ನನ್ನೆಲ್ಲ ಬರವಣಿಗೆಗೂ ದಾಖಲೆ ಇದೆ ಪ್ರೊ. ಭಗವಾನ್

ನನ್ನೆಲ್ಲ ಬರವಣಿಗೆಗೂ ದಾಖಲೆ ಇದೆ ; ನನ್ನ ಬರವಣಿಗೆ ಮೇಲೆ ಯಾರೂ ಕೇಸ್ ಹಾಕಿಲ್ಲ ! ಪ್ರೊ. ಭಗವಾನ್

ಪ್ರೊ.ಕೆ.ಎಸ್.ಭಗವಾನ್ ಹಲವರಿಗೆ ಬಿಸಿ ತುಪ್ಪ. ಚಿಂತಕರಿಗೆ ವಿವೇಚನೆ ಉಳ್ಳ ಜನರಿಗೆ ಜನ, ಮಾನಸದಲ್ಲಿ ಬಿದ್ದಿರುವ ವೈದಿಕ ಕಸ ಸುಡಬೇಕೆನ್ನುವ ಉತ್ಸಾಹ ಉಳ್ಳವರಿಗೆ ಚೈತನ್ಯದ ಚಿಲುಮೆ. ಮತ ಭ್ರಾಂತಿಯಲ್ಲಿ ಓಲಾಡುವ, ಯಾರ ವಿಚಾರಗಳನ್ನು ಕಿವಿಗೆ ಹಾಕಿಕೊಳ್ಳುವ ಮನಸ್ಥಿತಿ ಇಲ್ಲದ ಯುವಕ ಯುವತಿಯರಿಗೆ ಭಗವಾನ್ ಒಬ್ಬ ಧರ್ಮ ವಿರೋಧಿ. ತೀರಾ ಇತ್ತೀಚೆಗೆ ಮೀರಾ ರಾಘವೇಂದ್ರ ಎಂಬ ಅರೆಬೆಂದ ವಕೀಲೆ ತಮ್ಮ ವಕೀಲಿತನದ ಘನ ಗಾಂಭೀರ್ಯವನ್ನು ಮರೆತು ಅವರ ಮುಖಕ್ಕೆ ಮಸಿ ಬಳಿದದ್ದು, ಅದನ್ನು ತಾವೇ ಸ್ವತಃ ಸಮರ್ಥಿಸಿಕೊಂಡದ್ದು ನಾಡಿನ ಜನತೆ ನೋಡಿ ಆಗಿದೆ. ಪ್ರಜಾಪ್ರಭುತ್ವ ನಿಂತಿರುವುದೇ ಸಂವಿಧಾನದ ಮೇಲೆ. ಸಂವಿಧಾನದ ಆಶಯಗಳನ್ನು ಜಾರಿಗೆ ತರುವ ಜವಾಬ್ದಾರಿ ಹಾಗೂ ಹೊಣೆ ಇರುವ ವಕೀಲೆಯೇ ಪೇಲವವಾಗಿ ವರ್ತಿಸಿ ನ್ಯಾಯಾಂಗಕ್ಕೂ ಕಪ್ಪು ಮಸಿ ಬಳಿಯುವಂತಹ ಹೀನ ಕೆಲಸಕ್ಕೆ ಕೈ ಹಾಕಿದಳು.

ಈ ಸಂದರ್ಭದಲ್ಲಿಯಾದರೂ ಪ್ರೊ.ಭಗವಾನ್ ಅವರ ಚಿಂತನೆಗಳು ಕುರಿತು ನ್ಯಾಯ ಸಮ್ಮತವಾಗಿ ಮಾತನಾಡಬೇಕಿದ್ದ ದೃಶ್ಯ ಮಾಧ್ಯಮಗಳು ಪುರೋಹಿತರ ಊಳಿಗತನಕ್ಕೆ ನಿಂತುಕೊಂಡಂತೆ ವರ್ತಿಸಿದವೆ ಹೊರತು, ಅಸಲಿ ಸತ್ಯ ಏನು ? ಎಂಬುದನ್ನು ಜನ ಸಾಮಾನ್ಯರಿಗೆ ತೋರಿಸಿಕೊಡಲಿಲ್ಲ. ಬದಲಾಗಿ ತಮ್ಮ ಬ್ರಾಹ್ಮಣ್ಯವನ್ನು ಹೊಟ್ಟೆಯಲ್ಲಿಟ್ಟುಕೊಂಡು ಕೊತಕೊತನೆ ಕುದ್ದು ಹೋದವು.

