ದುರ್ಜನರ ಮುಂದೆ ಸಜ್ಜನಿಕೆ ಮೆರವುದೆ ?

ದುರ್ಜನರ ಮುಂದೆ ಸಜ್ಜನಿಕೆ ಮೆರವುದೆ ?

ಪ್ರಾಮಾಣಿಕತೆಯ ಅಳತೆಗೋಲು ಯಾವುದು ? ಪ್ರಾಮಾಣಿಕತೆಗೆ ಸದಾ ತೊಂದರೆಗಳು ಬರುವುದುಂಟಲ್ಲ ಯಾಕೆ ? ಎಂದು ಹಲವಾರು ಸಲ ಯೋಚಿಸಿದ್ದೇನೆ. ಸತ್ಯ ಬೇಕಾದಷ್ಟು ಸತ್ವಶಾಲಿಯಾಗಿದ್ದರೂ ಅಸತ್ಯದ ಮುಂದೆ ಸೋಲುತ್ತದಲ್ಲ , ಎಂದು ? ಕೊನೆಗೂ ಸತ್ಯ ಗೆಲುವುದು ಖಚಿತ. ಆದರೆ ಅಲ್ಲಿಯವರೆಗೆ ಅಸತ್ಯದ್ದೆ ಕಾರುಬಾರು ನಡೆಯುತ್ತದಲ್ಲ ಎಂದು ಚಿಂತಿತನಾಗಿದ್ದೇನೆ. ಸತ್ಯದ ಬೆನ್ನುಬಿದ್ದ ಸತ್ಯ ಹರಿಶ್ಚಂದ್ರನ ಪರಿಸ್ಥಿತಿ ಏನಾಯಿತು ? ಹರಿಶ್ಚಂದ್ರನ ಹೆಂಡತಿಯಾದ ಚಂದ್ರಮತಿ ಮತ್ತು ಮಗ ಲೋಹಿತನ ಸ್ಥಿತಿ ಚಿಂತಾಜನಕವಾಯಿತ್ತಲ್ಲವೆ ? ಆ ಕುಟುಂಬಕ್ಕೆ ಎಷ್ಟು ಕಷ್ಟ ಕೋಟಲೆಗಳು – ಆಪವಾದಗಳು ?

ಸತ್ಯ ಮತ್ತು ಪ್ರಾಮಾಣಿಕತೆಯನ್ನೆ ಉಸಿರಾಗಿಸಿಕೊಂಡು ಬದುಕಿದ ಮಹಾತ್ಮಗಾಂಧೀಜಿಯನ್ನೆ ಗುಂಡಿಟ್ಟುಕೊ0ದವರು ನಾವಲ್ಲವೆ ? ಕೆಲವರು ಹೇಳುತ್ತಾರೆ ಗಾಂಧೀಜಿಯ ಜೀವಕ್ಕೆ ಗುಂಡಿಟ್ಟಿರಬಹುದು. ಆದರೆ ಅವರು ಸತ್ಯ ಪ್ರಾಮಾಣಿಕತೆಗೆ ಗುಂಡಿಡಲು ಸಾಧ್ಯವೆ ? ಎಂದು ಕೇಳುತ್ತಾರೆ. ಗೆಲಿಲಿಯೋ ಭೂಮಿ ಗುಂಡಗಿದೆ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದಾಗ ಆತನನ್ನು ಮರಣದಂಡನೆಗೆ ಗುರಿಪಡಿಸಲಾಯಿತು. ಆದರೆ ಆ ವ್ಯಕ್ತಿ ಹೇಳಿದ ಸತ್ಯದ ಸಿದ್ಧಾಂತಕ್ಕೆ ಮರಣದಂಡನೆ ವಿಧಿಸಲು ಸಾಧ್ಯವೆ ? ಸಾಕ್ರೇಟಿಸ್ ಗೆ ವಿಷಪ್ರಾಶನ ಮಾಡಿದರು, ಸಾಕ್ರೇಟಿಸ್ ಹೇಳಿದ ತತ್ವಗಳಿಗೆ ವಿಷ ಉಣಿಸಲು ಸಾಧ್ಯವಾಯಿತೆ ? ಏಸುವನ್ನು ಗೋಡೆಗೆ ತಗುಲಿಸಿ ಮೊಳೆ ಜಡಿಯಲಾಯಿತು. ಆತ ಪ್ರತಿಪಾದಿಸಿದ ತತ್ವ ಸಿದ್ಧಾಂತಗಳಿಗೆ ಮೊಳೆ ಹೊಡೆಯಲು ಸಾಧ್ಯವೆ ?

