ಮಾದಾರ ಚೆನ್ನಯ್ಯನ ಗೋತ್ರದವರು ನೀವು


ಬಸವಣ್ಣನವರ ಜೀವನದ ಪ್ರಸಂಗಗಳು – 2

ಬಸವಣ್ಣನವರಿಗೆ ಖಚಿತವಾಗಿ ಗೊತ್ತಿತ್ತು. ತಳ ಸಮೂಹದ ವ್ಯಕ್ತಿಗಳಲ್ಲಿ ಪ್ರಜ್ಞೆ ಬರದ ಹೊರತು ಸಾಮಾಜಿಕ ಕ್ರಾಂತಿ ಎಂಬುದು ಕನಸಿನ ಗಂಟೆ ಸರಿ. ಶತ ಶತಮಾನಗಳಿಂದ ಯಾರು ಶೋಷಣೆಗೆ ಗುರಿಯಾಗಿದ್ದರೋ ಅವರಿಗೆ ತಾವು ಶೋಷಣೆಗೆ ಗುರಿಯಾಗುತ್ತಿದ್ದೇವೆ ಎಂಬ ಅರಿವೇ ಇಲ್ಲ. ಹೋಗಲಿ,ತಾವೂ ಇತರರಂತೆ ಒಬ್ಬ ಮನುಷ್ಯರು ಎಂಬ ಸತ್ಯ ಕೂಡ ಅವರಿಗೆ ಗೊತ್ತಿಲ್ಲ. ಈ ಸಂಗತಿಯನ್ನು ಮನಗಾಣಿಸುವುದು ತುಂಬಾ ಕಷ್ಟ.

ಆದರೆ ಬಸವಣ್ಣನವರಲ್ಲಿ ಛಲವಿತ್ತು, ಒಲವಿತ್ತು ತಾವು ನಡೆಯಬೇಕಾದ ದಾರಿ ದುರ್ಗಮವಾದುದು ಎಂಬ ಅರಿವಿತ್ತು. ಆದರೂ ಅದನ್ನು ತುಳಿಯಲೇಬೇಕೆಂದು ನಿರ್ಧರಿಸಿಯಾಗಿತ್ತು. ಬಹುತೇಕವೇಳೆ ಇಂಥ ಸಂದರ್ಭದಲ್ಲಿ ನಾಯಕನಾದವನು ಹೊಂಕರಿಸಿ ಹೊರಟಿರುತ್ತಾನೆ.

ಮಹಾತ್ಮ ಬುದ್ಧ ನಡೆದ ಹಾದಿಯೆ ಬಸವಣ್ಣನವರಿಗೆ ಮಾರ್ಗದರ್ಶಿಯಾಗಿದ್ದರಿಂದ ಶಾಂತಿಯ ಪಥದಲ್ಲಿ ಮುನ್ನಡೆದು ಬದಲಾವಣೆ ತರಲು ಬಯಸಿದರು. ಶಾಂತಿ ಮತ್ತು ಸಹನೆಗಳು ಮನುಷ್ಯನ ಬಹುದೊಡ್ಡ ಅಸ್ತ್ರಗಳು. ದಯೆಯ ಮೂಲಕವೆ ಮನಸ್ಸುಗಳನ್ನು ಕಟ್ಟಬಹುದು ಎಂಬ ವಿಶ್ವಾಸವಿತ್ತು.