ಗೂಗೆ ಕಣ್ಣ ಕಾಣಲರಿಯದೆ ರವಿಯ ಬಯ್ವದು
ಕಾಗೆ ಕಣ್ಣ ಕಾಣಲರಿಯದೆ ಶಶಿಯ ಬಯ್ವುದು.
ಕುರುಡ ಕಣ್ಣ ಕಾಣಲರಿಯದೆ ಕನ್ನಡಿಯ ಬಯ್ವನು.
ಇವರ ಮಾತೆಲ್ಲವೂ ಸಹಜವೆ
ನರಕ ಸಂಸಾರದಲ್ಲಿ ಹೊದಕುಳಿಗೊಳುತ್ತ
ಶಿವನಿಲ್ಲ ಮುಕ್ತಿಯಿಲ್ಲ, ಹುಸಿಯೆಂದಡೆ
ನರಕದಲ್ಲಿಕ್ಕದೆ ಬಿಡುವನೆ ಚೆನ್ನಮಲ್ಲಿಕಾರ್ಜುನ

ರಾಜ್ಯದ ಕೆಲವು ಕಡೆ ಭಗವಾನ್ ವಿಚಾರದ ಪರವಾದ ಅಲೆಯನ್ನು ಅವು ಗಮನಿಸಲಿಲ್ಲ. ಪ್ರೊ. ಭಗವಾನ್ ಹಾಗೂ ನನ್ನ ತಂದೆಗೂ ತುಂಬಾ ಆತ್ಮೀಯ ಸಂಬಂಧ. ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ ? ಎಂದಿದ್ದರೂ ಬೆಟ್ಟದ ನೆಲ್ಲಿಕಾಯಿ ಸಮುದ್ರ ಉಪ್ಪಿಗೂ ಇರುವ ನಂಟಿನಂತೆ ಬೆಸೆದುಕೊಂಡಿತ್ತು. ಅಪ್ಪ ಲಿಂಗಣ್ಣ ಸತ್ಯಂಪೇಟೆ ಸಂಪಾದಿಸಿ ಪ್ರಕಟಿಸುತ್ತಿದ್ದ ಬಸವಮಾರ್ಗಕ್ಕೆ, ಅಗ್ನಿ ಅಂಕುರ ಪತ್ರಿಕೆಗೆ ಲೇಖನ ಬರೆಯುತ್ತಿದ್ದರು. ಗಂಟೆಗಟ್ಟಲೆ ಮಾತನಾಡುತ್ತಿದ್ದರು. ನನ್ನ ಮನೆಯ ಪುಸ್ತಕಾಲಯದಲ್ಲಿದ್ದ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ಎಂಬ ಪುಸ್ತಕ ಓದುತ್ತ ಓದುತ್ತ ನನ್ನೊಳಗೆ ಅಡಗಿರಬಹುುದಾದ ವೈಚಾರಿಕ ಚಿಂತಕ ಇಣಕಿನೋಡಲು ಆರಂಭಿಸಿದ್ದ.

ಪ್ರೊ. ಭಗವಾನ ಅವರೊಂದಿಗೆ ಬಸವಮಾರ್ಗ ನಡೆಸಿದ ಸಂದರ್ಶನವನ್ನು ನಿಮ್ಮ ಅವಗಾಹನೆಗೆ ಹಾಗೂ ಮುಕ್ತವಾದ ಚರ್ಚೆಗೆ ನಾನಿಲ್ಲಿ ಸಂಗ್ರಹಿಸಿ ಕೊಟ್ಟಿದ್ದೇನೆ.

ಸತ್ಯಂಪೇಟೆ : ನಿಮ್ಮನ್ನು ವಿವಾದಾತ್ಮಕ ಲೇಖಕ ಎಂದು ಮಾಧ್ಯಮಗಳು ಹೇಳುತ್ತವಲ್ಲ ಯಾಕೆ ?

