ಇತಿಹಾಸದ ಪ್ರಜ್ಞೆ ಇಲ್ಲದ ಲಿಂಗಾಯತ ಜನಾಂಗ

ಹಿಂದಣ ಹೆಜ್ಜೆಯನರಿಯದೆ ಮುಂದಡಿ ಇಡಲಾಗದು ಎಂದು ಅಲ್ಲಮಪ್ರಭುಗಳು ಹೇಳಿದ ವಚನದ ಸಾಲನ್ನು ಲಿಂಗಾಯತರು ಅರ್ಥ ಮಾಡಿಕೊಂಡಿದ್ದರೆ ಖಂಡಿತವಾಗಿಯೂ ಸನಾತನವಾದಿಗಳಾಗಿ ಪರಿವರ್ತನೆಯಾಗುತ್ತಿರಲಿಲ್ಲ. ತನ್ನ ಧರ್ಮದ ಮೂಲ ಉದ್ದೇಶಗಳನ್ನು ಸ್ಪಷ್ಟವಾಗಿ ಅರಿತ್ತಿಲ್ಲದಿರುವುದರಿಂದಲೆ ಅವರು ಕಂಡ ಕಂಡವರನ್ನು ನಮ್ಮವರು ಎಂದು ಅಪ್ಪಿಕೊಳ್ಳುತ್ತಿದ್ದಾರೆ.

ಭಕ್ತರ ಕಂಡರೆ ಬೋಳಪ್ಪಿರಯ್ಯಾ
ಸವಣರ ಕಂಡಡೆ ಬತ್ತೆಯಪ್ಪಿರಯ್ಯಾ
ಹಾರುವರ ಕಂಡರೆ ಹರಿನಾಮವೆಂಬಿರಯ್ಯಾ
ಅವರವರ ಕಂಡಡೆ ಅವರವರಂತೆ ಸೂಳೆಗೆ ಹುಟ್ಟಿದವರ
ಎನಗೊಮ್ಮೆ ತೋರದಿರಯ್ಯಾ
ಕೂಡಲ ಸಂಗಯ್ಯನ ಪೂಜಿಸಿ
ಅನ್ಯ ದೈವಂಗಳಿಗೆರಗಿ ಭಕ್ತರೆನಿಸಿಕೊಂಬ ಅಜ್ಞಾನಿಗಳ
ನಾನೇನೆಂಬೆನಯ್ಯಾ.

ಬಹುಶಃ ಹನ್ನೆರಡನೆಯ ಶತಮಾನದಲ್ಲಿಯೂ ಇಷ್ಟಲಿಂಗ ಧಾರಿಗಳಾದ ಲಿಂಗಾಯತರಿಗೆ ತಮ್ಮ ಪೂರ್ವ ಜನಾಂಗದ ಕರ್ಮ ಹರಿದು ಹೋಗಿಲ್ಲದೆ ತೊಳಲಾಡುತ್ತಿದ್ದರೆಂದು ಕಾಣುತ್ತದೆ. ಆದ್ದರಿಂದಲೇ ಬಸವಣ್ಣನವರು ತಮ್ಮೆದುರಿಗೆ ಕಂಡ ಜಾತಿ ಜನಾಂಗದ ರೀತಿ ರಿವಾಜುಗಳಿಗೆ ಮರುಳಾಗಿ ಹೋಗುವ ಭಕ್ತರನ್ನು ಕಂಡು ತುಂಬಾ ಖಾರವಾದ ಮಾತುಗಳಿಂದ ಅವರನ್ನು ಸೂಳೆಗೆ ಹುಟ್ಟಿದವರ ಎನಗೊಮ್ಮೆ ತೋರದಿರಾ ! ಎಂದು ನಿರ್ಧಾಕ್ಷಿಣ್ಯವಾಗಿ ಹೇಳುತ್ತಾರೆ. ಬಸವಣ್ಣನವರು ಅಂದು ಹೇಳಿದ ಈ ಮಾತು ಇಂದಿಗೂ ಅನ್ವರ್ಥವಾಗುತ್ತದೆ.


