ಹುಲಿಕಲ್ ನಟರಾಜ ಕರ್ಣಧಾರತ್ವದಲ್ಲಿ ಕ.ರಾ. ವಿಜ್ಞಾನ ಸಂಶೋಧನಾ ಪರಿಷತ್ತು

ಬಂಟತನವ ಮಾಡಬೇಕೆಂದು, ಬಟ್ಟೆಯ ಬಡಿಯಬೇಕೆಂದು,ಕೆಟ್ಟದುದನರಸಬೇಕೆಂದು, ಕೊಟ್ಟುದ ಬೇಡಬೇಕೆಂದು,ಮುಂಜಾವದಲೇಳುವರಯ್ಯಾ, ಹಲಬರು ಕೆಲಬರು.ಆಹಾರವನುಣಬೇಕೆಂದು, ವ್ಯವಹಾರವ ಮಾಡಬೇಕೆಂದು,ಆ ಹೆಣ್ಣ ತರಬೇಕೆಂದು, ಈ ಹೆಣ್ಣ ಕೊಡಬೇಕೆಂದು,ಮುಂಜಾವದಲೇಳುವರಯ್ಯಾ, ಹಲಬರು ಕೆಲಬರು.ಕರ್ತು ಸೊಡ್ಡಳದೇವಂಗೆ ತೊತ್ತುಗೆಲಸವ ಮಾಡಬೇಕೆಂದು,ಕಣ್ಣತೆರೆವುತ್ತಲೇಳುವರು ಅಲ್ಲಲ್ಲಿ ಒಬ್ಬೊಬ್ಬರು.

ಸೊಡ್ಡಳ ಬಾಚರಸ

ಬಹಳಷ್ಟು ಜನ ತಮ್ಮ ತಮ್ಮ ವೈಯಕ್ತಿಕ ಬದುಕಿಗೆ ಬಡಿದಾಡುತ್ತಾರೆ. ಹೆಂಡತಿ ಮಕ್ಕಳು ಬಂಧು ಬಳಗ ಎಂದು ಸಾವಿನ ಕೊನೆ ಗಳಿಗೆಯವರೆಗೂ ಅಪಹಪಿಸಿ ತಮ್ಮ ಜೀವನವನ್ನು ಸಮಾಜಕ್ಕೆ ಎಡೆ ಮಾಡದೆ ಹೋಗುತ್ತಾರೆ. ಇಂಥವರು ಸತ್ತಾಗ ಕುಟುಂಬದವರು ಮಾತ್ರ ಸಂಕಟ ಪಡುತ್ತಾರೆ. ಸಮಾಜಕ್ಕೆ ಇಂಥವರಿಂದ ಯಾವ ಲಾಭವೂ ಇರುವುದಿಲ್ಲ.

ಜೀವನ ಬರೀ ಕೌಟುಂಬಿಕ ಸೇವೆಗೆ ಬಂದುದಲ್ಲ. ಹೆಂಡತಿ ಮಕ್ಕಳು ಖಾಸಗಿಯಾದ ಸೇವೆಯನ್ನು ಮಾಡಬಾರದು ಎಂದು ಹೇಳುವುದು ನನ್ನ ಉದ್ದೇಶವಲ್ಲ. ಜಾಣನಾದವನು ಲೌಕಿಕ ಮಾರಮಾರ್ಥ ಎರಡನೂ ಕೂಡೆ ನಡೆಸುವನು ಎಂಬ ಸರ್ಪಭೂಷಣ ಶಿವಯೋಗಿಗಳ ಮಾತಿನಂತೆ ಬದುಕಿದಾಗಲೆ ವ್ಯಕ್ತಿಗೊಂದು ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ.

ಸಮಾಜಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟವರು ತುಂಬಾ ಅಪರೂಪ. ಈ ಅಪರೂಪದ ವ್ಯಕ್ತಿಗಳ ಸಾಲಿನಲ್ಲಿ ಡಾ
ಹುಲಿಕಲ್ ನಟರಾಜ ಒಬ್ಬರು. ಹುಲಿಕಲ್ ನಟರಾಜ್ ಎಂಬ ಶಬ್ದ ಕೇಳುತ್ತಲೆ ಪಟ್ಟಭದ್ರರ ಬುಡ ಅಲ್ಲಾಡುತ್ತದೆ. ದೇವರು ಧರ್ಮದ ಹೆಸರಿನ ಮೇಲೆ ಸಮಾಜದಲ್ಲಿ ಸುಲಿಗೆಯನ್ನ ಮಾಡುವ ವಿಕೃತರ ಮುಖ ಬಾಡುತ್ತದೆ. ಕಣ್ಕಟ್ಟು ವಿದ್ಯೆಗಳನ್ನೆ ಪವಾಡವೆಂದು ವಿಜೃಂಭಿಸಿ ಆ ಮೂಲಕ ತಮ್ಮ ಉದರ ಪೋಷಣೆಗೆ ನಿಂತ ಪುಡಿ ಧಾರ್ಮಿಕ ವ್ಯಕ್ತಿಗಳು ಪತಗುಟ್ಟಿ ಹೋಗುತ್ತಾರೆ.