ಭಗವಾನ್ : ಕೆಲವು ಮಾಧ್ಯಮಗಳು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಉದ್ದೇಶ ಪೂರ್ವಕವಾಗಿ ತಪ್ಪು ತಪ್ಪು ವರದಿ ಮಾಡುತ್ತವೆ. ಇಂಥ ವರದಿಯ ಹಿಂದಿನ ಉದ್ದೇಶ ಜನ ನನ್ನ ಬಗ್ಗೆ ಕೆಟ್ಟ ಭಾವನೆಗಳನ್ನು ಬೆಳೆಸಿಕೊಳ್ಳಲಿ, ನನ್ನ ವಿರುದ್ಧ ಗುಂಪು ಕಟ್ಟಿಕೊಳ್ಳಲಿ , ಹೋರಾಟ ಮಾಡಲಿ ಎಂಬ ಕೆಟ್ಟ ಆಲೋಚನೆ ಅವರಲ್ಲಿರುವಂತೆ ಕಾಣುತ್ತದೆ.\

ಸತ್ಯಂಪೇಟೆ : ನಿಮ್ಮ ಬಗ್ಗೆ ಜನ ಮಾನಸದಲ್ಲಿ ಕೆಟ್ಟ ಆಲೋಚನೆ ಬರುವಂತೆ ಮಾಡುವ ಮಾಧ್ಯಮಗಳ ಹುನ್ನಾರದ ಹಿಂದೆ ಇರಬಹುದಾದ ಉದ್ದೇಶವಾದರೂ ಏನಿರಬಹುದು ?

ಭಗವಾನ್ : ಯಾವುದನ್ನು ಅವರು ಧರ್ಮ ಅಂತ ತಿಳಿದುಕೊಂಡಿದ್ದಾರೋ, ಆ ಧರ್ಮ ಸಾಮಾನ್ಯ ಜನರಿಗೆ, ಅಂದ್ರೆ ದುಡಿಯುವ ಜನರಿಗೆ ವಿರುದ್ಧವಾಗಿದೆ. ಅವರನ್ನು ಅವರು ಶೂದ್ರ ಅಂತ ಕರೆದರು. ಶೂದ್ರ ಎಂಬ ಪದ ತುಂಬಾ ಅವಮಾನಕರವಾದುದು. ಏಕೆಂದರೆ ಮನು ಸ್ಮೃತಿ ಯಲ್ಲಿ ದಾಸ್ಯಂ ಶೂದ್ರಂ ದ್ವಿಜನಃ, ಅಂದ್ರೆ ಎಲ್ಲಾ ಶೂದ್ರರು ಬ್ರಾಹ್ಮಣರ ಗುಲಾಮರು ಅಂತ ಅವರು ಹೇಳ್ತಾರೆ. ಇದನ್ನು ನಾವುಗಳೆಲ್ಲ ಗೌರವಯುತವಾದುದು ಅಂತ ಭಾವಿಸಬೇಕೆ ? ಅದು ಅವರಿಗೆ ಅರ್ಥವಾಗಬೇಕು.

ಸತ್ಯಂಪೇಟೆ : ತಾವು ಯಾರ ಬಗ್ಗೆ ಕಾಳಜಿಗಳನ್ನಿಟ್ಟುಕೊಂಡು ಹೇಳಲು ಬಯಸುತ್ತೀರೋ ಆ ಜನಾಂಗವೆ ನಿಮ್ಮ ವಿರುದ್ಧ ಪ್ರತಿಭಟಿಸುತ್ತಿದ್ದಾರಲ್ಲ ?!

ಭಗವಾನ್ : ಅವರಿಗೆ ಇತಿಹಾಸ ಏನು ಎಂಬುದು ಸಧ್ಯ ಗೊತ್ತಿಲ್ಲ. ಗೊತ್ತಿಲ್ಲದಿರುವ ಜನರಿಗೆ ನಾವು ಬಿಡಿಸಿ ಹೇಳಬೇಕಿದೆ. ನಮ್ಮ ಜನ ಒಗ್ಗಟ್ಟಾಗಿಲ್ಲ, ಪ್ರಜ್ಞಾವಂತರಾಗಿಲ್ಲ. ಪಟ್ಟಭದ್ರಶಕ್ತಿಗಳ ಕುತಂತ್ರಗಳೆಲ್ಲ ಅವರಿಗೆ ತಿಳಿದರೆ ಖಂಡಿತವಾಗಿಯೂ ಅವರು ವಿಚಾರಗಳ ಪರವಾಗಿ ಇರ್ತಾರೆ.

