ಮುರಗೋಡದ ಶರಣ ಮಹಾದೇವಪ್ಪ ವಾಲಿ

ಅಪ್ಪ ಲಿಂಗಣ್ಣ ಸತ್ಯಂಪೇಟೆ ನನಗೆ ಬಸವಾದಿ ಶರಣರ ಚಿಂತನೆಗಳ ಹುಚ್ಚು ಹಿಡಿಸಿ ಬಿಟ್ಟಿದ್ದಾರೆ. ಆದ್ದರಿಂದ ತಲೆ ಕೆಟ್ಟವರಂತೆ ಮನೆಯಲ್ಲಿ ಮಹಾಮನೆ, ಬಸವ ಬೆಳಕು, ಬಸವ ಜ್ಯೋತಿ, ಬಸವ ಚಿಂತನೆ ಎಂಬ ಕಾರ್ಯಕ್ರಮಗಳಿಗೆ ಕರೆಯುವುದೆ ತಡ ಹೊರಟು ಬಿಡುತ್ತೇನೆ.‌ ತೀರಾ ಇತ್ತೀಚೆಗೆ ಬೆಳಗಾವಿಯಲ್ಲಿ ಜರುಗಿದ ಲಿಂಗಾಯತ ಮಠಾಧಿಪತಿಗಳ ಶಿಬಿರಕ್ಕೆ ಹೋದಾಗ ಬಹಳ ವರ್ಷಗಳಿಂದ ನನಗೆ ಆಗಾಗ ಆಹ್ವಾನ ನೀಡುತ್ತಿದ್ದ ಮುರುಗೋಡದ ಸನ್ಮಾನ್ಯ‌ ಶ್ರೀ ಮಹಾದೇವಪ್ಪ ವಾಲಿಯವರ ನೆನಪಾಯಿತು.

ನಾನೇ ಮುದ್ದಾಂ ಅವರಿಗೆ ಫೋನ್ ಮಾಡಿ ತಿಳಿಸಿದೆ. ನಿಮ್ಮೂರಿಗೇನೋ ಬರುತ್ತೇನೆ, ಆದರೆ ನೀವು ಮನೆಯಲ್ಲಿ ಮಹಾಮನೆ ಏರ್ಪಡಿಸುವುದಾದರೆ ಮಾತ್ರ ಎಂಬ ನಿಬಂಧನೆ ಹಾಕಿದೆ. ಅದಕ್ಕವರು ತುಂಬಾ ಸಂತೋಷದಿಂದ ಒಪ್ಪಿದರು.

ಶರಣರು ವಾಸವಾಗಿದ್ದರೆಂದು ಹೇಳುವ ಗವಿಗಳು

ಬೆಳಗಾವಿಯಿಂದ ಬಾಗಲಕೋಟೆಯ ಮುಖ್ಯ ರಸ್ತೆಯಿಂದ ನಾಲ್ಕೈದು ಕಿ.ಮೀ.‌ಒಳಗೆ ಇರುವ ಮುರುಗೋಡ ಹೆಸರು ಕೇಳಿತ್ತಲೆ ನನ್ನೊಳಗೆ ಹೇಳಲಾಗದ , ಬಣ್ಣಿಸಲಾಗದ ಪುಳಕ. ಮುರುಗೋಡ ಪೂಜ್ಯ ಶ್ರೀ ಮಹಾಂತ ಶಿವಯೋಗಿಗಳ ಊರು ಮುರುಗೋಡ. ಬಸವಾದಿ ಶರಣರ ಚಿಂತನೆಗಳನ್ನು ಇಂಬಿಟ್ಟುಕೊಂಡು ನಡೆದಾಡಿದ ಚೇತನ. ಮಾತು ಮೌನದ ಸಂಗಮ. ನಡೆಯೊಳಗೆ ನಡೆಯ ಪೂರೈಸಿದ ಸಂಪನ್ನ ಬದುಕು.