ಇದಕ್ಕೆಲ್ಲ ಮುಖ್ಯ ಕಾರಣ ಹುಲಿಕಲ್ ನಟರಾಜ್ ಎಂಬ ಪವಾಡ ಭಂಜಕ ವ್ಯಕ್ತಿ. ಹುಲಿಕಲ್ ನಟರಾಜ್ ಅಸಮಾನ್ಯವಾದ ನಮಗಿಂತಲೂ ಭಿನ್ನವಾದ ವ್ಯಕ್ತಿಯೇನಲ್ಲ. ಆದರೆ ಅವರು ದಿನ ನಿತ್ಯ ಜನ ಸಾಮಾನ್ಯರ ಬದುಕಿನ ಬಾಳ ಬಟ್ಟೆಯಲ್ಲಿ ಬಿದ್ದ ಮುಳ್ಳುಳನ್ನು ತೆಗೆಯುವ ಯತ್ನದಲ್ಲಿ ದಿಟ್ಟ ಹೆಜ್ಜೆ ಇಟ್ಟು ಮುನ್ನಡೆದಿದ್ದಾರೆ.

ದೇವರು ಇದ್ದಾನೋ ಇಲ್ಲವೋ ! ಸ್ವರ್ಗ/ ನರಕ ಇದ್ದಾವೋ ಇಲ್ಲವೋ ? ಇದೆಲ್ಲ ಯಾರಿಗೆ ಬೇಕಾಗಿದೆ. ಬದುಕಿನಲ್ಲಿ ಸಾಕಷ್ಟು ಸಂಕಟಗಳಿವೆ. ಮನೋಕ್ಲೇಷಕ್ಕೆ ಒಳಗಾದ ಸಾವಿರಾರು ಜನ ಇದ್ದಾರೆ. ಅವರ ನೋವು ತನ್ನ ನೋವೆಂದು ತಿಳಿದು, ಅವರಿಗೆ ಅಂಟಿಕೊಂಡ ಮಾನಸಿಕ ಆರೋಗ್ಯವನ್ನು ಸರಿ ಪಡಿಸುವ ಕಾಯಕವನ್ನು ನಟರಾಜ ಮುನ್ನಡೆಸುತ್ತಿದ್ದಾರೆ.

ಸತ್ಯವೆಂಬುದು ತುಂಬಾ ಕಠೋರ. ಅಧರಕ್ಕೆ ಕಹಿ, ಉದರಕ್ಕೆ ಸಿಹಿ ಎಂಬಂತಾಗಿದೆ. ಸತ್ಯವನ್ನು ಪ್ರತಿಪಾದಿಸುವುದು ಎಂದರೆ ಗಂಡಾಂತರವನ್ನು ಮೈಮೇಲೆ ಎಳೆದುಕೊಂಡಂತೆ. ಅದರಲ್ಲೂ ಧಾರ್ಮಿಕ ಲಾಂಛನಗಳನ್ನು ಧರಿಸಿ ಜನ ಸಾಮಾನ್ಯರಿಗೆ ತಮ್ಮ ಕೈಚಳಗಳ ಮೂಲಕ ಅಸಾಮಾನ್ಯತೆಯನ್ನು ತೋರಿಸಿ ಸುಲಿಗೆ ಮಾಡುವ ಜನಗಳ ಮುಖಕ್ಕೆ ಮಂಗಳಾರತಿ ಮಾಡುವ ಕೆಲಸ ಹುಲಿಕಲ್ ನಟರಾಜ ಅವರದು.

ಅಗ್ಗಿ ತುಳಿಯುವುದು, ನಾಲಿಗೆಯ ಮೇಲೆ ಕರ್ಪೂರ ಉರಿಸಿ, ಅದನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದು, ಮುಳ್ಳಿನ‌ ಮೇಲೆ ಮಲಗುವುದು, ಕುಣಿಯುವುದು, ಇದ್ದಕ್ಕಿದ್ದಂತೆ ಶೂನ್ಯದಿಂದ ಉಂಗುರ ಬೂದಿ, ವಿಭೂತಿಯನ್ನು ಸೃಷ್ಟಿಸಿ ಜನರನ್ನು ದಂಗು ಬಡಿಸಿ ಪವಾಡದ ಮುಖವಾಡ ತೊಡುವ ಅಧಾರ್ಮಿಕರನ್ನು ಬಗ್ಗು ಬಡಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದರಿಂದ ಪವಾಡಗಳ ಹೆಸರಿನ ಮೇಲೆ ತಮ್ಮ ಉದರ ಪೋಷಣೆ ನಡೆಸುವ ಜನರು ಹೈರಾಣಾಗಿದ್ದಾರೆ. ಸುಳ್ಳುಗಳ ಮೂಲಕ ತಮ್ಮನ್ನು ತಾವು ವಿಜೃಂಭಿಸಿಕೊಂಡು ಹೊಟ್ಟೆ ಹೊರೆಯುವವರಿಗೆ ತೊಂದರೆ ಆಗಿದೆ. ಇವರೆಲ್ಲ ಸೇರಿ ಹಲವು ಸಲ ಹುಲಿಕಲ್ ನಟರಾಜ್ ಅವರ ಮೇಲೆ ತಿರುಗಿಬಿದ್ದಿದ್ದಾರೆ. ನಟರಾಜ್ ರ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ. ಕೆಲವರು ಸಾಕಷ್ಟು ಆಮಿಷಗಳನ್ನು ಒಡ್ಡಿದ್ದಾರೆ.

