಳಗಳನ್ನು ಮಾಡಿ ಯಶಸ್ವಿಯಾದರು. ಕಲ್ಯಾಣ ನಗರದಲ್ಲಿ ಕಲ್ಯಾಣ ಪರ್ವಗಳನ್ನು ಯೋಜಿಸಿ ಜನ ಮಾನಸದ ಭಿತ್ತಿಗಳಲಿ ಸೇರಿ ಹೋದರು. ಲಿಂಗಾಯತ ಹೋರಾಟದ ಸಂದರ್ಭದಲ್ಲರಂತೂ ತಮ್ಮ ಅನಾರೋಗ್ಯವನ್ನು ಗಮನಿಸದೆ ರ‍್ಯಾಲಿಗಳಲ್ಲಿ ಭಾಗವಹಿಸಿದರು. ಲಿಂಗಾಯತ ಧರ್ಮ ಸ್ವತಂತ್ರವಾದರೆ, ಹಿಂದೂ ಧರ್ಮದ ಉರುಲಿನಿಂದ ನಾವೆಲ್ಲ ಪಾರಾಗಿ ಪ್ರಜ್ಞಾವಂತ ಸಮಾಜ ಸೃಷ್ಟಿಯಾಗುತ್ತದೆ ಎಂದವರು ನಂಬಿದ್ದರು. ಸಾಕಷ್ಟು ಅನಾರೋಗ್ಯಕ್ಕೆ ಇಡಾಗಿದ್ದರೂ ಸಹ ಅದನ್ನು ಗಣನೆಗೆ ತೆಕ್ಕೊಳದೆ ಕೂಡಲ ಸಂಗಮದ ಶರಣ ಮೇಳದ ಬಹಿರಂಗ ಸಭೆಯಲ್ಲಿ (ಗಾಜಿನ ಪುಟ್ಟ ರೂಮ್ ನಲ್ಲಿ ) ಕಾಣ ಸಿಕೊಂಡು ಛಲಬೇಕು ಶರಣಂಗೆ ಹಿಡಿದುದ ಬಿಡೆನೆಂಬ ಎಂಬ ವಚನದ ಮಾತಿಗೆ ಸಾಕ್ಷಿಯಾದರು.

ರಾಷ್ಟçದ ಮೂಲೆ ಮೂಲೆಯಲ್ಲಿಯೂ ರಾಷ್ಟಿçÃಯ ಬಸವ ದಳವನ್ನು ಕಟ್ಟಿದರು. ಆ ಜನಗಳೆಲ್ಲ ಪ್ರೀತಿ ವಿಶ್ವಾಸ ಹಾಗೂ ಅಭಿಮಾನಗಳಿಂದ ಕಾಣ ಕೆ ಕೊಡುತ್ತಿದ್ದರು. ಆದರೆ ಆ ಕಾಣ ಕೆಯನ್ನು ಎಂದಿಗೂ ತಮ್ಮ ಆಡಂಬರದ ಜೀವನಕ್ಕೆ ಬಳಸಲಿಲ್ಲ. ತಮ್ಮ ಜೀವಿತದ ಕಟ್ಟ ಕಡೆಯ ದಿನಗಳಲ್ಲೂ ತಮ್ಮ ಕೊಠಡಿಗೆ ಹವಾ ನಿಯಂತ್ರಿತವನ್ನೂ ಕೂಡ ಹಾಕಿಸಿಕೊಳ್ಳದೆ ಇದ್ದದ್ದು ಮತ್ತೊಂದು ಅಚ್ಚರಿಯ ಸಂಗತಿ. ಕಾಣ ಯಸೋಲ, ಅರ್ಧಗಾಣ ಯ ಗೆಲ್ಲ ಜಾಣ ನೋಡವ ನಮ್ಮ ಕೂಡಲ ಸಂಗಮದೇವಾ ಎಂದು ಬಸವಣ್ಣನವರ ವಚನದ ಸಾಲು ಅವರನ್ನು ಕೈ ಹಿಡಿದು ನಡೆಸಿತ್ತು.

