ನನ್ನ ಲೇಖನಿಯನ್ನು ಬದಿಗಿಟ್ಟು ಮಂಡಿಯೂರುತ್ತೇನೆ,ಯಾಕೆ ಗೊತ್ತೆ ?

ನನ್ನ ಲೇಖನಿಯನ್ನು ಬದಿಗಿಟ್ಟು ಮಂಡಿಯೂರುತ್ತೇನೆ.ಯಾಕೆ ಗೊತ್ತೆ ?

ನಾನು ಈ ಹಿಂದೆ ಒಂದೆರಡು ಪ್ರಕರಣಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆಕೋರಿದ್ದೆ. ಮುಂದೆಯೂ ನಾನು ಮಾಡಿದ್ದು ತಪ್ಪು ಎಂದು ಕಂಡು ಬಂದಾಗ ಕ್ಷಮೆ ಕೋರಲು ನಿರ್ಧರಿಸಿಯೆ ಕೆಲವು ಮಾತುಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳ ಬಯಸುತ್ತೇನೆ. ನಡೆಯಬೇಕೆಂಬ ತುಡಿತ ಇರುವ ಮನುಷ್ಯ ಖಂಡಿತ ತಪ್ಪು ಮಾಡುತ್ತಾನೆ ಎಂದು ನಾನು ನಂಬಿದ್ದೇನೆ. (ಹಾಗಂತ ಸುಖಾ ಸುಮ್ಮನೆ ತಪ್ಪು ಮಾಡುವುದೆ ಒಂದು ಚಾಳಿ ಹಾಕಿಕೊಂಡಿರಬಹುದಾದವರನ್ನು ನಾನು ಕ್ಷಮಿಸಲಾರೆ.)

ಬಸವಾದಿ ಶರಣರ ತತ್ವಗಳು ನಿಗಿ ನಿಗಿ ಕೆಂಡ ಇದ್ದಂತೆ. ಅವು ಅಧರಕ್ಕೆ ಕಹಿ ಉದರಕ್ಕೆ ಸಿಹಿಯಾಗಿರುವಂಥವು. ಶರಣರ ವಚನಗಳ ಹಿನ್ನೆಲೆಯಲ್ಲಿ ಕೆಲವು ಮಾತುಗಳನ್ನು ಬರೆಯುವಾಗ ಪಟ್ಟಭದ್ರಹಿತಾಸಕ್ತಿಗಳು ಒಮ್ಮೆಲೆ ಮುಗಿ ಬೀಳುತ್ತವೆ. ಆದರೆ ಆ ಪಟ್ಟಭದ್ರ ಶಕ್ತಿಗಳು ನನ್ನ ಮೇಲೆ ಡೈರೆಕ್ಟಾಗಿ ಮುಗಿಬಿದ್ದರೆ ಅವರನ್ನು ನಾನು ಎದುರಿಸಬಲ್ಲೆ. ಅವುಗಳ ಆಳ ಅಗಲಗಳನ್ನು ನಾನೊಬ್ಬ ಪತ್ರಕರ್ತನಾಗಿ ತಿಳಿದುಕೊಂಡಿರುವುದರಿAದ ಹೆದರಲಾರೆ.

ಜನ ಸಾಮಾನ್ಯರನ್ನು , ಏನೂ ಅರಿಯದ ಮುಗ್ಧರನ್ನು ಆ ಪಟ್ಟಭದ್ರರು ಎದುರಿಗೆ ಇಟ್ಟುಕೊಂಡು ನನ್ನನ್ನು ಹಣಿಯಲು ನೋಡಿದಾಗ ಖಂಡಿತವಾಗಿಯೂ ನನ್ನ ಲೇಖನಿಯನ್ನು ಬದಿಗಿಟ್ಟು ಮಂಡಿಯೂರುತ್ತೇನೆ. ಇಂಥ ಪ್ರಸಂಗಗಳು ಇನ್ನು ಸಾವಿರ ಸಲ ಬಂದರೂ ಇದೆ ಮಾದರಿಯನ್ನು ಅನುಸರಿಸುತ್ತೇನೆ. ಕುಟಿಲ ಕುಹಕ ನೀತಿಯಿಂದ ಸಮಾಜದಲ್ಲಿ ದೊಡ್ಡ ದೊಡ್ಡ ಹೆಸರು ಪೀಠ ಪರಂಪರೆಗಳಿಗೆ ಅಮರಿಕೊಂಡಿರುವ ಜನರನ್ನು ಬಹಳಷ್ಟು ಜನ ದೊಡ್ಡವರೆಂದೆ ತಿಳಿದುಕೊಂಡಿರುತ್ತಾರೆ. ಅವರ ಪ್ರತಿ ನಡೆ ನುಡಿ ಎಲ್ಲವೂ ಮೌಲ್ಯಗಳಿಂದ ತುಂಬಿಕೊAಡದ್ದು ಎಂದೆ ಭಾವಿಸಿರುತ್ತಾರೆ. ಸಹಜವಾಗಿ ಇಂಥ ಮುಖವಾಡಗಳ ಕುರಿತು ಬರೆದಾಗ ಜನ ಸಾಮಾನ್ಯ ರೊಚ್ಚಿಗೇಳುತ್ತಾನೆ.

