ಲಿಂಗಾಯತ ಧರ್ಮ ಹೋರಾಟ ಹಾಳು ಮಾಡಿದವರು ಯಾರು ?

ಕಳೆದ ಚುನಾವಣೆಯ ಸಂದರ್ಭದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಹೋರಾಟ ತುಂಬಾ ಜೋರಾಗಿ ನಡೆದಿತ್ತು. ರಾಜ್ಯದ ತುಂಬೆಲ್ಲ ಹಲವಾರು ಕಡೆ ಬಹಿರಂಗ ಸಮಾವೇಶಗಳು ಜರುಗಿದವು. ಬಸವ ತತ್ವದ ಅಡಿಯಲ್ಲಿ ಒಂದುಗೂಡಬೇಕು ಎಂಬ ಆಶಯದಿಂದ ಜನ ಸಾಗರೋಪಾದಿಯಲ್ಲಿ ಬಂದು ಸೇರಿದರು. ರಾಜ್ಯದ ತುಂಬೆಲ್ಲ ಮಾಡಿದ ಬಹುತೇಕ ಸಭೆಗಳು ಯಶಸ್ವಿಯಾದವು. ರಾಜಕಾರಣಿಗಳು ಸಹ ಲಿಂಗಾಯತ ಧರ್ಮ ಹೋರಾಟದ ಉಪಯೋಗ ಪಡೆದರಾಯ್ತು ಎಂದು ನಾ ಮುಂದೆ ತಾ ಮುಂದೆ ಎಂದು ಬಂದು ಕೈ ಜೋಡಿಸಿದರು. ಮಾಜಿ ಮಂತ್ರಿಗಳಾದ ಎಂ.ಬಿ.ಪಾಟೀಲ,ಬಿ.ಆರ್.ಪಾಟೀಲ, ಸವರಾಜ ಹೊರಟ್ಟಿ, ವಿನಯ ಕುಲ್ಕರ್ಣಿ, ಶರಣ ಪ್ರಕಾಶ ಪಾಟೀಲ ಮುಂತಾದವರು ಅದರ ಮುಂಚೂಣಿಯ ನಾಯಕರೆಂಬoತೆ ಕಂಡು ಬಂದರು. ಸರಕಾರವೆ ಜನರ ಹಕ್ಕೊತ್ತಾಯಕ್ಕೆ ಮಣಿದು ಲಿಂಗಾಯತ ಧರ್ಮದ ಕುಲಶಾಸ್ತ್ರಿಯ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟಿತು. ಜೊತೆಗೆ ಸರಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸುವಂತೆ ಜಸ್ಟಿಸ್ ನಾಗಮೋಹನ ದಾಸ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೊಂಡು ಅದು ವರದಿಯನ್ನು ಕೊಟ್ಟಿತು. ಆ ವರದಿಯನ್ನು ಆಗಿನ ಕಾಂಗ್ರೆಸ್ ಸರಕಾರ ಕೇಂದ್ರಕ್ಕೆ ಕಳಿಸುವ ಮೂಲಕ ತನ್ನ ಅಂಗಳದಲ್ಲಿನ ಚೆಂಡನ್ನು ಕೇಂದ್ರದ ಮುಂದಿಟ್ಟು ಆಟ ಆಡಲು ನೋಡಿತು.

ಆಗ ಕೇಂದ್ರದಲ್ಲಿದ್ದ ಬಿ.ಜೆ.ಪಿ. ಸರಕಾರಕ್ಕೆ ಲಿಂಗಾಯತ ಧರ್ಮದ ಅಲ್ಪ ಸಂಖ್ಯಾತರ ಮಾನ್ಯತೆಗಾಗಿ ಬಂದ ಅರ್ಜಿಯ ಕಡೆ ತಿರುಗಿಯೂ ನೋಡದೆ ವೀರಶೈವವಾದಿಗಳ ಕಡೆ ವಾಲಿ ತನ್ನ ಬೇಳೆ ಬೇಯಿಸಿಕೊಳ್ಳಲು ನೋಡಿತು. ಅಖಂಡ ಲಿಂಗಾಯತ ಧರ್ಮವನ್ನು ಕಾಂಗ್ರೇಸ್ ಪಕ್ಷದವರು ಒಡೆದರು ಎಂದು ಪ್ರಚಾರ ಮಾಡಿ ಅದರಲ್ಲಿ ಕೊಂಚ ಯಶಸ್ವಿಯನ್ನು ಕಂಡರು. ಬಸವಾದಿ ಶರಣರ ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದ್ದ ಸಿದ್ಧರಾಮಯ್ಯನವರಿಗೂ ಇದು ಮೇಲ್ನೋಟಕ್ಕೆ ಸರಿ ಅನಿಸಿತು. ಜೊತೆಗೆ ತಮ್ಮ ಪಕ್ಷ ಹಾಗೂ ವರ್ಚಸ್ಸಿಗೆ ಕಾರಣವಾಗುವುದಾದರೆ ಆಗಲಿ ಎಂದು ಮುಗುಮ್ಮಾಗಿ ಕುಳಿತು, ಮಂತ್ರಿ ಎಂ.ಬಿ.ಪಾಟೀಲ ಮೂಲಕ ನಿಭಾಯಿಸಲು ನೋಡಿದರು.

