ಧರ್ಮ ಇರುವುದು ಬೆಳೆಯಬೇಕಾದುದು ಕಟ್ಟಡಗಳಿಂದ ಅಲ್ಲ

ಬಹು ಸಂಖ್ಯಾತ ಜನ ಒಪ್ಪುವ ವಿಚಾರಗಳನ್ನು ಜಾರಿಗೆ ತರಬೇಕು ಎಂಬುದೆ ಮೊದಲ ತಪ್ಪು. ಬಹು ಸಂಖ್ಯಾತರು ಒಪ್ಪುವ ವಿಚಾರಗಳನ್ನು ಜಾರಿಗೆ ತರುವುದರಿಂದ ರಾಜಕಾರಣಿಗಳು, ಧಾರ್ಮಿಕ ಮುಖಂಡರು ಅದರ ನೇರ ಲಾಭವನ್ನು ಪಡೆಯಬಹುದು. ಆದರೆ ಜನ ಸಾಮಾನ್ಯರು ಮಾತ್ರ ಇಂಥ ತರಾತುರಿಯ ವಿಚಾರಗಳಿಂದ ದೀರ್ಘವಾದ ಹಾನಿಯನ್ನು ಅನುಭವಿಸಬಲ್ಲರು.

ಎಲ್ಲಾ ದಾರಿದ್ರ್ಯಗಳಿಗಿಂತಲೂ ಬೌದ್ಧಿಕ ದಾರಿದ್ರ್ಯ ತುಂಬಾ ಅಪಾಯಕಾರಿಯಾದುದು. ಬೌದ್ಧಿಕವಾದ ಸಂಪತ್ತು ನಮ್ಮಲ್ಲಿದ್ದರೆ ಖಂಡಿತವಾಗಿಯೂ ಭೌತಿಕ ಸಂಪತ್ತು ಸಹ ಹುಡುಕಿಕೊಂಡು ಬರುತ್ತದೆ. ಸತ್ಯವನ್ನು ಅರಿತುಕೊಳ್ಳುವ ಸ್ವಭಾವದವರಲ್ಲದ ನಾವುಗಳು ಅಸತ್ಯದ ಹಿಂದೆ ಅಥವಾ ತಾತ್ಪೂರ್ಥಿಕ ಸ್ವಾರ್ಥದ ಹಿಂದೆ ಬಿದ್ದು ಶಾಶ್ವತವಾದ ದುಃಖದಲ್ಲಿ ಮುಳುಗಿದ್ದೇವೆ.

ಭವ್ಯವಾದ ಗುಡಿ ಗುಂಡಾರ, ಇಗರ್ಜಿ, ಮಜೀದಿ,ಗಳು ಸ್ಮಾರವಾಗಿ ಇರಲಿ. ಆದರೆ ಅವುಗಳ ಮೂಲಕವೆ ಮನುಷ್ಯನ ಏನೆಲ್ಲ ಬೇಡಿಕೆಗಳು ಈಡೇರುತ್ತವೆ ಎಂಬ ಹುಸಿ ಭರವಸೆಯನ್ನು ಯಾರೂ ಬಿತ್ತಬಾರದು. ಇದು ಆತ್ಮದ್ರೋಹದ ಸಂಗತಿಯಾಗುತ್ತದೆ. ನಂಬಿಕೆಗಳು ತಪ್ಪಲ್ಲ, ನಂಬಿಕೆಗಳು ಮೌಢ್ಯವಾಗಬಾರದು. ನಂಬಿಕೆ ಮೌಢ್ಯವಾದಾಗ ಸಹಜವಾಗಿ ಮನುಷ್ಯನ ಕರ್ತೃತ್ವ ಶಕ್ತಿಯನ್ನು, ಉತ್ಸಾಹವನ್ನು, ಪ್ರಯೋಗಶೀಲ ಮನಸ್ಸನ್ನು ಅದು ಕಸಿದುಕೊಳ್ಳುತ್ತದೆ.