ನನ್ನ ಸಾತ್ವಿಕ ಸಿಟ್ಟು ಇರುವುದು ಭ್ರಷ್ಟ ವ್ಯಕ್ತಿಯ ಜೊತೆಗೆ ಹೊರತು ಜನ ಸಾಮಾನ್ಯರೊಂದಿಗೆ ಅಲ್ಲವೇ ಅಲ್ಲ. ನನ್ನ ಶಕ್ತಿ ಮತ್ತು ಸಮಯ ನನ್ನವರೊಂದಿಗೆ ವ್ಯರ್ಥವಾಗಿ ಹಾಳು ಮಾಡಲು ನಾನು ಇಷ್ಟ ಪಡುವುದಿಲ್ಲ. ಇಷ್ಟಕ್ಕೂ ಅರಿತೆ ಇಲ್ಲದ ಜನಗಳ ಜೊತೆಗೆ ನಾನು ಗುದ್ದಾಟ ಮಾಡಲಾರೆ. ನನ್ನ ಗುದ್ದಾಟವೇನಿದ್ದರೂ

ಮುಖವಾಡಗಳನ್ನು ಹಾಕಿಕೊಂಡು ಮೆರೆಯುವವರ ವಿರುದ್ಧ. ಹಾಗಂತ ಸುಖಾ ಸುಮ್ಮನೆ ಕಾಲು ಕೆರೆದುಕೊಂಡು ಜಗಳವಾಡುವ ತಂಟೆಕೋರನೂ ನಾನಲ್ಲ. ನಾನು ಹುಟ್ಟಿರುವ ಲಿಂಗಾಯತ ಧರ್ಮ ಅದೊಂದು ಚಳುವಳಿ; ಇಡೀ ಜಗತ್ತಿನಲ್ಲಿಯೆ ಅಪರೂಪವಾದೊಂದು ಅರಿವಿನ ಕಣಜ. ಈ ಕಣಜಕ್ಕೆ ಗೆದ್ದಲು ಹುಳಗಳಂತೆ ಅಮರಿಕೊಂಡಿರುವ ಮುಖಂಡರ ಬಗೆಗೆ ನನಗೆ ತಕರಾರುಗಳಿವೆ. ಗುಣಕ್ಕೆ ಮುನಿವೆನಲ್ಲದೆ ಪ್ರಾಣಕ್ಕೆ ಮುನಿಯ ಎಂಬ ವಚನದ ಸಾಲನ್ನು ಓದಿ ಅವಗತ ಮಾಡಿಕೊಂಡದ್ದರಿAದ ಗುಣಕ್ಕೆ ಮಾತ್ರ ಮುನಿಯುವ ಬರವಣಿಗೆ ನನ್ನದು.

ಕೆಲವು ಸಲ ನನ್ನ ಬರವಣಿಗೆಯ ಮೂಲ ಕಾಳಜಿಗಳನ್ನು ಅರ್ಥ ಮಾಡಿಕೊಳ್ಳದೆ ತಪ್ಪಾಗಿ ತಿಳಿದುಕೊಂಡು ನನ್ನ ಮೇಲೆ ಕೆಂಡ ಕಾರಿದ್ದು ಇದೆ. ಕೆಂಡ ಕಾರಿದ ಆ ಅಧಿಕಾರಿಗಳ, ಸ್ವಾಮೀಜಿಗಳ, ಜಗದ್ಗುರುಗಳ, ಸಮಾಜದ ಮುಖಂಡರ ಅರಿವಿನ ಬಗೆಗೆ ನನಗೆ ನಿಜಕ್ಕೂ ಖೇದವಿದೆ. ಒಂದು ಅರಿತು ಇವರು ನನ್ನ ಮೇಲೆ ಹಗೆ ಸಾಧಿಸುತ್ತಿದ್ದಾರೆ. ಇನ್ನೊಂದು ನನ್ನನ್ನು ಹಣಿಯುವ ಮೂಲಕ ಕೇಕೆ ಹಾಕಿ ನಗುವುದಕ್ಕೆ ಸಾಧ್ಯವಾಗುತ್ತದೆ ಎಂಬ ಉಮೇದಿನಲ್ಲಿ ನನ್ನ ಧ್ವನಿ ಅಡಗಿಸಲು ಯತ್ನಿಸುತ್ತಿದ್ದಾರೆ.