ಲಿಂಗಾಯತ ಧರ್ಮದ ಸ್ಪಷ್ಟ ಹಿನ್ನೆಲೆ, ಅರಿವು ಇಲ್ಲದ ಹಲವು ಜನ ಹಾಗೂ ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಕೆಲವು ಜನ ಸೇರಿ ಧರ್ಮವನ್ನು ಹಳ್ಳ ಹಿಡಿಸುತ್ತಿದ್ದಾರೆ. ಲಿಂಗಾಯತ ಧರ್ಮದ ಉದಾತ್ತ ತತ್ವಗಳು, ವಿಚಾರಗಳು ಜಾಗತಿಕ ಮಟ್ಟದಲ್ಲಿ ಕುತೂಹಲ ಕೆರಳಿಸಿ ಅಧ್ಯಯನಕ್ಕೆ ವಸ್ತುವಾಗುತ್ತಿವೆ. ಆದರೆ ಲಿಂಗಾಯತರಿಗೆ ತಾವು ಯಾವ ವಸ್ತುವಿನಿಂದ ನಿರ್ಮಾಣಗೊಂಡವರು ಎಂಬ ಕಲ್ಪನೆ ಇಲ್ಲದೆ ಹೊರಟಿದ್ದಾರೆ. ಈ ಸಮುದಾಯಕ್ಕೆ ಇತಿಹಾಸದ ಪುಟವನ್ನು ತೆರೆದು ತೋರಿಸಿ ಸರಿ ದಾರಿಗೆ ತರಬೇಕಾದ ಮಠಾಧೀಶರು ತಮ್ಮ ಸ್ವಾರ್ಥಕ್ಕಾಗಿ, ಪ್ರತಿಷ್ಠೆಗಾಗಿ, ರಾಜಕೀಯ ತೆವಲಿಗಾಗಿ ಲಿಂಗಾಯತ ಜನಾಂಗವನ್ನು ಅಡ ಇಡುತ್ತಿದ್ದಾರೆ.

ಸುಮಾರು 130 ವರ್ಷಕ್ಕೂ ಮುಂಚೆ ಲಿಂಗಾಯತ ಸ್ವತಂತ್ರ ಧರ್ಮವಾಗಿತ್ತು ಎಂಬ ವಿಚಾರ ಯಾರಿಗಾದರೂ ಗೊತ್ತಿದೆಯೆ ? ಕೆಲವೇ ಜನಗಳ ಸ್ವಾರ್ಥದ ಬದುಕಿಗಾಗಿ ಭವ್ಯ ಇತಿಹಾಸ ಹೊಂದಿದ ಧರ್ಮ ಕಾಲನ ತೆಕ್ಕೆಯಲ್ಲಿ ಉಸಿರುಗಟ್ಟಿ ಸಾಯುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಿಂದ ಪುರಸ್ಕರಿಸಲ್ಪಟ್ಟ, ಜನ ಜೀವನದ ಪದ್ಧತಿಯಾಗಿಯೆ ರೂಪುಗೊಂಡಿದ್ದ ಲಿಂಗಾಯತ ಧರ್ಮ ಕರ್ನಾಟಕದಲ್ಲಿ ಮೈಸೂರು ಮಹಾರಾಜರ ಆಳ್ವಿಕೆಯ ಸಂದರ್ಭದಲ್ಲಿ ಹಿಂದೂ ಧರ್ಮದಲ್ಲಿ ವಿಲೀನವಾಗಲು ಹೋರಾಟವನ್ನೆ ನಡೆಸಿತು.