ಪ್ರಯೋಗಶೀಲ ಮನಸ್ಸಿಗೆ ಕತ್ತರಿ ಹಾಕುವ, ಉತ್ಸಾಹಕ್ಕೆ ತಣ್ಣೀರುಎರಚುವ, ಮನುಷ್ಯನ ಕರ್ತೃತ್ವ ಶಕ್ತಿಗೆ ಕೊಡಲಿ ಪೆಟ್ಟು ನೀಡುವ ದೇವರ ಗುಡಿಗಳ, ಚರ್ಚುಗಳ, ಮಸೀದಿಗಳ ಅವಶ್ಯಕತೆ ಇದೆಯೆ ? ಎಂಬುದನ್ನು ನಮಗೆ ನಾವೆ ಪ್ರಶ್ನಿಸಿಕೊಳ್ಳಬೇಕು. ಧಾರ್ಮಿಕ ಸ್ಮಾರಗಳನ್ನು ನಿರ್ಮಿಸುವುದರಿಂದ ಅಲ್ಲಿನ ಆಡಳಿತಗಾರರಿಗೆ ಲಾಭವೆ ಹೊರತು ಜನ ಸಾಮಾನ್ಯರಿಗೆ ಅದರಿಂದ ಏನು ಲಾಭ ? ಜನ ಸಾಮಾನ್ಯರು ತಮ್ಮ ದುರಾಡಳಿತದ ವಿರುದ್ಧ ಸಂಘಟಿತ ಹೋರಾಟಕ್ಕೆ ತೊಡಗಬಾರದು ಎಂಬ ದುರುದ್ದೇಶದಿಂದ ಮಂದಿರ ಮಸೀಜಿ ಚರ್ಚುಗಳನ್ನು ಕಟ್ಟುತ್ತ ಬಂದಿದ್ದಾರೆ. ರಾಜನ ಅಂಕೆಯಿಲ್ಲದ ಆಡಳಿತವನ್ನು ಗಮನಿಸದೆ, ತಮಗೆ ಆಯಾ ಸಂದರ್ಭದಲ್ಲಿ ಉಂಟಾದ ಕ್ಷಾಮ, ಆರ್ಥಿಕ ಹಿಂಜರಿತ, ಸಾಮಾಜಿಕ ಅಧಃಪತನಕ್ಕೆ ದೇವರೆ ಕಾರಣ ಎಂದು ನಂಬಿಸಿ ಬಿಟ್ಟರೆ ತಾವು ಪ್ರಜೆಗಳ ಆರೋಪಗಳಿಂದ ತಪ್ಪಿಸಿಕೊಳ್ಳಬಹುದು ಎಂಬ ಏಕಮೇವ ಉದ್ದೇಶಗಳಿಗಾಗಿ ಧಾರ್ಮಿಕ ಕ್ಷೇತ್ರಗಳು ರಚನೆಗೊಂಡವು.

ಧರ್ಮದ ಕೇಂದ್ರಗಳ ರಚನೆಯ ಹಿಂದೆ ಪಟ್ಟಭದ್ರ ಶಕ್ತಿಗಳ ಕೈವಾಡ ಎದ್ದು ಕಾಣುತ್ತದೆ. ಅಂದಿನ ರಾಜ ಬಲಹೀನನಾಗಿದ್ದರೂ ಇಂದ್ರ ಚಂದ್ರ ದದೀಚಿ ಎಂದು ಹಾಡಿ ಹೊಗಳಿದ ಪುರೋಹಿತಶಾಹಿ ರಾಜನನ್ನು ಪ್ರತ್ಯಕ್ಷ ದೇವತಾಃ ಎಂದು ಕರೆಯುವ ಮೂಲಕ ತಮ್ಮ ಬುಟ್ಟಿಯಲ್ಲಿ ಹಾಕಿಕೊಂಡರು. ರಾಜಶಾಹಿ ಹಾಗೂ ಪುರೋಹಿತಶಾಹಿ ಎಂದಿಗೂ ಜೊತೆಗೂಡಿಯೆ ಹೊರಟವರು. ಒಬ್ಬರನ್ನು ಬಿಟ್ಟರು ಒಬ್ಬರು ಅಗಲಿ ಇವರಿಬ್ಬರಿಗೂ ಗೊತ್ತಿಲ್ಲ. ಇವರಿಬ್ಬರ ಮೂಲ ಉದ್ದೇಶÉೂಂದೆ : ತಮ್ಮ ರಾಜ್ಯದಲ್ಲಿರುವ ಜನಗಳಿಗೆ ಪ್ರಜ್ಞೆ ಬಾರದಂತೆ ಇರಿಸುವುದು. ಭ್ರಮೆಗಳನ್ನೇ ಬದುಕು ಎಂದು ನಂಬಿಸುವುದು. ವಾಸ್ತವ ಸಂಗತಿ ಗೊತ್ತಾದರೆ ಜನ ಪುರೋಹಿತ ಹಾಗೂ ಪಟ್ಟಭದ್ರ ರಾಜಕಾರಣಿಯ ವಿರುದ್ಧ ಧ್ವನಿ ಎತ್ತುತ್ತಾನೆ ಎಂಬುದು ಇವರಿಗೆ ಖಾತ್ರಿ. ಆದ್ದರಿಂದ ಯಾವತ್ತೂ ಪ್ರಜೆಗಳ ಧ್ವನಿ ಅಡಗುವ ಕೆಲಸದಲ್ಲಿ ಇಬ್ಬರೂ ನಿರತರಾಗಿರುತ್ತಾರೆ.