ಇಂಥವರನ್ನೂ ಕನಿಷ್ಠವಾಗಿ ಕಾಣಬೇಕೆಂಬ ಮನಸ್ಸು ನನ್ನದಲ್ಲ. ಇಡೀ ಜಗತ್ತು ಬಸವಾದಿ ಶರಣರ ಕಡೆಗೆ ಹೊರಳಿ ನಿಂತಿರುವಾಗ ಇವರೆಲ್ಲ ಕೂಪ ಮಂಡೂಕರಂತೆ ವರ್ತಿಸುತ್ತಿದ್ದಾರಲ್ಲ ! ಎಂದು ನಾನು ನೊಂದುಕೊAಡಿದ್ದೇನೆ. ಲಿಂಗಾಯತ ಧರ್ಮದಲ್ಲಿ ಇಲ್ಲದ ಜೋತಿಷ್ಯ, ವಾಸ್ತು, ರಾಹು ಕಾಲ, ಗುಳಿಕ ಕಾಲ, ಭವಿಷ್ಯವನ್ನು ಹೇಳಿ ಹೊಟ್ಟೆ ಹೊರೆಯುವ ಅವಶ್ಯಕತೆಯಾದರೂ ಇವರಿಗೆ ಏನಿದೆ ? ಎಂದು ನನಗೆ ನಾನೇ ಪ್ರಶ್ನಿಸಿಕೊಂಡು ಕಳವಳಗೊಂಡಿದ್ದೇನೆ. ಬಸವ ತತ್ವವನ್ನು ಹೇಳಿದರೆ ಖಂಡಿತಕ್ಕೂ ಯಾವುದೆ ಕೊರತೆ ಆಗಲಾರದು. ಬಸವ ತತ್ವ ಹೇಳುತ್ತ ಹೇಳುತ್ತಲೆ ನೀವು ಚೆನ್ನಾಗಿ ಬದುಕಿ . ಯಾರೂ ಬೇಡ ಅನ್ನಲಾರರು. ಒಳ್ಳೆಯ ಕಾರಿನಲ್ಲಿ ತಿರುಗಾಡಬೇಕೆ ? ಒಳ್ಳೊಳ್ಳೆಯ ಅಡುಗೆ ಉಣ್ಣಬೇಕೆ ? ಒಳ್ಳೆಯ ಕಟ್ಟಡದಲ್ಲಿ ನೀವು ವಾಸ ಮಾಡಬೇಕೆ ? ಇದಕ್ಕೆ ಯಾರೂ ಬೇಡ ಅನ್ನಲಾರರು.
ಬಸವಾದಿ ಶರಣರ ವಿಚಾರಗಳನ್ನು ಮುಟ್ಟಿಸುವ ಸಾರ್ಥಕ ಕೆಲಸ ಮಾಡಿ ಸಾಕು. ನಿಮ್ಮ ಏನೆಲ್ಲ ಇಭ್ರತಿಗಳು ಬಯಲಾಗುತ್ತವೆ. ನಿಮ್ಮನ್ನು ಯಾರೂ ಪ್ರಶ್ನಿಸಲಾರರು. ಉಂಡು ತಿಂದು ಆರಾಮವಾಗಿಯೆ ತತ್ವ ಪ್ರಸಾರ ಮಾಡಿ ಜನರು ನಿಮ್ಮನ್ನು ಅಂಗೈಯಲ್ಲಿಟ್ಟು ಸಲಹುತ್ತಾರೆ.


