ಪಂಚಮಸಾಲಿ ಮೀಸಲಾತಿ ಹೋರಾಟ ರಂಭಾಪುರಿ ಶ್ರೀಗಳಿಗೆ ಕಳವಳ ?!

ಒಣ ಪ್ರತಿಷ್ಠೆಗಳನ್ನು ಬಿಡಿರಿ,ಬಸವಮಾರ್ಗಕ್ಕೆ ಬನ್ನಿ

ಬಾಳೆಹೊನ್ನುರಿನ ರಂಭಾಪುರಿ ಪೀಠದ ಜ. ವೀರಸೋಮೇಶ್ವರ ಶಿವಾಚಾರ್ಯರು ಜಾತಿ ಆಧಾರಿತ ಮೀಸಲಾತಿ ಸರಿಯಲ್ಲ ಎಂದು ಪತ್ರಿಕಾ ಹೇಳಿಕೆ ಪ್ರಕಟವಾಗಿದ್ದನ್ನು ನೋಡಿದೆ. ಜನರ ನೆನಪಿನ ಶಕ್ತಿ ಬಹಳವಿಲ್ಲವೆನ್ನುವುದೋನೋ ಗೊತ್ತು. ಆದರೆ ಎಲ್ಲವನ್ನೂ ಮರೆಯುತ್ತಾರೆ ಎಂದು ಭ್ರಮಿಸುವುದು ಮೂರ್ಖತನವಾಗುತ್ತದೆ. ಹಿಂದೊಮ್ಮೆ ಕರ್ನಾಟಕದ ಪಂಚಮಸಾಲಿ ಜನಾಂಗ ಈ ಪಲ್ಲಕ್ಕಿಯ ಮಠಾಧೀಶರನ್ನು ಹೊತ್ತುಕೊಂಡು ಮೆರೆದುದು ಇತಿಹಾಸ. ಈಗವರಿಗೆ ಪ್ರಜ್ಞೆ ಬಂದು ತಮ್ಮ ಪಂಚಮಸಾಲಿ ಸ್ವತಂತ್ರ ಪೀಠವನ್ನು ಕಟ್ಟಿಕೊಂಡಿದ್ದಾರೆ. ಆ ಪೀಠಕ್ಕೆ ಒಬ್ಬ ಸ್ವತಂತ್ರ ಜಗದ್ಗುರುವನ್ನೂ ಮಾಡಿಕೊಂಡಿದ್ದಾರೆ. ಅಸಲಿಗೆ ರಂಭಾಪುರಿ ಶ್ರೀಗಳಿಗೆ ಕಳವಳ ಇಟ್ಟುಕೊಂಡದ್ದೆ ಇದು ಎಂದು ಇಲ್ಲಿ ವಿಧಿಯಿಲ್ಲದೆ ಹೇಳಬೇಕಾಗಿದೆ.

ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ತಮ್ಮ ಭಕ್ತರಿಂದ ಜಯಘೋಷಗಳನ್ನು ಮೊಳಗಿಸಿಕೊಳ್ಳುವ ರಂಭಾಪುರಿ ಶ್ರೀಗಳು ತಾವು ಕುಳಿತ ಪಲ್ಲಕ್ಕಿಯನ್ನು ಹೊರುವವರು ಮಾನವರು ಎಂದು ತಿಳಿದುಕೊಂಡಿದ್ದಾರೆಯೆ ? ಮಾನವ ಧರ್ಮಕ್ಕೆ ಜಯವಾಗಬೇಕಾದರೆ ಮೊದಲು ಮನುಷ್ಯರೆಲ್ಲರೂ ಒಂದೆ ಎಂಬ ಭಾವವನ್ನು ಅರಿತುಕೊಳ್ಳಬೇಕು. ಎಲ್ಲರೊಳಗೂ ಆ ಶಿವನ ಚೈತನ್ಯವಿದೆ ಎಂದು ಅರಿಯಬೇಕು. ಯಾರು ಯಾರಿಗೂ ಮೋಸ ವಂಚನೆ ಮಾಡಬಾರದು. ಯಾರನ್ನೂ ಯಾವ ಕಾರಣಕ್ಕೂ ಶೋಷಣೆ ಮಾಡಬಾರದು. ಆಗ ಮಾತ್ರ ಮಾನವ ಧರ್ಮಕ್ಕೆ ಜಯವಾಗಲು ಸಾಧ್ಯ. ಆದರೆ ರಂಭಾಪುರಿ ಶ್ರೀಗಳು ತಾವು ಪಲ್ಲಕ್ಕಿಯ ಮೇಲೆ ಕುಳಿತು ಜನರ ಹೆಗಲ ಮೇಲೆ ಹೋಗುವಾಗ ಯಾವ ಮನುಷ್ಯರಿಗೆ ಜಯವಾಗಲು ಸಾಧ್ಯ ?