ಇದೆಲ್ಲಕ್ಕಿಂತ ಮುಖ್ಯವಾಗಿ , ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯ ನಂತರ ಶರಣರು ಇದೆ ಮುರಗೋಡದ ಮಾರ್ಗವಾಗಿ ಉಳವಿಗೆ ಹೋದ ಐತಿಹ್ಯಗಳು ಕಾಣಸಿಗುತ್ತವೆ. ಬಿಜ್ಜಳನ ಮಗ ಸೋವಿದೇವ ಶರಣರನ್ನು ಸದೆ ಬಡಿಯಲು ಸೈನ್ಯದೊಂದಿಗೆ ಬೆನ್ನಟ್ಟಿ ಬಂದ ಬಗೆಗೂ ಮಾತುಗಳಿವೆ. ಮುರಗೋಡದ ಊರ ಹೊರಗೆ ಗುಡ್ಡಗಳಲ್ಲಿ ಗುಪ್ತ ಸ್ಥಳಗಳಿವೆ. ಈ ಮಣ್ಣಿನ ಗುಹೆಗಳಲ್ಲಿ ಶರಣರು ವಾಸವಾಗಿದ್ದರು ಎಂದು ಸ್ಥಳಿಯರು ಹೇಳುತ್ತಾರೆ. ಮುರುಗೋಡದ ಬೆಟ್ಟದಲ್ಲಿ ಶರಣರ ಸಾಮೂಹಿಕ ಸಮಾಧಿಗಳು ಹಿಂದೆ ಇದ್ದು, ಅವನ್ನೆಲ್ಲ ಈಗ ಉಳುಮೆಯ ಹೊಲಗಳಾಗಿ ಪರಿವರ್ತಿಸಲಾಗಿದೆ ಎಂದು ಮಹಾದೇವಪ್ಪ ವಾಲಿಯವರು ಹೇಳುತ್ತಾರೆ. ಕೂಗಿನ ಮಾರಿ ತಂದೆಯ ಲಿಂಗೈಕ್ಯ ಸಮಾಧಿಯೂ ಇಲ್ಲಿದೆ. ಸರಕಾರ ಈ ಬಗ್ಇಗೆ ತೀವ್ರ ಗಮನ ಹರಿಸಬೇಕಿದೆ. ಇದೆಲ್ಲ ಒಂದು ಕಡೆ ಇರಲಿ.

ಶರಣ ಮಹಾದೇವಪ್ಪ ವಾಲಿ

೮೦ ವರ್ಷ ಆಸುಪಾಸಿನ ಶರಣ ಮಹಾದೇವಪ್ಪ ವಾಲಿಯವರ ಮನೆ ನಿಜಕ್ಕೂ ಮಹಾಮನೆಯೇ ಹೌದು. ಶರಣರ ಆಶಯದಂತೆಯೆ ಭಕ್ತನ ಅಂಗಣವೇ ವಾರಣಾಸಿಯನ್ನಾಗಿ ಮಾಡಿಕೊಂಡಿದ್ದಾರೆ. ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶರಣೆ ತಾಯಿ ನೀಲಮ್ಮಳ ಬಳಗವನ್ನು ಪೋಷಿಸಿ ಬೆಳೆಸಿದ್ದಾರೆ. ಈ ತಾಯಂದಿರ ಬಳಗ ಅಕ್ಕಮಹಾದೇವಿಯ ತ್ರಿವಿಧಿಗಳನ್ನು ರಾಗಬದ್ಧವಾಗಿ ಹೇಳುತ್ತಾರೆ. ಭಕ್ತಿ ಭಾವಗಳಿಂದ ಶರಣರ ಹಾಡುಗಳನ್ನು, ವಚನಗಳನ್ನು ಹಾಡುತ್ತಾ ಬಂದಿದ್ದಾರೆ. ಅಕ್ಕ ಪಕ್ಕದ ಊರುಗಳಿಗೂ ಹೋಗಿ ಶರಣ ಚಿಂತನೆ ನಡೆಸುತ್ತಿದ್ದಾರೆ. ಲಿಂಗಾಯತ ಮಠಾಧಿಪತಿಗಳು ಕಾಲು ಚಾಚಿಕೊಂಡು ಮಠಕ್ಕೆ ಬೀಗ ಹಾಕಿಕೊಂಡು ಕುಳಿತಿರುವ ಸಂಧರ್ಭದಲ್ಲಿ ಮಹಾದೇವಪ್ಪ ವಾಲಿಯವರ ಮಡದಿ, ಮಕ್ಕಳ ಸಹಕಾರ ಅಪಾರವೆಂದು ನೀಲಮ್ಮನ ಬಳಗದ ಸದಸ್ಯರೆಲ್ಲ ಒಕ್ಕೂರಲಿನಲ್ಲಿ ಹೇಳುತ್ತಾರೆ.