ನಾವು ನೀವೆಲ್ಲ ಬಲ್ಲಂತೆ ಲಿಂಗಾಯತ ಧರ್ಮ ಮೇಲ್ವರ್ಗದವರ ಧರ್ಮ ಅಲ್ಲ. ಶಾಸ್ತ್ರ ಪುರಾಣ ವೇದ ಆಗಮ ಹೇಳುವವರ ಧರ್ಮ ಅಲ್ಲ. ಇದು ದುಡಿಯುವವರ ಧರ್ಮ. ತಳ ವರ್ಗದವರ ಧರ್ಮ. ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಸಮಗಾರ ಹರಳಯ್ಯ, ಹೊಲೆಯರ ನಾಗಿದೇವ, ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ ಎಂಬ ಏಳುನೂರಾ ಎಪ್ಪತ್ತು ಕಾಯಕ ಜೀವಿಗಳು ಬಸವಣ್ಣನವರ ನೇತೃತ್ವದಲ್ಲಿ ರೂಪಿಸಿದ ಧರ್ಮ. ಈ ಧರ್ಮಕ್ಕೆ ಅಷ್ಟಾವರ, ಪಂಚಾಚಾರ, ಷಟಸ್ಥಲಗಳೆ ಸೂತ್ರಗಳು. ಕಾಯಕ ಮತ್ತು ದಾಸೋಹ ಈ ಧರ್ಮದ ಪ್ರಮುಖ ಲಕ್ಷಣಗಳು.

1890 ರಲ್ಲಿ ಮೈಸೂರು ಸಂಸ್ಥಾನ ಲಿಂಗಾಯತ ಧರ್ಮವನ್ನು ಕಡೆಗಣಿಸಿ ಹಿಂದೂ ಧರ್ಮದ ಚಾತುವರ್ಣಕ್ಕೆ ಸೇರಿಸಿ ಒಂದು ಜಾತಿಯನ್ನಾಗಿಸಿದ್ದರು. ಇದನ್ನು ಕಂಡು ಕೆರಳಿದ ಲಿಂಗಾಯತರು ತಾವು ಸ್ವತಂತ್ರ ಧರ್ಮವೆಂಬುದನ್ನು ಪ್ರತಿಪಾದನೆ ಮಾಡಿದ್ದರೆ ಇತಿಹಾಸದ ಗಾಲಿ ಹಳಿ ತಪ್ಪುತ್ತಿರಲಿಲ್ಲ. ಆದರೆ ಲಿಂಗಾಯತ ಧರ್ಮಿಯರಾದ ನಾವು ತಳ ಸಮೂಹದಿಂದ ಬಂದವರಲ್ಲ. ನಾವೂ ಮೇಲ್ವರ್ಗದವರು. ನಮಗೂ ಬ್ರಾಹ್ಮಣರಿಗೆ ಸಿಗುವ ಆದರ ಗೌರವಗಳು ಸಿಗಬೇಕು ಎಂದು ಪಟ್ಟು ಹಿಡಿದರು. ರಾಜ್ಯದಾದ್ಯಂತ ದೊಡ್ಡ ಚಳುವಳಿಗಳನ್ನು ಹುಟ್ಟು ಹಾಕಿದರು. ಬ್ರಾಹ್ಮಣರಲ್ಲಿರುವಂತೆ ನಮ್ಮಲ್ಲೂ ನಾಲ್ಕು ವರ್ಗಗಗಳಿವೆ ಎಂದು ಪ್ರತ್ಯೇಕಿಸಿ ತೋರಿಸಿದರು.

1) ಲಿಂಗಧಾರಿ ವೀರಶೈವ ಬ್ರಾಹ್ಮಣರು (ಜಂಗಮರು, ಅಯ್ಯನವರು ಮತ್ತು ಆರಾಧ್ಯರು) 2) ಲಿಂಗಧಾರಿ ಕ್ಷತ್ರಿಯರು (ಕೆಳದಿ ರಾಜರು, ಕೊಡಗಿನ ರಾಜರು,ಪುಂಗನೂರಿನ ಪಾಳೇಗಾರರು, ಕಿತ್ತೂರಿನ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಇತರ ಪಾಳೇಗಾರರು, ದೇಶಮುಖರು, ಗೌಡರು, ಸರ್ ನಾಡಗೌಡರು ಇತ್ಯಾದಿ) 3) ಲಿಂಗಧಾರಿ ವೀರಶೈವ ವೈಶ್ಯರು, ವೀರಶೈವ, ಬಣಜಿಗ, ನಗರ್ಥರು, ಬಳೆ ಶೆಟ್ಟಿ, ಗೌಡ ಶೆಟ್ಟಿ, ಇತರರು 4) ಲಿಂಗಧಾರಿ ವೀರಶೈವ ಶೂದ್ರರು : (ಸಮಗಾರ ಹರಳಯ್ಯ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ನುಲಿಯ ಚೆಂದಯ್ಯ, ಹೂಗಾರ ಮಾದಯ್ಯ, ಜೇಡರ ದಾಸಿಮಯ್ಯ, ಕಿನ್ನರಿ ಬೊಮ್ಮಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಸಂಬೋಳಿ ನಾಗಿದೇವÀ

