ರಾಜಕಾರಣಕ್ಕೂ ಲಿಂಗಾಯತ ಧರ್ಮದ ಹೋರಾಟಕ್ಕೂ ಯಾವುದೆ ಬಾದರಾಯಣ ಸಂಬಂಧವಿಲ್ಲ

ರಾಜಕಾರಣಕ್ಕೂ ಲಿಂಗಾಯತ ಧರ್ಮದ ಹೋರಾಟಕ್ಕೂ
ಯಾವುದೆ ಬಾದರಾಯಣ ಸಂಬಂಧವಿಲ್ಲ

ಬಹಳಷ್ಟು ಜನಗಳಿಗೆ ತಪ್ಪು ತಿಳುವಳಿಕೆ ಇದೆ. ಸಿದ್ರಾಮಯ್ಯನವರು ಲಿಂಗಾಯತ ಧರ್ಮದಲ್ಲಿ ಒಡಕು ತಂದರು ಎಂದು. ಲಿಂಗಾಯತ ಧರ್ಮದ ಹೋರಾಟ ಇಂದು ನಿನ್ನೆಯದಲ್ಲ. ಇದು ಹನ್ನೆರಡನೆಯ ಶತಮಾನದಿಂದಲೂ ನಡೆಯುತ್ತ ಬಂದಿದೆ. ಈ ಹೋರಾಟ ನಿಲ್ಲವುದೂ ಇಲ್ಲ. ಬಸವಾದಿ ಶರಣರು ಚಿಂತಿಸಿದ ,ಬದುಕಿದ ಜೀವಂತ ಚರಿತ್ರೆ ಕಾಲಕಾಲಕ್ಕೆ ಅನುರಣನ ಆಗಲೇಬೇಕು.ಇಲ್ಲವಾದರೆ ವೈದಿಕಶಾಹಿ ವ್ಯವಸ್ಥೆ ಮನುಷ್ಯತ್ವವನ್ನು ನುಂಗಿ ನೊಣೆಯುತ್ತದೆ. ದೇವರು ಧರ್ಮಗಳೆಂಬ ಹುಸಿ ಕಲ್ಪನೆಯ ಸಾಮ್ರಾಜ್ಯ ನಿರ್ಮಿಸಿಮ್ಮೆಲ್ಲರ ಮೆದುಳನ್ನು ವ್ಯವಸ್ಥೆ ಆಳ ತೊಡಗುತ್ತದೆ. ಇವುಗಳಿಂದ ಪಾರಾದಾಗಲೆ ನಮಗೆಲ್ಲರಿಗೂ ಮುಕ್ತಿ ಎಂದು ಶರಣರು ಒತ್ತಿ ಒತ್ತಿ ಹೇಳಿದ್ದಾರೆ. ಅಜ್ಞಾನದ ತೊಟ್ಟಿಲನ್ನು ಮುರಿದು ಬರಲೇಬೇಕಾದ ಅವಶ್ಯಕತೆ ಎಲ್ಲರಿಗೂ ಇದೆ. ಆದರೆ ಈ ತೊಟ್ಟಿಲನ್ನು ಅಲ್ಲಮಪ್ರಭುಗಳು ಹೇಳುವಂತೆ ವೇದ ಶಾಸ್ತç ಆಗಮಗಳು ನೇಣುಗಳಾಗಿ ಕಟ್ಟಿ ನಿಲ್ಲಿಸಿವೆ. ಪುರೋಹಿತರು ತಮ್ಮ ಹೊಟ್ಟೆ ಬದುಕುವುದಕ್ಕಾಗಿ ರೂಪಿಸಿದ ವ್ಯವಸ್ಥೆಗೆ ಭ್ರಾಂತಿಯಲ್ಲಿ ತಾಯಿ ತೊಟ್ಟಿಲನ್ನು ತೂಗುತ್ತ ಜ್ಞಾನದ ಮಗುವಿಗೆ ಅಜ್ಞಾನದ ಬೋಧೆ ಮಾಡುತ್ತಿದ್ದಾಳೆ. ತೊಟ್ಟಿಲಲ್ಲಿ ಮಲಗಿರುವ ಜ್ಞಾನದ ಮಗು ತನ್ನ ಸುತ್ತ ಮುತ್ತ ಇರುವ ವೇದ ಶಾಸ್ತç ಆಗಮಗಳ ನೇಣು ಹರಿದು, ತಾಯಿಯ ಭ್ರಾಂತಿಯ ಜೋಗುಳಕ್ಕೆ ಕಿವಿಗೊಡದೆ, ಅಜ್ಞಾನದ ತೊಟ್ಟಿಲನ್ನು ಜಾಡಿಸಿ ಒದ್ದಾಗ ಮಾತ್ರ ಸತ್ಯ ದೃಗೋಚರವಾಗುತ್ತದೆ. ಅಲ್ಲಿಯವರೆಗೂ ವೈದಿಕ ವ್ಯವಸ್ಥೆ ತಂತ್ರ ಪ್ರತಿ ತಂತ್ರಗಳನ್ನು ಹೂಡುತ್ತಲೆ ಇರುತ್ತದೆ.