ಅತಿಥಿ ಸತ್ಕಾರಕ್ಕೆ , ಅದರಲ್ಲೂ ಶರಣ ಸಾಹಿತಿಗಳು, ತತ್ವ ಪ್ರಸಾರಕರೆಂದರೆ ಮಹಾದೇವಪ್ಪ ಶರಣರಿಗೆ ಅವರ ಮಡದಿ ಹಾಗೂ ಮಗಳು ನೀಲಮ್ಮ- ಮಡಿವಾಳಪ್ಪನವರಿಗೆ ಎಲ್ಲಿಲ್ಲದ ಸಡಗರ ಸಂಭ್ರಮ.

ಸೋವಿದೇವನ ಸೈನ್ಯದಿಂದ ಹತರಾದ ಶರಣರ ಸಾಮೂಹಿಕ ಸಮಾಧಿಗಳು, ಇದ್ದವೆಂದು ಹೇಳುವ ಸ್ಥಳ

ಒಂದೇ ಒಂದು ಸಲ ಶರಣ ಸಾಹಿತಿ ತತ್ವ ಪ್ರಸಾರಕರು ಎಂದು ಗುರುತಿಸಿಕೊಂಡರೆ ಸಾಕು ಅವರನ್ನು ದುಂಬಾಲು ಬಿದ್ದು ತಮ್ಮ ಮನೆಗೆ ಕರೆಯಿಸಿಕೊಳ್ಳುತ್ತಾರೆ. ಅವರಿಗೆ ಉಣಿಸಿ, ತಿನಿಸಿ, ಅವರಿಂದ ಮಹಾಮನೆ ಮಾಡಿಸಿ ಸಂತೃಪ್ತಿ ಪಡುತ್ತಾರೆ. ಲಿಂಗೈಕ್ಯ ಹೆಚ್. ತಿಪ್ಪೇರುದ್ರ ಸ್ವಾಮಿಯವರು ಹಲವಾರು ಸಲ ಈ ಮನೆಗೆ ಬಂದು ಹೋಗಿದ್ದಾರೆ. ಈಗಲೂ ಅವರ ಮಗಳು ವರ್ಷಕ್ಕೊಂದು ಸಲ ಮುರಗೋಡಕ್ಕೆ ಬಂದು ನಾಲ್ಕೆಂಟು ಇದ್ದು ಹೋಗುತ್ತಾರೆ. ಅರವಿಂದ ಜತ್ತಿಯವರೂ ಬಂದು, ಇಲ್ಲಿದ್ದು ಅನುಭಾವ ಗೋಷ್ಠಿ ನಡೆಸಿ ಹೋಗಿದ್ದಾರೆ.

