ತತ್ವಗಳಿಗೆ ಬದ್ಧರಾಗದ ಮಠಾಧೀಶರೂ , ಬಸವ ತತ್ವವೂ

ತತ್ವಗಳಿಗೆ ಬದ್ಧರಾಗದ ಮಠಾಧೀಶರೂ , ಬಸವ ತತ್ವವೂ

ಬಸವಾದಿ ಶರಣರ ವಿಚಾರಧಾರೆಯ ಅವಶ್ಯಕತೆ ಎಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ ಎಂಬ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೆ ಮಠಾಧೀಶರು ಬಸವಾದಿ ಶರಣರ ವಚನಗಳನ್ನು ತಮ್ಮ ವೈಯಕ್ತಿಕ ಬೆಳವಣಿಗೆಗೆ ಊರುಗೋಲಾಗಿ ಇಟ್ಟುಕೊಂಡು ತಾವು ಬೆಳೆದು, ನಂತರ ಆ ತತ್ವಗಳನ್ನು ಕಾಲ ಕಸಕ್ಕಿಂತಲೂ ಕಡೆಯಾಗಿ ಮಾಡುತ್ತಿದ್ದಾರೆ.ಆ ತತ್ವದ ಮೂಲ ಜೀವ ಜೀವಾಳವೆ ತಳ ಸಮುದಾಯ. ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ ಎಂಬ ಮಾತುಗಳನ್ನು ಮರೆತು ಮತ್ತದೆ ಕರ್ಮಠ ಆಚರಣೆಗೆ ಜೋತುಬಿದ್ದು ಮಾನಸಿಕ ಅಸ್ಪøಶ್ಯತೆಯನ್ನು ಆಚರಿಸುತ್ತಿದ್ದಾರೆ. ಬಸವಣ್ಣನವರ ಆಶಯಕ್ಕೆ ಮನಸೋತಿರುವ ಮಠಾಧೀಶರು ಎಂದು ಅನಿಸಿಕೊಳ್ಳಲು ಮಾತ್ರ ತಮ್ಮ ಸುತ್ತ ಮುತ್ತ ಶೋಷಿತ ಸಮುದಾಯದ ಒಂದಿಬ್ಬ ಮಠಾಧೀಶರನ್ನು ಜೊತೆ ಮಾಡಿಕೊಂಡಿರುತ್ತಾರೆ. ಅವರೋ ಹೇಳಿ ಕೇಳಿ ಎಲ್ಲಾ ದೃಷ್ಟಿಯಿಂದ ಹಿಂದುಳಿದ ವ್ಯಕ್ತಿಯಾಗಿದ್ದರಿಂದ ಸಹಜವಾಗಿ ಅವರಿಗೆ ಗೌರವ , ಆದರಾತಿಥ್ಯ ಸಿಕ್ಕ ಕೂಡಲೆ, ಈ ಅವಕಾಶಗಳನ್ನು ಒದಗಿಸಿಕೊಟ್ಟ ಮಠಾಧೀಶರಿಗೆ ಗುಲಾಮರಾಗಿ ಇರಲು ಬಯಸುತ್ತಾರೆಯೆ ಹೊರತು ಸ್ವತಂತ್ರ್ಯ ತಲೆಯವರಾಗಿ ಬದುಕುವುದು ಕಷ್ಟ.

ಸ್ವತಂತ್ರ ತಲೆಯ ಮಠಾಧೀಶರನ್ನು ಇಂದಿನ ಲಿಂಗಾಯತ ಮಠಾಧೀಶರು ತಮ್ಮ ಜೊತೆ ಇಟ್ಟುಕೊಂಡ ಉದಾಹರಣೆಯೂ ಸಿಗಲಾರದು. ಶರಣರ ಆಶಯದಲ್ಲಿ ಮಠಗಳಿಲ್ಲ. ಮಠಾಧೀಶನಿಲ್ಲ. ಆ ಮಠಾಧೀಶರು ಕೂಡ ಕಾವಿ ಕಾಷಯಾಂಬರ ಹೊದ್ದು ತಿರುಗಾಡಬೇಕೆಂದು ಹೇಳಿಲ್ಲ. ಶರಣರ ಚಿಂತನೆಯಲ್ಲಿ ಪ್ರಾಮಾಣಿಕವಾಗಿ ದುಡಿಯುವ ವ್ಯಕ್ತಿ ದೊಡ್ಡವನೆಂದು ಪರಿಭಾವಿಸಿದರು.