ಇದಾವುದು ಗಣನೆಗೆ ತೆಗೆದುಕೊಳ್ಳದೆ ಹುಲಿಕಲ್ ನಟರಾಜ ಆನೆ ನಡೆದುದೆ ದಾರಿಯೆಂಬಂತೆ ಮುನ್ನಡೆದಿದೆ. ನಮ್ಮ ಸಂವಿಧಾನದ ೫೧/ಎ ಕಲಂ ನ ಪ್ರಕಾರ ಜನರಲ್ಲಿ ನೆಲೆಯೂರಿರುವ ಮೌಢ್ಯವನ್ನು ತೆಗೆದು ಹಾಕುವ ಕಾರ್ಯದಲ್ಲಿ ದಿಟ್ಟ ಮಾರ್ಗವನ್ನೆ ಸೃಜಿಸಿದ್ದಾರೆ.

ಇದೀಗ ಈ ಮಾರ್ಗದಲ್ಲಿ ಮುನ್ನಡೆಯಲು ಕನ್ನಡ ನಾಡಿನ ಸಹಸ್ರಾರು ಜನ ಸಿದ್ಧವಾಗಿದ್ದಾರೆ. ಆದ್ದರಿಂದಲೆ ತೀರಾ ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ಸಮಾವೇಶಗೊಂಡ ಸಮಾನ ಆಕಸ್ತ ಜನಗಳ ಗುಂಪು ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್ತು ಎಂಬ ಸಂಘಟನೆಯೊಂದು ಅಸ್ತಿತ್ವಕ್ಕೆ ಬಂದಿದೆ.

ಯಾವ ಧರ್ಮದ ವಿರೋಧವು ಈ ಸಂಘಟನೆಗೆ ಇಲ್ಲ. ಧಾರ್ಮಿಕ ನಂಬಿಕೆಗಳ ವಿರುದ್ಧವೂ ಪರಿಷತ್ತು ಇಲ್ಲ. ಆದರೆ ಅದೇ ವೇಳೆಗೆ ಜನರಲ್ಲಿರುವ ಅಧಾರ್ಮಿಕ ನಡಾವಳಿಗೆ ವಿಜ್ಞಾನದ ಬೆಳಕು ನೀಡಿ ಸಂತೈಸಲು ಮುನ್ನಡೆದಿದೆ.

ಸಮಾಜ ಮುಖಿ ಕಾರ್ಯಕ್ಕೆ ಕೈ ಜೋಡಿಸಲು ನಾಡಿನ ಹಲವಾರು ಪ್ರತಿಭೆಗಳು ಸಿದ್ದವಾಗಿವೆ. ನಾಡಿನಾದ್ಯಂತ ಜ್ಞಾನ ವಿಜ್ಞಾನದ ರಥವನ್ನು ಎಳೆದೊಯ್ಯಬೇಕಾಗಿದೆ. ಇದಕ್ಕೆ ಜನ ಸಾಮಾನ್ಯರೆಲ್ಲ ಸಹಭಾಗಿತ್ವ ತುಂಬಾ ಮುಖ್ಯವಾಗಿದೆ. ಜ್ಞಾನದ ಬೆಳಕಿನಿಂದ ನಮ್ಮೊಳಗಿನ ಕತ್ತಲು ಕಳೆಯಬೇಕಿದೆ, ಅಲ್ಲವೆ ?

೦ ವಿಶ್ವಾರಾಧ್ಯ ಸತ್ಯಂಪೇಟೆ

One thought on “ಹುಲಿಕಲ್ ನಟರಾಜ ಕರ್ಣಧಾರತ್ವದಲ್ಲಿ ಕ.ರಾ. ವಿಜ್ಞಾನ ಸಂಶೋಧನಾ ಪರಿಷತ್ತು

  1. ಹುಲಿಕಲ್ ನಟರಾಜ್ ಅವರು ಅದ್ಭುತ ಮತ್ತು ಅಪರೂಪದ ವ್ಯಕ್ತಿತ್ವ ಮತ್ತು ಕನ್ನಡಿಗರಿಗೆ ಸಿಕ್ಕಿದ್ದೇ ಭಾಗ್ಯ..

Leave a Reply

Your email address will not be published. Required fields are marked *

error: Content is protected !!