ನಮ್ಮ ನಡುವೆಯೆ ಇದ್ದ ಡಾ. ಸಿದ್ಧಲಿಂಗಮಹಾಸ್ವಾಮೀಜಿಗಳು ಗದಗ ಅವರಿಗೆ ಯಾವ ಕೊರತೆ ಇತ್ತು ? ಇಳಕಲ್ಲಿನ ಮಹಾಂತ ಶಿವಯೋಗಿಗಳು ನಮ್ಮ ನಡುವೆಯೆ ಇದ್ದು ಹೋದವರಲ್ಲವೆ ? ಈಗಲೂ ನಮ್ಮೊಂದಿಗೆ ಇರುವ ಸಿರಿಗೆರೆಯ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರಿಗೆ ಯಾರು ಏನಾದರೂ ಅನ್ನಲು ಸಾಧ್ಯವೆ ? ಚಿತ್ರದುರ್ಗದ ಮುರುಘಾ ಶರಣರನ್ನು ಪ್ರಶ್ನಿಸುವವರಾರು ? ಮಟ್ಟಿಯ ಸ್ವಾಮೀಜಿಗಳು, ಭಾಲ್ಕಿಯ ಡಾ.ಬಸವಲಿಂಗಪಟ್ಟದ್ದೇವರು, ಹುಲಸೂರಿನ ಡಾ. ಶಿವಾನಂದ ಮಹಾಸ್ವಾಮೀಜಿಗಳು, ಗದುಗಿನ ಇಂದಿನ ಡಾ. ಸಿದ್ದರಾಮ ಮಹಾಸ್ವಾಮೀಜಿಗಳು, ಕೋರಣೇಶ್ವರ ಮಠದ ವಿಶ್ವನಾಥ ಸ್ವಾಮೀಜಿಗಳು, ಬೇಲಿಮಠದ ಶಿವರುದ್ರ ಸ್ವಾಮೀಜಿಗಳು, ಇಳಕಲ್ಲಿನ ಗುರುಮಹಾಂತ ಸ್ವಾಮೀಜಿ, ವೀರಭದ್ರ ಚೆನ್ನಮಲ್ಲ ಸ್ವಾಮೀಜಿಗಳು, ಮುಂಡರಗಿ ಮಠದ ನಿಜಗುಣ ಸ್ವಾಮೀಜಿಗಳು ಇನ್ನು ಮುಂತಾದವರು ನಮ್ಮ ಕಣ್ಣ ಮುಂದೆಯೆ ಇಲ್ಲವೆ ?

ದಯವಿಟ್ಟು ಇವರನ್ನು ಸಂಪರ್ಕಿಸಿ ಕೇಳಿರಿ. ಈ ಮಹನೀಯರಿಗೆ ಯಾವುದಾದರೂ ತೊಂದರೆ ಉಂಟಾಗಿದೆಯೆ ? ಜನ ಇವರ ನಡತೆಗಳನ್ನು ಎಂದಾದರೂ ಖಂಡಿಸಿದ್ದಾರೆಯೆ ? ಯಾವ ಬರಹಗಾರನಾದರೂ ಇವರ ಚಾರಿತ್ರö್ಯವಧೆ ಮಾಡಲು ನೋಡಿದ್ದಾನೆಯೆ ? ಇಲ್ಲವಲ್ಲ ! ಬಸವಾದಿ ಶರಣರ ವಿಚಾರ ಹೇಳುತ್ತ ಹೇಳುತ್ತ ನಮ್ಮ ನಡುವೆಯೆ ಚೆನ್ನಾಗಿರುವ ಬದುಕನ್ನು ಜೀವಿಸುತ್ತಿಲ್ಲವೆ ?

ತಾತ್ವಿಕ ನಿಷ್ಠೆಯಿಲ್ಲದ ಜನಗಳ ಪರವಾಗಿ ಜನ ಸಾಮಾನ್ಯರು ಬಂದಾಗ ನನ್ನ ಗಂಟಲು ಕಟ್ಟುತ್ತದೆ. ನನ್ನ ಜನಗಳ ಜೊತೆಗೆ ನಾನು ಏಕೆ ಬಡಿದಾಡಬೇಕು? ಎಂಬ ಪ್ರಶ್ನೆ ಮೂಡುತ್ತದೆ. ಹೀಗಾಗಿ ಇಂಥ ಸಾವಿರ ಪ್ರಸಂಗಗಳು ಬಂದರೂ ನಾನು ಕ್ಷಮೆ ಕೇಳುತ್ತೇನೆ. ಏಕೆಂದರೆ ನಾನು ನನ್ನವರೊಂದಿಗೆ ಗುದ್ದಾಡಲು ಬಯಸುವುದಿಲ್ಲ. ಗುದ್ದಾಟದಿಂದ, ಹಠಮಾರಿತನದಿಂದ ಯಾವುದೆ ಪ್ರಯೋಜನ ಆಗುವುದಿಲ್ಲ ಎಂಬುದು ನನಗೆ ಖಚಿತವಾಗಿ ಗೊತ್ತು. ನನ್ನ ಬರವಣಿಗೆ ವಿಚಾರ