ವೇದಶಾಸ್ತ್ರದವರ ಹಿರಿಯರೆನ್ನೆ
ಮಾಯಾಭ್ರಾಂತಿ ಕವಿದ ಗೀತಜ್ಞರ ಹಿರಿಯರೆನ್ನೆ
ಇವರು ಹಿರಿಯರುಗಳೇ ಯಾಗನಟ್ಟು ವಿಗಪಾಣರು.
ಇವರಿಂದಧಿಕವ ಸಾಧಿಸುವರೇನು ಕಿರಿಯರೆ ?
ಇಂತು ವಿದ್ಯೆ ಗುಣ ಜ್ಞಾನ ಧರ್ಮ ಆಚಾರ ಶೀಲಂಗಳ
ನಮ್ಮ ಕೂಡಲ ಸಂಗನ ಶರಣರು
ಸಾಧಿಸಿದ ಸಾಧನೆಯನೆ ಸಾಧಿಸುವುದು

ಶರಣರೆಂದು ದುಡಿಯದ ವ್ಯಕ್ತಿಗಳನ್ನು ದೊಡ್ಡವರೆಂದು ಭಾವಿಸಿಕೊಂಡವರೆ ಅಲ್ಲ. ಶರಣರ ಧರ್ಮವೆ ಸಣ್ಣ ಪುಟ್ಟ ಕೆಲಸ ಮಾಡಿ, ಬದುಕುವ ಜನ ಸಾಮಾನ್ಯರ ಧರ್ಮ. ಉಳ್ಳವರ ಧರ್ಮವಂತು ಅಲ್ಲವೆ ಅಲ್ಲ. ಹಾಗಂತಲೆ ಅವರು ಖಚಿತವಾಗಿ ಹೇಳಿದ್ದು ಆನು ದೇವ ಹೊರಗಣದವನು. ಸಂಬೋಳಿ ಸಂಬೋಳಿ ಎಂದು ಕೂಗುತ್ತಾ ಇಂಬಿನಲ್ಲಿ ಇದ್ದೇನೆ. ನಿಮ್ಮ ನಾಮವಿಡಿದ ಅನಾಮಿಕ ನಾನು ಎಂದು. ದುಡ್ಡು ದುಗ್ಗಾಣಿ ಇತ್ಯಾದಿಗಳು ಇದ್ದವರೆ ಗುಡಿ ಗುಂಡಾರಗಳನ್ನು ಕಟ್ಟಿಸುತ್ತಾರೆ. ನಾನೇನು ಮಾಡಲಿ ಬಡವ. ಆದ್ದರಿಂದ ನನ್ನ ಕಾಲೇ ಕಂಬ. ದೇಹವೇ ದೇಗುಲ ಎಂದು ಹೇಳುವ ಮೂಲಕ ಉಳ್ಳವರ ಹಾಗೂ ಧಾರ್ಮಿಕ ಬೂಟಾಟಿಕೆ ನಡೆಸಿದ ಜನಗಳ ಸಂಚನ್ನು ಬಟಾಬಯಲು ಮಾಡಿದವರು.

ವಿಷಾಧದ ಸಂಗತಿಯೆಂದರೆ ಲಿಂಗಾಯತ ಧರ್ಮದ ಮಠಾಧೀಶರೆಂದು ಹೇಳಿಕೊಳ್ಳುವ ಕೆಲವರು ಬಹಿರಂಗವಾಗಿಯೆ ಸ್ಥಾವರ ನಿರ್ಮಾಣಕ್ಕೆ ಪಟ್ಟಿ ಎತ್ತುವ ಕೆಲಸದಲ್ಲಿ ಮುಂಚೂಣಿಯಲ್ಲಿದ್ದಾರೆ. ಹಲವರಂತೂ ಬಹಿರಂಗವಾಗಿಯೆ ಆ ಗುಡಿ ನಿರ್ಮಾಣದ ಕೆಲಸಕ್ಕೆ ತಮ್ಮ ಮಠದಿಂದ ಲಕ್ಷ ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡುತ್ತಿದ್ದಾರೆ.