ಮಾತಾಜಿ ಕೂಡಲ ಸಂಗಮದೇವಾ ಎಂಬ ಅಂಕಿತ ಬದಲಾವಣೆ ಮಾಡಿದ್ದು ನಾವೆಲ್ಲ ಪತ್ರಿಕೆಗಳಲ್ಲಿ ಲೇಖನ ಬರೆಯುವ ಮೂಲಕ, ಭಾಷಣಗಳ ಮೂಲಕ ವಿರೋಧ ವ್ಯಕ್ತ ಪಡಿಸಿದ್ದೇವು. ಆದರೆ ಅದನ್ನೆಂದು ದೊಡ್ಡದು ಮಾಡಿ ನೋಡದೆ ಅವರ ಆ ವಿಚಾರದ ವಿರೋಧಿಯಾದ ನನ್ನನ್ನೂ ಶರಣ ಮೇಳಕ್ಕೆ ಒಂದೆರಡು ಬಾರಿ ಸ್ವತಃ ಅವರೆ ಆಹ್ವಾನಿಸಿ ಕರೆದರು. ಕಲ್ಯಾಣ ಪರ್ವದಲ್ಲಿ ಭಾಗವಹಿಸುವಂತೆ ಉತ್ತೇಜಿಸಿದರು. ಅವರೊಂದಿಗೆ ವೇದಿಕೆ ಹಂಚಿಕೊಂಡು ನಾನು ಕಠೋರವಾಗಿ ಶರಣ ವಚನಗಳ ಮೂಲಕ ಇಂದಿನ ಮಠೀಯ ವ್ಯವಸ್ಥೆ ಬಗ್ಗೆ ಸಾತ್ವಿಕ ಸಿಟ್ಟು ತೋರುತ್ತಿದ್ದರೆ ನನ್ನತ್ತ ಕಿರುಗಣ ್ಣನಿಂದ ನೋಡಿ ಖುಷಿ ಪಟ್ಟರು. ಹಾಡಿದರೆ ಎನ್ನೊಡೆಯನ ಹಾಡುವೆ. ಬೇಡಿದರೆ ಎನ್ನೊಡೆಯನ ಬೇಡುವೆ. ಒಡೆಯಂಗೆ ಒಡಲ ತೋರಿ ಎನ್ನ ಬಡತನವ ಭಿನೈಸುವೆ ಎಂಬ ಅಪ್ಪ ಬಸವಣ್ಣನವರ ವಚನವನ್ನು ನಡೆಗಡಣವಾಗಿಟ್ಟುಕೊಂಡು ನಡೆದು ಹೋದರು.

ಮಾಧ್ಯಮದ ಕೆಲವರು ಕುಚೇಷ್ಟೆಯಿಂದ ಅವರ ದಿಕ್ಕು ತಪ್ಪಿಸಲು ಏನೇನೋ ಪ್ರಶ್ನೆಗಳ ಸುರಿ ಮಳೆಗರೆದರೂ ಅವುಗಳನ್ನು ಎದುರಿಸಿ, ಸೂಕ್ತವಾದ ಉತ್ತರ ಕೊಡುವ ತಾಕತ್ತು ಮಾತಾಜಿಯವರಿಗೆ ಸಿದ್ದಿಸಿತ್ತು. ಅವರ ಎದುರಿಗೆ ಪ್ರಶ್ನೆಗಳು ಸೋಲುತ್ತಿದ್ದವು. ವಚನಗಳನ್ನು ಆಧರಿಸಿ ಮಾತಾಜಿ ಕೊಡುವ ಉತ್ತರಗಳು ಎದುರಿಗಿನ ವ್ಯಕ್ತಿಯ ಜಂಘಾಬಲವನ್ನೆ ಉಡುಗಿಸುತ್ತಿತ್ತು. ಎಂದಿಗೂ ಆಕ್ರೋಶಗೊಳ್ಳದೆ ತಣ್ಣಗೆ ವಚನ ತತ್ವಗಳನ್ನು ಹೇಳುವ ರೀತಿ ಅಮೋಘವಾದುದು. ಶರಣರ ವಿಚಾರಗಳನ್ನು ಅಕ್ಷರಸ್ಥರಿಗೂ ಮುಟ್ಟಿಸಬೇಕೆಂದು ಹೊರಟಾಗ ಹೊರ ಹೊಮ್ಮಿದ ಕಲ್ಯಾಣ ಕಿರಣ ಮಾಸ ಪತ್ರಿಕೆ ಜನಾಂದೋಲವನ್ನು ಉಂಟು ಮಾಡಿತು. ವಚನಗಳ ಆಂತರ್ಯ, ಶರಣರ ತುಡಿತ ಮಿಡಿತಗಳು ಆ ಪತ್ರಿಕೆಯ ಜೀವ ಜೀವಾಳ.