ಸತ್ಯ ಯಾವಾಗಲೂ ಒಬ್ಬಂಟಿ ಎಂಬುದನ್ನು ಇತಿಹಾಸ ನಮಗೆ ತಿಳಿಸಿಕೊಡುತ್ತದೆ. ಸುಳ್ಳಿಗೆ ಸಾವಿರ ಮುಖ ಇವೆ. ಅದು ಊಸರವಳ್ಳಿಯಂತೆ ಕ್ಷಣ ಕ್ಷಣಕ್ಕೂ ಬಣ್ಣ ಬದಲಾಯಿಸುತ್ತದೆ. ಆದರೆ ಸತ್ಯಕ್ಕೆ ಇರುವುದು ಒಂದೆ ಒಂದು ಮುಖ. ಸುಳ್ಳಿನಂತೆ ಅದು ಕ್ಷಣ ಕ್ಷಣಕ್ಕೂ ತನ್ನ ಬಣ್ಣ ಬದಲಾಯಿಸಲಾಗದು. ಬಣ್ಣ ಬಣ್ಣದ ಆಕರ್ಷಕ ಮಾತುಗಳಿಗೆ ಒಳಗಾಗುವ ನಾವುಗಳು ಸತ್ಯದ ನಿಷ್ಠುರ ಮಾತುಗಳ ಪ್ರಭಾವಕ್ಕೆ ಒಳಗಾಗುವುದು ಕಷ್ಟ. ಮಡದಿ ಯಾವತ್ತೂ ಇನ್ನೊಬ್ಬರನ್ನು ಆಕರ್ಷಿಸಲು ಯೋಚಿಸಲಾರಳು.

ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ
ಸತ್ಯದ ಬಲದಿಂದ ಅಸತ್ಯದ ಕೇಡ ನೋಡಯ್ಯಾ
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ
ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವ ಕೇಡು ನೋಡಯ್ಯಾ.

ಮಹಾತ್ಮ ಗಾಂಧೀಜಿಯ ಕಾರ್ಯವನ್ನು ಜಂಬಣ್ಣ ಅಮರಚಿಂತ ಎಂಬ ಕವಿಯೊಬ್ಬರು : ‘‘ಹುಟ್ಟುಗುರುಡರ ಓಣಿಯಲ್ಲಿ ಚಾಳೀಸು ಮಾರಿದವ ’’ ಎಂಬ ಸಾಲುಗಳನ್ನು ಬರೆಯುವ ಮೂಲಕ ಅವರ ಪರಿಶ್ರಮ ಏನಿತ್ತು ಎಂಬುದನ್ನು ತಿಳಿಸಿಕೊಡುತ್ತಾರೆ. ಬಹುಶಃ ಸ್ಥಗಿತಗೊಂಡ ಸಮಾಜದಲ್ಲಿ ಸುಳ್ಳಿನ ಮುಂದೆ ಸತ್ಯ ಬಹು ಪಡಿಪಾಡಲು ಪಡುತ್ತದೆ. ತೊಂದರೆಗೆ ಗುರಿಯಾಗುತ್ತದೆ. ಟೀಕೆ ಟಿಪ್ಪಣಿಗಳನ್ನು ಪಡೆಯುತ್ತದೆ. ಅನುಮಾನ ಅವಮಾನಗಳನ್ನು ಎದುರಿಸಿ ನಿಲ್ಲಬೇಕಾಗುತ್ತದೆ. ಬಹುಶಃ ‘‘ಭಕ್ತಿಯುಳ್ಳವರ ಬೈವರೊಂದು ಕೋಟಿ. ಭಕ್ತಿ ಇಲ್ಲದವರ ಬೈವರಾರನೂ ಕಾಣೆ ’’,‘‘ ಫಲವಾದ ಮರಕ್ಕೆ ಕಲ್ಲಲಿ ಇಡುವರೊಂದು ಕೋಟಿ, ಎಲವದ ಮರಕ್ಕೆ ಇಡುವನಾರನೂ ಕಾಣೆ’’ ಎಂಬ ಶರಣೆ ಅಕ್ಕಮಹಾದೇವಿ ತಾಯಿ ಹೇಳಿದ ಮಾತು ಸತ್ಯ.