ಯಾರು ಕರೆದರೂ ಸಾಕು, ತಮ್ಮ ಧರ್ಮದ ಘನತೆ ಗೌರವವನ್ನು ಮಣ್ಣು ಪಾಲು ಮಾಡಿ ಅವರೊಂದಿಗೆ ಬೆರೆಯುತ್ತಿದ್ದಾರೆ. ಯಜ್ಞ ಯಾಗಗಳು, ಮಡಿ ಮೈಲಿಗಳನ್ನು ದೂರಿಕರಿಸಿದ ಧರ್ಮ ವಕ್ತಾರರು ಎಂದು ಹೇಳಿಕೊಳ್ಳುವ ಇವರು ಬಹಿರಂಗವಾಗಿಯೆ ಯಜ್ಞ ಕಾರ್ಯಗಳಲ್ಲಿ ಭಾಗಿಯಾದ ಉದಾಹರಣೆಗಳಿವೆ. ಜ್ಯೋತಿಷ, ಮಂತ್ರ, ಮಾಟಗಳು ಹೊಟ್ಟೆ ಹೊರೆಯುವ ಸಾಧನಗಳಷ್ಟೇ ಎಂದು ಹೇಳಿದ ಶರಣರ ಚಿಂತನೆಗಳನ್ನು ಗಾಳಿಗೆ ತೂರಿ ಅಘೋರಿಗಳೊಂದಿಗೆ ಸಖ್ಯ ಬೆಳೆಸಿ ಅವರಿಂದ ಲಿಂಗಾಯತ ಸಮಾಜಕ್ಕೆ ಮತ್ತೆ ಫಲ ಜ್ಯೋತಿಷ, ಪಂಚಾಂಗ, ಮಂತ್ರ, ತಂತ್ರ, ಮಾಟಗಳನ್ನು ಪರಿಚಯಿಸುತ್ತಿದ್ದಾರೆ.

ಶರಣರ ವಚನಗಳ ಕುರಿತು, ಶರಣರ ಆಲೋಚನೆಗಳ ಕುರಿತು ಉದ್ಘೋದಕವಾಗಿ ಮಾತನಾಡಬಲ್ಲ ಮಠಾಧೀಶರು ನೋಡ ನೋಡುತ್ತಲೆ ಕರ್ಮಠರ ಜೊತೆಗೂಡಿ, ಅವರ ಕ್ರೀಯಾಚರಣೆಗಳಲ್ಲಿ ಭಾಗಿಯಾಗಿರುವ ದೃಶ್ಯ ಇಂದು ಸಾಮಾನ್ಯವಾಗಿದೆ. ಗುರು ವೈಭವಕ್ಕೆ ಸಿಕ್ಕಾಗಲೆ ಶಿಷ್ಯಂಗೆ ನರಕ ಪ್ರಾಪ್ತಿ ಎಂದು ವಚನ ಸಾಲುಗಳನ್ನು ಉದ್ಧರಿಸಿ ತಮ್ಮ ಶಿಷ್ಯರಿಂದ ಭೇಷ್ ಅನಿಸಿಕೊಂಡ ಗುರು ನೋಡ ನೋಡುತ್ತಲೆ ಹೆಲಿಕ್ಯಾಪ್ಟರ್ ಮೂಲಕ ಹೂ ಮಳೆ ಕರೆಯಿಸಿಕೊಳ್ಳುವ ಉಮೇದಿನಲ್ಲಿ ತೇಲಿ ಹೋಗುತ್ತಿದ್ದಾರೆ.


ಜಾತಿಗಳನ್ನು ಮೀರಿ ತಾತ್ವಿಕ ನೆಲಗಟ್ಟಿನ ಮೇಲೆ ರೂಪಿತವಾದ ಲಿಂಗಾಯತ ಸಮಾಜದ ಮಠಾಧೀಶರು ಮತ್ತೆ ಮತ್ತೆ ಜಾತಿಗೆ ಜೋತುಬಿದ್ದು ಲಿಂಗಾಯತ ಧರ್ಮದ ತತ್ವನ್ನು ಮರೆಯುತ್ತಿದ್ದಾರೆ. ಜಾತಿಯ ಕೊಚ್ಚೆಯಲ್ಲಿ ಬಿದ್ದು ಉರುಳಾಡುತ್ತಿದ್ದಾರೆ. ಒಂದು ಗುಂಪಿನ ಹಿತಾಸಕ್ತಿಗೆ ಹೋರಾಟ ಮಾಡುತ್ತಾರೆಯೆ ಹೊರತು ಶರಣರ ಕಲ್ಪನೆಯ ಲಿಂಗಾಯತ ಹೋರಾಟಕ್ಕೆ ನಿಲ್ಲುವುದೆ ಇಲ್ಲ.

