ಧಾರ್ಮಿಕ ಸ್ಥಾವರಗಳಿಗೆ ದೇಣಿಗೆ ನೀಡಲಾರೆ !

ನಾನು ಬಸವವಾದಿ ಸ್ಥಾವರಕ್ಕೆ ದೇಣಿಗೆ ನೀಡಲಾರೆ !

೧) ಸ್ಥಾವರಗಳು ಉಳ್ಳವರಿಗಾಗಿ ,ಅವರ ಮೇಲಿರಿಮೆ ಮೆರೆಯಲಿಕ್ಕಾಗಿ. ಹಾಗಾಗಿ ನಾನು ಯಾವುದೆ ಸ್ಥಾವರ ಧಾರ್ಮಿಕ ಸ್ಥಳಗಳಿಗೂ ದೇಣಿಗೆ ನೀಡಲಾರೆ.

೨) ಧಾರ್ಮಿಕ ಕಟ್ಟಡಗಳಿಂದ ಪ್ರಜ್ಞೆ ಉಂಟು ಮಾಡಲು ಸಾಧ್ಯವಿಲ್ಲ. ಹಾಗಾಗಿ ನಾನು ದೇಣಿಗೆ ನೀಡಲಾರೆ.

೩) ಯಾವ ಧಾರ್ಮಿಕ ಕಟ್ಟಗಳು ಎಲ್ಲರಿಗೂ ಮುಕ್ತವಾಗಿರುವುದಿಲ್ಲವೋ ಆ ಕಟ್ಟಡದ ನಿರ್ಮಾಣಕ್ಕೆ ನಾನೇಕೆ ದುಡ್ಡು ಕೊಡಲಿ ?

೪) ಸಾರ್ವಜನಿಕ ಸ್ವತ್ತು ಎಂದು ಹೇಳುತ್ತೀರಷ್ಟೇ ಅಲ್ಲಿ ಪೂಜೆಗೆ ನಿಯುಕ್ತಿಗೊಳ್ಳುವವ ಕೇವಲ ಒಂದೇ ಜಾತಿಯ ವ್ಯಕ್ತಿ. ಹಾಗಾಗಿ ನಾನು ಚಂದಾ ನೀಡಲಾರೆ.

೫) ಭಾರತದ ಸಮಗ್ರತೆಗೆ ಧಕ್ಕೆ ತರುವ, ಆತ್ಮೀಯ ಸಂಬಂಧಗಳ ನಡುವೆ ಉಳಿ ಹಿಂಡುವ ಧಾರ್ಮಿಕ ಕಟ್ಟಡಗಳನ್ನು ನಾನು ಪ್ರೋತ್ಸಾಹಿಸಲಾರೆ. ಆದ್ದರಿಂದ ನಾನು ಹಣ ಕೊಡಲಾರೆ.

೬) ದೇಹ ದೇವಾಲಯ ಶಿರ ಹೊನ್ನ ಕಲಶ ಎಂದು ಸತ್ಯ ಅರಿತ ಮೇಲೂ ದೇವರನ್ನು ಕಟ್ಟಡಗಳಲ್ಲಿ ಹುಡುಕಲಾರೆ. ಹೀಗಾಗಿ ನಾನು ಚಂದಾ ನೀಡಲಾರೆ.

೭) ಕಟ್ಟಡಗಳು ನಿರ್ಜೀವ. ಸಜೀವ ದೇಹಿಯನ್ನು ಸೃಜಿಸಲಾರವು. ನಿರ್ಜೀವ ಕಟ್ಟಡದಿಂದ ಯಾವ ಧರ್ಮದ ಮುಖಂಡರೂ ಎದ್ದು ಬರಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ನಾನು ಪಟ್ಟಿ ಕೊಡಲಾರೆ.

೮) ಜನರಿಗೆ, ವಿವೇಕ, ವಿಜ್ಞಾನ, ಆತ್ಮ ಗೌರವಗಳನ್ನು ಯಾವ ಧಾರ್ಮಿಕ ಕಟ್ಟಡವೂ ನೀಡಿಲ್ಲ. ಇದು ನನಗೆ ಸ್ಪಷ್ಟ. ಆದ್ದರಿಂದ ನನ್ನ ನಿಲುವು ಅಚಲ.