ನಿನ್ನೆ ದಿನ ಸಿದ್ಧರಾಮಯ್ಯನವರು ರಂಭಾಪುರಿ ಜಗದ್ಗುರುಗಳನ್ನು ಭೇಟಿ ಮಾಡಿ ಬಂದಾಗಲೂ ಸಹ ವೈದಿಕತ್ವವನ್ನೇ ಪ್ರಚುರ ಪಡಿಸಬೇಕು ಎಂದು ಒಂದೆ ಸಮ ಹಾತೊರೆಯುತ್ತಿರುವ ಸುದ್ದಿ ಮಾಧ್ಯಮಗಳು ತಮಗೆ ಹೇಗೆ ಬೇಕೋ ಹಾಗೆ ಬಿತ್ತರಿಸಿದವು. ರಂಭಾಪುರಿ ಶ್ರೀಗಳು ಸಹ ಎಂದಿನ0ತೆ ತಮಗೆ ಅನುಕೂಲವಾಗುವ ಹೇಳಿಕೆಯನ್ನು ಕೊಟ್ಟು ಖುಷಿ ಪಟ್ಟುಕೊಂಡರು. ಆದರೆ ಸಿದ್ರಾಮಯ್ಯನವರು ಯಾವತ್ತೂ ಹೇಳುತ್ತ ಬಂದಿರುವ ಲಿಂಗಾಯತ ಧರ್ಮವನ್ನು ನಾನು ಒಡೆದಿಲ್ಲ. ನಾನು ಮುಖ್ಯ ಮಂತ್ರಿಯಾಗಿದ್ದಾಗ ಶಾಮನೂರು ಶಿವಶಂಕರಪ್ಪನವರು ತಂದಿಟ್ಟ ಅರ್ಜಿಯ ಕುರಿತು ವಿಚಾರಣೆ ಮಾಡಿದ್ದೇನೆ ಎಂಬುದನ್ನೆ ತಮ್ಮ ಪರವಾದ ಹೇಳಿಕೆ ಎಂದುಕೊ0ಡು ರಂಭಾಪುರಿ ಶ್ರೀಗಳು ದೃಶ್ಯ ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡಿದ್ದಾರೆ. ಆದರೆ ಇದನ್ನು ಸಿದ್ರಾಮಯ್ಯನವರು ಬೆಂಗಳೂರಿಗೆ ಬರುತ್ತಲೆ ಅಲ್ಲಗಳೆದಿರುವುದನ್ನು ನಾವು ಯಾರೂ ಮರೆಯಬಾರದು.