ದ್ವೇಷಿಸುವವರನ್ನೂ ನಾನು ಪ್ರೀತಿಸುತ್ತೇನೆ. ಏಕೆಂದರೆ ಅಪ್ಪ ಬಸವಣ್ಣನವರು ನನಗೆ ಕಲಿಸಿಕೊಟ್ಟದ್ದು ಇವನಾರವ ಇವನಾರವ ಎಂದೆನ್ನದೆ ಇವನಮ್ಮವ ಇವ ನಮ್ಮವ ಎಂದು ಪ್ರೀತಿಸಲು ಹೇಳಿದ್ದೆ ಹೊರತು ದ್ವೇಷಿಸುವುದಕ್ಕೆ ಅಲ್ಲ.

ಅಮೇರಿಕಾದ ಅಧ್ಯಕ್ಷನೆ ಕಾಲೂರಿ ಕುಳಿತಿರುವಾಗ ನನ್ನಂಥವನದೇನು ಕಿರೀಟ ಉದುರಿ ಬೀಳುವುದಿದೆ. ನಾನು ಅತಿಯಾಗಿ ಹಚ್ಚಿಕೊಂಡ ಬಸವಣ್ಣನವರೆ ಮಾವಿನ ಕಾಯಿಯೊಳಗೊಂದು ಎಕ್ಕೆಯ ಕಾಯಿ ನಾನಯ್ಯ ಎಂದಿರುವಾಗ ನಾನು ದೊಡ್ಡವನೆಂಬ ಯಾವ ಹಮ್ಮು ಬಿಮ್ಮುಗಳೂ ನನ್ನಲ್ಲಿ ಇಲ್ಲ. ಹೀಗಾಗಿ ಸಾವಿರ ಸಲವಾದರೂ ನನ್ನವರಿಗಾಗಿ ನಾನು ಕ್ಷಮೆ ಕೇಳುತ್ತ, ಬರೆಯುತ್ತ, ತಿದ್ದಿಕೊಳ್ಳುತ್ತ ಹೋಗುತ್ತೇನೆ.

೦ ವಿಶ್ವಾರಾಧ್ಯ ಸತ್ಯಂಪೇಟೆ

15 thoughts on “ನನ್ನ ಲೇಖನಿಯನ್ನು ಬದಿಗಿಟ್ಟು ಮಂಡಿಯೂರುತ್ತೇನೆ,ಯಾಕೆ ಗೊತ್ತೆ ?

 1. ಇದು ಅರ್ಥವಾಗಬೇಕಿರುವ ವ್ಯಕ್ತಿಗಳಿಗೆ ಅರ್ಥವಾದರೂ ಕುರುಡು ಪ್ರದರ್ಶನ ಮಾಡುತ್ತಾರೆ….ಇನ್ನು ಜನಸಾಮಾನ್ಯರು ಇಷ್ಟೊಂದು ಆಳಕ್ಕೆ ಯೋಚಿಸೋದೇಇಲ್ಲ….ಜನಸಾಮಾನ್ಯರು ಯೋಚಿಸಲು ಹಚ್ಚುವದೇ ನಿಮ್ಮ ಒಂದು ಪ್ರಯತ್ನ, ಅದರಲ್ಲಿ ಸಾಕಷ್ಟು ಅಡೆ ತಡೆ ಎದುರಿಸಬೇಕಾಗುದು ಸಾಮಾನ್ಯ. ತಾವು ಗಟ್ಟಿ ಯಾಗಿದ್ದಿರ…..ಮುಂದುವರಿಸಿ…ನಿದ್ದೆಯ ಸೋಗಿನಲ್ಲಿರುವವರ ಅರಿವನ್ನ ಜಾಗೃತಿ ಗೊಳಿಸಿ. ಶರಣು ಶರಣಾರ್ಥಿ.