ಬಹಳಷ್ಟು ಯುವ ಜನತೆಗೆ ಮಾತಾಜಿ ಒಬ್ಬ ಅತ್ಯುತ್ತಮ ಕಾದಂಬರಿಕಾರ್ತಿ ಎಂಬುದು ಗೊತ್ತಿಲ್ಲ. ಬರವಣ ಗೆಯ ಆರಂಭದಲ್ಲಿ ರಚಿಸಿದ ಹೆಪ್ಪಿಟ್ಟ ಹಾಲು ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆದುಕೊಂಡಿತು. ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಇಂದಿಗೂ ನಮ್ಮ ಕಣ್ಣ ಮುಂದೆಯೆ ಇರುವ ಚಿತ್ರಣಗಳಾಗಿವೆ. ಮನಶಾಸ್ತç ಹಾಗೂ ಆಧ್ಯಾತ್ಮೀಕ ಬದುಕಿನ ಚಲನವಲಗಳು ಇಲ್ಲಿ ಪಾತ್ರಗಳಾಗಿ ರೂಪಿತವಾಗಿವೆ.

ಅನುಭವ ಮಂಟಪ ಮಾದರಿಯ ಸಮಾಜವನ್ನು ಬಯಸುತ್ತಿದ್ದ ಮಾತಾಜಿ ಎಲ್ಲರ ಅಭಿಪ್ರಾಯಗಳಿಗೂ ಮನ್ನಣೆ ನೀಡುತ್ತಿದ್ದರು. ಪ್ರಜಾಪ್ರಭುತ್ವದ ಮಹತ್ವದ ಸ್ಥಾನಗಳಲ್ಲಿ ಒಂದಾದ ಸುಪ್ರಿಂಕೋರ್ಟ ಲಿಂಗದೇವ ಅಂಕಿತಕ್ಕಾಗಿ ನೀಡಿದ ತೀರ್ಪನ್ನು ಕಲಬುರ್ಗಿಯ ಲಿಂಗಾಯತ ರ‍್ಯಾಲಿಯಲ್ಲಿ ಒಪ್ಪಿಕೊಂಡು, ತಮ್ಮ ಘನತೆ ಗೌರವಗಳನ್ನು ಹೆಚ್ಚಿಸಿಕೊಂಡರು. ಲಿಂಗದೇವ ಅಂಕಿತದ ಬಸವ ವಚನ ದೀಪ್ತಿ ಕೃತಿಯನ್ನು ಮರು ಮುದ್ರಿಸುವಾಗ ಕೂಡಲಸಂಗಮದೇವಾ ಎಂಬ ಅಂಕಿತದೊಂದಿಗೆ ಪ್ರಕಟಿಸುವುದಾಗಿ ತಿಳಿಸಿದರು. ಅದುವರೆಗೆ ಸಮಾಜದಲ್ಲಿ ಎದ್ದಿದ್ದ ಹಲವಾರು ಗೊಂದಲಗಳಿಗೆ ತೆರೆ ಎಳೆಯುವ ಮೂಲಕ ಚದುರಿ ಹೋದ ಬಸವ ಸಂಕುಲವನ್ನು ಮತ್ತೆ ಒಂದುಗೂಡಿಸಿದರು.

ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಂಕಾರ
ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷ
ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ
ಜ್ಞಾನದಲ್ಲಿ ಪರಮಾನಂದವೆಡೆಗೊಂಡ ಬಳಿಕ
ಸೌರಾಷ್ಟç ಸೋಮೇಶ್ವರನೆಂಬ ಕದಂಬ ಲಿಂಗ ಬೇರಿಲ್ಲ ಕಾಣ ರೋ !