ಇಷ್ಟಕ್ಕೂ ಸಿದ್ರಾಮಯ್ಯನವರಿಗಾಗಲಿ, ಶರಣಪ್ರಕಾಶ ಪಾಟೀಲ, ಎಂ.ಬಿ.ಪಾಟೀಲ,ಬಿ.ಆರ್.ಪಾಟೀಲ,ವಿನಯಕುಲ್ಕಣ್ಣಣಿ   ಮುಂತಾದವರಿಗೆ ಲಿಂಗಾಯತ ಹೋರಾಟಕ್ಕೂ ಯಾವುದೆ ಬಾದರಾಯಣ ಸಂಬ0ಧ ಇಲ್ಲ. ಸಿದ್ರಾಮಯ್ಯನವರ ಸರಕಾರ ಲಿಂಗಾಯತ ಹೋರಾಟಗಾರರು ಕೊಟ್ಟ ಅರ್ಜಿಯನ್ನು ನ್ಯಾಯಮೂರ್ತಿ ನಾಗಮೋಹನದಾಸ ಅವರಿಗೆ ವರ್ಗಾಯಿಸಿ, ಅವರಿಂದ ಸ್ಪಷ್ಟವಾದ ವರದಿಯನ್ನು ಕೇಳಿತ್ತು. ಆ ನ್ಯಾಯಮೂರ್ತಿಗಳು ನೀಡಿದ ವರದಿಯನ್ನು ದೆಹಲಿಗೆ ಕಳಿಸಿದರು, ಅಷ್ಟೆ. ಯಾವುದೆ ಸರಕಾರ ಅಧಿಕಾರದಲ್ಲಿ ಇದ್ದಾಗ ಮಾಡುವ ಕರ್ತವ್ಯವನ್ನು ಮಾಡಿದೆ. ಇದರಲ್ಲೇನು ಅಂಥ ವಿಶೇಷತೆ ಇಲ್ಲ. ಇಷ್ಟು ಮಾತ್ರ ಸಿದ್ರಾಮಯ್ಯನವರು ವಚನಾಭ್ಯಾಸಿಯಾಗಿದ್ದರಿಂದ ಲಿಂಗಾಯತ ಧರ್ಮದ ಸ್ಪಷ್ಟ ಕಲ್ಪನೆ ಇದೆ. ಆದ್ದರಿಂದ ವಿಶೇಷವಾದ ಒತ್ತು ನೀಡಿದರೆ ಹೊರತು, ನಮ್ಮ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲು ಯತ್ನಿಸಿದರು ಅಂತ ಅಲ್ಲ.


ಯಾವುದೆ ಪಕ್ಷದ ಸರಕಾರಗಳ ಅಧಿಕಾರ ಶಾಶ್ವತ ಅಲ್ಲ. ಅಧಿಕಾರದಲ್ಲಿರುವ ಸರಕಾರಗಳು ಹೋರಾಟಗಾರರಿಗೆ ಸ್ಪಂದಿಸಬೇಕಾಗುತ್ತದೆ. ಜನ ಪರವಾದ ಸರಕಾರ ಇದ್ದಾಗ, ಸಹಜವಾಗಿ ಅವು ಜನರ ದನಿಗೆ ಧ್ವನಿಯಾಗಲು ಬಯಸುತ್ತವೆ. ದಪ್ಪ ಚರ್ಮವಿರುವ ಸರಕಾರ ಇರುವಾಗ ಸಹಜವಾಗಿ ಅವು ಹೋರಾಟಗಾರರ ಹೋರಾಟಗಳ ಬಗೆಗೆ ಅಹಂಕಾರದ ಧೋರಣೆಯನ್ನು ತೋರುತ್ತವೆ. ತತ್ಪರಿಣಾಮ ಮುಂದಿನ ಚುನಾವಣೆಗಳಲ್ಲಿ ಸೋತು ಹೋಗುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲ ಸಾಮಾನ್ಯ. ಒಂದೊಂದು ಸಲ ಜನ ಪರವಾಗಿರುವ ಧೋರಣೆಗಳಿಗೆ ಸರಕಾರಗಳು ತಲೆದೂಗಿದಾಗಲೂ ಸಹ ಆ ಪಕ್ಷಗಳ ಸರಕಾರ ಅಧಿಕಾರಕ್ಕೆ ಬರದೆ ಹೋಗಿರಬಹುದು. ಹಾಗಂತ ಆ ಪಕ್ಷದ ಸರಕಾರದ ತಪ್ಪಲ್ಲ. ಸರಕಾರದ ಸತ್ಯದ ಪರ ನಿಲುವನ್ನು ಅರ್ಥ ಮಾಡಿಕೊಳ್ಳುವಲ್ಲಿ ಜನ ಸಾಮಾನ್ಯರು ಸೋತರು ಅಂತ ಅರ್ಥ. ಅಥವಾ ಸರಕಾರ ತಾನು ಮಾಡಿದ ಜನಪರ ಕೆಲಸವನ್ನು ಜನ ಸಾಮಾನ್ಯರಿಗೆ ಮನವರಿಕೆ ಮಾಡುವಲ್ಲಿ ಸೋತಿತು ಅಂತ.