ತತ್ವ ಸಿದ್ಧಾಂತ ಧರ್ಮವೆಂದರೆ ಏನೆಂದು ಅರಿಯದ ಮುಗ್ಧ ಜನಗಳು ರಂಭಾಪುರಿ ಶ್ರೀಗಳನ್ನು ಅಡ್ಡ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಹೋಗುತ್ತೇವೆ ಎಂದು ಒತ್ತಾಯವೂ ಮಾಡಬಹುದು. ಆದರೆ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿಸುವ ಶ್ರೀಗಳಾದರೂ ಈ ಬಗ್ಗೆ ಆಲೋಚಿಸಬೇಡವೆ ? ಯಾರನ್ನೋ ಹೊತ್ತುಕೊಂಡು ಹೋಗುವುದರಿಂದ ಪುಣ್ಯ ಬರುವುದೆ ಆಗಿದ್ದರೆ ನಮ್ಮನ್ನು ನಿತ್ಯ ಹೊತ್ತುಕೊಂಡು ಹೋಗುವ ಬಸ್, ಲಾರಿ, ಕಾರು, ರೈಲು, ವಿಮಾನಗಳು ಎಷ್ಟೇಷ್ಟು ಕೋಟಿ ಪುಣ್ಯಗಳಿಸಿರಬೇಕು ? ಈ ಬಗ್ಗೆ ಜನ ಸಾಮಾನ್ಯರು ಕೂಡ ಮುಕ್ತವಾಗಿ ಆಲೋಚಿಸಬೇಕಾದ ಸಂದರ್ಭ ಬಂದೊದಗಿದೆ.

ಇದೆಲ್ಲ ಒತ್ತಟ್ಟಿಗಿರಲಿ :

ಹಿಂದೆ ಅಟಲಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ರಾಜ್ಯದ ಜಂಗಮರಿಗೆ ಬೇಡ ಜಂಗಮ ಸರ್ಟಿಫಿಕೇಟ್ ನೀಡಿ ಎಂದು ಪತ್ರ ಬರೆದುದು , ಈಗ ಅದನ್ನು ಮರೆತವರಂತೆ ಆಟವಾಡುವುದು ಸರಿಯೆ ? ಆಗ ನೀವು ಜಾತಿ ಆಧಾರಿತ ಮೀಸಲಾತಿ ಕೇಳಿರಲಿಲ್ಲವೆ ? ಈಗಲೂ ಅದಕ್ಕೆ ಒಳಗೊಳಗೆ, ಅಲ್ಲಲ್ಲ ಬಹಿರಂಗವಾಗಿ ವಾದಿಸುತ್ತಿರುವುದು ಸುಳ್ಳೆ.