ಲಿಂಗಾಯತ ಧರ್ಮದಲ್ಲಿ ಇಲ್ಲದೆ ಇರುವ ನಾಲ್ಕು ವರ್ಗಗಳನ್ನು ಮಾಡಿ ಮೈಸೂರು ಸರಕಾರದ ಮುಂದೆ ಬೇಡಿಕೆ ಇಟ್ಟು ದೊಡ್ಡ ಹೋರಾಟ ಮಾಡಿತು. ಈ ಹೋರಾಟದ ಹಿಂದೆ ಅಂದಿನ ಮೈಸೂರು ಅರಸರಲ್ಲಿ ಆಸ್ಥಾನ ವಿದ್ವಾನ್ ಆಗಿದ್ದ ಪಿ.ಆರ್.ಕರಿಬಸವ ಶಾಸ್ತ್ರಿಗಳು. ಸ್ಟಾರ ಆಫ್ ಮೈಸೂರು ಎಂಬ ಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸುತ್ತಿದ್ದ ಯಜಮಾನ್ ವೀರಸಂಗಪ್ಪನವರು ಮುಂದಾಳತ್ವ ವಹಿಸಿದ್ದರು. ನಾಡಿನ ಹಲವಾರು ಜನ ಮಠಾಧೀಶರು ಬೆಂಬಲ ನೀಡಿದರು. ಜನ ಸಮೂಹ ಸಂಪೂರ್ಣ ತಿರುಗಿ ಬಿದ್ದಿದ್ದರಿಂದ ಸಹಜವಾಗಿ ಅಂದಿನ ಮೈಸೂರು ಅರಸರು ಲಿಂಗಾಯತರ ಲಿಂಗಿ ಬ್ರಾಹ್ಮಣತ್ವವನ್ನು ಎತ್ತಿ ಹಿಡಿದರು. 1891 ಜನ ಗಣತಿಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮವೆಂದು ಮರೆಯಾಗಿ ಹಿಂದೂ ಧರ್ಮದ ಒಂದು ಜಾತಿಯಾಗಿ ಮಾರ್ಪಟ್ಟಿತು. ಸಹಜವಾಗಿ ಲಿಂಗಾಯತರು ತಮ್ಮನ್ನು ಕೀಳಾಗಿ ನೋಡುವ ಮನೋಧರ್ಮದಿಂದ ಬೇಸತ್ತ ಉಳಿದ ತಳ ಸಮುದಾಯ ಒಂದೊಂದಾಗಿ ಕಳಚಿ ಹೋದರು. ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಂಡರು. ಜನ ಸಮುದಾಯವನ್ನು ಇಡಿಯಾಗಿ ಸಂಘಟಿಸಿದ್ದ ಲಿಂಗಾಯತ ಧರ್ಮ ಕೆಲವರ ಸ್ವಾರ್ಥಕ್ಕಾಗಿ ಬಿಡಿ ಬಿಡಿಯಾಗಿ ಹರಿದು ಹಂಚಿ ಹೋಯ್ತು. ತನ್ನ ಕಾಲ ಮೇಲೆ ತಾನು ಕಲ್ಲು ಹಾಕಿಕೊಂಡಿತು.