ಮಾಜಿ ಮಂತ್ರಿ ಎಂ.ಬಿ.ಪಾಟೀಲ ಲಿಂಗಾಯತ ಹೋರಾಟಗಳಲ್ಲಿ ಭಾಗವಹಿಸುವುದಕ್ಕಿಂತ ಮುಂಚೆ ಇಡೀ ಜನಾಂಗದ ನಾಯಕರಾಗಿರಲಿಲ್ಲ. ಕೇವಲ ಶಾಸಕ, ಮಂತ್ರಿ ಮಾತ್ರ ಆಗಿದ್ದರು. ಯಾವಾಗ ಲಿಂಗಾಯತ ರ‍್ಯಾಲಿಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡರೋ ಆಗ ಲಿಂಗಾಯತ ಸಮುದಾಯ ಸಂಪೂರ್ಣ ಎಂ.ಬಿ.ಪಾಟೀಲರ ಬೆನ್ನಿಗೆ ನಿಂತರು. ಇದನ್ನೆಲ್ಲ ಕಾತರಗಳಿಂದ ಗಮನಿಸುತ್ತಿದ್ದ ಹಿಂದುತ್ವ ಹಾಗೂ ವೀರಶೈವವಾದಿಗಳಿಗೂ ಎಂ.ಬಿ.ಪಾಟೀಲ, ವಿನಯ ಕುಲ್ಕರ್ಣಿ, ಶರಣ ಪ್ರಕಾಶ ಪಾಟೀಲ, ಬಿ.ಆರ್.ಪಾಟೀಲ ನುಂಗದ ತುತ್ತಾಗಿ ಪರಿಣಮಿಸಿದರು. ಹೇಗಾದರೂ ಸೈ ಇವರನ್ನು ಚುನಾವಣೆಯ ಕಣದಲ್ಲಿ ಸೋಲಿಸಬೇಕೆಂದು ಪಣ ತೊಟ್ಟವರಂತೆ ಪ್ರತಿಜ್ಞೆಗೈದು ಶರಣಪ್ರಕಾಶ ಪಾಟೀಲ ಹಾಗೂ ವಿನಯ ಕುಲ್ಕರ್ಣಿಯವರನ್ನು ಸೋಲಿಸಿ ಬಿಟ್ಟರು. ಎಂ.ಬಿ.ಪಾಟೀಲರನ್ನು ಹಣಿಯಲು ಶತಾಯಗತಾಯ ಪ್ರಯತ್ನಿಸಿದರಾದರೂ ಅದರಲ್ಲಿ ಯಶಸ್ಸು ಕಾಣಲಿಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಎಂ.ಬಿ.ಪಾಟೀಲರ ಮತಕ್ಷೇತ್ರವೊಂದರಲ್ಲಿ ಚುನಾವಣೆ ಪ್ರಚಾರಕ್ಕೆ ಬಂದು ಹೋದರು ಎಂದರೆ ಲಿಂಗಾಯತ ತತ್ವಗಳ ಮೇಲೆ ಅವರ ಕೆಂಗಣ್ಣು ಎಂಥದಿತ್ತು ಎಂಬುದನ್ನು ಅರಿಯಬೇಕಿದೆ.


ಬಸವಾದಿ ಶರಣರು ಬೋಧಿಸಿದ ವಚನ ಸಾಹಿತ್ಯದ ಆಧಾರದ ಮೇಲೆ ಲಿಂಗಾಯತ ಧರ್ಮ ಪುನರಪಿ ಮಾನ್ಯತೆ ಪಡೆದುಕೊಂಡುದ್ದೆ ಆದರೆ ಹಿಂದುತ್ವ ಹಳ್ಳ ಹಿಡಿದಂತೆಯೆ ಸೈ. ಆ ಕಾರಣಕ್ಕಾಗಿಯೆ ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಲಿಂಗಾಯತ ಧರ್ಮದ ಹೋರಾಟಗಳೆಡೆಗೆ ಪ್ರೀತಿಯ ನೋಟ ಹರಿಸಿದ್ದರು. ಆದರೆ ಈಗ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.

ವೀರಶೈವವಾದಿಯಾಗಿರುವ, ಸನಾತನ ಪರಂಪರೆಯೆ ಶ್ರೇಷ್ಠ, ನಾವೂ ಹಿಂದುಗಳು ಎಂದು ಹೇಳಿದ ವೀರಶೈವ ಜಗದ್ಗುರುಗಳ ಹತ್ತಿರ ರಾಜಕಾರಣಿಳು ಒಬ್ಬೊಬ್ಬರಾಗಿ ಸುಳಿಯುತ್ತಿದ್ದಾರೆ. ಮಾಜಿ ಉಪಸಭಾಪತಿಯಾಗಿದ್ದ ಬಿ.ಆರ್.ಪಾಟೀಲ ಅದಾಗಲೆ ಆ ಮಠಗಳಿಗೆ ಹೋಗಿ ಬಂದಿದ್ದಾರೆ. ಎಂ.ಬಿ.ಪಾಟೀಲರೂ ಸಹ ತಮ್ಮ ರಾಗ ಬದಲಿಸಿ ಕರ್ನಾಟಕದ ವೀರಶೈವರೂ ಲಿಂಗಾಯತರೆ ಅವರನ್ನೂ ನಮ್ಮ ಜೊತೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ. ಇದಲ್ಲದೆ ರಂಭಾಪುರಿ ಜಗದ್ಗುರುಗಳ ಅಡಿದಾವರೆಗಳಿಗೂ ಎರಗಿದ್ದಾರೆ. ವಿನಯಕುಲ್ಕರ್ಣಿಯನ್ನು ಕೊಲೆಯ ಕೇಸ್ ಸಂಬಂಧವಾಗಿ ಹೈರಾಣಾಗಿದ್ದಾರೆ. ಬಸವರಾಜ ಹೊರಟ್ಟಿ ಜಾಗತಿಕ ಲಿಂಗಾಯತ ಮಹಾಸಭೆಯ ರಾಾಷ  ಯ ಅಧ್ಯಕ್ಷರಾಗಿದ್ದರೂ ಸಹ ಲಿಂಗಾಯತ ಧರ್ಮವನ್ನು ಬಹಿರಂಗವಾಗಿಯೆ ವಿರೋಧಿಸುವ ಬಿ.ಜೆ.ಪಿಯನ್ನು ಸೇರಿ ಬಿಟ್ಟಿದ್ದಾರೆ.

ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ತನ್ನ ರಾಜಕೀಯ ಮಹತ್ವಾಕಾಂಕ್ಷೆಗಾಗಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರುವನ್ನು ಭೇಟಿ ಆಗುವ ಮೂಲಕ ಲಿಂಗಾಯತ ಧರ್ಮ ವಿಭಜನೆಯನ್ನು ನಾನು ಮಾಡಿಲ್ಲ, ಇದಕ್ಕೆಲ್ಲ ವೀರಶೈವ ಮಹಾಸಭೆಯ ಶಾಮನೂರು ಶಿವಶಂಕರಪ್ಪನವರೆ ಕಾರಣ ಎಂದು ಹೇಳಿ ಬಂದಿದ್ದಾರೆ. ಆದರೆ ರಂಭಾಪುರಿ ಜಗದ್ಗುರು ಮಾತ್ರ ಸಿದ್ಧರಾಮಯ್ಯನವರಿಗೆ ಹಿಂದೆ ತಾವು ಮಾಡಿದ ಧರ್ಮ ವಿಭಜನೆಯ ಹೆಜ್ಜೆ ಸರಿ ಇರಲಿಲ್ಲ, ಇದಕ್ಕಾಗಿ ನಾನು ಪಶ್ಚಾತ್ತಾಪ ಪಡುತ್ತಿರುವೆ ಎಂದು ಹೇಳಿದ್ದಾಗಿ ಹೇಳಿದ ಹೇಳಿಕೆಗಳು, ಇದಕ್ಕೆ ಪ್ರತಿಯಾಗಿ ಸಿದ್ಧರಾಮಯ್ಯ ಅವನ್ನು ಅಲ್ಲಗಳೆದದ್ದು ನಮ್ಮ ಕಣ್ಣ ಮುಂದೆ ಇದೆ.

ಲಿಂಗಾಯತ ಧರ್ಮ ಪ್ರತ್ಯೇಕತೆಯ ಮೂಲ ಶಕ್ತಿಯಾಗಿದ್ದ ಗದುಗಿನ ಜಗದ್ಗುರು ಪೂಜ್ಯ ಶ್ರೀ.ಡಾ.ಸಿದ್ದಲಿಂಗ ಮಹಾಸ್ವಾಮಿಗಳು, ಇಳಕಲ್ಲಿನ ಡಾ. ಮಹಾಂತ ಸ್ವಾಮೀಜಿಗಳು, ಡಾ.ಮಾತೆ ಮಹಾದೇವಿಯವರು ಈಗ ನಮ್ಮೊಂದಿಗೆ ಇಲ್ಲ. ರಾಷ್ಟಿçÃಯ ಬಸವ ದಳ ಹಾಗೂ ಬಸವ ಕೇಂದ್ರಗಳು ನಿಂತಲ್ಲಿಯೆ ನಿಂತಿಬಿಟ್ಟಿವೆ. ಭಾಲ್ಕಿಯ ಡಾ.ಬಸವಲಿಂಗ ಪಟ್ಟದ್ದೇವರು ಲಿಂಗಾಯತ ಧರ್ಮದ ಬಗೆಗೆ ಸಾಕಷ್ಟು ನಿಷ್ಠೆ ಪ್ರೀತಿ ಇದ್ದರೂ ಸಹ ಅವರು ಶಕ್ತಿಯಾಗಿ ಪರಿವರ್ತನೆಗೊಳ್ಳಲಾರರು. ಈಗಿನ ಗದುಗಿನ ಜಗದ್ಗುರು ಡಾ.ಸಿದ್ದರಾಮ ಸ್ವಾಮೀಜಿಗಳು ಎರಡು ದಡ ಪಯಣಿಗರು. ಅತ್ತ ಶಿವಯೋಗ ಮಂದಿರದ ಸಂಸ್ಥಾಪಕರಾದ ಹಾನಗಲ್ಲ ಕುಮಾರ ಸ್ವಾಮೀಜಿಯೂ ಬೇಕು. ಇತ್ತ ಬಸವಾದಿ ಪ್ರಮಥರ ವಚನ ಸಾಹಿತ್ಯವೂ ಬೇಕು ಎಂಬ ಡೋಲಾಯಮಾನ ಮನಸ್ಥಿತಿಯಲ್ಲಿದ್ದಾರೆ. ಚಿತ್ರದುರ್ಗದ ಮುರುಘಾ ಶರಣರು ತಾವೇ ಸೃಷ್ಟಿಸಿಕೊಂಡ ಬಂಧನದಿಂದ ಬಿಡುಗಡೆ ಆಗುವ ಯಾವ ಲಕ್ಷಣಗಳೂ ಇಲ್ಲ. ಸಾಣೆಹಳ್ಳಿಯ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಬಸವ ತತ್ವವನ್ನು ಮೈಗೊಡಿಸಿಕೊಂಡ ಲಿಂಗವಂತ ಧರ್ಮವನ್ನು ಎತ್ತಿ ಹಿಡಿಯುವ ಶಕ್ತಿ ಉಳ್ಳವರು. ಆದರೆ ಅವರಿಗೂ ಸಹ ಸಿರಿಗೆರೆಯ ಹಿರಿಯ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯರು ತೊಡಕಾಗಿ ಪರಿಣಮಿಸಿದ್ದಾರೆ.

 