ಬಹುಶಃ ಸಿದ್ರಾಮಯ್ಯನವರು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ದೊರಕಿಸಿ ಕೊಡಬೇಕು ಎಂಬ ಉತ್ಸಾಹದಲ್ಲಿದ್ದಾಗ ಅದು ಜನ ಸಾಮಾನ್ಯನಿಗೆ ತನ್ನ ಕಾಳಜಿ ತಿಳಿಸಿಕೊಡುವಲ್ಲಿ ಸೋತಿತು. ಅಥವಾ ತಂತ್ರ ಕುತಂತ್ರಗಳ ಮೂಲಕ ಜನ ಸಾಮಾನ್ಯನ ಮೆದುಳನ್ನು ಆಳಬೇಕು ಎಂದು ಹೊರಟ ವೈದಿಕರ ಕೈ ಮೇಲಾಗಿ ಮತ್ತೊಂದು ಪಕ್ಷದ ಬುಟ್ಟಿಗೆ ಜಯ ಸಿಕ್ಕಿತು ಅಂತಲೆ ಅರ್ಥ. ಇದನ್ನೆಲ್ಲ ಸವಿವರವಾಗಿ ತಿಳಿಸಬೇಕಾದ ಮಾಧ್ಯಮಗಳು ಯಾವುದೋ ವ್ಯಕ್ತಿಯ ಸಿದ್ಧಾಂತಗಳ ಅಡಿಯಲ್ಲಿ ಕಂಠ ಮಟ ಸಿಗಬಿದ್ದಿರುವಾಗ ಎಲ್ಲಾ ಗೊಂದಲಗಳು ಸಹಜವಾಗಿ ಉಂಟಾಗುತ್ತವೆ.

ರಾಜಕಾರಣಕ್ಕೆ ಲಿಂಗಾಯತ ಧರ್ಮ ಒತ್ತಿ ಬೀಳುವಂತಿದ್ದರೆ ಹನ್ನೆರಡನೆಯ ಶತಮಾನದಲ್ಲಿಯೆ ಬಸವಣ್ಣನವರು ಬಿಜ್ಜಳನ ಅಡಿದಾವರೆಗಳಿಗೆ ಲಿಂಗಾಯತ ಧರ್ಮವನ್ನು ಅರ್ಪಿಸಿ ಬಿಟ್ಟಿರುತ್ತಿದ್ದರು. ‘ಆನಿ ಭವಿ ಬಿಜ್ಜಳಂಗೆ ಅಜುಂವೆನೆ ?’ ಎಂದು ಕೇಳುತ್ತಿರಲಿಲ್ಲ. ‘ಅರಸು ವಿಚಾರ, ಸಿರಿಯ ಶೃಂಗಾರ ಸ್ಥಿರವಲ್ಲ ಮಾನವ’ ಎಂದು ಹೇಳುತ್ತಿರಲಿಲ್ಲ. ಲಿಂಗಾಯತ ಧರ್ಮದ ಹೋರಾಟ ಹರಿಯುವ ನದಿಯಂತೆ, ಅದು ನಿಲ್ಲಲಾರದು. ಯಾವ ಸರಕಾರ ಬಂದರೂ ಅದು ಜೀವಂತವಾಗಿ ಇರುತ್ತದೆ. ಕೆಲವು ಸಲ ಉಕ್ಕಿ ಭೋರ್ಗರೆತ ಉಂಟು ಮಾಡಿ ಹರಿದರೆ,ಇನ್ನು ಕೆಲವು ಸಲ ಅದು ಒಳಗೊಳಗೆ ಶಾಂತವಾಗಿ ಹರಿಯುತ್ತಿರುತ್ತದೆ. ಆದರೆ ಭ್ರಮಾಧೀನರಾದ ಹಲವರು ಆ ನದಿಯನ್ನು ಬತ್ತಿಸಬೇಕೆಂದು ಹರಸಾಹಸ ಮಾಡುತ್ತಿದ್ದಾರೆ. ಈ ಪ್ರಯತ್ನ ಎಂದಿಗೂ ಯಶಸ್ವಿಯಾಗುವುದಿಲ್ಲ.