೯) ಪ್ರತಿಯೊಂದು ವ್ಯಕ್ತಿಯೊಳಗೂ ಆ ದೇವನ ಅಂಶ ಇದ್ದೇ ಇದೆ. ಹೀಗಾಗಿ ಕೇವಲ ಒಂದು ಕಟ್ಟಡದಲ್ಲಿ ಆ ದೇವರನ್ನು ಹುಡುಕುತ್ತ ಹೋಗಲಾರೆ. ನನ್ನ ಸುತ್ತಲಿರುವ ಜನಗಳಲ್ಲಿಯೇ ನಾನು ದೇವರನ್ನು ಹುಡುಕುತ್ತೇನೆ. ಆದ್ದರಿಂದ ನನಗೆ ಅದರ ಅಗತ್ಯವಿಲ್ಲ.

೧೦) ಎಲ್ಲಾ ಧಾರ್ಮಿಕ ಕಟ್ಟಡಗಳನ್ನು ಕಟ್ಟಿದವರು ನನ್ನವರಾದರೂ ಅವರಿಗೆ ಅಲ್ಲಿ ಮುಕ್ತ ಪ್ರವೇಶ ಇಲ್ಲ. ಸಹಜವಾಗಿ ಅತ್ತ ನಾನು ಹಣಕಿಯೂ ನೋಡಲಾರೆ.

೧೧) ದೇವರು ಸ್ಥಾವರ ಅಲ್ಲ, ಆತ ಸಚರಾಚರವಾಗಿ ತುಂಬಿ ತುಳುಕುತ್ತಿದ್ದಾನೆ. ಆತನನ್ನು ಕೇವಲ ನಿರ್ಜೀವ ಕಟ್ಟಡಗಳಲ್ಲಿ ಹುಡುಕಲಾರೆ.

೧೨) ನೊಂದವರ ನೋವಿಗೆ ಆತ ಸ್ಪಂದಿಸಲಾರ. ಅನಕ್ಷರಸ್ಥರ ಪರ ಆತನ ನಿಲುವು ಇಲ್ಲ. ಬಡತನ ಆತನ ತತ್ವಗಳಿಂದ ಓಡಿ ಹೋಗುವುದಿಲ್ಲ.
ಕಾಯಕದಿಂದ ಏನೆಲ್ಲ ಸಾಧ್ಯ ಎಂದು ಅರಿತಿರುವೆ. ಆದ್ದರಿಂದ ನಾನು ಯಾವುದೆ ಧಾರ್ಮಿಕ ಕಟ್ಟಡಕ್ಕೆ ಚಂದಾ ನೀಡಲಾರೆ.

ನಾನು ಸರ್ವತಂತ್ರ ಸ್ವತಂತ್ರ, ನಾನು ನನ್ನ ವಿವೇಕದಂತೆ ಪ್ರಜ್ಞೆಯಿಂದ ಬದುಕಲು ಇಚ್ಛಿಸಿದ್ದೇನೆ. ನನ್ನ ಹಾದಿ ನನಗೆ ನಿಮ್ಮ ಹಾದಿ ನಿಮಗೆ.

ಎಲ್ಲರ ಅಂತರಾತ್ಮದಲ್ಲಿ ನೆಲೆಸಿರುವ ಆ ಚೈತನ್ಯಕ್ಕೆ ನನ್ನ ಗೌರವದ ಶರಣುಗಳು. ವಿವೇಕವಂತರು ಯೋಚಿಸುತ್ತಾರೆ. ವಿವೇಕರಹಿತರು ಆಕ್ರೋಶಗೊಳ್ಳುತ್ತಾರೆ. ಒಡಲ ಕಿಚ್ಚು ಒಡಲನ್ನೇ ಸುಡುತ್ತದೆ. ನೆರೆ ಮನೆಯನ್ನಲ್ಲ.

೦ ವಿಶ್ವಾರಾಧ್ಯ ಸತ್ಯಂಪೇಟೆ

2 thoughts on “ಧಾರ್ಮಿಕ ಸ್ಥಾವರಗಳಿಗೆ ದೇಣಿಗೆ ನೀಡಲಾರೆ !

Leave a Reply

Your email address will not be published. Required fields are marked *

error: Content is protected !!