ಲಿಂಗಾಯತ ಧರ್ಮದ ತತ್ವಗಳು ಮೂಲತಃ ಮನುಷ್ಯನ ಮೂಲಭೂತ ಹಕ್ಕುಗಳನ್ನು ಎಂದೂ ವಂಚಿಸುವುದಿಲ್ಲ. ಕಾಯಕ ಮಾಡುವವರೆ ದೊಡ್ಡವರು. ಓದಿ ಬರೆದು ವಾದ ಮಾಡುವವರು ದೊಡ್ಡವರಲ್ಲ ಎಂಬುದನ್ನು ಹೇಳಿಕೊಡುತ್ತದೆ. ಮಹಿಳೆ ಮನೆಗೆಲಸಕ್ಕೆ ಮಾತ್ರ ಸೀಮಿತ ಅಲ್ಲ. ಆಕೆಗೂ ಜೀವವಿರುವುದರಿಂದ ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ. ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂದು ಪ್ರಸ್ತುತ ಪಡಿಸುತ್ತದೆ. ದೇವರನ್ನು ಹೊರಗಡೆ ಹುಡುಕುವ ಅವಶ್ಯಕತೆ ಇಲ್ಲ. ಕಲ್ಲು ಕಟ್ಟಿಗೆ, ಪಂಚಲೋಹದಲ್ಲಿರುವ ದೇವರು ನಿನ್ನೊಳಗೆ ಇಲ್ಲವೆ ? ಎಂದು ಪ್ರಶ್ನಿಸುವ ಮೂಲಕ ದೇಹ ದೇವಾಲಯವನ್ನಾಗಿ ಮಾಡಿಸುವ ಶರಣರ ತತ್ವಗಳಿಗೆ ಇವೆ. ಲಿಂಗಾಯತ ಧರ್ಮದಲ್ಲಿ ಗುರು ಜಗದ್ಗುರು ಮಠ ಪೀಠ ಪರಂಪರೆ ಇತ್ಯಾದಿಗಳಿಲ್ಲ. ಮಾವಿನ ಕಾಯಿಯೊಳಗೊಂದು ಎಕ್ಕೆಯ ಕಾಯಿ ನಾನಯ್ಯಾ. ಬಾಣನವ ನಾನು ಮಯೂರನವ ನಾನು. ಮಾದಾರ ಚೆನ್ನಯ್ಯನ ಬೀಳುಡುಗೆಯ ಹೊದ್ದು ಬದುಕುವೆ. ಅವರ ಬಾಯ್ತಂಬುಲ ಮೇಲಿವೆ ಎಂದು ಹೇಳುವ ಮೂಲಕ ತಳ ಸಮೂಹದಲ್ಲಿ ತನ್ನ ಬದುಕಿನ ಬೇರುಗಳಿಗೆ ತಡಕಾಡಿ ಅವರನ್ನು ಅಪ್ಪಿಕೊಂಡವರು ಅಪ್ಪ ಬಸವಣ್ಣ. ಮಾದರಸರು ಬಸವಣ್ಣನವರ ತಂದೆಯಾಗಿದ್ದರೂ ಸಹ ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ, ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ ಎಂದು ಹೇಳಿ ಜನ ಸಾಮಾನ್ಯರಲ್ಲಿ ತಾವೂ ಒಬ್ಬರಾದರು. ಶರಣರ ಈ ಕಿಂಕರವಾದ ಭಾವ ಇಂದಿನ ಲಿಂಗಾಯತ ಧರ್ಮಿಯರಲ್ಲಿ ಬಂದರೆ ಸಹಜವಾಗಿ ಕರ್ನಾಟಕದ ತುಂಬಾ ಯಾವುದೆ ಮತೀಯ ಘಟನೆಗಳು ಜರುಗಲಾರವು.

ತನ್ನ ಅನ್ನವನ್ನು ತಾನು ದುಡಿದು ಉಣ್ಣುವವನೆ ಯೋಗ್ಯನು. ಅಮರೇಶ್ವರ ಲಿಂಗವಾದರೂ ಕಾಯಕದೊಳಗೂ ಎಂದು ಹೇಳುವ ಮೂಲಕ ಆ ದೇವರು ಸಹ ದುಡಿಯಬೇಕು ಎಂದು ಹೇಳಿದ ಧರ್ಮ. ಬಸವಾದಿ ಶರಣರು ಬರುವುದಕ್ಕಿಂತ ಪೂರ್ವದಲ್ಲಿ ದೇವರೆ ದೊಡ್ಡವರು ಎಂದು ಹೇಳಿಕೊಂಡು ಬರಲಾಗಿತ್ತು. ಆದರೆ ದೇವರಿಗಿಂತಲೂ ಕಾಯವೇ ಶ್ರೇಷ್ಠ. ಕಾಯಕ ಮಾಡುವ ಸಮಯದಲ್ಲಿ ಗುರು ಲಿಂಗ ಜಂಗಮ ಮುಂದಿದ್ದರೂ ಸಹ ಅದರ ಹಂಗಿಗೆ ಒಳಗಾಗಬಾರದು. ನಮ್ಮ ಬದುಕಿನ ದಾರಿದ್ರö್ಯ ಹೋಗುವುದು ಕಾಯಕದಿಂದ ಮಾತ್ರ. ದೇವರ ಪೂಜೆ ಮಾಡುವುದರಿಂದ ದಾರಿದ್ರö್ಯ ಹೋಗುತ್ತವೆ ಎಂಬುದು ಹುಸಿ ಎಂಬ ಸ್ಪಷ್ಟತೆಯನ್ನು ಲಿಂಗಾಯತ ಧರ್ಮ ತಿಳಿಸಿ ಹೇಳುತ್ತದೆ. ಏಕ ದೇವೋಪಾಸನೆಗೆ ಹಚ್ಚುವ ಮೂಲಕ ಇಪ್ಪತ್ತೇಂಟು ದೇವರನ್ನು ಹುಡುಕಾಡಿ ಹರಕೆ ಕಾಣಿಕೆ ಸಲ್ಲಿಸುವ ಜನಗಳ ಮನೋಧರ್ಮ ಬದಲಾಗಬಲ್ಲದು. ಎಲ್ಲಿ ಭಯ ಇದೆಯೋ ಅಲ್ಲಿ ವಿಚಾರ ಮಾಡುವುಕ್ಕೆ ಆಸ್ಪದ ಇರಲಾರದು. ಆದರೆ ಲಿಂಗಾಯತ ಧರ್ಮದ ಮೂಲ ತಳಹದಿಯೆ ನಿರ್ಭಯತೆ. ಆ ನಿರ್ಭಯತೆಗೂ ದಯೆಯೆ ಬುನಾದಿಯಾಗಿದೆ. ದಯವಿಲ್ಲದ ಧರ್ಮವನ್ನು ಬಸವ ಪ್ರಣೀತ ಲಿಂಗಾಯತ ಒಪ್ಪಿಕೊಳ್ಳಲಾರದು.

