ಮಠಗಳು ಸಮಾಜದ ಸ್ವತ್ತು

ಮಠಗಳು ಸಮಾಜದ ಸ್ವತ್ತು

ಮಠಗಳು ಲಿಂಗಾಯತ ಧರ್ಮದ ಸ್ವತ್ತು. ಅದರ ಆಸ್ತಿ ಪಾಸ್ತಿ ಘನತೆ ಗೌರವಕ್ಕೆ ಬಾದ್ಯಸ್ಥರು ಸಾರ್ವಜನಿಕರು. ಸಾರ್ವಜನಿಕರಿಗಾಗಿ ಸಾರ್ವಜನಿಕರಿಂದ , ಸಾರ್ವಜನಿಕ ಸೇವೆಗಾಗಿ ಹುಟ್ಟಿಕೊಂಡವುಗಳು ಮಠಗಳು. ಸಕಲ ಜೀವಾತ್ಮರಿಗೆ ಲೇಸ ಬಯಸುವ ವಿಚಾರಗಳನ್ನು ಜನ ಸಾಮಾನ್ಯರಲ್ಲಿ ಬಿತ್ತಿ, ಸಮಾಜದಲ್ಲಿ ಶಾಂತಿ ಅಹಿಂಸೆ ಪರಸ್ಪರ ಬಾಂಧವ್ಯದ ವಾತಾವರಣರ ಕಲ್ಪಸುವುದು ಮಠದ ಆದ್ಯ ಕರ್ತವ್ಯ.

ಯಾವುದೆ ಮಠಕ್ಕೆ ಪೀಠಾಧಿಕಾರಿಯಾಗಿ ಬರುವವರಿಗೆ ಸಾಮಾಜಿಕ, ಧಾರ್ಮಿಕ ತಿಳುವಳಿಗೆಗಳು, ಆಧ್ಯಾತ್ಮಿಕ ಜ್ಞಾನ ಇತ್ಯಾದಿ ಇರಬೇಕು. ಜೊತೆಗೆ ತನ್ನ ಪೂರ್ವಾಶ್ರಮದ ಹಂಗು ಹರಿದುಕೊಂಡು ಸಾರ್ವಜನಿಕ ಜೀವನವೇ ತನ್ನ ಜೀವನ ಎಂದು ಬಗೆದು ಮಠಕ್ಕೆ ನಿಯುಕ್ತಿಗೊಳ್ಳಬೇಕು. ಆ ಮಠದ ಮೂಲ ಉದ್ದೇಶ ಅರಿತುಕೊಂಡು ತತ್ವಗಳನ್ನು ಪ್ರಚುರ ಪಡಿಸಬೇಕು. ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ಕಾರ್ಯ ಕೈಗೊಳ್ಳಬೇಕು.

ದಾರಿ ತಪ್ಪಿದವರಿಗೆ, ಸಮಾಜದ ಜಂಜಡಗಳಿಂದ ಬೇಸರಗೊಂಡವರಿಗೆ, ವೈಚಾರಿಕ, ವೈಜ್ಞಾನಿಕ ಮನೋಭಾವದ ಚಿಂತಕರಿಗೆ, ಬರಹಗಾರರಿಗೆ, ಹೋರಾಟಗಾರರಿಗೆ ಮಠಗಳು ಆಶ್ರಯವಾಗಬೇಕು. ಅಲ್ಲಿ ಸದಾ ಹೊಸ ಹೊಸ ಚಿಂತನೆಗಳ ಅನುಭಾವವಾಗಬೇಕು. ರಾಜಕಾರಣಿಗಳಿಗೂ ಇಂಥ ಮಠಗಳು ಆದರ್ಶವನ್ನು ಹೇಳಬೇಕು. ಅಲ್ಲಿ ಸದಾ ಪುಸ್ತಕೋತ್ಸವ ಹಬ್ಬ ಇರಬೇಕು.

ಆದರೆ ಬಹುತೇಕ ಮಠಗಳು ತಮ್ಮ ಮೂಲ ಕರ್ತವ್ಯಗಳನ್ನು ಮರೆತು ಬಿಟ್ಟಿವೆ ಎಂದು ನಾನು ವಿಷಾದದಿಂದ ಹೇಳಬಯಸಿದ್ದೇನೆ. ಸಾಕಷ್ಟು ಮಠಗಳ ತುಂಬೆಲ್ಲ ಅವರ ಮಂದಿ ಮಕ್ಕಳದ್ದೇ ದರ್ಭಾರು ನಡೆದಿದೆ. ಸಾರ್ವಜನಿಕ ಆಸ್ತಿ ಖಾಸಗಿ ಆಸ್ತಿಯಾಗಿ ಮಾರ್ಪಡುತ್ತಿದೆ. ಸಾಮಾಜಿಕ ಕಾಳಜಿ, ಧಾರ್ಮಿಕ ಆಶಯಗಳು ಮರೆಯಾಗಿ ತೀರಾ ವೈಯುಕ್ತಿಕ ಚಟುವಟಿಗೆ ಹೆಚ್ಚು ಪ್ರಾಧಾನ್ಯತೆ ಕೊಡಲಾಗುತ್ತಿದೆ. ಧರ್ಮ ಅಂದರೆ ದಯೆಯ ತಳಹದಿ ಎಂಬುದು ಮರೆತು ಗುಲಾಮಿ ಸಂಸ್ಕೃತಿ ಎಲ್ಲಾ ಮಠಗಳ ಅಂಗಳದಲ್ಲಿ ನಡೆದಿದೆ. ವೈಚಾರಿಕ ಪ್ರಭುತ್ವದ ಕಡೆ ಹೆಜ್ಜೆ ಹಾಕಬೇಕಾದ ಮಠಗಳು ಸರ್ವಾಧಿಕಾರದ ಕಡೆ ವಾಲಿಬಿಟ್ಟಿವೆ. ಪುಸ್ತಕೋತ್ಸವ ಮರೆತು, ಪುತ್ರೋತ್ಸ ಆಚರಿಸಲಾಗುತ್ತಿದೆ. ಇದೆಲ್ಲ ನೋಡುವುದು ಸಂಕಟಗಳಿಂದಲೇ.