  1. ನಿಮ್ಮಂಥ ಸಹೃದಯರು, ಶರಣ ಪ್ರೇಮಿಗಳು ಅರ್ಥ ಮಾಡಿಕೊಂಡರೂ ಸಾಕು. ನಾನು ನನ್ನ ಬರವಣಿಗೆಯ ಕಾಯಕ ಮುಂದುವರೆಸುತ್ತೇನೆ.
   ೦ ವಿಶ್ವಾರಾಧ್ಯ ಸತ್ಯಂಪೇಟೆ

 2. Really its mind blowing sir. We are with you, and I request you continue your fight against evils in the society. Jai Basava, Jai Bheem

  1. ಸಹೋದರ
   ಬುದ್ದ ಬಸವ ಅಂಬೇಡ್ಕರ್ ನನ್ನ ಜೀವ ಜೀವಾಳ. ಇವರನ್ನು ಬದಿಗಿಟ್ಟು ಆಲೋಚಿಸುವುದಕ್ಕೂ ನಾನು ನಿರಾಸಕ್ತ.

   ಎಷ್ಟೇ ಅಡೆ ತಡೆ ಬಂದರೂ ನಾನು ನಿಮ್ಮಂಥ ಸಹೃದಯರ ಪ್ರೀತಿ ವಿಶ್ವಾಸ ಬಲಗಳೊಂದಿಗೆ ಮುಂದುವರೆಯುವೆ.

 3. ತುಂಬಾ ಒಳ್ಳೆ ವಿಚಾರಗಳು ಸರ್ ನಾನು ಓದಿದ್ದೆ ಬಟ್ ವ್ಯಕ್ತಿತ್ವ ಎಂದರೆ ಹೀಗಿರಬೇಕು ಎಂಬ ತೋರಿಸಿಕೊಟ್ಟ ನಿಮಗೆ ಧನ್ಯವಾದಗಳು

  1. ತುಂಬಾ ಒಳ್ಳೆ ವಿಚಾರಗಳು ಸರ್ ನಾನು ಓದಿದ್ದೆ ಬಟ್ ವ್ಯಕ್ತಿತ್ವ ಎಂದರೆ ಹೀಗಿರಬೇಕು ಎಂಬ ತೋರಿಸಿಕೊಟ್ಟ ನಿಮಗೆ ಧನ್ಯವಾದಗಳು

 4. ಸತ್ಯವಾಗಲೂ ನಿಮ್ಮ ಬರಹ ನಮ್ಮಂತವರನ್ನು ಬಡಿದೆಚ್ಚರಿಸುತ್ತದೆ ಆದರೆ ಉಸಿರುವಳ್ಳಿಯಂತೆ ಇರುವ ಕಾಲ ಕಲಕು ಹೊಟ್ಟೆಹೊರೆಯಲು ಬಣ್ಣ ಬದಲಾಯಿಸುವ ಗೋಸುಂಬೆ ಮುಖದವರಿಗೆ ಅರ್ಥ ಆಗುವುದಿಲ್ಲ.
  ವೈಚಾರಿಕ ಪ್ರಜ್ಞೆಯ ಕ್ರಾಂತಿಕಾರಿ ಮಹಾತ್ಮರು ಮಹನೀಯರು ಲೇಖಕರು ಕಾಲಕಾಲಕ್ಕೆ ಹುಟ್ಟುತ್ತ ಜನರಲ್ಲಿ ತುಂಬಿರುವ ಅಂಧಶ್ರದ್ಧೆಗಳನ್ನು ಹರಿತವಾದ ಲೇಖನಿಯಿಂದ ಬಡಿದೆಬ್ಬಿಸಿದ್ದಾರೆ. ಆದರೆ ಹಲವು ಕ್ರಿಮಿಗಳು ಮೇಲೇಳಲೇ ಇಲ್ಲ ಎದ್ಜ ಜನಸಮುದಾಯವನ್ನು ಮರಳಿ ತಮ್ಮ ಮೌಡ್ಯತೆಯ ಕೆಸರಿನಲ್ಲಿ ಸಿಗುಸುತ್ತಲೇ ಇರುವರು.ಈ ಜನರಿಗಾದರೂ ಸ್ವಚ್ಛ ಮತ್ತು ಸುಂದರವಾದ ಬದುಕು ಬೇಕಿಲ್ಲ ಮೂಢ ಆಚರಣೆ ಗಳಿಂದಲೇ ಆಸ್ತಿ ಐಶ್ವರ್ಯ ಪದವಿ ಕೀರ್ತಿ ವಾರ್ತೆ ಸಿಗುವುದೆಂಬ ಹುಚ್ಚು ಭ್ರಮೆಯಲ್ಲಿ ಬಿದ್ದಿದ್ದಾರೆ ಇಂಥವರಿಗೆ ಬುದ್ಧ ಬಸವ ಅಂಬೇಡ್ಕರ್ ಪೆರಿಯಾರ್ ವಿಚಾರಗಳು ವಿಷದಂತೆ ತೋರುತ್ತಿದೆ ಆದರೆ ಅವರ ನುಡಿಗಳು ಅಮೃತಕ್ಕೆ ಸಮಾನ ಎಂಬುದು ಜಗತ್ತಿಗೆ ಅರ್ಥವಾಗುತ್ತೆ ಅಲ್ಲಿಯವರೆಗೆ ನಿಮ್ಮಂತ ಕ್ರಾಂತಿಕಾರಿ ಲೇಖಕರಿಗೆ ಸ್ವಲ್ಪ ಕಷ್ಟನೆ. ಅದನ್ನು ಸಹಿಸಿಕೊಳ್ಳುವ ಶಕ್ತಿ ಗುರುಬಸವಣ್ಣನವರು ತಮಗೆ ನೀಡಲಿ ಎಡೆಬಿಡದೆ ಬಸವತತ್ವ ಸಾರುತ್ತ ಮುನ್ನಡೆಯಿರಿ ನಿಮ್ಮ ಹಿಂದೆ ನಿಮ್ಮ ವಿಚಾರದ ಸಮಾಜವಿದೆ ಮುಂದಿನ ಒಳ್ಳೆಯ ಸಮಾಜಕ್ಕಾಗಿ ಲೇಖನಿ ಕೆಳಗಿಟ್ಟು ಮಂಡಿಯೂರುವುದು ಬೇಡವೇ ಬೇಡ.