ದೇಹ ದೇಗುಲವಾದ ಮೇಲೆ ಆ ದೇಹ ಪವಿತ್ರವಾದುದನ್ನೇ ಮಾಡಬೇಕು. ಕಾಲು ದೇವಾಲಯದ ಕಂಬಗಳಾದ ಮೇಲೆ ಆ ಕಾಲುಗಳು ಒಳ್ಳೆಯದರ ಕಡೆಗೆ ಚಲಿಸಬೇಕು. ಶಿರ ಹೊನ್ನ ಕಳಶವಾದ ಮೇಲೆ ಅದು ಸಮಾಜ ಮುಖಿಯಾಗಿಯೆ ಚಿಂತಿಸಬೇಕು. ಸಹಜವಾಗಿ ಜಂಗಮ(ಸಮಾಜ)ವನ್ನು ಪ್ರೀತಿಸುವ ಮನುಷ್ಯ ಸ್ಥಾವರಗಳ ಬೆನ್ನು ಹತ್ತಿ ಹೋಗಲಾರ. ನಮ್ಮ ದೇಶದ ತುಂಬೆಲ್ಲ ಸ್ಥಾವರಗಳ ಚಿಂತೆ ಮಾಡಿದ್ದರಿಂದಲೆ ಜಂಗಮ ದಿನೆ ದಿನೆ ಬಡವಾಗುತ್ತಿದೆ. ದೇಶದ ಜನಗಳ ಆಲೋಚನಾ ಶಕ್ತಿ ಕುಂಟಿತಗೊಂಡು ವ್ಯಕ್ತಿಯೊಬ್ಬರ ಬಹುಪರಾಕಗೆ ಇಳಿದು ಬಿಟ್ಟಾಗಿದೆ. ಅಂದು ಅಫಘಾನಿಸ್ಥಾನದಿಂದ ಬಂದ ಮುಸ್ಲಿಂ ಬಂಧು ಬಸವ ತತ್ವವನ್ನು ಒಪ್ಪಿ,ಅಪ್ಪಿಕೊಂಡು ಮರುಳ ಶಂಕರನಾದ ಸೋಜಿಗ ಇಂದು ಕಾಣಲು ಸಾಧ್ಯವಿಲ್ಲ. ಹೆಂಡವನ್ನು ಮಾರುತ್ತಿದ್ದ ಮಾರಯ್ಯ ತಂದೆ ಶರಣರ ಆಲೋಚನೆಗಳಿಗೆ ಒಡ್ಡಿಕೊಂಡ ಮೇಲೆ ಜ್ಞಾನಸುಧೆಯನ್ನು ಜನತೆಗೆ ನೀಡಲು ತೊಡಗಿಸಿಕೊಂಡರು. ಬುಟ್ಟಿ ನೇಯ್ಗೆಯ ಮೇದಾರ ಕೇತಯ್ಯ, ಕಸ ಬಳಿಯುವ ಸತ್ಯಕ್ಕೆ, ಸೂಳೆ ಸಂಕವ್ವೆ, ಕದಿರೆಯ ರೆಮ್ಮವ್ವೆ, ನುಲಿಯ ಚೆಂದಯ್ಯ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ಹಳರಯ್ಯ , ಮಧುವರಸ ಮುಂತಾದವರ ವ್ಯಕ್ತಿತ್ವ ಲಿಂಗಾಯತ ಧರ್ಮಕ್ಕೆ ಮಾದರಿಯ ವ್ಯಕ್ತಿಗಳು.

ಲಿಂಗಾಯತ ಧರ್ಮದ ಮೂಲ ತತ್ವಗಳು, ಶರಣರ ಚಿಂತನೆಗಳು ಈಗ ರಾಜ್ಯದಲ್ಲಿ ನಡೆಯದೆ ಇರುವಂತೆ ಕಂಡು ಬಂದರೂ ಸಹ ಅದು ಗುಪ್ತಗಾಮಿನಿಯಾಗಿ ಹರಿದಾಡುತ್ತಿದೆ. ಹಿಂದೆ ಸಮುದ್ರ ಉಕ್ಕೇರಿದಂತೆ ( ಬಹಿರಂಗ ರ‍್ಯಾಲಿಗಳು) ಉಕ್ಕೇರುತ್ತಿಲ್ಲವಾದರೂ ಅದು ಒಳಗೊಳಗೆ ತನ್ನ ಕಾವನ್ನು ಇಟ್ಟುಕೊಂಡು ಮುನ್ನಡೆದಿದೆ. ಲಿಂಗಾಯತ ಧರ್ಮದ ಚಳುವಳಿಯನ್ನು ಗಮನಿಸುತ್ತ ಬಂದರೆ ಬಸವಣ್ಣನವರು ಇರುವಾಗಲೆ ಪಟ್ಟಭದ್ರ ಶಕ್ತಿಗಳು ಅದನ್ನು ಹೊಸಕಿ ಹಾಕಲು ಪ್ರಯತ್ನಿಸಿದರು. ಈಗಲೂ ಆ ಕಾರ್ಯ ನಿಂತ್ತಿಲ್ಲ. ಆದರೆ ಶರಣರ ಚಿಂತನೆಗಳಿಗೆ ಇರುವ ಶಕ್ತಿ ಎಂಥದ್ದೆಂದರೆ ಪುರೋಹಿತರ, ಪಟ್ಟಭದ್ರರ, ಶಕ್ತಿ ಎಷ್ಟೇ ಬಲಿಷ್ಠವಾಗಿದ್ದರೂ ಸಹ ಅದು ತನ್ನ ಸ್ವಂತ ಶಕ್ತಿಯ ಮೇಲೆ ಉಳಿದು ಬಂದಿದೆ. ಮುಂದೆಯೂ ಬರುವ ಎಲ್ಲಾ ಲಕ್ಷಣಗಳು ಅದಕ್ಕಿವೆ. ಫಿನಿಕ್ಸ್ ಹಕ್ಕಿಯಂತೆ ಸಾವಿನ ಸಂದರ್ಭದಲ್ಲಿ ಆ ಬೂದಿಯಿಂದಲೆ ಜೀವ ಪಡೆದು ಹೊರಬಂದಂತೆ ಬರಬಹುದೆಂಬ ಕನಸುಗಳಿವೆ. ಜೊತೆಗೆ ಈಗಾಗಲೆ ಯುವ ಜನತೆ ಬಸವಾದಿ ಶರಣರನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅಪ್ಪಿಕೊಳ್ಳುತ್ತಿದ್ದಾರೆ. ವಚನ ಸಾಹಿತ್ಯದ ಕುರಿತು ನಾಡಿನಾದ್ಯಂತ ಸಾಕಷ್ಟು ಸಭೆ ಸಮಾರಂಭಗಳು, ಚಿಂತನ ಗೋಷ್ಠಿಗಳು, ನಡೆಯುತ್ತಿವೆ. ವಚನ ವಿಶ್ಲೇಷಣೆ, ಮನೆಯಲ್ಲಿ ಮಹಾಮನೆ, ಬಸವ ಬೆಳಕು, ಬಸವ ಜ್ಯೋತಿ, ವಚನ ಜ್ಯೋತಿ ಎಂಬ ಸಹಸ್ರಾರು ಕಾರ್ಯಗಳು ಸಾಂಗವಾಗಿ ನಡೆದಿವೆ. ಈ ಆಶಯಗಳಿಗೆ ಸ್ಪಂದಿಸುವ ಜನ ನಾಯಕ ಹಾಗೂ ಸೂಕ್ತ ಮಠಾಧೀಶರು ಸಿಕ್ಕರೆ ಕರ್ನಾಟಕದ ಜನತೆ ಭಾರತದ ಚರಿತ್ರೆಯಲ್ಲಿ ಹೊಸದಾದ ಅಧ್ಯಾಯವೊಂದನ್ನು ಬರೆಯಬಲ್ಲರು.