ಶರಣರು ನಡೆದಾಡಿದ ನೆಲ ಪಾವನವೇನೋ ಸತ್ಯ. ಇದೆ ನೆಲದಲ್ಲಿ ಅದೆ ಮಠದಲ್ಲಿ ಕೊಳ್ಳಿ ದೆವ್ವಗಳು ವಾಸವಾಗಿರುವುದು ಕಟು ಸತ್ಯ. ಮಹಾದೇವಪ್ಪನರು ತಮ್ಮ ಸ್ವಂತ ಜಾಗದಲ್ಲಿ ಗುರುಕುಲವೊಂದನ್ನು ಸ್ಥಾಪಿಸಿ ಶರಣ ವಚನಗಳ ಪರಿಚಯ ಮಾಡಿಸಬೇಕು, ಮಕ್ಕಳಿಗೆ ಶರಣ ಸಂಸ್ಕೃತಿ ಪರಿಚಯಿಸಬೇಕೆಂದು ಶಾಲೆ ತೆರೆದಾಗ ಹಲವಾರು ಗುಂಗಿ ಹುಳಗಳು ಅವರನ್ನು ಕಾಡಿದವಂತೆ. ಶರಣ ಸಂಸ್ಕೃತಿ , ಈ ನೆಲದಲ್ಲಿ ಮತ್ತೊಮ್ಮೆ ಬೆಳೆಯಬಾರದು ಎಂಬ ಕೆಟ್ಟ ಮನಸ್ಸು ಆ ಗುಂಗು ಹುಳಗಳಿಗೆ.

ನೀಲಮ್ಮನ ಬಳಗದ ಸದಸ್ಯರು ಲಿಂಗ ಧ್ಯಾನದಲ್ಲಿ

ಶರಣರ ಕುರಿತ ಪುಸ್ತಕ ಓದುವ , ಇತರ ಲೇಖಕರ ಕೃತಿಗಳನ್ನು ಜನರಿಗೆ ಕೊಟ್ಟು ಓದಿಸುವ , ಅತಿಥಿಗಳನ್ನು ಸತ್ಕರಿಸುವ ಅಪರೂಪದ ಶರಣ ಚೇತನ ಮಹಾದೇವಪ್ಪ ವಾಲಿಯವರು ಎಂದು ಹೇಳಿದರೆ ಅತಿಶಯೋಕ್ತಿಯ ಮಾತಾಗಲಾರದು.

ಸದು ವಿನಯ ಸಂಪನ್ನ ನಡೆಯ ಇಂಥ ವ್ಯಕ್ತಿಗಳೆ ಬಸವ ಪರಂಪರೆಯನ್ನು ಮುಂದುವರೆಸಿಕೊಂಡು ಹೊರಟಿವೆ. ಅವರೊಳಗೆ ಅಡಗಿರುವ ಶರಣರ ಭಾವಕ್ಕೆ ನನ್ನ ಗೌರವದ ಶರಣಾರ್ಥಿಗಳು.

೦ ವಿಶ್ವಾರಾಧ್ಯ ಸತ್ಯಂಪೇಟೆ

ನನ್ನೊಂದಿಗೆ ಶರಣ ಮಹಾದೇವಪ್ಪ ವಾಲಿ‌, ಮುರಗೋಡ

One thought on “ಮುರಗೋಡದ ಶರಣ ಮಹಾದೇವಪ್ಪ ವಾಲಿ

  1. ಸತ್ಯಂಪೇಟೆ ಶರಣರಿಗೆ ಬಸವ ಮಹಾಮನೆಯ ಸದಸ್ಯರಿಂದ ತುಂಬು ಹೃದಯದ ಕೃತಜ್ಞತೆಗಳು.ನಿಮ್ಮ ನಿಭೀ೯ತಿಯ ವಿಚಾರಗಳಿಗೆ ಧನ್ಯವಾದಗಳು.ನಿಮ್ಮಂತವರಿಂದ ಶರಣ ಸಂಸ್ಕೃತಿ ಬೆಳೆಯುಲಿ ಎಂಬ ಆಶಯ ನಮ್ಮದು.ಶರಣು ಶರಣಾರ್ಥಿ.

Leave a Reply

Your email address will not be published. Required fields are marked *

error: Content is protected !!