ಅಂದಿನ ರಾಜಶಾಹಿ ವ್ಯವಸ್ಥೆಗೂ ಇಂದಿನ ಪ್ರಜಾಪ್ರಭುತ್ವದ ದಿನಗಳಿಗೂ ಅಂಥ ದೊಡ್ಡ ವ್ಯತ್ಯಾಸ ಇಲ್ಲವೆಂಬುದು ನನ್ನ ಅನಿಸಿಕೆ. ಆಗ ರಾಜರು ನಮ್ಮನ್ನು ಆಳುತ್ತಿದ್ದರು. ಇಂದು ಪ್ರಜೆಯಿಂದ ಗೆದ್ದು ಬಂದ ರಾಜಕಾರಣಿ ನಮ್ಮನ್ನು ಆಳುತ್ತಿದ್ದಾನೆ. ಧಾರ್ಮಿಕ ಮುಖಂಡರು ರಾಜಕಾರಣಿಗಳನ್ನು ಇಂದಿಗೂ ಪ್ರಭಾವಿಸುತ್ತಾರೆ. ಯಾವುದೊ ಒಂದು ಗುಡಿಯ ನಿರ್ಮಾಣಕ್ಕಾಗಿ ಒಂದು ರಾಜಕೀಯ ಪಕ್ಷ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ ಎಂದಾದರೆ ಗುಡಿ ಕಟ್ಟುವುದೆ ತನ್ನ ಪಕ್ಷದ ಮೂಲಗುರಿ ಎಂದು ಅದು ತನ್ನ ಪ್ರಣಾಳಿಕೆಯಲ್ಲಿ ಸಾರುತ್ತದೆ. ಆ ಪಕ್ಷ ಅಧಿಕಾರದಲ್ಲಿ ಇರುವವರೆಗೂ ಆ ಗುಡಿಯ ನೀಲ ನಕ್ಷೆಯ ಕುರಿತ ಚಿಂತನೆಗಳನ್ನೆ ಸಮಾಜದಲ್ಲಿ ಹರಿಬಿಡುತ್ತದೆ.

ರಾಜಕೀಯ ಧಾರ್ಮಿಕ ಇಚ್ಛಾಶಕ್ತಿ ಇರುವ ಪಕ್ಷವೊಂದಕ್ಕೆ ಗುಡಿ ಕಟ್ಟುವುದು ಸುಲಭವಾದ ಸಂಗತಿಯೇನೋ ಸರಿ. ಆದರೆ ಅದು ತಕ್ಷಣಕ್ಕೆ ಮಾಡುವುದಿಲ್ಲ. ಸಮಸ್ಯೆ ತಕ್ಷಣ ತೀರಿ ಹೋಗಬಾರದು. ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬ ಐನಾತಿತನವನ್ನು ಸರಕಾರ ಪ್ರದರ್ಶಿಸುತ್ತದೆ.