ಸತ್ಯ ಮತ್ತು ಅಸತ್ಯದ ನಡುವೆ ನಡೆದ ಸಂಘರ್ಷ ಅಥವಾ ಮುಖಾಮುಖಿ ಇಂದಿನದೇನಲ್ಲ. ಚರಿತ್ರೆಯ ಉದ್ದಕ್ಕೂ ಇದು ದಾಖಲಾಗುತ್ತ ಬಂದಿದೆ. ಆದರೆ ಅಸತ್ಯ ಎಷ್ಟೇ ಬ¯ಶಾಲಿಯಾಗಿದ್ದರೂ ಸತ್ಯದ ಮುಂದೆ ಅದು ಮಂಡಿಯೂರಿ ನಿಲ್ಲಬೇಕಾಗುತ್ತದೆ. ಪರುಷ ಮುಂದೆ ತನ್ನ ಶಕ್ತಿಯನ್ನು ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ. ಕಾಯಾ ವಾಚಾ ಮನಸಾ ಅಂದರೆ ಅಂತರ0ಗ ಹಾಗೂ ಬಹಿರಂಗ ಪರಿಶುದ್ದವಾಗಿರುವ ಶರಣರ ಮುಂದೆ ಅಸತ್ಯ ಪತರಗುಟ್ಟಿ ಹೋಗುತ್ತದೆ.

ಇಂದಿನ ಸಮಾಜದಲ್ಲಿ ಸಾಮಾಜಿಕ ಧಾರ್ಮಿಕ ಸ್ಥಾನಮಾನಗಳನ್ನು ಆಕ್ರಮಿಸಿಕೊಂಡವರು ಸತ್ಯದ ಪ್ರತಿಪಾದಕರಂತೂ ಅಲ್ಲವೆ ಅಲ್ಲ ಎನ್ನುವಷ್ಟರ ಮಟ್ಟಿಗೆ ಅಸತ್ಯ ದಾಂಗುಡಿ ಇಟ್ಟು ಮುನ್ನಡೆದಿದೆ. ಕಳ್ಳ ಸುಳ್ಳ ಭ್ರಷ್ಟನಾಗಿರುವವರೆ ಆ ಸ್ಥಳಗಳನ್ನು ಆವರಿಸಿದ್ದಾರೆ. ಅವರಲ್ಲಿಯ ಹಣ, ಪ್ರತಿಷ್ಠೆ, ಪ್ರಭಾವಕ್ಕೆ ಒಳಗಾದ ಜನ ಸಾಮಾನ್ಯ ಸಹ ಅವರ ಹಿಂದಿ0ದೆ ಸುತ್ತುತ್ತ ಕೈ ಹೊಸೆಯುತ್ತ ಹಲ್ಕಿರಿಯುತ್ತ ನಡೆದಿದ್ದಾನೆ, ಅವರ ಗುಲಾಮಿತನಕ್ಕೆ ನಿಂತಿದ್ದಾನೆ. ಕ್ಲೆöÊಬ್ಯ ಮನೆ ಮಾಡಿಕೊಂಡಿರುವ ವ್ಯಕ್ತಿಗೆ ಆತ್ಮ ಪ್ರಜ್ಞೆಯ ಅರಿವು ಇರಲು ಸಾಧ್ಯವಿಲ್ಲ. ತನ್ನ ಅರಿವಿನ ಪ್ರಜ್ಞೆ ಇಲ್ಲದ ಜನ ಇನ್ನೊಬ್ಬರ ಅರಿವನ್ನು ಅವಲೋಕಿಸಲು ಸಾಧ್ಯವಿಲ್ಲ.

