ಇಂಥ ಮೂರ್ಖ ಟ್ರೋಲ್ ಗಳು ಭಾರತದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬಲ್ಲವೆ ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣೆಗಳು ಇರಲೇಬೇಕು. ಇಲ್ಲದಿದ್ದರೆ ಆಳುವ ಪಕ್ಷ ಹಾಗೂ ಅದರ ಸದಸ್ಯರು ತಾವು ಮಾಡಿದ್ದೇ ಸತ್ಯ ಎಂಬ ಭ್ರಮೆಯಲ್ಲಿ ಇರುತ್ತಾರೆ. ಆ ಭ್ರಮೆಯನ್ನು ಇಳಿಸಿ ವಾಸ್ತವ ಜಗತ್ತಿಗೆ ಅವರನ್ನು ಕರೆತರಲೇಬೇಕಾಗುತ್ತದೆ.

ನಮ್ಮ ದೇಶದ ಸಂವಿಧಾನದಲ್ಲಿ ಕಾರ್ಯಾಂಗ ಶಾಸಕಾಂಗ ನ್ಯಾಯಾಂಗ ಹಾಗೂ ಪತ್ರಿಕಾರಂಗಕ್ಕೆ ಅದರದೆ‌ ಘನತೆ ಗೌರವಗಳು ಇವೆ. ಆದರೆ ಅದೇನು ಕಾರಣವೋ ಇವುಗಳ ಮೌಲ್ಯ ದಿನೆ ದಿನೇ ಕುಸಿಯುತ್ತ ಹೊರಟಿವೆ. ದೇಶವನ್ನು ಮುನ್ನಡೆಸಿಕೊಂಡು ಹೋಗಲು ಬೇಕಾದ ಕಾನೂನು ಕಟ್ಟಳೆಗಳು ತಮ್ಮ ಪಕ್ಷಕ್ಕೆ ಬಹುಮತ ಇದೆ ಎಂಬ ಕಾರಣಕ್ಕೆ ಸಂಸತ್ತಿನಲ್ಲಿ ಚರ್ಚೆಗಳಿಲ್ಲದೆ ಕಾನೂನಾಗಿ ಮಾರ್ಪಡುತ್ತಿವೆ. ಕಾರ್ಯಾಂಗ ಆಡಳಿತ ಒಕ್ಷ ನಿರ್ದೇಶನದಂತೆ ನಡೆಯಬೇಕಾದ ತುರ್ತು ಸ್ಥಿತಿ ನಿರ್ಮಾಣವಾಗಿದೆ. ನ್ಯಾಯಾಂಗದ ಘನತೆ ಗೌರವವೂ ಸಹ ಕ್ಷೀಣಿಸುತ್ತಿದೆ ಎಂದು ಘನವೆತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳೆ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಈ ಮೂರು ಅಂಗಗಳ‌ ಲೋಪ ದೋಷಗಳನ್ನು ತಿದ್ದಬೇಕಾದ ಪತ್ರಿಕಾರಂಗ ಆಳುವವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ. ಪ್ರಜಾಪ್ರಭುತ್ವದ ಕಾವಲು ನಾಯಿ ಈಗ ಬಿಸ್ಕಿಟ್ ಹಾಕುವ ಮಾಲಕನ ಮುಂದೆ ಜೊಲ್ಲು ಸುರಿಸುತ್ತ ನಿಂತಿವೆ.

ಏರಿ ನೀರ ಕುಡಿಯಿತ್ತು. ಬೇರು ಬೀಜವ ನುಂಗಿತ್ತು. ಆರೈಕೆಯ ಮಾಡುವ ತಾಯಿ, ಧಾರುಣಿಯಲ್ಲಿ ಕೊರಳ ಕೊಯ್ದಳು. ಮಗು ಸತ್ತು, ಆ ಕೊರಳು ಬಿಡದು, ನಿಃಕಳಂಕ ಮಲ್ಲಿಕಾರ್ಜುನಾ.

ನೀರು ಸಂಗ್ರಹಣೆಗೆ ಹಾಕಿದ ಒಡ್ಡು (ಏರಿ ) ನೀರು ಕುಡಿದರೆ ಏನು ಮಾಡುವುದು ? ಬೀಜವನ್ನು ಬೆಳೆಸಿ ನಿಲ್ಲುವ ಶಕ್ತಿ ತುಂಬುವುದೆ ಬೇರು, ಅದುವೆ ಬೀಜವನ್ನೆ ನುಂಗಿ ಬಿಟ್ಟರೆ ? ಬೆಳೆ ಬೆಳೆಯುವುದಾದರೂ ? ಹುಟ್ಟಿಸಿ, ಬೆಳೆಸಿ, ಆರೈಕೆ ಮಾಡುವ ತಾಯಿಯೇ ಮಗುವಿನ ಕೊರಳ ಕೊಯ್ದರೆ ಸಂರಕ್ಷಿಸುವವರು ಯಾರು ?