ನಿಜಕ್ಕೂ ಸ್ಮಾರಕವಲ್ಲದ ಗುಡಿ ಚರ್ಚು ಮಸೀದಿಗಳ ನಿರ್ಮಾಣಗಳಿಂದ ಮೈಗಳ್ಳರು, ಕುಟೀಲರು, ಕುಹಕಿಗಳು, ಅನಕ್ಷರಸ್ಥರು ಹುಟ್ಟಿಕೊಳ್ಳುತ್ತಾರೆ. ಇವರಿಂದ ದೇಶ ಉದ್ಧಾರವಾಗಲು ಸಾಧ್ಯವೆ ? ಧಾರ್ಮಿಕ ಕ್ಷೇತ್ರಗಳನ್ನು ಸಂಘಟಿಸುವುದರಿಂದ ತಿರುಪೆ ಎತ್ತುವ ಭಿಕ್ಷುಕ ಹುಟ್ಟಿಕೊಳ್ಳಬಲ್ಲನೆ ಹೊರತು, ಸ್ವಾಭಿಮಾನಿ, ವಿವೇಕವಾದಿ, ವಿಚಾರವಾದಿ, ವೈಜ್ಞಾನಿಕ ಮನೋಭಾವದ ವ್ಯಕ್ತಿಯೊಬ್ಬ ಹುಟ್ಟಿಕೊಳ್ಳುವುದಕ್ಕೆ ಸಾಧ್ಯವೆ ಇಲ್ಲ.


ಭಯವನ್ನು ಕಳೆದು ನಿರ್ಭಯದ ಬದುಕನ್ನು ಕಲಿಸುವುದೆ ಧರ್ಮದ ಮೂಲ ಆಶಯವಾಗಬೇಕಿತ್ತು.
ಇವನಾರವನೆನ್ನದೆ ಎಲ್ಲರನ್ನೂ ಇವ ನಮ್ಮವನೆಂದು ತಬ್ಬಿಕೊಂಡು ಹೋಗುವ ಮನೋಭಾವವನ್ನು ಉಂಟು ಮಾಡುವುದು ಧರ್ಮದ ಕರ್ತವ್ಯವಾಗಬೇಕಿತ್ತು. ನೋಂದವರ ನೋವಿಗೆ ಮಿಡಿಯುವ ಪ್ರಾಣ ಮಿತ್ರ ಧರ್ಮವಾಗಬೇಕಿತ್ತು. ಆದರೆ ಧರ್ಮವೆಂದರೆ ಇಂದು ಕೇವಲ ಲಾಂಛನ ಹಾಗೂ ಕಟ್ಟು ಪಾಡುಗಳಾಗಿವೆ. ಮುಟ್ಟಬೇಡ. ತಟ್ಟಬೇಡ , ದೂರ ಸರಿ ಎನ್ನುವುದು ಯಾವ ಧರ್ಮ ? ಮಡಿ ಮೈಲಿಗೆ ಎನ್ನುವುದು ಮಾನಸಿಕ ಕ್ಷುಲಕತನವೆ ಹೊರತು ಅದು ಧರ್ಮದ ಮೂಲ ಆಶಯವಲ್ಲ. ಬಡವರ, ಧೀನರ, ದುಃಖಿತರ ಕಣ್ಣೀರನ್ನು ಒರೆಸದ ಧರ್ಮ, ಅಬಾಲ ವೃದ್ಧರ ಗೋಳಿಗೆ ಪರಿಹಾರ ನೀಡದ ಧರ್ಮ ಅದಾವ ಧರ್ಮ ?

ಧರ್ಮ ತನ್ನನ್ನು ತಾನು ರಕ್ಷಿಸಿಕೊಳ್ಳದಷ್ಟು ಬಲಹೀನವಾಯಿತೆ ? ಮೌಲ್ಯಗಳುಳ್ಳ ಧರ್ಮಕ್ಕೆ ತನಗೆ ತಾನೇ ರಕ್ಷಿಸಿಕೊಳ್ಳುವ ಶಕ್ತಿ ಬರುತ್ತದೆ. ಯಾವುದಕ್ಕೆ ಶಕ್ತಿ ಇಲ್ಲವೊ ಅದು ಕಾಲನ ತೆಕ್ಕೆಯಲ್ಲಿ ಕರಗಿ ಹೋಗುತ್ತದೆ. ಯಾರಿಗೊ ನೋವುಂಟು ಮಾಡಿ, ಇನ್ನಾರ ಮೇಲೋ ಅತ್ಯಾಚಾರ ಅನ್ಯಾಯ ಮಾಡಿ ಧರ್ಮ ಕಾಯುವ ಅವಶ್ಯಕತೆಯಂತೂ ಇಲ್ಲವೆ ಇಲ್ಲ. ಒಬ್ಬರ ಮೇಲೆ ದಬ್ಬಾಳಿಕೆ ಮಾಡಿ, ಅವರನ್ನು ದಮನಿಸಿ ಧರ್ಮ ಕಾಯುವಂತಹ ಜರೂರು ಇಲ್ಲ.