  1. ಸಹೋದರ ಮಹಾಂತೇಶ್ ನಿಮ್ಮ‌ ಪ್ರತಿಕ್ರಿಯೆ ಓದಿದೆ. ಹೃದಯ ತುಂಬಿ ಬಂತು. ನನ್ನ ಬರವಣಿಗೆ ಸಾರ್ಥಕವಾಗುವುದೇ ಇಂಥ ಸಂದರ್ಭದಲ್ಲಿ. ನಿಮಗೆ ಶರಣು ಶರಣಾರ್ಥಿಗಳು

 5. ಬಸವಾದಿ ಶರಣರ ವಿಚಾರವಾದಿಗಳು ನೀವು..
  ನಾವು ಸದಾ ನಿಮ್ಮೊಂದಿಗೆ ಶರಣರೇ

 6. ನಿಮ್ಮ ಬರಹ ನೋಡಿದಾಗ ಈ ಕೆಳಗಿನ ವಚನ ನೆನಪಿಗೆ ಬಂತು.
  ನುಡಿದರೆ ಮುತ್ತಿನ ಹಾರದಂತಿರಬೇಕು
  ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
  ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು
  ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು
  ನುಡಿಯೊಳಗಾಗಿ ನಡಿಯದಿದ್ದರೆ
  ಕೂಡಲಸಂಗಮನೆಂತೊಲಿವನಯ್ಯ.

  ನಿಮ್ಮ ಆ ಮಾತು ನಮ್ಮನ್ನೆಲ್ಲಾ 12 ನೇ ಶತಮಾನದ ಪರಿಚಯಿಸುತ್ತದೆ.ನಿಮ್ಮ ಕಾಯಕವ ನೀವು ಮಾಡಿ ನಾವು ಸದಾ ನಿಮ್ಮೊಂದಿಗಿರುವೆವು.

 7. ಆರು ಮುನಿದು ನಮನೇನು ಮಾಡುವರು?
  ಊರು ಮುನಿದು ನಮನೆಂತು ಮಾಡುವುದು?
  ಶರಣನಾರಿಗೂ ಅಂಜುವವನಲ್ಲ, ಅಳುಕುವವನಲ್ಲ.
  ಯಾರಿಗೂ ನಿಂದಿಸದೆ, ಬಸವಾದಿ ಶರಣರ ತತ್ವಗಳನ್ನು ತನು ಮನ ಭಾವ ಚಿತ್ತಗಳಲ್ಲಿ ತುಂಬಿಕೊಂಡು ಆನೆಯಂತೆ ಹೆಜ್ಜೆ ಹಾಕಿರಿ.
  ಶ್ವಾನಗಳು ಬೊಗಳಲಿ ಆದರೆ ಕಚ್ಚದಂತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