ಚಂದನವ ಕಡಿದು ಕೊರೆದು ತೇದಡೆ ನೊಂದೆನೆ0ದು ಕಂಪ ಬಿಟ್ಟಿತ್ತೆ ?
ತಂದು ಸುವರ್ಣವ ಕಡಿದೊರೆದಡೆ ಬೆಂದು ಕಳಂಕ ಹಿಡಿಯಿತ್ತೆ ?
ಸಂದುಸ0ದು ಕಡಿದ ಕಬ್ಬನು ತಂದು ಗಾಣದಲ್ಲಿಕ್ಕಿ ಅರೆದಡೆ
ಬೆಂದು ಪಾಕಗುಡದೆ ಸಕ್ಕರೆಯಾಗಿ ನೊಂದೆನೆ0ದು ಸಿಹಿಯ ಬಿಟ್ಟಿತ್ತೆ ?
ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮುಂದಿಳುಹಲು
ನಿಮಗೇ ಹಾನಿ. ಎನ್ನ ತಂದೆ ಚೆನ್ನಮಲ್ಲಿಕಾರ್ಜುನಯ್ಯಾ
ನೀ ಕೊಂದಡೆಯೂ ಶರಣೆಂಬುದ ಮಾಣೆ.

ಬಸವಣ್ಣನವರನ್ನು ಹನ್ನೆರಡನೆಯ ಶತಮಾನದಲ್ಲಿ ಹಲವಾರು ಪರೀಕ್ಷೆಗೆ ಗುರಿ ಪಡಿಸಲಾಯಿತು. ಬಿಜ್ಜಳ ರಾಜನ ಭಂಡಾರ ಹಣವನ್ನು ಬಸವಣ್ಣನವರು ದುರುಪಯೋಗ ಪಡಿಸಿಕೊಂಡು ಶರಣ ಜಂಗಮರಿಗೆ ನಿತ್ಯ ದಾಸೋಹ ಮಾಡುತ್ತಿದ್ದಾರೆ ಎಂದು ಬೊಬ್ಬಿಟ್ಟರು. ಈ ಆರೋಪ ಪರೀಕ್ಷೆಗೆ ಒಳಪಟ್ಟಾಗ ಬಸವಣ್ಣನವರು ಸತ್ಯವನ್ನು ಝಳಪಿಸುತ್ತ ಹೊರಬಂದರು. ಗಂಧದ ಕೊರಡು ತೇದರೂ ಅದು ನೊಂದುಕೊ0ಡು ಕೆಟ್ಟ ವಾಸನೆ ಬಿಡಲಾರದು. ಬಂಗಾರವನ್ನು ಸಾವಿರ ಸಲ ಪರೀಕ್ಷೆಗೆ ಒಳಪಡಿಸಿದರೂ ತನ್ನ ಮೂಲ ಧಾತುವನ್ನು ಬಿಟ್ಟು ಹೊರಬರಲಾರದು. ಕಬ್ಬನ್ನು ಕಡಿ ಕಡಿದು ತಂದು ಗಾಣದಲ್ಲಿಕ್ಕಿ ಅರೆದು, ಅದನ್ನು ಪಾಕದಲ್ಲಿ ಕುದಿಸಿದರೂ ಅದರ ಮೂಲ ಗುಣ ಸಿಹಿವನ್ನು ಹೊರತು ಪಡಿಸಿ, ಕಹಿಯಾಗಲಾರದು. ಜೀವನದಲ್ಲಿ ಬರುವ ಕೆಲವು ಸಂಗತಿಗಳು, ಅವಮಾನಗಳು, ಸತ್ವ ಪರೀಕ್ಷೆಗಳು ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಲು ಹೊರತು ಮತ್ತೆ ಯಾವುದಕ್ಕೂ ಅಲ್ಲ. ನೀನು ನಿನ್ನೊಂದಿಗೆ ನಿನ್ನ ಸತ್ಯವನ್ನು ಕೊಲ್ಲುತ್ತೇನೆ ಎಂದು ಆ ಶಿವನೆ ಹೊರಟರು ಸಹ, ಕೊಲ್ಲುವೆನೆಂಬ ಭಾಷೆ ದೇವನದಾದರೆ ಗೆಲ್ಲುವೆನೆಂಬ ಭಾಷೆ ಭಕ್ತನದು ಎನ್ನುತ್ತಾರೆ. ಅದರಂತೆ ಅಕ್ಕಮಹಾದೇವಿ ತಾಯಿಯೂ ಸಹ ನೀ ಕೊಂದಡೆಯೂ ಶರಣೆಂಬುದನ್ನು ನಾನು ಬಿಡುವುದಿಲ್ಲ ಎನ್ನುತ್ತಾರೆ.

