ಮನದ ಕಳವಳ ದೂರವಾಗುವ ಬಗೆ ಹೇಗೆ ?

ಮನುಷ್ಯನ ಮನಸ್ಸು ಪಾದರಸಕ್ಕಿಂತಲೂ ತೀಕ್ಷ್ಣವಾಗಿ ಹರಿದಾಡುವಂತಹದ್ದು. ಇದನ್ನು ಹಿಡಿದು ನಿಲ್ಲಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಮನಸ್ಸನ್ನು ಹಿಡಿದಿಡಲು ನನಗೆ ಸಾಧ್ಯವೆಂದು ಹೇಳಿದವರು ತುಂಬಾ ವಿರಳ. ಧ್ಯಾನ ತಪಸ್ಸು ಪೂಜೆಗಳಿಂದ ಮನೋನಿಗ್ರಹ ಸಾಧ್ಯವೆಂದು ಹಲವರು ಹೇಳುತ್ತಾರಾದರೂ ಅವರು ಸಹ ಸಂಪೂರ್ಣ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಆಗಿಲ್ಲ. ಮಹಾ ತಪಸ್ವಿ ವಿಶ್ವಾಮಿತ್ರ ತನ್ನ ಮನಸ್ಸಿನ ಮೇಲೆ ಸ್ಥಿಮಿತ ತಪ್ಪಿ ಮೇನಕೆಯ ಕಾಲ್ಗೆಜ್ಜೆಗೆ ಹಾತೋರೆದುದು ಇತಿಹಾಸ.ಯಾರು ಮನಸ್ಸನ್ನು ಒಂದೆಡೆ ಸಂಚಲಗೊಳಿಸಿಕೊಳ್ಳುತ್ತಾರೊ ಅವರು ತಮ್ಮ ಮನಸ್ಸಿನಲ್ಲಿ ನಿರ್ಧರಿಸಿದ ಸಂಗತಿಗಳನ್ನು ಆಗು ಮಾಡಬಲ್ಲರು.

ಕದಳಿ ಎಂಬುದು ತನು, ಕದಳಿ ಎಂಬುದು ಮನ,
ಕದಳಿ ಎಂಬುದು ವಿಷಯಂಗಳು.
ಕದಳಿ ಎಂಬುದು ಭವಘೋರಾರಣ್ಯ.

ಎನ್ನುವ ಮೂಲಕ ಅಕ್ಕಮಹಾದೇವಿ ತಾಯಿ ತನು,ಮನವನ್ನು ವ್ಯಾಪಿಸಿ ಹರಿದಾಡುವ ಮನಸ್ಸಿನ ಕುರಿತು ಹೇಳುತ್ತಾರೆ. ಮನಸ್ಸು ಯಾವಾಗಲೂ ಸ್ವೇಚ್ಛವಾಗಿ ಹರಿದಾಡುವಂತದ್ದು ಅದನ್ನು ಕಟ್ಟಿ ನಿಲ್ಲಿಸದೆ ಹೋದರೆ, ಅದು ಸೂತ್ರವಿಲ್ಲದ ಪಟದಂತೆ ಆಕಾಶದಿಂದ ಉದುರಿ ಬೀಳುತ್ತದೆ. ಮನಸ್ಸಿನ ಹೋಯ್ದಾಟವನ್ನು ತಡೆಯದೆ ಹೋದರೆ ಅದು ಹಲವಾರು ವಿಷಯಂಗಳನ್ನು ತನ್ನ ಒಳಗೆ ಬಚ್ಚಿಟ್ಟುಕೊಂಡು ಕಾಡತೊಡಗುತ್ತದೆ. ತನ್ನ ಬಯಕೆಯ ಈಡೇರಿಕೆಗಾಗಿ ಏನೆಲ್ಲ ಸಂಗತಿಗಳನ್ನು ಒಟ್ಟುಗೂಡಿಸುತ್ತಿರುತ್ತದೆ. ಆಗ ಮನಸ್ಸು ಮತ್ತಷ್ಟು ಕ್ಲೀಷ್ಟವಾಗಿ ನಿಗೂಢವಾಗುತ್ತದೆ. ನಮಗೆ ಗೊತ್ತಿಲ್ಲದೆ ಭವಘೋರಾರಣ್ಯವನ್ನು ನಮ್ಮೊಳಗೆ ನಾವೇ ಸೃಷ್ಟಿಸಿಕೊಂಡು ಬಿಡುತ್ತೇವೆ. ಆ ಅರಣ್ಯದಲ್ಲಿ ನಮ್ಮನ್ನು ನಾವು ಕಳಕೊಂಡು ಅನಾಥರಾಗುತ್ತೇವೆ.