ಲಿಂಗಾಯತ ಧರ್ಮದ ನದಿಗೆ ತನ್ನದೆ ಆದ ಹೋರಾಟದ ಹರವಿದೆ. ವಿಷಯವಿದೆ. ಚಿಂತನೆ ಇವೆ. ಜನಪರವಾದ ಧೋರಣೆಗಳಿವೆ. ಸಕಲ ಜೀವಾತ್ಮರಿಗೆ ಲೇಸ ಬಯಸುವ ತತ್ವಗಳಿವೆ. ಬೆಳಕಿದೆ, ಹೊಳಪಿದೆ. ಕಸುವಿದೆ. ಇದು ಎಂದಾದರೂ ನಾಶವಾಗಲು ಸಾಧ್ಯವೆ ? ರಾಜಕಾರಣ ಗಳಿಗೆ ಲಿಂಗಾಯತ ಧರ್ಮದ ಹೋರಾಟ ಬೇಕು/ಬೇಡ ಆಗಿರಬಹುದು. ಆದರೆ ತಾತ್ವಿಕವಾಗಿ ಬದ್ಧನಾಗಿರುವ ಲಿಂಗಾಯತರಿಗೆ ಯಾವ ರಾಜಕಾರಣ ಯ ಹಂಗೂ ಇಲ್ಲ ಎಂಬುದು ರಾಜಕಾರಣ ಗಳು/ಡೋಂಗಿ ಮಠಾಧೀಶರು/ ಮನುವ್ಯಾದಿ ಮಾಧ್ಯಮಗಳು ಅರ್ಥ ಮಾಡಿಕೊಳ್ಳಬೇಕು.

ಯಾರೇನೆಂದರೂ ಓರಂತ್ತಿಪ್ಪುದೆ ಸಮತೆ ಎಂಬ0ತೆ ಲಿಂಗಾಯತ ಅಲ್ಪ ಸಂಖ್ಯಾತ ಸ್ಥಾನಮಾನದ ಹೋರಾಟವನ್ನು ಬಸವವಾದಿಗಳು ಮಾಡುತ್ತಲೆ ಇದ್ದಾರೆ. ಮುಂದೆಯೂ ಮಾಡುತ್ತಾರೆ. ಇವರಿಗೆ ಸರಕಾರದ ದಯೆ ದಾಕ್ಷಿಣ್ಯ – ಹಂಗು ಬೇಕಾಗಿಲ್ಲ. ಏಕೆಂದರೆ ಲಿಂಗಾಯತ ಧರ್ಮದಲ್ಲಿ ಬಹುಸಂಖ್ಯಾತ ಜನಾಂಗಗಳಿವೆ. ಅವೆಲ್ಲ ತಳವರ್ಗಗಳಿಗೆ ಸೇರಿವೆ. ಆ ಜನಾಂಗ ಕಣ್ಣು ಬಸವಣ್ಣ ಎಂಬ ಚಿಂತನೆಗಳನ್ನು ಒದಗಿಸುವಲ್ಲಿ ಹಲವಾರು ಸಂಘಟನೆಗಳು ಈಗಲೂ ಕಾರ್ಯ ಪ್ರವೃತವಾಗಿವೆ. ಈ ಸಂಘಟನೆಗಳು ಯಾವ ಪಕ್ಷದ ಬಾಲಂಗೋಸಿ ಅಲ್ಲ. ಶರಣ ಸಿದ್ಧಾಂತಗಳ ಅಡಿಯಲ್ಲಿ ನಡೆದ ಚಳುವಳಿಯ ಕಾವು ಆರುವುದಿಲ್ಲ. ಆರಲಾರದು ಸಹ.