ಸತ್ಯಂಪೇಟೆ : ಜನರಿಗೆ ಸರಿಯಾದ ಇತಿಹಾಸ ಗೊತ್ತಿಲ್ಲ, ಪಟ್ಟಭದ್ರರು ಈ ಜನಗಳನ್ನು ಇಟ್ಟುಕೊಂಡು ಆಟ ಆಡ್ತಾರೆ. ಇಂಥ ಸಂದರ್ಭದಲ್ಲಿ ತಾವು…… ?

ಭಗವಾನ್ : ಸಂವಿಧಾನದಲ್ಲಿ 51 ಎಚ್. ಎ. ಯಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ ವಿಚಾರವಾದವನ್ನು ಹರಡುವುದು. ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು, ಸಮಾಜ ಸುಧಾರಣರೆಯನ್ನು ತರುವುದು ಮತ್ತು ಮಾನವತಾವಾದವನ್ನು ಬೆಳೆಸುವುದು ಎಂಬುದಾಗಿದೆ. ಆದ್ದರಿಂದ ನಾನು ಪ್ರಜ್ಞಾವಂತ ಪ್ರಜೆಯಾಗಿ ಸಂವಿಧಾನವೇ ನಮಗೆ ನೀಡಿದ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡು ನನ್ನ ಕೆಲಸ ನಾನು ಮಾಡುತ್ತಿರುವೆ.

ಭಗವಾನ್ : ಇಲ್ಲ, ಇದು ನನಗೆ 1982 ರಿಂದ ಇಂಥವುಗಳಿಗೆ ತುತ್ತಾಗಿದ್ದೇನೆ. “ಶಂಕರಾಚಾರ್ಯ ಮತ್ತು ಪ್ರತಿಗಾಮಿತನ “ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿದೆ. ಆಗಲೂ ಇದೆ ರೀತಿ ಹಲ್ಲೆ, ವಿರೋಧಗಳು ಬಂದ್ವು. ಆದ್ರೆ ನನ್ನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ನಾನು ಮೂಲ ಸಂಸ್ಕøತ ಬರವಣಿಗೆಯ ಉಲ್ಲೇಖ ಮತ್ತು ನನ್ನ ವ್ಯಾಖ್ಯಾನ ಕೊಟ್ಟಿದ್ದೆ. ಈಗಲೂ ನಾನು ರಾಮ ಮಂದಿರ – ಏಕೆ ಬೇಡ ? ಎಂಬ ಪುಸ್ತಕದಲ್ಲಿಯೂ ಸಹ, ಜನರು ರಾಮನ ಬಗೆಗೆ ಏನೇನೋ ಭಾವನೆ ಇಟ್ಟುಕೊಂಡಿರಬಹುದು. ಆದ್ರೆ ಮೂಲ ವಾಲ್ಮೀಕಿ ರಾಮಾಯಣದಲ್ಲಿ ಆ ರೀತಿಯ ಭಾವನೆಗಳಿಗೆ ಅವಕಾಶವಿಲ್ಲ. ಆದ್ದರಿಂದ ನಾನು ಮೂಲ ವಾಲ್ಮೀಕಿ ರಾಮಾಯಣದಲ್ಲಿನ ಶ್ಲೋಕಗಳನ್ನು, ಕಾಂಡಗಳನ್ನು ದಾಖಲೆ ಮಾಡಿ ವ್ಯಾಖ್ಯಾನ ಮಾಡಿ ಕೊಟ್ಟಿದ್ದೇನೆ. ಈಗಾಗಲೆ ಅದು ಕನ್ನಡ ಭಾಷೆಯಲ್ಲಿ ಮೂರು ಮುದ್ರಣ ಕಂಡಿದೆ. ಅಲ್ಲದೆ ಮಲಯಾಳಂ, ಮರಾಠಿ, ಇತರ ಭಾಷೆಗಳಿಗೂ ಅನುವಾದವಾಗಿದೆ.