ನಿಮಗೆ ಎಷ್ಟು ಗೊತ್ತೋ ಏನೋ ? ಆದರೆ ಲಿಂಗಾಯತರಲ್ಲಿಯ ಜಂಗಮರ ಆರ್ಥಿಕ ಸ್ಥಿತಿ ಅಷ್ಟೇನು ಚೆನ್ನಾಗಿಲ್ಲ. ಸಾಮಾಜಿಕವಾಗಿ , ಧಾರ್ಮಿಕವಾಗಿ ಅವರಿಗೆ ಮನ್ನಣೆಯೊಂದನ್ನು ಬಿಟ್ಟರೆ ಬೇರೇನೂ ಸಿಕ್ಕಿಲ್ಲ. ಅವರಿಗೆ ಸಾಂವಿಧಾನಿಕವಾಗಿ ಮೀಸಲಾತಿ ಸಿಕ್ಕಲೆಬೇಕು ಇದರಲ್ಲಿ ಎರಡು ಮಾತಿಲ್ಲ. ಆದರೆ ಬುಡ್ಗ ಜಂಗಮ, ಬೇಡ ಜಂಗಮರ ಹೆಸರಿನಲ್ಲಿ ಲಿಂಗಾಯತ ಧರ್ಮದ ಜಂಗಮರು ಮೀಸಲಾತಿ ಕೇಳುವುದು ಎಷ್ಟು ಸರಿ ? ಎಂಬ ಬಗ್ಗೆ ನನ್ನಲ್ಲಿ ತಕರಾರುಗಳಿವೆ. ಈಗಾಗಲೇ ಬುಡ್ಗ ಜಂಗಮರು, ಬೇಡ ಜಂಗಮರು ಯಾರು ಎಂದು ಜನ ಸಾಮಾನ್ಯರಿಗೂ ಗೊತ್ತಿದೆ. ಸರಕಾರಕ್ಕೂ ಗೊತ್ತಿದೆ. ನಮ್ಮದಲ್ಲದ ತಟ್ಟೆಯ ಅನ್ನಕ್ಕೆ ನಾವೇ ಹಕ್ಕುದಾರರು ಎಂದು ಹೊರಡುವುದು ಎಷ್ಟು ಸರಿ ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಅಲ್ಲವೆ ?

ನಿನ್ನೆ ದಿನಾಂಕ : 7/2/2021 ರಂದು ಬಸವ ಕಲ್ಯಾಣದಲ್ಲಿ ಬೇಡ ಜಂಗಮರ ಹೆಸರಿನ ಬಹುದೊಡ್ಡ ಸಮಾವೇಶವೊಂದು ನಡೆಯಿತು. ತೀರಾ ಇತ್ತೀಚೆಗೆ ನಿಡುಮಾಮಿಡಿ ಪೀಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಯವರು ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ರಾಜ್ಯದಲ್ಲಿರುವ ಜಂಗಮರಿಗೆ ಬೇಡ ಜಂಗಮ ಸರ್ಟಿಫಿಕೇಟ್ ನೀಡಬೇಕೆಂದು ಮನವಿ ಕೂಡ ಸಲ್ಲಿಸಿದರು. ಇದು ತಮ್ಮ ಗಮನಕ್ಕೆ ಇಲ್ಲವೆ ? ತಮ್ಮ ಮೂಗಿನ ಕೆಳಗೆ ನಡೆದಿರುವ ಈ ಎಲ್ಲಾ ಚಟುವಟಿಕೆಗಳಲಿ ನೀರೆರೆದು ಪೋಷಿಸಿ, ಮತ್ತೊಬ್ಬರು ತಮ್ಮ ಹಕ್ಕುಗಳ ಕುರಿತು ಹೋರಾಟ ಮಾಡುವಾಗ ಅದರ ಕುರಿತು ಕ್ಯಾತೆ ತೆಗೆಯುವುದು ಎಷ್ಟು ಸರಿ, ಶ್ರೀಗಳೆ ?