೦ ವಿಶ್ವಾರಾಧ್ಯ ಸತ್ಯಂಪೇಟೆ

2 thoughts on “ರಾಜಕಾರಣಕ್ಕೂ ಲಿಂಗಾಯತ ಧರ್ಮದ ಹೋರಾಟಕ್ಕೂ ಯಾವುದೆ ಬಾದರಾಯಣ ಸಂಬಂಧವಿಲ್ಲ

  1. ತುಂಬಾ ಅವಶ್ಯಕವಾದ ಮಾಹಿತಿಯನ್ನು ತಿಳಿಸಿದ್ದೀರಾ ಈಗಾಗಲೇ ಮಾಧ್ಯಮಗಳು ಪತ್ರಿಕೆಗಳು ವಾಟ್ಸಪ್ ಗಳು ಸಿದ್ದರಾಮಯ್ಯನವರನ್ನು ಜಾಲಾಡಿಸಿ ಬಿಟ್ಟಿವೆ ಹಳ್ಳಕ್ಕೆ ಬಿದ್ದವನಿಗೆ ಆಳಿಗೊಂದು ಕಲ್ಲು ಎನ್ನುವಂತೆ ಸಿದ್ದರಾಮಯ್ಯನವರ ಕಡೆ ಬೀಸುತ್ತಿವೆ ಅವರಷ್ಟು ವಚನ ಸಾಹಿತ್ಯವನ್ನು ರಾಜಕಾರಣಿಗಳಲ್ಲಿ ತಿಳಿದವ ರಿಲ್ಲ ಅನಿಸುತ್ತದೆ ಲಿಂಗಾಯಿತರು ಒಂದನ್ನು ಮನಗಣಬೇಕು ಪುರೋಹಿತ ಶಾಹಿಯನ್ನು ಮೊದಲು ಬಿಡಬೇಕು ಇಷ್ಟ ಲಿಂಗದಲ್ಲಿ ನಿಷ್ಠೆ ಉಳ್ಳವರಾಗಿ ಕಂಡ ಕಂಡ ದೇವರುಗಳಿಗೆ ಮೊರೆ ಹೋಗುವುದನ್ನು ಬಿಟ್ಟು ವಚನಗಳ ಅಧ್ಯಯನದಲ್ಲಿ ಸತ್ಯವನ್ನು ಕಂಡುಕೊಳ್ಳ ಬೇಕು ಆಗ ವೈದಿಕ ಶಾಹಿಗಳ ಬಾಲ ಮುಚ್ಚಿಸಬಹುದು

  2. ಸತ್ವಯುತವಾದ ಮನೋಧೋರಣೆಯಿಂದ ಮೂಡಿಬಂದ ಸಾರ್ವಕಾಲಿಕ ಸತ್ಯದ ಮಾತುಗಳು ಸರ್. ವೈಧಿಕಶಾಹಿ ಮನೋಸ್ಥಿತಿ ಪ್ರಗತಿಪರ ಆಶಯಕ್ಕೆ ವಿರುದ್ಧವಾದದ್ದು. ದೋಷಪುರಿತ ಚಿಂತನೆಯನ್ನು ಬಹುಸಂಖ್ಯಾತರ ಕೂಗು ಎನ್ನುವ ಸನ್ನಿವೇಶಗಳು ವಾಸ್ತವತೆಯನ್ನು ಬದಿಗೆ ಸರಿಸುತ್ತವೆ. ಇಂತಹ ಸೀಮಿತವಾದ ಮನೋಗ್ರಹಿಕೆಗಳು ಸಾಮಾಜಿಕ ಕಲ್ಯಾಣಕ್ಕೆ ಬಹುದೊಡ್ಡ ತಡೆಗೋಡೆಗಳಾಗುತ್ತಿವೆ. ಧರ್ಮ ಎನ್ನುವ ವ್ಯಾಖ್ಯಾನವೆ ಇಂದು ತಪ್ಪಾಗಿ ಬಳಕೆಯಾಗುತ್ತಿದೆ. ಧರ್ಮವನ್ನು ಬಹುನೆಲೆಗಳಿಂದ, ವಿಶಾಲವಾದ ದೃಷ್ಟಿಕೋನದಿಂದ ಎದುರುಗೊಳ್ಳಬೇಕಾದ ಅವಶ್ಯಕತೆಯಿದೆ. ಧರ್ಮ ಎನ್ನುವದು ಜೀವಪರತೆಯ ಮುನ್ನೊಟವನ್ನು, ಸದಾಶಯವನ್ನು ಹೊಂದಿದೆ. ಧರ್ಮವು ಜನಗಳನ್ನು ಒಡೆಯುವ ಡೀವೈಡರ್ ಅಲ್ಲ. ಅದು ಮಹೋನ್ನತ ಆಶಯಗಳ ಮೂಲಕ ಜನರ ಕಲ್ಯಾಣವನ್ನು ಬಯಸುವದಾಗಿದೆ. ಈ ನೆಲೆಯಲ್ಲಿ ಧರ್ಮವನ್ನು ಪರಿಭಾವಿಸುವ ಮನಸ್ಸುಗಳು ಹೆಚ್ಚಾಗುವ ಅಗತ್ಯತೆಯಿದೆ. ಈ ದೆಸೆಯಲ್ಲಿ ಸಮಾಜ ಮರುನಿರೂಪಿತವಾಗುವ ಅವಶ್ಯಕತೆಯಿದೆ. ಒಳ್ಳೆಯ ಲೇಖನ ಸರ್ 🙏👌👍

Leave a Reply

Your email address will not be published. Required fields are marked *

error: Content is protected !!