ಬಡಪಶು ಪಂಕದಲ್ಲಿ ಬಿದ್ದಡೆ ಕಾಲ ಬಡಿವುದಲ್ಲದೆ,
ಬೇರೆ ಗತಿಯುಂಟೆ ಶಿವ ಶಿವ ಹೋದೆಹೆ,
ಹೋದೆಹೆನಯ್ಯಾ ನಿಮ್ಮ ಮನದತ್ತಲೆನ್ನ ತೆಗೆಯಯ್ಯಾ
ಪಶುವಾನು, ಪಶುಪತಿ ನೀನು,
ತುಡುಗುಣಿಯೆಂದು ಎನ್ನ ಹಿಡಿದು ಬಡಿಯದ ಮುನ್ನ
ಒಡೆಯಾ ನಿಮ್ಮ ಬಯ್ಯದಂತೆ ಮಾಡು ಕೂಡಲಸಂಗಮದೇವಾ

ಏನೊಂದು ಅರಿಯದೆ, ಸ್ವಾರ್ಥಕ್ಕೆ ಬಲಿಯಾದ ಮನಸ್ಸು ಪಶುವಿನಂತೆ ಎತ್ತಲೋ ಹರಿದು ಹೋಗುತ್ತದೆ. ಪರಿಣಾಮವಾಗಿ ಕೆಸರಿನಲ್ಲಿ ಸಿಕ್ಕು ಬಿದ್ದ ಪಶುವಿನಂತೆ ಕಾಲ ಬಡಿವುದೊಂದೆ ಅನಿವಾರ್ಯವಾಗುತ್ತದೆ. ಕಾಲು ಬಡಿದಂತೆಲ್ಲ ಅರಿವಿಲ್ಲದೆ ಮತ್ತಷ್ಟು ಇನ್ನಷ್ಟು ಆಳಕ್ಕೆ ಕೆಸರಿನಲ್ಲಿ ಸಿಕ್ಕಿಬೀಳತೊಡಗುತ್ತೇವೆ. ಬುದ್ಧಿ, ಭಾವ, ವಿವೇಕವಿಲ್ಲದ ಮನಸ್ಸು ಒಂದೊಂದು ಸಲ ಕೆಸರಿನಲ್ಲಿ ಬಿದ್ದು ಒದ್ದಾಡುತ್ತಿರುತ್ತದೆ.


ಇಂಥ ಹೀನ ಮನಸ್ಸನ್ನು ಹೇಗಾದರೂ ಮಾಡಿ ತಡೆ ಹಿಡಿದು ದುರಾಲೋಚನೆಯ ಕೆಸರಿನ ಹೊಂಡದಿಂದ ಮೇಲೇಳಲೆಬೇಕಾಗಿದೆ. ಇಲ್ಲದೆ ಹೋದರೆ ದನವನ್ನು ಕಳ್ಳ ದನವೆಂದು ಹಿಡಿದು ಬಡಿವಂತೆ, ಕೆಟ್ಟ ಮನುಷ್ಯ ಎಂಬ ಬಿರುದಿನೊಂದಿಗೆ ಸಮಾಜ ಕಂದಕಕ್ಕೆ ತಳ್ಳುತ್ತದೆ.

ಆಸೆ ರೋಷವೆಂಬ ದ್ವೇಷವ ಬಿಟ್ಟು
ದೋಷ ದುರಿತವ ಬಿಟ್ಟು,
ಕ್ಲೇಶವ ಹರಿದು, ಸಾಸಿರ ಮುಖದೊಳು ಸೂಸುವ
ಮನವ ನಿಲ್ಲಿಸಿ,
ನಿರಾಶಿಕನಾಗಿ ನಿಂದರೆ
ಬಸವಪ್ರಿಯ ಕೂಡಲ ಚೆನ್ನ ಬಸವಣ್ಣ