ಸತ್ಯಂಪೇಟೆ : ನಿಮ್ಮ ಬರವಣಿಗೆ ವಿಚಾರಗಳೆಲ್ಲ ಧರ್ಮ ವಿರೋಧಿಗಳೆಂಬಂತೆ ಮಾಧ್ಯಮಗಳು ಹಾಗೂ ಕೆಲವು ಪಟ್ಟಭದ್ರರು ಸಮಾಜದಲ್ಲಿ ಬಿಂಬಿಸುತ್ತಿದ್ದಾರಲ್ಲ ?

ಭಗವಾನ್ : ಖಂಡಿತವಾಗಿಯೂ ಇಲ್ಲ. ನನ್ನ ಬರವಣಿಗೆಯ ಮೇಲೆ ಯಾರೂ ಕೇಸ್ ಹಾಕಿಲ್ಲ. ಯಾಕೆಂದರೆ ನನ್ನೆಲ್ಲ ಬರವಣಿಗೆಗೂ ದಾಖಲೆ ಇದೆ. ಹೀಗಾಗಿ ಇವತ್ತಿಗೂ ನನ್ನ ಬರವಣಿಗೆಗೆ ಯಾವ ಆಧಾರವಿಲ್ಲ ಎಂದು ಕೇಸ್ ಹಾಕಿಲ್ಲ. ನಾನು ಯಾವ ಧರ್ಮದ ವಿರೋಧಿಯೂ ಅಲ್ಲ. ಮತಗಳನ್ನು ಖಂಡಿಸಿದ್ದೇನೇ ಹೊರತು ಧರ್ಮವನಲ್ಲ.

ಸತ್ಯಂಪೇಟೆ : ಪದೆ ಪದೆ ನಿಮ್ಮನ್ನು ಗುರಿಯಾಗಿಟ್ಟುಕೊಂಡು ಪಟ್ಟಭದ್ರರು ಸಂಘಟಿತ ಹೋರಾಟಕ್ಕೆ ನಿಲ್ಲುತ್ತಾರಲ್ಲ, ಇದರಿಂದ ನಿಮಗೆ ಮಾನಸಿಕವಾಗಿ ಕಿರುಕುಳವಾಗಿಲ್ಲವೆ ?


ಇವತ್ತಿಗೂ ಈ ಕೃತಿಯ ತಪ್ಪುಗಳ ಕುರಿತು ಖಚಿತವಾಗಿ ಯಾರೊಬ್ಬರೂ ಹೇಳಿಲ್ಲ. ಆದ್ರೆ ಜನರಿಗೆ ಮನರಂಜನೆ ಒದಗಿಸಲೋ ಅಥವಾ ತಮ್ಮ ಬಾಯಿ ಚಟಕ್ಕೊ ಸುಖಾ ಸುಮ್ಮನೆ ಸಮಾಜದಲ್ಲಿ ಗೊಂದಲ ಉಂಟು ಮಾಡಿ ಜನರಿಗೆ ಸತ್ಯ ತಿಳಿಯದಂತೆ ನೋಡಿಕೊಳ್ಳುತ್ತಿದ್ದಾರೆ.

೦ ವಿಶ್ವಾರಾಧ್ಯ ಸತ್ಯಂಪೇಟೆ


(ನಾಳೆಗೆ ಮುಂದುವರೆಯುತ್ತದೆ )

4 thoughts on “ನನ್ನೆಲ್ಲ ಬರವಣಿಗೆಗೂ ದಾಖಲೆ ಇದೆ ಪ್ರೊ. ಭಗವಾನ್

  1. ಭಗವಾನ್ ಆಧಾರ ಸಮೇತ ಧಾಖಲಿಸಿದ್ದಾರೆ. ನಮ್ಮ ಕಾಲದ ಚಾರ್ವಾಕರು. ಸತ್ಯ ನಿಷ್ಟುರರು.ಸತ್ಯ ಕಹಿಯಾದರೂ ನಾವು ಗೌರವಿಸುವುದನ್ನು ಗ್ರಹಿಸಬೇಕು.

Leave a Reply

Your email address will not be published. Required fields are marked *

error: Content is protected !!