ಲಿಂಗಾಯತ ಪ್ರತ್ಯೇಕ ಧರ್ಮವಲ್ಲ ಎಂದು ಕರೆದು ಕೊಂಡಿದ್ದಕ್ಕೆ ಫಲವಾಗಿ ಆಗ ಹಲವಾರು ದೇವಸ್ಥಾನಗಳ ಒಡೆತನವನ್ನು ಲಿಂಗಾಯತರು ಪಡಕೊಂಡರು. ಪರಳಿಯ ವೈಜನಾಥ , ಕೇದಾರದ ದೇವಾಲಯ ಇನ್ನೂ ಹಲವು ಲಿಂಗಾಯತ ವೀರಶೈವವಾದಿಗಳ ಕೈವಶವಾದವು. 1891 ರ ಜನಗಣತಿಯಲ್ಲಿ ಅಂದಿನ ಮೈಸೂರು ಸರಕಾರ ವೀರಶೈವ ಬ್ರಾಹ್ಮಣರು ಎಂದು ಬರೆದು ಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿತು.( ಅನುಬಂಧ- 2 : ಜನವರಿ 5,1891 ಅಧಿಸೂಚನೆ).

ಕರಿಬಸವಯ್ಯ ಶಾಸ್ತ್ರಿಗಳು, ಕಾಶಿನಾಥ ಶಾಸ್ತ್ರಿಗಳು ಎಂಬ ವೀರಶೈವ ವಿದ್ವಾಂಸರು ಲಿಂಗಾಯತರಾದ ಸೊಲ್ಲಾಪುರದ ವಾರದ ಮಲ್ಲಪ್ಪನವರ ದಾಸೋಹ ಹಣದಿಂದಲೆ ನೂರಾರು ಪುಸ್ತಕಗಳನ್ನು ಪ್ರಕಾಶಿಸಿ, ಜನರೆಡೆಗೆ ತಪ್ಪು ಮಾಹಿತಿ ಹರಿಯುವಂತೆ ನೋಡಿಕೊಂಡರು.ಅಲ್ಲಿಯವರೆಗೂ ಮೈಸೂರಿನ ಅರಸರು ಲಿಂಗಾಯತ ಧರ್ಮ ತತ್ವದ ಬಗೆಗೆ ವಿಶೇಷ ಪ್ರೀತಿ ಕಾಳಜಿಗಳನ್ನು ಇಟ್ಟುಕೊಂಡವರಾಗಿದ್ದರು. 1881 ರಲ್ಲಿ ಬಿ.ಎಲ್. ರೈಸ್ ಇದನ್ನು ಉಲ್ಲೇಖಿಸಿದ್ದಾನೆ. ಮೈಸೂರು ರಾಜ ಮನೆತನ ಲಿಂಗಾಯತ ಸಮುದಾಯದ ವ್ಯಕ್ತಿಗಳನ್ನು ತನ್ನ ಖಾಸಗಿ ಅಡುಗೆ ಕೆಲಸಕ್ಕೆ ಹಾಗೂ ಕುಟುಂಬದ ಕೆಲಸಕ್ಕೆ ನೇಮಿಸಿಕೊಳ್ಳುತ್ತಿತ್ತು ಎಂಬ ಸಂಗತಿ ತಿಳಿದು ಬರುತ್ತದೆ.

ಈ ಎಲ್ಲಾ ಕಾರಣಗಳಿಂದಾಗಿ ಲಿಂಗಾಯತರು ಇಂದು ಕರ್ಮಠರಾಗಿದ್ದಾರೆ. ಸನಾತನಿಗಳಾಗಿದ್ದಾರೆ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ಬಸವಣ್ಣನವರ ಮಾತನ್ನು ಕಡೆಗಣಿಸಿ ಸ್ಥಾವರ ಕಟ್ಟಡಕ್ಕೆ ಚಂದಾ ಪಟ್ಟಿ ಎತ್ತಲು ಹೊರಟಿದ್ದಾರೆ. ಅನುಭವ ಮಂಟಪಗಳನ್ನು ಕಡೆಗಣಿಸಿ ಸ್ಥಾವರದ ಗುಡಿ ಗುಂಡಾರಗಳತ್ತ ಹೊರಟ ಈ ಲಿಂಗಾಯತ ಮಠಾಧೀಶರನ್ನು ಹಾಗೂ ಆ ಜನಗಳನ್ನು ಯಾರು ಎಚ್ಚರಿಸಬೇಕು ?