ಬಸವಾದಿ ಶರಣರು ಬರುವುದಕ್ಕಿಂತ ಪೂರ್ವದಲ್ಲಿ ಹೆಣ್ಣು ಹೊನ್ನು ಮಣ್ಣು ಮಾಯೆ ಎಂದು ಕರೆದಿದ್ದರೆ ಶರಣರು ಮಾತ್ರ ಮನದ ಮುಂದಣ ಆಸೆಯೆ ಮಾಯೆ ಎಂದು ಖಚಿತವಾಗಿ ಹೇಳಿದರು. ಈ ಆಸೆಯಿಂದಲೆ ರೋಷ ಹುಟ್ಟುತ್ತದೆ. ದ್ವೇಷ ಚಿಗುರುತ್ತದೆ. ಸಹಜವಾಗಿ ಮನಸ್ಸು ದುಗುಡ ಹೊಂದುತ್ತದೆ. ಸಾಸಿರ ಮುಖವಾಗಿ ಹರಿಯುವ ಮನಸ್ಸನ್ನು ಒಂದೆಡೆ ನಿಲ್ಲಿಸಿದಾಗಲೆ ನಮಗೆ ಶರಣ ಮಾರ್ಗದ ಅರಿವು ಉಂಟಾಗುತ್ತದೆ.

ಲಿಂಗ ಸೌಖ್ಯದಲ್ಲಿ ಪರಿಪೂರ್ಣವಾದ ಶರಣನ
ಅಂತರಂಗದಲ್ಲಿ ಕಾಮ ಮೋಹಾದಿಗಳುಂಟೇನಯ್ಯ ?
ಭ್ರಾಂತಿಯ ಸೂತಕ ಉಂಟೇನಯ್ಯಾ ?
ಹಮ್ಮು ಬಿಮ್ಮುಗಳುಂಟೇನಯ್ಯಾ ?
ತಾಮಸ ತಮಂಧಗಳುಂಟೇನಯ್ಯ ? ಇಂತಿವಕ್ಕೆ ಸಿಲ್ಕದೆ
ನಿತ್ಯ ನಿರಾಳ ಲಿಂಗದಲ್ಲಿ ಸುಖಿಯಾಗಿರ್ದನಯ್ಯ ನಿಮ್ಮ ಶರಣರು
ಝೇಂಕಾರ ನಿಜಲಿಂಗ ಪ್ರಭುವೆ

ಇಷ್ಟಲಿಂಗ ಪೂಜೆಯ ಮೂಲಕ ಮನಸ್ಸನ್ನು ಒಂದೆಡೆ ನಿಲಿಸಲು ಸಾಧ್ಯವಾಗುತ್ತದೆ ಎಂಬುದು ಶರಣ ಜಕ್ಕಣಯ್ಯನ ನಿಲುವು. ಇಷ್ಟಲಿಂಗವೆಂದರೆ ಅರಿವಿನ ಕುರುಹು ಮಾತ್ರ. ಅರಿವು ಹಿಡಿದು ಕುರುಹನ್ನು ಮರೆತಾಗ ಮಾತ್ರ ಅಂತರಂಗದಲ್ಲಿ ಅಡಕವಾಗಿರುವ ಕಾಮ ಕ್ರೋಧ ಮೋಹ ಮದ ಮತ್ಸರಗಳು ನಿಲ್ಲುತ್ತವೆ. ಹಮ್ಮು ಬಿಮ್ಮುಗಳು ಇಲ್ಲವಾಗುತ್ತದೆ. ಮನದೊಳಗಿನ ಕತ್ತಲೆ ಹರಿದು ಬೆಳಕು ಮೂಡುತ್ತದೆ. ಹೊಟ್ಟೆ ಕಿಚ್ಚು ಸುಟ್ಟು ಹೋಗುತ್ತದೆ. ಮನಸ್ಸಿನ ಮೂಲೆಯಲ್ಲಿ ಕುಳಿತು ಹೊಂಚು ಹಾಕುತ್ತಿದ್ದ ತಮಂಧ ಅರಿವಿನ ಬೆಳಕಿನಿಂದ ಓಡಿ ಹೋಗುತ್ತದೆ. ಆಗ ಲಿಂಗಪ್ರಭೆಯ ಸಂಗದಿಂದ ಸುಖವಾಗಿ ಇರಬಹುದು ಎಂಬುದು ಶರಣರ ವಿಚಾರ.