 8. ತಮ್ಮ ವಿಚಾರ ಸರಣಿಯನ್ನು ಒಪ್ಪುತ್ತೇನೆ ಸಹೋದರ. ನಮ್ಮ ಸುತ್ತಲಿನ ನಮ್ಮವರೇ ಬಸವತತ್ವವನ್ನು ಧಗ್ದುಳಿದು ಅದನ್ನು ಸಮಯಕ್ಕೆ ತಕ್ಕಂತೆ ಬಳಸುವ ಲಜ್ಜಗೇಡಿತನ ಕಂಡು ಕುದ್ದುಹೋಗಿದ್ದೇನೆ. ನಮ್ಮ ಅತ್ಯಂತ ಆತ್ಮೀಯರನ್ನೇ ಹತ್ಯಾರ ಮಾಡಿಕೊಂಡು ನಮ್ಮನ್ನು ಹಣಿಯಲು ಹವಣಿಸುತ್ತಾರೆ. ಇವರ ಎಡಬಿಡಂಗಿತನ ತಿದ್ದಲಾಗದು.ಹಾಗಾಗಿ ನಾನು ಇವರಗೊಡವೆಗೆ ಹೋಗದೇ ನನ್ನಷ್ಟಕ್ಕೆ ನಾನಿದ್ದರೂ ಅವರ ವ್ಯಂಗ್ಯ ವೈರುಧ್ಯದ ಕುಹಕ ನಡೆಯಿಂದ ಗಮನ ಸೆಳೆಯಲು ಸತತ ಪ್ರಯತ್ನ ಮಾಡುತ್ತಾರೆ.ಅವರತ್ತ “ದಿವ್ಯ ನಿರ್ಲಕ್ಷ್ಯ” ನನ್ನ ಪ್ರತಿಕ್ರಿಯೆ ಆಗಿದೆ. ನಿಮ್ಮ ಬರಹ ಓದಿ ಹೃದಯ ಭಾರವಾಯ್ತು. ನೀಚರು ಸುಧಾರಿಸಲಿ. ತಮ್ಮಂಥಾ ಸೂಕ್ಷ್ಮ ಸಂವೇದನಾ ಶೀಲ ಮನಸುಗಳು ನಲುಗದೇ ದೃಢವಾಗಿ ಬಸವತತ್ವವನ್ನು ಜನಪರವಾದ ವಿಚಾರವನ್ನು ಬಿತ್ತಿ ಬೆಳೆಯುವ ವಾತಾವರಣ ನಿರ್ಮಾಣ ಆಗಲಿ ಎಂದು ಆಶಿಸುತ್ತೇನೆ.

  1. ಹಿರಿಯರೆ ತಮಗೆ ಗೌರವದ ಶರಣುಗಳು
   ಬಸವಮಾರ್ಗ ಸರಳ ಮಾರ್ಗವಾದಂತೆ ಕಠಿಣ ಮಾರ್ಗವೂ ಹಾದು. ‌ಈ ಹಾದಿಯಲ್ಲಿ ನಡೆದು ಭಕ್ತರಿಗೆ ಮಾದರಿಯಾಗಬೇಕಾದ ಪಟ್ಟಭದ್ರರು ಕೇವಲ‌ ತಮ್ಮ ಸ್ವಾರ್ಥಕ್ಕಾಗಿ ತತ್ವಗಳನ್ನು ಗಾಳಿಗೆ ತೂರಿ ನಡೆಯುತ್ತಿದ್ದಾರೆ.
   ಇದು ದಡ್ಡ ಭಕ್ತರಿಗೆ ಅರ್ಥವಾಗುತ್ತಿಲ್ಲ. ಇದನ್ನು ಸರಿಯಾಗಿ ಮನಗಂಡಿರುವ ಪಟ್ಟಭದ್ರರು ಕೊಬ್ಬಿದ್ದಾರೆ. ಗೂಳಿಯಂತೆ ಹೊಂಕರಿಸುತ್ತಿದ್ದಾರೆ.

   ಇವರನ್ನು ತಡೆ ಹಿಡಿಯುವ ಶಕ್ತಿ ವಚನಗಳಲ್ಲಿ ಇದೆ.‌ ಆ ವಚನಗಳನ್ನು ನಾವು ನೀವು ತಿಳಿಸುತ್ತ ಹೋಗೋಣ. ಕತ್ತಲು ಕಳೆದ ಮೇಲೆ ಬೆಳಕು ಬರಲೇಬೇಕಲ್ಲವೆ ?

 9. ನಿಮ್ಮ ಹೃದಯಾರೆ ಹಾರೈಕೆಯಿಂದ ಎದೆ ತುಂಬಿ ಬಂತು.

Leave a Reply

Your email address will not be published. Required fields are marked *

error: Content is protected !!