0 ವಿಶ್ವಾರಾಧ್ಯ ಸತ್ಯಂಪೇಟೆ

 • ಮೈಸೂರು ವೀರಶೈವರ 1890 ಚಳುವಳಿ ಮತ್ತು ಅದರ ದೀರ್ಘಕಾಲ ಪರಿಣಾಮಗಳು : ರಚನೆ : ಡಾ.ಎಸ್.ಎಂ. ಜಾಮದಾರ

12 thoughts on “ಇತಿಹಾಸದ ಪ್ರಜ್ಞೆ ಇಲ್ಲದ ಲಿಂಗಾಯತ ಜನಾಂಗ

 1. ಬಹುತೆಕರಿಗೆ ಸನಾತನ ಪದದ ಅರ್ಥದ ಬಗ್ಗೆ ಗೊಂದಲಲಿದ ಸನಾತನ ಪದ ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಸಂಬಂದಿಸಿದುದೆ… ದಯಮಾಡಿ ಸನಾತನ ಪದದ ಅರ್ಥ ತಿಳಿಸಿ

  1. ಸಾಮಾನ್ಯ ಜನಕ್ಕೆ ಸನಾತನದಂತಹ ಪದಗಳ ಅರ್ಥ ಗೊತ್ತಿಲ್ಲ ಗೊತ್ತಿರುವವರು ಜಾಣ ಮೂಕರಾಗಿದ್ದಾರೆ ಇನ್ನೂ ಕೆಲವರು ಅವರಿಗೇ ಅರಿವಿಲ್ಲದಂತೆ ಯಾರದೊ ಕಾಲಗೆಳಗೆ ಬಿದ್ದು ವದ್ದಾಡುತ್ತಿದ್ದಾರೆ

 2. ಸನಾತನ, ವೈದಿಕ ಹಾಗೂ ಹಿಂದೂ ಪರಸ್ಪರ ಪೂರಕ ಶಬ್ದಗಳು.

 3. ಸುಮಾರು ೬೦೦೦ವರ್ಷಗಳ ಪೂರ್ವ ಇತಿಹಾಸ ಇರುವ ಪಂಚಮಸಾಲಿಗರೇ ಮೂಲ ಲಿಂಗವಂತರು.ಶಿವನ ಪರಿಕಲ್ಪನೆ,ಆರಾಧನೆ ಪ್ರಾರಂಭ ಆಗಿದ್ದೇ ಪಂಚಮಸಾಲಿಗರಿಂದ.ಪಂಚಮಸಾಲಿಗರು ಕೃಷಿಕರು,ಉಪ ಕಸಬುದಾರರಿಗೆ ಬದುಕು ಕೊಟ್ಟ ಕಾಯಕ ಜೀವಿಗಳು.ದುಡಿಯುವ ವರ್ಗದಲ್ಲಿ ನಿರಂತರ ಕಾಯಕದಲ್ಲಿ ಕೈಲಾಸ ಕಂಡ ಕಾಯಕ ಜೀವಿಗಳು.ತಾವೂ ಬದುಕಿ ಇತರೂ ಬದುಕಲು ಅವಕಾಶ ಮಾಡಿಕೊಟ್ಟ ಮೂಲ ಲಿಂಗವಂತರು.ಪಂಚಮಸಾಲಿಗರ ಜೀವನ ಶೈಲಿ ಬಸವಾದಿ ಶರಣರಿಗೆ ಮಾದರಿಯಾಗಿ ಕಂಡಿತ್ತು.ಅಂತೆಯೇ ಇತರರಿಗೂ ಮತಾಂತರಕ್ಜ್ಕೆ ಅವಕಾಶ ಮಾಡಿಕೊಟ್ಟ ಬಸವಣ್ಣನವರ ಪಂತಾಹ್ವಣಕ್ಕೆ ಹನ್ನರಡನೇ ಶತಮಾನ ಮತಾಂತರದ ಸುವರ್ಣ ಅವಧಿ.ಪಂಚಮಸಾಲಿಗರು ಮೊದಲ ಲಿಂಗವಂತರು ಮತಾಂತರಿಗಳೇ ಲಿಂಗಾಯತರು.