ಸೋಜಿಗದ ಸಂಗತಿಯೆಂದರೆ ಇಂಥ ಇಬ್ಬದಿತನ ಉಳ್ಳ ಮಠಾಧೀಶರೆ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಯ ಹೋರಾಟದಲ್ಲಿ ಮುಂದೆ ನಿಂತಿರುತ್ತಾರೆ. ಮಗದೊಂದು ದಿನ ಲಿಂಗಾಯತ ಧರ್ಮ ಪ್ರತ್ರ್ಯೇಕ ಧರ್ಮವಲ್ಲ ಎಂದು ಅದನ್ನು ವಿರೋಧಿಸಿದ ಪುರೋಹಿತ ಸಂಘಟನೆಯೊಂದಕ್ಕೆ ದುಡ್ಡು ಕೊಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಿರುತ್ತಾರೆ.

ಮಠಾಧೀಶರ ಇಂಥೆಲ್ಲ ಚೆಲ್ಲಾಟಕ್ಕೆ ಮುಖ್ಯ ಕಾರಣ, ಜಾಗೃತಗೊಂಡ ಬಸವ ಭಕ್ತರಾರು ಇವರನ್ನು ತರುಬಿ ಕೇಳುತ್ತಿಲ್ಲ ಎಂಬುದಾಗಿದೆ. ಯಾರಾದರೂ ಮಠಾಧೀಶರೆ ನಿಮ್ಮ ನಡೆ ಸರಿಯಿಲ್ಲ ಎಂದು ಹೇಳಿಬಿಟ್ಟರೆ ಸಾಕು, ಅವರ ಮೇಲೆ ಕೇಸ್‍ಗಳನ್ನು ದಾಖಲಾಗುವಂತೆ ನೋಡಿಕೊಂಡು, ಹುಂಬ ಭಕ್ತರನ್ನು ಅವರ ಮೇಲೆ ಛೂ ಬಿಡುವ ತಂತ್ರ ಅನುಸರಿಸುತ್ತಿದ್ದಾರೆ.

ಲಿಂಗಾಯತವೆಂದರೆ ಅದು ಹತ್ತು ಹಲವು ಜನಗಳು ಕೂಡಿ ಕಟ್ಟಿದ ಸಂಘಟನೆ. ಕುಲಗೆಡಿಸಿ ಬಸವಯ್ಯ ಕಲಕು ಮಾಡಿದ ನಾಡ. ಚಿಲಕ ಮುರಿದಂಗ್ಹ ಬಾಗಿಲಕ. ಮಲಕ ಮುರಿದ್ಹಂಗ ಅರಮನೆಯ ಎಂದು ಜಾನಪದರು ಹೇಳುವಂತೆ ಕುಲಗೆಟ್ಟವರ ಗುಂಪು. ಆದರೆ ಅದೆ ಜನಾಂಗ ಇಂದು ನಾವೇ ಮೇಲು ಎಂದು ಹೇಳ ಹೊರಟಿರುವುದು, ದುರಂತವೆನ್ನದೆ ವಿಧಿಯಿಲ್ಲ.

ಲಿಂಗಾಯತ ಮಠಾಧೀಶರು ಒಂದು ಸಂದರ್ಭದಲ್ಲಿ ಸಮಾಜಕ್ಕೆ ಅನ್ನ ಅಕ್ಷರಗಳನ್ನು ಕೊಟ್ಟರು ಇದೆನೋ ಸರಿ. ಆದರೆ ಆ ಅನ್ನ ಅಕ್ಷರದ ಜೊತೆಗೆ ವಿದ್ಯೆ ಬುದ್ಧಿಯನ್ನು ಕೊಡದೆ ಹೋದರೆ , ಹೇಗೆ? ಜನನ ಗಮನ ಮರಣ ಮೀರಿ , ಸಮಾಜಕ್ಕೆ ಅರ್ಪಣೆಗೊಂಡವರು ಜಂಗಮರು ಎಂದು ಅಂದಿನ ಶರಣರೇನೋ ಕರೆದರು. ಆದರೆ ಇಂದು ಆಗುತ್ತಿರುವುದೇನು ?