೦ ವಿಶ್ವಾರಾಧ್ಯ ಸತ್ಯಂಪೇಟೆ

9 thoughts on “ಲಿಂಗಾಯತ ಧರ್ಮ ಹೋರಾಟ ಹಾಳು ಮಾಡಿದವರು ಯಾರು ?

 1. ಈ ಲೇಖನವನ್ನು ಓದುತ್ತಾ ಓದುತ್ತಾ ನನ್ನ ಕಣ್ಣಿಂದ ಧಾರಾಕಾರವಾಗಿ ನೀರು ಸುರಿಯುವುದನ್ನು ನಾನು ಗಮನಿಸಲಾರದೆ ಹೋದೆ ಹೌದು ಲಿಂಗಾಯತ ಧರ್ಮ ಹೋರಾಟ ರಾಜಕೀಯ ತಿರುವು ಪಡೆದಿದ್ದು ಅಷ್ಟೇ ಸತ್ಯ ಹೋರಾಟ ಮಾಡುವ ಮಠಾಧೀಶರು ನಮ್ಮೊಡನೆ ಇಲ್ಲ ಇನ್ನು ಕೆಲವರು ಅರೆಪ್ರಜ್ಞಾವಸ್ಥೆಯಲ್ಲಿದ್ದಾರೆ ಅವರಿಗೆ ಹಣ ಅಧಿಕಾರದ ನಶೆ ಏರಿದೆ ಇನ್ನು ಕೆಲವರು ಹೋರಾಟ ಮಾಡುವ ಮನಸ್ಸಿದ್ದರೂ ತೆಪ್ಪಗಾಗಿದ್ದಾರೆ ಬಸವ ತತ್ವವನ್ನು ಮೈಗೂಡಿಸಿಕೊಂಡ ಕೆಲವರು ಬಿಸಿ ತುಪ್ಪ ಬಾಯೊಳಗಿಟ್ಟು ಕೊಂಡಿದ್ದಾರೆ ಇಂತಿ ಇವರೆಲ್ಲರ ಕಾರುಣ್ಯದಿಂದ ಲಿಂಗಾಯತ ಧರ್ಮ ಹೋರಾಟ ದ ಕೂಗು ಅರಣ್ಯ ರೋಧನ

 2. ಲಿಂಗಾಯತ ಹೋರಾಟದ ಕಾವುತಣ್ಣಗೆಮಾಡಲು ಕಾರಣ
  ವೀರಶೈವಧರ್ಮವೆಷ್ಟುಕಾರವೋ ಅದಕ್ಕಿಂತಲು ರಾಜಕಾರಣವೂ ಕಾಣವಾಯಿತು. ದಿಗ್ಗಜರಾಗಿದ್ದ ಹಿರಿಯ ಲಿಂ.ತೋಂಟದಾರ್ಯರು,ಲಿಂ. ಇಳಕಲ್ಲ ಅಪ್ಪಗಳುಮಾಡಿದ ದಿಟ್ಟನಡೆ ಅವರಮುಂದಿನವರಿಗಾಗದಿರುವುದು ವಿಷಾದದ ಸಂಗತಿ. ರಾಜಕಾರಣಿಗಳು ಕೆಲಸಮಾಡಲು ಅಧಿಕಾರವಿದ್ದರೆಮಾತ್ರ ಸಾಧ್ಯವೆಂಬ ಮಾತನ್ನು ನಿರಾಕರಿಸಿದವರ ಸಾಲಿನಲ್ಲಿ ಮಹಾತ್ಮಾ ಗಾಂಧೀಜಿ,ನೆಲ್ಸನ್ ಮಂಡೇಲಾ ರಂತ ಆದರ್ಶವಾದಿಗಳೆ ಸಾಕ್ಷಿಯಾಗಿದ್ದರೆ. ಯುವಕರು ಈ ದೇಶದಭವಿಷ್ಯವಾಗಬೇಕಾದವರು ನಮ್ಮಧರ್ಮದ ತಿರುಳೇನು ,ಅದರಸತ್ವವೆನು,ನಮ್ಮತನವಾವುದು ಎಂಬ ಪ್ರಜ್ಞೆಯನ್ನು ಮರೆಯುತ್ತಿದ್ದಾರೆ.ಬಸವಾದಿ ಶರಣರಮಾರ್ಗಬಿಟ್ಟರೆ ಬೆರೆಗತಿಇಲ್ಲ ಎಂಬ ವಾಸ್ತವ ಅರಿಯುವುದು ಯಾವಾಗ? ಎಂದು ತಿಳಿದುಕೊಳ್ಳಬೇಕಾಗಿದೆ.