ಇಂದಿನ ಪ್ರಜಾಪ್ರಭುತ್ವದಲ್ಲಿ ಸಂವಿಧಾನವನ್ನು ಕಾಯಬೇಕಾದವರೆ ಕೊಲ್ಲಲು ನಿಂತರೆ ಅದನ್ನು ತಡೆಯಬೇಕಾದವರು ಯಾರು ? ಮನುಸ್ಮೃತಿ ನಮಗೆ ಗೊತ್ತಿಲ್ಲದೆ ನಮ್ಮನ್ನು ಆಳುತ್ತಿತ್ತು. ಗೀತೆ ಶಾಸ್ತ್ರ ಪುರಾಣಗಳು ನಮ್ಮನ್ನು ಹಿಡಿದಿಟ್ಟಿದ್ದವು. ಬೈಬಲ್,ಕುರಾನ ನಮ್ಮನ್ನು ನಿಯಂತ್ರಣಗೊಳಿಸಿದ್ದವು. ಇವೆಲ್ಲವುಗಳ ಮೀರಿ ನಮ್ಮನ್ನು ಬೆಳೆಸುವ ಉಳಿಸುವ ಸಂವಿಧಾನ ಜಾರಿ ತರಲಾಯಿತು.

ಆದರೆ ಆ ಆಶಯಗಳು ಇಂದು ಉಳಿದಿವೆಯೆ ? ರಾಷ್ಟ್ರಪಿತ, ರಾಷ್ಟ್ರ ಲಾಂಛನ, ರಾಷ್ಟ್ರೀಯ ಧ್ವಜದ ಬಗೆಗಿನ ಗೌರವ ಆಯ್ಕೆಯಾದ ಸರಕಾರಗಳು ಕಿಮ್ಮತ್ತಿಲ್ಲದಂತೆ ಮಾಡುತ್ತಿವೆ. ಸರಕಾರವನ್ನು ಅಧಿಕಾರಿ ವರ್ಗವನ್ನು ಭ್ರಷ್ಟರನ್ನು ಹದ್ದು ಬಸ್ತಿನಲ್ಲಿ ಇಡಬೇಕಾದ ಸಂಸ್ಥೆಗಳಿಗೆ ಜಂಗು ಹತ್ತಿದೆ.

ಬರೀ ಮೂರನೆ ದರ್ಜೆಯ ಟೀಕೆ ಟಿಪ್ಪಣಿಗಳು ಇಂದು ಚಾಲ್ತಿಯಲ್ಲಿವೆ. ಯಾರನ್ನೋ ವೈಭವಿಕರಿಸಲು, ಇನ್ನಾರನ್ನೋ ತುಳಿಯಲು ಇವು ಬಳಕೆಯಾಗುತ್ತಿವೆ. ಇದು ನಿಜಕ್ಕೂ ಅಸಹ್ಯ ಸಂಗತಿಗಳು. ಅಧಿಕಾರದ ಗದ್ದುಗೆ ಏರಲು ಏನುಬೇಕೋ ಅದನ್ನೆಲ್ಲ ಮಾಡುವ ಕಸರತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತಕ್ಕಂತೂ ಸೂಕ್ತವಲ್ಲ.

ಟ್ರೂಲ್ ಮಾಡಲಂತೂ ಹಲವಾರು ಸಂಸ್ಥೆಗಳೆ ಹಗಲು ರಾತ್ರಿ ಕೆಲಸ ಮಾಡುತ್ತಿವೆ. ಟೀಕೆ ಟಿಪ್ಪಣೆ ಮರೆತು ವ್ಯಕ್ತಿತ್ವ ಹನನಕ್ಕೆ, ಚಾರಿತ್ರ್ಯವನ್ನು ವಧೆ ಮಾಡುವುದಕ್ಕೆ ಬಳಕೆಯಾಗುತ್ತಿವೆ. ದೇಶದ ಯುವ ಜನತೆಗೆ ಇಂಥ ಸಂಗತಿಗಳು ಮಾದರಿಯಾದರೆ ಹೇಗೆ ?