ಪಂಚಮಸಾಲಿ ಜನಾಂಗಕ್ಕಿಂತಲೂ ಹತ್ತು ಪಟ್ಟು ಆರ್ಥಿಕವಾಗಿ ಹಿಂದುಳಿದ ಪಂಗಡಗಳು ಇವೆ. ಅವರಿಗೂ ಸಾಮಾಜಿಕವಾದ ನ್ಯಾಯ ಸಿಗಬೇಕಾಗಿದೆ. ಆದರೆ ಆ ಜನಾಂಗದಲ್ಲಿ ಹೋರಾಟ ಮಾಡಿ ತಮ್ಮ ಹಕ್ಕುಗಳನ್ನು ಪಡೆಯುವ ಅರಿವು ಸಂಘಟನೆ ಹೋರಾಟಗಳಿಲ್ಲದೆ ದೈವೇಚ್ಚೆ ಎಂದು ತೆಪ್ಪಗೆ ಕುಳಿತಕೊಂಡಿವೆ. ಹಾಗಂತ ಪಂಚಮಸಾಲಿ ಜನಾಂಗದ ಶ್ರೀ. ಜಯಮೃತ್ಯುಂಜಯ ನೇತೃತ್ವದಲ್ಲಿ ಪಾದಯಾತ್ರೆ ಹೊರಟು ತಮ್ಮ ಬೇಡಿಕೆ ಕೇಳುವುದು ತಪ್ಪೆಂದು ವಾದಿಸಿದ ನಿಮ್ಮ ಸಣ್ಣತನವನ್ನು ವಿನಮ್ರವಾಗಿಯೆ ತಿರಸ್ಕರಿಸಬೇಕಾಗುತ್ತದೆ.

ಪೂಜ್ಯರೆ , ತಮಗೂ ಗೊತ್ತಿದೆ. ಲಿಂಗಾಯತವೆಂಬುದೆ ಹಲವಾರು ಜಾತಿ ಜನಾಂಗವನ್ನು ಮುರಿದು ಕಟ್ಟಿದ ಧರ್ಮ. ಇಲ್ಲಿ ಕಮ್ಮಾರ, ಬೇಡ, ಕುರುಬ, ನೊಣಬ, ಸಾಧು, ಬಣಜಿಗ, ಒಕ್ಕಲಿಗ, ಮಡಿವಾಳ, ಅಂಬಿಗ, ಹಡಪದ, ಪಂಚಮಸಾಲಿ, ಬಣಜಿಗ, ಮಾದಿಗ, ಗಾಣಿಗ ಹೀಗೆ ಹಲವು ಹತ್ತು ಸಂಕುಲಗಳಿವೆ. ಇವರೆಲ್ಲ ಜೊತೆ ಸೇರಿ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆಯ ಹೋರಾಟ ನಡೆದಾಗ ಧರ್ಮವೆ ಒಡೆದು ಚೂರು ಚೂರಾಯಿತು ಎಂದು ಅಲವತ್ತುಕೊಂಡಿರಿ.

ಸ್ವಪ್ರತಿಷ್ಠೆಗಾಗಿ ಲಿಂಗಾಯತ ಧರ್ಮದ ಅಲ್ಪ ಸಂಖ್ಯಾತ ಮಾನ್ಯತೆ ತೊಡರುಗಾಲು ಹಾಕಿಕುಳಿತು. ಈಗ ಜಾತಿ ಜಂಗಮರು ನಾವು ಬುಡ್ಗ ಜಂಗಮರು, ಮಾಲಾ ಜಂಗಮರು, ಬೇಡುವ ಜಂಗಮರು ಎಂದು ಮೀಸಲಾತಿ ಕೇಳಲು ಹೊರಟಾಗ ಧರ್ಮ ಒಡೆಯಲಿಲ್ಲವೆ ಶ್ರೀಗಳೆ ?

ದಯವಿಟ್ಟು ಇವೆಲ್ಲ ಒಣ ಪ್ರತಿಷ್ಠೆಗಳನ್ನು ಬಿಡಿರಿ. ಪೀಠ ಪರಂಪರೆ ಇತ್ಯಾದಿ ಸವಕಲು ಮಾತು ಸಾಕು. ಎಲ್ಲರ ಒಳಿತಿಗೆ ಅಂದರೆ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಘೋಷ ವಾಕ್ಯ ನಿಜ ಮಾಡಬೇಕೆಂದರೆ ನಿಮ್ನ ವರ್ಗದ ಜನಗಳ ನೋವಿಗೆ ಮಿಡಿಯುವ ಪ್ರಾಣ ಮಿತ್ರರಾಗಿರಿ. ಉಳಿದಿರುವ ಜೀವನವನ್ನು ಮುಕ್ತವಾಗಿ ಎಲ್ಲರೊಂದಿಗೆ ಬೆರೆತು ಕಳೆಯಿರಿ. ಬೆರಕಿತನ ಬೇಡ. ವಿಶ್ವ ಮಾನವ ಬಸವಣ್ಣನವರನ್ನು ಇಡಿ ಜಗತ್ತೆ ಒಪ್ಪಿಕೊಂಡಿರುವಾಗ ನೀವು ನಿರಾಕರಿಸಿ ದೂರ ನಿಲ್ಲಬೇಡಿ. ಅದು ನಿಮ್ಮ ಸಣ್ಣತನವಾಗುತದಷ್ಟೆ.