ತನುಗುಣಂಗಳನೊರಸದೆ,
ಭೋಗಭೂಷಣ0ಗಳನತಿಗಳೆಯದೆ,
ಅನೃತ ಅಸತ್ಯ ಅಸಹ್ಯ ಋಣ ವಂಚನೆ
ಪರಧನಕ್ಕಳುಪದ ಆಯತ ಅಂಗಕ್ಕಿಲ್ಲ ಮತ್ತೆಂತಯ್ಯಾ ?

– ಶರಣ ಆದಯ್ಯ ಶರಣರು

ತನುವಿಕಾರ ಮನೋವಿಕಾರ ಭಾವವಿಕಾರದಿಂದ ಹುಟ್ಟುವ ಸಕಲ ಗುಣಂಗಳು ಸಹಜವಾಗಿಯೆ ತನ್ನದಲ್ಲದ ವಸ್ತು ವಿಷಯಕ್ಕೆ ಹರಿಯುತ್ತದೆ. ಅಸತ್ಯ ಅನೃತ ಅಸಹ್ಯ ಅದರ ಜೀವ ಜೀವಾಳ. ಇಂಥವರು ಆತ್ಮಸಾಕ್ಷಿಯನ್ನು ಮರೆತು ಮುನ್ನಡೆಯುತ್ತಾರೆ. ಪರಧನ ಪರಸ್ತಿçà ಪರಧರ್ಮಕ್ಕೆ ಒಳಗಾದವರ ಪಾಡು ಏನಾಗಿದೆ ಎಂಬುದು ನಮ್ಮ ಕಣ್ಣ ಮುಂದೆ ಸಾಕ್ಷಿಯಾಗಿ ಇದ್ದಾಗಲೂ ಮನಸ್ಸು ಮತ್ತೆ ಮತ್ತೆ ವಿಷಯಗಳೆಡೆ ಹರಿಯುತ್ತದೆ.

ಹರಿವ ಹಾವಿಗಂಜೆ, ಉರಿಯ ನಾಲಗೆಗಂಜೆ
ಸುರಗಿಯ ಮೊನೆಗಂಜೆ ಒಂದಕ್ಕ0ಜುವೆ ಒಂದಕ್ಕಳುಕುವೆ
ಪರಸ್ತಿçÃ, ಪರಧನವೆಂಬ ಜೂಬಿಂಗ0ಜುವೆ.
ಮುನ್ನ0ಜದ ರಾವಳನೇ ವಿಧಿಯಾದ !
ಅಂಜುವನೆನಯ್ಯಾ, ಕೂಡಲಸಂಗಮದೇವಾ