ಪದಗಳ ಅರ್ಥವನ್ನು ಸರಿಯಾಗಿ ತಿಳಿಸದೆ ತಮ್ಮ ಅನುಕೂಲಕ್ಕೆ ತಕ್ಕಂತೆ ತತ್ವಗಳನ್ನು ತಿಳಿ ಹೇಳಿ ಇಡಿ ಲಿಂಗಾಯತ ಸಮುದಾಯವನ್ನು ಹಳ್ಳಕ್ಕೆ ದೂಡುತ್ತಿದ್ದಾರೆ.

ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ
ಧರೆ ಹತ್ತಿ ಹುರಿದೊಡೆ ನಿಲಬಹುದೆ ?
ಏರಿ ನೀರುಂಬಡೆ,ಬೇಲಿ ಕೇಯ ಮೇವೊಡೆ
ನಾರಿ ತನ್ನ ಮನೆಯಲ್ಲಿ ಕಳವೊಡೆ
ತಾಯಿಯ ಮೊಲೆ ಹಾಲು ನಂಜಾಗಿ
ಕೊಲುವಡೆ ಇನ್ನಾರಿಗೆ ದೂರುವೆ ತಂದೆ
ಕೂಡಲಸಂಗಮದೇವಾ

0 ವಿಶ್ವಾರಾಧ್ಯ ಸತ್ಯಂಪೇಟೆ

6 thoughts on “ತತ್ವಗಳಿಗೆ ಬದ್ಧರಾಗದ ಮಠಾಧೀಶರೂ , ಬಸವ ತತ್ವವೂ

  1. ಅತ್ಯಂತ ಮಾರ್ಮಿಕ ಲೇಖನ.ಶಾಲಾ ಕಾಲೇಜುಗಳನ್ನು ನಡೆಸುವುದೇ ಮಠಾಧೀಶರ ಕಾಯಕವಾಗಿದೆ.ಭಕ್ತರಿಗೆ ಧಾರ್ಮಿಕ ಸಂಸ್ಕಾರವನ್ನು ನೀಡದೇ ಇರುವುದರಿಂದ ಅವರಲ್ಲಿ ಧರ್ಮನಿಷ್ಠೆ ಇಲ್ಲವಾಗಿದೆ.

  2. ಜಾತಿಯ ಹೆಸರಿನಲ್ಲಿ ಮೀಸಲಾತಿ ಬೇಡಿ ಬೀದಿಗಿಳಿದು ನಡೆದ ಲಿಂಗಾಯತ ಧರ್ಮದ ಬಹು ಸಂಖ್ಯೆಯಲ್ಲಿನ ಜನರು ಮತ್ತು ಸ್ವಾಮಿಗಳು ‘ಲಿಂಗಾಯತ’ ಒಟ್ಟಂದದ ಶರಣರ ಆಶಯವನ್ನು ಧಿಕ್ಕರಿಸಿ ನಡೆದಂತೆ ಅಲ್ಲವೇ ಸಹೋದರ? ಲೇಖನ ತುಂಬಾ ಚೆನ್ನಾಗಿ ಬರೆದಿದ್ದೀರಿ. ಅಭಿನಂದನೆಗಳು. ಶರಣು ಶರಣಾರ್ಥಿಗಳು.

  3. ಬಸವಾದಿ ಶರಣರು ಕಿತ್ತೊಗೆದ ಜಾತಿ ಸಂಕೋಲೆಯನ್ನು ಆಚರಣೆ ತರದ ಇಂದಿನ ಸ್ವಾಮಿಗಳು ಬಸವ ತತ್ವ ಮಹಾ ದಂಡನಾಯಕರೆಂದು ಸ್ವಯಂ ಘೋಷಿಸಿಕೊಂಡು ಪ್ರಗತಿಪರರು ಅಂತ ಪೋಜ್ ಕೊಟ್ಟು ಮೆರೆಯುತ್ತ ಜಾತಿಗೊಂದು ಮಠ ಪೀಠ ಗಳನ್ನು ಮಾಡಿ ಜಾತಿ ವಿಷಬೀಜ ಹೆಮ್ಮರವಾಗಿ ಬೆಳೆಯುವಂತೆ. ಮಾಡುತ್ತಿರುವುದು ಹಾಗೂ ಬಸವಾದಿ ಶರಣರ ಆಶಯಕ್ಕೆ ವಿರುದ್ಧವಾಗಿ ನೆಡೆದುಕೊಳ್ಳುತ್ತಿರುವುದು ವಿಷಾದನೀಯ ಮತ್ತು ಇದು ದುರಂತ.