ಬಸವಮಾರ್ಗಕ್ಕೆ ಬನ್ನಿ. ಎಲ್ಲರನ್ನೂ ಇವನಾರವನೆನ್ನದೆ, ಇವ ನಮ್ಮವ ಎಂಬ ಭಾವಗಳನ್ನು ಇಟ್ಟುಕೊಂಡು ತಬ್ಬಿಕೊಳ್ಳಿ. ಇಡೀ ಲಿಂಗಾಯತ ಸಮುದಾಯ ನಿಮ್ಮ ಜೊತೆಗೆ ಇರುತ್ತದೆ.

0 ವಿಶ್ವಾರಾಧ್ಯ ಸತ್ಯಂಪೇಟೆ

4 thoughts on “ಪಂಚಮಸಾಲಿ ಮೀಸಲಾತಿ ಹೋರಾಟ ರಂಭಾಪುರಿ ಶ್ರೀಗಳಿಗೆ ಕಳವಳ ?!

 1. ಮೂರಸಾವಿರ ಮಠದಾಗ ಇರೂತನಕಾ ಬಸವಣ್ಣನೇ ನಮ್ಮತಾಯಿತಂದೆ ಅನತಿದ್ದವರು ರಂಭಾಪುರೀಗೆ ಹೋದಕೂಡಲೇ ಬಸವಣ್ಣನ ವಿರೋಧಿಗಳಾಗಿದ್ದು ನಾಚಿಕೆಗೇಡಿತನ.

  ಮೂಲತಃ ಆಂಧ್ರದ ಆರಾಧ್ಯ ಶೈವ ಬ್ರಾಹ್ಣರು ಈ ಪಂಚಪೀಠದವರು. ಮಾಗಡಿ ತಾಲೂಕಿನ ವೀರಭದ್ರ ದೇವಸ್ಥಾನದಲ್ಲಿರುವ ವಿಗ್ರಹವನ್ನು ಕುತೂಹಲಕ್ಕೆನೋಡಿದರ ಅದಕ್ಕೆ ಜನಿವಾರನೂ ಇದೆ. ಲಿಂಗವೂ ಇದೆ.

  ಒಂದೋ ಇವರು ಜನಿವಾರ ಬಿಡಲಿ ಇಲ್ಲಾ ಲಿಂಗವನ್ನು ಬಿಡಲಿ. ಎರಡೂ ಹಾಕ್ಕೊಂಡ ಇಬ್ಬರ ಗಂಡಂದಿರಿಗೆ ಹೆಂಡತಿ ಆಗೋದ ಬೇಡಾ.

  1. ಸರ್ ಮೊದಲು ಈವರು ಹುಬ್ಬಳ್ಳಿ ಯಲ್ಲಿ ಇದ್ದರ
   ಈವಗ ಬಸವಣ್ಣನ ವಿರೋಧಿ ನಾ ಇವರು ರಂಭಾಪುರಿ ಗುರುಗಳಿಗೆ ಅರವತ್ತು ಹತ್ತಿರ ಇದೆ ಅರಳು ಮರಳು

 2. ನಾಲ್ಕಾರು ಮಠಾಧೀಶರನ್ನ ಹೊರತುಪಡಿಸಿದರೆ ಉಳಿದವರೆಲ್ಲ ಪೂರ್ವಾಶ್ರಮದ ಜಾತಿಗೆ ಅಂಟಿಕೊಂಡು ಬಿಟ್ಟಿದ್ದಾರೆ

Leave a Reply

Your email address will not be published. Required fields are marked *

error: Content is protected !!