ನ್ಯಾಯ ನಿಷ್ಠುರಿ ಶರಣ ದಾಕ್ಷಿಣ್ಯ ಪರನಲ್ಲ. ಲೋಕ ವಿರೋಧಿ ಶರಣ ಆರಿಗೂ ಅಂಜುವುದಿಲ್ಲ ಎಂದು ಹೇಳಿದ ಅಪ್ಪ ಬಸವಣ್ಣನವರು ನಾನು ಕೆಲವು ವಿಷಯಗಳಿಗೆ ಅಂಜುತ್ತೇನೆ ಎನ್ನುತ್ತಾರೆ. ನಮ್ಮ ಕಣ್ಣ ಮುಂದೆಯೆ ಹರಿಯುತ್ತಿರುವ ವಿಷ ತುಂಬಿರುವ ಹಾವಿಗೆ ನಾನು ಅಂಜುವುದಿಲ್ಲ. ಗಾಳಿಯ ಸಹವಾಸದಿಂದ ಹೊತ್ತಿ ಉರಿಯುವ ಕೆನ್ನಾಲಿಗೆಗೂ ಅಂಜಲಾರೆ. ಖಡ್ಗದ ಮೊನೆಗೂ ನಾನು ಹೆದರಲಾರೆ. ಆದರೆ ಪರಸ್ತಿçÃ, ಪರಧನವೆಂಬ ಜೂಬಿಂಗೆ ಮಾತ್ರ ನಾನು ಖಂಡಿತ ಅಂಜುತ್ತೇನೆ ಎಂದು ಘಂಟಾಘೋಷವಾಗಿ ಸಾರಿ ಬಿಡುತ್ತಾರೆ. ಇವುಗಳಿಗೆ ಅಂಜದೆ ಹೋದರೆ ಏನಾಗುತ್ತದೆ ಎಂಬುದನ್ನು ಇತಿಹಾಸ ಪುಟಗಳ ಘಟನೆಯನ್ನು ಅಪ್ಪ ಬಸವಣ್ಣನವರು ನಮ್ಮ ಕಣ್ಣ ಮುಂದೆ ತೆರೆದು ತೋರಿಸುತ್ತಾರೆ. ರಾವಳ ಅಂಜದೆ ಸೀತೆಯ ಸಹವಾಸಕ್ಕೆ ಬಿದ್ದು ತನ್ನ ಲಂಕಾ ದೇಶವನ್ನೆ ಹೊತ್ತಿ ಉರಿಯುವಂತೆ ನೋಡಿಕೊಂಡನಲ್ಲ !

ಮಾನಗೇಡಿ ಮಾನಕ್ಕೆ ಅಂಜಿದಡೆ ಕೆಲವರು ತಮಗೆ ಅಂಜಿದ್ದಾನೆ0ದು ಮೈ ಮೇಲೆ ನುಗ್ಗಿ ಬರುವವರು ಇಂದು ಹೇರಳವಾಗಿದ್ದಾರೆ. ‘‘ಸತ್ಯದ ಮನೆಯಲ್ಲಿ ಶಿವನಿರ್ಪನಲ್ಲದೆ ಅಸತ್ಯದ ಮನೆಯಲ್ಲಿ ಶಿವನಿರ್ಪನೆ’’ ಎಂಬ ಪದದರ್ಥವನ್ನು ಕಾಲಲ್ಲಿ ಹೊಸಕಿ ಮುನ್ನಡೆದಿದ್ದರೂ ಸತ್ಯ ತನ್ನ ಅಸ್ತಿತ್ವವನ್ನು ತಾನು ಉಳಿಸಿಕೊಳ್ಳುತ್ತದೆ.

ಹಲವು ಮಾತಕಲಿತ ಉಲಿಗಿತಿ ಸೂಳೆಯ ಹಾಂಗೆ
ಉಲಿವರ ಕಂಡಡೆ ನಿಃಕಪಟಿ ಒಳ್ಳಿದನೆಂಬರು
ಪಾಪಕ್ಕ0ಜಿ ಸತ್ಯವನಾಡಿದಡೆ ಈತನ ಒಳಗೆಣಿಸರು
ಅತಿ ಕಪಟಿಯೆಂಬರು
ದುರ್ಜನರ ಮುಂದೆ ಸಜ್ಜನಿಕೆ ಮೆರವುದೆ ?
ನಿಜ ಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ
ನೀ ಮಾಡಿದ ಮಾಹೇಂದ್ರಜಾಲದ ಮಾಯಕೆ
ನಾನು ಬೆರಗಾದೆನು.