 3. ಸಾಣೆ ಹಳ್ಳಿಯ ಪೂಜ್ಯರು, ಬಸವಲಿಂಗ ಪಟ್ಟದೇವರು,ಮತ್ತೆ ನಿಜಗುಣಾನಂದರು, ಸೇರಿ ರಾಷ್ಟ್ರೀಯ ಬಸವದಳ ಒಳಗೊಂಡಂತೆ ಲಿಂಗಾಯತ ಸಂಘ ಸಂಸ್ಥೆಗಳು ಸೇರಿ ಕಲ್ಯಾಣದಿಂದ ಬೆಂಗಳೂರು ವರೆಗೆ ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸುವ ಕೆಲಸ ಆಗಬೇಕು. ಯಾವ ಪಕ್ಷ ಶತಾಯಗತಾಯ ಲಿಂಗಾಯತ ಒಂದು ಅಲ್ಪ ಸಂಖ್ಯಾತ ಧರ್ಮ ಎಂದು ಒಪ್ಪಿ ಶಾಸನಾತ್ಮಕ ಮಾನ್ಯತೆ ನೀಡುವ ಕಾರ್ಯ ತನ್ನ ಪ್ರಣಾಳಿಕೆಯಲ್ಲಿ ಹಾಕಿಕೊಳ್ಳುತ್ತೋ ಅದಕ್ಕೆ ಮಾತ್ರ ಲಿಂಗಾಯತರು ಗೆಲ್ಲಿಸುವ ಕೆಲಸ ಮಾಡಬೇಕು.🙏🙏

 4. ಲಿಂಗಾಯತ ಧರ್ಮ ತನ್ನ ಸತ್ವ ಕಳೆದುಕೊಂಡ ಇನ್ನೂಂದು ಕ್ರಿಶ್ಚಿಯನ್ ಅಥವಾ ಮುಸಲ್ಮಾನ ಧರ್ಮದಂತಾಗುತ್ತಿದೆ.
  ಕುರುಹಿಗಾಗಿ ಅರುಹನ್ನೆ ಮರೆತ ಹೆಡ್ಡರ ಧರ್ಮ ಅಂದರೆ ತಪ್ಪಾಗದು.
  ಅನುಭಾವದ ಮೇಲೆ ಮಠ ಮಾನ್ಯ, ಸಂಘ ಸಂಸ್ಥೆಯ ತುಳಿತ, ಅನುಭಾವಿಗಳ ರಚನೆಗೆ ಹಿಂದೇಟು.
  ಇದಕ್ಕೆ ಸಾಹಿತಿಗಳ ರಕ್ಷಣೆ.
  ತನ್ನ ಮುಸ್ಲಿ೦ ಧರ್ಮದ ಬಗ್ಗೆ ಬರೆಯಲು ಹಿಂದೇಟಾಕುವ ಸಾಹಿತಿಗಳು, ಇಲ್ಲಿ ಎದ್ವಾತದ್ವಾ ತತ್ವಸಿದ್ಧಾಂತವಿಲ್ಲದೆ, ವಚನ ಸಾಹಿತ್ಯವನ್ನು ಸಂಘಟನೆ, ಆಂದೋಲನದ ಅಡಿಪಾಯಕ್ಕೆ ಒಯ್ದು, ಇದನ್ನು ಇನ್ನೊಂದು ಹಿಂದುಳಿದ ಸಂಘಟನೆಗೆ ತಳ್ಳುತ್ತಿದ್ದಾರೆ.
  ಈ ಮುಕ್ಮಾಲ್ ಟೋಪಿಗೆ ತಲೆ ಒಡ್ಡಲು ಕಾರಣ.
  ನಮ್ಮ ಶಿಕ್ಷಣ ಬರೀ ಬುದ್ಧಿಗಮ್ಯವಾಗಿದೆ..
  ಆದರೆ ಬಸವಧರ್ಮ ನಿಂತಿರುವುದು ಬುದ್ದಿ, ಭಾವ & ಅತೀತದ ಅನುಭಾವ ಜ್ಞಾನದ ಮೇಲೆ.
  ಇದನ್ನು ಸರಿಪಡಿಸಬಹುದು. ? ಹೌದು
  ಹೇಗೆ?
  ಷಡ್ಸ್ಥಲ ವಿಶ್ವವಿದ್ಯಾಲಯ – ಅರಿವು, ಆಚಾರ& ಅನುಭಾವದ ಏಣಿಯಲ್ಲಿ.
  ಅಲ್ಲಿಂದ ಮೊದಲ ಅನುಭಾವಿ ಬರುವ ವರೆಗೂ
  ಎಲ್ಲ ಬಸವ ವಾರಸುದಾರರು ಅದುಮಿಕೊಂಡು, ಆ ವಿದ್ಯಾಲಯಕ್ಕೆ ಕಾಯ ವಾಚ & ಮನಸಾರೆ ಶ್ರಮಿಸಬೇಕು.

 5. ಲೇಖನ ಓದಿ ತುಂಬಾ ವಿಚಾರ ಮಾಡುವಂತೆ ಮಾಡಿತು ಅಣ್ಣ. ಲಿಂಗಾಯತ ಧರ್ಮಕ್ಕೆ ಮಾನ್ಯತೆ ತಡವಾಗಬಹುದು ಆದರೆ ಮುಂದೊಂದು ದಿನ ಲಿಂಗಾಯತ ಧರ್ಮವೇ ರಾಷ್ಟ್ರ ಧರ್ಮ ಆದರೆ ಅಚ್ಚರಿ ಪಡುವ ಅವಶ್ಯಕತೆ ಇಲ್ಲ. ಕಾರಣ ಜನಸಾಮಾನ್ಯರ ಹೃದಯಯಕ್ಕೆ ಸ್ಪಂದಿಸುವ ಹಾಗೂ ದಿನ ದಲಿತರ,ಹಿಂದುಳಿದವರ ಬಗ್ಗೆ ಸಮಾನತೆ ಮೂಡಿಸುವಂತ ಚಿಂತನೆ ಲಿಂಗಾಯತ ಧರ್ಮದಲ್ಲಿದೆ. 🙏💐