  1. ಗೌಡರೆ ತಮ್ಮ ಹೇಳಿಕೆಗೆ ಆಧಾರಗಳು ಏನಾದರೂ ಇವೆಯೇ?ಪಂಚಮಸಾಲಿಗಳ ಬಗ್ಗೆ ತಿಳಿಯುವ ಕುತಹಲದಿಂದ ವಿಸ್ತ್ರತವಾಗಿ ಓದುತ್ತಿರುವೆ. ಆದರೆ ನನಗೆ ಸರಿಯಾದ ಮಾಹಿತಿ ದೊರಕುತ್ತಿಲ್ಲ. ನಿಮಗೇನಾದರು ಮಾಹಿತಿ ಇದ್ದರೆ ನೀಡಿರಿ.

 4. ವಸ್ತು ನಿಷ್ಠ ಲೇಖನ ತಳಸಮೂದಾಯಗಳ ನ್ನ ಒಳಗೊಂಡಂತೆ ಲಿಂಗಾಯತ ಧರ್ಮ ವಾಗಲಿ..

  1. ಲಿಂಗಾಯತ ಧರ್ಮ ಪ್ರತ್ಯೇಕವಾಗಲು ಎಲ್ಲ ತರಹದ ಕಾನೂನಿನ ಚೌಕಟ್ಟಿನಲ್ಲಿ ಮುಂದಿನ ಪೀಳಿಗೆಗೆ ಅನುಕೂಲವಾಗಲಿ

 5. Shivanagouder H Patil
  ಅವರ ವಿಚಾರದಲ್ಲಿ ಗೊಂದಲ ಇದೆ. ಏಕೆಂದರೆ ಆರು ಸಾವಿರ ವರ್ಷಗಳ ಹಿಂದೆ ಪಂಚಮಸಾಲಿಯವರು ಇರುವುದೇ ನಿಜವಾಗಿದ್ದರೆ ವರ್ಣಾಶ್ರಮ ಪದ್ಧತಿಯಲ್ಲಿ ಇವರು ಯಾವ ವರ್ಣಕ್ಕೆ ಸೇರಿದ್ದರು.
  ಲಿಂಗಾಯತ ಪದ ಹುಟ್ಟಿದ್ದೆ ೧೨ ನೇಯ ಶತಮಾನದಲ್ಲಿ ಗುರು ಬಸವಣ್ಣನವರು ಬರುವ ಮುಂಚೆ ಈಗಿನ ಲಿಂಗಾಯತರು ದಲಿತರೇ ಆಗಿದ್ದರು. ಅಂತಹ ಮಹಾಗುರು ಬಂದು ಧರ್ಮ ಸ್ಥಾಪನೆ ಮಾಡಿ ನಮ್ಮ ಪೂರ್ಜರನ್ನು ಲಿಂಗಾಯತ ಧರ್ಮದ ಕಕ್ಷೆಗೆ ಕರೆ ತಂದು ದೊಡ್ಡ ಗೌರವ ಸಿಗುವ ಹಾಗೆ ಮಾಡಿದ್ದು ಇತಿಹಾಸ. ಅಂತಹ ಇತಿಹಾಸ ಪ್ರಜ್ಞೆ ಮರೆತ ನಾವು ಜಾತಿ ಲಿಂಗಾಯತರಾಗಿ ವೈಧಿಕರ ಗುಲಾಮರು ಆಗಿರುವುದು ಒಂದು ದುರಂತ.