ವಾಚಾಳಿಯ ಮಾತುಗಳಿಗೆ ಮರುಳಾದ ಜನ ಸೂಳೆಗೆ ಅನಿವಾರ್ಯವಾಗಿ ಒಳ್ಳೆಯವರೆಂಬರು. ಸತ್ಯವನ್ನು ಪ್ರತಿಪಾದಿಸುವ ಪಾಪ ಪ್ರಜ್ಞೆಗೆ ಹೆದರುವವರನ್ನೇ ಕಪಟಿ, ದುರ್ಜನ ಎಂದು ದೂರುವರು. ಅತಿ ಕಪಟಿ ಎಂಬರು. ದುಷ್ಟ ಮನಸ್ಸಿನ, ದುಷ್ಟ ಆಲೋಚನೆಗಳ, ಅಸತ್ಯವನ್ನೇ ಉಸಿರಾಗಿಸಿಕೊಂಡವರ ಮುಂದೆ ಸಜ್ಜನಿಕೆ ಪೇಲವವಾಗಿ ಕಾಣುತ್ತದೆ. ಇದು ಇಂದಿನ ಸಮಾಜದ ಜನಗಳ ಸ್ಥಿತಿ. ಆದರೂ ನಾವು ಸತ್ಯವನ್ನೇ ಮೇಟಿಯಾಗಿಟ್ಟುಕೊಂಡು ಮುನ್ನಡೆಯಬೇಕಿದೆ.

೦ ವಿಶ್ವಾರಾಧ್ಯ ಸತ್ಯಂಪೇಟೆ

3 thoughts on “ದುರ್ಜನರ ಮುಂದೆ ಸಜ್ಜನಿಕೆ ಮೆರವುದೆ ?

  1. ಸತ್ಯ ಅಸತ್ಯದ ಕುರಿತಾದ ನೈಜ ವಿಮರ್ಶೆ ತಮ್ಮಿಂದ ಮೂಡಿಬಂದಿದೆ. ಸತ್ಯ ಅನೇಕ ಸತ್ವಪರೀಕ್ಷೆಗಳಿಗೆ ಕೊರಳೊಡ್ದಿ ಕೊನೆಗೆ ಜಯಶೀಲವಾಗುತ್ತದೆ. ಸುಳ್ಳಿನ ಆಯುಷ್ಯ ಕಡಿಮೆಯಾದರೂ ಬಹುವಾಗಿ ವಿಜೃಂಬಿಸುತ್ತದೆ.ಸತ್ಯದ ಹಾದಿಯು ಬಹಳ ಕಠಿಣವಾದದ್ದಾದರೂ ಅದು ಸದ್ಗತಿಯಡೆ ಕೊಂಡೋಯುತ್ತದೆ ಎನ್ನುವ ಶರಣರ ಅನುಭಾವ ಹಲವು ಅರ್ಥಗಳನ್ನು ಒಳಗೊಂಡಿದೆ.ಸತ್ಯವೂ ವೈಚಾರಿಕವಾದ ಸಮಾಜವನ್ನು ನಿರ್ಮಾಣ ಮಾಡುತ್ತದೆ. ಇತಿಹಾಸದಲ್ಲೂ ಸತ್ಯದ ಕುರಿತು ಅನೇಕ ದಂತಕತೆಗಳಿರುವದು ಸರ್ವರೂ ಗ್ರಹಿಸಬಹುದಾಗಿದೆ. ಸತ್ಯವನ್ನೆ ಬದುಕಿನ ಉಸಿರಾಗಿಸಿಕೊಂಡು ಬದುಕಿ ಬಾಳಿ ಸತ್ಯದ ಘನತೆಯನ್ನು ಹೆಚ್ಚಿಸಿದ ಅನೇಕ ಮಹನೀಯರನ್ನು ಉಲ್ಲೇಖಸಿ ಬರೆದ ಲೇಖನ ಅತ್ಯುತ್ತಮವಾಗಿದೆ ಸರ್ 🙏👌👍

  2. ಚಂದದ ಪ್ರತಿಪಾದನೆ. ಸತ್ಯದ ಕೆಂಡಕ್ಕೆ ಗೊರಲೆ ಹತ್ತಬಲ್ಲುದೇ!? ಸತ್ಯ ಮತ್ತು ಅಹಿಂಸೆ ಇವುಗಳನ್ನು ವ್ಯಾಖ್ಯಾನಿಸುವುದು ಅಷ್ಟು ಸುಲಭವಲ್ಲ ಅನಿಸುತ್ತದೆ.

Leave a Reply

Your email address will not be published. Required fields are marked *

error: Content is protected !!