ಎಂಬಂತೆ ತಮ್ಮ ಜೀವನವನ್ನು ಸವೆಯೇ ಬಳಸಿ ಉರಿಯುಂಡ ಕರ್ಪೂರದಂತೆ ಬೆಳಗಿದರು. ಬಯಲಲ್ಲಿ ಬಯಲಾಗಿ ಎಲ್ಲರೊಳಗೂ ಬೆರೆತು ಹೋದ ಜೀವ ಈಗ ನಮ್ಮ ನಡುವೆ ಇಲ್ಲ ಎಂದು ಹೇಳಲು ಸಾಧ್ಯವೆ ?

ವಿಶ್ವಾರಾಧ್ಯ ಸತ್ಯಂಪೇಟೆ
ಅಧ್ಯಕ್ಷರು : ಬಸವಮಾರ್ಗ ಪತ್ರಿಷ್ಠಾನ ಸತ್ಯಂಪೇಟೆ
ಬಸವ ಬೆಳಕು, ಬುದ್ಧ ವಿಹಾರ ಹತ್ತಿರ
ಅಂಚೆ : ಶಹಾಪುರ – ೫೮೫೨೨೩
ಯಾದಗಿರಿ (ಜಿಲ್ಲೆ)
೯೦೦೮೮೦೨೪೫೬,೯೪೮೦೧೬೧೩೧೫

5 thoughts on “ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಂಕಾರ ಪ್ರಾಣದಲ್ಲಿ ನಿರ್ಭಯರಾಗಿ ಬಾಳಿದ ಮಾತಾಜಿ

 1. ಶರಣಾರ್ಥಿಗಳು ಅಪ್ಪವರೆ
  ಪ.ಪೂ.ಮಾತಾಜಿಯರ ಕುರಿತು ಅಚ್ಚುಕಟ್ಟಾಗಿ ಅರ್ಥಪೂರ್ಣವಾದ ಸಾಹಿತ್ಯ ಬಳಸಿ ಲೇಖನ ಬರೆದಿದ್ದಿರಿ…….ತಮ್ಮ ಅತ್ಯಮೂಲ್ಯ ಸೇವೆಗೆ ಭಕ್ತಿಪೂರ್ವಕ ಶರಣು ಶರಣಾರ್ಥಿಗಳು

 2. ಬಸವಣ್ಣ ಅವರ ಬಗ್ಗೆ ಅಪಾರ ಗೌರವ ನೀಡಿ ಇಡೀ ಜಗತ್ತಿಗೇ ಮತ್ತೆ ಬೆಳಕನ್ನು ಕೊಡುವ ಕೆಲಸ ಮಾಡಿದ್ದಾರೆ.

 3. ಶ್ರೀ ಲಿಂಗಾನಂದ ಸ್ವಾಮಿಗಳ ಮಾ
  ಮಾತೆ ಹಾದೇವಿಯವರ ವ್ಯಕ್ತಿತ್ವವನ್ನು ಗೌರವಿಸುವ
  ಈ ಲೇಖನ ಮೌಲಿಕ ವಾಗಿದೆ ಸರ್ .ವಚನ ಸಾಹಿತ್ಯದ
  ಪ್ರಚಾರಕ್ಕಾಗಿ ಸ್ತುತಿ ನಿಂದೆಗಳನ್ನು ಎದಿರಿಸಿ ಸಾಮಾನ್ಯ ಜನರಿಗೂ ಮುಟ್ಟಿಸುವ ಕೆಲಸ ಸುಲಭ ದ್ದಾಗಿರಲಿಲ್ಲ. ಆ ಕೆಲಸವನ್ನು ಮಾಡಿ ಯಶಸ್ಸು
  ಸಹಿತ ಪಡೆದು ಕೊಂಡರು..
  ಅತ್ಯುತ್ತಮ ಲೇಖನ ಸರ್.

Leave a Reply

Your email address will not be published. Required fields are marked *

error: Content is protected !!