 6. ರಾಜಕಾರಣಿಗಳು ಯೋದರಲ್ಲ, ತಮ್ಮ ಸ್ವಾರ್ಥಕ್ಕೋಸ್ರ್ಕರ ಗೋಸುಂಬೆಗಳಂತೆ ಸ್ವಾಭಿಮಾನ ಬಿಟ್ಟು ದಾರಿಬದಲಿಸುವರೆಂದು ಈ ಹೋರಾಟದಲ್ಲಿ ಸಾಬೀತು ಪಡೆಸಿದರು. ಇವರಗಳ ನಿಷ್ಟೆ ಅವರ ಹೈಕಮಾಂಡ್ಗ್ ಗಳಿಗೆ ಸೀಮಿತ,ಧರ್ಮಕ್ಕಲ್ಲ. ಹೋರಾಟಕ್ಕೆ ರಾಜಕಾರಣಿಗಳ ಸಹಕಾರ,ಸಹಾಯ ಪಡೆಯಬೇಕೆ ವಿನಹ, ಮಂಚೂಣಿಯಲ್ಲಿ ಬಿಟ್ಟು ಅವರ ಹಿಂದೆ ಸಾಗುವುದು ಬಹಳ ಅಪಾಯ.

  ಹೋರಾಟ ಹಾಳುಮಾಡುವ ಪ್ರಯತ್ನದಲ್ಲಿ ರಾಜಕಾರಣಿಗಳಿಗಿಂತ ಮಠಾಧೀಶರ ಪಾತ್ರ ಅತಿ ಹೆಚ್ಚು ಎಂದು ಭಾವಿಸಿದರೆ ತಪ್ಪಾಗಲಾರದು. ಪಂಚಪೀಠದವರು ವಿರೋದ ಮಾಡುವುದರಲ್ಲಿ
  ಅರ್ಥವಿದೆ, ಅವರ ಮುಂದಿನ ಅಳಿವು-ಉಳಿವು ಹೋರಾಟದ ಪಲಿತಾಂಶದ ಮೇಲೆ ಅವಲಂಬಿಸಿದೆ. ಆದರೆ ಹಲವು ಲಿಂಗಾಯತ ಮಠಗಳು ಹೋರಾಟಕ್ಕೆ ಬೆಂಬಲಿಸದೆ ವೀರಶೈವ ಮಹಾಸಭೆ ಜೋತೆಗೂಡಿ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿರುವುದು ದುರಾದ್ರುಷ್ಟ.

  ಈಗಲೂ ಅಂದು ಹೋರಾಟದಲ್ಲಿ ಭಗವಹಿಸಿದ್ದ ಲಿಂಗಾಯತ ನಿಷ್ಠರು ಹೋರಾಟಕ್ಕೆ ದುಮಕಿ ಹೋರಾಡಲು ಸಿದ್ದರಿದ್ದಾರೆ. ಮುಖಂಡರು ಚಾಣಾಕ್ಯದಿಂದ ಕಾರ್ಯಕ್ರಮ ರೂಪಿಸಿ ಧೈರ್ಯ ದಿಂದ ಹೋರಾಟ ಗೋಷಿಸಬೇಕು. ಜಯ ಗಳಿಸುವವರೆಗೆ ಹೋರಾಟ ನಿಲ್ಲಬಾರದು.

 7. ತುಂಬಾ ಚೆನ್ನಾಗಿ ಪ್ರತಿಯೊಬ್ಬ ಶರಣರ ಮನೆ ಮುಟ್ಟುವಂತೆ ವಾಸ್ತವವನ್ನು ತೆರೆದಿಟ್ಟಿದ್ದಿರಿ…. ನನ್ನ ಅಭಿಪ್ರಾಯದಪ್ರಕಾರ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಚಳುವಳಿಯ ಸ್ವರೂಪ ಪಡೆದು ಇದೊಂದು ಜನ ಚಳುವಳಿಯಾಗಿ ರೂಪುಗೊಳ್ಳಬೇಕು…. ಅದೇ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ ಬರುವ ಎಡಬಿಡಂಗಿ ನಾಯಕರನ್ನು ದೂರ ಇಡಬೇಕು. ಅಂದಾಗ ಮಾತ್ರ ಊರಿನ ಪ್ರತಿಯೊಂದು ಓಣಿಗಳಲ್ಲಿ ಸ್ವಯಂಪ್ರೇರಿತವಾಗಿ ಜನ ಚಳುವಳಿ ಹುಟ್ಟು ಪಡೆಯುವುದರಲ್ಲಿ ಅನುಮಾನವೇ ಇಲ್ಲ….

 8. ಅತ್ಯಂತ ಪ್ರಭುದ್ಧತೆಭರಿತ ಲೇಖನವೆನಿಸುತ್ತಿದೆ ಶರಣರೆ.
  ಎತ್ತ ನೋಡಿದಡತ್ತ ಕೂಡಲ ಸಂಗಮದೇವನನ್ನು ಕಂಡ ಬಸವಣ್ಣನೆತ್ತ? ಬಣ್ಣದ ಮಾತಿನ ಸುಣ್ಣದ ಮನಸಿನ
  ಅಣ್ಣ ಅಕ್ಕ ಅಮ್ಮ ತಾಯಿ ಅಪ್ಪನವರೆಂಬ ಬಿರುದಾಂಕಿತದಲ್ಲಿ ಬಸವಾದಿ ಶರಣರ ಸಾಹಿತ್ಯವನ್ನು ವಾಣಿಜ್ಯ ಸರಕಾಗಿಸಿ ವಿಕ್ರಯ ಮಾಡಿ ಲಾಭ ಲೂಟಿಗಿಳಿದ ವ್ಯಾಪಾರಿಗಳೆತ್ತ?
  ಬಸವಣ್ಣನಿರುವುದು, ಬಸವ ತತ್ವ ಇರುವುದು ಜನಸಾಮಾನ್ಯರಲ್ಲಿ, ಮುಗ್ಧ ಬಸವ ಭಕ್ತರಲ್ಲಿ.
  ಎರಡು ಮನದವರನ್ನು ಎಡವಿಯೂ ಮೆಚ್ಚ ವಿಶ್ವಗುರು ಬಸವಣ್ಣನವರು.

Leave a Reply

Your email address will not be published. Required fields are marked *

error: Content is protected !!