  4. ಬಹತೇಕ ಮಠ ಪೀಠಾಧಿಪತಿಗಳು ಮುಗ್ಧ ಭಕ್ತರಲ್ಲಿ ಮೌಢ್ಯ ಬೆಳೆಸಿ, ಧರ್ಮ ತತ್ವ ಗಳ ಆಳವಾದ ಅಧ್ಯಯನ ಮಾಡದೆ, ಆಚರಿಸದೆ ಆಡಂಬರಕ್ಕೆ ಮಾರುಹೋಗಿ, ವಿಲಾಸದಲ್ಲಿ ಸಂಸಾರಿಗಳನ್ನು ಮೀರಿಸಿರುವುದು ಬಟಾಬಯಲಾಗುತ್ತಿದೆ. ಒಂದು ಸೋಜಿಗದ ಸಂಗತಿ ಏನೆಂದರೆ, ಚಿತ್ರದುರ್ಗದ ಶಿವಮೂರ್ತಿ ಮುರುಘಾ ಸ್ವಾಮಿಗಳ ಆರೋಪ ಕುರಿತು ಯಾವ ಮಠಾಧೀಶರು ಇಲ್ಲಿಯವರೆಗೆ ಪ್ರತಿಕ್ರಿಯಿಸಿಲ್ಲ.

  5. ನಿಮ್ಮ ಮಾತುಗಳು ಸರಿ ಆದರೆ ಈ ನಿಬಂಧನೆಗಳು ಕೇವಲ ಮಠಾಧೀಶರಿಗೆ ಮಾತ್ರ ಸೀಮಿತವಲ್ಲ.ಜೊತೆಗೆ ಬಸವ ಭಕ್ತರು ತತ್ವ ನಿಸ್ಟರಾಗದೆ ವ್ಯಕ್ತಿ ನಿಷ್ಠರಾಗಿ ಇವೆಲ್ಲ ಅವಂತರಗಳಿಗೆ ಕಾರಣರಾಗಿದ್ದಾರೆ. ಒಬ್ಬ ವ್ಯಕ್ತಿ ಘೋರ ತರ ಅಪರಾ ಧ ಮಾಡಿರುವರೆಂಬ ಆರೋಪ ಬಂದಿದ್ದರೂ ಅದು ಸೂಕ್ತ ತನಿಖೆ ಆಗಬೇಕು ಎಂದು ಹೇಳಲು ಹಿಂದೆ ಮುಂದು ನೋಡುತ್ತಾರೆ,ಬದಲಿಗೆ ಇದೊಂದು ಷಡ್ಯಂತ್ರ ಎಂದು ರಾಜ ಕಾರಿಣಿ ಗಳಂತೆ ಹೇಳಿಕೆ ಕೊಟ್ಟು ಅಂತಹ ಕೃತ್ಯಗಳಿಗೆ ಅಪರೋಕ್ಷ ಪ್ರೋತ್ಸಾಹ ನೀಡುವುದು ಯಾವ ಸೀಮೆಯ ನಡೆ. ?ಇದನ್ನು ಬಸವ ತಂದೆ ಮೆಚ್ಚುವರೆ?
    ಎಲ್ಲಿಯವರೆಗೆ ಬಸವ ಭಕ್ತರಲ್ಲಿ ಅಸತ್ಯವನ್ನು ಅಲ್ಲಗಳೆಯುವ ಆತ್ಮ ಬಲ ವೃದ್ಧಿಯಾಗುವ ದಿಲ್ಲವೋ ಅಲ್ಲಿಯವರೆಗೆ ಈ ಅಪಚಾರ ನಡೆಯುತ್ತಲೇ ಇರುತ್ತವೆ.

Leave a Reply

Your email address will not be published. Required fields are marked *

error: Content is protected !!