 6. ಲಿಂಗಾಯತ , ಲಿಂಗವಂತ ಎರಡೂ ಒಂದೇ.. ಹನ್ನೆರಡನೇ ಶತಮಾನದಲ್ಲಿ ಎಲ್ಲ ತಳ ಸಮುದಾಯ , ಮೇಲುಸಮುದಾಯಗಳ ಒಟ್ಟು ಸಂಗಮವೇ .. ಲಿಂಗವಂತ ಧರ್ಮ .. ಅದನ್ನು ವಿರೋಧಿಸಿದವರೂ ಅನಿವಾರ್ಯವಾಗಿ ಸೇರಿ .. ಅದರಲ್ಲಿಯೇ ನಾವು ಶ್ರೇಷ್ಠ ಅಂದುಕೊಂಡು ಬೀಗುತ್ತಾ ಧರ್ಮ ಒಡೆಯುತ್ತಿದ್ದಾರೆ.. ಆದ್ದರಿಂದ ಮತ್ತೆ ಮೂಲ ಜಾತಿಗಳಿಗೆ ಎಲ್ಲರೂ ಮರಳುತ್ತಿದ್ದಾರೆ .. ಹೀಗಾದರೆ ಲಿಂಗಾಯತ ಎಂದು ಕರೆದುಕೊಳ್ಳಲು ..ಮೂರು ನಾಲ್ಕು ಜಾತಿಗಳು ಉಳಿದುಕೊಳ್ಳಬಹುದು.. ಬಸವಣ್ಣನವರ ತತ್ವಗಳನ್ನು ನಾವು ಪಾಲಿಸುತ್ತಿಲ್ಲ.. ಅಂಬೇಡ್ಕರ್ ತತ್ವಗಳನ್ನು ಅವರು ಪಾಲಿಸುತ್ತಿಲ್ಲ .. ಎಲ್ಲರೂ ನಮ್ಮದನ್ನು ಬಿಟ್ಟು ಬೇರೆ ಯಾವುದಕ್ಕೋ ಹೊಡೆದಾಡುತ್ತಿರುವುದು ಸತ್ಯ..!!!

 7. ಸಂಪೂರ್ಣ ವಿಸ್ಮೃತಿಗೆ ಒಳಗಾಗಿರುವ ಲಿಂಗಾಯತ ಸಮುದಾಯ ಮುಂದೆಂದೂ ಬೆಳಕು ಕಾಣದು.

 8. ಬಸವಾದಿ ಶರಣರ ವಚನ ಸಾಹಿತ್ಯದ ಅಧ್ಯಯನದ ಕೊರತೆಯಿಂದ ಈ ಎಲ್ಲ ಅಹಿತಕರ ಅನಾಹುತಗಳು ಜರುಗಿವೆ. ಸ್ವತಃ ಬಸವಣ್ಣನವರೇ “ಹಾರವ”ನೆಂದು ಕರೆಸಿಕೊಳ್ಳಲು ಸುತಾರಾಮ್ ಸಿದ್ಧರಿರಲಿಲ್ಲವೆಂಬುದು ಅವರ ವಚನಗಳಿಂದಲೇ ವೇದ್ಯವಾಗುತ್ತದೆ. ಬ್ರಾಹ್ಮಣ ಶ್ರೇಷ್ಠತೆಯ ಭ್ರಮೆ ಇವರಿಗೆ ಸೇರಿಕೊಳ್ಳಲು ವಚನ ಸಾಹಿತ್ಯದ ಅಧ್ಯಯನದ ಕೊರತೆಯೇ ಕಾರಣವೆನಿಸುತ್ತದೆ. ಆಗಿರುವ ಕೇಡನ್ನು ಕೊನೆಗಾಣಿಸಲು ಈಗಲಾದರೂ ವಚನ ಸಾಹಿತ್ಯದ ವಿಸ್ತಾರವಾದ ಅಧ್ಯಯನ ಮಾಡಲಿ. ಅರಿವು ಆಚಾರದ ಹೊಸ ಜೀವನ ಆರಂಭಿಸಲಿ.

Leave a Reply

Your email address will not be published. Required fields are marked *

error: Content is protected !!