ಸಮಾಜದ ಕಟ್ಟ ಕಡೆಯಲ್ಲಿದ್ದ, ಎಲ್ಲರಿಂದ ಶೋಷಣೆಗೆ ಗುರಿಯಾಗಿದ್ದ ತಮ್ಮನ್ನು ತಾವು ಮನುಷ್ಯರೆಂದೇ ತಿಳಿದುಕೊಂಡಿರದ ಗುಡಿಸಲಕಡೆ ಬಸವಣ್ಣನವರು ನಡೆದು ಹೋಗುತ್ತಾರೆ. ಬಸವಣ್ಣನವರು ಅಂದು ಕಲ್ಯಾಣದ ಪ್ರಧಾನಿ. ಕಲ್ಯಾಣ ರಾಜ್ಯವನ್ನು ನೋಡಿಕೊಳ್ಳುವ ಪ್ರಧಾನಿಯೆ ಗುಡಿಸಲ ಜೀವಿಗಳ ಕಡೆಗೆ ನಡೆದು ಹೋದರೆ ಅಲ್ಲಿಯ ಜನಗಳ ಮನಸ್ಥಿತಿ ಹೇಗಾಗಿರಬೇಡ. ಇದನ್ನು ನಮಗೆ ಊಹಿಸಲಿಕ್ಕೂ ಬರುವುದಿಲ್ಲ. ಬಹುಶಃ ಸಾಸಿಯ ಮೇಲೆ ಸಾಗರ ಹರಿದು ಹೋದಂತೆ ಆಗಿರಬಹುದು.
ಆಗ ಗೋತ್ರಗಳದ್ದೆ ಭರಾಟೆ. ವಿಶ್ವಾಮಿತ್ರ ಗೋತ್ರ, ಕಶ್ಯಪ್ಪ ಗೋತ್ರಗಳು, ಕೌಂಡಿನ್ಯ ಗೋತ್ರಗಳು ಶ್ರೇಷ್ಠ ಎಂಬ ಭ್ರಮೆ. ಗೋತ್ರವೆಂಬುದು ಏನೆಂದು ಗೊತ್ತಿಲ್ಲದವರು. ಓದು ಬರಹಗಳಿಂದ ವಂಚಿತಗೊಂಡವರು. ಶಾಸ್ತ್ರಗಳು ವೇದಗಳು ಪುರಾಣಗಳು ಎಂಬ ಶಬ್ಧವನ್ನು ಉಚ್ಚರಿಸಲು ಸಾಧ್ಯವಿಲ್ಲದವರು. ಅಕ್ಷರಶಃ ಅವರು ಜೀವಂತ ಶವಗಳು. ಅವರಲ್ಲಿ ಉಸಿರಿದೆ, ಕಸುವಿಲ್ಲ. ರಾಜಶಾಹಿ ಹಾಗೂ ಪುರೋಹಿತಶಾಹಿಗಳೆರಡೂ ಒಂದಾಗಿ ಅವರ ಧ್ವನಿಯನ್ನು ಕತ್ತರಿಸಿ ಹಾಕಲಾಗಿತ್ತು.
ಕಲ್ಯಾಣದ ಪ್ರಧಾನಿ ಬಸವಣ್ಣನವರು ಶೋಷಿತರ ಗುಡಿಸಲೆಡೆಗೆ ನಡೆದು ಹೋಗುತ್ತಿದ್ದರೆ ಅವರೆಲ್ಲ ಮಾತನಾಡದೆ , ತಲೆಯ ಬಗ್ಗಿಸಿ ನಿಂತು ಬಿಟ್ಟರು. ಯಾವುದಕ್ಕೂ ಸ್ಪಂದನೆಯಿಲ್ಲ. ಆಗ ಬಸವಣ್ಣನವರು:

ಗೋತ್ರ ನಾಮವ ಬೆಸಗೊಂಡಡೆ
ಮಾತು ನೂಂಕದೆ ಸುಮ್ಮನಿದ್ದೀರಿದೆನಯ್ಯಾ ?
ತಲೆಯ ಕುತ್ತಿ ನೆಲನ ಬರೆಯುತ್ತಿದ್ದಿರಿದೇನಯ್ಯಾ ?
ಗೋತ್ರನಾಮ, ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯನೆಂಬುದು
ಕೂಡಲಸಂಗಯ್ಯಾ

ನಿಮ್ಮ ಸ್ಥಾನಮಾನಗಳೇನು ಕಮ್ಮಿಯಿಲ್ಲ. ನಿಮ್ಮ ಗೋತ್ರ ಪುರುಷನು ಬಹಳ ದೊಡ್ಡವನು. ಆತ ಸ್ವಾಭಿಮಾನಿ. ತನ್ನ ಅನ್ನವನ್ನು ತಾನು ದುಡಿದು ಉಣ್ಣುವವನು. ಬೆವರ ಹನಿಗಳ ಮೂಲಕ ಬದುಕನ್ನು ಕಟ್ಟಿಕೊಂಡವನು ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ. ಆತ ನಿಮ್ಮ ಗೋತ್ರ ಪುರುಷ. ಮಾತನಾಡಿ, ತಲೆ ಎತ್ತಿ. ,ನೆಲ ಬರೆಯುವುದು ಸಾಕು. ಮುಖವೆತ್ತಿ ಮಾತನಾಡಿಎಂದು ಬಸವಣ್ಣನವರು ಅವರೊಳಗೆ ಆತ್ಮ ವಿಶ್ವಾಸವನ್ನು ತುಂಬುತ್ತಾರೆ.

0 ವಿಶ್ವಾರಾಧ್ಯ ಸತ್ಯಂಪೇಟೆ

One thought on “ಮಾದಾರ ಚೆನ್ನಯ್ಯನ ಗೋತ್ರದವರು ನೀವು

  1. ಡಾ. ವಿಶ್ವನಾಥರಡ್ಡಿ ಪಾಟೀಲ್ ಮಂಗಳೂರು says:

    ಉತ್ತಮ ಸಂದೇಶ ಅಣ್ಣ…

Leave a Reply

Your email address will not be published. Required fields are marked *

error: Content is protected !!