ಮಠಗಳು ಈ ಹಿಂದೆ ಸರಕಾರವೂ ಮಾಡದ ಕೆಲಸ ಮಾಡಿವೆ. ಶೈಕ್ಷಣಿಕವಾಗಿ ಅವು ಈ ಹಿಂದೆ ಇಟ್ಟ ದಿಟ್ಟ ಹೆಜ್ಜೆಗೆ ಅನಕ್ಷರತೆಯೆ ಹೊರಟು ಹೋಗಿದೆ. ಎಲ್ಲರೂ ಶಿಕ್ಷಣ ಕಲಿತಾಗಿದೆ. ಅಕ್ಷರವಂತರಾಗಿದ್ದೇವೆ. ಅಕ್ಷರಗಳನ್ನು ಜೋಡಿಸಿ ಓದುವ ಪರಿಪಾಠಕ್ಕೆ ನಾವೆಲ್ಲ ಒಗ್ಗಿಕೊಂಡಿದ್ದೇವೆ. ಆದರೆ ಆ ಅಕ್ಷರದೊಳಗಿನ ಜೀವಧಾತುವಾದ ಪ್ರೀತಿ ಅಂತಃಕರಣವನ್ನು ಮರೆತು‌ ಬಿಟ್ಟಿದ್ದೇವೆ.

ಹಿಂದೊಂದು ಸಂದರ್ಭದಲ್ಲಿ ಸರಕಾರಕ್ಕೆ ಕಿವಿ ಹಿಂಡುತ್ತಿದ್ದ ಮಠಗಳು ಸರಕಾರದ ಅನುದಾನಕ್ಕೆ ಅವರ ತಲಬಾಗಿಲಲ್ಲಿ ಹೋಗಿ ನಿಲ್ಲುವ ದುಸ್ಥಿತಿ ಬಂದೊದಗಿದೆ. ಇದು ಸರಿಯಾದುದಲ್ಲ. ಮಂದಿ ಮಕ್ಕಳ ಆಡಂಬೋಲವಾದ ಮಠಗಳು ಇವುಗಳಿಂದ ಮುಕ್ತವಾಗಬೇಕು. ಅವು ಅನುಭವ ಮಂಟಪಗಳಾಗಿ ಪರಿವರ್ತನೆಗೊಳ್ಳಬೇಕು. ಜಾತಿ ವಾಸನೆಯಿಂದ ಮಠಗಳು ಮುಕ್ತವಾಗಬೇಕು. ಆಗಲೇ ಸಮಾಜದ ಸುಧಾರಣೆ ಸಾಧ್ಯ.

ಚಿತ್ರದುರ್ಗದ ಮುರುಘಾ ಶರಣರು ಈ ಕಡೆ ಒಂದು ದಿಟ್ಟ ಹೆಜ್ಜೆ ಇಟ್ಟು ಪೂರ್ವಾಶ್ರಮದ ಸಂಬಂಧಿಗಳಿಂದ ಮಠ ಮುಕ್ತಗೊಳಿಸಿದ್ದಾಗಿ ಹೇಳಿದ್ದಾರೆ. ನಿಜಕ್ಕೂ ಇದು ಸ್ವಾಗತಾರ್ಹ ಕ್ರಮವಾಗಿದೆ.

ಚಿತ್ರದುರ್ಗ ಶರಣರ ಈ ಕ್ರಮವನ್ನು ರಾಜ್ಯದ ಇನ್ನಿತರ ಮಠಗಳು ಅನುಸರಿಸಬೇಕು. ಅವು ಸಾರ್ವಜನಿಕವಾಗಿ ತಮ್ಮನ್ನು ತಾವು ತೆರೆದುಕೊಳ್ಳಬೇಕು. ಎಲ್ಲರೊಳಗೆ ಒಂದಾಗಬೇಕು. ಕೋಮುವಾದ, ಜಾತಿವಾದ, ಮನುವಾದಗಳಿಂದ ಕತ್ತುಸಿರು ಬಿಡುತ್ತಿರುವ ಕರ್ನಾಟಕದ ಜನತೆಯನ್ನು ಪಾರು ಮಾಡಬೇಕು. ರಾಜಕಾರಣಿಗಳಿಗೆ ಮಾರ್ಗದರ್ಶನ ನೀಡಬೇಕೆ ಹೊರತು, ನೀವೇ ಸ್ವತಃ ರಾಜಕೀಯ ಅಖಾಡಕ್ಕೆ ಇಳಿಯಬಾರದು.

ಇದು ನಿಮ್ಮಿಂದ ಸಾಧ್ಯವೆ ?

ವಿಶ್ವಾರಾಧ್ಯ ಸತ್ಯಂಪೇಟೆ

Leave a Reply

Your email address will not be published. Required fields are marked *

error: Content is protected !!