ಕರಿಯನಿತ್ತಡೆ ಒಲ್ಲೆ,ಸಿರಿಯನಿತ್ತಡೆ ಒಲ್ಲೆಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ.
ನಿಮ್ಮ ಶರಣರ ಸೂಳ್ನುಡಿಯ ಒಂದರೆ ಘಳಿಗೆಯಿತ್ತಡೆ
ನಿಮ್ಮನಿತ್ತೆ ಕಾಣಾ ! ರಾಮನಾಥ

ಸಂಗದಿಂದಲ್ಲದೆ ಅಗ್ನಿ ಹುಟ್ಟದು. ಸಂಗದಿಂದಲ್ಲದೆ ಬೀಜ ಮೊಳಕೆ ಒಡೆಯದು ಎಂಬಂತೆ ಸಂಗವೇ ನಮ್ಮ ಮನಸ್ಸನ್ನು ಖುಷಿಯಾಗಿಡಲು, ತೊಂದರೆಗೆ ಸಿಲುಕಿಸಲು ಕಾರಣವಾಗುತ್ತದೆ. ಜೇಡರ ದಾಸಿಮಯ್ಯನವರು ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕಾಗಿ ಸಂಗವೇ ಪ್ರಮುಖವೆಂದು ನಂಬಿದ್ದರು. ಆದ್ದರಿಂದಲೆ ಆನೆ ಕೊಟ್ಟರೂ ಬೇಡ. ಸಿರಿ ಸಂಪತ್ತು ನೀಡಿದರೂ ಬೇಡ. ಇದೆಲ್ಲಕ್ಕಿಂತ ಮಿಕ್ಕಿದ್ದು ಎಂದು ಹೇಳುವ ರಾಜ್ಯವನ್ನೇ ಕೊಟ್ಟರೂ ಬೇಡ. ಇದೆಲ್ಲಕ್ಕಿಂತ ಮುಖ್ಯ ಒಳ್ಳೆಯವರ ಸಂಗ. ಆ ಸಂಗದಿಂದ ಮಾತ್ರ ಮನಸ್ಸು ಚಂಚಲಗೊಳ್ಳುವುದನ್ನು ನಿಲಿಸಬಹುದು. ಆಗ ಮನಸ್ಸು ಕದಳಿಯಾಗುವವುದಿಲ್ಲ. ತನು ತೋಂಟವ ಮಾಡಿ ಮನವ ಗುದ್ದಲಿ ಮಾಡಿ ಭ್ರಾಂತಿಯ ಬೇರನ್ನು ಅಗೆದು ತೆಗೆಯಲು ಸಾಧ್ಯವಾಗುತ್ತದೆ.ಭ್ರಾಂತಿಯ ಬೇರನ್ನು ಕಿತ್ತಿ ಬಿಸಾಡಿದಾಗಲೆ ಮನಸ್ಸು ಒಂದೆಡೆ ನೆಲೆ ನಿಲ್ಲುತ್ತದೆ. ಮನದ ಕಳವಳ ದೂರಾಗುತ್ತದೆ.

0 ವಿಶ್ವಾರಾಧ್ಯ ಸತ್ಯಂಪೇಟೆ

3 thoughts on “ಮನದ ಕಳವಳ ದೂರವಾಗುವ ಬಗೆ ಹೇಗೆ ?

  1. ಅರಿವಿನ ಕುರುಹು ಹಿಡಿದು ಅರಿವು ಎಂಬ ಬೆಳಕಿನಲಿ ಸಾಗುವ ಬಗೆ ಮತ್ತು ಬಹಿರಂಗದ ಭಕ್ತಿಗಿಂತ ಅಂತರಂಗದ ಅರಿವು,ಜ್ಞಾನ ಶ್ರೇಷ್ಟ ಎಂದು ತನು ಮನ ಸಹಿತ ಶರಣ ತತ್ವ ಹೊಂದಿ ಮಾನವ ಶರಣನಾಗುವ ಬಗೆ ವಚನಗಳಲ್ಲಿ ಇದೆ .

    ಧನ್ಯವಾದಗಳು

  2. ಮನದ ಕಳವಳಕ್ಕೆ ಮದ್ದು ಲಿಂಗ ಪೂಜೆ ಶರಣರ ವಿಚಾರದ ಓದಿನಿಂದಮಾತ್ರ ಸಾದ್ಯ. ಶರಣುಗಳು.

Leave a Reply

Your email address will not be published. Required fields are marked *

error: Content is protected !!