ಧರ್ಮ ಇರುವುದು ಬೆಳೆಯಬೇಕಾದುದು ಕಟ್ಟಡಗಳಿಂದ ಅಲ್ಲ. ಅದು ಜನ ಸಾಮಾನ್ಯರೊಳಗೆ ಅಂತಃಶಕ್ತಿಯಾಗಿ ಜೀವಂತವಾಗಿರಬೇಕು. ಪ್ರೀತಿ ವಿಶ್ವಾಸ ಮಮತೆಗಳ ಮೌಲ್ಯಗಳೊಂದಿಗೆ ಉಸಿರಾಡುತ್ತಿರಬೇಕು. ಗುಡಿ ಚರ್ಚು ಮಸೀದಿ ಇಲ್ಲದೆಯೂ ಮೌಲ್ಯಗಳನ್ನು ನಾವು ಜಾರಿಗೆ ತರಬೇಕು. ಬದುಕು ಪ್ರಕೃತಿಕೊಟ್ಟ ಭಿಕ್ಷೆ. ಪ್ರಕೃತಿಗೆ ದ್ರೋಹ ಬಗೆಯದೆ, ಇಲ್ಲಿರುವ ಪ್ರತಿಯೊಂದು ಸಂಗತಿಗಳನ್ನು ಕುತೂಹಲದಿಂದ ನೋಡಿ ಅನುಭವಿಸಿ ಇಲ್ಲಿಂದ ಜಾಗ ಖಾಲಿ ಮಾಡಬೇಕು.

0 ವಿಶ್ವಾರಾಧ್ಯ ಸತ್ಯಂಪೇಟೆ

6 thoughts on “ಧರ್ಮ ಇರುವುದು ಬೆಳೆಯಬೇಕಾದುದು ಕಟ್ಟಡಗಳಿಂದ ಅಲ್ಲ

  1. ನಿಮ್ಮ ಮಾತಿನಲ್ಲಿ ಸತ್ಯ ವಿದೇ, ಆದರೆ ಅರಿತಿಕೊಳ್ಳುವರು ಯಾರು?

    1. ಅಕ್ಷರಶಃ ಸತ್ಯ , ಮಾನವೀಯತೆಗೂ ಮೀರಿದ ಧರ್ಮ ಮಾತ್ರ ಗುಡಿ , ಗುಂಡಾರ , ಚರ್ಚು , ಮಸೀದಿಗಳಲ್ಲಿ ಅಡಗಲು ಸಾಧ್ಯ.

  2. ಸಮೂಹ ಸನ್ನಿಗೊಳಗಾಗಿ ಧರ್ಮದ ಅಮಲು ತಲೆಗೆ ಏರಿಸಿಬಿಟ್ಟಿದ್ದಾರೆ, ಇದರಿಂದ ಕೆಲವರಿಗೆ ರಾಜಕೀಯ ಲಾಭವಾಗಬಹುದೇ ವಿನಃ, ಮನುಕುಲಕ್ಕೆ ಯಾವುದೇ ಒಳಿತಿಲ್ಲ

  3. ಮೌಲ್ಯೆಯುತವಾದ ವಿಚಾರವನ್ನು ಬರೆಯುವುದರ ಜೊತೆಗೆ ಧರ್ಮದ ಮದವೇರಿದ ಜನಗಳಿಗೆ ಇರಿದಂತೆ ಇದೆ ಶರಣು ಶರಣಾರ್ಥಿಗಳು

  4. ನಿಮ್ಮ ಖಚಿತವಾದ ವಿಚಾರಗಳು ಹರಿತವಾದ ಲೇಖನಗಳು ನೂರಕ್ಕೆ ನೂರು ಸತ್ಶ.ಸತ್ಶಂಪೇಟ ಶರಣರೇ.
    ಈ ವಾಸ್ತವಿಕ ಸತ್ಶಗಳು ಜನರಿಗೆ ಅರ್ಥವಾಗಿ ನಿರ್ಭೀತರಾಗಿ ನೆಮ್ಮದಿಯಿಂದ ಬದುಕುವಂತಾಗಲಿ.

  5. your words to be appreciated and always inspiration to every one but We should follow God Sri Basavanna spread social awareness through his poetry, popularly known as Vachanaas. Basavanna rejected gender or social discrimination, superstitions. thanks you very much for your kind words.

Leave a Reply

Your email address will not be published. Required fields are marked *

error: Content is protected !!