ತೀರಾ ಇತ್ತೀಚೆಗೆ ರಾಹುಲ್ ಗಾಂಧಿ ತನ್ನ ತಂಗಿಯ( ಪ್ರಿಯಾಂಕ ವಾರ್ಡಾ) ಮಗಳೊಂದಿಗೆ ಲೋಕಾಭಿರಾಮವಾಗಿ ಮಾತನಾಡುವ ಚಿತ್ರ ಟ್ರೋಲ್ ಮಾಡುವವರ ಕಣ್ಣಿಗೆ ಬಿದ್ದು ಅಸಹ್ಯ ಅಸಹ್ಯ ಮಾತುಗಳಿಗೆ ಎಡೆ ಮಾಡಿ ಕೊಡುತ್ತಿದೆ. ಯಾವುದೆ ಪುರುಷ ಸ್ತ್ರೀಯರೊಂದಿಗೆ/ ಯುವತಿಯೊಂದಿಗೆ ಮಾತಾಡಿದರೆ ಏನಾಗುತ್ತದೆ ? ಮಾತನಾಡಲೇಬಾರದೆ ?

ತಮ್ಮ ಮನಸ್ಸಿನ ಕೊಳಕನ್ನು ಹೊರಗೆಡಹಿದ ನೀಚ ಮನಸ್ಥಿತಿಗೆ ತಿಳಿದವರಾದರು ಬುದ್ದಿ ಹೇಳಬೇಕು. ಇಲ್ಲದಿದ್ದರೆ ತಿಳುವಳಿಕೆ ಉಳ್ಳವರೂ ಮೂರ್ಖರಾಗುವ ಸಂದರ್ಭ ಬಂದೊದಗುತ್ತದೆ.

ಯಾರು ಇಂಥ ನೀಚ ಕೆಲಸ ಮಾಡುತ್ತಾರೊ ಅವರಿಗೆ ಈ ಘಳಿಗೆ ಖುಷಿಯಾಗಬಹುದು. ಮುಂದೊಂದು ದಿನ ಅವರೂ ಇಂಥ ಟ್ರೋಲೆ ಗೆ ಒಳಗಾಗಲೇ ಬೇಕಾಗುತ್ತದೆ. ಬೀಜದಂತೆ ಫಲ, ಕನಸಿನಂತೆ ಮಾತು ಎಂಬ ಸತ್ಯವನ್ನು ಅರಿತು ಮುನ್ನಡೆಯಬೇಕಿದೆ.

೦ ವಿಶ್ವಾರಾಧ್ಯ ಸತ್ಯಂಪೇಟೆ

One thought on “ಇಂಥ ಮೂರ್ಖ ಟ್ರೋಲ್ ಗಳು ಭಾರತದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬಲ್ಲವೆ ?

  1. ಆಳುವ ಪಕ್ಷ ಕ್ಕೆ ಕೆಳುವಪಕ್ಷ ಬಲವಾಗಿರುವುದು ಪ್ರಜಾಪ್ರಭುತ್ವದ ಲಕ್ಷಣ ಸರಕಾರ ನಮ್ಮನ್ನಾರು ಕೇಳುವರು ಎನ್ನುವ ಅಹಂಕಾರವಿದ್ದು, ನಮ್ಮಕೈಯಲ್ಲಿ ಅಧಿಕಾರವಿಲ್ಲ ಎಂದು ಅಳದೇಕಿಮಾತಾಡುವುದು ವಿರೊಧಪಕ್ಷವಿದ್ದರೆ ಪ್ರಭುತ್ವ ಬಲವಾಗಲಾರದು.ಟೀಕೆಗೆ ಮಹತ್ವವಿರಬೆಕು ಅದರಬಾಷೆ ಹೃದಯದಿಂದಬರಬೆಕೆ ಹೊರತು ಟೊಂಕದ ಕೆಳಗಿನಿಂದಲ್ಲ. ಮಾತು ಮಾನವಂತ ಮಾತಾಗಬೆಕುಹೊರತು ಮಾನಹಾನಿಯ ಮಾತಾಗಬಾರದು.ಇವತ್ತು ದೇಶದಪ್ರಜಾಪ್ರಭುತ್ವ ವೆವಸ್ಥೆಕೆಡಲು ಮಾತೆ ಕಾರಣವಾಗತಾಇದೆ. ಅಧಿಕಾರ ಶಾಶ್ವತವಲ್ಲ ನಾವೂಎದರುಗಡೆ ಕುಳಿತುಕೊಳ್ಳಬಹುದುಎಂಬ ಎಚ್ಚರಿಕೆ ಸರಕಾರಕ್ಕಿರಬೇಕು.

Leave a Reply

Your email address will not be published. Required fields are marked *

error: Content is protected !!